ತಪ್ಪೊಪ್ಪಿ ಧೀರ ಸಮಾಜವಾಗೋಣ

Update: 2018-12-05 11:04 GMT

ಹೊಟ್ಟೆಗೆ ಅನ್ನವಾಗಲಿ ತಲೆ ಮೇಲೆ ಸೂರಾಗಲಿ ಇಲ್ಲದವರನ್ನು ಅಣಕಿಸಲಿಕ್ಕೆ ಮೋದಿ ಆ ದುಬಾರಿ ಪ್ರತಿಮೆ ಕಟ್ಟಿಸಿದರೋ ಅಥವಾ ಗಾಂಧೀಜಿಯನ್ನು ಕೊಂದು ಪ್ರತೀಕಾರ ತೀರಿಸಿದವರು, ಪಟೇಲರು ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು ಎಂಬುದಕ್ಕಾಗಿ ಪಟೇಲರ ಮೂಗ ಪ್ರತಿಮೆಯನ್ನು ಬಡವರ ಮುಂದೆ ನಿಲ್ಲಿಸಿ ಪಟೇಲರ ವಿರುದ್ಧ ಪ್ರತೀಕಾರ ತೀರಿಸಿದರೋ ಗೊತ್ತಿಲ್ಲ. ಆದರೆ ಆ ಪ್ರತಿಮೆಯ ಮೌನ ಮತ್ತು ನಿರ್ಜೀವ ಸ್ವರೂಪ ನಮ್ಮೆಲ್ಲರ ವರ್ತಮಾನ ಸ್ಥಿತಿಯನ್ನು ಪ್ರತಿನಿಧಿಸುತ್ತಿದೆ ಎಂಬುದಂತೂ ಖಚಿತ.

ಹತ್ತಾರು ಮಂದಿ ಸೇರಿ ಒಬ್ಬ ನಿರಪರಾಧಿಯನ್ನು ಕೊಲ್ಲುವುದಕ್ಕೆ ಎಷ್ಟು ಧೈರ್ಯಬೇಕು?

ನಿಜವಾಗಿ ಇಂತಹ ಕೃತ್ಯಕ್ಕೆ ಧೈರ್ಯ ಸಾಹಸಗಳ ಯಾವ ಅಗತ್ಯವೂ ಇಲ್ಲ. ಮನಸ್ಸಿನಲ್ಲಿ ಪೂರ್ವಗ್ರಹ ಮತ್ತು ದ್ವೇಷದ ಒಂದಷ್ಟು ಕೊಳಕು ಮತ್ತು ಭಾರೀ ಪ್ರಮಾಣದ ಹೇಡಿತನ ಇವಿಷ್ಟಿದ್ದರೆ ಸಾಕು. ಹಲವು ವ್ಯಕ್ತಿಗಳಿರುವ ದೊಡ್ಡ ಗುಂಪುಗಳು ಒಂಟಿ ವ್ಯಕ್ತಿಗಳನ್ನು ಅಥವಾ ಕಡಿಮೆ ಜನರಿರುವ ಸಣ್ಣ ನಿರಾಯುಧ ಗುಂಪನ್ನು ನಿರ್ದಯವಾಗಿ ಕೊಲ್ಲುವುದು ತೀರಾ ಸುಲಭವಾಗಿ ಬಿಡುತ್ತದೆ. ಎಳ್ಳಷ್ಟಾದರೂ ನೈತಿಕತೆ ಯಾಗಲಿ ಧೈರ್ಯವಾಗಲಿ ಇರುವವರಿಗೆ ಈ ಬಗೆಯ ಹೀನ ಕೆಲಸ ಮಾಡಲು ಖಂಡಿತ ಸಾಧ್ಯವಾಗುವುದಿಲ್ಲ.

ಇತ್ತೀಚೆಗೆ ನಮ್ಮ ದೇಶದಲ್ಲಿ ಗುಂಪು ಹತ್ಯೆ ಎಂಬೊಂದು ಬೆಳವಣಿಗೆ ಚರ್ಚೆಯಲ್ಲಿದೆ. ಯಾರಾದರೂ ಒಬ್ಬಿಬ್ಬರು ಬಡಪಾಯಿಗಳು ಶಸ್ತ್ರಾಸ್ತ್ರಗಳೇನೂ ಇಲ್ಲದೆ ಕೈಗೆ ಸಿಕ್ಕಿ ಬಿಟ್ಟರೆ ಅವರನ್ನು ದನಗಳ್ಳರೆಂದೋ, ಶಿಶುಗಳ್ಳರೆಂದೋ ಕರೆದು, ಅವರ ಸುತ್ತ ಹತ್ತಾರು ಜನ ಸೇರುವುದು ಮತ್ತು ಅವರನ್ನು ಥಳಿಸಲು ಆರಂಭಿಸುವುದು, ಗುಂಪಿನಲ್ಲಿರುವ ಪ್ರತಿಯೊಬ್ಬರೂ ತಮ್ಮ ಕೈಗೆ ಸಿಕ್ಕ ಆ ಬಡಪಾಯಿಗಳಿಗೆ ಹೊಡೆದು ಹಿಂಸಿಸಿ ತಮ್ಮ ಸಾಹಸ ಮೆರೆಯುವುದು, ಕೊನೆಗೆ ಅಸಹಾಯಕರನ್ನು ಅಮಾನುಷವಾಗಿ ಕೊಂದು ಬಿಡುವುದು - ಗುಂಪು ಹತ್ಯೆ ಎಂಬುದು ಇದೇ ಪ್ರಕ್ರಿಯೆಯ ಹೆಸರು. ಈ ಪ್ರಕ್ರಿಯೆ ಯಲ್ಲಿ ಉದ್ದಕ್ಕೂ ಕಾಣಿಸುವುದು ಹಂತಕ ಗುಂಪಿನ ಪ್ರತಿಯೊಬ್ಬ ಸದಸ್ಯನ ಮತ್ತು ಈ ಒಟ್ಟು ಪ್ರಕ್ರಿಯೆಯನ್ನು ನಿಷ್ಕ್ರಿಯವಾಗಿ ನಿಂತು ನೋಡಿದವರ ಅಥವಾ ಶವಗಳಂತೆ ನಿರ್ಲಿಪ್ತವಾಗಿ ಅಕ್ಕ ಪಕ್ಕದಿಂದ ಹಾದು ಹೋದವರ ಹೇಡಿತನ ಮಾತ್ರ.ಈ ಬಗೆಯ ಸಾಮೂಹಿಕ ಹೇಡಿತನ ವ್ಯಕ್ತಿಗತ ಹೇಡಿತನಕ್ಕಿಂತ ತುಂಬಾ ಹೆಚ್ಚು ಕಳವಳದಾಯಕ. ತಾವು ಧೈರ್ಯವಂತರು ಹಾಗೂ ಸಾಹಸಿಗರೆಂದು ಸ್ವತಃ ತಮ್ಮನ್ನು ಮತ್ತು ತಮ್ಮ ಸುತ್ತ ಮುತ್ತಲಿನವರನ್ನು ನಂಬಿಸಲು ಈ ರೀತಿಯ ಅಮಾನುಷ ಕ್ರೌರ್ಯದ ಮಾರ್ಗವನ್ನು ಅವಲಂಬಿಸಿದವರ ವರ್ತನೆ ಮತ್ತು ಮಾನಸಿಕತೆ ತೀರಾ ಲಜ್ಜಾಸ್ಪದ. ಸದ್ಯ ಸಾಮೂಹಿಕ ಹೇಡಿತನದ ಈ ಲಜ್ಜೆಗೇಡಿ ಪ್ರಕ್ರಿಯೆಗೆ ನೀಡಲಾಗಿರುವ ಮತ್ತುವ್ಯಾಪಕ ಚರ್ಚೆಯಲ್ಲಿರುವ ‘ಗುಂಪು ಹತ್ಯೆ’ ಅಥವಾ ‘ಮಾಬ್ ಲಿಂಚಿಂಗ್’ (mob lynching) ಎಂಬ ಹೆಸರೇನೋ ತುಸು ಹೊಸದು. ಆದರೆ ಪ್ರಸ್ತುತ ಪ್ರಕ್ರಿಯೆಯಾಗಲಿ ಅದರ ಹಿಂದಿನ ಮಾನಸಿಕತೆಯಾಗಲಿ ನಮ್ಮ ಭಾರತೀಯ ಸಮಾಜಕ್ಕೆ ಖಂಡಿತ ಹೊಸದಲ್ಲ. ‘ಕೋಮು ಗಲಭೆ’ ಮತ್ತು ‘ಜಾತಿ ಗಲಭೆ’ ಎಂಬ ಬೇರೆ ಹೆಸರುಗಳಲ್ಲಿ ಇದೇ ಪ್ರಕ್ರಿಯೆ ಮತ್ತು ಇದೇ ಮಾನಸಿಕತೆ ಹಲವು ದಶಕಗಳಿಂದ ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿ ಇಲ್ಲಿ ತಾಂಡವ ನಡೆಸುತ್ತಲೇ ಇದೆ. ಕೋಮುಗಲಭೆಯಲ್ಲಿ ಅಥವಾ ಜಾತಿ ಗಲಭೆ ಯಲ್ಲಿ ನಡೆಯುವುದೇನು? ಸಶಕ್ತ, ಬಲಿಷ್ಠ ಗುಂಪುಗಳು, ದುರ್ಬಲ, ಅಸಹಾಯಕ ವ್ಯಕ್ತಿಗಳನ್ನು ಅಥವಾ ಗುಂಪುಗಳನ್ನು ಗುರಿಯಾಗಿಸಿ ಅವರ ಮೇಲೆ ದಾಳಿ ನಡೆಸಿ ಹಲ್ಲೆ, ಕೊಲೆ, ವಿಧ್ವಂಸ, ಅತ್ಯಾಚಾರಗಳನ್ನು ನಡೆಸುವುದು ತಾನೇ? ಅದೇನು ಸಾಹಸದ ಪ್ರದರ್ಶನವೇ? ಅದು ಕೂಡಾ ಸಾಮೂಹಿಕ ಹೇಡಿತನದ ಹೀನ ಪ್ರದರ್ಶನವೇ ಅಲ್ಲವೇ? ಈ ಪ್ರದರ್ಶನ ನಮ್ಮ ದೇಶದಲ್ಲಿ, ಅಲ್ಲಲ್ಲಿ, ಪದೇ ಪದೇ ನಡೆಯುತ್ತಲೇ ಇರುತ್ತದೆ ಎಂಬುದನ್ನು ನಿರಾಕರಿಸಲು ಸಾಧ್ಯವೇ? ನಿಜಕ್ಕೂ ನಮ್ಮಲ್ಲಿ ಒಂದಿಷ್ಟು ಧೈರ್ಯವಿದ್ದರೆ ಹಾಗೂ ನಿಜಕ್ಕೂ ನಾವು ಸಾಹಸಿಗಳಾಗಿದ್ದರೆ ಅದನ್ನು ಸ್ವತಃ ನಮಗೂ ನಮ್ಮ ಸುತ್ತಮುತ್ತಲಿನವರಿಗೂ ಮನವರಿಕೆ ಮಾಡಿಸುವುದಕ್ಕೆ ನಮ್ಮ ಮುಂದೆ ನಿತ್ಯ ನೂರಾರು ಅವಕಾಶಗಳಿವೆ. ನಮ್ಮ ಸುತ್ತ ಮುತ್ತ ನಿತ್ಯ ನಡೆಯುವ ಅನ್ಯಾಯಗಳು, ಅಕ್ರಮಗಳು, ಅಪರಾಧಗಳು,ಕೊಲೆಗಳು, ಅತ್ಯಾಚಾರಗಳು, ಭ್ರಷ್ಟಾಚಾರ, ಪಕ್ಷಪಾತ ಇವೆಲ್ಲವೂ, ನಮ್ಮ ಧೈರ್ಯ, ಸಾಹಸಗಳನ್ನು ಪ್ರದರ್ಶಿಸುವ ಅವಕಾಶಗಳು. ನಮ್ಮಲ್ಲಿ ಲವಲೇಶವಾದರೂ ಮಾನವೀಯ ಅಂತಃಕರಣ, ಸ್ಪಂದನಾ ಶೀಲತೆ, ಸಾಮಾಜಿಕ ಕಾಳಜಿ ಮತ್ತು ಮೌಲ್ಯ ಪ್ರಜ್ಞೆ ಇದ್ದರೆ ನಾವು ಈ ವಿಷಯಗಳಲ್ಲಿ ನಮ್ಮ ಪ್ರತಿಭಟನೆಯನ್ನು ಪರಿಣಾಮಕಾರಿಯಾಗಿ ದಾಖಲಿಸುವ ಮೂಲಕ ನಮ್ಮ ಜೀವಂತಿಕೆಯನ್ನು ಪ್ರಕಟಿಸಬಹುದು. ನಮ್ಮ ವರ್ತನೆ, ನಾವು ಅನ್ಯಾಯದ ಕಡೆ ಕಣ್ಣೆತ್ತಿ ನೋಡುವುದಿಲ್ಲ, ಅನ್ಯಾಯಕ್ಕೊಳಗಾದವರ ಚೀತ್ಕಾರವನ್ನು ಆಲಿಸುವುದಿಲ್ಲ ಮತ್ತು ಎಂದೂ ಅನ್ಯಾಯದ ವಿರುದ್ಧ ಮಾತನಾಡುವುದಿಲ್ಲ ಎಂದು ಪಣ ತೊಟ್ಟು ಗಾಂಧೀಜಿಯ ಮೂರು ಜಾಣ ಕೋತಿಗಳನ್ನು ಲೇವಡಿ ಮಾಡುತ್ತಿರುವಂತಿದೆ. ಅಥವಾ ನಮ್ಮ ಅವಸ್ಥೆ ಪ್ರಧಾನಿ ಮೋದಿ ಮೂರು ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಟ್ಟಿಸಿದ, ಯಾವ ಅನ್ಯಾಯವನ್ನೂ ನೋಡುವ, ಆ ಕುರಿತು ಏನನ್ನೂ ಕೇಳಿಸಿಕೊಳ್ಳುವ ಮತ್ತು ಅದರ ವಿರುದ್ಧ ಯಾವುದೇ ಮಾತನ್ನಾಡುವ ಸಾಮರ್ಥ್ಯ ಇಲ್ಲದ, ಸರ್ದಾರ್ ಪಟೇಲರ ಬಡಪಾಯಿ ಪ್ರತಿಮೆಯಂತಾಗಿ ಬಿಟ್ಟಿದೆ.

ಹೊಟ್ಟೆಗೆ ಅನ್ನವಾಗಲಿ ತಲೆ ಮೇಲೆ ಸೂರಾಗಲಿ ಇಲ್ಲದವರನ್ನು ಅಣಕಿಸಲಿಕ್ಕೆ ಮೋದಿ ಆ ದುಬಾರಿ ಪ್ರತಿಮೆ ಕಟ್ಟಿಸಿದರೋ ಅಥವಾ ಗಾಂಧೀಜಿಯನ್ನು ಕೊಂದು ಪ್ರತೀಕಾರ ತೀರಿಸಿದವರು, ಪಟೇಲರು ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು ಎಂಬುದಕ್ಕಾಗಿ ಪಟೇಲರ ಮೂಗ ಪ್ರತಿಮೆಯನ್ನು ಬಡವರ ಮುಂದೆ ನಿಲ್ಲಿಸಿ ಪಟೇಲರ ವಿರುದ್ಧ ಪ್ರತೀಕಾರ ತೀರಿಸಿದರೋ ಗೊತ್ತಿಲ್ಲ. ಆದರೆ ಆ ಪ್ರತಿಮೆಯ ಮೌನ ಮತ್ತು ನಿರ್ಜೀವ ಸ್ವರೂಪ ನಮ್ಮೆಲ್ಲರ ವರ್ತಮಾನ ಸ್ಥಿತಿಯನ್ನು ಪ್ರತಿನಿಧಿಸುತ್ತಿದೆ ಎಂಬುದಂತೂ ಖಚಿತ. ಜನರು ಒಪ್ಪೊತ್ತಿನ ಆಹಾರಕ್ಕಾಗಿ ಅಲೆದಾಡುತ್ತಿರುವ ದೇಶದಲ್ಲಿ , ನೂರಾರು ರೈತರು ದಾರಿದ್ರದ ಬಾಧೆ ಸಹಿಸಲಾಗದೆ ಆತ್ಮ ಹತ್ಯೆ ಮಾಡುತ್ತಿರುವ ನಾಡಿನಲ್ಲಿ ಮತ್ತು ಅಲ್ಲಲ್ಲಿ ಆಗಾಗ ಅಸಹಾಯಕರ ಅತ್ಯಾಚಾರ ಮತ್ತು ಕೊಲೆಗಳು ನಡೆಯುತ್ತಿರುವಲ್ಲಿ, ಈ ಎಲ್ಲ ಕ್ರೌರ್ಯಗಳನ್ನು ಸಂಭ್ರಮಿಸುತ್ತಾ ಮೂರು ಸಾವಿರ ಕೋಟಿ ರೂಪಾಯಿ ವ್ಯಯಿಸಿ ಪ್ರತಿಮೆ ನಿರ್ಮಿಸಲು ಹೊರಟವರ ವಿರುದ್ಧ ಯಾವುದೇ ಗಣ್ಯ ಪ್ರಮಾಣದ ಪ್ರತಿರೋಧ ಪ್ರಕಟವಾಗಲಿಲ್ಲ ಎಂಬುದು ನಮ್ಮ ಸಮಾಜದ ಸಾಮೂಹಿಕ ಹೇಡಿತನಕ್ಕೆ ತೀರಾ ಇತ್ತೀಚಿನ ನಿಚ್ಚಳ ಪುರಾವೆಯಾಗಿದೆ. ಈ ವ್ಯಾಧಿಪೀಡಿತ ಸ್ಥಿತಿಯಿಂದ ಹೊರಬರುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಎಂಬ ನೆಲೆಯಲ್ಲಿ ನಾವು ನಮ್ಮ ಸಾಮೂಹಿಕ ಹೇಡಿತನವನ್ನು ಪ್ರಾಮಾಣಿಕವಾಗಿ ಮನಸಾರೆ ಒಪ್ಪಿಕೊಳ್ಳೋಣ. ಎಲ್ಲ ಅನ್ಯಾಯ ಗಳ ವಿರುದ್ಧ ಸ್ವತಃ ನಾವೇ ರಂಗ ಕ್ಕಿಳಿದು ಹೋರಾಡುವೆವೆಂದು ಪಣತೊಡೋಣ. ಇನ್ನಾದರೂ ಧೀರರಾಗೋಣ.

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Similar News

ಗಾಂಧೀಜಿ