ತಾಯೆ ಬಾರ

Update: 2018-12-07 09:33 GMT

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂಎ ಪದವಿ ಪಡೆದಿರುವ ಎಸ್. ಜಿ. ಸಿದ್ದರಾಮಯ್ಯ, ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಸದ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಚನಗಳು, ಶರಣ ಸಂಸ್ಕೃತಿ, ದೇಸಿ ಮಾರ್ಗದ ಬಗ್ಗೆ ಒಲವುಳ್ಳವರು. ಗಾಲ್ಫ್ ಉಬ್ಬಿನ ಮೇಲೆ, ಕಾಡುವ ಬೇಲಿ ಹೂ, ಅವಳೆದೆಯ ಜಂಗಮ, ಸೊಲ್ಲು ಫಲವಾಗಿ, ಮರುಜೇವಣಿ, ಕರೆಬಳೆಗ, ಬೀದಿ ಅಲ್ಲಮ, ಕಾಯ ಮಾಯದ ಕಾಡು, ಅರಿವು ನಾಚಿತ್ತು ಎಂಬ ಕವನ ಸಂಕಲನಗಳನ್ನು; ದಂಡೆ, ದಾಳ, ಅನ್ನದಾತ ಎಂಬ ನಾಟಕಗಳು, ಅಂಬಿಗರ ಚೌಡಯ್ಯ- ಒಂದು ಓದು, ಯಡೆಕುಂಟೆ ಗೆಣೆಸಾಲು, ಕೇಡಿಲ್ಲವಾಗಿ, ಸಾಲಾವಳಿ, ನಿಶಬ್ದದ ಜಾಡು, ಕಣ್ಣಗಾಯದ ಕಾಲುದಾರಿಗಳು, ಯಡೆಸಾಲು ಎಂಬ ವಿಮರ್ಶಾ ಕೃತಿಗಳು; ಕನ್ನಡ ಪುಸ್ತಕ ಜಗತ್ತು ಎಂಬ ಅನುಭವ ಕಥನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ 3ಬಾರಿ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಪು.ತಿ.ನ. ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡವರು.

 

ಪ್ರೊ.ಎಸ್.ಜಿ. ಸಿದ್ದರಾಮಯ್ಯ

ಭಾಷೆ ಎಂಬುದು ಸಂಸ್ಕೃತಿ ಪರಂಪರೆಗಳ ಭೂಮಿಕೆ. ಅದು ಕೇವಲ ಸಂವಹನದ ಸಲಕರಣೆ ಅಲ್ಲ. ಅದು ಬದುಕು. ಅದು ಭಾವನೆ ಅದು ಆಲೋಚನೆ ಅದು ವ್ಯಕ್ತಿತ್ವದ ಕ್ರಿಯಾಧಾತು. ಅದನ್ನು ಬೆಳೆಸುವ ತಾಕತ್ತು ಸಮುದಾಯದ ಬಳಕೆಯ ಶಕ್ತಿಯನ್ನು ಅವಲಂಬಿಸಿರುತ್ತದೆ. ಆ ಜನ ಸಮುದಾಯದ ಬುದ್ಧಿ ಶಕ್ತಿಗನುಗುಣವಾಗಿ ಭಾಷಾ ಪ್ರೌಢಿಮೆ. ಜಗತ್ತಿನ ಜ್ಞಾನಕ್ಕೆ ತೆರೆದುಕೊಂಡು ಬೆಳೆಯುವ ಜನರ ಬುದ್ಧಿ ಶಕ್ತಿ ಎಲ್ಲ ಭಾಷೆಗಳಿಗಿಲ್ಲದಿದ್ದರೂ ಕನ್ನಡಕ್ಕೆ ಕನ್ನಡದಂತೆ ಜೀವಂತಿಕೆಯ ಎಲ್ಲ ಗುಣದ್ರವ್ಯವನ್ನು ಒಳಗೊಂಡ ಭಾಷೆಗಳಿಗೆ ಇದ್ದೇ ಇದೆ.

ಎಲ್ಲಿಗೆ ಹೋದರೂ ಇಲ್ಲಿಯದೇ ಚಿಂತೆ ಎನ್ನುವಂತೆ ನನ್ನ ದಿನದ ಬದುಕು. ಅಕ್ಕಾಗೆ ಹೋಗುವುದಕ್ಕೆ ಮನಸ್ಸು ಕೇಳಲಿಲ್ಲ. ಕೊಡಗಿನ ನೆನಪು ಕಾಡಿ ಗೂಟಕ್ಕೆ ಕಟ್ಟಿ ಹಾಕಿಕೊಂಡ ಕನವರಿಕೆ. ಜೋಡುಪಾಲದಲ್ಲಿ ಜರಿದ ಗುಡ್ಡ ಹಲವಾರು ಮನೆಗಳನ್ನು ಕಾಫಿ ಕಿತ್ತಲೆ ಏಲಕ್ಕಿಯ ತೋಟ ತುಡಿಕೆಗಳನ್ನು ನುಂಗಿ ನೊಣೆದ ಚಿತ್ರ ಹೃದಯ ವಿದ್ರಾವಕ ಪಾತ್ರ. ದುರಂತಕ್ಕೆ ವಿಹ್ವಲಿಸಿದ ನನ್ನ ಮನಸ್ಸು ಅಕ್ಕಾಗೆ ಹೋಗಲು ಸುತಾರಾಂ ಒಪ್ಪಲಿಲ್ಲ. ಆದರೆ ಎಲ್ಲವನ್ನೂ ಮಾಯಿಸುವುದು ಕಾಲ; ಎರಡು ತಿಂಗಳಲ್ಲೇ ಎಲ್ಲಾ ಕರಗಿದ ಪರಿಯ ಜೀವ ಜೀವಂತ. ಈಗ ಬಹರೈನಿಗೆ ಕರೆ ಬಂದಿದೆ. ಹೋಗಲೋ ಬೇಡವೋ ಎನ್ನುವ ಆತಂಕ ಬೇಗುದಿಯ ನಡುವೆಯೇ ಸಚಿವರಿಂದ ಮತ್ತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಂದ ಒತ್ತಾಯದ ಕರೆ. ಒತ್ತಾಯಗಳನ್ನು ಗೆಲ್ಲುವ, ಹೊರದೇಶದ ಬದುಕನ್ನು ನೋಡಬೇಕೆನ್ನುವ ಆಕರ್ಷಣೆಯನ್ನು ತಿರಸ್ಕರಿಸುವ ಸಬಲತೆ ಮನಸ್ಸಿಗೆ ಬರಬೇಕಲ್ಲ? ನೆಪವೊಂದು ಸಾಕು ಎನ್ನುವಂತೆ ಒತ್ತಾಯದ ಹಂಗಿಗೆ ಬಾಗಿದಂತೆ ಕರೆಯನ್ನು ಒಪ್ಪಿಕೊಂಡೆ. ವಿದೇಶ ಪ್ರಯಾಣದ ಎಲ್ಲ ವಿಧಿವಿಧಾನಗಳನ್ನೂ ಸುಸೂತ್ರವಾಗಿ ಮುಗಿಸಿಕೊಂಡು ಬಹರೈನಿಗೆ ಹೊರಟಿದ್ದಾಯಿತು. ವಿಮಾನ ಬೆಂಗಳೂರು ಬಿಟ್ಟಾಗ ಇಂಡಿಯಾದ ಕಾಲಮಾನ ಬೆಳಗಿನ ಜಾವ 4:45. ಬಹರೈನ್‌ನಲ್ಲಿ ವಿಮಾನ ನೆಲಕ್ಕಿಳಿದಾಗ ಅಲ್ಲಿಯ ಕಾಲಮಾನ 6:35. ಇಂಡಿಯಾದ ಲೆಕ್ಕಕ್ಕೂ ಬಹರೈನ್‌ನ ಕಾಲದ ಲೆಕ್ಕಕ್ಕೂ 2ಗಂಟೆ 30 ನಿಮಿಷಗಳ ಅಂತರ. ಆದರೆ ವಿಮಾನಯಾನದ ಪ್ರಯಾಣಾವಧಿ 4:30 ಗಂಟೆ. ಬಹರೈನ್‌ನಲ್ಲಿ ಇಳಿದಾಗ ಬೆಳಗ್ಗಿನ ಸೂರ್ಯ ಮೋಡವಿರದ ಬಾನಿನಲ್ಲಿ ನಿಚ್ಚಳವಾಗಿ ಕೋರೈಸುತ್ತಿದ್ದ. ಆ ಬೆಳಗಿನ ಹಬೆ ವಿಚಿತ್ರ ಅನುಭವವನ್ನು ನೀಡಿದಂತೆ ಅಬ್ಬ ಎಷ್ಟು ಸೆಕೆ, ಇನ್ನೂ ನಡುಹಗಲಿನಲ್ಲಿ ಹೇಗೋ ಅನ್ನಿಸಿ ದಿಗಿಲು ಹುಟ್ಟಿಸಿತು.

ಇಲ್ಲಿ ನಾನು ಹೇಳಬೇಕಾಗಿರುವುದು ಎಲ್ಲಿಗೆ ಹೋದರೂ ಇಲ್ಲಿಯದೇ ಚಿಂತೆಯ ಸಂತೆಯ ಮಾತು. ಬೆಂಗಳೂರಿನಲ್ಲಿ ಅರಬ್ ಎಮಿರೇಟ್ಸ್ ವಿಮಾನ ಹತ್ತಿದ್ದೇ ನಮಗೆ ಕೇಳಿಬಂದ ಸೊಲ್ಲು ಶುಕ್ರಿಯಾ..... ಗಗನ ಸಖಿಯರ ಇನಿದಾದ ದನಿಯಲ್ಲಿ ಅರಬ್ ಭಾಷೆಯ ಸಂಗೀತ ರೂಪದ ಸೊಲ್ಲು. ಒಳಕ್ಕೆ ಹೋದಾಗ ಸೀಟಿಗೆ ಎದುರಿಗಿಟ್ಟಿದ್ದ ಮ್ಯಾಗಝೀನ್‌ಗಳಲ್ಲಿ ಅರಬ್ ಭಾಷೆಯ ಜೊತೆಗೆ ಇಂಗ್ಲಿಷಿನ ಅಕ್ಷರಗಳು. ಆದರೆ ಇಂಗ್ಲಿಷ್ ಬಳಕೆಗಿಂತ ಅರಬ್ ಲಿಪಿಯ ಬಳಕೆ ಹೆಚ್ಚು. ಯಾವುದೇ ಪ್ರಕಟಣೆ ಸಾರುವಾಗಲೂ ಅರಬ್ ಭಾಷೆಯಲ್ಲಿ ಹೇಳುತ್ತಿದ್ದದ್ದೇ ಹೆಚ್ಚು. ಅರೆ ಆಶ್ಚರ್ಯ ಮೆನು ಪಟ್ಟಿಯಲ್ಲಿ ಅರಬ್ ಇಂಗ್ಲಿಷ್ ಜತೆಗೆ ಕನ್ನಡದ ಅಕ್ಷರಗಳು. ಮೊಟ್ಟಮೊದಲಿಗೆ ವಿದೇಶಿ ವಿಮಾನವೊಂದರಲ್ಲಿ ಕನ್ನಡದ ಅಕ್ಷರಗಳನ್ನು ಕಂಡು ಪುಳಕಗೊಂಡೆ. ಇದು ಭಾವಾವೇಶದ ಪುಳಕವಲ್ಲ, ಭಾವ ಸಂಭ್ರಮದ ಉಲ್ಲಾಸ. ಕಾರಣ ಪ್ರಾದೇಶಿಕ ಭಾಷೆಗೆ ವಿದೇಶದ ವ್ಯಾವಹಾರಿಕ ಮನಸ್ಸು ನೀಡಿದ ಗೌರವ. ಯಾವ ವಿದೇಶಿಯ ವ್ಯವಹಾರ ಬುದ್ಧಿಗೂ ಈ ಬಗೆಯ ಉದಾರತೆ ಬಾರದೆ ಇರುವಾಗ ಈ ದೇಶದ ವ್ಯಾಪಾರಿ ಮನಸ್ಸಿಗೆ ಇದು ಬಂದಿರುವುದು ಒಳಗೊಳ್ಳುವ ಗುಣದ ಪ್ರತೀಕ ಅನ್ನಿಸಿ ಆ ದೇಶದ ಬಗ್ಗೆ ಪ್ರೀತಿ ಗೌರವ ಮೂಡಿತು.

ಬಹರೈನ್ ಅಂದರೆ ಎರಡು ನೀರು ಎಂದು ಅರ್ಥವಂತೆ. ಸಿಹಿನೀರು ಉಪ್ಪುನೀರು ಎನ್ನುವ ಭಾವದಲ್ಲಿ ಅದು ಬಳಕೆಯಲ್ಲಿದೆ ಎಂದು ಕೇಳಿದೆ. ಸಿಹಿನೀರು ಎನ್ನುವುದು ಬರೀ ನಿರೀಕ್ಷೆಯಾಗಿರುವ ನೆಲದಲ್ಲಿ ಉಪ್ಪುನೀರಿನ ಒಡಲಲ್ಲಿ ಸಿಹಿನೀರನ್ನು ಕಾಣುವುದು ಬದುಕನ್ನು ಕಟ್ಟಿಕೊಳ್ಳುವ ಬಯಕೆಯ ಬಗೆ ವಿನ್ಯಾಸದ ಪ್ರತೀಕ ಅನ್ನಿಸುತ್ತದೆ. ಬಹರೈನ್‌ನ ಬದುಕನ್ನು ನೋಡಿದಾಗ ಇದು ಸತ್ಯ ಅನ್ನಿಸಿತು. ಬಹರೈನ್ ಒಂದು ಕೊಲ್ಲಿ ರಾಷ್ಟ್ರ. ನೆರೆಯ ಮುಸ್ಲಿಂ ರಾಷ್ಟ್ರಗಳಿಗೆ ಹೋಲಿಸಿದರೆ ಬಹರೈನ್‌ನಲ್ಲಿ ಸಾಕಷ್ಟು ಉದಾರನೀತಿ ಇದೆ. ರಾಜತ್ವದ ಬಿಗಿ ಧೋರಣೆ ಇದ್ದರೂ ವ್ಯಕ್ತಿ ಸ್ವಾತಂತ್ರವನ್ನು ಗೌರವಿಸಿದಂತೆ ಒಂದು ಮಿತಿಯ ಉದಾರತೆ ಇಲ್ಲಿ ಉಸಿರಾಡಿದೆ. ನಾನು ಕೇಳಿದಂತೆ ಇದರ ವಿಸ್ತೀರ್ಣ ನಮ್ಮ ಬೆಂಗಳೂರು ನಗರದಷ್ಟು ಅಥವಾ ಅದಕ್ಕಿಂತ ತುಸು ಹೆಚ್ಚು. ಇಲ್ಲಿನ ಜನಸಂಖ್ಯೆ 15 ಲಕ್ಷ. ಅದರಲ್ಲಿ ಕನ್ನಡಿಗರ ಸಂಖ್ಯೆ 25 ಸಾವಿರ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಮಲೆಯಾಳಿಗಳು ಅಲ್ಲಿದ್ದಾರೆ. ಆ ನೆಲದ ಮೂಲ ನಿವಾಸಿಗಳ ಸಂಖ್ಯೆ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ತುಸು ಹೆಚ್ಚು ಅಷ್ಟೆ. ಆದರೆ ಯಾರೇ ಆ ನೆಲದ ವಾಸಿಗಳಾದರೂ ಅಲ್ಲಿನ ನೆಲದ ವಾರಸುದಾರಿಕೆಯ ಹಕ್ಕು ಅಲ್ಲಿನ ಮೂಲನಿವಾಸಿಗಳದೇ ಹೊರತು ಹೊರಗಿನವರಿಗೆ ಆ ಅಧಿಕಾರಕ್ಕೆ ಅವಕಾಶವಿಲ್ಲ. ಬಾಡಿಗೆ, ಭೋಗ್ಯ ಇತ್ಯಾದಿ ವ್ಯವಹಾರ ನೀತಿಯಲ್ಲಿ ಅಲ್ಲಿನ ವಹಿವಾಟಿಗೆ ಬಾಧ್ಯರಾಗಬಹುದು, ಸಂಪೂರ್ಣ ಒಡೆತನದ ಹಕ್ಕುದಾರಿಕೆಗೆ ಯಾರಿಗೂ ಅವಕಾಶವಿಲ್ಲ. ಇದು ಆ ನೆಲದ ನೀತಿ. ಆದರೆ ಅಲ್ಲಿ ವಾಸಿಸುವಾಗ ಸಾರ್ವಜನಿಕ ಬದುಕಿಗೆ ಭಂಗಬಾರದಂತೆ ಅವರವರ ಧರ್ಮಕ್ಕೆ ಅವರವರ ಆಚಾರ ವಿಚಾರಕ್ಕೆ ಅನುಸರಣೆಗೆ ಅವಕಾಶವಿದ್ದೇ ಇದೆ. ಇದಕ್ಕೆ ಒಂದು ಉದಾಹರಣೆ ಅಲ್ಲಿನ ಇಂಡಿಯನ್ ಕ್ಲಬ್. 1915ರಲ್ಲೇ ರಾಜನ ಅನುಮತಿ ಪಡೆದು ಪ್ರಾರಂಭವಾಗಿರುವ ಕ್ಲಬ್ ಅದು. ಅಲ್ಲಿ ಈಗಲೂ ಅನುಮತಿ ಪಡೆಯದೆ ಯಾವುದೇ ಸಭೆೆೆ ಸಮಾರಂಭ ಏನೂ ನಡೆಯುವಂತಿಲ್ಲ. ಹೀಗಾಗಿ ಆ ಇಂಡಿಯನ್ ಕ್ಲಬ್ ಮಾನ್ಯತೆ ಪಡೆದು ನಡೆಯುತ್ತಿರುವ ಒಂದು ಭಾರತೀಯ ಸಂಘಟನೆಯ ಕ್ಲಬ್. ವಿಸ್ತಾರವಾದ ಜಾಗದಲ್ಲಿ ಅಂಗಡಿಗಳಿಗೆ ಅವಕಾಶ ನೀಡಿದಂತೆ ಆಟ ಮನರಂಜನೆಗಳಿಗೂ ಅಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ವಿಶೇಷವೆಂದರೆ ಅಲ್ಲಿರುವ ಸಾಂಸ್ಕೃತಿಕ ಭವನ. ಇಲ್ಲಿ ಸುಸಜ್ಜಿತವಾದ ವೇದಿಕೆ ಇದೆ. ಆ ವೇದಿಕೆಯ ಒಂದು ಭಾಗದಲ್ಲಿ ಭಾರತದ ರಾಷ್ಟ್ರಪತಿಯ ಭಾವಚಿತ್ರವಿದೆ. ಇನ್ನೊಂದು ಬದಿಯಲ್ಲಿ ಆ ದೇಶದ ರಾಜನ ಭಾವಚಿತ್ರವಿದೆ. ಪ್ರಜಾಪ್ರಭುತ್ವ ಮತ್ತು ಪ್ರಭುತ್ವ ಎರಡನ್ನೂ ಒಳಗೊಂಡದ್ದರ ಪ್ರತೀಕದಂತೆ ಆ ಸಭಾವೇದಿಕೆ ಕಾಣುತ್ತಿದೆ. ರಾಜಾಧಿಕಾರವು ಇದಕ್ಕೆ ಅವಕಾಶ ಮಾಡಿಕೊಟ್ಟಿರುವುದೇ ಒಂದು ವಿಶೇಷ.

ಈ ವೇದಿಕೆಯಲ್ಲಿ ಭಾರತೀಯ ಮೂಲದ ಎಲ್ಲ ಭಾಷಿಕರಿಗೂ ಸಭೆ ಸಮಾರಂಭ ನಡೆಸಲು ಅವಕಾಶವಿದೆ. ಆದರೆ ಧಾರ್ಮಿಕ ನಿಂದೆಯ ಪ್ರಚೋದನಕಾರಿ ವಿಚ್ಛಿದ್ರಕಾರಿ ವಿಚಾರಗಳ ಕೋಮುವಾದಗಳಿಗೆ ಅಲ್ಲಿ ಅವಕಾಶವಿಲ್ಲ. ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆದದ್ದು ಅಲ್ಲಿಯೇ. ಕನ್ನಡ-ಕನ್ನಡಿಗ-ಕರ್ನಾಟಕದ ಒಟ್ಟು ವಿಚಾರ ವ್ಯಾಪ್ತಿಯನ್ನು ಒಳಗೊಂಡ ಸಾಹಿತ್ಯ ಸಂಸ್ಕೃತಿಯ ಆ ಚರ್ಚೆಗಳು ಎಳ್ಳಷ್ಟೂ ಅಪಸ್ವರಕ್ಕೆ ಅವಕಾಶವಿಲ್ಲದಂತೆ ಅಭಿವ್ಯಕ್ತಿ ಸ್ವಾತಂತ್ರದ ಸಂಪೂರ್ಣ ಸಂತೃಪ್ತಿಯಲ್ಲಿ ವಿಶ್ಲೇಷಣೆಗೆ ಒಳಗಾದವು. ಕನ್ನಡ ನೆಲದಲ್ಲಿಯೇ ಕನ್ನಡ ಮನಸ್ಸುಗಳು ವಿಶ್ವಾತ್ಮಕ ಭಾವದಲ್ಲಿ ಮನುಜಮತದ ದಾರಿಯಲ್ಲಿ ನಡೆಸಬಹುದಾದ ವಿಚಾರಗೋಷ್ಠಿಗಳು ಅವಾಗಿದ್ದವು. ಪ್ರಜಾಪ್ರಭುತ್ವದ ಈ ನಡೆಗೆ ಅಲ್ಲಿನ ಪ್ರಭುತ್ವದ ಸಹಕಾರ ಸ್ವಾತಂತ್ರದ ಅರ್ಥವನ್ನು ಗೌರವಿಸಿದಂತೆ ಇದ್ದುದಾಗಿತ್ತು.

ಮತ್ತೊಂದು ಮುಖ್ಯವಾದ ವಿಚಾರ ಇಲ್ಲಿ ಪ್ರಸ್ತಾಪಿಸಲೇಬೇಕಾದದ್ದು; ಅಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಶಿಕ್ಷಣ ಮಾಧ್ಯಮ ಅರೇಬಿಕ್. ಇದಲ್ಲದೆ ಅಲ್ಲಿ ಭಾರತೀಯ ಮೂಲದ ಶಿಕ್ಷಣ ಸಂಸ್ಥೆಗಳೂ ಇವೆ. ಅಲ್ಲಿ ಸಿಬಿಎಸ್‌ಸಿ ಐಸಿಎಸ್‌ಸಿ ಪಠ್ಯಕ್ರಮದಲ್ಲಿ ಬೋಧನೆ ನಡೆಸಲಾಗುತ್ತಿದೆ. ವಿಶೇಷವೆಂದರೆ ಈ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. ಕನ್ನಡವಲ್ಲದೆ ಮಲೆಯಾಳ, ತಮಿಳು, ಹಿಂದಿ ಭಾಷೆಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಕನ್ನಡ ಕಲಿಸುವ ಶಿಕ್ಷಕರಿಗೆ ಇತರ ಶಿಕ್ಷಕರಿಗೆ ಸರಿಸಮನಾಗಿ ಎಲ್ಲಾ ರೀತಿಯ ವೇತನಾನುಕೂಲಗಳನ್ನೂ ಒದಗಿಸಲಾಗಿದೆ. ಇಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರ ಬಹುಮುಖ್ಯ ಉದ್ದೇಶವೆಂದರೆ ಕನ್ನಡ ನೆಲದಲ್ಲಿ ಕನ್ನಡವನ್ನು ಕನ್ನಡಿಗರೇ ಕಾಣುತ್ತಿರುವ ರೀತಿ ನೀತಿಗೂ ವಿದೇಶಿ ನೆಲದಲ್ಲಿ ವಾಸಿಸುತ್ತಿರುವ ಕನ್ನಡಿಗರು ಆ ನೆಲದ ಬದುಕಿನ ಮುಖ್ಯವಾಹಿನಿಯಲ್ಲಿ ಮರೆಯದೆ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವುದಕ್ಕೂ ಇರುವ ವ್ಯತ್ಯಾಸ. ಆ ನೆಲದಲ್ಲಿ ಇಂಗ್ಲಿಷಿಗೆ ಇರುವ ಸ್ಥಾನಮಾನ ಇತರ ಭಾಷೆಗಳನ್ನು ಕೊಂದು ತಿನ್ನುವ ಕೀಳರಿಮೆಯಲ್ಲಿ ಕಡೆಗಣಿಸುವ ಶ್ರೇಷ್ಠತೆಯ ವ್ಯಸನದ ಕೊಬ್ಬಿನ ಸ್ಥಾನಮಾನವಲ್ಲ. ಇತರ ಭಾಷೆಗಳನ್ನು ಗೌರವಿಸುವ ಸಹಜೀವನಕ್ಕೆ ಅವಕಾಶ ಕೊಟ್ಟಂತೆ ಒಳಗೊಳ್ಳುವ ಗುಣದ ಸ್ಥಾನಮಾನ ಅದಾಗಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಅಸಡ್ಡೆಯ ಮನೋಧರ್ಮವಿದೆ. ಕನ್ನಡಿಗರಿಗೆ ಕನ್ನಡ ಭಾಷೆ ಎಂದರೆ ಕೀಳರಿಮೆ. ಹಾಗೆ ನೋಡಿದರೆ ತುಳು ಮನೆಮಾತಾಗಿರುವ ಕರಾವಳಿ ಕನ್ನಡ ಬಂಧುಗಳು ಕನ್ನಡದ ಬಗ್ಗೆ ತೋರುವ ಪ್ರೀತಿ ಆಸ್ಥೆ ಬದ್ಧತೆ ಬಹುದೊಡ್ಡದು. ಅದು ಕರ್ನಾಟಕದ ಒಳಗೆ ಮಾತ್ರವಲ್ಲ ಕರ್ನಾಟಕದ ಹೊರಗೆ ಹೊರ ರಾಜ್ಯಗಳಲ್ಲಿ ಹೊರದೇಶಗಳಲ್ಲಿ ಕಂಡಬರುವ ಸತ್ಯ. ಮಹಾರಾಷ್ಟ್ರದ ಮುಂಬೈನಲ್ಲಿರುವ ಕನ್ನಡ ಸಂಘಗಳು, ದಿಲ್ಲಿಯಲ್ಲಿರುವ ಕನ್ನಡ ಸಂಘಗಳು, ಅರಬ್ ರಾಷ್ಟ್ರಗಳಲ್ಲಿರುವ ಕನ್ನಡ ಸಂಘಗಳು ಇದಕ್ಕೆ ಬಹುದೊಡ್ಡ ಉದಾಹರಣೆಗಳು. ಈ ಎಲ್ಲ ಕನ್ನಡ ಸಂಘಟನೆಗಳು ಕನ್ನಡ ಕನ್ನಡಿಗ ಕರ್ನಾಟಕ ಎನ್ನುವುದನ್ನು ಒಳಗೊಳ್ಳುವ ಭಾವಗುಣದ ನಡೆಯ ಸಂಘಟನೆಗಳು. ದೇಶವಿದೇಶಗಳಲ್ಲಿ ಈ ಸಂಘಟನೆಗಳು ಕನ್ನಡವನ್ನು ಕನ್ನಡ ಪ್ರಜ್ಞೆಯನ್ನು ಬೆಳಸುತ್ತಿವೆ. ಸದ್ಯಕ್ಕೆ ಉಳಿಸುತ್ತಿವೆ. ಇದು ಅಭಿಮಾನದಿಂದ ಹೇಳಲೇಬೇಕಾಗಿರುವ ನಿಜಸಂಗತಿ. ಆದರೆ ಅದೇ ಒಳನಾಡಿನ ಕನ್ನಡ ಮನಸ್ಸುಗಳು ಕಟ್ಟಿದ ಸಂಘಟನೆಗಳಲ್ಲಿ ಈ ಒಳಗೊಳ್ಳುವ ಗುಣಕ್ಕಿಂತ ಜಾತಿಮತ ಪ್ರದೇಶಗಳ ಸಂಕುಚಿತ ಬುದ್ಧಿಜಾಡ್ಯದಲ್ಲಿ ಸೀಳಿಕೊಳ್ಳುವುದು ಕಂಡುಬರುತ್ತದೆ. ಅದಕ್ಕೇ ಅಮೆರಿಕದಲ್ಲಿ ಅಕ್ಕ ಒಡೆದು ನಾವಿಕ ಆದದ್ದು. ಒಂದು ಹೋಗಿ ಎರಡಾದದ್ದು ಎರಡರೊಳಗೆ ಹಲವು ಹನ್ನೊಂದು ಅಪಸ್ವರಗಳು ಅಪಲಾಪಗಳು ಕೇಳಿಬರುವುದು. ಇದು ಕನ್ನಡ ನಾಡಿನೊಳಗೇ ಕನ್ನಡಿಗರಿಗೆ ಅಂಟಿದ ಜಾಡ್ಯ. ಇದನ್ನು ಕಳೆದುಕೊಳ್ಳದ ಹೊರತು ಕನ್ನಡಕ್ಕೆ ಉಳಿಗಾಲವಿಲ್ಲ. ಕರ್ನಾಟಕ ಬಲವರ್ಧನೆಗೊಳ್ಳುವುದಿಲ್ಲ. ಇದರ ಜೊತೆಗೆ ಒಟ್ಟಾರೆಯಾಗಿ ಎಲ್ಲ ಕನ್ನಡಿಗರಲ್ಲಿ ಇರುವ ಇಂಗ್ಲಿಷ್ ಬಗೆಗಿನ ದಾಸ್ಯ ಮನೋಜಾಡ್ಯ ಕನ್ನಡದ ಬೆಳವಣಿಗೆಗೆ ಕಂಟಕಪ್ರಾಯವಾಗಿದೆ. ಇದಕ್ಕೆ ನೀರುಗೊಬ್ಬರ ಹಾಕುವ ರೀತಿಯಲ್ಲಿ ನಮ್ಮ ಶೈಕ್ಷಣಿಕ ವಾತಾವರಣ ಇದೆ. ಉಚಿತ ಶಿಕ್ಷಣ ಕಡ್ಡಾಯ ಶಿಕ್ಷಣ ಸಮಾನ ಶಿಕ್ಷಣ ಎನ್ನುವ ನೀತಿ ಪ್ರಜಾಪ್ರಭುತ್ವದ ಯಾವುದೇ ಸರಕಾರದ ಸಾಮಾಜಿಕ ಕರ್ತವ್ಯ ಪಾಲನೆಯಾಗಬೇಕು. ಅದು ತಪ್ಪಿ ಉಳ್ಳವರಿಗೆ ಒಂದು ಬಗೆಯ ಶಿಕ್ಷಣ ಬಡವರಿಗೆ ಇನ್ನೊಂದು ಬಗೆಯ ಶಿಕ್ಷಣ ಎಂಬ ಇಬ್ಬಂದಿ ನಡೆಯಲ್ಲಿ ಇಡೀ ಪ್ರಾಥಮಿಕ ಶಿಕ್ಷಣ ಹಾಳು ಹರಕಲಾಗಿದೆ. ಶಿಕ್ಷಣವನ್ನು ಖಾಸಗಿಯವರಿಗೆ ವ್ಯಾಪಾರೋದ್ಯಮವಾಗಿ ವ್ಯವಹಾರ ನಡೆಸಲು ದಂಧೆ ಮಾಡಲು ಅವಕಾಶ ಕಲ್ಪಿಸಿರುವ ಯಾವುದೇ ಸರಕಾರದ ನಡೆ ಹೊಣೆಗೇಡಿ ವರ್ತನೆ ಎನ್ನದೆ ಅನ್ಯ ದಾರಿಯಿಲ್ಲ. ಅದು ಕೇಂದ್ರವಾಗಲಿ ರಾಜ್ಯವಾಗಲಿ ಈ ಹೊಣೆಗೇಡಿ ವರ್ತನೆಗೆ ಉತ್ತರದಾಯಿತ್ವ ಉಳ್ಳದ್ದು. ಈ ಹೊಣೆಗೇಡಿ ವರ್ತನೆಯ ವಕ್ತಾರರಾಗಿ ನಮ್ಮ ನೌಕರಶಾಹಿ ವಿಜೃಂಭಿಸುತ್ತಿದೆ.

ನಮ್ಮ ಕರ್ನಾಟಕ ಸರಕಾರ 2015ರಲ್ಲಿ ಶಾಸನಬದ್ಧವಾಗಿ ಹೊರಡಿಸಿದ ಕನ್ನಡಭಾಷಾ ಅಧಿಸೂಚನೆಯ ಅನುಷ್ಠಾನದ ದುರ್ಗತಿಯನ್ನು ಒಂದು ಸಣ್ಣ ಉದಾಹರಣೆಯಾಗಿ ಇಲ್ಲಿ ನೋಡಬಹುದು. ಜನಪ್ರತಿನಿಧಿಗಳಿಂದ ಕೂಡಿದ ಸರಕಾರವೇನೋ ಶಾಸನಬದ್ಧ ಅಧಿಸೂಚನೆಯನ್ನು ಹೊರಡಿಸಿತು. ಆದರೆ ಅದನ್ನು ಜಾರಿಗೊಳಿಸಬೇಕಾದ್ದು ಸರಕಾರದ ಕ್ರಿಯಾಶೀಲ ಅಂಗವಾಗಿರುವ ನೌಕರವರ್ಗ. ಅಂದರೆ ಕಾರ್ಯದರ್ಶಿಯಿಂದ ಮೊದಲ್ಗೊಂಡು ನಿರ್ದೇಶಕ ಉಪನಿರ್ದೇಶಕ ಜಂಟಿ ನಿರ್ದೇಶಕ ಬಿಇಒವರೆಗೆ ಎಲ್ಲ ಶ್ರೇಣಿಯ ಕರ್ತವ್ಯ ನಿರ್ವಹಣೆಯ ಪಾಲ್ಗೊಳ್ಳುವಿಕೆಯಲ್ಲಿ ಅದು ಅನುಷ್ಠಾನಕ್ಕೆ ಬರಬೇಕು. ಆದರೆ ಪ್ರಧಾನ ಕಾರ್ಯದರ್ಶಿಯೇ ಆ ಅಧಿಸೂಚನೆಯನ್ನು ಕೆಂಪುಪಟ್ಟಿಯಲ್ಲಿ ಇಟ್ಟು ಕುಳಿತರೆ ಅದು ಜಾರಿಗೆ ಬರುವುದಾದರೂ ಹೇಗೆ? ಅದು ಆದದ್ದೂ ಹಾಗೆಯೇ/ 2017ರವರೆಗೆ ಆ ಅಧಿಸೂಚನೆ ರೆಡ್ ಟೇಪಿಸಂ ಎಂಬ ಜನವಿರೋಧಿ ಆಡಳಿತ ತಂತ್ರಕ್ಕೆ ಸಿಲುಕಿ ಬಂದಿಯಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ 2017ರಲ್ಲಿ ಈ ಬಗ್ಗೆ ಕಾಳಜಿ ವಹಿಸಿ ಸಂಬಂಧಿಸಿದ ಅಧಿಕಾರಿಯನ್ನು ವಿಚಾರಿಸಿದಾಗ ಆ ಅಧಿಕಾರಿ ಅದನ್ನು ಸಿಬಿಎಸ್‌ಸಿ ಐಸಿಎಸ್‌ಸಿ ಪಠ್ಯಕ್ರಮದಲ್ಲಿ ಅಳವಡಿಸಲಾಗುವುದಿಲ್ಲ ಎಂದು ಧಾರ್ಷ್ಟ್ಯದ ಉತ್ತರ ಕೊಟ್ಟ. ಆಗ ಆ ಅಧಿಕಾರಿಯನ್ನು ಅಧಿಸೂಚನೆಯನ್ನು ‘ವ್ಯಾಖ್ಯಾನಿಸುತ್ತಾ ಕೂರುವುದಕ್ಕೆ ನೀನಾರು, ಶಾಸಕಾಂಗಕ್ಕಿಂತ ನೀನು ದೊಡ್ಡವನೋ? ನೀನು ಸರಕಾರದ ನೌಕರನೋ’ ಎಂದು ಅನಿವಾರ್ಯವಾಗಿ ಪ್ರಶ್ನಿಸಬೇಕಾಯಿತು. ಕೊನೆಗೆ ಶಿಸ್ತುಕ್ರಮದ ಭಯದಲ್ಲಿ ಅಧಿಸೂಚನೆಯನ್ನು ಸರಕಾರದ ಕಾಯ್ದೆ ಕಟ್ಟಳೆಯಾಗಿಸುವ ಕ್ರಮಕ್ಕೆ ಆ ನೌಕರ ಕ್ರಿಯಾಶೀಲನಾಗುವುದು ಅನಿವಾರ್ಯವಾಯಿತು. ರಾಜ್ಯಪಾಲರ ಅಂಕಿತವಾಗಿ ರಾಜ್ಯಪತ್ರ ಪ್ರಕಟಣೆಯಾಗಿ ಕಾಯ್ದೆಯಾಗಿ ಆ ಅಧಿಸೂಚನೆ ಜಾರಿಗೆ ಬಂದರೂ ಅದನ್ನು ಅನುಷ್ಠಾನವಾಗಿಸುವುದರಲ್ಲಿ ಇದೇ ನಮ್ಮ ಪ್ರಾಥಮಿಕ ಶಿಕ್ಷಣ ಇಲಾಖೆಯ ಹೊಣೆಗೇಡಿತನ ಮುಂದುವರಿದಿರುವುದು ಕನ್ನಡ ಭಾಷೆಯ ದೌರ್ಭಾಗ್ಯ. ರಾಜ್ಯದ ಎಲ್ಲ ಬಗೆಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಒಂದು ವಿಷಯವಾಗಿ ಬೋಧಿಸಬೇಕು. ಇದು ಸರಕಾರದ ಕಾಯ್ದೆ. ಇದನ್ನು ಬೆಂಗಳೂರಿನಲ್ಲೇ ಇರುವ ಐವತ್ತೆರಡಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಜಾರಿಗೆ ತಂದಿಲ್ಲ. ಇದರ ವಿರುದ್ಧ ಶಿಸ್ತುಕ್ರಮಕ್ಕೆ ಸಂಬಂಧಿಸಿದ ಉಸ್ತುವಾರಿ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ. ಈ ಅಧಿಕಾರಿಗಳಿಗೆ ಬುದ್ಧಿ ಹೇಳುವವರ್ಯಾರು? ಶಿಕ್ಷೆ ಕೊಡುವವರ್ಯಾರು? ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಇನ್ನಾರಿಗೆ ದೂರಲಿ? ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಹೋಗಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲಾರದ ಕನಿಷ್ಠ ಕೃತಜ್ಞತೆ ಇಲ್ಲದ ಶಿಕ್ಷಣ ವ್ಯಾಪಾರಿಗಳು ಅವರಿಗೆ ಕಡಿವಾಣ ಹಾಕಲು ಅಧಿಕಾರಯುತವಾಗಿ ಆಡಳಿತ ನಡೆಸಲು ಆಗದ ವ್ಯವಸ್ಥೆ- ಇದು ಪ್ರಾಥಮಿಕ ಶಿಕ್ಷಣದ ಗತಿಸ್ಥಿತಿ.

ಈ ಹಿನ್ನೆಲೆಯಲ್ಲಿ ಇಡೀ ಕನ್ನಡದ ಭವಿಷ್ಯವನ್ನು ಯೋಚಿಸುತ್ತಾ ಹೋದರೆ ಸಂಕಟವಾಗುತ್ತದೆ. ಕನ್ನಡ ನೆಲದಲ್ಲಿ ಕನ್ನಡದ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದನ್ನು ಕುರಿತು ರಾಷ್ಟ್ರಕವಿ ಕುವೆಂಪು ಅವರು ‘ಕಲ್ಲ ಕುಂಡದಿ ಬೆಳೆದ ಅಶ್ವತ್ಥ ಸಸಿಯಂತೆ ಕೀಳ್ಮುಚ್ಚಿ ಗುಜ್ಜಾಗುತಿದೆ ಮೊಳೆವ ಚೈತನ್ಯ’ ಎಂದು ಕೊರಗಿದ್ದಾರೆ. ಈ ಕೊರಗನ್ನು ಈ ಸಂಕಟವನ್ನು ಕೇಳುವರಾರು? ‘ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಕುವೆಂಪು ಹೇಳಿದ್ದು ಭಾವುಕತೆಯ ಬೊಬ್ಬೆಯಾಗಿ ಅಲ್ಲ. ಸಂಸ್ಕೃತಿ ಪರಂಪರೆಗಳ ಸಾರಭೂಮಿಯಲ್ಲಿ ಅರಳಬೇಕಾಗಿರುವ ಬುದ್ಧಿಭಾವಗಳ ವಿದ್ಯುದಾಲಿಂಗನ ಪ್ರತಿಭಾಶಕ್ತಿಯನ್ನು ಕುರಿತಾಗಿ. ಮಾತೃಭಾಷೆಯಲ್ಲಿ ಶಿಕ್ಷಣ ಅಂದರೆ ಪರಿಸರಭಾಷೆಯಲ್ಲಿ ಶಿಶುವಿನ ಶಿಕ್ಷಣ ಆಗಬೇಕು ಎಂಬ ವೈಜ್ಞಾನಿಕ ವೈಚಾರಿಕ ಎಚ್ಚರದ ದೀಪ್ತಿಯಲ್ಲಿ ಬೆಳಗಿದ ಉಕ್ತಿ ವಿಶೇಷಗಳಿವು. ಇಂಥ ಪೂರ್ಣ ಅರಿವು ಇದ್ದದ್ದರಿಂದಲೇ ಕನ್ನಡದ ಜೊತೆಗೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಸಮರ್ಥವಾಗಿ ಕಲಿಸಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವ ಕ್ರಿಯೆಯ ಭಾಷಾ ನೀತಿ ಇದಲ್ಲ; ಒಳ ಅರಿವಿನಲ್ಲಿ ಶಿಶು ಪ್ರಜ್ಞೆಯನ್ನು ಚುರುಕಾಗಿಸುತ್ತಾ ಕರುಳ ಬಂಧದಲ್ಲಿ ದೇಹ ಮನಸ್ಸುಗಳನ್ನು ಪೋಷಿಸುವ ತಾಯಿಯ ಎದೆ ಹಾಲಿನ ರೀತಿ ಈ ಶಿಕ್ಷಣ ನೀತಿ. ಇದು ಕಲ್ಲಕುಂಡದಲ್ಲಿ ಆಲದ ಸಸಿಯನ್ನು ಅರಳಿಸಸಿಯನ್ನು ನೆಡುವ ಬೋನ್ಸಾಯಿ ಬೆಳವಣಿಗೆಯ ಗತಿಯಲ್ಲ; ಭೂಮಿಯಲ್ಲಿ ನೆಟ್ಟು ರಸೆಯಾಳಕ್ಕೆ ಬೇರುಬಿಟ್ಟು ಬೆಳೆಯುವ ಆಲ ಅರಳಿ ಮರಗಳ ಪರಿಯ ನಿಸರ್ಗ ಸಹಜ ಗತಿ. ಹಗಲುಕಂಡ ಈ ಸತ್ಯವನ್ನು ಕಾಣದಂತೆ ವರ್ತಿಸುವ ಜಾಣಕುರುಡಿಗೆ ಏನು ಹೇಳಲಿ. ಹೆಳವನ ಹೆಗಲ ಮೇಲೆ ಕುರುಡ ಕುಳಿತಿದ್ದಾನೆ, ದಾರಿಸಾಗುವುದೆಂತೋ ನೋಡಬೇಕು ಎ್ನುತ್ತಾರೆ ಗೋಪಾಲಕೃಷ್ಣ ಅಡಿಗರು.

ಇದು ಇಂದಿನ ಶಿಕ್ಷಣದ ಗತಿಸ್ಥಿತಿ. ಇಂಗ್ಲಿಷಿನ ಜಾಡ್ಯದಲ್ಲಿ ನರಳುತ್ತಿರುವ ಜೀತಮನಸ್ಸುಗಳು ಪರಂಪರೆಯ ಭೂಮಿಕೆಯಲ್ಲಿ ಬೇರುಬಿಟ್ಟು ಬೆಳೆಯುವ ಮರಗಳಾಗುತ್ತಿಲ್ಲ; ಪರನೆಲದ ಪರಂಪರೆಯ ಭೂಮಿಯಲ್ಲಿ ಬೇರುಬಿಟ್ಟಿರುವ ಮರಗಳಲ್ಲಿ ಬೆಳೆಯುತ್ತಿರುವ ಬಂದಳಿಕೆಗಳಾಗುತ್ತಿವೆ. ಬಂದಳಿಕೆ ಎಂದೂ ಮರವಲ್ಲ ಅಷ್ಟೇ ಅಲ್ಲ ತಾನು ಅವಲಂಬಿಸಿದ ುರಕ್ಕೂ ಕುಠಾರ ಪ್ರಾಯವಾದುದು.

ಭಾಷೆ ಎಂಬುದು ಸಂಸ್ಕೃತಿ ಪರಂಪರೆಗಳ ಭೂಮಿಕೆ. ಅದು ಕೇವಲ ಸಂವಹನದ ಸಲಕರಣೆ ಅಲ್ಲ. ಅದು ಬದುಕು. ಅದು ಭಾ

Writer - ಪ್ರೊ.ಎಸ್.ಜಿ. ಸಿದ್ದರಾಮಯ್ಯ

contributor

Editor - ಪ್ರೊ.ಎಸ್.ಜಿ. ಸಿದ್ದರಾಮಯ್ಯ

contributor

Similar News

ಗಾಂಧೀಜಿ