ತ್ರಿಕೋನ
ಬೆಂಗಳೂರಿನಲ್ಲಿ 16 ಮೇ, 1962ರಲ್ಲಿ ಜನಿಸಿದ ಇವರು, ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರೈಸಿದರು. ನಂತರ ಗುಜರಾತಿನ ಆನಂದ್‌ನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕತೆ ಮತ್ತು ಲೇಖನಗಳ ಮೂಲಕ ಗುರುತಿಸಿಕೊಂಡವರು. ‘ಗ್ರಾಮೀಣ ಅಭಿವೃದ್ಧಿ’ ಇವರ ಪರಿಣತಿಯ ವಿಷಯ. ಸಹಕಾರಿ ಕ್ಷೇತ್ರದ ಬಗೆಗೆ ಒಲವು. ಸಮಕಾಲೀನ ರಂಗಭೂಮಿ, ಸಿನೆಮಾ ಇವರ ಆಸಕ್ತಿಯ ವಿಷಯಗಳು. ಪತ್ರಿಕೆಗಳಿಗೆ ಅಂಕಣ ಬರೆಯುವ, ಸಾಹಿತ್ಯಕ ಉಪನ್ಯಾಸ ನೀಡುವ ಜೊತೆಗೆ ಕಥೆ ಕಟ್ಟುವ ರೀತಿ, ಶೈಲಿಯ ಬಗ್ಗೆ ಅದಮ್ಯ ಕುತೂಹಲವುಳ್ಳವರು. ರೂಮಿ ಟೋಪಿ ಪ್ರಕಟಗೊಳ್ಳಲಿರುವ ಇವರ ಪ್ರಬಂಧ ಸಂಕಲನ. ಸದ್ಯ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿವಾನಿ ಮತ್ತು ಚಿನ್ಮಯರ ಗೆಳೆತನ ಪ್ಯಾರಿಸ್‌ನಲ್ಲಿ ಆರಂಭವಾಗಿ, ಅಲ್ಲಿಯೇ ಬೆಳೆದಿದ್ದರೂ ಭಾರತದಲ್ಲಿ - ಮುಖ್ಯವಾಗಿ ಮುಂಬೈಯಲ್ಲಿ? ಅದಕ್ಕೊಂದು ಸ್ಪಷ್ಟವಾದ ರೂಪಕಲ್ಪನೆಯಾಗಿತ್ತು. ಶಿವಾನಿಯ ಬದುಕಿನಲ್ಲಿಯೂ ಮತ್ತು ಈ ಕಂಪೆನಿಯಲ್ಲಿಯೂ ಚಿನ್ಮಯ ದೊಡ್ಡ ಪಾತ್ರ ವಹಿಸುವುದರ ಬಗ್ಗೆ ತುಂಬಾ ಕಾತರತೆಯನ್ನು ಶಿವಾನಿಯೂ ಅವಳ ತಂದೆಯೂ ತೋರಿಸಿದ್ದರು. ಈಗ ಮುಕುಂದಸಾಗರ ತೀರಿಕೊಂಡ ನಂತರ ಶಿವಾನಿಯ ತಂದೆಯೇ ಈ ಕಂಪೆನಿಯ ಅಧ್ಯಕ್ಷರಾಗುವುದೆಂದೂ ನಿರ್ಧರಿಸಲಾಗಿತ್ತು. ಚಿನ್ಮಯನ ಪಾತ್ರದ ಚರ್ಚೆ ತನ್ನ ಎದುರಿನಲ್ಲಿ ಅಲ್ಲದೇ ತನ್ನ ಬೆನ್ನ ಹಿಂದೆಯೂ ನಡೆಯುತ್ತಿರುವುದು ಹಾಗೂ ಶಿವಾನಿ ಮತ್ತವಳ ತಂದೆ ತನ್ನ ಪ್ರತಿಭೆಯ ಮೌಲ್ಯಮಾಪನ ಮಾಡುತ್ತಿದ್ದುದು ಚಿನ್ಮಯನಿಗೆ ಹಿಡಿಸಿರಲಿಲ್ಲ. ಗೆಳೆತನ, ಸಂಬಂಧ, ವೃತ್ತಿ ಈ ಮೂರನ್ನೂ ಮೇಳೈಸಬೇಕೇ ಎನ್ನುವ ಪ್ರಶ್ನೆ ಚಿನ್ಮಯನನ್ನು ಕಾಡುತ್ತಿತ್ತು.
ತಾನಿದ್ದ ಪರಿಸ್ಥಿತಿಯಲ್ಲಿ ಮೈಸೂರಿಗೆ ಹೋಗಬೇಕೋ ಅಥವಾ ಮುಂಬೈಯಲ್ಲಿದ್ದೇ ಹೋರಾಡಬೇಕೋ ಎನ್ನುವ ದ್ವಂದ್ವ ಸುಜಾತಾಳನ್ನು ಕಾಡಿತು. ತನ್ನ ಕಾಲಿನ ಕೆಳಗಿನ ನೆಲ ಕ್ರಮಕ್ರಮೇಣ ಕುಸಿಯುತ್ತಿದ್ದರೂ ಅವಳು ಮಾತ್ರ ಅಲುಗಾಡದೇ ನಿಂತಿದ್ದಳು. ತನ್ನ ಜೀವನಸಾಥಿ ಮುಕುಂದಸಾಗರ ತಾನೇರಿದ ಎತ್ತರದಲ್ಲಿ ನಿಲ್ಲಲಾರದೇ ಹಾರಿಬಿದ್ದು ಪ್ರಾಣಕಳೆದುಕೊಂಡಿದ್ದ. ಹೀಗೆ ಒಂಟಿಯಾಗಿದ್ದವಳಿಗೆ ತಾವಿಬ್ಬರೂ ನಡೆಸುತ್ತಿದ್ದ ವ್ಯಾಪಾರದ ಹಲವು ಗುಟ್ಟುಗಳು ಬಯಲಾಗುತ್ತಾ ಹೋಗಿದ್ದುವು. ಒಂದು - ಆ ವ್ಯಾಪಾರದಲ್ಲಿ ತನ್ನ ಭಾಗಸ್ವಾಮ್ಯವಾದ 25 ಪ್ರತಿಶತ ಬಂಡವಾಳ ಬಿಟ್ಟರೆ ಬೇರೇನೂ ಇಲ್ಲ ಎನ್ನುವ ವಿಚಾರ. ಎರಡು - ಶಿವಾನಿ ಮತ್ತು ಅವಳ ತಂದೆ ಪಡೆದುಕೊಂಡ ಪಾಲಿನ ಜೊತೆಗೆ ನಿರ್ವಹಣೆಯ ಹಕ್ಕನ್ನೂ ಪಡೆದಾಗ, ಮಾರುಕಟ್ಟೆ ವಿಭಾಗದ ಮುಖ್ಯಸ್ಥೆಯ ನೌಕರಿಯನ್ನೂ ಕಳೆದುಕೊಂಡಿರುವ ವಿಚಾರ. ಮೂರು- ತಮ್ಮ ಲೋಖಂಡವಾಲಾದ ಪೆಂಟ್ ಹೌಸ್ ಕಂಪೆನಿಯ ಹೆಸರಿನಲ್ಲಿದ್ದುದರಿಂದ ಅದನ್ನೂ ಖಾಲಿ ಮಾಡಬೇಕೆಂದು ವಕೀಲರ ನೋಟಿಸ್ ಸ್ವೀಕರಿಸಿ ನಿರಾಗೃಹಳಾಗಬಹುದಾದ ವಿಚಾರ. ಹೀಗೆ ಗಂಡ, ನೌಕರಿ, ಮನೆ ಮೂರನ್ನೂ ಕಳೆದುಕೊಂಡ ಸುಜಾತಾ ಮುಂದೇನು ಮಾಡಬೇಕು ಎನ್ನುವ ವಿಚಾರದ ಬಗ್ಗೆ ಗಹನವಾಗಿ ಯೋಚಿಸಬೇಕಿತ್ತು. ಇಷ್ಟು ವರ್ಷಕಾಲ ತಾನು ತನ್ನ ಗಂಡನ ಜೊತೆಗೆ ನಿರ್ವಹಿಸಿದ್ದ ಅನ್-ಆಕ್ಸಸರಿ ಡಿಸೈನ್ಸ್ ಕಂಪೆನಿಯಲ್ಲಿ ತನಗೇ ಸ್ಥಾನವಿಲ್ಲ ಎನ್ನುವ ವಿಚಾರ ಒಂದು ವಿಚಿತ್ರ ಅಸಹಾಯಕತೆಯನ್ನೂ, ಅಸಹನೆಯನ್ನೂ ಅವಳಿಗೆ ನೀಡಿತ್ತು. ತನ್ನ ಕೆಳಗೆ ಕೆಲಸ ಮಾಡುತ್ತಿದ್ದವರಲ್ಲಿ ಈಗ ಯಾರನ್ನು ನಂಬುವುದು ಯಾರನ್ನು ನಂಬದೇ ಇರುವುದು ಎನ್ನುವ ದ್ವಂದ್ವಕ್ಕಿಂತ ದೊಡ್ಡ ಹಿಂಸೆ ಬೇರೊಂದಿಲ್ಲ. ಅವರ ದೃಷ್ಟಿಯಿಂದ ನೋಡಿದರೆ ಅದು ಸಹಜವೂ ಆಗಿತ್ತು? ತಮ್ಮ ನೌಕರಿ-ವೃತ್ತಿ ಬೆಸೆದಿದ್ದು ಕಂಪೆನಿಯ ಜೊತೆ? ಒಂದು ವ್ಯಕ್ತಿತ್ವದ ಜೊತೆಯಲ್ಲ. ಹೀಗಾಗಿ ಈಗ ಇದ್ದಕ್ಕಿದ್ದ ಹಾಗೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರಿಂದ ವೈಯಕ್ತಿಕ ವಿಧೇಯತೆಯನ್ನು ನಿರೀಕ್ಷಿಸುವುದು ಎಷ್ಟು ಸಮಂಜಸ? ಮತ್ತು ಎಷ್ಟು ನ್ಯಾಯಯುತ ಎನ್ನುವುದನ್ನು ವಿಚಾರ ಮಾಡಿದಾಗ ತನ್ನ ಒಂಟಿತನದ ಮಹತ್ವ ಅವಳಿಗರ್ಥವಾಯಿತು. ಮುಕುಂದಸಾಗರ ಮತ್ತು ತಾನು ಸೇರಿ ತಮ್ಮ ಸರ್ವಸ್ವವನ್ನೂ ಹಾಕಿ ಬೆಳೆಸಿದ್ದ ಕಂಪೆನಿ ಅನ್-ಆಕ್ಸಸರಿ (ಅಆ) ಡಿಸೈನ್ಸ್. ಅ-ಆ-ಕಂಪೆನಿಯಲ್ಲಿದ್ದದ್ದು ಎರಡೇ ಮುಖ್ಯ ಅಂಶಗಳು. ಮುಕುಂದಸಾಗರನ ಪ್ರತಿಭೆ ಮತ್ತು ತಮ್ಮ ಹೆಸರಿನಲ್ಲಿದ್ದ ಬಂಡವಾಳ. ಬಂಡವಾಳ ಮಾರಿದರೂ ತನ್ನ ಪ್ರತಿಭೆಯ ಬಲದಿಂದಲೇ ಈ ಕಂಪೆನಿಯನ್ನು ನಡೆಸಬಹುದು, ಆ ಪ್ರತಿಭೆ ಕಂಪೆನಿಗೆ ಅನಿವಾರ್ಯ ಎಂದು ಮುಕುಂದಸಾಗರ ಯೋಚಿಸಿದ್ದನೇನೋ. ಆದರೆ ಈಗ ಅವನೂ ಇಲ್ಲ, ಬಂಡವಾಳವೂ ಇಲ್ಲ ಎಂದ ಮೇಲೆ ಯಾವ ಬಡಾಯಿ ಸುಜಾತಾಳಿಗಿದ್ದೀತು? ಎಷ್ಟಾದರೂ ಸುಜಾತಾ ಡಿಸೈನ್ ಕಲಿತವಳಲ್ಲ. ಮುಕುಂದಸಾಗರನ ಡಿಸೈನುಗಳ ಮಾರಾಟವನ್ನಷ್ಟೇ ಅವಳು ಮಾಡುತ್ತಿದ್ದಳು. ಈಗ ಆ ಡಿಸೈನರೇ ಇಲ್ಲವಾದರೆ ತನ್ನ ಸ್ಥಾನವೇನು? ವ್ಯವಹಾರದ ಕ್ಷಣಭಂಗುರತೆಯನ್ನು ಅರಿಯಲು ಸುಜಾತಾಳ 20 ವರ್ಷಗಳಿಗೂ ಮಿಂಚಿದ ಅನುಭವ ಕೈಕೊಟ್ಟಿತ್ತು.
‘ಶಿವಾನಿ. ಮೀಟ್ ದ ನ್ಯೂ ಬಾಸ್ ಎಟ್ ಅನ್-ಆಕ್ಸೆಸರಿ ಡಿಸೈನ್ಸ್’ ಹೀಗೊಂದು ಶೀರ್ಷಿಕೆಯ ಲೇಖನವು ಪ್ರಮುಖ ವಾಣಿಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅನ್-ಆಕ್ಸೆಸರಿ...ಅದೊಂದು ವಿಲಕ್ಷಣ ಹೆಸರು. ಮುಕುಂದಸಾಗರ ಹಾಗೇನೇ. ಅವನ ಡಿಸೈನುಗಳೆಷ್ಟು ವಿಚಿತ್ರ ವಿಲಕ್ಷಣವಾಗಿ ಕಾಣುತ್ತಿತ್ತೋ, ಅವನ ಡಿಸೈನುಗಳಿಗೆ-ವಸ್ತುಗಳಿಗೆ ಕೊಡುತ್ತಿದ್ದ ಹೆಸರೂ ಹಾಗೇ ಇರುತ್ತಿತ್ತು. ಅನವಶ್ಯಕ ಎನ್ನುವ ಅರ್ಥಬರುವಂತಿದ್ದ ಅನ್-ಆಕ್ಸೆಸರಿಯೆಂದು ಹೆಸರಿಟ್ಟಾಗ ಇಬ್ಬರೂ ಎರಡು ದಿನಗಳ ಕಾಲ ಚರ್ಚಿಸಿದ್ದನ್ನು ಸುಜಾತಾ ನೆನಪು ಮಾಡಿಕೊಂಡಳು. ನಮ್ಮ ಡಿಸೈನು ಎಷ್ಟು ಭಿನ್ನ ಹಾಗೂ ಎಷ್ಟು ಮಿನಿಮಲಿಸ್ಟ್ ಎನ್ನುವುದನ್ನು ಸೂಚಿಸಲೇ ಈ ಅನ್-ಆಕ್ಸೆಸರಿ ಎನ್ನುವ ಹೆಸರನ್ನು ಯೋಚಿಸಿರುವುದಾಗಿ ಮುಕುಂದಸಾಗರ ಹೇಳಿದ್ದ. ಮೊದಲಿಗೆ ಇದನ್ನು ಸುಜಾತಾ ಒಪ್ಪಿರಲಿಲ್ಲವಾದರೂ ಈ ವಿಷಯದಲ್ಲಿ ಮುಕುಂದಸಾಗರನಿಗೇ ಹೆಚ್ಚು ಒಳನೋಟಗಳಿರಬಹುದೆಂದು ಆಕೆ ಸುಮ್ಮನಾಗಿದ್ದಳು. ಮಕ್ಕಳಿಲ್ಲದ ಡಿಂಕ್ (ಡಬಲ್ ಇನ್ಕಮ್ ನೋ ಕಿಡ್ಸ್) ದಂಪತಿಯಾದ ಇಬ್ಬರೂ ಈ ಸಂಸ್ಥೆಯನ್ನು ಒಂದು ರೀತಿಯಿಂದ ತಮ್ಮ ಕೂಸಿನಂತೆಯೇ ಪೋಷಿಸಿ ಬೆಳೆಸಿದ್ದರು. ಕೂಸು ಬೆಳೆದು ಮನೆ ಬಿಟ್ಟು ಹೋಗುವುದು ಸಹಜವಾದ ಮಾತು. ಆದರೆ ಇಲ್ಲಿ ಮುಕುಂದಸಾಗರ ಕೂಸನ್ನೇ ಮಾರಾಟಮಾಡಿಬಿಟ್ಟಿದ್ದ.
ಅ-ಆ ಕಂಪೆನಿಯಲ್ಲಿ ಬಂಡವಾಳ ಹೂಡಿ, ಮುಕುಂದನ ಭಾಗಸ್ವಾಮ್ಯವನ್ನು ಪಡೆದಿದ್ದ ಶಿವಾನಿ ಮತ್ತು ಅವಳ ತಂದೆ ಈಗ ಸಂಪೂರ್ಣವಾಗಿ ಸಂಸ್ಥೆಯ ನಿರ್ವಹಣೆಯನ್ನು ಕೈವಶ ಮಾಡಿಕೊಂಡಿದ್ದರು. ಸುಜಾತಾ ಪತ್ರಿಕೆಯಲ್ಲಿ ಬಂದಿದ್ದ ಲೇಖನವನ್ನು ಗಮನವಿಟ್ಟು ಓದಿದಳು. ಆ ಲೇಖನದಲ್ಲಿ ಶಿವಾನಿ ಅ-ಆ-ಕಂಪೆನಿಯ ಗತವೈಭವದ ಬಗ್ಗೆ ಮಾತನಾಡಿದ್ದಳು. ಮುಕುಂದಸಾಗರನ ಬಗ್ಗೆ ತುಂಬಾ ಗೌರವದ ಮಾತುಗಳನ್ನು ಆಡಿದ್ದಳು. ಅ-ಆ-ಕಂಪೆನಿಯನ್ನು ಮುಂದಿನ ಹಂತಕ್ಕೆ ಒಯ್ಯುವ, ವಿದೇಶಿ ಮಾರುಕಟ್ಟೆಗಳನ್ನು ಆಕ್ರಮಿಸಿಕೊಳ್ಳುವ, ಎರಡು ವರ್ಷಗಳಲ್ಲಿ ಸಾವಿರದಷ್ಟು ಅನ್-ಆಕ್ಸೆಸರಿ ಮಳಿಗೆಗಳನ್ನು ದೇಶ ವಿದೇಶಗಳಲ್ಲಿ ತೆರೆಯುವ ಯೋಜನೆಯ ಬಗ್ಗೆ ವಿಸ್ತಾರವಾಗಿ ಮಾತಾಡಿದ್ದಳು. ತಮ್ಮ ಕಂಪೆನಿಯಲ್ಲಿ ಡಿಸೈನಿನ ವಿಷಯದಲ್ಲಿ ಅಪರಿಮಿತ ಪ್ರತಿಭೆಯಿತ್ತಾದರೂ ಮಾರುಕಟ್ಟೆಯ ವಿಭಾಗದಲ್ಲಿ ದೌರ್ಬಲ್ಯವಿತ್ತು. ಈಗ ಮಾರುಕಟ್ಟೆಯ ವಿಭಾಗಕ್ಕೆ ಹೊಸ ಮತ್ತು ಯುವ ಪ್ರತಿಭೆಗಳನ್ನು ನೇಮಿಸುವುದರಿಂದ ಕಂಪೆನಿ ತನ್ನ ವ್ಯಾಪಾರವನ್ನು ಒಂದೇ ವರ್ಷದಲ್ಲಿ ದುಪ್ಪಟ್ಟು ಮಾಡುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಹೇಳಿದ್ದಳು. ಜೊತೆಗೆ ಕಂಪೆನಿಯ ಆಡಳಿತ ಮಂಡಲಿಯಲ್ಲೂ ಈಗ ವಿಸ್ತೃತವಾದ ಪ್ರತಿಭೆಯಿರುವುದರಿಂದ ತಮಗೆ ಅಲ್ಲಿಂದಲೂ ಮಾರ್ಗದರ್ಶನ ಸಿಗುತ್ತದೆಂದು ಹೇಳಿದ್ದಳು.
ವ್ಯಾಪಾರದ ಶಿಖರಕ್ಕೆ ಹೊಸ ಮುಖ್ಯಸ್ಥರು ಬಂದಾಗ ನೀಡುವ ಸಂದರ್ಶನದಂತೆ ಇದು ಕಂಡಿತು. ಆದರೆ ಕಂಪೆನಿಯನ್ನು ಶಿವಾನಿ ಮತ್ತವಳ ತಂದೆ ಆಕ್ರಮಿಸಿದ ರೀತಿಯ ಹಿನ್ನೆಲೆಯನ್ನು ಅರಿತ ಸುಜಾತಾಳಿಗೆ ಇದು ಆಳವಾದ, ತುಂಬಲಾರದ ಘಾತವನ್ನು ಉಂಟುಮಾಡಿತು. ಮಾರಾಟ ವಿಭಾಗದ ಮುಖ್ಯಸ್ಥೆ ತಾನಾಗಿದ್ದಳಲ್ಲವೇ... ತನಗೂ ತನ್ನ ದಿವಂಗತ ಪತಿಯಾದ ಮುಕುಂದಸಾಗರನಿಗೂ ನಡುವಿದ್ದ ಪ್ರತಿಭೆಯ ಅಂತರವನ್ನು ಅವಳು ಬಿಚ್ಚಿ ತೋರಿಸಿ, ತನ್ನ ಪತಿಯ ವ್ಯಾಪಾರ ಬೆಳೆಯದಿರಲು ತಾನೇ ಕಾರಣವೆಂಬಂತೆ ಚಿತ್ರಿಸಿದ್ದಳು. ಆ ಅಂತರವನ್ನು ಶಿವಾನಿ ತುಂಬುತ್ತಿದ್ದಂತೆ ಕಂಡರೂ, ಅವಳು ಈಗಾಗಲೇ ಛಿದ್ರವಾಗಿದ್ದ ಸುಜಾತಾಳ ಬದುಕನ್ನು ನುಚ್ಚುನೂರು ಮಾಡುವಂತೆ ಕಾಣುತ್ತಿತ್ತು. ಬಹುಶಃ ಇದರಲ್ಲಿ ವೈಯಕ್ತಿಕ ದ್ವೇಷ ಇರಲಿಲ್ಲವೇನೋ. ಬಹುಶಃ ತನ್ನ ಪ್ರತಿಭೆಯ ವಾಸ್ತವದ ಕನ್ನಡಿಯನ್ನು ಶಿವಾನಿ ತೋರಿಸುತ್ತಿದ್ದಾಳೇನೋ. ಬಹುಶಃ ತಾನು ತನ್ನ ಬಂಡವಾಳದ ಪಾಲನ್ನು ಮಾರದೇ ಕಾಪಿಟ್ಟುಕೊಂಡರೆ, ಅದರಲ್ಲೇ ಯಶಸ್ಸಿದೆಯೇನೋ.... ಹೀಗೆಲ್ಲಾ ಸುಜಾತಾ ಯೋಚಿಸಿದಳು. ಎರಡೇ ತಿಂಗಳ ಹಿಂದೆ ಎಸ್ಸೆಮ್ಮೆಸ್ ಎನ್ನುವ ಹೆಸರಿನೊಂದಿಗೆ - ಸುಜಾತಾ ಮುಕುಂದ ಸಾಗರ - ಮುಂಬೈಯ ಥಳುಕಿನ ಲೋಕದಲ್ಲಿ ಮೆರೆಯುತ್ತಿದ್ದವಳಿಗೆ ಅದೆಲ್ಲವೂ ಮಾಯೆ ಮತ್ತು ಭ್ರಮೆ ಅನ್ನಿಸತೊಡಗಿತು. ಅದು ಕೇವಲ ಮುಕುಂದಸಾಗರನ ಪ್ರಭಾವಳಿಯಿಂದ ತನ್ನ ಮೇಲೆ ಬಿದ್ದ ಕ್ಷಣಿಕ ಬೆಳಕು ಮಾತ್ರವಾಗಿತ್ತೇನೋ......ಎನ್ನುವ ಕೀಳರಿಮೆ ಕಾಡಿತು. ಆದರೆ ಈಗ, ಈ ಅ-ಆ-ಕಂಪೆನಿಯನ್ನು ಇಷ್ಟು ವರ್ಷಗಳ ಕಾಲ ಬೆಳೆಸಿದ ನಂತರ - ಈಗಲೂ ಅವಳನ್ನು ಫ್ಯಾಮಿಲಿ ಓನ್ಡ್ ಬಿಸಿನೆಸ್ ನಲ್ಲಿ ಪಾಲುದಾರಳಾಗಿ ಪತ್ನಿಯ ಸ್ಥಾನವನ್ನಾಕ್ರಮಿಸಿಕೊಳ್ಳ ಬೇಕಿತ್ತೋ, ಅಥವಾ ಮಾರುಕಟ್ಟೆ ವಿಭಾಗವನ್ನು ಇಷ್ಟು ವರ್ಷಕಾಲ ನಿಭಾಯಿಸಿದ ಮ್ಯಾನೇಜರ್ ಆಗಿ ನೋಡಬೇಕಿತ್ತೋ ಎನ್ನುವ ಪ್ರಶ್ನೆ ಸುಲಭದ್ದೇನೂ ಅಲ್ಲ. ಮುಕುಂದಸಾಗರ ಬದುಕಿದ್ದಷ್ಟೂ ದಿನ ಅವನ ನೆರಳಿನಲ್ಲಿಯೇ ಇದ್ದಳು. ಅ-ಆ-ಕಂಪೆನಿಯ ಮಟ್ಟಿಗೆ ತನ್ನದೇ ಭಿನ್ನ ವ್ಯಕ್ತಿತ್ವವನ್ನು ಅವಳು ರೂಪಿಸಿಕೊಂಡಿರಲಿಲ್ಲ. ಜೊತೆ ಜೊತೆಯಲೇ ಇದ್ದುದರಿಂದ ಹಾಗೂ ಇದು ತನ್ನ ವಿಸ್ತೃತ ಸಂಸಾರ ಎಂದು ಭಾವಿಸಿದ್ದರಿಂದ ಹಾಗಾಗಿರಬಹುದು. ಅಂದರೆ ತನ್ನ ಪ್ರತಿಭೆ ಈ ವ್ಯಾಪಾರವನ್ನು ಬೆಳೆಸುವುದರಲ್ಲಿ ಮುಂಚಿನಿಂದಲೂ ಇರಲಿಲ್ಲವೇ... ತಾನು ಅಷ್ಟು ನಿಷ್ಪ್ರಯೋಜಕಳೇ... ಅನ್-ವರ್ಥಿಯೇ....ತಾನೂ ಮುಕುಂದ ಸಾಗರನಿಗೆ ಒಂದು ಅನ್-ಆಕ್ಸೆಸರಿಯಾಗಿ ಅಂಟಿದ್ದಳೇ..... ಹೀಗೆ ಸುಜಾತಾಳ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳಿದ್ದುವು.
****
ಇತ್ತ ಶಿವಾನಿಯ ಗೆಳೆಯ ಚಿನ್ಮಯನಿಗೆ ತನ್ನ ಪರಿಸ್ಥಿತಿಯ ಬಗ್ಗೆ ಅನುಮಾನಗಳು ಬರತೊಡಗಿದುವು. ಮೊದಲಿಗೆ ಮಾರಾಟ ವಿಭಾಗಕ್ಕೆ ಚಿನ್ಮಯ ಮುಖ್ಯಸ್ಥನಾದರೆ ಚೆನ್ನಾಗಿರುತ್ತದೆ ಎಂದು ಶಿವಾನಿ ಹೇಳಿದ್ದಳು. ಆದರೆ ಈ ಕಂಪೆನಿಯನ್ನು ಇಂಟರ್ನ್ ಆಗಿ ಸೇರಿದಾಗಿನಿಂದ ಮತ್ತು ಅದರ ಮಾಲಕತ್ವವನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದಾಗ ಶಿವಾನಿಯೇ ಮಾರುಕಟ್ಟೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಳು. ಈಚಿನ ಸಂದರ್ಶನದಲ್ಲೂ ಅವಳು ಡಿಸೈನಿಗಿಂತ ಹೆಚ್ಚು ಮಾರುಕಟ್ಟೆಯ ಮೇಲೆಯೇ ತನ್ನ ಮಾತುಗಳನ್ನೂ ಕೇಂದ್ರೀಕರಿಸಿದ್ದನ್ನು ಚಿನ್ಮಯ ಗಮನಿಸಿದ್ದ. ಫ್ಯಾರಿಸ್‌ನಲ್ಲಿ ಕೋರ್ಸ್ ಮಾಡಿದ್ದು ಡಿಸೈನಿಗೆ ಸಂಬಂಧಿಸಿದಂತೆ. ಅಲ್ಲಿಯೇ ಶಿವಾನಿಯ ಪರಿಚಯವೂ ಸ್ನೇಹವೂ ಸಿಕ್ಕು ಅವಳು ತನ್ನ ಆಪ್ತ ಗೆಳತಿಯೂ ಆಗಿದ್ದಳು. ಆದರೂ ಈ ಕಲೆ ಮತ್ತು ವ್ಯಾಪಾರದ ಮಿಲನದಲ್ಲಿ ತನ್ನ ಪಾತ್ರ ಕಲೆಯದ್ದೇ ಅಂತ ಚಿನ್ಮಯನಿಗೆ ಅನ್ನಿಸಿತ್ತು. ಈಗ ಶಿವಾನಿ ಮಾರಾಟದ ವಿಭಾಗದ ಮುಖ್ಯಸ್ಥನಾಗು ಅನ್ನುತ್ತಿದ್ದಾಳೆ....
ಶಿವಾನಿ ಮತ್ತು ಚಿನ್ಮಯರ ಗೆಳೆತನ ಪ್ಯಾರಿಸ್‌ನಲ್ಲಿ ಆರಂಭವಾಗಿ, ಅಲ್ಲಿಯೇ ಬೆಳೆದಿದ್ದರೂ ಭಾರತದಲ್ಲಿ - ಮುಖ್ಯವಾಗಿ ಮುಂಬೈಯಲ್ಲಿ? ಅದಕ್ಕೊಂದು ಸ್ಪಷ್ಟವಾದ ರೂಪಕಲ್ಪನೆಯಾಗಿತ್ತು. ಶಿವಾನಿಯ ಬದುಕಿನಲ್ಲಿಯೂ ಮತ್ತು ಈ ಕಂಪೆನಿಯಲ್ಲಿಯೂ ಚಿನ್ಮಯ ದೊಡ್ಡ ಪಾತ್ರ ವಹಿಸುವುದರ ಬಗ್ಗೆ ತುಂಬಾ ಕಾತರತೆಯನ್ನು ಶಿವಾನಿಯೂ ಅವಳ ತಂದೆಯೂ ತೋರಿಸಿದ್ದರು. ಈಗ ಮುಕುಂದಸಾಗರ ತೀರಿಕೊಂಡ ನಂತರ ಶಿವಾನಿಯ ತಂದೆಯೇ ಈ ಕಂಪೆನಿಯ ಅಧ್ಯಕ್ಷರಾಗುವುದೆಂದೂ ನಿರ್ಧರಿಸಲಾಗಿತ್ತು. ಚಿನ್ಮಯನ ಪಾತ್ರದ ಚರ್ಚೆ ತನ್ನ ಎದುರಿನಲ್ಲಿ ಅಲ್ಲದೇ ತನ್ನ ಬೆನ್ನ ಹಿಂದೆಯೂ ನಡೆಯುತ್ತಿರುವುದು ಹಾಗೂ ಶಿವಾನಿ ಮತ್ತವಳ ತಂದೆ ತನ್ನ ಪ್ರತಿಭೆಯ ಮೌಲ್ಯಮಾಪನ ಮಾಡುತ್ತಿದ್ದುದು ಚಿನ್ಮಯನಿಗೆ ಹಿಡಿಸಿರಲಿಲ್ಲ. ಗೆಳೆತನ, ಸಂಬಂಧ, ವೃತ್ತಿ ಈ ಮೂರನ್ನೂ ಮೇಳೈಸಬೇಕೇ ಎನ್ನುವ ಪ್ರಶ್ನೆ ಚಿನ್ಮಯನನ್ನು ಕಾಡುತ್ತಿತ್ತು. ಇದರಲ್ಲಿ ಒಂದು ವಿಚಿತ್ರ ವಿಲಕ್ಷಣತೆಯಿತ್ತು. ಮುಕುಂದಸಾಗರ ತನ್ನ ಕಂಪೆನಿಯನ್ನು ಸ್ಥಾಪಿಸಿದಾಗ ಸುಜಾತಾ ಅಲ್ಲಿನ ಮಾರುಕಟ್ಟೆಯ ವಿಭಾಗ ಸೇರಿದ್ದು ಪ್ರತಿಭೆ-ತಾಲೀಮು-ವೃತ್ತಿಪರತೆಗಿಂತ ಹೆಚ್ಚಾಗಿ ಅವಳ ಸಂಬಂಧದಿಂದಾಗಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಹಾಗೆ ನೋಡಿದರೆ ಕಂಪೆನಿಯ ಕಾಲು ಭಾಗದಷ್ಟು ಮಾಲಕತ್ವ ಅವಳ ಬಳಿ ಇನ್ನೂ ಇತ್ತು. ನಿಜಕ್ಕೂ ಮುಕುಂದಸಾಗರನ ಪತ್ನಿಯೆನ್ನುವ ಪಟ್ಟವೇ ಅಲ್ಲಿನ ಮಾರಾಟವಿಭಾಗಕ್ಕೆ ಅವಳನ್ನು ಕರೆತಂದಿತ್ತು. ಆದರೆ ತನ್ನ ಪರಿಸ್ಥಿತಿ ಏನೆಂದು ಚಿನ್ಮಯ ಯೋಚಿಸಿದ. ಸುಜಾತಾಳ ಸ್ಥಿತಿಗೂ ತನ್ನ ಸ್ಥಿತಿಗೂ ತನಗೊಂದು ಡಿಸೈನಿನ ಡಿಗ್ರಿ ಇದೆ ಅನ್ನುವುದನ್ನು ಬಿಟ್ಟರೆ ಬೇರೇನಾದರೂ ವ್ಯತ್ಯಾಸವಿರಬಹುದೇ? ಎಂದು ಚಿನ್ಮಯ ಯೋಚಿಸಿದ. ತನ್ನ ಪಾತ್ರವನ್ನು ಮತ್ತು ಅಸ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು? ಇಲ್ಲಿ ಶಿವಾನಿಯ ಧನಬಲದ ಕೆಳಗೆ ಕೆಲಸ ಮಾಡಿದರೆ ಬರುವ ಶ್ರೇಯಸ್ಸು ಎಲ್ಲವೂ ಶಿವಾನಿಗೇ ಸಲ್ಲುತ್ತದೆ. ಗೆದ್ದರೆ ಅಮ್ಮಾವ್ರ ಗಂಡ. ಸೋತರೆ ಅಮ್ಮಾವ್ರ ನಾಲಾಯಕ್ ಗಂಡ. ಯಾವ ರೀತಿಯಿಂದಲೂ ಇದು ತನ್ನ ಅಹಮ್ಮಿಗೆ ಪೂರಕವಾದ ತನ್ನ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಸಾಧ್ಯವಾದ ಕೆಲಸ ಅಂತಲೂ ಅವನಿಗೆ ಅನ್ನಿಸಿತ್ತಿತ್ತು. ಮೇಲಾಗಿ ಸುಜಾತಾಳನ್ನು ಇಷ್ಟು ತುರ್ತಿನಲ್ಲಿ, ಅವಳ ಗಂಡ ತೀರಿಕೊಂಡ ದುಃಖದಿಂದ ಚೇತರಿಸಿಕೊಳ್ಳುವ ಮುನ್ನವೇ ಕೆಲಸದಿಂದ ತೆಗೆದು, ಅವಳು ಗಂಡನ ಜೊತೆ ಆಕ್ರಮಿಸಿಕೊಂಡಿದ್ದ ಮನೆಯಿಂದಲೂ ಹೊರಹಾಕುವ ಹುನ್ನಾರ ಅವನಿಗೆ ತುಸುವೂ ಹಿಡಿಸಲಿಲ್ಲ. ಇದರಲ್ಲಿ ಶಿವಾನಿಯು ತೋರಬೇಕಾದ ಘನತೆಯನ್ನು ತೋರಲಿಲ್ಲ ಎಂದು ಚಿನ್ಮಯನಿಗೆ ಅನ್ನಿಸಿತ್ತು. ಅಷ್ಟೇ ಅಲ್ಲ, ತಾನು ಬಹುವಾಗಿ ಪ್ರೀತಿಸುತ್ತಿದ್ದ ಶಿವಾನಿಯ ಮಾನವೀಯ ಮೌಲ್ಯಗಳ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದುವು. ಅವಳು ಹೀಗೆ ಜನರನ್ನು ಬಳಸಿ ಬಿಸಾಕುವ ರೀತಿಯನ್ನು ಕಂಡು ಚಿನ್ಮಯ ಅವಾಕ್ಕಾಗಿದ್ದ. ತಮ್ಮ ಪ್ರೀತಿಯ ಸಂಬಂಧ ನಿಜಕ್ಕೂ ಉತ್ಕಟ ಪ್ರೀತಿಯೋ ಅಥವಾ ಅವಳ ವ್ಯವಹಾರಕ್ಕೆ ಅನುಕೂಲವಾದ ವ್ಯವಸ್ಥೆಯೋ ಎಂದೂ ಯೋಚಿಸಿದ. ತನ್ನ ಮಟ್ಟಿಗೆ ಈ ಸಂಬಂಧ ಸ್ಪಷ್ಟವಾಗಿದೆ ಅನ್ನಿಸಿದರೂ ಶಿವಾನಿ ಅದನ್ನು ಹೇಗೆ ನೋಡುತ್ತಿರಬಹುದು ಎನ್ನುವ ಅನುಮಾನದಲ್ಲಿ ತನ್ನ ಅಭಿಪ್ರಾಯವನ್ನು ಮರುರೂಪಿಸಿಕೊಳ್ಳಲು ಅವನು ಪ್ರಯತ್ನಿಸಿದ. ಮುಖ್ಯವಾಗಿ ಸುಜಾತಾಳ ಗಂಡ ಅಸುನೀಗಿದ ದಿನದಿಂದಲೇ ಅವಳ ಸಂಬಳವನ್ನು ಕತ್ತರಿಸಿ, ಮನೆ ಖಾಲಿ ಮಾಡಲು ಕಳುಹಿಸಿದ್ದ ಕಾನೂನು ಪತ್ರವನ್ನು ಕಂಡಾಗ ಶಿವಾನಿಯಲ್ಲಿರಬಹುದಾದ ತಣ್ಣನೆಯ ಭಾವನಾಹೀನತೆ ಕ್ರೌರ್ಯದ ಮಟ್ಟವನ್ನು ತುಲುಪಿದೆ ಎಂದು ಅವನಿಗೆ ಅನ್ನಿಸಿತ್ತು. ಇಲ್ಲ. ಅವಳ ಈ ವ್ಯಕ್ತಿತ್ವದ ಈ ಮಜಲು ಪರಿಚಯವಾದ ಮೇಲೆ ಈ ಸ್ನೇಹ, ಈ ವ್ಯಾಪಾರ, ಈ ಭಾಗಸ್ವಾಮ್ಯ ಮತ್ತು ಈ ಕನಸನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಅನ್ನಿಸಿತ್ತು. ಹೀಗಾಗಿಯೇ ಶಿವಾನಿಯನ್ನು ಖಾಸಗಿಯಾಗಿ ಭೇಟಿಯಾಗಬೇಕು - ಮಾತಾಡಬೇಕು ಎಂದು ಹೇಳಿ ಒಂದು ಸಂಜೆಯ ಏಕಾಂತಕ್ಕೆ ನಾಂದಿ ಹಾಡಿದ್ದ.
ನಾಂದಿ ಹಾಡಿದ್ದಲ್ಲದೇ ಸುಜಾತಾಳ ಬಗ್ಗೆ ತನ್ನ ಸಹಾನುಭೂತಿ ವ್ಯಕ್ತಪಡಿಸುತ್ತಾ ಅವಳ ಪರ ತಾನಿರುವ ಅರ್ಥ ಬರುವ ಹಾಗೆ ಒಂದು ಮೆಸೇಜನ್ನೂ ಸುಜಾತಾಳಿಗೆ ಕಳುಹಿಸಿದ್ದ. ಅವನಿಗೆ ಸುಜಾತಾಳ ಜೊತೆ ಮಾತನಾಡಬೇಕು ಅನ್ನಿಸಿತ್ತು. ಆದರೆ ಸುಜಾತಾ ಅವನ ಬಗ್ಗೆ ನಂಬಿಕೆಯನ್ನೂ ಆಸಕ್ತಿಯನ್ನೂ ತೋರಿರಲಿಲ್ಲ. ಸುಜಾತಾ ಈಗಿರುವ ಪರಿಸ್ಥಿತಿಗೂ, ತಾನು ಶಿವಾನಿಯ ಜೊತೆ ಮಾಡುತ್ತಿರುವ ಸಂಬಂಧ-ಒಪ್ಪಂದಗಳ ಜಾಲಕ್ಕೂ ಒಂದು ವಿಚಿತ್ರ ಕಾಕತಾಳೀಯ ಸಾಮ್ಯತೆ ಇದೆ ಅಂತ ಅವನಿಗನ್ನಿಸಿತ್ತು. ಅಂದು ಸಂಜೆ, ಸುಜಾತಾಳ ಪರಿಸ್ಥಿತಿ, ತನ್ನ ಪರಿಸ್ಥಿತಿ, ತನ್ನ ಭವಿಷ್ಯ ಎಲ್ಲದರ ಬಗ್ಗೆ ಶಿವಾನಿಯ ಜೊತೆ ಚರ್ಚೆ ಆಗುವುದರಲ್ಲಿತ್ತು.
****
ಶಿವಾನಿಗೆ ಈ ಗೋಜಲು ಅರ್ಥವಾಗುತ್ತಿಲ್ಲ ಎನ್ನಿಸಿತ್ತು. ಯಾಕೆ ತನ್ನ ಕಡೆಯಿರಬೇಕಾದ ಚಿನ್ಮಯ ಸುಜಾತಳ ಕಡೆಗೆ ವಾಲುತ್ತಿದ್ದಾನೆ? ಅವನಿಗೆ ಯಾಕೆ ವ್ಯವಹಾರದ ತರ್ಕ ಅರ್ಥವಾಗುತ್ತಿಲ್ಲ? ಯಾಕೆ ವ್ಯವಹಾರದ ನಡುವೆ ಮಾನವೀಯ ಮತ್ತು ಭಾವನಾತ್ಮಕ ದುಗುಡಗಳನ್ನು ತಂದು ಹಾಕುತ್ತಿದ್ದಾನೆ? ಯಾವ ಪ್ರಯೋಜನಕ್ಕೂ ಬರದ, ಕೇವಲ ಮುಕುಂದಸಾಗರನ ಹೆಂಡತಿ ಎನ್ನುವ ಕಾರಣಕ್ಕಾಗಿಯೇ ಇಷ್ಟು ದಿನ ಮೆರೆದ ಸುಜಾತಾಳನ್ನು ಯಾತಕ್ಕಾಗಿ ಕಾಪಾಡಬೇಕು, ಹೀಗೆಲ್ಲಾ ಅವಳು ಯೋಚಿಸಿದಳು. ಇಷ್ಟು ದಿನ ಸುಜಾತಾ ತನ್ನ ಗಂಡನ ಆಕ್ಸೆಸರಿಗಳನ್ನು ತನಗೆ ಬಂದ ರೀತಿಯಲ್ಲಿ ಮಾರಾಟಮಾಡುತ್ತಾ ಓಡಾಡುತ್ತಿದ್ದಳು. ಈ ಕಂಪೆನಿಯಲ್ಲಿ ಯಾವುದೇ ರೀತಿಯ ವೃತ್ತಿಪರತೆ ಕಂಡುಬಂದಿರಲಿಲ್ಲ. ಎಲ್ಲವೂ ಯಾರಿ-ದೋಸ್ತಿಯಲ್ಲಿಯೇ ನಡೆಯುತ್ತಿತ್ತು. ಈ ಮಟ್ಟದ ವ್ಯಾಪಾರಕ್ಕೆ ಈಗಿನ ಲಾಭದ ದುಪ್ಪಟ್ಟು ಲಾಭ ಬರಬೇಕಿತ್ತು. ಈಗಿರುವ ಡಿಸೈನ್ ಪ್ರತಿಭೆಯ ಆಧಾರದ ಮೇಲೆ ವ್ಯಾಪಾರದ ಮಟ್ಟ ಈಗಿನದ್ದಕ್ಕಿಂತ ದುಪ್ಪಟ್ಟು ಇರಬೇಕಿತ್ತು. ಅಂದರೆ ಲಾಭ ನಾಲ್ಕುಪಟ್ಟು. ತಮ್ಮದೇ ದುಡ್ಡು ಹಾಕಿ ಯಾರಿಗೂ ಜವಾಬ್ದಾರಿಯುತವಾಗಿರದ ವ್ಯಾಪಾರಿಗಳ ಹಣೆಬರಹವೇ ಇಷ್ಟು. ಕೂತಲ್ಲೇ ಎಷ್ಟು ಸಂಪಾದಿಸಬಹುದೋ ಅದರ ಅಲ್ಪಭಾಗವನ್ನಷ್ಟೇ ಸಾಧಿಸಿ ಮಹಾತೃಪ್ತರಾಗುವ ಇವರಿಗೆ ವ್ಯಾಪಾರದ ಕಿಡಿ ಹಚ್ಚುವುದು ಹೇಗೆ? ಮಿಕ್ಕ ಕ್ಷೇತ್ರಗಳಿಗಿಂತ ತಮ್ಮ ಡಿಸೈನು ಪರಿವಾರದಲ್ಲಿ ಈ ರೋಗ ಹೆಚ್ಚೇ ಇತ್ತು. ಕಲೆಗಾಗಿ ಕಲೆ. ಸದುದ್ದೇಶಕ್ಕೆ ಕಲೆ. ರಾಜಕೀಯ ಸಂದೇಶಕ್ಕೆ ಕಲೆ. ಕ್ರಾಂತಿಗಾಗಿ ಕಲೆ.... ಅರೇ... ವ್ಯಾಪಾರವನ್ನೊಂದು ಬಿಟ್ಟು ಮಿಕ್ಕೆಲ್ಲದಕ್ಕೂ ಕಲೆಯನ್ನು ಉಪಯೋಗಿಸುವ ಕ್ರಾಂತಿಕಾರಿಗಳಾಗಿ ತನ್ನ ಪರಿವಾರ ಓಡಾಡುತ್ತದಲ್ಲಾ.. ಯಾಕೆ ಕಲೆಯಿಂದ ಮೊದಲು ಸಂಪಾದಿಸಿ, ನಂತರ ಯಾವುದೇ ಕ್ರಾಂತಿಯನ್ನು ಬಗೆಯಬಾರದು ಎಂದು ಅವಳಿಗೆ ಅನ್ನಿಸುತ್ತಿತ್ತು. ಹಾಗೆ ನೋಡಿದರೆ ಮುಕುಂದಸಾಗರ ತನ್ನ ಮನೆಯಲ್ಲಿ ಒಗ್ಗರಣೆ ಹಾಕಬೇಕಿದ್ದ ಧರ್ಮಪತ್ನಿಯನ್ನು ಇಲ್ಲಿ ಮಾರಾಟದ ಕುರ್ಚಿಯಲ್ಲಿ ಕೂಡಿಸಿ ಸಾಧಿಸಿದ್ದಾದರೂ ಏನು? ಎಂಪವರ್ಮೆಂಟೇ, ಈಕ್ವಾಲಿಟಿಯೇ, ಪ್ರೊಫೆಷನಲಿಸಮ್�