ನೆಲ್ಲುಕುಂಟೆ ಕವಿತೆಗಳು

Update: 2018-12-07 12:15 GMT

1.

ಗೊಮ್ಮಟಹರಿಯುತ್ತಿದೆ ಕರುಣರಸ

ಎದೆಮಟ್ಟ

ಸಿರಿಗಾಸಿನ ಮಜ್ಜನ

ನಗುಮಾತ್ರ ಸುಸಜ್ಜನ

ಹೇಗೆ ಸಾಧ್ಯ ಮಾರಾಯ?

ಹೀರಿ ಕೊಬ್ಬಿದನ್ನೆರಡು ವರ್ಷ

ಸುರಿಯುತ್ತಿದೆ ಗಳಿಗೆ

ಹಾಲಾಗಿ ತುಪ್ಪವಾಗಿ

ಆದರೂ ನಗುತ್ತೀಯಲ್ಲೊ ಅಣ್ಣಾ!

2.

ಬರುತ್ತಾರೆ

ನಿನ್ನ ಬಳಿಗೆ

ಭೋಗಕ್ಕೆ, ಭಾಗ್ಯಕ್ಕೆ, ಪೌರುಷಕ್ಕೆ

ಕೊನೆಗೆ

ತುಕ್ಕಿಡಿದ ಕುರ್ಚಿಗೆ

ಸುಕ್ಕಿಡಿದ ತೊಗಲು

ಅನುರಾಗದ ಮಡಿಲು

ಕಣ್ಣು ಮುಚ್ಚಿದರೆ ಕುಣಿವ ಹಾದರದ ಮರುಳು

ಕೊಳೆ ತಪ್ಪಿದ್ದೆಂದು ಮನಸ್ಸಿಗೆ?

ನದಿಗೆ ನೆರೆ

ನೆಲಕೆ ಬರೆ

ಎದೆಹಾಲು ರಣ ಕೀವು

ಜಗದ ನಾಟಕ ನಿನ್ನ ಕಾಲ ಕೆಳಗೆ

3.

ಗುರುವೇ ನೀ ತೊರೆದೆ

ಯುದ್ಧಾಸ್ತ್ರ ಲಲನಾಸ್ತ್ರ

ಶಂಖ ಕೊಳಲುಗಳ ಸಂಗೀತಾಸ್ತ್ರ

ಊರ ದೇವರಿಗೆಂದೂ ವಯಸ್ಸಾಗುವುದಿಲ್ಲ

ನಗುವಿನ ಹಂಗು ತೊರೆದಿಲ್ಲ ನೀನು

ನಗು ಒಡಲಿಗಂಟಿದ ಹಂಗು

4.

ಉತ್ತರಕ್ಕೆ ಮುಖ ಮಾಡಿ ನಿಂತೆ

ಎಡದ ಕಣ್ಣಂಚು ಉಡುಪಿ

ಬಲದ ರೆಪ್ಪೆ ತುಸು ಬಾಗಿ ಕಂಚಿ ಸೋಂಕುತಿದೆ

ನೇರಕ್ಕೆ ನೋಡಿದರೆ ಹುಣ್ಣಾದ ವ್ರಜಭೂಮಿ

ರಾಜಗೃಹ, ಇಂದ್ರಪ್ರಸ್ತ, ಹಸ್ತಿನಾವತಿ

ದ್ವಾರಕೆಯ ಕೊಳಲುಬ್ಬರಕ್ಕೆ ಉಕ್ಕಿ ಹರಿದಿದೆ ಕಡಲು

ಉಳಿದೆಲ್ಲ ಕಡೆ ನೆತ್ತರ ಮಳಲು

ಆಂಜನೇಯನ ಮುಖ ಪೂರಾ ಸಿಂಹಗೂದಲು

ಎಷ್ಟು ಮಳೆ ಬಂದರೆ ತಾನೆ

ತೊಳೆದೀತು ಅಳಲು?

5.

ಕೊಲ್ಲು ಧರ್ಮಕ್ಕೆ

ಹರಿಸು ನೆತ್ತರು ಪರ್ವಾಗಿಲ್ಲ ಭ್ರಾತೃಹತ್ಯೆ

ಕೊನೆಗೆ ಜೀವಂತ ಹೆಣ್ಣ ಹತ್ಯೆ

ಹತ್ಯೆ ಹತ್ಯೆಯ ಬೇಗೆ ಕುಣಿಯಿತೇ ಕಣ್ಣ ಮುಂದೆ?

ಥಟ್ಟನೇಕೆ ಇಳಿಸಿದೆ ಭರತನ

 ಕೊಲ್ಲೆಂದು ಕೊಳಲೂದಿ ಕುಣಿದ ಮಾಯಾವಿ ಗುರು ಇರಲಿಲ್ಲವೇ ನಿನಗೆ?

6.

ಎದೆಯ ದನಿ

ಕರೆದ ಕರುಣೆಯ ಹನಿ

ಥಟ್ಟನೆ ನಿಂತೆ.

ನಿಂತೆ ಕೂರಲಾಗದೆ ಕೊನೆಗೆ ಕೊರಗಲಾರದೆ?

7.

ಬೇಕು ಉತ್ತರಕ್ಕೆ

ಕರುಣೆಯ ಕಡಲು;

ಬುದ್ಧ ಗುರುವೂ ದುಃಖದಲ್ಲಿದ್ದಾನೆ

ಹುಣ್ಣಿಮೆಗಳಾಗುತ್ತಿವೆ

ಹುಣ್ಣುಗಳೂ ಬಲಿಯುತ್ತಿವೆ

ಬೊಗಸೆ ಪಾಯಸ ಬೇಡಿ ನೆಲ ಕಚ್ಚಿ ಮಲಗಿದ್ದೇನೆ.

ನಿನ್ನ ಎದೆಯೊಳಗುಟ್ಟಿದ ಪಾಯಸ ನೀಡು

ಸಾಧ್ಯವಾದರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಗಾಂಧೀಜಿ