ಮಾಯ್ಕಾರ ಮಾದೇವನ ಧ್ಯಾನದಲ್ಲಿ...

Update: 2018-12-07 14:56 GMT

  ✍ ಬಸು ಮೇಗಲಕೇರಿ

ದೇವನೂರ ಮಹಾದೇವ ಭೂಲೋಕದ ಸಕಲ ಸಂಕಟಗಳನ್ನು ತಮ್ಮವೆಂದೇ ಭಾವಿಸುವ, ಬಡವರ ಸಾರ್ವಕಾಲಿಕ ಪ್ರತಿನಿಧಿಯಂತೆ ಕಾಣುವ ವ್ಯಕ್ತಿ. ಸೋಮಾರಿತನದ ಜೊತೆಗೆ ಹಿಂಜರಿಕೆಯ ಸ್ವಭಾವದವರು. ಸಾಮಾನ್ಯರಂತೆ ಕಾಣುವ ಅಸಾಮಾನ್ಯರು. ಮಾತು ಕಡಿಮೆಯಾದರೂ ಮರ್ಮಕ್ಕೆ ತಾಕುವಂತೆ ಮಾತನಾಡುವವರು. ಇಂತಹ ಅಪರೂಪದ ದೇವನೂರ ಮಹಾದೇವರನ್ನು ಮತ್ತವರ ದ್ಯಾವನೂರನ್ನು ಅದೇಕೋ ನೋಡಬೇಕೆನಿಸಿತು. ಅವರ ಕತೆ, ಕಾದಂಬರಿಗಳ ಪಾತ್ರಗಳನ್ನು ಕಂಡು ಮುಟ್ಟಿ ಮಾತನಾಡಿಸಬೇಕೆನಿಸಿತು. ಮಹಾದೇವರ ಅಪ್ಪ ನಂಜಯ್ಯನವರು ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಪೊಲೀಸ್ ಠಾಣೆ, ಅವ್ವ ನಂಜಮ್ಮನವರಿದ್ದ ಚಿಕ್ಕವಲಂದೆಯನ್ನೆಲ್ಲ ಸುತ್ತಾಡಬೇಕೆನಿಸಿತು. ಮನಸು ಮಾದೇವನಾಗಿ, ಧ್ಯಾನ ದೇವನೂರಾಯಿತು.

ಹೆಸ್ಕೂಲಿನಲ್ಲಿದ್ದಾಗಲೇ ವಿಕ್ಟರ್ ಹ್ಯೂಗೋನ ‘ನೊಂದಜೀವಿ’ ಓದಿ ಪ್ರಭಾವಿತರಾಗಿದ್ದ ಟಾಲ್‌ಸ್ಟಾಯ್‌ರ ‘ಯುದ್ಧ ಮತ್ತು ಶಾಂತಿ’ ಓದಿ ಚೇತರಿಸಿಕೊಳ್ಳಲಾಗದಷ್ಟು ಚಿತ್ತಾಗಿದ್ದ ದೇವನೂರ ಮಹಾದೇವ, ವಿದ್ಯಾರ್ಥಿಯಾಗಿದ್ದಾಗಲೇ ಸಮಾಜವಾದಿ ಯುವಜನ ಸಭಾದ ಕಾರ್ಯಕರ್ತರಾಗಿದ್ದರು. ಕೆಲವು ಗೆಳೆಯರೊಂದಿಗೆ ಸೇರಿ ವಿದ್ಯಾರ್ಥಿ ಸಮುದಾಯಕ್ಕೆ ‘ನರ’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ ‘ಮಾನವ’ ಪತ್ರಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಬೆಳೆದಂತೆಲ್ಲ ಗದ್ಯಕ್ಕಾಗಿ ಕುವೆಂಪುರವರನ್ನು, ಪದ್ಯಕ್ಕಾಗಿ ಬೇಂದ್ರೆಯವರನ್ನು ಬೆರಗಿನಿಂದ ಓದಿಕೊಂಡರು. ಪಿಯುಸಿ ಓದುತ್ತಿರುವಾಗಲೇ, 1967-68ರ ಸುಮಾರಿನಲ್ಲಿಯೇ ‘ದ್ಯಾವನೂರು’ ಕಥಾ ಸಂಕಲನವನ್ನು ಹೊರತಂದರು. 1979 ರಲ್ಲಿ ‘ಒಡಲಾಳ’ ಮತ್ತು 1984ರಲ್ಲಿ ‘ಕುಸುಮಬಾಲೆ’ ಎಂಬ ಕಿರು ಕಾದಂಬರಿಗಳನ್ನೂ ಪ್ರಕಟಿಸಿದರು. ಕಡಿಮೆ ಬರೆದರೂ ಭಿನ್ನವಾಗಿ ಬರೆದು, ವಿಭಿನ್ನ ಹಾದಿಯಲ್ಲಿ ನಡೆದು ‘ಮಾಯ್ಕಾರ ಮಾದೇವ’ನಾದರು. ಮಹಾದೇವರು ಬರೆಯುವ ಕಾಲಕ್ಕೆ ರೈತ, ದಲಿತ ಮತ್ತು ಬಂಡಾಯ ಚಳವಳಿಗಳ ಕಾವಿತ್ತು. ನಾಡು ಹೊಸತನಕ್ಕೆ ತುಡಿಯುತ್ತಿತ್ತು. ಬದಲಾವಣೆಯನ್ನು ಬಯಸುತ್ತಿತ್ತು. ಆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯಲೋಕದಲ್ಲಿ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಚಿತ್ತಾಲ, ದೇಸಾಯಿ, ಕಾರ್ನಾಡ್, ಕಂಬಾರ, ಆಲನಹಳ್ಳಿ ಕೃಷ್ಣರೆಂಬ ನಕ್ಷತ್ರಗಳು ಮಿನುಗುತ್ತಿದ್ದವು. ಗ್ರಹಗಳೂ ಇದ್ದವು.

ಮಹಾದೇವ ಮಾತ್ರ ಸೂ. ರಮಾಕಾಂತರನ್ನು ಗುರುಗಳೆಂದು ಗುರುತಿಸಿಕೊಂಡು, ಬೆಸಗರಹಳ್ಳಿ ರಾಮಣ್ಣರನ್ನು ಮನಸ್ಸಿನಲ್ಲಿಟ್ಟುಕೊಂಡು, ಅವರದೇ ದೇಸೀ ದಾರಿಯಲ್ಲಿ ಸಾಗಿದ್ದರು. ಹಾಗಾಗಿಯೇ ಮಹಾದೇವರ ಬರೆಹ ಯಾವ ಸಿದ್ಧ ಮಾದರಿಗೂ ಸಿಗದಂತೆ, ಸಿದ್ಧಾಂತಗಳ ಭಾರಕ್ಕೆ ಬಾಗದಂತೆ ಬಹುಕಾಲ ಬಾಳುವ ಜೀವಂತ ಕೃತಿಯಾಯಿತು. ಬಡತನದೊಂದಿಗೇ ಬೆರೆತಿರುವ ಭಂಡತನವನ್ನು, ಅಸಹಾಯಕತೆಯೊಂದಿಗಿರುವ ಅರಿವನ್ನು, ಬವಣೆ ಯೊಂದಿಗಿರುವ ಬೆರಗನ್ನು ಕಂಡುಂಡ ಮಹಾದೇವರು, ಅವನ್ನೆಲ್ಲ ತಮ್ಮ ಕ್ರಿಯಾಶೀಲ ಕುಲುಮೆಯಲ್ಲಿಟ್ಟು ಕುದಿಸಿ ಕೆನೆಯನ್ನು ಕಾಗುಣಿತಕ್ಕಿಳಿಸಿದರು. ಹಾಗೆ ನೋಡಿದರೆ, ದೇವನೂರ ಮಹಾದೇವರದೇ ಒಂದು ಭಾಷೆ, ಅದರಲ್ಲೇ ಅವನ್ನೆಲ್ಲ ನುಡಿಸಬೇಕೆಂಬ ಆಸೆ. ಬಳಸುವ ಭಾಷೆಗೆ ಅವರು ಕೊಡುವ ಕಾವಿನೊಳಗೆ ಅವರ ಜಗತ್ತಿನ ಜನರ ಬದುಕಿದೆ. ಆ ಬದುಕನ್ನು ಸರ್ವ ಜನಾಂಗದ ಬದುಕನ್ನಾಗಿಸುವ ತುಡಿತ ಅವರ ಕತೆಗಳಲ್ಲಿ, ಪಾತ್ರಗಳಲ್ಲಿ ಕಾಣುತ್ತದೆ. ಇಂತಹ ದೇವನೂರ ಮಹಾದೇವ ಭೂಲೋಕದ ಸಕಲ ಸಂಕಟಗಳನ್ನು ತಮ್ಮವೆಂದೇ ಭಾವಿಸುವ, ಬಡವರ ಸಾರ್ವಕಾಲಿಕ ಪ್ರತಿನಿಧಿಯಂತೆ ಕಾಣುವ ವ್ಯಕ್ತಿ. ಸೋಮಾರಿತನದ ಜೊತೆಗೆ ಹಿಂಜರಿಕೆಯ ಸ್ವಭಾವ ದವರು. ಸಾಮಾನ್ಯರಂತೆ ಕಾಣುವ ಅಸಾಮಾನ್ಯರು. ಮಾತು ಕಡಿಮೆಯಾದರೂ ಮರ್ಮಕ್ಕೆ ತಾಕುವಂತೆ ಮಾತನಾಡುವವರು. ಇಂತಹ ಅಪರೂಪದ ದೇವನೂರ ಮಹಾದೇವರನ್ನು ಮತ್ತವರ ದ್ಯಾವನೂರನ್ನು ಅದೇಕೋ ನೋಡಬೇಕೆನಿಸಿತು. ಅವರ ಕತೆ, ಕಾದಂಬರಿಗಳ ಪಾತ್ರಗಳನ್ನು ಕಂಡು ಮುಟ್ಟಿ ಮಾತನಾಡಿಸಬೇಕೆನಿಸಿತು. ಮಹಾದೇವರ ಅಪ್ಪ ನಂಜಯ್ಯನವರು ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಪೊಲೀಸ್ ಠಾಣೆ, ಅವ್ವ ನಂಜಮ್ಮನವರಿದ್ದ ಚಿಕ್ಕವಲಂದೆಯನ್ನೆಲ್ಲ ಸುತ್ತಾಡಬೇಕೆನಿಸಿತು. ಮನಸು ಮಾದೇವನಾಗಿ, ಧ್ಯಾನ ದೇವನೂರಾಯಿತು. ಮೈಸೂರಿನಿಂದ ನಂಜನಗೂಡಿಗೆ ಹೋಗುವ ಬಸ್ ಹತ್ತಿ, ‘ದೇವನೂರಿಗೆ ಯಾವ ಬಸ್’ ಎಂದು ಕೇಳಿದರೆ, ‘ನಾನೂ ಅಲ್ಗೆ ಕನಾ, ಬನ್ನಿ’ ಅನ್ನುವುದೆ! ನೋಡಿದರೆ ‘ಮಾರಿಕೊಂಡವರು’ ಕತೆಯ ಹೀರೋ ಬೀರ, ಜೊತೆಯಲ್ಲಿ ನಗುನಗುತ್ತಾ ನಿಂತ ಗೌಡರ ಮಗ ಕಿಟ್ಟಪ್ಪ. ಲಚುಮಿ? ಪ್ರಶ್ನೆಯಾಗಿ ಕಾಡತೊಡಗಿದಳು. ಬೀರನನ್ನ ನೋಡಿದರೆ, ಕುಡಿಯುವ ತೆವಲು ಬಿಟ್ಟಂತೆ ಕಾಣುತ್ತಿಲ್ಲ. ಸಾರಾಯಿ ಕುಡಿದ ಗ್ಯಾನದಲ್ಲಿ ಏನಾದ್ರು ಕೊಲೆಗಿಲೆ ಅಂತೆಲ್ಲ ಕೆಟ್ಟ ಯೋಚನೆಗಳು ತಲೆಯೊಳಗೆ ಸುಳಿದಾಡಿದವು. ಕಿಟ್ಟಪ್ಪನ ಕಂಬಳಿ ಲಚುಮಿಯನ್ನು ಕವುಚಿಕೊಂಡದ್ದು ನೆನಪಾಗಿ, ಎಲ್ಲವೂ ಸಹಜ ಸಲೀಸು ಎನ್ನಿಸತೊಡಗಿತು. ‘ಮಾರಿಕೊಂಡವರು’ ಕತೆಯ ಗೌಡರ ಮಗ ಪಾಳೇಗಾರನಲ್ಲ, ಪೋಲಿ. ಹಾಗೆಯೇ ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಕತೆಯ ಗೌಡರು ಕೂಡ ಊರಿಗೆ ಉಪಕಾರಿ. ಊರಿಗೆ ಬರುವ ನರ್ಸಮ್ಮನಿಗೆ ತಮ್ಮ ಮನೆಯ ಜಗುಲಿಯ ಮೇಲೆಯೇ ಮನೆ ಮಾಡಿಕೊಡುತ್ತಾರೆ. ಬಾಡಿಗೆಯೇ ಬೇಡ ಎನ್ನುತ್ತಾರೆ. ಆದರೆ ಗೌಡರ ಮನೆಯಲ್ಲಿ ರಟ್ಟೆ ಮುರಿಯುವಷ್ಟು ದುಡಿಯುವ ರಂಗಪ್ಪನಿಗೆ, ನಾಲ್ಕು ಸೇರು ಜೋಳ ಕೊಟ್ಟು, ‘ಇನ್ನು ಫಸಲು ಬರಗಂಟ ಕೇಳಬೇಡ’ ಎನ್ನುತ್ತಾರೆ. ಈ ಕಥೆಯಲ್ಲಿ ಎಲ್ಲಿಯೂ ಕೊಲೆಯಾಗದಿದ್ದರೂ, ರಂಗಪ್ಪ ಮತ್ತವನ ಕುಟುಂಬ ಹಸಿವಿನಿಂದ, ಸಜ್ಜನಿಕೆಯಿಂದ ಸಾಯುತ್ತದೆ. ಲಚುಮಿಯ ಗಂಡ ಬೀರನ ಮನಸ್ಸಿನಲ್ಲಿ ನಡೆಯುವ ಕೊಲೆಯಂತೆಯೇ. ಗೌಡರ ಮಗ ಕಿಟ್ಟಪ್ಪನೊಂದಿಗೆ ಬೀರನಿರುವಂತೆಯೇ, ‘ಗ್ರಸ್ತರು’ ಕತೆಯಲ್ಲಿ ಗೌಡರ ಎದುರು ಕೆಲಸ ಬಿಟ್ಟುಬಂದ ಕಥಾನಾಯಕ ನಿಂತಿದ್ದಾನೆ. ಇವನಿಗೆ ಬಡತನವನ್ನೇ ಹೊದ್ದು ಮಲಗಿದ ಮನೆಯಿದೆ, ಮನೆಯಲ್ಲಿ ಲಕ್ವಾ ಹೊಡೆಸಿಕೊಂಡಿರುವ ತಾಯಿ ಮಲಗಿದ್ದಾಳೆ. ಕಾರಣವೇ ಇಲ್ಲದೆ ಕೈ ಕೊಟ್ಟ ಪ್ರೇಯಸಿ ಕಾಡುತ್ತಿದ್ದಾಳೆ. ಇದರ ನಡುವೆ ವಿದ್ಯಾಭ್ಯಾಸಕ್ಕೆ ಹಣ ನೀಡಿ, ಸ್ವಾಮೀಜಿಗಳಿಗೆ ಹೇಳಿ ಕೆಲಸ ಕೊಡಿಸಿದ ಮೇಲ್ಜಾತಿಯ ಗೌಡರು, ‘ಅಸ್ಲು ಬಡ್ಡಿ ತಂದೊಪ್ಪಿಸು, ಮುಂದಕ್ಕೆ ನೀನು ನಿನ್ನ ಹಾದಿ’ ಎನ್ನುತ್ತಿದ್ದಾರೆ. ಗೌಡರು ಕೆಟ್ಟವರಲ್ಲ, ಹುಡುಗ ಮಾಡಿದ್ದೂ ತಪ್ಪಲ್ಲ. ‘ಗ್ರಸ್ತರು’ ಕತೆಯ ಹುಡುಗನಂತೆಯೇ ‘ಡಾಂಬರು ಬಂದುದು’ ಕತೆಯಲ್ಲಿಯೂ ಹುಡುಗರಿದ್ದಾರೆ. ಪಟೇಲರು ಊರಿಗೆ ರಸ್ತೆ ಮಾಡಿಸಿ, ಅದರಲ್ಲಿ ಬಂದ ಲಾಭದಲ್ಲಿ ದೇವಸ್ಥಾನ ಕಟ್ಟಿಸುವುದಾಗಿ ಹೇಳುತ್ತಾರೆ. ಆದರೆ ಆಧುನಿಕ ಕಾಲದ ಲಕುಮ, ಶಂಭು, ರಾಜಪ್ಪ, ಮಾದುಗಳಿಗೆ ಪಟೇಲರು ಪಾಳೇಗಾರರ ಪ್ರತಿನಿಧಿಯಂತೆ ಕಾಣುತ್ತಾರೆ. ಪಟೇಲರ ಒಳ್ಳೆಯತನ ಹುಡುಗರಿಗೆ ತಿಳಿಯುವುದಿಲ್ಲ, ಹುಡುಗರ ಸಿಟ್ಟು ಪಟೇಲರಿಗೆ ಅರ್ಥವಾಗುವುದಿಲ್ಲ. ಅನುಮಾನದೊಂದಿಗೆ ಅವಮಾನವೂ, ಆತ್ಮಗೌರವದೊಂದಿಗೆ ಆತಂಕವೂ ಜೊತೆ ಜೊತೆಗೇ ಹೆಜ್ಜೆ ಹಾಕುವ ಪರಿ ಇದು. ಅಪ್ಪ ಅಮ್ಮರಿಲ್ಲದ ಅನಾಥ ಅಮಾಸನ ಲೋಕವೇ ಬೇರೆ. ಕುರಿಯಯ್ಯನ ಕತೆಯೇ ಬೇರೆ. ಆದರೆ ಅವರಿಬ್ಬರೂ ಒಂದೇ. ಉಂಡುಟ್ಟು ಮಲಗುವುದೂ ಒಂದೇ ಕಡೆ. ಮಾರಿಹಬ್ಬ, ಹುಲಿವೇಷ, ಕುಣಿತವು ಕೂಡ ಅವರಿಬ್ಬರ ಬದುಕಿನೊಂದಿಗೆ ಬೆರೆತುಹೋಗಿದೆ. ತಮಟೆಯ ಸದ್ದಿಗೆ ಮೈ ಮರೆತು ಕುಣಿಯುವ ಅಮಾಸ, ಗೌಡರ ಕಣ್ಣಿಗೆ ಬೀಳುತ್ತಾನೆ. ಅಮಾಸನೂ ಕುರಿಯಯ್ಯನಂತೆ ಕಾಣುತ್ತಾನೆ, ಆಗುತ್ತಾನೆ. ಮನುಷ್ಯರ ಸ್ವಾರ್ಥವೂ ಇಲ್ಲಿ ಸಹಜವಾಗಿ ಸಂಚರಿಸುತ್ತದೆ. ಇದೇ ಜಾಡಿನ ಮತ್ತೊಂದು ಕತೆ ‘ದತ್ತ’ದಲ್ಲಿ ಅಪ್ಪ ಅಮ್ಮರಿದ್ದರೂ ಅನಾಥನಂತಾದ ಆನಂದುವಿನದು. ‘ಅಮಾಸ’ ಮತ್ತು ‘ದತ್ತ’ ಕತೆಗಳು ವೈಯಕ್ತಿಕ ನೆಲೆಯಿಂದ ಸಮುದಾಯದ ನೆಲೆಗೆ ಜಿಗಿಯುವ ಪರಿ ವಿಶೇಷವಾದುದು.

‘ಒಡಲಾಳ’ದ ತುಂಬ ಹುಂಜವೇ ಓಡಾಡಿದರೂ, ಮೂರು ತಲೆಮಾರುಗಳ ಕತೆ ಹೆಣೆದುಕೊಂಡಿದ್ದರೂ, ಸಕಲವೂ ಸಾಕವ್ವನೇ. ಹಾಗೆ ನೋಡಿದರೆ, ಸಾಕವ್ವ ಎಂಬ ಹೆಸರಿನಲ್ಲೇ ಬದುಕಿನ ಬಹುದೊಡ್ಡ ರೂಪಕ ಅಡಗಿದೆ. ಧೈರ್ಯಸ್ಥೆ ಮುದುಕಿಯ ಹುಂಜ- ದೇವರಿಗೆ ಬಿಟ್ಟ ಹುಂಜ- ತಪ್ಪಿಸಿಕೊಂಡುಹೋಗಿದೆ. ಆಕೆಗದು ಸಾವುಬದುಕಿನ ಪ್ರಶ್ನೆ. ಬೇರೆಯವರಿಗೆ ಐಲಾಟ. ಅದಕ್ಕೆ ಸರಿಯಾಗಿ ಸಾಕವ್ವಳ ಮೊಮ್ಮಗಳು ಪುಟಗೌರಿ ಗೋಡೆ ಮೇಲೆ ನವಿಲಿನ ಚಿತ್ರ ಬಿಡಿಸುವುದು, ಕುಟ್ಟ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತಿದ್ಲಂತೆ ಎಂಬ ಮುದುಕಿಯ ಮೂದಲಿಕೆಯ ಮೂಲಕ ವಾಸ್ತವದ ಚಿತ್ರಣವನ್ನು ಕಣ್ಮುಂದೆ ನಿಲ್ಲಿಸುತ್ತದೆ. ಹಾಗೆಯೇ ಕಾಳಣ್ಣ ಕದ್ದುತರುವ ಕಡ್ಲೇಕಾಯನ್ನು ಇಡೀ ಕುಟುಂಬ ಬೆಂಕಿಯ ಸುತ್ತಾ ಕೂತು ತಿನ್ನುವುದು, ಅರ್ಥಪೂರ್ಣ ಪ್ರತಿಭಟನೆಯಂತೆ ಕಾಣುತ್ತದೆ. ಸಾಹುಕಾರ ಎತ್ತಪ್ಪನ ಮನೆಯ ಹಬ್ಬವನ್ನು ತಮ್ಮ ಮನೆಯ ಹಬ್ಬವೆಂಬಂತೆ ಮಾತಾಡಿಕೊಳ್ಳುವುದು, ಸಾಕವ್ವ ಮೂರನೇ ಕ್ಲಾಸಿನ ಶಿವೂಗೆ ಕತೆ ಹೇಳುವುದು, ಪೊಲೀಸ್ ರೇವಣ್ಣ ಉಚ್ಚೆ ಹುಯ್ಯುವುದನ್ನು ಕಂಡು ಹೆಂಗಸರು

ನಗುವುದು- ಹಟ್ಟಿಯ ಮುಗ್ಧಲೋಕ ನಮ್ಮ ಲೋಕವೂ ಆಗುತ್ತದೆ. ಲೇಖಕರ ಚಿತ್ತದಲ್ಲಾಡಿದ ಚಿತ್ರಗಳು ನಮ್ಮ ಚಿತ್ತಕ್ಕೂ ರವಾನೆಯಾಗುತ್ತವೆ. ಕೊನೆಗೆ ಪೊಲೀಸರು ಹುಂಜನನ್ನು ಎತ್ತಿಕೊಂಡಾಗ ಸಾಕವ್ವಳ ಮನದಲ್ಲಿ ಮತ್ತೊಂದು ಕೊಲೆಯಾಗುತ್ತದೆ. ಬೀರ, ರಂಗಪ್ಪರ ಮನಸ್ಸಿನಲ್ಲಿ ನಡೆಯುವ ಕೊಲೆ ಮತ್ತೊಮ್ಮೆ ನೆನಪಾಗುತ್ತದೆ. ಹಾಗೆಯೇ ವೈಕಂ ಮುಹಮ್ಮದ್ ಬಶೀರ್ ಅವರ ‘ಪಾತುಮ್ಮನ ಆಡು’ ಇಲ್ಲಿ ‘ಸಾಕವ್ವನ ಹುಂಜ’ವಾಗಿರುವುದು ತಲೆಯಲ್ಲಿ ತೇಲಿಹೋಗುತ್ತದೆ.

‘ಕುಸುಮಬಾಲೆ’ಯದು ನಂಜನಗೂಡಿನ ಅಸಲಿ ಆಡುಮಾತು. ಅದನ್ನು ಅರಿಯುವುದು, ಅರಗಿಸಿಕೊಳ್ಳುವುದು ಕೊಂಚ ಕಷ್ಟ. ಕಲಾವಿದ ಕೆ.ಟಿ. ಶಿವಪ್ರಸಾದರ ‘ಕನ್ನಡಕ್ಕೆ ಅನುವಾದಿಸಿದರೆ ಒಳ್ಳೆಯದು’ ಎಂಬ ಜೋಕ್, ಆ ಕಾಲದಲ್ಲಿ ಭಾರೀ ಸದ್ದು ಮತ್ತು ಸುದ್ದಿ ಮಾಡಿತ್ತು, ಇರಲಿ. ‘ಕುಸುಮಬಾಲೆ’ ಸಂಬಂಜದ ಕತೆ. ಕಥನ-ಕಾವ್ಯದ ಕೃತಿ. ಬಾಲೆಯ ಲೋಕದಲ್ಲಿ ಅಕ್ಕಮಹಾದೇವಮ್ಮ, ತೂರಮ್ಮ, ಈರಿ, ಚೆನ್ನ, ಚೆನ್ನನ ಅಪ್ಪ, ಕುಸುಮಬಾಲೆ, ಪರ್ಸಾದ, ಗಾರ್ಸಿದ್ ಮಾವರಿದ್ದಾರೆ. ಈ ಮುಗ್ಧ ಲೋಕದ ಆಚೆ ಕ್ರಾಂತಿಕಾರಿಗಳ ಗುಂಪಿದೆ. ಹಳೆಯದು, ಹೊಸದು ಎರಡೂ ಹದವಾಗಿ ಬೆರೆತಿದೆ. ನಮ್ಮಂಥ ಹುಲುಮಾನವರ ಗ್ರಹಿಕೆಗೆ ನಿಲುಕದಾದರೂ, ಅಲ್ಪಸ್ವಲ್ಪ ಅರ್ಥವಾಗುತ್ತದೆ. ಹೀಗೆ ಮಾರಿಕೊಂಡವರಿಂದ ಹಿಡಿದು ಕುಸುಮಬಾಲೆಯವರೆಗೆ, ಬೀರನಿಂದ ಗಾರ್ಸಿದ್ ಮಾವನವರೆಗಿನ ಎಲ್ಲ ಪಾತ್ರಗಳನ್ನು, ನನ್ನ ಚಿತ್ತಕ್ಕೆ ಇಳಿದ ಪರಿಯನ್ನು ನೆನೆಯುತ್ತ, ಮೈಸೂರಿನ ಬೀದಿಗಳಲ್ಲಿ ನಡೆಯುತ್ತಿದ್ದವನ ಕಿವಿಗೆ ಅಚಾನಕ್ಕಾಗಿ ‘ಸಂಬಂಜ ಅನ್ನದು ದೊಡ್ದ ಕನಾ’ ಎಂದದ್ದು ಕೇಳಿಸಿತು. ನೋಡಿದರೆ ಪೆಟ್ಟಿಗೆ ಅಂಗಡಿಯ ಬಳಿ ಬೆರಳುಗಳ ತುದಿಗೆ ಸಿಗರೇಟು ಅಂಟಿಸಿಕೊಂಡು, ಕತ್ತು ಬಗ್ಗಿಸಿಕೊಂಡು ಹೊಗೆ ಹೊರಗಾಕುತ್ತಿದ್ದ ಧರೆಗೆ ದೊಡ್ಡವರು ಕಾಣಿಸಿದರು. ಚೋಚಿಗವೆಂದರೆ, ಬಸ್ಸಿನಲ್ಲಿ ಸಿಕ್ಕ ಬೀರನೂ ಬದಲಾಗಿಲ್ಲ, ಬೀರನನ್ನು ಸೃಷ್ಟಿಸಿದವರೂ ಬದಲಾಗಿಲ್ಲ. ಬದಲಾಗಿದ್ದಾರೆಂಬ ಬಡಬಡಿಕೆ ಮಾತ್ರ ನಿಲ್ಲಲಿಲ್ಲ.

ಮಾರಿಕೊಂಡವರಿಂದ ಹಿಡಿದು ಕುಸುಮಬಾಲೆಯವರೆಗೆ, ಬೀರನಿಂದ ಗಾರ್ಸಿದ್ ಮಾವನವರೆಗಿನ ಎಲ್ಲ ಪಾತ್ರಗಳನ್ನು, ನನ್ನ ಚಿತ್ತಕ್ಕೆ ಇಳಿದ ಪರಿಯನ್ನು ನೆನೆಯುತ್ತ, ಮೈಸೂರಿನ ಬೀದಿಗಳಲ್ಲಿ ನಡೆಯುತ್ತಿದ್ದವನ ಕಿವಿಗೆ ಅಚಾನಕ್ಕಾಗಿ ‘ಸಂಬಂಜ ಅನ್ನದು ದೊಡ್ದ ಕನಾ’ ಎಂದದ್ದು ಕೇಳಿಸಿತು. ನೋಡಿದರೆ ಪೆಟ್ಟಿಗೆ ಅಂಗಡಿಯ ಬಳಿ ಬೆರಳುಗಳ ತುದಿಗೆ ಸಿಗರೇಟು ಅಂಟಿಸಿಕೊಂಡು, ಕತ್ತು ಬಗ್ಗಿಸಿಕೊಂಡು ಹೊಗೆ ಹೊರಗಾಕುತ್ತಿದ್ದ ಧರೆಗೆ ದೊಡ್ಡವರು ಕಾಣಿಸಿದರು. ಚೋಚಿಗವೆಂದರೆ, ಬಸ್ಸಿನಲ್ಲಿ ಸಿಕ್ಕ ಬೀರನೂ ಬದಲಾಗಿಲ್ಲ, ಬೀರನನ್ನು ಸೃಷ್ಟಿಸಿದವರೂ ಬದಲಾಗಿಲ್ಲ. ಬದಲಾಗಿದ್ದಾರೆಂಬ ಬಡಬಡಿಕೆ ಮಾತ್ರ ನಿಲ್ಲಲಿಲ್ಲ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News

ಗಾಂಧೀಜಿ