ಶಾಂತವೇರಿ ಗೋಪಾಲಗೌಡ ಮತ್ತು ಕನ್ನಡ ಸಂಸ್ಕೃತಿ

Update: 2018-12-09 04:56 GMT

ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂಎ ಪದವಿ ಪಡೆದಿರುವ ನಟರಾಜ್ ಹುಳಿಯಾರ್, ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಎಂಬ ವಿಷಯದ ಕುರಿತು ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಮತ್ತೊಬ್ಬ ಸರ್ವಾಧಿಕಾರಿ’, ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಎಂಬ ಕಥಾಸಂಕಲನಗಳನ್ನು; ‘ರೂಪಕಗಳ ಸಾವು’ ಎಂಬ ಕವಿತೆಗಳು; ‘ಶೇಕ್ಸ್ಪಿಯರ್ ಮನೆಗೆ ಬಂದ’ ಎಂಬ ನಾಟಕ; ‘ಗಾಳಿಬೆಳಕು’ ಎಂಬ ಲೇಖನಗಳ ಸಂಗ್ರಹ; ಇಂತಿ ನಮಸ್ಕಾರಗಳು-ಲಂಕೇಶ್ ಮತ್ತು ಡಿಆರ್ ನಾಗರಾಜ್ ಸೃಜನಶೀಲ ಕಥಾನಕ; ತೆರೆದ ಪಠ್ಯ, ಹಸಿರು ಸೇನಾನಿ, ಟೀಕೆಟಿಪ್ಪಣಿ ಭಾಗ-1 ಮತ್ತು 2, ಶೇಕ್ಸ್ಪಿಯರ್ ಸ್ಪಂದನ ಎಂಬ ಸಂಪಾದಿತ ಕೃತಿಗಳು; ಡಾ.ರಾಮಮನೋಹರ ಲೋಹಿಯಾ ಕೃತಿಗಳ ಕನ್ನಡಾನುವಾದಗಳ ಸಂಪಾ ದಿತ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ನಟರಾಜ್ ಹುಳಿಯಾರ್

ಐವತ್ತು-ಅರವತ್ತರ ದಶಕಗಳಲ್ಲಿ ಕರ್ನಾಟಕದ ಅನನ್ಯ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಈ ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಗಳ ಜೊತೆಗೆ ಇರಿಸಿಕೊಂಡಿದ್ದ ಅಪೂರ್ವ ಸಂಬಂಧ ಕುರಿತ ಸಾಂಸ್ಕೃತಿಕ ಬರಹ...

ಅರವತ್ತರ ದಶಕದಲ್ಲಿ ಒಮ್ಮೆ ಸಮಾಜವಾದಿ ನಾಯಕ ಡಾ. ರಾಮಮನೋಹರ ಲೋಹಿಯಾ ಸಾಗರಕ್ಕೆ ಬಂದರು. ಅಷ್ಟೊತ್ತಿಗಾಗಲೇ ಸಮಾಜವಾದಿ ಪಕ್ಷದ ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರ ಜೊತೆ ಕವಿ ಚಂದ್ರಶೇಖರ ಕಂಬಾರರು ಲೋಹಿಯಾ ಅವರನ್ನು ಭೇಟಿ ಮಾಡಲು ಹೋದರು. ಸಾಗರದಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕಂಬಾರರು ಅದೇ ಆಗ ತಮ್ಮ ‘ಹೇಳತೇನ ಕೇಳ’ ಎಂಬ ಖಂಡಕಾವ್ಯ ಬರೆದಿದ್ದರು. ಆ ಪದ್ಯವನ್ನು ಲೋಹಿಯಾರ ಎದುರು ಓದುವಂತೆ ಗೌಡರು ಕಂಬಾರರಿಗೆ ಹೇಳಿದರು. ಕಂಬಾರರು ತಮ್ಮ ‘ಹೇಳತೇನ ಕೇಳ’ ಖಂಡಕಾವ್ಯವನ್ನು ಓದುತ್ತಾ, ಹಾಡುತ್ತಾ ಮಂಡಿಸುತ್ತಿದ್ದಾಗ, ಈ ಪದ್ಯ ವಸಾಹತುಶಾಹಿಯ ಆಗಮನದ ಸಂದರ್ಭವನ್ನು, ವಸಾಹತುಶಾಹಿಯ ಪರಿಣಾಮಗಳನ್ನು ಕುರಿತು ಹೇಳುತ್ತಿದೆ ಎಂದು ಗೋಪಾಲಗೌಡು ಲೋಹಿಯಾಗೆ ವಿವರಿಸತೊಡಗಿದರು.

ಕೆಲವು ವರ್ಷಗಳ ಕೆಳಗೆ ಆ ಪ್ರಸಂಗವನ್ನು ನೆನಪಿಸಿಕೊಂಡ ಕಂಬಾರರು ಹೇಳಿದರು: ‘ವಸಾಹತುಶಾಹಿ ಎನ್ನುವ ಶಬ್ದ ಮೊದಲು ನನ್ನ ಕಿವಿಗೆ ಬಿದ್ದಿದ್ದು ಆಗ. ಆ ತನಕ ನನ್ನ ಪದ್ಯ ವಸಾಹತುಶಾಹಿಯನ್ನು ಟೀಕಿಸುತ್ತದೆ ಎಂಬುದು ನನಗೇ ಗೊತ್ತಿರಲಿಲ್ಲ!’ ಗೋಪಾಲಗೌಡರ ರಾಜಕೀಯ ದೃಷ್ಟಿಕೋನ ಕಂಬಾರರ ಮಹತ್ವದ ಖಂಡಕಾವ್ಯವೊಂದಕ್ಕೆ ರಾಜಕೀಯ ಅರ್ಥಗಳನ್ನು ಕೊಡುವುದರ ಜೊತೆಗೆ ಕವಿಗೂ ಹೊಸ ರಾಜಕೀಯ ಪ್ರಜ್ಞೆ ಮೂಡಿಸಿದ ಅರ್ಥಪೂರ್ಣ ಸಂದರ್ಭ ಇದು.

ಅದು ಗೋಪಾಲಗೌಡರು ಕನ್ನಡ ಕಾವ್ಯವನ್ನು ಬಳಸಿ ಸಮಕಾಲೀನ ರಾಜಕೀಯವನ್ನು ವಿಶ್ಲೇಷಿಸಲು ಯತ್ನಿಸುತ್ತಿದ್ದ ಕಾಲವೂ ಆಗಿತ್ತು. ಆ ಕಾಲದಲ್ಲಿ ನವ್ಯ ಲೇಖಕರು ಗೌಡರ ರಾಜಕೀಯ ಕ್ರಿಯಾಶೀಲತೆ ಹಾಗೂ ಹರಿತವಾದ ಚಿಂತನೆಗಳಿಂದ ಪ್ರೇರಣೆ ಪಡೆದಂತೆ ಕಾಣುತ್ತದೆ. ಆರಂಭದಲ್ಲಿ ವ್ಯಕ್ತಿಪರೀಕ್ಷೆಗೆ ಒತ್ತು ಕೊಟ್ಟಿದ್ದ ನವ್ಯ ಸಾಹಿತಿಗಳ ಬರವಣಿಗೆಯ ಚೌಕಟ್ಟು ಹಾಗೂ ವ್ಯಾಪ್ತಿ ಗೋಪಾಲಗೌಡರ ಸಖ್ಯ ಹಾಗೂ ಲೋಹಿಯಾ ಅವರ ಚಿಂತನೆಗಳಿಂದಲೂ ಬದಲಾಗಿರುವ ಸಾಧ್ಯತೆಗಳಿವೆ. ಸಮಾಜವಾದಿ ಯುವಜನ ಸಭಾ, ಶೂದ್ರ ಬರಹಗಾರರ ಒಕ್ಕೂಟ ಮೊದಲಾದ ವೇದಿಕೆಗಳು ಮುಂದೆ ಸಮಾಜ, ಸಂಸ್ಕೃತಿಗಳ ವಿಶ್ಲೇಷಣೆಯಲ್ಲಿ ಬಳಸಿದ ರಾಜಕೀಯ ಆಯಾಮಗಳ ಹಿನ್ನೆಲೆಯಲ್ಲಿ ಗೋಪಾಲಗೌಡರ ಸಮಾಜವಾದಿ ರಾಜಕಾರಣ, ಹೋರಾಟ ಹಾಗೂ ಚಿಂತನೆಗಳ ಪ್ರೇರಣೆಗಳೂ ಇವೆ. ಶಿವಮೊಗ್ಗ ಜಿಲ್ಲೆಯಿಂದಲೇ ಬಂದಿದ್ದ ಪಿ. ಲಂಕೇಶರಿಗೆ ಗೋಪಾಲಗೌಡರ ಬಗ್ಗೆ ಅಪಾರ ಮೆಚ್ಚುಗೆಯಿತ್ತು. ಅರವತ್ತು,ಎಪ್ಪತ್ತರ ದಶಕದ ನಡುವೆ ನವ್ಯ ಲೇಖಕರಾಗಿ ತಮ್ಮ ಬರಹಗಳಲ್ಲಿ ವ್ಯಕ್ತಿಯ ತೀವ್ರಪರೀಕ್ಷೆಯಲ್ಲಿ ತೊಡಗಿದ್ದ ಲಂಕೇಶರ ಪ್ರಜ್ಞೆ ಗೋಪಾಲಗೌಡರಿಂದ, ಸಮಾಜವಾದಿ ಪಕ್ಷದ ಇನ್ನಿತರರಿಂದ ಹಾಗೂ ಅವರೆಲ್ಲ ಭಾಗಿಯಾದ ಸಮಾಜವಾದಿ ಸಂಜೆಗಳಿಂದ ನಿಧಾನವಾಗಿ ಸೂಕ್ಷ್ಮವಾದ ಸಮುದಾಯ ಪ್ರಜ್ಞೆಯಾಗಿ ಬದಲಾಗಿರಬಹುದು ಎಂಬ ಸೂಚನೆಗಳು ಲಂಕೇಶರ ಆತ್ಮಥನ ‘ಹುಳಿ ಮಾವಿನಮರ’ದಲ್ಲಿವೆ:

‘ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು. ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಭಿವ್ಯಕ್ತಿ ಪಡೆದು, ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗು ತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು, ರೈತರು, ಕಾರ್ಮಿಕರು- ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿ ಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗನ್ನಿಸುತ್ತದೆ’.

ಹೀಗೆ ಗೋಪಾಲಗೌಡರಿಂದ ಹಲಬಗೆಯ ಸಾಮಾಜಿಕ-ರಾಜಕೀಯ ಪ್ರಜ್ಞೆಗಳನ್ನು ಪಡೆದ ಕನ್ನಡ ಲೇಖಕರಿದ್ದಾರೆ. ಸ್ವತಃ ಗೋಪಾಲಗೌಡರೇ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಯ ವಿಭಿನ್ನ ಘಟ್ಟಗಳಾದ ನವೋದಯ, ಪ್ರಗತಿಶೀಲ, ನವ್ಯ- ಈ ಮೂರೂ ಘಟ್ಟಗಳ ಅವಧಿಯಲ್ಲಿ ರೂಪುಗೊಂಡಿದ್ದ ಸಮಾಜವಾದಿ ರಾಜಕಾರಣಿಯಾಗಿದ್ದರು. ಗೋಪಾಲಗೌಡರು ತೀರಿಕೊಂಡ ನಂತರ ಕನ್ನಡ ಸಾಹಿತ್ಯದಲ್ಲಿ ವಿಕಾಸಗೊಂಡ ದಲಿತ, ಬಂಡಾಯ ಘಟ್ಟಗಳ ಲೇಖಕರಿಗೂ ಗೋಪಾಲಗೌಡರ ಬಗ್ಗೆ ಅಪಾರ ಗೌರವವಿತ್ತು. ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಘಟ್ಟಗಳ ಲೇಖಕರೂ ಒಂದಲ್ಲ ಒಂದು ಘಟ್ಟದಲ್ಲಿ ಗೋಪಾಲಗೌಡರನ್ನು ನೆನೆದಿದ್ದಾರೆ. ನವೋದಯ ಘಟ್ಟದ ಕುವೆಂಪು, ಶಿವರಾಮ ಕಾರಂತ, ಪುತಿನ; ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್; ಪ್ರಗತಿಶೀಲ ಸಾಹಿತಿಗಳಾದ ಬಸವರಾಜ ಕಟ್ಟೀಮನಿ, ಅ.ನ.ಕೃ., ತ.ರಾ.ಸು., ಬೀಚಿ; ನವ್ಯ ಘಟ್ಟದ ಯು.ಆರ್.ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ವೀಚಿ, ಸಿದ್ಧಲಿಂಗ ಪಟ್ಟಣಶೆಟ್ಟಿ; ಬಂಡಾಯ ಲೇಖಕರಾದ ಚಂದ್ರಶೇಖರ ಪಾಟೀಲ, ಕಾಳೇಗೌಡ ನಾಗವಾರ, ಬೆಸಗರಹಳ್ಳಿ ರಾಮಣ್ಣ; ನಂತರದ ನಾ. ಡಿಸೋಜ, ಕಿ.ರಂ.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್ ಮುಂತಾಗಿ ಹಲವು ಘಟ್ಟಗಳ, ಹಲವು ಮಾರ್ಗಗಳ ಲೇಖಕರು ಅಭಿಮಾನ, ಮೆಚ್ಚುಗೆ, ಆರಾಧನೆಗಳಿಂದ ಗೋಪಾಲಗೌಡರನ್ನು ನೆನೆದಿದ್ದಾರೆ. ಹೀಗೆ ಕನ್ನಡ ಸಾಹಿತ್ಯದ ಹಲವು ಘಟ್ಟಗಳ ಅಭಿಮಾನಕ್ಕೆ ಪಾತ್ರರಾಗಿರುವ ಕರ್ನಾಟಕದ ಏಕಮಾತ್ರ ರಾಜಕಾರಣಿಯೆಂದರೆ ಶಾಂತವೇರಿ ಗೋಪಾಲಗೌಡರೇ ಇರಬೇಕು. ಕನ್ನಡ ಸಾಹಿತ್ಯದ ನಾಲ್ಕು ಘಟ್ಟಗಳ ಲೇಖಕರು ಗೋಪಾಲಗೌಡರನ್ನು ಕುರಿತು ಹೆಚ್ಚುಕಡಿಮೆ ಒಂದೇ ಬಗೆಯ ಮೆಚ್ಚುಗೆಯ ಧ್ವನಿಯಲ್ಲಿ ಬರೆದಿರುವುದು ಕೂಡ ಗೋಪಾಲಗೌಡರು ಕನ್ನಡನಾಡಿನ ರಾಜಕೀಯದಲ್ಲಿ ರೂಪಿಸಿಕೊಂಡಿದ್ದ ಅನನ್ಯ ನಾಯಕತ್ವದ ಮಾದರಿಯನ್ನು ಒತ್ತಿ ಹೇಳಿದಂತಿದೆ. ಹಾಗೆಯೇ, ಕರ್ನಾಟಕದ ದಲಿತ ಚಳವಳಿಯ ಸ್ಫೂರ್ತಿಮೂಲಗಳಲ್ಲೊಬ್ಬರಾದ ಬಿ. ಬಸವಲಿಂಗಪ್ಪನವರು ಕೂಡ ಗೋಪಾಲಗೌಡರ ನಿಲುವುಗಳನ್ನು ಒಪ್ಪಿ, ಬೆಂಬಲಿಸಿದ್ದ ಒಡನಾಡಿಯಾಗಿದ್ದರು.

................................. 2 ................................

ಗೋಪಾಲಗೌಡರು ತಮ್ಮ ತಾರುಣ್ಯದಲ್ಲಿ, ತೀರ್ಥಹಳ್ಳಿ ತಾಲೂಕಿನ ಆರಗದ ಮನೆಯಲ್ಲಿ ಬೆಳಗಿನ ಹೊತ್ತು ರಾಗವಾಗಿ ಕಾವ್ಯವಾಚನ ಮಾಡುತ್ತಿದ್ದಾಗ, ಅತ್ತಿತ್ತ ಹೋಗುವ ರೈತರು ಬಂದು ಅಲ್ಲಿ ಕೂತು ಈ ವಾಚನವನ್ನು ಕೇಳಿಸಿಕೊಂಡು ಹೋಗುತ್ತಿದ್ದರು. ಬಸವಣ್ಣನವರ ವಚನಗಳು, ಭಗವದ್ಗೀತೆ, ಉಪನಿಷತ್ತುಗಳನ್ನು ಕೂಡ ಗೌಡರು ಓದಿಕೊಂಡಿದ್ದರು. ಗೌಡರ ಹತ್ತಿರದ ಮಿತ್ರರಾಗಿದ್ದ ಗಾಯಕ ಪಿ. ಕಾಳಿಂಗರಾವ್ ಹೇಳುವಂತೆ ಗೋಪಾಲಗೌಡ ‘ಪಂಪ ರನ್ನರಂಥವರ ಕಾವ್ಯಗಳನ್ನು ಚೆನ್ನಾಗಿ ಅರಗಿಸಿಕೊಂಡಿದ್ದ. ರನ್ನ ಕವಿಯ ಬಗ್ಗೆ ಆತನಿಗೆ ಅಪಾರ ಹೆಮ್ಮೆ’. ಇದೆಲ್ಲದರ ಜೊತೆಗೆ, ಹಾಡಿಗೆ ಒಗ್ಗುವ ಕನ್ನಡದ ಕವಿತೆಗಳ ಕಡೆಗೆ ಗೌಡರ ಮನಸ್ಸು ಒಲಿಯತೊಡಗಿದಂತೆ, ಸಾಹಿತ್ಯ ಗೌಡರ ಸಹಜ ಸಂಗಾತಿಯಾಗತೊಡಗಿತು. ‘ಕುವೆಂಪು, ಬೇಂದ್ರೆ ಕವನಗಳ ಭಾವಪೂರ್ಣ ಹಾಡುಗಾರಿಕೆ ಮಾಡಬಲ್ಲವರಾಗಿದ್ದ ಗೌಡರಿಗೆ ಯಕ್ಷಗಾನದ ಅಭಿರುಚಿ’ಯೂ ಇತ್ತು. ‘ಬಿಸಿಲು, ಕಾಲಿಟ್ಟರೆ ಹಾರುತ್ತಿದ್ದ ನುಣ್ಣನೆಯ ಮಣ್ಣು, ಬೆವರು ಇಳಿಯುತ್ತಾ ಸಾಗುವಾಗ ಗೌಡರಿಗೆ ಸಾಹಿತ್ಯಸ್ಫೂರ್ತಿ ಬರುತ್ತಿತ್ತು’ ಎನ್ನುವ ಸಮಾಜವಾದಿ ಎಸ್.ಎಸ್.ಕುಮಟಾ, ಕಾಡಿನ ನಡುವೆ ಎತ್ತರದ ದನಿಯಲ್ಲಿ ಗೌಡರು ಡಿ.ವಿ.ಜಿ.ಯವರ ‘ವನಸುಮ’ ಪದ್ಯದ ‘ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ’ ಸಾಲುಗಳನ್ನು ಹಾಡಿದ್ದನ್ನು, ಬೇಂದ್ರೆಯವರ ‘ಭಾವಗೀತ’ ಪದ್ಯದ ‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ’ ಮೊದಲಾದ ಸಾಲುಗಳನ್ನು ಹಾಡಿದ್ದನ್ನು ಕುರಿತು ಒಂದೆಡೆ ಬರೆಯುತ್ತಾರೆ. ಕಾಗೋಡು ಸತ್ಯಾಗ್ರಹದ ನಂತರ ಪೊಲೀಸರ ಕಣ್ಣು ತಪ್ಪಿಸಿಕೊಂಡು ಯಾರದೋ ಮನೆಯಲ್ಲಿ ತಂಗಿದ್ದ ಗೋಪಾಲಗೌಡರು ತಾವು ಪೊಲೀಸರಿಗೆ ಸಿಕ್ಕಿಬಿದ್ದ ದಿನದ ಬೆಳಗಿನ ಗಳಿಗೆಗಳನ್ನು ಕುರಿತು ಆನಂತರದ ದಿನಗಳಲ್ಲಿ ಬರೆದಿದ್ದಾರೆ: ‘‘ಬೇಂದ್ರೆಯವರ ‘ಬೆಳಗು’ ಪದ್ಯದ ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾ ಹೊಯ್ದಿ’ ರಾಗ ಎಳೆಯುತ್ತಾ, ಪ್ರಕೃತಿಯೊಂದಿಗೆ ಬೆರೆತು ಕೆಲ ಹೊತ್ತು ಕಳೆದು, ಸಾಗರಕ್ಕೆ ಕಳಿಸಬೇಕಾಗಿದ್ದ ದಿನದ ಟಪ್ಪಾಲನ್ನು ಸಿದ್ಧಪಡಿಸತೊಡಗಿದ್ದೆ. ಕವಿದಿದ್ದ ಮೋಡಗಳನ್ನು ಸೀಳಿ ಎಳೆ ಬಿಸಿಲು ನನ್ನನ್ನು ನೆಕ್ಕತೊಡಗಿತ್ತು’’.

ಗೋಪಾಲಗೌಡರು ಆಧುನಿಕಪೂರ್ವ ಕನ್ನಡ ಸಾಹಿತ್ಯ ಕೃತಿಗಳಾದ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯಗಳನ್ನು ರೈತರಿಗೆ ಹೇಳುತ್ತಿದ್ದ ರೀತಿಯಲ್ಲೇ, ತಾವು ಓದಿಕೊಂಡಿದ್ದ ಮಾರ್ಕ್ಸ್, ರಸೆಲ್, ಗಾಂಧಿ, ಲೋಹಿಯಾ ಮುಂತಾದವರನ್ನು ಕೂಡ ಹಳ್ಳಿಗರಿಗೆ, ರೈತರಿಗೆ ಸರಳವಾಗಿ ವಿವರಿಸಬಲ್ಲವರಾಗಿದ್ದರು. ಆಧುನಿಕ ಪದ್ಯಗಳನ್ನೂ ಹೊಸ ರೀತಿಯಲ್ಲಿ ವ್ಯಾಖ್ಯಾನಿಸಬಲ್ಲವರಾಗಿದ್ದರು. ಗೋಪಾಲಕೃಷ್ಣ ಅಡಿಗರ ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಪದ್ಯ ನೆಹರೂ ವ್ಯಕ್ತಿತ್ವವನ್ನು ಹಾಗೂ ನೆಹರೂ ರಾಜಕಾರಣವನ್ನು ತೀಕ್ಷ್ಣವಾಗಿ ವಿಮರ್ಶಿಸುತ್ತದೆ. ಅಷ್ಟೊತ್ತಿಗಾಗಲೇ, ಗೋಪಾಲ ಗೌಡರ ನೆಚ್ಚಿನ ನಾಯಕರಾಗಿದ್ದ ಲೋಹಿಯಾ ಅವರು ನೆಹರೂ ರಾಜಕಾರಣದ ಕಟು ವಿಮರ್ಶಕರಾಗಿದ್ದರು. ನೆಹರೂ ರಾಜಕಾರಣ ಕುರಿತ ಅಡಿಗರ ಪದ್ಯವನ್ನು ಗೋಪಾಲಗೌಡರ ಬಾಯಲ್ಲಿ ಹತ್ತಾರು ಸಲ ಕೇಳಿದ್ದನ್ನು ಕಾದಂಬರಿಕಾರ ತ.ರಾ.ಸು. ನೆನಸಿಕೊಳ್ಳುತ್ತಾರೆ. ಅಂದರೆ, ಗೋಪಾಲಗೌಡರ ಒಡನಾಟ ಕೂಡ ಕವಿ ಅಡಿಗರನ್ನು ಈ ಬಗೆಯ ಸೂಕ್ಷ್ಮ ರಾಜಕೀಯ ಚಿಂತನೆಯ ಕಡೆ ಒಯ್ದಿರಬಹುದೆಂದು ಅನ್ನಿಸುತ್ತದೆ.

ಈ ಬಗೆಯ ವಿವರಗಳನ್ನು ನೋಡುತ್ತಿದ್ದರೆ, ವಿಧಾನಸಭೆಯಲ್ಲಿ ಗೋಪಾಲಗೌಡರು ಕನ್ನಡ ಭಾಷೆಯನ್ನು ಬಳಸುತ್ತಿದ್ದ ವಿಶಿಷ್ಟ ರೀತಿಗೆ ಅವರು ಬಗೆಬಗೆಯ ಉತ್ತಮ ಸಾಹಿತ್ಯ ಕೃತಿಗಳನ್ನು ಓದುತ್ತಿದ್ದುದೂ ಒಂದು ಮುಖ್ಯ ಕಾರಣವಾಗಿತ್ತು ಎಂಬುದು ಹೊಳೆಯುತ್ತದೆ. ಆಗ ವಿಧಾನಸಭೆಯಲ್ಲಿ ಶೀಘ್ರ ಲಿಪಿಕಾರರಾಗಿದ್ದ ಕವಿ ಪು.ತಿ.ನ. ಗೋಪಾಲಗೌಡರು 1957ರ ಚುನಾವಣೆಯಲ್ಲಿ ಸೋತಾಗ ಗೌಡರಿಗೆ ಒಂದು ಪತ್ರ ಬರೆದಿದ್ದರು. ಈ ಪತ್ರ ಓದಿದ ಗೌಡರು ಕಣ್ಣಲ್ಲಿ ನೀರು ತುಂಬಿಕೊಂಡು ಆ ಪತ್ರವನ್ನು ಕೋಣಂದೂರು ಲಿಂಗಪ್ಪನವರಿಗೆ ಓದಲು ಕೊಟ್ಟರು: ‘ನಿಮ್ಮಂಥ ಸ್ವಚ್ಛ ಹೃದಯದ, ವಿಶಾಲ ಮನಸ್ಸಿನ, ಅಷ್ಟೇ ಅಚ್ಚಗನ್ನಡದಲ್ಲಿ ಮನೋಹರವಾಗಿ ವೈಚಾರಿಕ ಭಾಷಣ ಮಾಡುವ ಇನೊಬ್ಬರನ್ನು ನಾನು ಈವರೆಗೆ ಕಂಡಿಲ್ಲ. ಕೇಳಿಲ್ಲ. ನೀವು ಮತ್ತೊಮ್ಮೆ ಶಾಸಕರಾಗಿ ಬರಬೇಕೆಂದು ನನ್ನ ಬಯಕೆ’. ಆ ಪತ್ರದಲ್ಲಿದ್ದ ಈ ಮಾತುಗಳ ಕೆಳಗೆ ಪಿ.ಟಿ. ನರಸಿಂಹಾಚಾರ್ ಎಂಬ ಸಹಿ ಇತ್ತು.

ಈ ಚುನಾವಣೆಯ ಸೋಲಿನ ನಂತರ ಗೋಪಾಲ ಗೌಡರು ಮತ್ತೆ ಎರಡು ಅವಧಿಗೆ ವಿಧಾನಸಭೆಯ ಶಾಸಕರಾದರು. ಕನ್ನಡ ಸಾಹಿತ್ಯದ ಓದಿನಿಂದ ಸಂಪನ್ನವಾದ ಹಾಗೂ ತಮ್ಮ ಆಲೋಚನೆಯನ್ನು ಮಂಡಿಸಲು ತಕ್ಕ ಸ್ಪಷ್ಟ ಕನ್ನಡವನ್ನು ರೂಪಿಸಿಕೊಂಡು, ತಮ್ಮ ವಾದಗಳಿಗೆ ಮೊನಚು ತರಲು ಅಲ್ಲಲ್ಲಿ ಕನ್ನಡ ಕಾವ್ಯವನ್ನೂ ಉಲ್ಲೇಖಿಸುತ್ತಿದ್ದ ಗೋಪಾಲಗೌಡರು ಬಳಸುತ್ತಿದ್ದ ಕನ್ನಡ ಭಾಷೆ ಕನ್ನಡದ ದೊಡ್ಡ ಕವಿಗಳಲ್ಲೊಬ್ಬರಾದ ಪು.ತಿ.ನ. ಅವರಿಂದ ಇಂಥ ಪ್ರೀತಿಯ ಮೆಚ್ಚುಗೆ ಗಳಿಸಿದ್ದು ಅಚ್ಚರಿಯಲ್ಲ. ಗೋಪಾಲಗೌಡರು ವಿಧಾನಸೌಧದಲ್ಲಿ ಕುಮಾರವ್ಯಾಸನ ಕಾವ್ಯಭಾಗವನ್ನು ಕೂಡ ಉಲ್ಲೇಖಿಸಬಲ್ಲವರಾಗಿದ್ದರು:

ಅರಸು ರಾಕ್ಷಸ ಮಂತ್ರಿಯೆಂಬುವ

ಮೊರೆವ ಹುಲಿ ಪರಿವಾರ ಹದ್ದಿನ

ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು

ಉರಿವುರಿವುತಿದೆ ದೇಶನಾವಿ

ನ್ನಿರಲು ಬಾರದೆನುತ ಜನ ಬೇ

ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ

ಈ ಬಗೆಯ ಕಾವ್ಯಭಾಗಗಳನ್ನು ಉಲ್ಲೇಖಿಸಿ ಸಮಕಾಲೀನ ರಾಜಕಾರಣಿಗಳನ್ನು ಟೀಕಿಸಬಲ್ಲವರಾಗಿದ್ದ ಗೌಡರು ತಮ್ಮ ವಾದಕ್ಕೆ ಪುಷ್ಟಿ ಕೊಡಬಲ್ಲ ಕ್ಷಿಪ್ರ ಆಶುಕವಿತೆಗಳನ್ನು ಕೂಡ ಸದನದಲ್ಲಿ ಪ್ರಯೋಗಿಸಬಲ್ಲವರಾಗಿದ್ದರು.

ಗೋಪಾಲಗೌಡರ ಸಾಹಿತ್ಯ ಗ್ರಹಿಕೆಯಲ್ಲಿ ಹಾಗೂ ಅವರು ಸಾಹಿತ್ಯ ಕೃತಿಗಳಿಂದ ಆಯ್ದ ಚಿಂತನೆಗಳು, ರೂಪಕಗಳನ್ನು ಬಳಸುತ್ತಿದ್ದ ರೀತಿಯಲ್ಲಿ ವಿಶಿಷ್ಟವಾದ ಸದ್ಯತನ ಹಾಗೂ ರಾಜಕೀಯ ಆಯಾಮಗಳಿದ್ದವು. ಅವರು ಕನ್ನಡ ಸಾಹಿತ್ಯದ ಒಳನೋಟಗಳನ್ನು ವಿಶಾಲ ಜನಸಮುದಾಯದ ಅನುಭವದ ಜೊತೆ ಬೆಸೆಯುವ ರೀತಿಯಲ್ಲಿ ಚರ್ಚಿಸುತ್ತಿದ್ದರು. ಚುನಾವಣಾ ಸಭೆಗಳಲ್ಲಿ ಹಾಗೂ ರಾಜಕೀಯ ಸಭೆಗಳಲ್ಲಿ ಸಾಹಿತ್ಯಪಠ್ಯಗಳನ್ನು ತೀರಾ ಸಹಜವಾಗಿ ಬಳಸಬಲ್ಲವರಾಗಿದ್ದರು. ಸಾಹಿತಿಗಳ ಜೊತೆಗಿನ ಚರ್ಚೆಯಲ್ಲಿ ವಿಶಾಲ ರಾಜಕೀಯ ದೃಷ್ಟಿಕೋನದಿಂದ ಸಾಹಿತ್ಯ ಕೃತಿಗಳನ್ನು ವಿವರಿಸಬಲ್ಲವರಾಗಿದ್ದರು. ಗೋಪಾಲಗೌಡರ ಭಾಷಣಗಳು ವೈಚಾರಿಕವೂ, ಜೀವಂತವೂ ಆಗಿರುತ್ತಿದ್ದವು; ಜನರ ಜೊತೆಗಿನ ನಿತ್ಯದ ಮಾತುಕತೆಗಳಂತೆಯೂ ಇರುತ್ತಿದ್ದವು. ಜವಳಿ ನಾಗೇಂದ್ರನಾಥ್ ನೆನಸಿಕೊಳ್ಳುವಂತೆ, ಗೋಪಾಲಗೌಡರ ಭಾಷಣ ‘ಅಂದರೆ ಅದೊಂದು ಯಕ್ಷಗಾನದ ಹಾಗೆ: ವ್ಯಂಗ್ಯ, ತಮಾಷೆ, ಸಾಹಿತ್ಯ, ಕಲೆ, ರಾಜಕಾರಣ ಎಲ್ಲವೂ ಇರುತ್ತಿತ್ತು.’ ಗೋಪಾಲಗೌಡರ ‘ಭಾಷಣದ ವೈಖರಿಯೆಂದರೆ, ಮೊದಲು ಕೆಲವು ನಿಮಿಷ ನಿಧಾನಗತಿ; ಅವರು ಶಬ್ದಗಳನ್ನು ತೂಗಿ ತೂಗಿ ಬಳಸುತ್ತಿದ್ದರು’ ಎನ್ನುವ ಸಮಾಜವಾದಿ ಪಕ್ಷದ ಕಾರ್ಯಕರ್ತ ಉಳ್ಳೂರು ಸುಬ್ಬರಾವ್ ಒಂದು ಚುನಾವಣೆಯ ಸಂದರ್ಭದಲ್ಲಿ, ‘ಕನ್ನಡದ ಆದಿ ಕವಿ ಪಂಪನ ಬನವಾಸಿಯ ವರ್ಣನೆಯಿಂದ ಗೌಡರ ಭಾಷಣದ ಪ್ರಾರಂಭ’ವಾದುದನ್ನು ನೆನೆಯುತ್ತಾರೆ. ಚುನಾವಣೆಯ ಭಾಷಣಗಳಲ್ಲಿ ನಿತ್ಯದ ಸೀಮೆಎಣ್ಣೆಯ ಸಮಸ್ಯೆಗೂ ಜಗತ್ತಿನ ರಾಜಕಾರಣದ ಒಳಸುಳಿಗಳಿಗೂ ಇರುವ ಸಂಬಂಧವನ್ನು ಕುರಿತು ಜನರಿಗೆ ಹೇಳುತ್ತಿದ್ದ ಗೋಪಾಲಗೌಡರು, ಜಗತ್ತಿನ ಅನೇಕ ವಿಷಯಗಳನ್ನು ಸಾಮಾನ್ಯ ಜನಕ್ಕೆ ಮುಟ್ಟಿಸುತ್ತಿದ್ದ ರೀತಿ ಕುರಿತು ಕಿ.ರಂ. ನಾಗರಾಜ್ ಆಗಾಗ ಹೇಳುತ್ತಿದ್ದರು.

ಗೋಪಾಲಗೌಡರು ಕುವೆಂಪು ಅವರ ‘ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಸಾಲುಗಳನ್ನು, ನಿಸಾರರ ‘ಕುರಿಗಳು ಸಾರ್ ಕುರಿಗಳು’ ಪದ್ಯದ ಸಾಲುಗಳನ್ನು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ, ರಾಜಕೀಯ ಸಭೆಗಳಲ್ಲಿ ಬಳಸುತ್ತಿದ್ದರು. ಹೀಗೆ ರಾಜಕೀಯ ಸಭೆಗಳಲ್ಲಿ ಚುರುಕಾಗಿ ಕವನಗಳನ್ನು ಬಳಸುವ ಕ್ರಮ ಗೋಪಾಲಗೌಡರ ಶಿಷ್ಯ ಕೋಣಂದೂರು ಲಿಂಗಪ್ಪನವರಲ್ಲೂ ಮುಂದುವರಿಯಿತು. ಮುಂದೊಮ್ಮೆ ಕೋಣಂದೂರು ಲಿಂಗಪ್ಪ ಚುನಾವಣಾ ಸಭೆಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಎದುರಾಳಿಯನ್ನು ಟೀಕಿಸಲು ಕುವೆಂಪು ಅವರ ‘ಕೋಗಿಲೆ ಮತ್ತು ಸೋವಿಯಟ್ ರಶ್ಯಾ’ ಪದ್ಯವನ್ನು ಮತದಾರರಿಗೆ ವಿವರಿಸಿ ಹೇಳುತ್ತಿದ್ದರು; ಆ ಮೂಲಕ, ಕಮ್ಯುನಿಸ್ಟ್ ವ್ಯವಸ್ಥೆ ಮುಕ್ತ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಯಾಗುತ್ತದೆ ಎಂಬ ಈ ಪದ್ಯದ ತಾತ್ಪರ್ಯವನ್ನು ಹೇಳುತ್ತಾ, ಕಮ್ಯುನಿಸ್ಟ್ ಪಕ್ಷದ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದರು.

‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ’ ಎಂದು ಆರಂಭವಾಗುವ ಕುವೆಂಪು ಅವರ ‘ಸೋಮನಾಥಪುರದ ದೇವಾಲಯ’ ಕವನವನ್ನು ಆಗಾಗ ಗುನುಗುತ್ತಿದ್ದ ಗೋಪಾಲಗೌಡರು, ‘ಇಲ್ಲಿ ಕೇವಲ ಸೋಮನಾಥ ದೇವಾಲಯದ ಬಗ್ಗೆ ಮಾತ್ರವಲ್ಲ, ಇಡೀ ಕರ್ನಾಟಕದ ಬಗೆಗೇ’ ಕುವೆಂಪು ಹೇಳುತ್ತಿದ್ದಾರೆ ಎಂದು ಗೋಪಾಲಗೌಡರು ವ್ಯಾಖ್ಯಾನಿಸುತ್ತಿದ್ದುದನ್ನು ಕೋಣಂದೂರು ಲಿಂಗಪ್ಪ ನೆನಸಿಕೊಳ್ಳುತ್ತಾರೆ. ಸ್ವತಃ ಗೋಪಾಲಗೌಡರು ಕವನ�

Writer - ನಟರಾಜ್ ಹುಳಿಯಾರ್

contributor

Editor - ನಟರಾಜ್ ಹುಳಿಯಾರ್

contributor

Similar News

ಗಾಂಧೀಜಿ