ಮಾಲ್ಕಮ್ ಎಕ್ಸ್ ಸಿಡಿ ನುಡಿಗಳು

Update: 2018-12-08 11:36 GMT

►ಸತತವಾಗಿ ಅಮಾನುಷ ಹಿಂಸೆಗೆ ತುತ್ತಾಗುತ್ತಾ ಬಂದಿರುವವರಿಗೆ ಅಹಿಂಸೆಯನ್ನು ಉಪದೇಶಿಸುವುದು ಅಪರಾಧವಾಗಿದೆ.

►ಪ್ರತಿಕೂಲ ಸನ್ನಿವೇಶದಷ್ಟು ಫಲಕಾರಿಯಾದದ್ದು ಬೇರೇನಿಲ್ಲ. ಪ್ರತಿಯೊಂದು ಸೋಲು, ಪ್ರತಿಯೊಂದು ನಿರಾಶೆ ಮತ್ತು ಪ್ರತಿಯೊಂದು ನಷ್ಟದ ಹಿಂದೆ, ಮುಂದಿನ ಬಾರಿ ನಿರ್ವಹಣೆಯನ್ನು ಹೇಗೆ ಸುಧಾರಿಸಬಹುದು ಎಂಬ ಪಾಠ ಅಡಗಿರುತ್ತದೆ.

►ಶಿಕ್ಷಣವೆಂಬುದು ನಾಳೆಯ ಜಗತ್ತಿಗಿರುವ ಪಾಸ್ ಪೋರ್ಟ್ ಇದ್ದಂತೆ. ಇಂದು ಯಾರು ನಾಳೆಗಾಗಿ ಸಿದ್ಧತೆ ನಡೆಸುತ್ತಾರೋ, ನಾಳೆಯು ಅವರದಾಗಿರುತ್ತದೆ.

►ಕೆಲವು ಬಿಳಿಯರು ಸಾಮೂಹಿಕವಾಗಿ ಎಲ್ಲ ಕರಿಯರನ್ನು ಅಪರಾಧಿಗಳಾಗಿ ಕಾಣುತ್ತಿರುವುದು ಎಷ್ಟು ತಪ್ಪೋ, ಎಲ್ಲ ಬಿಳಿಯರು ಅಪರಾಧಿಗಳೆಂದು ನಂಬುವುದೂ ಅಷ್ಟೇ ತಪ್ಪು ಎಂಬ ಪಾಠವನ್ನು ನನಗೆ ಕಳಿಸಿದ್ದು ಇಸ್ಲಾಮ್ ಧರ್ಮ.

►ಬೇರುಗಳಿಲ್ಲದ ಮರ ಸತ್ತುಹೋಗುತ್ತದೆ. ಹಾಗೆಯೇ ತಮ್ಮ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬೇರುಗಳ ಪರಿಚಯ ಇಲ್ಲದವರು ಸತ್ತ ಸಮುದಾಯವಾಗುತ್ತಾರೆ.

►ಅಮೆರಿಕನ್ ಸಮಾಜವು ಇಸ್ಲಾಮ್ ಧರ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ತನ್ನ ಸಮಾಜದಿಂದ ಜನಾಂಗವಾದವನ್ನು ಸಂಪೂರ್ಣ ಅಳಿಸಿಹಾಕಬಲ್ಲ ಧರ್ಮ ಅದೊಂದೇ. ನಾನು ಮುಸ್ಲಿಮ್ ಜಗತ್ತಿನ ಉದ್ದಗಲಕ್ಕೂ ತಿರುಗಾಡಿದ್ದೇನೆ.

►ಅಮೆರಿಕದಲ್ಲಿ ಇದ್ದಿದ್ದರೆ ‘ಬಿಳಿಯ’ ಎಂದು ಕರೆಯಲ್ಪಡಬಹುದಾಗಿದ್ದ ಅನೇಕ ಮಂದಿಯನ್ನು ಭೇಟಿಯಾಗಿದ್ದೇನೆ, ಅವರ ಜೊತೆ ಮಾತನಾಡಿದ್ದೇನೆ ಮತ್ತು ಅವರ ಜೊತೆ ಭೋಜನ ಮಾಡಿದ್ದೇನೆ. ಆದರೆ ಇಸ್ಲಾಮ್ ಧರ್ಮವು ’ಬಿಳಿಯ’ ಎಂಬ ಮಾನಸಿಕತೆಯನ್ನೇ ಅವರಿಂದ ಕಿತ್ತುಕೊಂಡಿದೆ.

►ನೀವು ಸ್ವಾತಂತ್ರಕ್ಕಾಗಿ ಸಾಯಲು ಸಿದ್ಧರಿಲ್ಲವೇ? ಹಾಗಾದರೆ ಸ್ವಾತಂತ್ರ ಎಂಬ ಪದವನ್ನು ನಿಮ್ಮ ಶಬ್ದಕೋಶದಿಂದ ಕಿತ್ತೆಸೆಯಿರಿ.

►ನೀವು ಸತ್ಯವನ್ನು ಕಾಣಲಾಗದಷ್ಟು ದೇಶಪ್ರೇಮದಲ್ಲಿ ಕುರುಡಾಗಬಾರದು. ತಪ್ಪು ಮಾತನ್ನು ಯಾರು ಆಡಿದರೂ ಅದು ತಪ್ಪೇ. ಅಸೂಯೆಯು ಮನುಷ್ಯನನ್ನು ಕುರುಡಾಗಿಸಿ ಬಿಡುತ್ತದೆ. ಸ್ಪಷ್ಟವಾಗಿ ಚಿಂತಿಸುವುದನ್ನೇ ಅದು ಅಸಾಧ್ಯವಾಗಿಸಿ ಬಿಡುತ್ತದೆ.

►ಮಾಧ್ಯಮವೆಂಬುದು ಇಂದಿನ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಮುಗ್ಧರನ್ನು ಅಪರಾಧಿಗಳಾಗಿ ಬಿಂಬಿಸುವ ಮತ್ತು ಅಪರಾಧಿಗಳನ್ನು ಮುಗ್ಧರಾಗಿ ಬಿಂಬಿಸುವ ಶಕ್ತಿ ಮಾಧ್ಯಮಕ್ಕೆ ಇದೆ. ಅದುವೇ ನಿಜವಾದ ಶಕ್ತಿ. ಅದನ್ನು ಬಳಸಿಕೊಂಡು ಮಾಧ್ಯಮವು ಜನತೆಯ ಮನಸ್ಸುಗಳನ್ನು ನಿಯಂತ್ರಿಸುತ್ತಲಿರುತ್ತವೆ.

►ಇನ್ನೊಬ್ಬರು ನಿಮ್ಮ ಹಾಗೆ ಆಲೋಚಿಸುತ್ತಿಲ್ಲ ಅಥವಾ ನೀವು ಮಾಡಿದ್ದನ್ನು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಯಾರನ್ನಾದರೂ ಖಂಡಿಸಲು ಆತುರ ಪಡಬೇಡಿ. ಇಂದು ನಿಮಗೇನು ತಿಳಿದಿದೆಯೋ ಅದು ನಿಮಗೆ ತಿಳಿಯದಿದ್ದ ಕಾಲವೊಂದಿತ್ತು.

Writer - ಪುತ್ತಿಗೆ

contributor

Editor - ಪುತ್ತಿಗೆ

contributor

Similar News

ಗಾಂಧೀಜಿ