ಶರೀರದ ಈ ಏಳು ಬದಲಾವಣೆಗಳನ್ನು ಖಂಡಿತ ಕಡೆಗಣಿಸಬಾರದು

Update: 2018-12-17 18:32 GMT

ನಮ್ಮ ಶರೀರದಲ್ಲಿ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತವೆ. ನಾವು ಅವುಗಳ ಕಡೆಗೆ ಗಮನವನ್ನು ಕೊಡುವುದಿಲ್ಲ. ಶರೀರದಲ್ಲಿಯ ಬದಲಾವಣೆಗಳು ಆರೋಗ್ಯ ಸಮಸ್ಯೆಗಳ ಅತ್ಯುತ್ತಮ ಸೂಚಕಗಳಾಗಿವೆ. ನಾವು ಗಮನಿಸದಿರಬಹುದಾದ ನಮ್ಮ ಶರೀರದಲ್ಲಿಯ ಕೆಲವು ಬದಲಾವಣೆಗಳು ಯಾವುದೇ ಕಾಯಿಲೆಯ ಎಚ್ಚರಿಕೆಯ ಸಂಕೇತಗಳಾಗಿರಬಹುದು. ಪ್ರತಿಯೊಬ್ಬರಿಗೂ ತಮ್ಮ ಶರೀರದಲ್ಲಿಯ ಬದಲಾವಣೆಗಳ ಮೇಲೆ ನಿಗಾಯಿರಿಸುವುದು ಕಷ್ಟವಾಗಬಹುದು. ಆದರೆ ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳಬಲ್ಲ ಕೆಲವು ಬದಲಾವಣೆಗಳಿಲ್ಲಿವೆ. ಈ ಬದಲಾವಣೆಗಳನ್ನು ಖಂಡಿತ ಗಮನಿಸಬೇಕು ಮತ್ತು ಅವು ತೀವ್ರಗೊಂಡರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

♦ ಉದ್ದೇಶರಹಿತ ತೂಕ ಇಳಿಕೆ
ನೀವು ಯಾವುದೇ ವ್ಯಾಯಾಮ ಅಥವಾ ಪಥ್ಯವನ್ನು ಮಾಡದಿದ್ದರೂ ನಿಮ್ಮ ತೂಕ ಇಳಿಯುತ್ತಿದ್ದರೆ ಅದು ಗಂಭೀರ ಆರೋಗ್ಯ ಸಮಸ್ಯೆಯನ್ನು ಸೂಚಿಸಬಹುದು. ವೈರಲ್ ಸೋಂಕು, ಕರುಳಿನ ಕಾಯಿಲೆ, ಥೈರಾಯ್ಡೆ ಗ್ರಂಥಿಯ ಅತಿ ಕ್ರಿಯಾಶೀಲತೆ ಮತ್ತು ಶ್ವಾಸಕೋಶ ಕ್ಯಾನ್ಸರ್ ಕೂಡ ಅತಿಯಾದ ತೂಕ ಇಳಿಕೆಗೆ ಕಾರಣವಾಗಬಲ್ಲವು. ಇಂತಹ ಸ್ಥಿತಿ ಎದುರಾದರೆ ನೀವು ಶೀಘ್ರವೇ ವ್ಯೆದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ.
♦ ಪದೇ ಪದೇ ಹೊಟ್ಟೆಯ ಸಮಸ್ಯೆಗಳು
ನೀವು ಪದೇ ಪದೇ ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಹಲವಾರು ಆರೋಗ್ಯ ತೊಂದರೆಗಳು ಅದಕ್ಕೆ ಕಾರಣವಾಗಿರಬಹುದು. ಕರುಳಿನ ಅನಾರೋಗ್ಯ ಅಥವಾ ಸೂಕ್ತವಲ್ಲದ ಆಹಾರ ಸೇವನೆಯೂ ಹೊಟ್ಟೆಯ ಸಮಸ್ಯೆಯನ್ನುಂಟು ಮಾಡುತ್ತವೆ. ಇಂತಹ ಸ್ಥಿತಿಯಲ್ಲಿ ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಹೊಟ್ಟೆಯಲ್ಲಿ ಯಾವುದೇ ಬ್ಯಾಕ್ಟೀರಿಯಾ ಅಭಿವೃದ್ಧಿಗೊಳ್ಳುತ್ತಿದೆಯೇ ಅಥವಾ ಸೋಂಕು ಉಂಟಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
♦ ವಿವರಕ್ಕೆ ನಿಲುಕದ ರಕ್ತಸ್ರಾ
   ಯಾವುದೇ ಕಾರಣ ತಿಳಿಯದೆ ರಕ್ತಸ್ರಾವವಾಗುತ್ತಿದ್ದರೆ ಅದು ಗಂಭೀರ ಸಮಸ್ಯೆಯಾಗಬಹುದು. ಮೂತ್ರ ಅಥವಾ ಮಲದಲ್ಲಿ ರಕ್ತ, ಸ್ತನದಲ್ಲಿ ಅಥವಾ ಕೆಮ್ಮಿದಾಗ ರಕ್ತ ಬರುತ್ತಿದ್ದರೆ ಆ ಬಗ್ಗೆ ಸೂಕ್ತ ವೈದ್ಯಕೀಯ ತಪಾಸಣೆ ಅಗತ್ಯವಾಗುತ್ತದೆ.
♦ ಸುಲಿದ ತುಟಿಗಳು
ಋತುಮಾನದಲ್ಲಿ ಬದಲಾವಣೆ ತುಟಿಗಳು ಸುಲಿಯಲು ಅಥವಾ ಒಡೆಯಲು ಕಾರಣವಾಗುತ್ತದೆ. ಆದರೆ ತುಂಬ ಸಮಯದಿಂದ ಅಥವಾ ವರ್ಷದ ಸಮಯವಲ್ಲದ ಸಮಯದಲ್ಲಿ ಹೀಗಾಗುತ್ತಿದ್ದರೆ ಅದು ಆರೋಗ್ಯ ಸಮಸ್ಯೆಗೆ ಸಂಬಂಧಿಸಿರಬಹುದು. ಅದು ಯಾವುದಾದರೂ ಆಹಾರ ಅಥವಾ ಔಷಧಿಯ ಅಲರ್ಜಿಯಾಗಿರಬಹುದು. ಸ್ವಚ್ಛತೆಯ ಕೊರತೆಯಿಂದಲೂ ತುಟಿಗಳು ಸುಲಿಯುತ್ತವೆ ಅಥವಾ ಒಡೆಯುತ್ತವೆ. ತುಟಿಗಳ ಮೂಲೆಗಳಲ್ಲಿ ಬಿರುಕುಗಳುಂಟಾದರೆ ಅದಕ್ಕೆ ವಿಟಾಮಿನ್ ಬಿ, ಎ ಮತ್ತು ಇ ಕೊರತೆ ಕಾರಣವಾಗಿರುತ್ತದೆ. ನಿಮ್ಮ ತುಟಿಗಳ ಬಣ್ಣದಲ್ಲಿ ಯಾವುದೇ ಬದಲಾವಣೆ ಕಂಡು ಬಂದರೆ ಅಥವಾ ತುಟಿಗಳು ಒಡೆಯುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
♦ ಹುಬ್ಬುಗಳು ತೆಳ್ಳಗಾಗುತ್ತಿದ್ದರೆ
ನಿಮ್ಮ ಹುಬ್ಬುಗಳು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳಬಲ್ಲವು. ಹುಬ್ಬಿನ ಕೂದಲುಗಳು ಅತಿಯಾಗಿ ಉದುರುತ್ತಿದ್ದರೆ ಅಥವಾ ಹುಬ್ಬುಗಳು ಸಂಪೂರ್ಣವಾಗಿ ಬೋಳಾಗಿದ್ದರೆ ಅದು ಥೈರಾಯ್ಡಿ ಹಾರ್ಮೋನ್‌ಗಳ ಏರಿಳಿತಗಳಿಗೆ ಸಂಬಂಧಿಸಿರಬಹುದು. ಇಂತಹ ಸಂದರ್ಭದಲ್ಲಿ ನೀವು ಥೈರಾಯ್ಡಿ ತಪಾಸಣೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ.
♦ ಉಗುರುಗಳಲ್ಲಿ ಬಿರುಕುಗಳು
ಹುಬ್ಬುಗಳಂತೆ ನಮ್ಮ ಉಗುರುಗಳೂ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಉಗುರುಗಳ ಸ್ವರೂಪ ಮತ್ತು ಬಣ್ಣದಲ್ಲಿ ಯಾವುದೇ ಬದಲಾವಣೆಗಳು ಯಾವುದಾದರೂ ಆರೋಗ್ಯ ಸಮಸ್ಯೆಯೊಂದಿಗೆ ಗುರುತಿಸಿಕೊಂಡಿ ರಬಹುದು. ವಿಟಾಮಿನ್‌ಗಳು ಮತ್ತು ಪೌಷ್ಟಿಕಾಂಶಗಳ ಕೊರತೆ ಉಗುರುಗಳು ಪೆಡಸಾಗಲು ಪ್ರಮುಖ ಕಾರಣವಾಗಿರುತ್ತದೆ. ಉಗುರುಗಳು ಪೇಲವವಾಗಿದ್ದರೆ ಅದು ರಕ್ತಹೀನತೆ ಅಥವಾ ಕಬ್ಬಿಣದ ಅಂಶ ಕೊರತೆಯನ್ನು ಸೂಚಿಸುತ್ತದೆ. ಬಿಳಿಯ ಪಟ್ಟಿಗಳು ಅಥವಾ ಚುಕ್ಕಿಗಳು ಕಾಣಿಸಿಕೊಂಡಿದ್ದರೆ ಅದು ಸತುವು,ತಾಮ್ರ ಮತ್ತು ಅಯೊಡಿನ್‌ನಂತಹ ಕೆಲವು ಪೌಷ್ಟಿಕಾಂಶಗಳ ಕೊರತೆಯ ಲಕ್ಷಣವಾಗಿರುತ್ತದೆ. ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದು ಯಕೃತ್ತಿನ ಸಮಸ್ಯೆಗಳ ಲಕ್ಷಣವಾಗಿದೆ.
ನಿಮ್ಮ ಶರೀರದಲ್ಲಿ ಈ ಯಾವುದೇ ಬದಲಾವಣೆಗಳು ಕಂಡು ಬಂದರೆ ಇನ್ನಷ್ಟು ತೊಂದರೆಗಳಿಂದ ಪಾರಾಗಲು ನೀವು ವೈದ್ಯರನ್ನು ಅಗತ್ಯವಾಗಿ ಸಂಪರ್ಕಿಸಬೇಕಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News