‘ಅದ್ಭುತ ಫಲ’ ಸೀತಾಫಲ ತಿನ್ನಿ, ಈ ಆರೋಗ್ಯ ಲಾಭಗಳನ್ನು ನಿಮ್ಮದಾಗಿಸಿ…

Update: 2018-12-22 10:25 GMT

ಸಾಮಾನ್ಯವಾಗಿ ಎಲ್ಲ ಕಡೆ ದೊರೆಯುವ ಸೀತಾಫಲ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಕ್ಯಾಲ್ಸಿಯಂ,ಮ್ಯಾಗ್ನೀಷಿಯಂ,ಕಬ್ಬಿಣ,ರಂಜಕ,ಪೊಟ್ಯಾಷಿಯಂ,ಸೋಡಿಯಂ ಇತ್ಯಾದಿ ಖನಿಜಗಳು ಸಮೃದ್ಧವಾಗಿರುವ ಈ ಹಣ್ಣು ನೀಡುವ ಆರೋಗ್ಯ ಲಾಭಗಳ ಮಾಹಿತಿಯಿಲ್ಲಿದೆ....

►ಶರೀರದ ತೂಕ ಹೆಚ್ಚಿಸಲು ನೆರವಾಗುತ್ತದೆ

ಸಿಹಿರುಚಿಯನ್ನು ಹೊಂದಿರುವ ಈ ಹಣ್ಣಿನಲ್ಲಿ ಸಕ್ಕರೆಯಿರುವುದರಿಂದ ಅದು ಶರೀರದ ತೂಕವನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿ ಸಮೃದ್ಧವಾಗಿರುವ ಕ್ಯಾಲರಿಗಳಿಗೆ ಸಕ್ಕರೆಯು ಮುಖ್ಯಮೂಲವಾಗಿದ್ದು,ಶರೀರದ ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಸೀತಾಫಲವನ್ನು ಜೇನಿನೊಂದಿಗೆ ಸೇವಿಸುವುದು ಪರಿಣಾಮಕಾರಿಯಾಗುತ್ತದೆ.

►ಅಸ್ತಮಾವನ್ನು ತಡೆಯುತ್ತದೆ

ಸೀತಾಫಲದಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಬಿ6 ಶ್ವಾಸನಾಳದ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ವಿಟಾಮಿನ್ ಬಿ6 ಪದೇಪದೇ ಅಸ್ತಮಾದ ದಾಳಿ ಮತ್ತು ತೀವ್ರತೆಯನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅದು ಅಸ್ತಮಾವನ್ನು ಗುಣಪಡಿಸುವ ಸಾಮರ್ಥ್ಯವನ್ನೂ ಹೊಂದಿದೆ.

►ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

 ಸೀತಾಫಲವು ಹೃದಯ ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ಸಮೃದ್ಧವಾಗಿರುವ ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಹೃದಯರೋಗಗಳನ್ನು ತಡೆಯುತ್ತವೆ,ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಅಪಧಮನಿಯ ಸ್ನಾಯುಗಳನ್ನು ಸಡಿಲಗೊಳಿಸುತ್ತವೆ. ಇದರ ಜೊತೆಗೆ ಈ ಹಣ್ಣಿನಲ್ಲಿರುವ ನಾರು ಮತ್ತು ವಿಟಾಮಿನ್ ಬಿ6 ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಕೊಲೆಸ್ಟ್ರಾಲ್ ಮಟ್ಟಗಳನ್ನು ಮತ್ತು ಒಂದು ವಿಧದ ಅಮಿನೊ ಆ್ಯಸಿಡ್ ಆಗಿರುವ ಹೊಮೊಸಿಸ್ಟೀನ್‌ನ್ನು ಕಡಿಮೆ ಮಾಡುತ್ತವೆ.

►ಮಧುಮೇಹದ ಅಪಾಯವನ್ನು ತಗ್ಗಿಸುತ್ತದೆ

ರಕ್ತದಲ್ಲಿಯ ಸಕ್ಕರೆ ಮಟ್ಟವು ಹೆಚ್ಚುತ್ತದೆ ಎಂಬ ಭೀತಿಯಿಂದ ಹೆಚ್ಚಿನ ಮಧುಮೇಹಿಗಳು ಸೀತಾಫಲವನ್ನು ತಿನ್ನುವುದಿಲ್ಲ.ಈ ಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿದ್ದರೂ ಗ್ಲೈಸೆಮಿಕ್ ಸೂಚಿಯು ಕಡಿಮೆಯಾಗಿ ರುವುದರಿಂದ ಅದು ಸುಲಭವಾಗಿ ಪಚನಗೊಳ್ಳುತ್ತದೆ,ಹೀರಲ್ಪಡುತ್ತದೆ ಮತ್ತು ರಕ್ತದಲ್ಲಿ ನಿಧಾನವಾಗಿ ಚಯಾಪಚಯಗೊಳ್ಳುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿ ಗ್ಲುಕೋಸ್ ಮಟ್ಟವು ನಿಧಾನವಾಗಿ ಹೆಚ್ಚುತ್ತದೆ. ಆದರೆ ಮಧುಮೇಹಿಗಳು ಸೀತಾಫಲವನ್ನು ಅತಿಯಾಗಿ ಸೇವಿಸಬಾರದು.

►ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಸೀತಾಫಲದಲ್ಲಿ ಸಮೃದ್ಧವಾಗಿರುವ ನಾರು ಕರುಳಿನ ಚಲನವಲನವನ್ನು ಸುಗಮಗೊಳಿಸುವ ಮೂಲಕ ಮಲಬದ್ಧತೆಯನ್ನು ದೂರಮಾಡುತ್ತದೆ. ಅದು ಜೀರ್ಣನಾಳದಲ್ಲಿರುವ ಹಾನಿಕಾರಕ ನಂಜುಗಳನ್ನು ಶರೀರದಿಂದ ಹೊರಗೆ ಹಾಕಲೂ ನೆರವಾಗುತ್ತದೆ ಮತ್ತು ಇದು ಕರುಳಿನ ಚಲನವಲನವನ್ನು,ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಸೀತಾಫಲವನ್ನು ಪ್ರತಿದಿನ ತಿನ್ನುವುದರಿಂದ ಹೊಟ್ಟೆ ಹುಣ್ಣುಗಳು,ಜಠರದುರಿತ ಮತ್ತು ಎದೆಯುರಿ ಕಡಿಮೆಯಾಗುತ್ತವೆ.

►ಕ್ಯಾನ್ಸರ್‌ನ್ನು ತಡೆಯುತ್ತದೆ

ಸೀತಾಫಲವು ಕ್ಯಾನ್ಸರ್‌ನ್ನು ತಡೆಯಲು ನೆರವಾಗುತ್ತದೆ. ಇದರಲ್ಲಿ ಸಮೃದ್ಧವಾಗಿರುವ ಸಸ್ಯಜನ್ಯ ರಾಸಾಯನಿಕಗಳು ಮತ್ತು ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್ಸ್‌ಗಳ ವಿರುದ್ಧ ಹೋರಾಡುತ್ತವೆ ಮತ್ತು ಜೀವಕೋಶಗಳನ್ನು ಇನ್ನಷ್ಟು ಹಾನಿಯಿಂದ ರಕ್ಷಿಸುತ್ತವೆ.

►ರಕ್ತಹೀನತೆಯನ್ನು ಗುಣಪಡಿಸುತ್ತದೆ

ಕಬ್ಬಿಣವನ್ನು ಸಮೃದ್ಧವಾಗಿ ಹೊಂದಿರುವ ಸೀತಾಫಲವು ರಕ್ತಹೀನತೆಗೆ ಚಿಕಿತ್ಸೆಯಲ್ಲಿ ನೆರವಾಗುತ್ತದೆ. ಕಬ್ಬಿಣವು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಶರೀರದ ಅಂಗಾಂಗಗಳಿಗೆ ಪೂರೈಸುವ ಕೆಂಪು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್‌ನ ಭಾಗವಾಗಿದೆ. ಶರೀರದಲ್ಲಿ ಕಬ್ಬಿಣದ ಕೊರತೆಯಿದ್ದರೆ ಕೆಂಪು ರಕ್ತಕಣಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ ಮತ್ತು ಇದು ರಕ್ತಹೀನತೆಗೆ ಕಾರಣವಾಗುತ್ತದೆ.

►ಸಂಧಿವಾತದ ಅಪಾಯವನ್ನು ತಗ್ಗಿಸುತ್ತದೆ

ಸೀತಾಫಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮ್ಯಾಗ್ನೀಷಿಯಂ ಶರೀರದಲ್ಲಿ ನೀರಿನ ಹಂಚಿಕೆಯನ್ನು ಸಮತೋಲನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಶರೀರದ ಪ್ರತಿಯೊಂದೂ ಕೀಲಿನಿಂದ ಆಮ್ಲಗಳನ್ನು ನಿವಾರಿಸಲು ನೆರವಾಗುತ್ತದೆ,ತನ್ಮೂಲಕ ಉರಿಯೂತ ಕಡಿಮೆಯಾಗುತ್ತದೆ ಮತ್ತು ಸಂಧಿನೋವಿನ ನೋವುಗಳನ್ನು ತಗ್ಗಿಸುತ್ತದೆ. ಸೀತಾಫಲವು ರುಮಟಾಯ್ಡಿ ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುವುದರಿಂದ ಹೆಚ್ಚಿನ ವೈದ್ಯರು ತಮ್ಮ ರೋಗಿಗಳಿಗೆ ಈ ಹಣ್ಣನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ.

►ಗರ್ಭಿಣಿಯರಿಗೆ ಒಳ್ಳೆಯದು

 ಗರ್ಭಿಣಿಯರಿಗೆ ಅಗತ್ಯವಾಗಿರುವ ಕಬ್ಬಿಣ ಸೀತಾಫಲದಲ್ಲಿ ಸಮೃದ್ಧವಾಗಿದೆ. ಅಧ್ಯಯನಗಳಂತೆ ಗರ್ಭದಲ್ಲಿ ಭ್ರೂಣದ ಸೂಕ್ತ ಬೆಳವಣಿಗೆಗಾಗಿ ಗರ್ಭಿಣಿಯರು ಸೀತಾಫಲವನ್ನು ಸೇವಿಸುವುದು ಒಳ್ಳೆಯದು ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.

►ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸೀತಾಫಲವು ಸಿ ವಿಟಾಮಿನ್‌ನ ಅತ್ಯುತ್ತಮ ಮೂಲವಾಗಿದೆ. ಈ ವಿಟಾಮಿನ್ ಉರಿಯೂತ ನಿರೋಧಕವಾಗಿದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಪ್ರತಿದಿನ ಈ ಹಣ್ಣನ್ನು ಸೇವಿಸುವುದರಿಂದ ಸೋಂಕುಗಳು ಮತ್ತು ಇತರ ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳಿಗೆ ಪ್ರತಿರೋಧ ಶಕ್ತಿಯು ಹೆಚ್ಚುತ್ತದೆ.

►ಮಿದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

 ಸೀತಾಫಲದಲ್ಲಿರುವ ವಿಟಾಮಿನ್ ಬಿ6 ಮಿದುಳಿನ ಸಮರ್ಪಕ ಬೆಳವಣಿಗೆಗೆ ನೆರವಾಗುತ್ತದೆ. ಈ ವಿಟಾಮಿನ್ ಒತ್ತಡ,ಉದ್ವೇಗ,ಖಿನ್ನತೆ ಮತ್ತು ಕೆರಳುವಿಕೆಯನ್ನು ಕಡಿಮೆಮಾಡುವ ಮಿದುಳಿನಲ್ಲಿಯ ನರಕೋಶ ರಾಸಾಯನಿಕಗಳ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಪಾರ್ಕಿನ್ಸನ್ ಕಾಯಿಲೆಯುಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

►ಚರ್ಮ ಮತ್ತು ತಲೆಗೂದಲಿನ ಆರೋಗ್ಯಕ್ಕೆ ಒಳ್ಳೆಯದು

ನೆತ್ತಿ ಮತ್ತು ಕೂದಲಿನ ಪ್ರಮುಖ ಭಾಗವಾಗಿರುವ ಕೊಲಾಜೆನ್ ಪ್ರೋಟಿನ್ ಬೆಳವಣಿಗೆಯಲ್ಲಿ ಈ ಹಣ್ಣಿನಲ್ಲಿರುವ ವಿಟಾಮಿನ್ ಸಿ ಪ್ರಮುಖ ಪಾತ್ರವನ್ನು ಹೊಂದಿದೆ. ತಲೆಗೂದಲಿಗೆ ಹೊಳಪು ನೀಡುವ ಜೊತೆಗೆ ಚರ್ಮದ ಸುಕ್ಕುಗಳನ್ನು ನಿವಾರಿಸಿ ಅದರ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ.

ನೆನಪಿಡಿ,ಸೀತಾಫಲವು ತಂಪು ಗುಣವನ್ನು ಹೊಂದಿರುವುದರಿಂದ ಅತಿಯಾದ ಸೇವನೆಯಿಂದ ದೂರವಿರಿ ಮತ್ತು ಅನಾರೋಗ್ಯವಿದ್ದಾಗ ತಿನ್ನಬೇಡಿ. ಸೀತಾಫಲದ ಬೀಜಗಳು ವಿಷಯುಕ್ತವಾಗಿರುವುದರಿಂದ ಹಣ್ಣನ್ನು ತಿನ್ನುವಾಗ ಬೀಜಗಳನ್ನು ನುಂಗದಂತೆ ಎಚ್ಚರಿಕೆ ವಹಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News