ಎಚ್ಚರಿಕೆ..., ನಿಮ್ಮ ಈ 4 ಅಭ್ಯಾಸಗಳು ಉದರದ ಕ್ಯಾನ್ಸರ್‌ಗೆ ಕಾರಣವಾಗಬಲ್ಲವು

Update: 2019-01-05 12:30 GMT

ಉದರ ಅಥವಾ ಜಠರದ ಕ್ಯಾನ್ಸರ್ ವಿಶ್ವಾದ್ಯಂತ ಜನರನ್ನು ಕಾಡುತ್ತಿರುವ ನಾಲ್ಕನೆಯ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಕಳೆದ ವರ್ಷವೊಂದರಲ್ಲೇ 10 ಲಕ್ಷ ಉದರದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಜಠರದ ಒಳ ಪದರದಲ್ಲಿಯ ಕೋಶಗಳಲ್ಲಿ ಆರಂಭಗೊಳ್ಳುವ ಈ ರೋಗ ಕ್ರಮೇಣ ಜಠರದ ಭಿತ್ತಿಯನ್ನು ಆಕ್ರಮಿಸಿಕೊಳ್ಳುತ್ತದೆ.

ವಾಂತಿ,ಅತಿಸಾರ,ಬಳಲಿಕೆ,ಮಲಬದ್ಧತೆ,ಹಸಿವು ಕ್ಷೀಣ,ಊಟದ ಬಳಿಕ ಹೊಟ್ಟೆ ಉಬ್ಬರಿಸುವುದು,ದಿಢೀರ ತೂಕ ಇಳಿಕೆ ಮತ್ತು ಮಲದಲ್ಲಿ ರಕ್ತ ಇವು ಉದರ ಕ್ಯಾನ್ಸರ್‌ನ ಕೆಲವು ಲಕ್ಷಣಗಳಾಗಿವೆ.

ರೋಗವು ಆರಂಭಗೊಂಡಿರುವ ಅಂಗಾಂಶದ ವಿಧವನ್ನು ಆಧರಿಸಿ ಉದರ ಕ್ಯಾನ್ಸರ್‌ನ್ನು ವರ್ಗೀಕರಿಸಲಾಗಿದೆ. ಅಡೆನೊಕಾರ್ಸಿನೋಮಾ ಅತ್ಯಂತ ಸಾಮಾನ್ಯ ಉದರ ಕ್ಯಾನ್ಸರ್ ಆಗಿದ್ದು,ಶೇ.90ರಿಂದ 95ರಷ್ಟು ರೋಗಿಗಳು ಈ ವಿಧದ ಕ್ಯಾನ್ಸರ್‌ನಿಂದ ಪೀಡಿತರಾಗಿರುತ್ತಾರೆ. ಇದು ಉದರದ ಗ್ರಂಥಿ ಕೋಶಗಳಲ್ಲಿ ಆರಂಭಗೊಳ್ಳುತ್ತದೆ. ಲಿಂಫೊಮಸ್ ಮತ್ತು ಸಾರ್ಕೊಮಸ್ ಇವು ಇತರ ವಿಧಗಳಲ್ಲಿ ಸೇರಿವೆ.

ನಮ್ಮ ಕೆಲವೊಂದು ದೈನಂದಿನ ಅಭ್ಯಾಸಗಳು ಸಹ ಉದರ ಕ್ಯಾನ್ಸರ್ ಬೆಳವಣಿಗೆಯಲ್ಲಿ ತಮ್ಮ ಕೊಡುಗೆಯನ್ನು ಸಲ್ಲಿಸುತ್ತವೆ. ಅಂತಹ ಐದು ಅಭ್ಯಾಸಗಳ ಮಾಹಿತಿಯಿಲ್ಲಿದೆ.........

►ಅನಿಯಮಿತ ಆಹಾರ ಸೇವನೆ

 ನಿಯಮಿತ ಸಮಯಗಳಲ್ಲಿ ಆಹಾರ ಸೇವನೆ ಮಾಡುವವರಿಗೆ ಹೋಲಿಸಿದರೆ ಹೊತ್ತುಗೊತ್ತಿಲ್ಲದೆ ಆಹಾರವನ್ನು ಸೇವಿಸುವವರು ಉದರದ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು. ನಿಗದಿತ ಸಮಯದಲ್ಲಿ ಆಹಾರವನ್ನು ಸೇವಿಸುವುದರಿಂದ ಜಠರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ನಿಗದಿತ ಸಮಯದಲ್ಲಿ ಆಹಾರ ಸೇವನೆಯು ಆಹಾರವನ್ನು ಸಮರ್ಪಕವಾಗಿ ಜೀರ್ಣಗೊಳಿಸಲು ಜಠರಕ್ಕೆ ನೆರವಾಗುತ್ತದೆ ಮತ್ತು ಜಠರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆರೋಗ್ಯಕರ ಜಠರಕ್ಕಾಗಿ ನಿಗದಿತ ಸಮಯಗಳಲ್ಲಿ ಆಹಾರ ಸೇವನೆಯ ಪದ್ಧತಿಯು ಒಳ್ಳೆಯದು. ಇಂತಹ ಪದ್ಧತಿಗೆ ಅಂಟಿಕೊಳ್ಳಲು ನಿಮಗೆ ಸಾಧ್ಯವಿಲ್ಲವೆಂದಾದರೆ ನಡುವಿನ ಸಮಯದಲ್ಲಿ ಏನಾದರೂ ಅಲ್ಪಾಹಾರವನ್ನು ಸೇವಿಸಬಹುದು.

►ಬಿಸಿ ಆಹಾರ

ಜೀರ್ಣಾಂಗದಲ್ಲಿಯ ಲೋಳೆೆಯ ವಪೆಯು 50-60 ಡಿಗ್ರಿ ಉಷ್ಣತೆ ಹೊಂದಿರುವ ಆಹಾರವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿಲ್ಲ,ಹೀಗಾಗಿ ಬಿಸಿಬಿಸಿಯಾದ ಆಹಾರ ಸೇವನೆಯು ಉದರಕ್ಕೆ ಹಾನಿಯನ್ನುಂಟು ಮಾಡಬಲ್ಲದು. ಇದು ಜಠರವನ್ನು ಸುಡುತ್ತದೆ ಮತ್ತು ಪ್ರತಿಕೂಲ ಬದಲಾವಣೆಗಳನ್ನುಂಟು ಮಾಡುತ್ತದೆ ಹಾಗೂ ಉದರದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದ್ದರಿಂದ ಬಿಸಿಬಿಸಿಯಾದ ಅಹಾರ ಸೇವನೆಯನ್ನು ನಿವಾರಿಸುವುದು ಒಳ್ಳೆಯದು.

►ಆಮ್ಲೀಯ ಹಣ್ಣುಗಳು

ಗ್ಯಾಸ್ಟ್ರಿಕ್ ಆ್ಯಸಿಡ್‌ನ ಮಟ್ಟ ಅಧಿಕಗೊಂಡಾಗ ಅದು ಜಠರದ ಮೇಲೆ ದಾಳಿ ಮಾಡುತ್ತದೆ ಮತ್ತು ನಮಗೆ ಹಸಿವಿನ ಅನುಭವವುಂಟಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸ,ಬ್ಲೂಬೆರಿ ಇತ್ಯಾದಿಗಳ ಸೇವನೆಯು ಸಮಸ್ಯೆಯನ್ನು ಖಂಡಿತವಾಗಿಯೂ ಇನ್ನಷ್ಟು ಹೆಚ್ಚಿಸುತ್ತದೆ. ಇದು ಜಠರದಲ್ಲಿ ಉಂಡೆಯಂತಹ ರಚನೆಗೆ ಕಾರಣವಾಗುತ್ತದೆ ಮತ್ತು ಜಠರದಲ್ಲಿನ ವಾಯು ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಜಠರದ ಅನಾರೋಗ್ಯದ ಇತರ ಲಕ್ಷಣಗಳು ಕಾಣಿಸತೊಡಗುತ್ತವೆ.

►ತಂಬಾಕು ಬಳಕೆ

ನಿಯಮಿತವಾಗಿ ತಂಬಾಕು ಬಳಕೆಯು ಜಠರದ ಕ್ಯಾನ್ಸರ್,ವಿಶೇಷವಾಗಿ ಅನ್ನನಾಳಕ್ಕೆ ನಿಕಟವಾಗಿರುವ ಜಠರದ ಭಾಗವಾದ ಪ್ರಾಕ್ಸಿಮಲ್‌ನ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ತಂಬಾಕು ಬಳಕೆಯ ಚಟವಿರುವವರು ಅದನ್ನು ವರ್ಜಿಸುವುದು ಒಳ್ಳೆಯದು. ಅದು ಶರೀರಕ್ಕೆ ಯಾವುದೇ ಒಳಿತನ್ನು ಮಾಡುವುದಿಲ್ಲ,ಅದು ಜೀವವನ್ನೇ ಬಲಿ ತೆಗೆದುಕೊಳ್ಳಬಹುದಾದ ರೋಗಗಳಿಗೆ ಆಹ್ವಾನ ನೀಡುತ್ತದೆ,ಅಷ್ಟೇ.

►ಇತರ ಅಪಾಯದ ಅಂಶಗಳು

 ಮದ್ಯಪಾನ,ಗ್ಯಾಸ್ಟ್ರಿಕ್ ಸಮಸ್ಯೆಗಳು,ಉದರದ ಸಮಸ್ಯೆಗಳ ಇತಿಹಾಸ,ಹೆಲಿಕೊಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ಇವು ಉದರ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News