ನಿಮ್ಮ ಹೃದಯದ ಆರೋಗ್ಯ ಕಾಪಾಡಲು ಈ ಟಿಪ್ಸ್ ಗಳನ್ನು ತಪ್ಪದೆ ಪಾಲಿಸಿ

Update: 2019-01-10 11:33 GMT

ನಿಮ್ಮ ಹೃದಯವು ಸದಾ ಆರೋಗ್ಯವಾಗಿರಬೇಕು ಎಂದು ನೀವು ಬಯಸಿದ್ದೀರಾ?.. ಹಾಗಿದ್ದರೆ ಹೃದಯ ತಜ್ಞರ ಈ ಸಲಹೆಗಳನ್ನು ತಪ್ಪದೆ ಪಾಲಿಸಿ.....

ಹೃದಯ ರೋಗದ ಲಕ್ಷಣಗಳನ್ನೆಂದಿಗೂ ಕಡೆಗಣಿಸಬೇಡಿ

ಎದೆನೋವು ಹೃದಯ ರೋಗವನ್ನು ಸೂಚಿಸುವ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಎದೆಯ ಮೂಳೆಯ ಹಿಂದಿನ, ಎದೆಯ ಮಧ್ಯಭಾಗದಿಂದ ನೋವು ಆರಂಭಗೊಂಡಿದ್ದರೆ ಅದು ಹೃದಯಾಘಾತದ ಲಕ್ಷಣವಾಗಿರುತ್ತದೆ. ಅಲ್ಲದೆ ಮೊದಲು ಇಲ್ಲದಿದ್ದ, ಈಗ ಕೆಲವು ದೂರ ನಡೆದಾಗ ಬರುವ ಎದೆನೋವು ಕೂಡ ಹೃದಯಾಘಾತವನ್ನು ಸೂಚಿಸಬಹುದು. ಉಸಿರಾಟದ ತೊಂದರೆ, ಬೆವರುವಿಕೆ, ದವಡೆ ಮತ್ತು ತೋಳುಗಳಲ್ಲಿ ನೋವು ಇವು ಇತರ ಸಾಮಾನ್ಯ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಆದಷ್ಟು ಶೀಘ್ರ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗುತ್ತದೆ.

ಹೆಚ್ಚಿನ ಜನರು ಎದೆ ನೋಯುತ್ತಿದ್ದರೆ ಅದಕ್ಕೆ ಆ್ಯಸಿಡಿಟಿ ಅಥವಾ ಆಮ್ಲೀಯತೆ ಕಾರಣವಾಗಿರಬಹುದೆಂದು ಭಾವಿಸಿ ಕಡೆಗಣಿಸುತ್ತಾರೆ. ಆದರೆ ಹೃದಯಾಘಾತ ಅಲ್ಲ ಎನ್ನುವುದನ್ನು ಖಚಿತಪಡಿಸಕೊಳ್ಳಲು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಜಾಣತನವಾಗುತ್ತದೆ.

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಮಟ್ಟ ಇವು ಹೃದ್ರೋಗದ ಅಪಾಯವನ್ನುಂಟು ಮಾಡುವ ಪ್ರಮುಖ ಕಾರಣಗಳಾಗಿವೆ. ಹೀಗಾಗಿ ಈ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿ ವರ್ಷ ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ವ್ಯಕ್ತಿಗೆ ವಯಸ್ಸಾಗುತ್ತ ಹೋದಂತೆ ಅಥವಾ ಕುಟುಂಬದಲ್ಲಿ ಹೃದ್ರೋಗದ ಇತಿಹಾಸವಿದ್ದರೆ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆ ಭೇಟಿಯನ್ನೂ ಹೆಚ್ಚಿಸಬೇಕಾಗುತ್ತದೆ.

 ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಯಾಗಿದ್ದರೆ ಆಗಾಗ್ಗೆ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಮನೆಯಲ್ಲಿಯೇ ಬ್ಲಡ್ ಪ್ರೆಷರ್ ಮಾನಿಟರ್ ಬಳಸಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬಹುದು ಮತ್ತು ಪ್ರತಿ 3-6 ತಿಂಗಳಿಗೊಮ್ಮೆ ಕ್ಲಿನಿಕ್‌ ಗೆ ತೆರಳಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬಹುದು. ಇದೇ ನಿಯಮ ಮಧುಮೇಹಿಗಳಿಗೂ ಅನ್ವಯಿಸುತ್ತದೆ. ಅವರೂ ಆಗಾಗ್ಗೆ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ವ್ಯಕ್ತಿಗೆ 45 ವರ್ಷ ಪ್ರಾಯವಾದ ಬಳಿಕ ಹೃದಯದ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಆದರೆ 30 ವರ್ಷ ಪ್ರಾಯಕ್ಕಿಂತ ಹೆಚ್ಚಿನವರಲ್ಲಿಯೂ ಹೃದ್ರೋಗಗಳು ಹೆಚ್ಚುತ್ತಿರುವುದರಿಂದ ಈ ವಯೋಗುಂಪಿನವರೂ ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು.

ಸ್ವಯಂ ಔಷಧಿ ಬೇಡವೇ ಬೇಡ

ನೀವು ಅಧಿಕ ಕೊಲೆಸ್ಟ್ರಾಲ್ ಮಟ್ಟ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ನಿಮ್ಮ ವೈದ್ಯರು ಸೂಚಿಸಿರುವ ಚಿಕಿತ್ಸೆಯನ್ನು ಅನುಸರಿಸುವುದು ಅತ್ಯುತ್ತಮ.ನಿಮಗೆ ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ ಅಥವಾ ಯಾವುದೇ ಔಷಧಿಗೆ ಸಹಿಷ್ಣುತೆ ಇಲ್ಲದಿದ್ದರೆ ನಿಮ್ಮ ಸ್ನೇಹಿತರು ಅಥವಾ ಕೆಮಿಸ್ಟ್‌ ಗಳ ಸಲಹೆಯಂತೆ ಔಷಧಿಯನ್ನು ಬದಲಿಸುವ ಬದಲು ಸಮಸ್ಯೆಯನ್ನು ನಿಮ್ಮ ವೈದ್ಯರ ಗಮನಕ್ಕೆ ತನ್ನಿ.

ನಿಮ್ಮ ವೈದ್ಯರ ಸಲಹೆ ಪಡೆಯದೆ ಸ್ವಯಂ ವೈದ್ಯ ಮಾಡಿಕೊಳ್ಳುವುದು ಹಾನಿಕಾರಕ ಅಡ್ಡ ಪರಿಣಾಮಗಳನ್ನುಂಟು ಮಾಡಬಹುದು. ನಿಮ್ಮ ವೈದ್ಯರು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ದೇಹಸ್ಥಿತಿಯನ್ನು ಆಧರಿಸಿ ನಿಮ್ಮ ಚಿಕಿತ್ಸೆಯ ಒಳಿತು-ಕೆಡಕುಗಳನ್ನು ಲೆಕ್ಕ ಹಾಕಿರುತ್ತಾರೆ. ಆದ್ದರಿಂದ ನಿಮ್ಮ ವೈದ್ಯರಿಗೆ ತಿಳಿಸದೆ ಯಾವುದೇ ಔಷಧಿಯನ್ನು ಸೇವಿಸುವ ಮುನ್ನ ಎರಡೆರಡು ಬಾರಿ ಯೋಚಿಸಿ. ಹೃದಯ ಕಾಯಿಲೆಗಾಗಿ ಕೆಮಿಸ್ಟ್‌ಗಳ ಸಲಹೆ ಪಡೆಯುವುದು ಅಥವಾ ಸ್ವಯಂ ಔಷಧಿಯನ್ನು ಮಾಡಿಕೊಳ್ಳುವುದು ಬೇಡವೇ ಬೇಡ.

ನಿಮ್ಮ ಕುಟುಂಬ ವೈದ್ಯರೊಂದಿಗೆ ಉತ್ತಮ ಸಂಬಂಧವಿರಲಿ

ಹೆಚ್ಚಿನ ರೋಗಿಗಳು ವೈದ್ಯರ ಸಲಹೆ ಪಡೆದುಕೊಳ್ಳದಿರುವುದಕ್ಕೆ ಮತ್ತು ತಮ್ಮ ದೇಹಸ್ಥಿತಿಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುವುದಕ್ಕೆ ತಮ್ಮ ಕುಟುಂಬ ವೈದ್ಯರೊಂದಿಗೆ ಉತ್ತಮ ಸಂಬಂಧದ ಕೊರತೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ತಮಗೆ ದಿನವೂ ಕಾಡುವ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಲು ಹೆಚ್ಚಿನವರು ಹಿಂಜರಿಯುತ್ತಾರೆ ಮತ್ತು ಇವೆಲ್ಲ ಸಣ್ಣಪುಟ್ಟ ಸಮಸ್ಯೆಗಳೆಂದು ಅವರು ಭಾವಿಸಿರುತ್ತಾರೆ. ತಮಗೆ ವೈದ್ಯರು ನಿರ್ದಿಷ್ಟ ಔಷಧಿಯನ್ನು ಶಿಫಾರಸು ಮಾಡಿರುವುದೇಕೆ ಎಂದು ತಿಳಿದುಕೊಳ್ಳಲು ಅವರು ಗೂಗಲ್ ಮೊರೆ ಹೋಗುತ್ತಾರೆಯೇ ಹೊರತು ಇದೊಂದು ಸಣ್ಣ ವಿಷಯವೆಂದುಕೊಂಡು ವೈದ್ಯರನ್ನು ಕೇಳಿ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇದು ಸರಿಯಾದ ಕ್ರಮವಲ್ಲ. ನಿಮ್ಮ ಕುಟುಂಬ ವೈದ್ಯರೊಡನೆ ಮುಕ್ತವಾಗಿ ಮಾತನಾಡಿ ಮತ್ತು ನಿಮ್ಮ ಆರೋಗ್ಯದ ಕುರಿತು ಅವರೊಂದಿಗೆ ಚರ್ಚಿಸಿ. ಅವರು ಸೂಕ್ತ ಮಾರ್ಗವನ್ನು ಸೂಚಿಸುತ್ತಾರೆ. ನೀವು ಅಂತರ್ಜಾಲದಲ್ಲಿ ಕಾಯಿಲೆಗಳ ಲಕ್ಷಣಗಳು ಮತ್ತು ಕಾರಣಗಳ ಬಗ್ಗೆ ತಿಳಿದುಕೊಳ್ಳಹುದಾದರೂ ವೈದ್ಯರನ್ನು ಸಂಪರ್ಕಿಸಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ಮರೆಯಬೇಡಿ.

ಹೃದಯದ ಆರೋಗ್ಯಕ್ಕೆ ವ್ಯಾಯಾಮ ಮುಖ್ಯ

ಈ ಅವಸರದ ಯುಗದಲ್ಲಿ ಹೆಚ್ಚಿನವರಿಗೆ ವ್ಯಾಯಾಮ ಮಾಡಲು ಸಮಯ ಸಿಗುವುದಿಲ್ಲ. ಜನರಿಗೆ ಈಗ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿದ್ದು, ದೇಹವನ್ನು ದಂಡಿಸಿ ಕ್ಯಾಲರಿಗಳನ್ನು ಕರಗಿಸಲು ಜಿಮ್ ‌ಗಳಿಗೆ ಹೋಗುತ್ತಾರಾದರೂ ನಿಯಮಿತವಾಗಿ ವ್ಯಾಯಾಮ ಮಾಡುವುದು ಕಷ್ಟವಾಗುತ್ತಿದೆ. ಆದರೆ ನಿಮ್ಮ ಹೃದಯವು ಆರೋಗ್ಯಯುತವಾಗಿಬೇಕೆಂದರೆ ಕನಿಷ್ಠ ವ್ಯಾಯಾಮದ ಅಗತ್ಯವಿದೆ ಮತ್ತು ಕ್ರಿಯಾಶೀಲರಾಗಿ ಬದುಕಬೇಕಾಗುತ್ತದೆ. ಪ್ರತಿದಿನ ಬಿರುಸಿನ ವಾಕಿಂಗ್ ಮಾಡಿದರೂ ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿದಿನದ ವ್ಯಾಯಾಮ ನಿಮ್ಮ ಹೃದಯವನ್ನು ಕ್ರಿಯಾಶೀಲವಾಗಿರಿಸುವುದು ಮಾತ್ರವಲ್ಲ, ರಕ್ತ ಪರಿಚಲನೆಯನ್ನೂ ಉತ್ತಮಗೊಳಿಸುವ ಮೂಲಕ ನಿಮ್ಮನ್ನು ಆರೋಗ್ಯಯುತವಾಗಿರಿಸುತ್ತದೆ. ಅದರಿಂದ ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತವೆ ಮತ್ತು ಶರೀರದ ತೂಕವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News