ಸ್ನಾನ ಮಾಡುವ ಸಂಧರ್ಭ ಶರೀರದ ಈ ಭಾಗಗಳ ಸ್ವಚ್ಛತೆಯನ್ನು ಕಡೆಗಣಿಸಲೇಬೇಡಿ…

Update: 2019-01-19 16:38 GMT

ನೀವು ನಿಮ್ಮ ಶರೀರದ ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತೀರಾ? ಸಾಮಾನ್ಯವಾಗಿ ಎಲ್ಲರೂ ಈ ಪ್ರಶ್ನೆಗೆ ‘ಹೌದು’ ಎಂದೇ ಉತ್ತರಿಸುತ್ತಾರೆ. ಆದರೆ ಹೆಚ್ಚಿನವರಿಗೆ ‘ಇಲ್ಲ’ ಎನ್ನುವುದು ಸೂಕ್ತ ಉತ್ತರವೆಂದು ಗೊತ್ತಿರುತ್ತದೆ. ಆದರೆ ಅದನ್ನವರು ಬಾಯಿ ಬಿಟ್ಟು ಒಪ್ಪಿಕೊಳ್ಳುವುದಿಲ್ಲ,ಅಷ್ಟೇ. ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯದವರ ಪೈಕಿ ನೀವೂ ಒಬ್ಬರಾಗಿದ್ದರೆ ನೀವು ಸರಿಯಾಗಿ ಸ್ವಚ್ಛಗೊಳಿಸಿಕೊಳ್ಳದ ಕೆಲವು ಭಾಗಗಳಿರಬಹುದು. ಉದಾಹರಣೆಗೆ ಕಿವಿಗಳು,ಹೊಕ್ಕುಳು ಇತ್ಯಾದಿ. ಇವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅಲ್ಲಿ ಸಂಗ್ರಹಕೊಳ್ಳುವ ಕೊಳಕು ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಶಸ್ತ ತಾಣಗಳಾಗುತ್ತವೆ. ನಮ್ಮ ಕಡೆಗಣನೆಗೆ ಗುರಿಯಾಗುವ ಶರೀರದ ಕೆಲವು ಭಾಗಗಳ ಮಾಹಿತಿ ಇಲ್ಲಿದೆ,ಓದಿಕೊಳ್ಳಿ......

►ಕಿವಿಗಳು

ನೀವು ಸ್ನಾನ ಮಾಡುವಾಗ ಕಿವಿಗಳ ಹಿಂಭಾಗವನ್ನು ಗಮನಿಸುವುದಿಲ್ಲ. ಹೀಗಾಗಿ ಅಲ್ಲಿ ಕೊಳೆ ಸಂಗ್ರಹವಾಗುತ್ತದೆ. ಈ ಭಾಗದಲ್ಲಿರುವ ಮೇದೋಗ್ರಂಥಿಗಳ ಸ್ರಾವವು ನಿಮ್ಮ ಕಿವಿಯ ಚರ್ಮವನ್ನು ತೇವವಾಗಿರಿಸುತ್ತದೆ. ತೈಲಾಂಶವಿರುವ ಈ ಸ್ರಾವವು ಕೊಳೆ ಮತ್ತು ಬ್ಯಾಕ್ಟೀರಿಯಾಗಳನ್ನು ಆಕರ್ಷಿಸುತ್ತದೆ. ಇದನ್ನು ದಿನವೂ ನೀರಿನಿಂದ ಸ್ವಚ್ಛಗೊಳಿಸದಿದ್ದರೆ ವಾಸನೆ ಬರಲು ಆರಂಭವಾಗುತ್ತದೆ. ಕಿವಿಗಳ ಒಳಗಿನ ಸ್ವಚ್ಛತೆಯ ಕುರಿತು ಹೇಳುವುದಾದರೆ ಗುಗ್ಗೆಯು ಸಂಗ್ರಹಗೊಂಡಿರುತ್ತದೆ. ಅದನ್ನು ತೆಗೆಯಲು ಲೋಹದ ಕಡ್ಡಿ ಇತ್ಯಾದಿಗಳ ಬಳಕೆಯು ಕಿವಿಗೆ ಗಾಯವನ್ನುಂಟು ಮಾಡುವುದರಿಂದ ಕಾಟನ್ ಬಡ್‌ಗಳನ್ನು ಬಳಸಿ ಸ್ವಚ್ಛಗೊಳಿಸಬೇಕಾಗುತ್ತದೆ.

► ಶರೀರದಲ್ಲಿಯ ಮೊಡವೆ

ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವವು ಸಂಗ್ರಹಗೊಂಡಾಗ ಬ್ಯಾಕ್ಟೀರಿಯಾಗಳು ಅಲ್ಲಿ ಸೇರಿಕೊಳ್ಳುತ್ತವೆ. ಕ್ರಮೇಣ ಇವುಗಳ ಸಂಖ್ಯೆ ಹೆಚ್ಚುತ್ತದೆ ಮತ್ತು ಸುತ್ತಲಿನ ಅಂಗಾಂಶಗಳ ಉರಿಯೂತಕ್ಕೆ ಕಾರಣವಾಗುತ್ತವೆ. ಅತಿ ಕ್ರಿಯಾಶೀಲವಾದ ತೈಲಗ್ರಂಥಿಗಳು,ಅತಿಯಾದ ಮೃತ ಚರ್ಮಕೋಶಗಳು ಮತ್ತು ಮೊಡವೆಯನ್ನುಂಟು ಮಾಡುವ ಬ್ಯಾಕ್ಟೀರಿಯಾಗಳ ಹೆಚ್ಚಳ ಇವು ಶರೀರದಲ್ಲಿ ಮೊಡವೆಗಳುಂಟಾಗಲು ಪ್ರಮುಖ ಕಾರಣಗಳಾಗಿವೆ.

► ಹೊಕ್ಕುಳು

ಹೆಚ್ಚಿನವರು ಸ್ನಾನ ಮಾಡುವಾಗ ಹೊಕ್ಕುಳನ್ನು ಕಡೆಗಣಿಸುತ್ತಾರೆ. ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅಲ್ಲಿ ಕೊಳೆಯು ಸಂಗ್ರಹಗೊಳ್ಳುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಇವುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೆಟ್ಟ ವಾಸನೆ ಬರತೊಡಗುತ್ತದೆ ಮತ್ತು ಚರ್ಮದ ಸೋಂಕು ಉಂಟಾಗುತ್ತದೆ.

► ಬೆನ್ನು

ನೀವು ಸ್ನಾನ ಮಾಡುವಾಗ ಬೆನ್ನು ಒದ್ದೆಯಾಗಬಹುದು,ಆದರೆ ನೀವು ತಿಳಿದಿರುವಂತೆ ಅದು ಸಂಪೂರ್ಣವಾಗಿ ಸ್ವಚ್ಛಗೊಂಡಿರುವುದಿಲ್ಲ. ಬೆನ್ನು ಹೆಚ್ಚಾಗಿ ಕಡೆಗಣಿಸಲ್ಪಡುವ ನಮ್ಮ ಶರೀರದ ಭಾಗಗಳಲ್ಲೊಂದಾಗಿದೆ ಮತ್ತು ಅದು ದೊಡ್ಡ ಭಾಗವೂ ಆಗಿದೆ. ನೀವು ಬೆನ್ನಿನ ಮೇಲೆ ಮಲಗಿದಾಗ ಅದರಲ್ಲಿರುವ ರಂಧ್ರಗಳು ಮತ್ತು ಗ್ರಂಥಿಗಳಿಗೆ ತಡೆಯುಂಟಾಗುತ್ತದೆ. ಹೀಗಾಗಿ ಬೆನ್ನನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅಲ್ಲಿ ಮೊಡವೆಗಳು ಏಳಲು ಕಾರಣವಾಗುತ್ತದೆ.

► ಬಾಯಿ

ಬಾಯಿ ನಮ್ಮ ಶರೀರದ ಅತ್ಯಂತ ಕೊಳಕು ಭಾಗವಾಗಿದೆ ಎನ್ನುವುದನ್ನು ನೀವು ನಂಬಲೇಬೇಕು. ಸರಾಸರಿಯಾಗಿ ಓರ್ವ ವ್ಯಕ್ತಿಯ ಬಾಯಿಯಲ್ಲಿ 700 ಮಿಲಿಯಕ್ಕೂ ಹೆಚ್ಚಿನ ವಿವಿಧ ಬ್ಯಾಕ್ಟೀರಿಯಾಗಳು ವಾಸವಾಗಿರುತ್ತವೆ. ಈ ಬ್ಯಾಕ್ಟೀರಿಯಾಗಳು,ವಿಶೇಷವಾಗಿ ಸ್ಟ್ರೆಪ್ಟೊಕೋಕಸ್ ಬ್ಯಾಕ್ಟೀರಿಯಾಗಳು ನೀವು ಸೇವಿಸುವ ಸಕ್ಕರೆ ಮತ್ತು ಪಿಷ್ಟವನ್ನೊಳಗೊಂಡಿರುವ ಕಾರ್ಬೊಹೈಡ್ರೇಟ್ ಆಹಾರಗಳಿಂದಾಗಿ ದ್ವಿಗುಣಗೊಳ್ಳುತ್ತಲೇ ಇರುತ್ತವೆ. ನಾಲಿಗೆಯಲ್ಲಿಯೂ ಬ್ಯಾಕ್ಟೀರಿಯಾಗಳಿರುತ್ತವೆ ಮತ್ತು ವಿಶೇಷವಾಗಿ ರುಚಿಮೊಗ್ಗುಗಳು ಹಾಗೂ ನಾಲಿಗೆಯ ಇತರ ಭಾಗಗಳು ಇವುಗಳ ಆವಾಸಸ್ಥಾನಗಳಾಗಿರುತ್ತವೆ. ಹೀಗಾಗಿ ಪ್ರತಿ ಬಾರಿ ಊಟದ ಬಳಿಕ ಟಂಗ್‌ಸ್ಕ್ರೇಪರ ಅಥವಾ ಟೂಥ್‌ಬ್ರಷ್‌ನಿಂದ ನಾಲಿಗೆಯನ್ನು ಸ್ವಚ್ಛಗೊಳಿಸಬೇಕು.

► ನೆತ್ತಿ

ನೆತ್ತಿಯನ್ನು ಪ್ರತಿದಿನವೂ ತೊಳೆದುಕೊಳ್ಳದಿದ್ದರೆ ಮೃತ ಚರ್ಮಕೋಶಗಳ ಸಂಖ್ಯೆ ಹೆಚ್ಚುತ್ತಿರುತ್ತದೆ ಮತ್ತು ಇವು ಬ್ಯಾಕ್ಟೀರಿಯಾಗಳು ಹಾಗೂ ಶರೀರದಲ್ಲಿಯ ಇತರ ಸೂಕ್ಷ್ಮಾಣುಜೀವಿಗಳಿಗೆ ಆಹಾರವಾಗುತ್ತವೆ. ಕೂದಲು ಮತ್ತು ನೆತ್ತಿಯನ್ನು ತೊಳೆದುಕೊಳ್ಳುವುದರಿಂದ ಚರ್ಮ ಒಣಗುವುದನ್ನು,ತುರಿಕೆಯನ್ನು ಮತ್ತು ಹೊಟ್ಟನ್ನು ತಡೆಯಬಹುದು.

► ಪಾದಗಳು ಮತ್ತು ಕಾಲ್ಬೆರಳುಗಳು

ಇವು ಕೊಳೆಯು ಸುಲಭವಾಗಿ ಸಂಗ್ರಹಗೊಳ್ಳುವ ಭಾಗಗಳಾಗಿರುವುದರಿಂದ ಉಜ್ಜುಗಲ್ಲನ್ನು ಬಳಸಿ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ಟಿನಿಯಾ ಪೆಡಿಸ್ ಅಥವಾ ಹುಳುಕಡ್ಡಿಯು ಒಂದು ವಿಧದ ಶಿಲೀಂಧ್ರವಾಗಿದ್ದು ‘ಅಥ್ಲೆಟ್ಸ್ ಫೂಟ್’ಗೆ ಕಾರಣವಾಗುತ್ತದೆ ಮತ್ತು ಇದು ಬೆರಳುಗಳ ನಡುವೆ ಅಥವಾ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

► ಉಗುರುಗಳು

ಉದ್ದ ಉಗುರುಗಳನ್ನ್ನು ಹೊಂದಿರುವ ವ್ಯಕ್ತಿಗಳ ಉಗುರುಗಳ ಕೆಳಗೆ ಕೊಳೆ ಸಂಗ್ರಹವಾಗಿರುವುದನ್ನು ನಾವು ನೋಡುತ್ತಿರುತ್ತೇವೆ. ಇವುಗಳಲ್ಲಿ ಫೀಕಲ್ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಮತ್ತು ಆಹಾರ ಸೇವಿಸುವಾಗ ಶರೀರವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗುತ್ತವೆ.

► ಪ್ರಷ್ಠ

ಇದು ಸ್ವಲ್ಪ ಹೆಚ್ಚಿನ ಕಾಳಜಿ ಅಗತ್ಯವಾಗಿರುವ ಶರೀರದ ಭಾಗವಾಗಿದೆ. ನಾವು ಕುಳಿತುಕೊಂಡಾಗಲೆಲ್ಲ ಪ್ರಷ್ಠದ ಚರ್ಮವು ಹೆಚ್ಚಿನ ಒತ್ತಡಕ್ಕೊಳಗಾಗುತ್ತದೆ. ಈ ಜಾಗದಲ್ಲಿ ಬೆವರುವಿಕೆ ಸಾಮಾನ್ಯ ಮತ್ತು ಇದನ್ನು ಚೆನ್ನಾಗಿ ಸ್ವಚ್ಛಗೊಳಿಸದಿದ್ದರೆ ಅಲ್ಲಿ ಮೊಡವೆಗಳು ಏಳುತ್ತವೆ. ಮೃತ ಚರ್ಮಕೋಶಗಳು ಒಣಚರ್ಮಕ್ಕೂ ಕಾರಣವಾಗುತ್ತವೆ.

►ಕೈಗಳು

ಕೈಗಳು ದಿನವಿಡೀ ಹಲವಾರು ವಸ್ತುಗಳನ್ನು ಸ್ಪರ್ಶಿಸುತ್ತಿರುವುದರಿಂದ ಅವುಗಳನ್ನು ಸರಿಯಾಗಿ ತೊಳೆಯದಿದ್ದರೆ ಅನಾರೋಗ್ಯವನ್ನುಂಟು ಮಾಡುತ್ತವೆ. ಶೇ.95ರಷ್ಟು ಜನರಿಗೆ ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕು ಎನ್ನುವುದೇ ಗೊತ್ತಿರುವದಿಲ್ಲ ಎನ್ನುವುದನ್ನು ಅಧ್ಯಯನವೊಂದು ಬಹಿರಂಗಗೊಳಿಸಿದೆ. ಕನಿಷ್ಠ 20 ಸೆಕೆಂಡ್‌ಗಳಷ್ಟ್ಟಾದರೂ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

►ತೊಡೆಸಂದು

ಈ ಭಾಗದಲ್ಲಿ ಬೆವರುವಿಕೆ ಅತ್ಯಂತ ಸಾಮಾನ್ಯವಾಗಿದೆ. ಇದರಿಂದಾಗಿ ಜನನಾಂಗದ ಸುತ್ತಲಿನ ಚರ್ಮದಲ್ಲಿ ಬ್ಯಾಕ್ಟೀರಿಯಾಗಳು ಉಂಟಾಗುತ್ತವೆ. ಹೀಗಾಗಿ ಅತಿಯಾದ ಬೆವರನ್ನು ತಯಲು ಈ ಭಾಗವನ್ನು ಸರಿಯಾಗಿ ಸ್ವಚ್ಛಗೊಳಿಸಬೇಕಾಗುತ್ತದೆ.

►ಕಂಕುಳು

ಕುಂಕುಳುಗಳು ಹೆಚ್ಚಾಗಿ ಬೆವರುವುದರಿಂದ ವಾಸನೆಯನ್ನುಂಟು ಮಾಡುತ್ತವೆ. ಅಲ್ಲದೆ ಕಂಕುಳಲ್ಲಿ ಬೆಳೆಯುವ ರೋಮಗಳನ್ನು ತೆಗೆಯದಿದ್ದರೆ ಅವು ತೇವಗೊಂಡು ಬ್ಯಾಕ್ಟೀರಿಯಾಗಳನ್ನು ಆಕರ್ಷಿಸುತ್ತವೆ ಮತ್ತು ಕೆಟ್ಟ ವಾಸನೆ ಬರುತ್ತದೆ. ಜೊತೆಗೆ ಕಂಕುಳು ನೋಡಲೂ ಅಸಹ್ಯವಾಗಿರುತ್ತದೆ. ಸಾಬೂನಿನಿಂದ ಚೆನ್ನಾಗಿ ಸ್ವಚ್ಛಗೊಳಿಸುವ ಮತ್ತು ಡಿಯೋಡ್ರಂಟ್‌ಗಳನ್ನು ಬಳಸುವ ಮೂಲಕ ಕಂಕುಗಳಗಳಲ್ಲಿಯ ಕೆಟ್ಟ ವಾಸನೆಯನ್ನು ನಿವಾರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News