ಕುಷ್ಠರೋಗದ ಪ್ರಮುಖ ಲಕ್ಷಣಗಳು ಯಾವುವು?: ಇಲ್ಲಿದೆ ವಿವರ

Update: 2019-02-01 17:28 GMT

ಕುಷ್ಠರೋಗವು ಬ್ಯಾಕ್ಟೀರಿಯಾ ಸೋಂಕು ಆಗಿದ್ದು,ನಿಧಾನವಾಗಿ ಹೆಚ್ಚುತ್ತ ಹೋಗುವ ಈ ರೋಗವು ಚರ್ಮ ಮತ್ತು ನರಮಂಡಲಕ್ಕೆ ಹಾನಿಯನ್ನುಂಟು ಮಾಡುತ್ತದೆ. ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾಗಳು ಈ ಸೋಂಕನ್ನುಂಟು ಮಾಡುತ್ತವೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಕುಷ್ಠರೋಗವು ಶರೀರ ವಿರೂಪಗೊಳ್ಳುವಿಕೆ ಮತ್ತು ಅಂಗವೈಕಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ವಿಶ್ವಾದ್ಯಂತ ಪ್ರತಿವರ್ಷ ಎರಡು ಲಕ್ಷಕ್ಕೂ ಅಧಿಕ ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಅರ್ಧಕ್ಕೂ ಹೆಚ್ಚಿನ ಪ್ರಕರಣಗಳು ಭಾರತದಲ್ಲಿಯೇ ಪತ್ತೆಯಾಗುತ್ತಿವೆ. ಕುಷ್ಠರೋಗದ ಬ್ಯಾಕ್ಟೀರಿಯಾಗಳು ಶರೀರದ ನಿರೋಧಕ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಮೈಕ್ರೋಫೇಜ್ ಅಥವಾ ಬೃಹತ್ಕಣಗಳು ಮತ್ತು ನರಮಂಡಲ ವ್ಯವಸ್ಥೆಯನ್ನು ಬೆಂಬಲಿಸುವ ಶ್ವಾನ್ ಕೋಶಗಳ ಮೇಲೆ ದಾಳಿ ಮಾಡುತ್ತವೆ.

► ಕುಷ್ಠರೋಗದ ಲಕ್ಷಣಗಳು

ಕುಷ್ಠರೋಗವು ಆರಂಭಿಕ ಹಂತದಲ್ಲಿ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಕೈಗಳು, ತೋಳುಗಳು, ಪಾದಗಳು ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ, ಚರ್ಮದ ಮೇಲೆ ಗಾಯಗಳು ಉಂಟಾಗುವಿಕೆ ಮತ್ತು ವಾರ ಅಥವಾ ತಿಂಗಳು ಕಳೆದರೂ ಅವು ಮಾಯದಿರುವುದು, ಮಾಂಸಖಂಡಗಳ ನಿಶ್ಶಕ್ತಿ,ಕೈಬೆರಳುಗಳು ಮತ್ತು ಹೆಬ್ಬೆರಳು ವಕ್ರವಾಗುವಿಕೆ, ಮೂಗಿನಿಂದ ರಕ್ತಸ್ರಾವ, ಪಾದಗಳ ಹಿಮ್ಮಡಿಗಳಲ್ಲಿ ವ್ರಣಗಳು, ಕಣ್ಣಿನ ಸಮಸ್ಯೆ, ಸ್ಪರ್ಶ, ಉಷ್ಣತೆ ಮತ್ತು ನೋವಿಗೆ ಸಂವೇದನಾಶೀಲತೆ ಕಡಿಮೆಯಾಗುವುದು ಇವು ಸುಲಭದಲ್ಲಿ ಗುರುತಿಸಬಹುದಾದ ಕುಷ್ಠರೋಗದ ಕೆಲವು ಲಕ್ಷಣಗಳಾಗಿವೆ.

► ಕುಷ್ಠರೋಗದ ವಿಧಗಳು

1) ಟ್ಯುಬರ್‌ಕುಲಾಯ್ಡ ಲೆಪ್ರಸಿ: ಈ ವಿಧದ ಸೋಂಕಿಗೊಳಗಾಗಿರುವ ವ್ಯಕ್ತಿಯಲ್ಲಿ ಕೆಲವೇ ಗಾಯಗಳು ಕಾಣಿಸಿಕೊಳ್ಳುತ್ತವೆ. ಇದು ಈ ರೋಗದ ಸೌಮ್ಯರೂಪವಾಗಿದ್ದು,ನಿರೋಧಕ ವ್ಯವಸ್ಥೆಯು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.

2) ಲೆಪ್ರೊಮ್ಯಾಟಸ್ ಲೆಪ್ರೊಸಿ: ಈ ವಿಧದಲ್ಲಿ ರೋಗಿಯ ಚರ್ಮ,ನರಗಳು ಮತ್ತು ಇತರ ಅಂಗಗಳು ಪೀಡಿತವಾಗಿರುತ್ತವೆ. ಈ ರೋಗವು ಸುಲಭವಾಗಿ ಹರಡುತ್ತದೆ ಮತ್ತು ಶರೀರದ ರೋಗ ನಿರೋಧಕ ವ್ಯವಸ್ಥೆಯ ಕ್ಷಮತೆ ಕಡಿಮೆಯಾಗುತ್ತದೆ.

3) ಬಾರ್ಡರ್‌ಲೈನ್ ಲೆಪ್ರೊಸಿ: ಇದು ಮೇಲಿನ ಎರಡೂ ವಿಧಗಳ ಕುಷ್ಠರೋಗಗಳ ಲಕ್ಷಣಗಳನ್ನು ತೋರಿಸುತ್ತದೆ.

ಕುಷ್ಠರೋಗವನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ?

ಕುಷ್ಠರೋಗವನ್ನು ನಿರ್ಧರಿಸಲು ವೈದ್ಯರು ರೋಗಿಯನ್ನು ಹಲವಾರು ತಪಾಸಣೆಗಳು ಮತ್ತು ಪರೀಕ್ಷೆಗಳಿಗೆ ಒಳಪಡಿಸುತ್ತಾರೆ. ರೋಗದ ಲಕ್ಷಣಗಳನ್ನು ತಿಳಿದುಕೊಳ್ಳಲು ದೈಹಿಕ ತಪಾಸಣೆಯನ್ನು ನಡೆಸಲಾಗುತ್ತದೆ. ನಂತರ ಬಯಾಪ್ಸಿಯನ್ನು ನಡೆಸುತ್ತಾರೆ. ಅಂದರೆ ರೋಗಿಯ ಚರ್ಮ ಅಥವಾ ನರದ ಸಣ್ಣ ಭಾಗವನ್ನು ತೆಗೆದು ಅದನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಕುಷ್ಠರೋಗದ ವಿಧವನ್ನು ತಿಳಿದುಕೊಳ್ಳಲು ಲೆಪ್ರೊಮಿನ್ ಚರ್ಮ ಪರೀಕ್ಷೆಯನ್ನೂ ನಡೆಸಲಾಗುತ್ತದೆ.

►ಚಿಕಿತ್ಸೆ ಹೇಗೆ?

ಮೂರು ಔಷಧಿಗಳ ಮಿಶ್ರ ಡೋಸ್‌ನ್ನು ರೋಗಿಗೆ ಸೂಚಿಸಲಾಗುತ್ತದೆ. ಇದರೊಂದಿಗೆ ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಆ್ಯಂಟಿಬಯಾಟಿಕ್‌ಗಳನ್ನೂ ನೀಡಲಾಗುತ್ತದೆ. ಆ್ಯಸ್ಪಿರಿನ್, ಥಾಲಿಯೊಮೈಡ್‌ನಂತಹ ಉರಿಯೂತ ನಿರೋಧಕ ಔಷಧಿಗಳನ್ನೂ ನೀಡಲಾಗುತ್ತದೆ. ಚಿಕಿತ್ಸೆಯು ಸಾಮಾನ್ಯವಾಗಿ ಒಂದರಿಂದ ಎರಡು ವರ್ಷ ಮುಂದುವರಿಯುತ್ತದೆ.

►ಕುಷ್ಠರೋಗದ ಸುತ್ತಲಿನ ಕಳಂಕ

ಕುಷ್ಠರೋಗದೊಂದಿಗೆ ಬಲವಾದ ಕಳಂಕವು ನಂಟು ಹೊಂದಿದೆ. ರೋಗದ ಬಗ್ಗೆ ತಿಳುವಳಿಕೆ ಮತ್ತು ಅರಿವಿನ ಕೊರತೆಯಿಂದಾಗಿ ಸಾಮಾನ್ಯವಾಗಿ ಸಮಾಜವು ರೋಗಿಯನ್ನು ದೂರವೇ ಇಡುತ್ತದೆ. ಆದರೆ ಕುಷ್ಠರೋಗವು ಸಂಪೂರ್ಣವಾಗಿ ಸಾಂಕ್ರಾಮಿಕವಲ್ಲ. ಎರಡರಿಂದ ನಾಲ್ಕು ವಾರಗಳ ಚಿಕಿತ್ಸೆಯ ಬಳಿಕ ಈ ರೋಗವು ಸಾಂಕ್ರಾಮಿಕವಾಗಿರುವುದಿಲ್ಲ. ಕುಷ್ಠರೋಗಿಗಳನ್ನು ಸಮಾಜವು ಬಹಿಷ್ಕರಿಸುವುದರಿಂದ ಅವರ ಬದುಕು ದುರ್ಭರವಾಗುತ್ತದೆ.

► ಕುಷ್ಠರೋಗದಿಂದುಟಾಗುವ ಸಂಭಾವ್ಯ ಸಮಸ್ಯೆಗಳು

ಕುಷ್ಠರೋಗಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ಕೆಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿರೂಪಗೊಳ್ಳುವಿಕೆ,ಕೈಕಾಲುಗಳನ್ನು ಬಳಸುವ ಸಾಮರ್ಥ್ಯ ನಷ್ಟ,ದೀರ್ಘಕಾಲಿಕ ಮೂಗಿನಿಂದ ರಕ್ತಸ್ರಾವ,ಕಣ್ಣಿನ ಪಾಪೆಯಲ್ಲಿ ಉರಿಯೂತ,ಸಂಪೂರ್ಣ ಅಂಧತ್ವ,ಗ್ಲಾಕೋಮಾ,ಫಲವತ್ತತೆ ನಷ್ಟ,ನರಗಳಿಗೆ ಶಾಶ್ವತ ಹಾನಿ ಇವು ಇಂತಹ ಕೆಲವು ಸಮಸ್ಯೆಗಳಾಗಿವೆ.

► ಕುಷ್ಠರೋಗವನ್ನು ತಡೆಯುವುದು ಹೇಗೆ?

ಆರಂಭಿಕ ಹಂತದಲ್ಲಿಯೇ ರೋಗನಿರ್ಧಾರ ಮತ್ತು ಚಿಕಿತ್ಸೆ ಕುಷ್ಠರೋಗವನ್ನು ನಿಯಂತ್ರಿಸಲು ಅತ್ಯುತ್ತಮ ಮಾರ್ಗವಾಗಿದೆ. ಕುಷ್ಠರೋಗದ ಬಗ್ಗೆ ಸೂಕ್ತ ಅರಿವು ಮತ್ತು ಶಿಕ್ಷಣವನ್ನು ಒದಗಿಸುವುದು ತುಂಬ ಮುಖ್ಯವಾಗಿದೆ. ಸೋಂಕುಪೀಡಿತ ಅಥವಾ ಚಿಕಿತ್ಸೆ ಪಡೆಯದ ಕುಷ್ಠರೋಗಿಗಳೊಂದಿಗೆ ನಿಕಟ ಸಂಪರ್ಕ ಅಥವಾ ದೀರ್ಘಾಕಾಲಿಕ ಸಂಪರ್ಕವನ್ನು ಸಾಧ್ಯವಾದಷ್ಟು ನಿವಾರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News