ನಿಂತುಕೊಂಡು ನೀರನ್ನು ಯಾವತ್ತೂ ಕುಡಿಯಬೇಡಿ: ಸಣ್ಣ ತಪ್ಪಿನಿಂದ ಗಂಭೀರ ಅಪಾಯ
ನಮ್ಮ ಬಾಯಾರಿಕೆಯನ್ನು ತಣಿಸಲು ನೀರಿಗಿಂತ ಮಿಗಿಲಾದ ಪಾನೀಯ ಇನ್ನೊಂದಿಲ್ಲ. ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಅಷ್ಟೇ ಏಕೆ ದೇಹತೂಕವನ್ನು ಇಳಿಸಿಕೊಳ್ಳಲು ಸಹ ನಿಯಮಿತವಾಗಿ ನೀರನ್ನು ಕುಡಿಯುವುದನ್ನು ನಾವು ರೂಢಿಸಿಕೊಂಡರೆ ಸಾಕು. ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರನ್ನು ಸೇವಿಸಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.
ನಾವು ಹೊರಗಿನಿಂದ ಮನೆಗೆ ಮರಳಿದ ತಕ್ಷಣ ಆಯಾಸ ಪರಿಹರಿಸಿಕೊಳ್ಳಲು ನೀರನ್ನು ಕುಡಿಯುತ್ತೇವೆ, ಅದೂ ಹೆಚ್ಚಿನ ಸಲ ನಿಂತುಕೊಂಡೇ. ನಾವು ಕುಳಿತುಕೊಂಡು ನೀರು ಕುಡಿಯುತ್ತೇವೋ ಅಥವಾ ನಿಂತುಕೊಂಡೋ ಎನ್ನುವುದು ನಮ್ಮ ಗಮನದಲ್ಲಿರುವುದಿಲ್ಲ. ಆದರೆ ನಿಂತುಕೊಂಡು ನೀರು ಕುಡಿಯುವುದು ತಪ್ಪು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ನಾವು ನಿಂತುಕೊಂಡು ನೀರು ಕುಡಿದಾಗ ನಮ್ಮ ಶರೀರಕ್ಕೆ ಅಗತ್ಯ ಪೌಷ್ಟಿಕಾಂಶಗಳು ದೊರೆಯುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನೀವು ನಂಬಲೇಬೇಕಾದ ಕಟುಸತ್ಯವಾಗಿದೆ. ನೀರನ್ನು ಸರಿಯಾದ ವಿಧಾನದಲ್ಲಿ ಸೇವಿಸದಿದ್ದರೆ ಜೀವಜಲ ಎಂದೇ ಕರೆಯಲಾಗುವ ಅದು ನಿಮ್ಮ ಪಾಲಿಗೆ ಕೆಟ್ಟದ್ದಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುವ ಅಪಾಯಕ್ಕೆ ನಿಮ್ಮನ್ನು ತಳ್ಳುತ್ತದೆ.
ಸರಿಯಾದ ವಿಧಾನ ಅನುಸರಿಸಿ
ನೀರು ನಮ್ಮ ಶರೀರವನ್ನು ವಿಷವಸ್ತುಗಳಿಂದ ಮುಕ್ತಗೊಳಿಸುತ್ತದೆ ಮತ್ತು ಶರೀರವು ಎಲ್ಲ ಪೋಷಕಾಂಶಗಳು ಮತ್ತು ಖನಿಜಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ, ಆದರೆ ಅದಕ್ಕೂ ಸೂಕ್ತ ವಿಧಾನವಿದೆ. ನಮ್ಮ ಶರೀರವು ಶೇ.70ರಷ್ಟು ನೀರಿನಿಂದಲೇ ನಿರ್ಮಾಣಗೊಂಡಿದ್ದರೂ ಪ್ರತಿ ದಿನ ಅದು ಸಾಕಷ್ಟು ನೀರನ್ನು ಕಳೆದುಕೊಳ್ಳುತ್ತಿರುತ್ತದೆ. ಹೀಗಾಗಿ ಅದನ್ನು ಮರುಪೂರಣ ಮಾಡಿಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ ನೀರನ್ನು ಸರಿಯಾದ ರೀತಿಯಲ್ಲಿ ಸೇವಿಸುವುದು ಅಗತ್ಯವಾಗುತ್ತದೆ. ನಿಂತುಕೊಂಡು ನೀರು ಕುಡಿದರೆ ಈ ಉದ್ದೇಶ ಸಾಧನೆಯಾಗುವುದಿಲ್ಲ. ಅಚ್ಚರಿಯಾಗುತ್ತಿದೆಯೇ? ಕಾರಣವಿಲ್ಲಿದೆ...
ನಾವು ನಿಂತುಕೊಂಡು ನೀರನ್ನು ಕುಡಿದಾಗ ಅದು ಶರೀರ ವ್ಯವಸ್ಥೆಯ ಮೂಲಕ ನೇರವಾಗಿ ಹಾದು ಹೋಗುತ್ತದೆ ಮತ್ತು ಅದು ಕಾರ್ಯ ನಿರ್ವಹಿಸಬೇಕಾದ ಅಂಗಾಂಗಗಳನ್ನು ತಲುಪುವುದೇ ಇಲ್ಲ. ಹೀಗಾಗಿ ಹೊರಗೆ ಹೋಗಬೇಕಾದ ಮಾಲಿನ್ಯಗಳು ಮೂತ್ರಪಿಂಡಗಳು ಮತ್ತು ಮೂತ್ರಕೋಶದಲ್ಲಿ ಶೇಖರಗೊಳ್ಳುತ್ತವೆ.
ನರಮಂಡಲ ಒತ್ತಡಕ್ಕೊಳಗಾಗುತ್ತದೆ
ನಿಂತುಕೊಂಡು ನೀರು ಕುಡಿಯುವುದು ಶರೀರದ ಸಹಜ ಪ್ರಕೃತಿಗೆ ವಿರುದ್ಧವಾಗಿರುವುದರಿಂದ ನರಮಂಡಲವು ಒತ್ತಡಕ್ಕೊಳಗಾಗುತ್ತದೆ ಮತ್ತು ತಾನು ಅಪಾಯದಲ್ಲಿದ್ದೇನೆ ಎಂದು ಅದು ಗ್ರಹಿಸುವಂತಾಗುತ್ತದೆ, ಇದರಿಂದಾಗಿ ನೀರಿನಲ್ಲಿಯ ಪೌಷ್ಟಿಕಾಂಶಗಳು ವ್ಯರ್ಥಗೊಳ್ಳುತ್ತವೆ ಮತ್ತು ಶರೀರವು ಒತ್ತಡ ಅಥವಾ ಉದ್ವಿಗ್ನತೆಗೆ ಒಳಗಾಗುತ್ತದೆ.
ಬಾಯಾರಿಕೆ ನಿಜಕ್ಕೂ ತಣಿಯುವುದಿಲ್ಲ
ನಿಂತುಕೊಂಡು ನೀರು ಕುಡಿಯುವುದು ನಿಜಕ್ಕೂ ಕೆಟ್ಟದ್ದು, ಏಕೆಂದರೆ ಅದು ವಾಸ್ತವದಲ್ಲಿ ನಮ್ಮ ಬಾಯಾರಿಕೆಯನ್ನು ನೀಗಿಸುವುದೇ ಇಲ್ಲ. ನೀರು ಶರೀರದಲ್ಲಿ ನೇರವಾಗಿ ಕೆಳಗಿಳಿಯುವದರಿಂದ ಅಗತ್ಯ ಪೋಷಕಾಂಶಗಳು ಮತ್ತು ವಿಟಾಮಿನ್‌ಗಳು ಯಕೃತ್ತು ಮತ್ತು ಜೀರ್ಣಾಂಗಗಳನ್ನು ತಲುಪುವುದಿಲ್ಲ. ನಿಂತುಕೊಂಡು ನೀರು ಕುಡಿದಾಗ ಅದು ಶರೀರದಲ್ಲಿ ವೇಗವಾಗಿ ಸಾಗುತ್ತದೆ ಮತ್ತು ಶ್ವಾಸಕೋಶಗಳು ಹಾಗು ಹೃದಯದ ಕಾರ್ಯ ನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಆಮ್ಲಜನಕದ ಮಟ್ಟವೂ ವ್ಯತ್ಯಯಗೊಳ್ಳುತ್ತದೆ.
ಮೂಳೆಗಳಿಗೆ ಅಪಾಯ
ನೀರು ಕುಡಿಯುವ ರೀತಿಯು ಭಂಗಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ನೀರು ನೇರವಾಗಿ ಸಾಗುವುದರಿಂದ ಮೂಳೆಗಳು ಮತ್ತು ಸಂದುಗಳು ಪೋಷಕಾಂಶಗಳಿಂದ ವಂಚಿತಗೊಳ್ಳುತ್ತವೆ. ಇದು ಸಂದುನೋವು, ಮೂಳೆ ನಷ್ಟ ಮತ್ತು ನಿಶ್ಶಕ್ತಿಗೂ ಕಾರಣವಾಗಬಹುದು. ನೀರು ಶರೀರದಲ್ಲಿ ನಿಧಾನವಾಗಿ ಇಳಿಯುವುದು ಮುಖ್ಯ ಮತ್ತು ಇದಕ್ಕಾಗಿ ಕುಳಿತುಕೊಂಡು ನೀರನ್ನು ಕುಡಿಯುವುದು ಅಗತ್ಯ.
ಇಸ್ಲಾಂ ಧರ್ಮದಲ್ಲೂ ಈ ಬಗ್ಗೆ ಉಲ್ಲೇಖವಿದೆ
ಪ್ರವಾದಿ ಮುಹಮ್ಮದರು ನಿಂತುಕೊಂಡು ನೀರು ಕುಡಿಯುವುದನ್ನು ವಿರೋಧಿಸಿದ್ದರು, ಈ ಅಭ್ಯಾಸ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದರು ಎಂದು ಹಲವು ಹದೀಸ್ ಗಳಿಂದ ತಿಳಿದುಬರುತ್ತದೆ. ಹೀಗಾಗಿ ಮುಸ್ಲಿಮರಲ್ಲಿ ಬಹುತೇಕರು ಕುಳಿತುಕೊಂಡೇ ನೀರು ಕುಡಿಯುತ್ತಾರೆ.
ಆಯುರ್ವೇದವೂ ಇದನ್ನೇ ಹೇಳುತ್ತದೆ
ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಹೇಳಿರುವಂತೆ ನಾವು ಕುಳಿತುಕೊಂಡಾಗ ಮತ್ತು ವ್ಯಾಯಾಮ ಮಾಡಿದಾಗ ಗರಿಷ್ಠ ಆರೋಗ್ಯ ಲಾಭಗಳು ದೊರೆಯುವಂತೆ ನಮ್ಮ ಶರೀರವು ವಿನ್ಯಾಸಗೊಂಡಿದೆ. ಮನೆಯಲ್ಲಿ ಹಿರಿಯರಿದ್ದರೆ ಕುಳಿತುಕೊಂಡು ಊಟ ಮಾಡುವಂತೆ ಮತ್ತು ಕುಳಿತುಕೊಂಡು ನೀರು ಕುಡಿಯುವಂತೆ ಆಗಾಗ್ಗೆ ಬುದ್ಧಿ ಹೇಳುವುದು ನಿಮಗೂ ಗೊತ್ತಿರಬಹುದು.
ನೀವು ಕುಳಿತುಕೊಂಡು ಊಟ ಮಾಡುತ್ತೀರಿ. ಅದೇ ರೀತಿ ನೀರನ್ನೂ ಸಹ ಕುಳಿತುಕೊಂಡು ಸಾವಕಾಶವಾಗಿ ಕುಡಿಯಬೇಕು ಎನ್ನುವುದಕ್ಕೆ ಇವೆಲ್ಲ ಬಲವಾದ ಕಾರಣಗಳಾಗಿವೆ. ನಾವು ಕುಳಿತುಕೊಂಡಿದ್ದಾಗ ಮತ್ತು ನಮ್ಮ ಬೆನ್ನು ನೆಟ್ಟಗಿದ್ದಾಗ ಗರಿಷ್ಠ ಆರೋಗ್ಯ ಲಾಭಗಳು ದೊರೆಯುವಂತೆ ನಮ್ಮ ಶರೀರವು ವಿನ್ಯಾಸಗೊಂಡಿರುತ್ತದೆ. ನೀವು ಕುಳಿತುಕೊಂಡು ನೀರನ್ನು ಕುಡಿದಾಗ ಪೋಷಕಾಂಶಗಳು ಮಿದುಳನ್ನು ತಲುಪುತ್ತವೆ ಮತ್ತು ಅದರ ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಈ ರೀತಿಯಲ್ಲಿ ಅದು ಪಚನ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ ಮತ್ತು ನೀರನ್ನು ಸೇವಿಸಿದ ಬಳಿಕ ನಿಮಗೆ ಹೊಟ್ಟೆಯುಬ್ಬರಿಕೆ ಅನುಭವವಾಗುವುದಿಲ್ಲ. ಕುಳಿತುಕೊಂಡು ನೀರು ಕುಡಿಯುವುದರಿಂದ ಅದು ನಿಗದಿತ ಮಾರ್ಗದಲ್ಲಿ ಸಾಗುತ್ತದೆ ಮತ್ತು ಅಂಗಾಂಗಗಳಿಗೆ ಲಾಭಗಳು ದೊರೆಯುವಂತೆ ನೋಡಿಕೊಳ್ಳುತ್ತದೆ. ವಿಷವಸ್ತುಗಳು ಮತ್ತು ತ್ಯಾಜ್ಯಗಳು ಸುಗಮವಾಗಿ ಶರೀರದಿಂದ ಹೊರಗೆ ಹೋಗುತ್ತವೆ ಮತ್ತು ಒಟ್ಟಾರೆ ಆರೋಗ್ಯವು ಉತ್ತಮಗೊಳ್ಳುತ್ತದೆ.