ಮೂತ್ರಪಿಂಡ ಕ್ಯಾನ್ಸರ್‌ನ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸಬೇಡಿ

Update: 2019-02-10 13:41 GMT

ಮಾರಣಾಂತಿಕ ರೋಗವಾಗಿರುವ ಕ್ಯಾನ್ಸರ್‌ಗೆ ಶರೀರದ ಯಾವುದೇ ಅಂಗವೂ ತುತ್ತಾಗಬಹುದು. ಮೂತ್ರಪಿಂಡಗಳು ನಮ್ಮ ಶರೀರದ ಪ್ರಮುಖ ಅಂಗಗಳಲ್ಲೊಂದಾಗಿವೆ. ತ್ಯಾಜ್ಯ ವಿಸರ್ಜನೆ,ನೀರಿನ ಮಟ್ಟದ ಸಮತೋಲನ ಕಾಯ್ದುಕೊಳ್ಳುವ ಜೊತೆಗೆ ಆಮ್ಲದ ಮಟ್ಟ,ರಕ್ತದೊತ್ತಡ ಮತ್ತು ಕೆಂಪು ರಕ್ತಕಣಗಳನ್ನು ಕ್ರಮಬದ್ಧಗೊಳಿಸುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ಮೂತ್ರಪಿಂಡಗಳು ನಿರ್ವಹಿಸುತ್ತವೆ.

ಕ್ಯಾನ್ಸರ್ ಮೂತ್ರಪಿಂಡಗಳನ್ನೂ ಬಾಧಿಸುತ್ತದೆ ಮತ್ತು ಮೂತ್ರಪಿಂಡ ಕ್ಯಾನ್ಸರ್‌ನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಆದರೂ ಕ್ಯಾನ್ಸರ್ ಮೂತ್ರಪಿಂಡಗಳಿಗೆ ಲಗ್ಗೆಯಿಡುವಾಗ ಕೆಲವು ಸಂಕೇತಗಳನ್ನು ನೀಡುತ್ತದೆ. ಈ ಸಂಕೇತಗಳನ್ನು ಸಕಾಲದಲ್ಲಿ ಗುರುತಿಸುವುದು ಅತ್ಯಂತ ಮುಖ್ಯವಾಗಿದೆ. ಮೂತ್ರಪಿಂಡ ಕ್ಯಾನ್ಸರ್ ಯಾರನ್ನೂ ಬಾಧಿಸಬಹುದು,ಆದರೆ ಸಾಮಾನ್ಯವಾಗಿ ಮದ್ಯಪಾನಿಗಳು ಅಥವಾ ಧೂಮ್ರಪಾನಿಗಳು ಇದಕ್ಕೆ ಸುಲಭದ ತುತ್ತಾಗುತ್ತಾರೆ. ಮೂತ್ರಪಿಂಡ ಕ್ಯಾನ್ಸರ್‌ನ ಲಕ್ಷಣಗಳ ಕುರಿತು ಮಾಹಿತಿ ಇಲ್ಲಿದೆ.....

►ಕೆಳಬೆನ್ನಿನಲ್ಲಿ ನೋವು

ಕೆಳಬೆನ್ನಿನಲ್ಲಿ ನೋವನ್ನು ಸಾಮಾನ್ಯವಾಗಿ ಹೆಚ್ಚಿನವರು ಇದೊಂದು ಮಾಮೂಲು ನೋವು ಎಂದುಕೊಂಡು ಕಡೆಗಣಿಸುತ್ತಾರೆ,ಆದರೆ ಇದು ಮೂತ್ರಪಿಂಡ ಕ್ಯಾನ್ಸರ್‌ನ ಅಷ್ಟೊಂದು ಪರಿಚಿತವಲ್ಲದ ಲಕ್ಷಣವೂ ಆಗಿದೆ. ಹೆಚ್ಚಿನವರಲ್ಲಿ ಕ್ಯಾನ್ಸರ್ ರೋಗವು ಮೂತ್ರಪಿಂಡಗಳಿಗೆ ದಾಳಿಯಿಟ್ಟ ಮೇಲೆಯೇ ಕೆಳಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ತೀವ್ರವಾಗಿರುತ್ತದೆ ಮತ್ತು ರೋಗಿಗೆ ತುಂಬ ತೊಂದರೆಯನ್ನುಂಟು ಮಾಡುತ್ತದೆ.

►ಮೂತ್ರದಲ್ಲಿ ರಕ್ತ

 ಮೂತ್ರದಲ್ಲಿ ರಕ್ತ ಹೋಗುವುದು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳ ಮೊದಲ ಲಕ್ಷಣವಾಗಿದೆ ಮತ್ತು ಅದು ಮೂತ್ರಪಿಂಡ ಕ್ಯಾನ್ಸರ್‌ನ ಲಕ್ಷಣವೂ ಆಗಿದೆ. ಕೆಲವೊಮ್ಮೆ ರಕ್ತದ ಪ್ರಮಾಣ ಎಷ್ಟು ಕಡಿಮೆಯಿರುತ್ತದೆ ಎಂದರೆ ಅದನ್ನು ಮೂತ್ರ ಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಬಹುದು. ವ್ಯಕ್ತಿಯ ಮೂತ್ರದಲ್ಲಿ ರಕ್ತ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

►ರಕ್ತಹೀನತೆ

ಮೂತ್ರಪಿಂಡಗಳು ಕೆಂಪು ರಕ್ತಕಣಗಳ ಉತ್ಪಾದನೆಯನ್ನೂ ನಿಯಂತ್ರಿಸುತ್ತವೆ. ಮೂತ್ರಪಿಂಡ ಕ್ಯಾನ್ಸರ್ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಇದು ಅನಿಮಿಯಾ ಅಥವಾ ರಕ್ತಹೀನತೆಗೆ ಕಾರಣವಾಗುತ್ತದೆ. ರಕ್ತಹೀನತೆಯಿಂದ ರೋಗಿಯು ದಿನದ ಹೆಚ್ಚಿನ ಸಮಯ ಬಳಲಿಕೆಯನ್ನು ಅನುಭವಿಸುತ್ತಿರುತ್ತಾನೆ.

►ದೇಹತೂಕ ಇಳಿಕೆ

ಕಾರಣವಿಲ್ಲದೆ ಅಥವಾ ತೂಕ ಇಳಿಸಲು ಯಾವುದೇ ಪ್ರಯತ್ನ ಮಾಡದಿದ್ದರೂ ಶರೀರದ ತೂಕ ಇಳಿಯುತ್ತಿದ್ದರೆ ಅದು ಮೂತ್ರಪಿಂಡ ಕ್ಯಾನ್ಸರ್‌ನ್ನು ಸೂಚಿಸಬಹುದು. ಗಡ್ಡೆಯು ಬೆಳೆಯತೊಡಗುತ್ತಿದ್ದಂತೆ ವ್ಯಕ್ತಿಯಲ್ಲಿ ಹಸಿವು ಕಡಿಮೆಯಾಗಬಹುದು ಮತ್ತು ಆತ ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾಗಬಹುದು. ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಮೂತ್ರಪಿಂಡಗಳ ಅನಾರೋಗ್ಯವೂ ಶರೀರದ ತೂಕ ಕಡಿಮೆಯಾಗುವಂತೆ ಮಾಡುತ್ತದೆ.

►ಉದರದ ಸುತ್ತ ಗಂಟುಗಳು

ಉದರದ ಸುತ್ತ ಅಥವಾ ಮೂತ್ರಪಿಂಡದ ಬಳಿ ಗಂಟು ಕಾಣಿಸಿಕೊಂಡರೆ ಅದು ಮೂತ್ರಪಿಂಡ ಕ್ಯಾನ್ಸರ್‌ನ ಲಕ್ಷಣವಾಗಬಲ್ಲುದು. ಸಾಮಾನ್ಯವಾಗಿ ಆರಂಭಿಕ ಹಂತದಲ್ಲಿ ಈ ಗಂಟು ಗಟ್ಟಿಯಾಗಿರುತ್ತದೆ. ವೈದ್ಯರು ಸೂಕ್ತ ತಪಾಸಣೆಯಿಂದ ಗಂಟಿನ ನಿಖರ ಕಾರಣವನ್ನು ಪತ್ತೆ ಹಚ್ಚುತ್ತಾರೆ.

ರೋಗನಿರ್ಣಯ:

ವೈದ್ಯರು ಮೊದಲು ಮೂತ್ರಪಿಂಡ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳನ್ನು ಪರೀಕ್ಷಿಸುತ್ತಾರೆ. ಮೂತ್ರ ಮತ್ತು ರಕ್ತ ಪರೀಕ್ಷೆ,ಅಲ್ಟ್ರಾಸೌಂಡ್,ಸಿಟಿ ಸ್ಕಾನ್ ಮತ್ತು ಎಂಆರ್‌ಐನಂತಹ ಕೆಲವು ತಪಾಸಣೆಗಳನ್ನು ಅವರು ಸೂಚಿಸಬಹುದು. ಇದರ ಜೊತೆಗೆ ರೋಗಿಯು ಬಯಾಪ್ಸಿಗೊಳಪಡಬೇಕಾಗುತ್ತದೆ. ಇದರಲ್ಲಿ ಮೂತ್ರಪಿಂಡದ ಸಣ್ಣ ಅಂಗಾಂಶವನ್ನು ತೆಗೆದುಕೊಂಡು ಪರೀಕ್ಷೆಯನ್ನು ನಡೆಸುವುದರಿಂದ ಕ್ಯಾನ್ಸರ್‌ನ ಬಗ್ಗೆ ನಿಖರವಾದ ಮಾಹಿತಿ ದೊರೆಯುತ್ತದೆ.

ಚಿಕಿತ್ಸೆ:

ಮೂತ್ರಪಿಂಡ ಕ್ಯಾನ್ಸರ್‌ಗೆ ಸಾಮಾನ್ಯವಾಗಿ ವಿಕಿರಣ,ಕಿಮೊಥೆರಪಿ ಮತ್ತು ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಮೊದಲು ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ವೈದ್ಯರು ಬಳಿಕ ಮೂತ್ರಪಿಂಡದ ಸಮೀಪದ ಇತರ ಅಂಗಗಳಿಗೂ ರೋಗವು ಹರಡಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಾರೆ. ನಂತರವೇ ಚಿಕಿತ್ಸೆ ಆರಂಭವಾಗುತ್ತದೆ. ಮೂತ್ರಪಿಂಡ ಕ್ಯಾನ್ಸರ್‌ನ್ನು ಸೂಚಿಸುವ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಅದರ ಬೆಳವಣಿಗೆಯನ್ನು ತಡೆಯಲು ನೆರವಾಗುತ್ತದೆ. ಮೂತ್ರಪಿಂಡ ಕ್ಯಾನ್ಸರ್ ಮಾನವ ಶರೀರದ ವಿವಿಧ ಪ್ರಮುಖ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಕ್ಯಾನ್ಸರ್ ಬೆಳವಣಿಗೆಯನ್ನು ಸಾಧ್ಯವಿದ್ದಷ್ಟು ಶೀಘ್ರ ನಿಯಂತ್ರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News