ಎಚ್ಚರ…ನಿಮ್ಮ ಈ ಸಾಮಾನ್ಯ ಅಭ್ಯಾಸಗಳು ಮೆದುಳಿಗೆ ಗಂಭೀರ ಹಾನಿ ಮಾಡಬಹುದು

Update: 2019-02-22 13:37 GMT

ಮಿದುಳು ನಮ್ಮ ಶರೀರದಲ್ಲಿನ ಅತ್ಯಂತ ಮುಖ್ಯ ಅಂಗವಾಗಿದೆ. ಈ ಜಗತ್ತಿನಲ್ಲಿ ನಾವು ಕಣ್ಣು ತೆರೆಯುವ ಮುನ್ನವೇ ನಮ್ಮ ಮಿದುಳು ತಾಯಿಯ ಗರ್ಭದಲ್ಲಿ ತನ್ನ ಕಾರ್ಯವನ್ನು ಆರಂಭಿಸಿರುತ್ತದೆ. ಮಿದುಳು ಆರೋಗ್ಯಕರವಾಗಿರುವುದು ತುಂಬ ಮುಖ್ಯವಾಗಿದೆ.

  ತಡರಾತ್ರಿ ಪಾರ್ಟಿಗಳು,ಪುರುಸೊತ್ತಿಲ್ಲದ ಕೆಲಸದ ಒತ್ತಡ,ಜಂಕ್ ಫುಡ್ ಸೇವನೆ ಮತ್ತು ಇತರ ಅನಾರೋಗ್ಯಕರ ಅಭ್ಯಾಸಗಳು.....ಇವೆಲ್ಲ ಮಿದುಳಿಗೆ ಬೆದರಿಕೆಗಳನ್ನೊಡ್ಡುತ್ತವೆ. ಒತ್ತಡ ಮತ್ತು ಗಡಿಬಿಡಿಗಳಿಂದ ಕೂಡಿದ ಬದುಕಿನಲ್ಲಿ ನಮ್ಮ ಕೆಲವು ಅಭ್ಯಾಸಗಳಿಂದಾಗಿ ಹಲವಾರು ಅನಾರೋಗ್ಯಗಳಿಗೆ ನಮಗೆ ಗೊತ್ತಿಲ್ಲದೆ ನಾವೇ ಆಹ್ವಾನ ನೀಡುತ್ತಿರುತ್ತೇವೆ. ಮಿದುಳಿಗೆ ಹಾನಿಯನ್ನುಂಟು ಮಾಡುವ ಅಂತಹ ಕೆಲವು ಅಭ್ಯಾಸಗಳಿಲ್ಲಿವೆ.......

►ಧೂಮ್ರಪಾನ

 ಧೂಮ್ರಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು,ಆದರೂ ಜನರು ಧೂಮ್ರಪಾನವನ್ನು ಮಾಡುತ್ತಾರೆ. ಧೂಮ್ರಪಾನವು ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ರಕ್ತದಲ್ಲಿಯ ಕೊಬ್ಬನ್ನು ಹೆಚ್ಚಿಸುವ ಮೂಲಕ ಮಿದುಳಿನಲ್ಲಿ ಅನಾರೋಗ್ಯಕರ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ಇದರಿಂದಾಗಿ ರಕ್ತನಾಳಗಳು ಸಂಕುಚಿತಗೊಂಡು ಮಿದುಳಿಗೆ ರಕ್ತಪೂರೈಕೆಗೆ ತಡೆಯುಂಟಾಗುತ್ತದೆ. ಇದು ಮಿದುಳಿನ ಆಘಾತಕ್ಕೂ ಕಾರಣವಾಗುತ್ತದೆ.

►ಅತಿಯಾದ ಸಕ್ಕರೆ ಸೇವನೆ

ಅತಿಯಾದ ಪ್ರಮಾಣದಲ್ಲಿ ಸಕ್ಕರೆ ಸೇವನೆಯು ಮಿದುಳಿಗೆ ಹಾನಿಯನ್ನುಂಟು ಮಾಡಬಲ್ಲುದು. ರಕ್ತಪ್ರವಾಹದಲ್ಲಿನ ಕೊಂಚವೇ ಕೊಂಚ ಸಕ್ಕರೆಯೂ ಮಿದುಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಗ್ರಹಣಶಕ್ತಿ ಕುಂಠಿತಗೊಳ್ಳಲು ಹಾಗೂ ಜ್ಞಾಪಕ ಶಕ್ತಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಅಧ್ಯಯನವೊಂದು ಬೆಟ್ಟು ಮಾಡಿದೆ. ಅಲ್ಲದೆ ಹೆಚ್ಚಿನ ಸಕ್ಕರೆ ಬಳಕೆಯು ಖಿನ್ನತೆಯೊಂದಿಗೆ ನಂಟು ಹೊಂದಿದೆ ಎನ್ನುವುದನ್ನೂ ಅಧ್ಯಯನಗಳು ಬೆಳಕಿಗೆ ತಂದಿವೆ.

►ಅತಿಯಾದ ಆಹಾರ ಸೇವನೆ

 ಅತಿಯಾದ ಆಹಾರ ಸೇವನೆಯು ಹೊಟ್ಟೆಯನ್ನು ಬೆಳೆಸುವುದು ಮಾತ್ರವಲ್ಲ,ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅತಿಯಾಗಿ ತಿನ್ನುವುದರಿಂದ ಸ್ನಿಗ್ಧ ಅಂಗಾಂಶಗಳಲ್ಲಿ ಕೊಬ್ಬಿನ ವಿಭಜನೆಯನ್ನು ನಿಗ್ರಹಿಸುವ ಮಿದುಳು ಇನ್ಸುಲಿನ್‌ನ ಸಾಮರ್ಥ್ಯವನ್ನು ಕುಂದಿಸುತ್ತದೆ ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಅತಿಯಾದ ಆಹಾರ ಸೇವನೆಯು ಮಿದುಳಿನ ರಕ್ತನಾಳಗಳನ್ನು ಕಠಿಣಗೊಳಿಸುತ್ತದೆ ಮತ್ತು ಮಿದುಳಿನ ತೊಂದರೆಗೆ ಕಾರಣವಾಗುತ್ತದೆ. ಅತಿಯಾದ ಆಹಾರ ಸೇವನೆಯು ಒಳ್ಳೆಯದಲ್ಲ,ಅದು ಹೃದ್ರೋಗ,ಬೊಜ್ಜಿನಂತಹ ಇತರ ಕಾಯಿಲೆಗಳ ಅಪಾಯಗಳನ್ನು ಹೆಚ್ಚಿಸುತ್ತದೆ.

►ಮಿದುಳಿಗೆ ಅತಿಯಾದ ಕೆಲಸ

ನೀವು ಗಂಟೆಗಟ್ಟಲೆ ಕೆಲಸ ಮಾಡುವುದು ನಿಮ್ಮ ಕಂಪನಿಯ ಪಾಲಿಗೆ ಒಳ್ಳೆಯದು, ಆದರೆ ಖಂಡಿತವಾಗಿಯೂ ಅದು ನಿಮ್ಮ ಮಿದುಳಿಗೆ ಒಳ್ಳೆಯದಲ್ಲ. ಮಿದುಳನ್ನು ಅತಿಯಾಗಿ ದುಡಿಸುವುದರಿಂದ ವೃದ್ಧಾಪ್ಯ ಸಂಬಂಧಿತ ಮರೆವಿಗೆ ಕಾರಣವಾಗಬಹುದು ಮತ್ತು ಆಲೋಚನಾ ಶಕ್ತಿ ಕುಂಠಿತಗೊಳ್ಳಬಹುದು. ನೀವು ಅನಾರೋಗ್ಯದಿಂದಿದ್ದಾಗ ಅತಿಯಾದ ಕೆಲಸವನ್ನು ಮಾಡಕೂಡದು,ಹಾಗೆ ಮಾಡುವುದರಿಂದ ಮಿದುಳಿನ ಸಾಮಾನ್ಯ ಕಾರ್ಯನಿರ್ವಹಣೆಗೆ ಹಾನಿಯುಂಟಾಗುತ್ತದೆ.

►ಮಲಗಿದಾಗ ತಲೆ ಮುಚ್ಚಿಕೊಳ್ಳುವುದು

ಹೆಚ್ಚಿನ ಜನರು ನಿದ್ರಿಸಿದಾಗ,ವಿಶೇಷವಾಗಿ ಚಳಿಗಾಲದಲ್ಲಿ ತಲೆಯನ್ನು ದಿಂಬಿನಿಂದ ಮುಚ್ಚಿಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಪೈಕಿ ನೀವೂ ಒಬ್ಬರಾಗಿದ್ದರೆ ಈಗಲೇ ಈ ಅಭ್ಯಾಸವನ್ನು ನಿಲ್ಲಿಸಿ. ಹೀಗೆ ಮಾಡುವುದರಿಂದ ಆಮ್ಲಜನಕಕ್ಕೆ ತಡೆಯುಂಟಾಗುತ್ತದೆ ಮತ್ತು ಮಿದುಳಿಗೆ ಹಾನಿಯುಂಟಾಗುತ್ತದೆ. ತಲೆಯನ್ನು ಮುಚ್ಚಿಕೊಳ್ಳುವುದರಿಂದ ಮುಖದ ಸುತ್ತ ಕಾರ್ಬನ್ ಡೈಯಾಕ್ಸೈಡ್ ಸಂಗ್ರಹಗೊಳ್ಳುತ್ತದೆ ಮತ್ತು ನರಗಳ ಹಾನಿಗೆ ಕಾರಣವಾಗುತ್ತದೆ. ಇದನ್ನು ಅಂತಿಮವಾಗಿ ಖಚಿತಪಡಿಸಲು ಇನ್ನಷ್ಟು ಸಂಶೋಧನೆಗಳು ಅಗತ್ಯವಾಗಿವೆಯಾದರೂ ಮಿದುಳಿಗೆ ಹಾನಿಯನ್ನು ತಡೆಯಲು ಈ ಅಭ್ಯಾಸವನ್ನು ನಿಲ್ಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News