ಕ್ಯಾನ್ಸರನ್ನೂ ತಡೆಯಬಲ್ಲ ಮೂಲಂಗಿಯ ಆರೋಗ್ಯಲಾಭಗಳ ಬಗ್ಗೆ ತಿಳಿದುಕೊಳ್ಳಿ

Update: 2019-05-09 15:55 GMT

ಭಾರತೀಯ ಅಡುಗೆಮನೆಗಳಲ್ಲಿ ಧಾರಾಳವಾಗಿ ಬಳಕೆಯಾಗುವ ಮೂಲಂಗಿ ಹಲವಾರು ಪೋಷಕಾಂಶಗಳೊಂದಿಗೆ ಅತ್ಯಂತ ಆರೋಗ್ಯಕರ ತರಕಾರಿಯಾಗಿದೆ. ಶತಮಾನಗಳಿಂದಲೂ ಅದು ಉರಿಯೂತ,ಗಂಟಲಿನ ಕಿರಿಕಿರಿ,ಜ್ವರ ಮತ್ತು ಪಿತ್ತದೋಷಗಳಂತಹ ಹಲವಾರು ಸಮಸ್ಯೆಗಳ ಚಿಕಿತ್ಸೆಗಾಗಿ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನಿ ಔಷಧಿ ಪದ್ಧತಿಯಲ್ಲಿ ಬಳಕೆಯಾಗುತ್ತಿದೆ. ಅದು ನೀಡುವ ಹಲವಾರು ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ.....

ದೇಹತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ

 ಮೂಲಂಗಿಯಲ್ಲಿ ಸಮೃದ್ಧವಾಗಿರುವ ನಾರು ಸಂಪೂರ್ಣ ಊಟದ ಅನುಭವ ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ನಿವಾರಿಸಲು ನೆರವಾಗುತ್ತದೆ,ಇದರಿಂದಾಗಿ ದೇಹದ ತೂಕವನ್ನು ಇಳಿಸಿಕೊಳ್ಳುವುದು ಸುಲಭವಾಗುತ್ತದೆ. ನಾರು ಕರುಳಿನ ಚಲನವಲನಕ್ಕೂ ನೆರವಾಗುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮೂಲಂಗಿಯಲ್ಲಿರುವ ವಿಟಾಮಿನ್ ಸಿ ಶರೀರವನ್ನು ಫ್ರೀ ರ್ಯಾಡಿಕಲ್‌ಗಳಿಂದ ರಕ್ಷಿಸುತ್ತದೆ ಮತ್ತು ವಾತಾವರಣದಲ್ಲಿಯ ವಿಷಪದಾರ್ಥಗಳಿಂದ ಜೀವಕೋಶಗಳಿಗೆ ಹಾನಿಯನ್ನು ತಪ್ಪಿಸುತ್ತದೆ. ಚರ್ಮ ಮತ್ತು ರಕ್ತನಾಳಗಳ ಆರೋಗ್ಯ ಕಾಯ್ದುಕೊಳ್ಳಲು ನೆರವಾಗುವ ಕೊಲಾಜೆನ್ ಉತ್ಪಾದನೆಯಲ್ಲಿಯೂ ವಿಟಾಮಿನ್ ಸಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕ್ಯಾನ್ಸರ್‌ನ್ನು ತಡೆಯುತ್ತದೆ

ಮೂಲಂಗಿಯಲ್ಲಿರುವ ಆ್ಯಂಥೊಸಿಯಾನಿನ್‌ಗಳು ಮತ್ತು ಇತರ ವಿಟಾಮಿನ್‌ಗಳು ಕ್ಯಾನ್ಸರ್ ನಿಗ್ರಹ ಗುಣಗಳನ್ನು ಹೊಂದಿವೆ. ಮೂಲಂಗಿಯ ರಸದಲ್ಲಿರುವ ಐಸೊಥಾಯೊಸೈನೇಟ್‌ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತವೆ ಎನ್ನುವುದನ್ನು ಅಧ್ಯಯನವೊಂದು ಬೆಳಕಿಗೆ ತಂದಿದೆ. ಇವು ಕ್ಯಾನ್ಸರ್‌ಗೆ ಕಾರಣವಾಗುವ ವಸ್ತುಗಳನ್ನು ಶರೀರದಿಂದ ಹೊರಕ್ಕೆ ಹಾಕುತ್ತವೆ ಮತ್ತು ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತವೆ.

ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ

 ಮೂಲಂಗಿಯಲ್ಲಿರುವ ಆ್ಯಂಥೊಸಿಯಾನಿನ್ ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು, ಹೃದಯನಾಳೀಯ ರೋಗಗಳಿಗೆ ತುತ್ತಾಗುವ ಅಪಾಯವನ್ನು ತಗ್ಗಿಸುತ್ತದೆ. ಪಾರ್ಶ್ವವಾಯುವಿಗೆ ಪ್ರಮುಖ ಕಾರಣವಾಗಿರುವ ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್) ಮಟ್ಟವನ್ನು ಕಡಿಮೆ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮೂಲಂಗಿಯು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ್ನು ಹೊಂದಿರುವುದರಿಂದ ಅದನ್ನು ಸೇವಿಸುವುದರಿಂದ ರಕ್ತದಲ್ಲ್ಲಿಯ ಸಕ್ಕರೆ ಮಟ್ಟದಲ್ಲಿ ವ್ಯತ್ಯಯವಾಗುವುದಿಲ್ಲ. ಮೂಲಂಗಿ ರಸದ ಸೇವನೆಯು ಮಧುಮೇಹಿಗಳಲ್ಲಿ ರಕ್ತದಲ್ಲಿಯ ಗ್ಲುಕೋಸ್ ಮಟ್ಟದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಅದನ್ನು ನಿಯಂತ್ರಿಸಲು ನೆರವಾಗುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಮೂಲಂಗಿಯಲ್ಲಿ ಹೇರಳವಾಗಿರುವ ಪೊಟ್ಯಾಷಿಯಂ ಅಧಿಕ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತದೆ. ಪೊಟ್ಯಾಷಿಯಂ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದ ಸುಗಮ ಹರಿವನ್ನು ಹೆಚ್ಚಿಸುತ್ತದೆ. ಅದು ಸಂಕುಚಿತಗೊಂಡಿರುವ ರಕ್ತನಾಳಗಳನ್ನೂ ಹಿಗ್ಗಿಸುತ್ತದೆ ಮತ್ತು ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ.

ಕಿಣ್ವ ಸೋಂಕುಗಳನ್ನು ತಡೆಯುತ್ತದೆ

ಮೂಲಂಗಿಯು ಶಿಲೀಂಧ್ರ ನಿರೋಧಕ ಗುಣಗಳನ್ನು ಹೊಂದಿದೆ. ಅದರಲ್ಲಿರುವ ಆರ್‌ಎಸ್‌ಎಎಫ್‌ಪಿ2 ಎಂಬ ಶಿಲೀಂಧ್ರ ನಿಗ್ರಹ ಪ್ರೋಟಿನ್ ಬಾಯಿಯ ಶಿಲೀಂಧ್ರ ಸೋಂಕು, ಮಹಿಳೆಯರಲ್ಲಿ ಯೋನಿನಾಳದ ಉರಿಯೂತ ಇತ್ಯಾದಿಗಳಿಗೆ ಪ್ರಮುಖ ಕಾರಣವಾಗುವ ಕ್ಯಾಂಡಿಡಾ ಅಲ್ಬಿಕನ್ ಎಂಬ ಕಿಣ್ವದ ಜೀವಕೋಶಗಳನ್ನು ಕೊಲ್ಲುತ್ತದೆ ಎಂದು ಅಧ್ಯಯನವು ಸಿದ್ಧಗೊಳಿಸಿದೆ.

ಯಕೃತ್ತನ್ನು ವಿಷಮುಕ್ತಗೊಳಿಸುತ್ತದೆ

ಮೂಲಂಗಿಯ ರಸವು ಯಕೃತ್ತನ್ನು ವಿಷವಸ್ತುಗಳಿಂದ ಮುಕ್ತಗೊಳಿಸುತ್ತದೆ. ಅದು ಕೊಲೆಸ್ಟ್ರಾಲ್ ಪಿತ್ತಕಲ್ಲುಗಳನ್ನು ತಡೆಯುತ್ತದೆ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ತಗ್ಗಿಸುತ್ತದೆ.

ಜೀರ್ಣಾಂಗದ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ

ಮೂಲಂಗಿ ಮತ್ತು ಅದರ ಎಲೆಗಳ ರಸದ ಸೇವನೆಯು ಜಠರದ ಅಂಗಾಂಶಗಳಿಗೆ ರಕ್ಷಣೆ ನೀಡುವ ಮತ್ತು ಲೋಳೆಪೊರೆಯ ತಡೆಗೋಡೆಯನ್ನು ಬಲಗೊಳಿಸುವ ಮೂಲಕ ಹೊಟ್ಟೆಹುಣ್ಣುಗಳು ಉಂಟಾಗುವುದನ್ನು ತಡೆಯಲು ನೆರವಾಗುತ್ತದೆ. ಮೂಲಂಗಿ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ.

ನಿರ್ಜಲೀಕರಣವನ್ನು ತಡೆಯುತ್ತದೆ

ಮೂಲಂಗಿಯು ಶೇ.95.27 ನೀರನ್ನು ಹೊಂದಿದ್ದು,ಇದು ಬೇಸಿಗೆ ದಿನಗಳಲ್ಲಿ ನಮ್ಮ ಶರೀರವನ್ನು ತಂಪಾಗಿರಿಸಲು ನೆರವಾಗುತ್ತದೆ. ಮೂಲಂಗಿಯನ್ನು ಸೇವಿಸುವುದರಿಂದ ನಿರ್ಜಲೀಕರಣದ ಅಪಾಯವು ದೂರವಾಗುತ್ತದೆ,ಅದು ಮಲಬದ್ಧತೆಯನ್ನು ತಡೆಯಲೂ ನೆರವಾಗುತ್ತದೆ.

ಚರ್ಮ ಮತ್ತು ತಲೆಗೂದಲ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೂಲಂಗಿಯಲ್ಲಿರುವ ವಿಟಾಮಿನ್ ಸಿ,ಸತುವು ಮತ್ತು ರಂಜಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ನಮ್ಮ ಚರ್ಮವನ್ನು ಆರೋಗ್ಯಯುತವಾಗಿರಿಸುತ್ತವೆ. ಶುಷ್ಕತೆ,ಮೊಡವೆ ಮತ್ತು ಚರ್ಮದ ಮೇಲೆ ದದ್ದುಗಳುಂಟಾಗುವುದನ್ನು ಮೂಲಂಗಿಯು ತಡೆಯುತ್ತದೆ. ಸ್ವಚ್ಛ ಚರ್ಮಕ್ಕಾಗಿ ಮೂಲಂಗಿಯ ಫೇಸ್ ಮಾಸ್ಕ್‌ನ್ನು ಬಳಸಬಹುದು. ಮೂಲಂಗಿಯು ಕೂದಲುಗಳ ಬೇರನ್ನು ಸದೃಢಗೊಳಿಸುವ ಮೂಲಕ ಅವು ಉದುರುವುದನ್ನು ತಡೆಯುತ್ತದೆ ಮತ್ತು ತಲೆಹೊಟ್ಟನ್ನು ನಿವಾರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News