ಅಸ್ಪಶ್ಯರಿಗೇ ಸ್ವಾತಂತ್ರ್ಯದ ಬಗ್ಗೆ ಹೆಚ್ಚು ಆಸ್ಥೆಯಿದೆ

Update: 2019-05-09 18:31 GMT

ಬಾಬಾಸಾಹೇಬರು ಮೊದಲ ಬಾರಿಗೆ ದಿನಾಂಕ 20, ಸೆಪ್ಟ್ಟಂಬರ್ 1944ರಲ್ಲಿ ನಿಜಾಮನ ಹೈದರಾಬಾದ್ ಸಂಸ್ಥಾನಕ್ಕೆ ಭೇಟಿ ನೀಡಿದರು. ಅದನ್ನು ಅವಿಸ್ಮರಣೀಯ ಎನ್ನಬೇಕು. ಅವರು ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದರು. ಮುಂಬೈ ಕಾರ್ಯಕ್ರಮ ಮುಗಿಸಿ ಹೈದರಾಬಾದಿಗೆ ತೆರಳಿದರು. ಆಗ ಎರಡು ಕಡೆಗಳಲ್ಲಿ ಅವರಿಗೆ ಅಪೂರ್ವ ಸ್ವಾಗತ ದೊರಕಿತು. ಒಂದು ನಾಮಪಲ್ಲಿ, ಎರಡನೆಯದು ಸಿಕಂದರಾಬಾದ್ ಅಲ್ಲಿಂದ ಹೈದರಾಬಾದ್. ಬೆಗಮ್ ಪೇಡ ರೈಲು ನಿಲ್ದಾಣದಲ್ಲಿ, ಬಾಬಾಸಾಹೇಬ ಅಂಬೇಡ್ಕರರನ್ನು ಸ್ವಾಗತಿಸಲು ಹೈದರಾಬಾದ್ ಸಂಸ್ಥಾನದ ಫೆಡರೇಶನ್ನಿನ ಅಧ್ಯಕ್ಷರಾದ ಜೆ. ಸುಬ್ಬಯ್ಯ ಸೌ. ಸುಬ್ಬಯ್ಯ, ಶ್ರೀಮತಿ ರಾಜಮಣಿದೇವಿ, ಮಾದ್ರೆ ಮುಂತಾದ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

ನಾಮಪಲ್ಲಿಯ ಅಪೂರ್ವ ಸ್ವಾಗತ ಕಾರ್ಯಕ್ರಮದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿತ್ತು. ಹೈದರಾಬಾದ್ ಶೆಡೂಲ್ಡ್ ಕಾಸ್ಟ್ಸ್ ಫೆಡರೇಶನ್ನಿನ ಪುರುಷ ಸ್ವಯಂ ಸೇವಕರು ಒಂದೇ ನಮೂನೆಯ ಬುಶ್‌ಶರ್ಟಿನ ಸಮವಸ್ತ್ರವನ್ನು ಧರಿಸಿದ್ದರು. ಫೆಡರೇಶನ್ನಿನ ಮಹಿಳಾ ಸ್ವಯಂ ಸೇವಕರು ವಿವಿಧ ಬಣ್ಣದ ಪೋಷಾಕು ಧರಿಸಿ ಸರ್ವ ನಾಮಪಲ್ಲಿಯನ್ನೇ ಆವರಿಸಿಕೊಂಡಿದ್ದರು. ಮಹಿಳಾ ಸ್ವಯಂ ಸೇವಕಿಯರು ಕಳಸ ಪ್ರಯವಾಗುವಂತಹ ಕೆಲಸವನ್ನೇ ಮಾಡಿ ತೋರಿಸಿದ್ದರು. ಈ ಸ್ವಯಂ ಸೇವಕಿಯರು ಬಾಬಾಸಾಹೇಬರಿಗೆ ನೀಡಿದ ಗಾರ್ಡ್ ಆಫ್ ಆನರ್, ವೈಸ್‌ರಾಯಗೆ ನೀಡುವ ಆನರ್‌ಗಿಂತಲೂ ಹೆಚ್ಚು ಆಕರ್ಷಕವಾಗಿತ್ತು. ‘ಅಂಬೇಡ್ಕರ್ ಜಿಂದಾಬಾದ್’ ಎಂಬ ಘೋಷಣೆಯಿಂದ ಇಡೀ ನಾಮಪಲ್ಲಿಯ ಪರಿಸರವೇ ಮಾರ್ದನಿಗೊಂಡಿತು.

ಬಾಬಾ ಸಾಹೇಬರ ರೈಲ್ವೆಯ ವಿಶೇಷ ಬೋಗಿಯು ಸಿಕಂದರಾಬಾದ್ ತಲುಪಿದಾಗ, ಹಲವು ಶ್ರೇಷ್ಠ ವ್ಯಕ್ತಿಗಳು ಅವರ ಭೇಟಿಗೆ ಸಾಲಾಗಿ ನಿಂತಿದ್ದರು. ಅವರಲ್ಲಿ ಮುಖ್ಯವಾಗಿ ನವಾಬ ಮೈನಾ, ನವಾಬ ಜಂಗ್ ಬಹಾದ್ದೂರ್, ಹೈದರಾಬಾದ್ ಸಂಸ್ಥಾನದ ಪೊಲಿಟಿಕಲ್ ಏಜೆಂಟ್ ಮತ್ತು ಸಂಪರ್ಕ ಇಲಾಖೆಯ ಅಧಿಕಾರಿ, ಕ್ಯಾಪ್ಟನ್ ಡಬ್ಲೂ.ಎ.ಡಿಸಿ,-ಇವರೂ ಹಲವು ಶ್ರೇಷ್ಠ ಮಹನೀಯರ ಜೊತೆಗಿದ್ದರು. ಸಾವಿರಾರು ಸ್ತ್ರೀ ಪುರುಷರ ಬೃಹತ್ ಮೆರವಣಿಗೆಯು ಸಿಕಂದರಾಬಾದ್ ರೈಲು ನಿಲ್ದಾಣದಿಂದ ಹೊರಟಿತ್ತು. ಈ ಮೆರವಣಿಗೆಯು ಮಾರ್ಕೆಟ್ ಬೀದಿಯಿಂದ, ಕೆ. ಇ. ಎಂ. ರಸ್ತೆಯಿಂದ ಕಿಂಗ್ಸ್‌ವೇಯತ್ತ ಪ್ರಯಾಣ ಮಾಡಿತು. ಮೆರವಣಿಗೆಯು ಧನಮಂಡಿಗೆ ಹೋಗಿ ತಲುಪಿದಾಗಂತೂ ಅಪಾರ ಜನಸಮೂಹ ನೆರೆದಿತ್ತು. ಈ ಮೆರವಣಿಗೆಯಲ್ಲಿ ಬ್ಯಾಂಡ್ ಸಂಗೀತದ ಝಣತ್ಕಾರವಿತ್ತು. ಒಂದಾದ ಬಳಿಕ ಒಂದರಂತೆ ಹಾಕುವ ‘ಅಂಬೇಡ್ಕರ್ ಜಿಂದಾಬಾದ್’ ಎಂಬ ಘೋಷಣೆಯಂತೂ ಮಾರ್ದನಗೊಳ್ಳುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಿದ ಬಣ್ಣ -ಬಣ್ಣದ ಪತಾಕೆಗಳು ಫಡ-ಫಡಿಸುತ್ತಿದ್ದವು-ಇವೆಲ್ಲವುಗಳ ನಡುವೆ ಸ್ಪರ್ಧೆಯೇ ನಡೆದಂತಿತ್ತು. ಅದೂ ಅಲ್ಲದೆ ಶೆಡೂಲ್ಡ್ ಕಾಸ್ಟ್ಸ್ ಫೆಡರೇಶನ್ನಿನ ಅಸಂಖ್ಯ ಧ್ವಜಗಳಂತೂ ನೋಡಿದಲ್ಲೆಲ್ಲ ಹಾರಾಡುತ್ತಿದ್ದವು.

ಬಾಬಾಸಾಹೇಬರನ್ನು ಈ ಮೆರವಣಿಗೆಯಲ್ಲಿ ಕರೆದೊಯ್ಯುತ್ತಿದ್ದರು. ಸಂಪೂರ್ಣ ಸಿಕಂದರಾಬಾದ್ ಮತ್ತು ಹೈದರಾಬಾದ್ ಎಂಬ ಅವಳಿ ನಗರವು ಒಂದೆಡೆ ಸೇರಿತ್ತು. ಮೊದಲಿಗೆ ಬಾಬಾಸಾಹೇಬರನ್ನು ‘ಪಾಚ-ಬಂಧು-ಸೇವಾಹಾಲ್‌ಗೆ’ ಕರೆದೊಯ್ದರು. ಇದು ಜನರ ಸೇವಾ ಕೇಂದ್ರವಾಗಿತ್ತು. ಯಾವುದೇ ಬಡವರ ಏನಾದರೂ ಕೋರಿಕೆ ಇದ್ದರೆ, ಅವರಿಗೆ ಉಚಿತವಾಗಿ ಸಹಾಯ ಮಾಡಲು ಸದರಿ-ಕೇಂದ್ರವನ್ನು ತೆರೆಯಲಾಗಿದೆ ಎಂದು ಬಾಬಾಸಾಹೇಬರಿಗೆ ತಿಳಿಸಲಾಯಿತು. ಈ ಕೇಂದ್ರದ ಬಳಿಕ ಮೆರವಣಿಗೆಯು ವಿಶಾಲವಾದ ಬಯಲಿನತ್ತ ಹೊರಳಿತು. ಅಲ್ಲಿ ಭವ್ಯ ಮಂಟಪವನ್ನು ನಿರ್ಮಿಸಲಾಗಿತ್ತು. ಸಂಪೂರ್ಣ ಬಯಲು ತುಂಬಾ ಜನರು ಕಿಕ್ಕಿರಿದು ತುಂಬಿಕೊಂಡಿದ್ದರು. ಮಹಿಳೆಯರಿಗಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಪ್ರಸಂಗದಲ್ಲಿ ಸ್ವಾಗತ ಸಮಿತಿಯ ಪ್ರಮುಖರಾದ ಪ್ರೇಮ ಕುಮಾರರು ಬಾಬಾಸಾಹೇಬರನ್ನು ಸ್ವಾಗತಿಸಿದರು. ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್ನಿನ ವತಿಯಿಂದ ಜೆ.ಎಚ್.ಸುಬ್ಬಯ್ಯ ಅವರು ಬಾಬಾಸಾಹೇಬರಿಗೆ ಸನ್ಮಾನ ಪತ್ರವನ್ನು ಅರ್ಪಿಸಿದರು.

ಬಾಬಾಸಾಹೇಬರು ಭಾಷಣ ಮಾಡಲು ಎದ್ದು ನಿಂತಾಗ ಜನರು ಚಪ್ಪಾಳೆ ಬಾರಿಸಿದರು. ಬಾಬಾಸಾಹೇಬರು ಸುಮಾರು 45 ನಿಮಿಷಗಳ ಕಾಲ ಹಿಂದಿ ಭಾಷೆಯಲ್ಲಿ ಮಾತಾಡಿದರು. ಬಾಬಾಸಾಹೇಬರ ಪ್ರಭಾವಶಾಲಿ ಭಾಷಣ, ಹೃದಯಕ್ಕೆ ತಟ್ಟುವ ಭಾಷೆ, ಬಡವರ ಜೊತೆ ಏಕರೂಪಗೊಳ್ಳುವ ಅವರ ಪ್ರವೃತ್ತಿ, ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್ನಿನ ಧ್ಯೇಯದ ನ್ಯಾಯಕತ್ವ ಮತ್ತು ಅವರ ವಿದ್ವತ್ತಿನಿಂದಾಗಿ, ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್ನಿನ ಧ್ವಜದಡಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಅಸ್ಪಶ್ಯರ ಹಕ್ಕಿಗಾಗಿ ಹೇಗೆ ಹೋರಾಡಬೇಕೆನ್ನುವುದರ ವಿವೇಚನೆಯೂ ಪ್ರತಿಯೊಬ್ಬರ ಹೃದಯವನ್ನು ಸ್ಪರ್ಶಿಸಿತು.

ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಹೇಳಿದ್ದು ಹೀಗೆ-
ಅಧ್ಯಕ್ಷರೆ, ಬಂಧು-ಭಗಿನಿಯರೆ,
ಇಂದು ಅಪಾರ ಜನಸಮುದಾಯದಲ್ಲಿ ನೀವು ನನ್ನನ್ನು ಸ್ವಾಗತಿಸಿದಕ್ಕಾಗಿ ಕೃತಜ್ಞತೆಗಳು. ನಾನು ನಿಮ್ಮಲ್ಲಿಗೆ ಮೊದಲ ಸಲ ಬಂದಿರುವುದರಿಂದ ಸ್ವಾಗತವನ್ನು ನಿರೀಕ್ಷಿಸಿರಲಿಲ್ಲ. ಆದರೆ ನನ್ನ ಆಯುಷ್ಯ ಮತ್ತು ಜೀವನವನ್ನು ನೋಡಿದ್ದಾದರೆ ಇದರ ಬಗೆಗೆ ನನಗೆ ಅಚ್ಚರಿ ಎನಿಸುವುದಿಲ್ಲ.

ಇಂದಿನ ಸ್ವಾಗತದಲ್ಲಿ, ಸಭೆಯಲ್ಲಿ ಮತ್ತು ಮೆರವಣಿಗೆಯಲ್ಲಿ ಯುವಕರು ತೋರಿಸಿದ ಉತ್ಸಾಹ ಕಂಡು ನನಗೆ ತುಂಬ ಸಮಾಧಾನವಾಗಿದೆ. ನಮ್ಮ ಸಮಾಜದ ಏಳ್ಗೆಯು ಇಂದಿನ ಯುವಕರ ಮೇಲಿದೆ. ಯುವ ಪೀಳಿಗೆಯು ತಮ್ಮ ಸಮಾಜಕ್ಕಾಗಿ ಸ್ವಾರ್ಥತ್ಯಾಗ ಮಾಡದ ಹೊರತು ನಮ್ಮ ಉದ್ದೇಶ ಬಹುಬೇಗ ಈಡೇರಲಾರದು. ಇಲ್ಲಿ ಚಳವಳಿ ಮಾಡುವ ಅವಕಾಶ ಇದ್ದಿದ್ದರೆ ನೀವು ತುಂಬ ಪ್ರಗತಿ ಹೊಂದುತ್ತಿದ್ದಿರಿ ಎಂದೆನಿಸುತ್ತದೆ.

ಇಂದಿನ ಸಮಾರಂಭದಲ್ಲಿ ಕಂಡುಬರುವ ಮಹಿಳೆಯರ ಉತ್ಸಾಹವು ಗಮನಾರ್ಹವಾದುದು. ಇಲ್ಲಿಯ ಮಹಿಳೆಯರು ಉತ್ತಮವಾಗಿ ಭಾಷಣ ಮಾಡಬಲ್ಲರು ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿಯ ಮಹಿಳೆಯರು ಶುಭ್ರವಾಗಿ ಜೀವಿಸುವುದನ್ನು ಕಲಿತಿದ್ದಾರೆ. ಇಲ್ಲಿ ಸಮತಾ ಸೈನಿಕ ದಳದ ಶಾಖೆಯನ್ನು ಸ್ಥಾಪಿಸಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡು ತುಂಬ ಸಮಾಧಾನವೆನಿಸುತ್ತಿದೆ. ಇಂದಿನ ಪ್ರಸಂಗದಲ್ಲಿ ನಾನು ಮಹಿಳೆಯರಿಗೆ ನೀಡಬೇಕಾಗಿರುವ ಸಂದೇಶವೇನೆಂದರೆ, ನೀವು ಪುರುಷರ ಜೊತೆ ಜೊತೆಯಲ್ಲೇ ಸಾರ್ವಜನಿಕ ಕ್ಷೇತ್ರದಲ್ಲಿ ಧುಮುಕಬೇಕು. ಪುರುಷರು ಮುಂದೆ ಸಾಗಿ, ಮಹಿಳೆಯರು ಹಿಂದುಳಿದರೆ ಯಾವುದೇ ಸಮಾಜದ ಪ್ರಗತಿಯಾಗಲಾರದು. ಗಾಡಿಯ ಒಂದು ಚಕ್ರ ಮುರಿದರೆ ಗಾಡಿ ಮುಂದೆ ಸಾಗುವುದು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರು ಪುರುಷರ ಹೆಗಲಿಗೆ ಹೆಗಲು ಕೊಟ್ಟು ಹೋರಾಡಬೇಕು, ಅಂದಾಗಲೇ ನಿಮ್ಮ ಸ್ವಾತಂತ್ರ ನಿಮಗೆ ಬೇಗ ಸಿಗಬಹುದು.

ನಮ್ಮ ಚಳವಳಿಯ ಕೊನೆ ಎಲ್ಲಿದೆ? ನಮ್ಮ ಸಮಾಜಕ್ಕೆ ಮತ್ತು ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕೆನ್ನುವುದೇ ನಮ್ಮ ಧ್ಯೇಯ. ಆದರೆ ಈ ದೇಶದಲ್ಲಿ ಹಲವು ಪಂಥಗಳಿವೆ. (1) ಹಿಂದೂ, (2)ಮುಸ್ಲಿಂ, (3)ಕ್ರೈಸ್ತ, (4)ಮತ್ತು ಅಸ್ಪಶ್ಯ. ಅಸ್ಪಶ್ಯರು ಯಾರು? ಅಸ್ಪಶ್ಯ ಜಾತಿಯು ಹಿಂದೂವಿನಿಂದ ಬೇರೆಯಾಗಿದೆ. ನಮ್ಮನ್ನು ಹಿಂದೂ ಸಮಾಜವು ಸಾವಿರಾರು ವರ್ಷಗಳಿಂದ ಸಾಮಾಜಿಕ, ಆರ್ಥಿಕ, ರಾಜಕೀಯ ಬಾಬತ್ತಿನಲ್ಲಿ ಗುಲಾಮರನ್ನಾಗಿ ಮಾಡಿದೆ. ಗುಲಾಮಗಿರಿಯ ಬಂಧನವನ್ನು ನಾವು ಕಿತ್ತೊಗೆಯಲಿದ್ದೇವೆ. ಈ ದೇಶಕ್ಕೆ ಪ್ರಜಾಸತ್ತಾತ್ಮಕ ರಾಜ್ಯ ಬೇಕೆಂದು ಬೊಬ್ಬೆ ಹೊಡೆದು ಹೇಳಲಾಗುತ್ತಿದೆ. ಆದರೆ ಅಸ್ಪಶ್ಯ ವರ್ಗವನ್ನು ಬಿಟ್ಟು ಪ್ರಜಾಸತ್ತಾತ್ಮಕ ರಾಜ್ಯ ನಿರ್ಮಿಸುವುದು ಸಾಧ್ಯವೇ ಎಂಬ ಪ್ರಶ್ನೆಯನ್ನು ನಾನು ಹಿಂದೂ ಸಮಾಜಕ್ಕೆ ಕೇಳಬಯಸುತ್ತೇನೆ. ಪ್ರಜಾಸತ್ತಾತ್ಮಕ ರಾಜ್ಯದಲ್ಲಿ ಎಲ್ಲರಿಗೂ ಹಕ್ಕು ಸಿಗುತ್ತದೆ. ಆದರೆ ನಮಗೆ ಮಾತ್ರ ಸಿಗುವುದಿಲ್ಲ. ಹೀಗೆ ಹಿಂದೂಗಳ ಕೆಲಸ ಸಾಗಿದೆ. ನಾವೇನು ಅವರ ರಕ್ತ ಸಂಬಂಧಿಗಳಲ್ಲ, ಬಂಧು-ಬಳಗದವರಲ್ಲ. ಹಿಂದೂ ಸಮಾಜವನ್ನು ಅವಲಂಬಿಸಿದರೆ ಅವರು ನಮಗೆ ಹಕ್ಕು ನೀಡುತ್ತಾರೆಂದು ನಂಬುವಂತಿಲ್ಲ. ಮಿ.ಜಿನ್ನಾ ಈ ಮೊದಲು ಎಲ್ಲ ಅಲ್ಪಸಂಖ್ಯಾತರ ಪಕ್ಷವನ್ನು ವಹಿಸಿದ್ದರು. ಆದರೆ ಈಗವರು ಮುಸ್ಲಿಂ ಲೀಗ್ ಪರವಾಗಿ ಪಾಕಿಸ್ತಾನದ ಬೇಡಿಕೆಯನ್ನಿಟ್ಟಿದ್ದಾರೆ. ಉಳಿದ ಅಲ್ಪಸಂಖ್ಯಾತರ ಪರವಾಗಿ ಹೋರಾಡುವುದನ್ನು ಕೈಬಿಟ್ಟಿದ್ದಾರೆ.

ಕಾಂಗ್ರೆಸ್ ಮತ್ತು ಗಾಂಧಿಯಂತೂ ನಮಗೆ ಯಾವ ಬಗೆಯ ಹಕ್ಕು ಸಿಗಬಾರದು, ನಮಗೆ ಸ್ವತಂತ್ರ ಅಸ್ತಿತ್ವವಿರಬಾರದು, ನಾವು ಈ ದೇಶದಲ್ಲಿ ಮಾನ-ಸನ್ಮಾನದಿಂದ ಬದುಕಬಾರದು ಮತ್ತು ರಾಜಕೀಯ ಕ್ಷೇತ್ರದಿಂದ ನಮ್ಮನ್ನು ಶಾಶ್ವತವಾಗಿ ನಾಶಗೊಳಿಸಿ, ಸಾವಿರಾರು ವರ್ಷಗಳಿಂದ ನಮ್ಮ ಕಾಲಿಗೆ ತೊಡಿಸಿದ ಸಂಕೋಲೆಯನ್ನು ಮತ್ತಷ್ಟು ಹೆಚ್ಚು ಬಿಗಿಯಬೇಕೆಂದು ಟೊಂಕಕಟ್ಟಿ ನಿಂತಿದ್ದಾರೆ. ನಾವು ತಲೆಯೆತ್ತಬಾರದು. ಸದಾಕಾಲ ಅವರ ಗುಲಾಮರಾಗಿಯೇ ಉಳಿಯಬೇಕೆಂಬ ಇಚ್ಛೆ ಅವರದ್ದಾಗಿದೆ.

ಆಂಗ್ಲ ಸರಕಾರ, ಹಿಂದೂ, ಮುಸಲ್ಮಾನರಿಗೆ ನಾವು ಹೇಳ ಬಯಸುವುದೇನೆಂದರೆ, ಈ ದೇಶದ ಸತ್ತೆಯಲ್ಲಿ ನಮಗೂ ವಾರಸುದಾರಿಕೆ ಬೇಕು. ಅದಕ್ಕಾಗಿ ನಾವು ಹೋರಾಡುತ್ತೇವೆ, ಸಾಯುತ್ತೇವೆ. ನಮಗೆ ಅತ್ಯಾಚಾರದ ಮೇಲೆ ನಂಬಿಕೆಯಿಲ್ಲ. ನಾವು ಅತ್ಯಾಚಾರವನ್ನು ಲೆಕ್ಕಿಸುವುದಿಲ್ಲ. ಯಾವುದರಲ್ಲಿ ಹಿಂದೂ, ಮುಸಲ್ಮಾನ ಮತ್ತು ಅಸ್ಪಶೃ ವರ್ಗದ ಪ್ರತಿನಿಧಿಗಳಿರುತ್ತಾರೋ, ಅದೇ ನಿಜವಾದ ರಾಷ್ಟ್ರೀಯ ಸರಕಾರ ಎನ್ನುವುದು ಆಂಗ್ಲ ಸರಕಾರ, ಹಿಂದೂ, ಮುಸಲ್ಮಾನ ಮತ್ತು ಉಳಿದ ವರಿಗೂ ಗೊತ್ತಾಗಬೇಕು. ಅಸ್ಪಶ್ಯರು ಹಿಂದೂ ಸಮಾಜದ ಘಟಕವಲ್ಲ. ಅದು ಬೇರೆಯೇ ಆಗಿದೆ. ಸ್ವಂತ ಉದ್ದೇಶ ಈಡೇರಿಸಿಕೊಳ್ಳಲು, ಗುರಿ ತಲುಪಲು ಚಳವಳಿ ಮಾಡಲು, ಹೋರಾಡಲು ಅಸ್ಪಶ್ಯ ವರ್ಗವು ಸಿದ್ಧವಾಗಿದೆ.

ನಮ್ಮ ಬೇಡಿಕೆಯು ಬಹಳ ದೊಡ್ಡದಾಗಿದೆ. ನಮ್ಮ ದಾರಿಯಲ್ಲಿ ಹಲವು ಸಂಕಟಗಳಿವೆ. ಶತ್ರುಗಳ ಸಂಖ್ಯೆಯೂ ಅಪಾರ, ಅದಕ್ಕಾಗಿ ನಾವು ನಮ್ಮ ಸಂಘಟನೆಯನ್ನು ಕಟ್ಟಬೇಕಾಗಿದೆ. ನಾವು ಸಂಘಟಿತರಾದರೆ ಗಾಂಧಿ, ಜಿನ್ನಾ, ಸಾವರ್ಕರರು ನಮ್ಮ ಹಕ್ಕನ್ನು ನಿರಾಕರಿಸುವುದು ಸಾಧ್ಯವಿಲ್ಲ. ಸರಕಾರದ ಬಳಿಗೆ ಹೋಗುವುದು ಕೀಳುತನದ ಕೆಲಸ. ನಾವು ನಮ್ಮ ಸಂಘಟನೆಯನ್ನು ಬೆಳೆಸಿ, ನಮ್ಮ ಬೇಡಿಕೆಯನ್ನು ಪೂರ್ತಿಗೊಳಿಸುವಂತೆ ಮಾಡುವುದು ನಮ್ಮ ಇಂದಿನ ಕಾರ್ಯವಾಗಿದೆ. ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳದ ವಿನಾ ನಮಗೆ ಏನೂ ಸಿಗಲಾರದು.

‘‘ಹಿಂದೂಸ್ಥಾನದ ಸ್ವಾತಂತ್ರ್ಯದ ಬಗೆಗೆ ಅಸ್ಪಶ್ಯರಿಗೆ ಅಷ್ಟೊಂದು ಆಸಕ್ತಿಯಿಲ್ಲ ಎಂಬ ಕುಹಕತನದ, ನಿಂದನೀಯ ಮತ್ತು ದುಷ್ಟ ಪ್ರಚಾರವನ್ನು ಕಾಂಗ್ರೆಸ್ ಮತ್ತು ರಾಷ್ಟ್ರೀಯ ವರ್ತಮಾನ ಪತ್ರಿಕೆಗಳು ಮಾಡುತ್ತಿವೆ. ನಾವು ರಾಷ್ಟ್ರವಿರೋಧಿಗಳು, ದೇಶವನ್ನು ಮುಳುಗಿಸುವವರು ಎಂಬ ಹಲ್ಲೆಯನ್ನು ನಮ್ಮ ಮೇಲೆ ಮಾಡಲಾಗುತ್ತದೆ. ಅಸ್ಪಶ್ಯರಿಗೆ ಮಾನವೀಯತೆ ಬೇಕು, ಸಮತೆ ಬೇಕು, ಅವರಿಗೆ ಉಳಿದವರ ಜೊತೆಗೆ ರಾಜಕೀಯ ದರ್ಜೆ ಬೇಕು. ಅದು ಈ ದೇಶದ ಆಡಳಿತಗಾರ ವರ್ಗವಾಗಬೇಕು. ಅದಕ್ಕಾಗಿ ಅವರು ನಾವು ನಡೆಸುತ್ತಿರುವ ಚಳವಳಿಯನ್ನು ದೇಶ ಮುಳುಗಿಸುವಂತಹದು ಎಂದರೆ ನಮಗೇನೂ ಅವರ ಕಾರ್ಯದ ಬಗೆಗೆ ಅಚ್ಚರಿಯೆನಿಸುವುದಿಲ್ಲ. ಅಸ್ಪಶ್ಯರಿಗೆ ಉಳಿದ ಎಲ್ಲರಿಗಿಂತ ಸ್ವಾತಂತ್ರ್ಯದ ಬಗೆಗೆ ಕಡಿಮೆ ಆಸ್ಥೆಯಿಲ್ಲ, ಬದಲು ಹೆಚ್ಚು ಆಸಕ್ತಿಯಿದೆ. ಆದರೆ ದೇಶದ ಸ್ವಾತಂತ್ರದ ಜೊತೆಗೆ ಸ್ವಂತ ಸಮಾಜದ ಸ್ವಾತಂತ್ರ್ಯವೂ ನಮಗೆ ಬೇಕಾಗಿದೆ.’’

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75