ಚಾರ್ಲ್ಸ್ ಬ್ರಾನ್ಸನ್: ನಮ್ಮ ಹದಿಹರೆಯದ ಹೀ ಮ್ಯಾನ್

Update: 2019-05-12 05:45 GMT

ಸಾಂಪ್ರದಾಯಿಕ ಅರ್ಥದಲ್ಲಿ ಬ್ರಾನ್ಸನ್ ಸುಂದರ ಮನುಷ್ಯನಾಗಿರಲಿಲ್ಲ. ಗೆರೆ ತುಂಬಿದ ಸ್ನಾಯುಯುಕ್ತ ಮುಖ; ಚಿಕ್ಕ ಕಣ್ಣುಗಳು; ಎದ್ದು ಕಾಣುವ ಮೀಸೆ; ಒಡೆದ ಧ್ವನಿ; ಎದೆ ತೆರೆದು ನಿಂತನೆಂದರೆ ಕೆತ್ತಿದ ಶಿಲ್ಪದಂಥ ಮೈಕಟ್ಟು. ಇವುಗಳ ಜತೆಗೆ ಹಳ್ಳಿಗಾಡಿನ ಒರಟುತನ ಪ್ರೇಕ್ಷಕರನ್ನು ಸೆಳೆಯುವ ಮೋಹಕ ಶಕ್ತಿಯಿತ್ತು. ದಿನವೊಂದಕ್ಕೆ ಒಂದು ಡಾಲರ್ ಕೂಲಿಯನ್ನು ಸಂಪಾದಿಸಲು ಹೆಣಗಾಡುತ್ತಿದ್ದ ಕಾರ್ಮಿಕನೊಬ್ಬನಿಗೆ ಸಿನೆಮಾ ಎಂಬ ಮಾಯಲೋಕ ತಂದುಕೊಟ್ಟ ಯಶಸ್ಸು ಸಿನೆಮಾದಷ್ಟೇ ಅಚ್ಚರಿದಾಯಕವಾಗಿತ್ತು.

ಚಾರ್ಲ್ಸ್ ಬ್ರಾನ್ಸನ್, ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಸಾಹಸ, ಪತ್ತೇದಾರಿ ಕಥನವೇ ಪ್ರಧಾನವಾದ ಇಂಗ್ಲಿಷ್ ಚಿತ್ರಗಳ ಭಾರತೀಯ ಪ್ರೇಕ್ಷಕರಿಗೆ ಬಹು ಚಿರಪರಿಚಿತ ಹೆಸರು. ಚೀನೀಯರಂತೆ ಸಣ್ಣ ಕಣ್ಣು; ಸುಂದರವಾದ ಮುಖ; ಪ್ರೇಕ್ಷಕರ ಕಣ್ಮನ ಸೂರೆಗೊಳ್ಳುವ ಮೈಕಟ್ಟು ಜತೆಗೆ ಭಾರತೀಯರಿಗೆ ಅರ್ಥವಾಗುವ ರೀತಿಯಲ್ಲಿ ಇಂಗ್ಲಿಷ್ ಉಚ್ಛಾರಣೆ -ಇವು ಬ್ರಾನ್ಸನ್ ಜನಪ್ರಿಯತೆಗೆ ಕಾರಣ. ಇದಲ್ಲದೆ ವೈರಿಗಳನ್ನು ಬಗ್ಗು ಬಡಿಯುವಲ್ಲಿ ನಮ್ಮ ದೇಶೀಯ ಹೀರೋಗಳಂತೆಯೇ ತೋರುತ್ತಿದ್ದ ಸಾಹಸದಿಂದ ಬ್ರಾನ್ಸನ್ ನಮ್ಮ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದ. ಒಂದು ಕಾಲಕ್ಕೆ (ಎಪ್ಪತ್ತರ ದಶಕದ ಅಂತ್ಯದ ವೇಳೆಗೆ) ಬ್ರಾನ್ಸನ್ ಹಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿದ್ದ. ಆತ ಪ್ರತಿ ದಿನ ಎಂಟು ಗಂಟೆಯ ಕಾಲ್‌ಷೀಟ್‌ಗೆ ಎರಡೂವರೆ ಲಕ್ಷ ರೂ.ಗಳ ಸಂಭಾವನೆ ಪಡೆಯುತ್ತಿದ್ದ. ಚಿತ್ರದ ಹೆಸರಿಗಿಂತಲೂ ಚಾರ್ಲ್ಸ್ ಬ್ರಾನ್ಸನ್ ಎಂಬ ಹೆಸರೇ ವಾಲ್‌ಪೋಸ್ಟರ್‌ಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳತೊಡಗಿದ್ದು ಈತನಿಂದಲೇ ಇರಬಹುದು. ಆತನ ನಾಮಬಲವೇ ಚಿತ್ರದ ಯಶಸ್ಸಿನ ಖಾತರಿ ಪತ್ರವಾಗಿದ್ದ ಕಾರಣ ಈತ ಪ್ರಪಂಚದ ಜನಪ್ರಿಯ ನಟರಲ್ಲಿ ಪ್ರತ್ಯೇಕ ಸ್ಥಾನ ಪಡೆದಿದ್ದಾನೆ. ಯಾಕೆಂದರೆ ಬ್ರಾನ್ಸನ್ ಅಮೆರಿಕ ಸಿನೆಮಾ ಸೃಷ್ಟಿಸಿದ ದೈಹಿಕವಾಗಿ ಗಟ್ಟಿಮುಟ್ಟಾದ ಮತ್ತು ಎದುರಾಳಿಗಳನ್ನು ಬಗ್ಗುಬಡಿದು ಪ್ರತಿವ್ಯವಸ್ಥೆಯಲ್ಲಿ ತನ್ನದೇ ನಿಯಮಗಳಂತೆ ಬದುಕುವ ಸಾಹಸಿ ನಾಯಕನ ಮೊದಲ ಮೂಲಮಾದರಿ. ರ್ಯಾಂಬೋ ಪಾತ್ರದ ಜನನ ಬ್ರಾನ್ಸನ್ ಪಾತ್ರಗಳಿಂದ ಕವಲೊಡೆದು ಬಂದದ್ದು. ಅಮೆರಿಕದಲ್ಲಿ ಅವನ ಸಮಕಾಲೀನರು ಅವನಿಗಿಂತ ಹೆಚ್ಚು ಜನಪ್ರಿಯರಾಗಿದ್ದರು (ರಾಬರ್ಟ್ ರೆಡ್‌ಫೋರ್ಡ್‌, ಪಾಲ್ ನ್ಯೂಮನ್, ಸ್ಟೀವ್ ಮ್ಯಾಕ್ವೀನ್ ಮೊದಲಾದವರು). ಆದರೆ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಈತನಷ್ಟು ಸೆಳೆದವರಿರಲಿಲ್ಲ. ಇಟಲಿಯ ಪ್ರೇಕ್ಷಕರು ಆತನನ್ನು ಕುರೂಪಿ ನಾಯಕನೆಂದು ಅಪ್ಪಿಕೊಂಡಿದ್ದರು. ಫ್ರೆಂಚ್ ಪ್ರೇಕ್ಷಕರು ವಿಲಕ್ಷಣ ನಾಯಕನೆಂದು ಆರಾಧಿಸಿದ್ದರು. ಭಾರತೀಯರ ಪಾಲಿಗೊಬ್ಬ ಜಾನಪದ ವೀರನಾಗಿದ್ದ. ಚೀನಾ, ಜಪಾನ್, ಯೂರೋಪ್ ದೇಶಗಳಲ್ಲಿ ಆತನ ಜನಪ್ರಿಯತೆಗೆ ಸಾಟಿಯಿರಲಿಲ್ಲ. 1970ರಲ್ಲಿ ಬ್ರಾನ್ಸನ್ ನಟಿಸಿದ್ದ ಫ್ರೆಂಚ್ ಸಿನೆಮಾ ‘ಲೆ ಪ್ಯಾಸೇಜರ್ ದೆ ಲ ಪ್ಲುಎ’ ಚಿತ್ರ ಬಿಡುಗಡೆಯಾಯಿತು. ಕುತೂಹಲ, ಸಾಹಸ, ಪತ್ತೇದಾರಿಕೆಯ ಚಿತ್ರದಲ್ಲಿ ಬ್ರಾನ್ಸನ್ ಅಮೆರಿಕದ ಸೈನ್ಯಾಧಿಕಾರಿಯಾಗಿ ನಟಿಸಿದ್ದ. ಬ್ರಾನ್ಸನ್ ನಟನೆಗೆ ಮಾರುಹೋದ ಫ್ರೆಂಚ್ ಪ್ರೇಕ್ಷಕರು ಚಿತ್ರ ನೋಡಲು ಮುಗಿಬಿದ್ದರು. ಬ್ರಾನ್ಸನ್ ಬದುಕು ಕಂಡ ದೊಡ್ಡ ತಿರುವು ಅದು. ಅದರ ಹಿನ್ನೆಲೆಯಲ್ಲಿಯೇ ಯೂರೋಪಿನ ಅನೇಕ ದೇಶಗಳಲ್ಲಿ ಬ್ರಾನ್ಸನ್ ಸಹನಟನಾಗಿ ನಟಿಸಿದ ಚಿತ್ರಗಳೂ ಸೇರಿದಂತೆ ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡಿದರು. ಭಿತ್ತಿಪತ್ರಗಳಲ್ಲಿ ಜನರ ಗಮನ ಸೆಳೆಯಲು ಚಿತ್ರದ ಶೀರ್ಷಿಕೆಗಿಂತಲೂ ದೊಡ್ಡದಾಗಿ ಬ್ರಾನ್ಸನ್‌ನ ಹೆಸರನ್ನು ಮುದ್ರಿಸಿ ಜನರನ್ನು ಸೆಳೆಯುವ ತಂತ್ರ ಅಲ್ಲಿಂದಲೇ ಆರಂಭವಾಯಿತು. ಆದರೆ ಅಮೆರಿಕದ ವಿಮರ್ಶಕರು ಎಂದೂ ಆತನನ್ನು ಕಲಾವಿದನೆಂದು ಒಪ್ಪಿಕೊಳ್ಳಲಿಲ್ಲ. ಆದರೆ ಬಾಕ್ಸ್ ಆಫೀಸಿನ ಯಶಸ್ಸಿನಲ್ಲಿ ತೇಲಿದ ನಿರ್ಮಾಪಕರು ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಇಂತಹ ನಟ ಹುಟ್ಟಿದ್ದು ಮಾತ್ರ ಕಡುಬಡತನದಲ್ಲಿ. ಬಾಲ್ಯವಂತೂ ನರಕ. ಬ್ರಾನ್ಸನ್ ತಂದೆ ರಶ್ಯಾದಿಂದ ಅಮೆರಿಕಕ್ಕೆ ವಲಸೆ ಹೋದವರ ಪೈಕಿ ಒಬ್ಬ. ಪೆನ್ಸಿಲ್ಪೇನಿಯಾ ಪ್ರಾಂತದಲ್ಲಿ ನೆಲೆಸಿದ ಆತ ಕಲ್ಲಿದ್ದಲ ಗಣಿಯಲ್ಲಿ ದಿನಗೂಲಿ ಮಾಡುತ್ತಿದ್ದ. ಕಿತ್ತು ತಿನ್ನವ ಬಡತನ. ಜತೆಗೆ ಹದಿನೈದು ಜನ ಮಕ್ಕಳು. ಚಾರ್ಲ್ಸ್ ಬುಚೆನ್‌ಸ್ಕಿ ಹನ್ನೊಂದನೆಯ ಮಗ. ತಂದೆ ಶ್ರಮಿಕ. ಜತೆಗೆ ಮಹಾ ಕೋಪಿ. ಹಾಗಾಗಿ ಮಕ್ಕಳಾರೂ ಅವನೆದುರು ಮಾತನಾಡುತ್ತಿರಲಿಲ್ಲ.
ಬ್ರಾನ್ಸನ್ ಹತ್ತು ವರ್ಷದ ಹುಡುಗನಾದ ತಕ್ಷಣ ಹೆಗಲಿಗೆ ಕಲ್ಲಿದ್ದಲ ಗಣಿಯ ಗುದ್ದಲಿ ಬಂತು. ಇತರ ಮಕ್ಕಳು ಶಾಲೆ, ಆಟ ಪಾಠಗಳಲ್ಲಿ ಕಾಲಕಳೆಯುತ್ತಿದ್ದರೆ ಬ್ರಾನ್ಸನ್ ದಿನಕ್ಕೆ ಹದಿನಾರು ಗಂಟೆ ಗಣಿಯಲ್ಲಿ ದುಡಿಯುತ್ತಿದ್ದ. ಮನೆಯ ಮತ್ತು ಮನೆಯವರ ಸಂಪರ್ಕ ನಿದ್ರೆ ಮಾಡುವುದಕ್ಕಷ್ಟೇ ಸೀಮಿತವಾಯಿತು. ತಾಯಿಯ ಮೃದು ಸ್ಪರ್ಶ ದೊರೆಯುತ್ತಿದ್ದದ್ದು ಬ್ರಾನ್ಸನ್ ರಾತ್ರಿ ಮಲಗಿದ್ದಾಗ ಅವರ ತಾಯಿ ಅವನ ತಲೆಯಿಂದ ಹೇನು ಹೆಕ್ಕುತ್ತಿದ್ದಾಗ ಮಾತ್ರ.
ಬ್ರಾನ್ಸನ್‌ಗೆ ಈ ಮೈಮುರಿಯುವ ದುಡಿತ ಬಹುಬೇಗನೆ ಬೇಸರ ತರಿಸಿತು. ಜೀವಮಾನವೆಲ್ಲ ದುಡಿತದಲ್ಲೇ ಕಳೆದ ತಂದೆ ನೋವಿನಿಂದ ನರಳಿ ಸಾಯುವುದನ್ನು ಕಂಡು ಗಣಿ ಕೆಲಸ ಬಿಟ್ಟು ಅನ್ಯಮಾರ್ಗ ಹುಡುಕುವ ಛಲ ತೊಟ್ಟ. ಕರುಳಿರಿಯುವ ಬಡತನದಿಂದ ತನ್ನ ಕುಟುಂಬವನ್ನು ಮೇಲೆತ್ತಲು ಹೇರಳ ಹಣ ಸಿಗುವ ದಂಧೆಗೆ ಇಳಿಯುವ ಅನಿವಾರ್ಯತೆ ಆತನನ್ನು ಕಾಡಿತು.
ಕೆಲಸವೇನೋ ಬಿಟ್ಟ. ಆದರೆ ಈಗ ಆತ ಎರಡನೇ ಮಹಾಯುದ್ಧದಲ್ಲಿ ಸೈನಿಕನಾಗಿ ಅಮೆರಿಕದ ವಾಯುದಳಕ್ಕೆ ಸೇರಿದ. ಸೈನಿಕನ ಜೀವನ ಆತನಲ್ಲಿ ಉತ್ಸಾಹ ಮೂಡಿಸಲಿಲ್ಲ. ಹಾಗಾಗಿ ಯುದ್ಧ ನಿಲುಗಡೆಯಾದ ನಂತರ ಕೆಲಸಬಿಟ್ಟ. ಆನಂತರ ಕೆಲವು ಹೊಟೇಲ್‌ಗಳಲ್ಲಿ ಅಡುಗೆ ಭಟ್ಟನಾಗಿ ಬಳಿಕ ಭದ್ರತಾ ಸಿಬ್ಬಂದಿಯಾಗಿ ಆನಂತರ ಸೇಲ್ಸ್‌ಮನ್ ಆಗಿ ಕೆಲಸ ಮಾಡಿದರೂ ಯಾವುದಕ್ಕೂ ಅಂಟಿಕೊಳ್ಳಲಿಲ್ಲ.
ಬ್ರಾನ್ಸನ್‌ಗೆ ಗ್ಲಾಮರ್ ಹುಚ್ಚಿರಲಿಲ್ಲ. ಆತ ಸಿನೆಮಾ ಅಥವಾ ರಂಗಭೂಮಿ ನಟನಾಗಬೇಕೆಂಬ ಮೋಹವಿರಲಿಲ್ಲ. ಒಂದು ದಿನ ಆತ ನಾಟಕವೊಂದನ್ನು ನೋಡುತ್ತಿದ್ದ. ಆ ನಾಟಕದ ನಾಯಕಿಯ ಪಾತ್ರಧಾರಿಗೆ ವಾರಕ್ಕೆ ಎಪ್ಪತ್ತೈದು ಡಾಲರ್ ಹಣ ಸಿಗುತ್ತದೆಂಬ ವಿಷಯ ಕೇಳಿ ಅಚ್ಚರಿಪಟ್ಟ. ಹಣ ಸಂಪಾದನೆಗೆ ನಟನಾಗುವುದೇ ಉತ್ತಮ ಮಾರ್ಗವೆಂದು ಅಂದೇ ದೃಢ ನಿಶ್ಚಯ ಮಾಡಿದ.
ಅಟ್ಲಾಂಟಿಕ್ ಸಿಟಿಯ ನಟನಾ ಶಾಲೆಗೆ ಆತ ಸೇರಿದ. ಅಲ್ಲಿಂದ ಆತ ನ್ಯೂಯಾರ್ಕ್ ಗೆ ಬಂದ. ಆದರೆ ಇಲ್ಲಿ ಆತನಿಗೆ ಎದುರಾದದ್ದು ತೊಂದರೆಗಳ ಸರಮಾಲೆ. ಒರಟು ಮುಖ ಲಕ್ಷಣ, ಪೌರುಷೇಯವಾದ ದೇಹ ಆತನಿಗೆ ಮುಳುವಾಯಿತು. ಯಾವುದೋ ದೊಡ್ಡ ಬ್ಯಾನರ್‌ನ ಚಿತ್ರದಲ್ಲಿ ಬಹುಮುಖ್ಯ ಪಾತ್ರಕ್ಕೆ ಆಯ್ಕೆಯಾದರೂ ಕೆಲವು ನಟರ ರಾಜಕೀಯದಿಂದ ಆತನಿಗೆ ಪಾತ್ರಗಳು ಕೊನೇ ಗಳಿಗೆಯಲ್ಲಿ ರದ್ದಾಗುತ್ತಿದ್ದವು. ಆತನ ಜತೆ ನಟಿಸಿದರೆ ತಾವೆಲ್ಲಿ ಮೂಲೆ ಗುಂಪಾಗುತ್ತೇವೋ ಎಂಬ ಆತಂಕ ದೊಡ್ಡ ಮತ್ತು ಈಗಾಗಲೇ ಜನಪ್ರಿಯರಾದ ನಟರಿಗಿತ್ತು.


ಸಾಂಪ್ರದಾಯಿಕ ಅರ್ಥದಲ್ಲಿ ಬ್ರಾನ್ಸನ್ ಸುಂದರ ಮನುಷ್ಯನಾಗಿರಲಿಲ್ಲ. ಗೆರೆ ತುಂಬಿದ ಸ್ನಾಯುಯುಕ್ತ ಮುಖ; ಚಿಕ್ಕ ಕಣ್ಣುಗಳು; ಎದ್ದು ಕಾಣುವ ಮೀಸೆ; ಒಡೆದ ಧ್ವನಿ; ಎದೆ ತೆರೆದು ನಿಂತನೆಂದರೆ ಕೆತ್ತಿದ ಶಿಲ್ಪದಂಥ ಮೈಕಟ್ಟು. ಇವುಗಳ ಜತೆಗೆ ಹಳ್ಳಿಗಾಡಿನ ಒರಟುತನ ಪ್ರೇಕ್ಷಕರನ್ನು ಸೆಳೆಯುವ ಮೋಹಕ ಶಕ್ತಿಯಿತ್ತು. ಹಾಗಾಗಿ ಅಂದಿನ ಪ್ರಸಿದ್ಧ ನಟರಾದ ಸ್ಟೀವ್ ಮ್ಯಾಕ್ವೀನ್, ಬರ್ಟ್ ಲ್ಯಾಂಕಾಸ್ಟರ್, ಗ್ಲೆನ್ ಫೋರ್ಡ್ ಮುಂತಾದವರು ಆತನ ಏಳಿಗೆಯ ಬಗ್ಗೆ ಭಯಪಡುತ್ತಿದ್ದರು. ಸದೃಢ ಗಂಡಸೊಬ್ಬ ದೊಡ್ಡ ಪಾತ್ರವನ್ನು ಅವರ ಚಿತ್ರಗಳಲ್ಲಿ ವಹಿಸುವುದು ಅವರಿಗಾಗುತ್ತಿರಲಿಲ್ಲ ಎಂದು ಸ್ವತಃ ಬ್ರಾನ್ಸನ್ ಜನಪ್ರಿಯನಾದ ಎಷ್ಟೋ ವರ್ಷಗಳ ನಂತರ ಹೇಳಿಕೊಂಡಿದ್ದ.
ಹಾಲಿವುಡ್‌ನ ಪ್ರತಿಕೂಲ ಪರಿಸ್ಥಿತಿಗಳಿಂದ ನೊಂದ ಬ್ರಾನ್ಸನ್ ಹಾಲಿವುಡ್ ತೊರೆದು ಯೂರೋಪಿಗೆ ಬಂದ. ಇದಕ್ಕೆ ಮುನ್ನ ಸಣ್ಣ ಪುಟ್ಟ ಪಾತ್ರ ಮಾಡಿದ್ದ ಬ್ರಾನ್ಸನ್. ತನ್ನ ದೇಹವನ್ನು ವಿರೂಪಗೊಳಿಸಿ ಪಾತ್ರ ಗಿಟ್ಟಿಸುವ ನಿರ್ಣಯಕ್ಕೂ ಬಂದಿದ್ದ. ಆದರೆ ಯೂರೋಪ್‌ನಲ್ಲಿ ಹಲವಾರು ಸಾಹಸ ಚಿತ್ರಗಳಲ್ಲಿ ಪಾತ್ರ ವಹಿಸಿದ ನಂತರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆತನೊಬ್ಬ ಜನಪ್ರಿಯ ನಟನಾದ. ಆತನ ಚಿತ್ರಗಳು ಹಣ ಗಳಿಕೆಯಲ್ಲಿ ದಾಖಲೆ ಮಾಡತೊಡಗಿದವು.
ಬ್ರಾನ್ಸನ್ ಮತ್ತೆ ಅಮೆರಿಕಕ್ಕೆ ಬಂದ. 1950ರಲ್ಲಿ ಚಾರ್ಲ್ಸ್ ಬುಚೆನ್ಸ್‌ಕಿ ಎಂಬ ಮೂಲ ಹೆಸರನ್ನು ಚಾರ್ಲ್ಸ್ ಬ್ರಾನ್ಸನ್ ಎಂದು ಬದಲಾಯಿಸಿಕೊಂಡ. ಅದು ಅಮೆರಿಕದ ಸೆನೆಟರ್ ಜೋಸೆಫ್ ಮ್ಯಾಕರ್ತಿಯು ಕಮ್ಮುನಿಸ್ಟರನ್ನು ಬೇಟೆಯಾಡುತ್ತಿದ್ದ ಕಾಲ. ಆತ ಚಾಪ್ಲಿನ್‌ನಂಥ ಮಹಾನಟರನ್ನೇ ಕಂಗೆಡಿಸಿದ್ದ. ಕಮ್ಯುನಿಸಂ ಆರಾಧಕನೆಂಬ ಆಪಾದನೆ ಹೊತ್ತು 1952ರಲ್ಲಿ ಚಾಪ್ಲಿನ್ ಅಮೆರಿಕದಿಂದ ದೇಶಭ್ರಷ್ಟನಾದ. ಎಲ್ಲಿ ಬುಚೆನ್ಸ್‌ಕಿ ಹೆಸರು ರಶ್ಯಾ ಭಾಷೆಯನ್ನು ಧ್ವನಿಸಬಹುದು, ಆ ಮೂಲಕ ಕಮ್ಯುನಿಸಂಗೆ ತಳುಕು ಹಾಕಿಕೊಳ್ಳುತ್ತದೋ ಎಂಬ ಆತಂಕದಿಂದ ಹೆಸರು ಬದಲಿಸಿಕೊಂಡ. 1954ರಲ್ಲಿ ಬಿಡುಗಡೆಯಾದ ‘ಡ್ರಂಬೀಟ್’ ಎಂಬ ಚಿತ್ರ ಆತನನ್ನು ಯಶಸ್ಸಿನ ಸಿಂಹಾಸನದ ಮೇಲೆ ಕುಳ್ಳಿರಿಸಿತು. ಚಿತ್ರದ ಖಳನಾಯಕ ರಕ್ತ ಪಿಪಾಸು ಕ್ಯಾಪ್ಟನ್ ಜಾಕ್ ಪಾತ್ರದಲ್ಲಿ ಬ್ರಾನ್ಸನ್ ತನ್ನ ಕ್ರೂರ ಕಣ್ಣೋಟದಿಂದ ಪ್ರೇಕ್ಷಕರ ಎದೆನಡುಗಿಸಿದ್ದ.
1960ರ ದಶಕದಲ್ಲಿ ಆತ ಯಶಸ್ಸಿನ ಶೃಂಗಕ್ಕೇರಿದ. ‘ದಿ ಮ್ಯಾಗ್ನಿಫಿಶೆಂಟ್ ಸೆವೆನ್’ (1960), ‘ದಿ ಡರ್ಟಿ ಡಜನ್’, ‘ದಿ ಗ್ರೇಟ್ ಎಸ್ಕೇಪ್’(1963), ‘ರೆಡ್ ಸನ್’, ‘ಸ್ಟ್ರೀಟ್ ಫೈಟರ್’(ಹಾರ್ಡ್‌ ಟೈಂಸ್), ‘ರೈಡರ್ ಆನ್ ದಿ ರೈನ್’ ಮುಂತಾದ ಚಿತ್ರಗಳು ಸಾಹಸ ಚಿತ್ರಪ್ರಿಯ ಪ್ರೇಕ್ಷಕವರ್ಗದಲ್ಲಿ ಅಚ್ಚಳಿಯದ ಪರಿಣಾಮ ಬೀರಿದವು. ಮ್ಯಾಗ್ನಿಫಿಶೆಂಟ್ ಸೆವೆನ್ ಚಿತ್ರವು ಅಕಿರಾ ಕುರಸೋವನ ಜಪಾನಿ ಅಮರಚಿತ್ರ ಸೆವೆನ್ ಸಮುರಾಯ್‌ನ ರೀಮೇಕ್. ದುಷ್ಟನ ತಂಡದ ವಿರುದ್ಧ ಹೋರಾಡಿ ಹಳ್ಳಿಯ ಜನರನ್ನು ರಕ್ಷಿಸುವ ಏಳು ಜನ ದಿಕ್ಕಿಲ್ಲದ ವೀರರಲ್ಲಿ ಒಬ್ಬನಾಗಿ ಬ್ರಾನ್ಸನ್ ಕಾಣಿಸಿಕೊಂಡ. ಹೋರಾಡುತ್ತಲೇ ವೀರಮರಣವನ್ನಪ್ಪುವ ಪಾತ್ರದಲ್ಲಿ ಪ್ರೇಕ್ಷಕರು ಕಣ್ಣಾಲಿಯಾಗಿದ್ದರು. ಎರಡನೇ ಮಹಾಯುದ್ಧದಲ್ಲಿ ಸೆರೆಸಿಕ್ಕ ಶತ್ರು ರಾಷ್ಟ್ರಗಳ ಸೈನಿಕರು ನಾಝಿಗಳು ಬಂಧಿಸಿಟ್ಟ ಸೆರೆಯಿಂದ ತಪ್ಪಿಸಿಕೊಳ್ಳಲು ನಡೆಸುವ ಸಾಹಸದ ಈ ಸಿನೆಮಾದಲ್ಲಿ ಅನೇಕ ತಾರೆಯರಿದ್ದರು. ರಿಚರ್ಡ್‌ ಅಟೆನ್‌ಬರೋ, ಸ್ಟೀವ್ ಮ್ಯಾಕ್ವೀನ್, ಡೇವಿಡ್ ಮ್ಯಾಕಲಮ್, ಜೇಮ್ಸ್ ಕೋಬರ್ನ್ ಮುಂತಾದ ಘಟಾನುಘಟಿ ನಾಯಕರಿದ್ದ ಚಿತ್ರದಲ್ಲಿ ಬ್ರಾನ್ಸನ್‌ಗೂ ಪ್ರಮುಖ ಪಾತ್ರವಿತ್ತು. ಹೊರಹೋಗಲು ಸೆರೆಮನೆಯಿಂದಲೇ ಸುರಂಗ ಕೊರೆಯುವ ಟನಲ್ ಕಿಂಗ್ ಡ್ಯಾನಿ ವೆಲೆನ್ಸಕಿ ಪಾತ್ರದಲ್ಲಿ ಬ್ರಾನ್‌ಸನ್ ಅಭಿನಯ ಪ್ರೇಕ್ಷಕರಿಗೆ ಮೆಚ್ಚುಗೆಯಾಯಿತು. ಸೆರೆಮನೆಯಿಂದ ತಪ್ಪಿಸಿಕೊಳ್ಳುವ 57 ಸೈನಿಕರಲ್ಲಿ ಕೊನೆಗೂ ಗುರಿ ತಲುಪುವವರು ಮೂವರು ಮಾತ್ರ. ಅವರಲ್ಲಿ ಬ್ರಾನ್ಸನ್ ಪಾತ್ರವೂ ಒಂದು. ರೆಡ್ ಸನ್ ಚಿತ್ರದಲ್ಲಿ ಜಪಾನಿನ ಶ್ರೇಷ್ಠ ನಟರಲ್ಲೊಬ್ಬರಾದ ತೊಶಿರೊ ಮಿಫ್ಯೂನೆ ಮತ್ತು ಫ್ರಾನ್ಸಿನ ಮನ್ಮಥ ಅಲಿಯೋನ್ ಡಿಲೋನ್ ಜೊತೆೆಯಲ್ಲಿ ನಟಿಸಿದ್ದ. ಆ ಚಿತ್ರ ಗಲ್ಲಾ ಪೆಟ್ಟಿಗೆಯನ್ನು ದೋಚಿತು.


ಒಂದು ಕಾಲಕ್ಕೆ ಹೊಟ್ಟೆ ತುಂಬಿಸಲು ಪರದಾಡುತ್ತಿದ್ದ ಬ್ರಾನ್ಸನ್ ಚಿತ್ರವೊಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾದ. ಇದು ಆತನಿಗೇ ನಂಬಲಸಾಧ್ಯವಾಗಿತ್ತು. ನನ್ನ ಆಂತರಿಕ ಸಂತೋಷಕ್ಕಾಗಿ ಕಲಾ ಪ್ರತಿಭೆಯ ದಾಹ ತಣಿಸುವುದಕ್ಕಾಗಿ ನಾನು ನಟಿಸುತ್ತಿಲ್ಲ. ನಾನು ಹಣಕ್ಕಾಗಿ ನಟಿಸುತ್ತಿದ್ದೇನೆ. ಬಾಕ್ಸ್ ಆಫೀಸ್ ಯಶಸ್ಸಿಗಾಗಿ ಶ್ರಮಿಸುತ್ತೇನೆ ಎಂದು ಪ್ರಾಮಾಣಿಕವಾಗಿ ಹೇಳುತ್ತಿದ್ದ.
ಬ್ರಾನ್ಸನ್ ನೋಡುವುದಕ್ಕೆ ಒರಟನಂತೆ ಕಂಡರೂ ಆಂತರ್ಯದಲ್ಲಿ ಮೃದು ಹೃದಯಿ. ಜತೆಗೆ ಅಂತರ್ಮುಖಿ. ಆತ ನಿಜವಾಗಿಯೂ ಒರಟನಂತೆ ನಡೆದುಕೊಂಡದ್ದು ಒಮ್ಮೆ ಮಾತ್ರ. ‘ಗ್ರೇಟ್ ಎಸ್ಕೇಪ್’ ಚಿತ್ರದ ಚಿತ್ರೀಕರಣ ಜರ್ಮನಿಯಲ್ಲಿ ನಡೆಯುತ್ತಿದ್ದಾಗ ಆತ ಬ್ರಿಟನ್ ನಟಿ ಜಿಲ್ ಐರ್ಲೆಂಡ್‌ಳನ್ನು ಸಂಧಿಸಿದ. ಈಗಾಗಲೇ ಒಮ್ಮೆ ಮದುವೆಯಾಗಿದ್ದ ಬ್ರಾನ್ಸನ್ ವಿಚ್ಛೇದನ ಪಡೆದಿದ್ದ. ಜಿಲ್‌ಳನ್ನು ಕಂಡಾಗ ಮೋಹಗೊಂಡ. ಜಿಲ್ ಕೂಡ ನಟ ಡೇವಿಡ್ ಮ್ಯಾಕಲಮ್‌ನನ್ನು ಮದುವೆಯಾಗಿದ್ದಳು. ಡೇವಿಡ್ ಕೂಡ ಅದೇ ಚಿತ್ರದಲ್ಲಿ ಬ್ರಾನ್ಸನ್ ಜತೆ ನಟಿಸುತ್ತಿದ್ದ. ಜಿಲ್‌ಳಿಂದ ಹುಚ್ಚನಾಗಿದ್ದ ಬ್ರಾನ್ಸನ್ ಒಮ್ಮೆ ಪಾರ್ಟಿಯಲ್ಲಿ ಡೇವಿಡ್ ಮುಂದೆ ನಿಂತು ಜಿಲ್‌ಳನ್ನು ನಾನು ಮದುವೆಯಾಗುತ್ತೇನೆ ಎಂದು ಘೋಷಿಸಿದ. ಎಲ್ಲರೂ ಸ್ತಂಭೀಭೂತರಾದರು. ಡೇವಿಡ್ ಮಾತನಾಡಲಿಲ್ಲ. ಕೆಲವೇ ದಿನಗಳಲ್ಲಿ ಇಬ್ಬರ ಮದುವೆ ನಡೆದೇ ಹೋಯಿತು. ಆನಂತರ ಅವರಿಬ್ಬರೂ ‘ಬ್ರೇಕ್ ಅವೇ’, ‘ಬ್ರೇಕ್ ಹಾರ್ಟ್ ಪಾಸ್’, ‘ಫೇರ್‌ವೆಲ್ ಫ್ರೆಂಡ್ಸ್’, ‘ಕೋಲ್ಡ್ ಸ್ವೆಟ್’, ‘ಫ್ರಂ ನೂನ್ ಟಿಲ್ ಫ್ರೀ’ ಮುಂತಾದ ಚಿತ್ರಗಳಲ್ಲಿ ಒಟ್ಟಿಗೇ ಅಭಿನಯಿಸಿದರು. ಜಿಲ್ ಕ್ಯಾನ್ಸರ್‌ಗೆ (1990) ಬಲಿಯಾಗುವವರೆಗೂ ಬ್ರಾನ್ಸನ್ ಆಕೆಯ ಜತೆ ಸುಖದಾಂಪತ್ಯ ಜೀವನ ನಡೆಸಿದ.
ನಟನೆಯ ಗಂಧವೇ ಇಲ್ಲದ ಬ್ರಾನ್ಸನ್ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದು ವಿಚಿತ್ರವೇ ಸರಿ. ಆತನ ಡೆತ್‌ವಿಷ್ ಚಿತ್ರದ ಸರಣಿಗಳು ಅಮೆರಿಕದಲ್ಲಿ ಬಹು ಜನಪ್ರಿಯವಾದವು. ಅಮೆರಿಕದ ಭೂಗತ ಪ್ರಪಂಚವನ್ನು ಎದುರು ಹಾಕಿಕೊಂಡು ಏಕಾಂಗಿಯಾಗಿ ಹೋರಾಡುವ ವಾಸ್ತುಶಿಲ್ಪಿ ಪಾಲ್ ಕರ್ಟೆಸಿ ಪಾತ್ರದಲ್ಲಿ ಬ್ರಾನ್ಸನ್ ಅನ್ನು ನೋಡಲು ಜನ ದುಂಬಾಲು ಬಿದ್ದರು. ಈ ಚಿತ್ರದ ಬಗ್ಗೆ ಕಟುವಾದ ವಿಮರ್ಶೆ ಬರೆದ ಅಮೆರಿಕದ ವಿನ್ಸೆಂಟ್ ಕ್ಯಾನ್ಬಿ ‘‘ಇದೊಂದು ತುಚ್ಛ ತಿರಸ್ಕಾರಯೋಗ್ಯ ಚಿತ್ರ: ಹಿಂಸೆಯನ್ನು ಸಮರ್ಥಿಸುವ, ಕಾನೂನುಗಳನ್ನು ಗಾಳಿಗೆ ತೂರಿ ಕೊಲೆಯೇ ಸಮಸ್ಯೆಗೆ ಪರಿಹಾರ ಎಂಬುದನ್ನು ಮನಗಾಣಿಸುವ ಕ್ರೂರ ಚಿತ್ರ’’ ಎಂದು ಬಣ್ಣಿಸಿದ. ಆದರೆ ಅಮೆರಿಕ ಸಮಾಜವು ಹಿಂಸೆಯನ್ನು ಒಪ್ಪಿಕೊಂಡ ರೀತಿಯನ್ನು ಈ ಚಿತ್ರದ ಯಶಸ್ಸು ಸಾಬೀತುಪಡಿಸಿತು. ಅದರ ಜನಪ್ರಿಯತೆಯನ್ನು ಆಧರಿಸಿ ಒಟ್ಟು ನಾಲ್ಕು ಡೆತ್ ವಿಶ್ ಸರಣಿಗಳು ತಯಾರಾಗಿ ಗಲ್ಲಾ ಪೆಟ್ಟಿಗೆಯನ್ನು ದೋಚಿದವು. ಡೆತ್ ವಿಶ್ ಚಿತ್ರದ ಕಥೆಯನ್ನು ಆಧರಿಸಿ ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಸಿನೆಮಾಗಳು ಬಂದಿವೆ. ಆದರೆ ಯಾರೂ ಮೂಲವನ್ನು ಸ್ಮರಿಸುವುದಿಲ್ಲ.
ಬ್ರಾನ್ಸನ್‌ನ ಮತ್ತೊಂದು ಪ್ರತಿಭೆಯೆಂದರೆ ಚಿತ್ರಕಲೆ. ಬಿಡುವಾಗಿದ್ದಾಗ ಮನಸ್ಸಂತೋಷಕ್ಕಾಗಿ ಚಿತ್ರ ಬಿಡಿಸುವ ಹವ್ಯಾಸ ಆತನಿಗಿತ್ತು. ತನ್ನ ಬಾಲ್ಯದ ಅನುಭವಗಳನ್ನು ಆತ ಚಿತ್ರಗಳಲ್ಲಿ ಅಭಿವ್ಯಕ್ತಿಸುತ್ತಾನೆ. ಎಪ್ಪತ್ತರ ದಶಕದಲ್ಲಿ ಆತ ಏರ್ಪಡಿಸಿದ್ದ ಚಿತ್ರ ಪ್ರದರ್ಶನ ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದುದಲ್ಲದೆ ಚಿತ್ರಗಳೆಲ್ಲವೂ ಮಾರಾಟವಾದವು. ಬರಿದಾದ ಮನೆಯನ್ನು ಕಂಡ ಬ್ರಾನ್ಸನ್ ವಾಪಸ್ಸು ಹೋಗಿ ಎಲ್ಲರಿಂದಲೂ ಕೊಂಡದ್ದಕ್ಕಿಂತಲೂ ಹೆಚ್ಚು ಹಣ ತೆತ್ತು ಪಡೆದುಕೊಂಡ.
ಜನಪ್ರಿಯತೆಯ ತುತ್ತತುದಿಗೇರಿದರೂ ತನ್ನ ಖಾಸಗಿ ಬದುಕನ್ನು ಕಾಪಾಡಿಕೊಂಡ ಬ್ರಾನ್ಸನ್ ಮೂರು ಮದುವೆಯಿಂದ ಪಡೆದ ಮತ್ತು ತನ್ನ ಹೆಂಡತಿಯರ ಮೊದಲ ಮದುವೆಯ ಮಕ್ಕಳನ್ನು ದತ್ತು ಸ್ವೀಕರಿಸಿ ತುಂಬು ಸಂಸಾರವನ್ನು ಸಾಗಿಸಿದ. ಸುಮಾರು ಒಂದು ಕಿಲೋ ಮೀಟರ್ ಸುತ್ತಳತೆಯ ಆವರಣದಲ್ಲಿ ನಿರ್ಮಿಸಿದ ಬೃಹತ್ ಮನೆಯಲ್ಲಿ ಸಂಸಾರ ಸಾಗಿಸಿದ ಬ್ರಾನ್ಸನ್ ಆಗಸ್ಟ್ 30, 2003ರಲ್ಲಿ ತನ್ನ 81ನೇ ವಯಸ್ಸಿನಲ್ಲಿ ಉಸಿರಾಟದ ತೊಂದರೆಯಿಂದ ಲಾಸ್ ಏಂಜಲೀಸ್ ಆಸ್ಪತ್ರೆಯಲ್ಲಿ ನಿಧನನಾದ. ದಿನವೊಂದಕ್ಕೆ ಒಂದು ಡಾಲರ್ ಕೂಲಿಯನ್ನು ಸಂಪಾದಿಸಲು ಹೆಣಗಾಡುತ್ತಿದ್ದ ಕಾರ್ಮಿಕನೊಬ್ಬನಿಗೆ ಸಿನೆಮಾ ಎಂಬ ಮಾಯಲೋಕ ತಂದುಕೊಟ್ಟ ಯಶಸ್ಸು ಸಿನೆಮಾದಷ್ಟೇ ಅಚ್ಚರಿದಾಯಕವಾದದ್ದು.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News