ನೀವು ಏಕೆ ಬಿಕ್ಕಳಿಸುತ್ತೀರಿ ಎನ್ನುವುದು ನಿಮಗೆ ಗೊತ್ತೇ?

Update: 2019-05-14 16:34 GMT

 ನಾವೆಲ್ಲರೂ ಆಗಾಗ್ಗೆ ಬಿಕ್ಕಳಿಸುತ್ತಿರುತ್ತೇವೆ,ಆದರೆ ಬಿಕ್ಕಳಿಕೆ ಏಕೆ ಉಂಟಾಗುತ್ತದೆ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಬಿಕ್ಕಳಿಕೆಯು ಶ್ವಾಸಕೋಶಗಳ ತಳದಲ್ಲಿರುವ ಡಯಾಫ್ರಮ್ ಎಂದು ಕರೆಯಲಾಗುವ ಸ್ನಾಯುವಿನ ದಿಢೀರ್ ಸೆಳೆತವಾಗಿದೆ ಮತ್ತು ಇದರ ಬೆನ್ನಿಗೇ ಧ್ವನಿತಂತುಗಳು ಏಕಾಏಕಿ ಮುಚ್ಚಿಕೊಳ್ಳುತ್ತವೆ. ಇದು ವಿಶಿಷ್ಟವಾದ ‘ಹಿಕ್’ ಶಬ್ದವನ್ನು ಹೊರಡಿಸುತ್ತದೆ.

ಯಾವುದೇ ಸ್ಪಷ್ಟ ಕಾರಣವಿಲ್ಲದೆ ದಿಢೀರ್‌ನೆ ಉಂಟಾಗುವ ಮತ್ತು ಕೆಲವೇ ನಿಮಿಷಗಳ ಕಾಲ ಉಳಿಯುವ ಬಿಕ್ಕಳಿಕೆಗಳು ಅತ್ಯಂತ ಸಾಮಾನ್ಯವಾಗಿವೆ. ಕೆಲವೊಮ್ಮೆ ಬಿಕ್ಕಳಿಕೆಗೆ ಶರೀರದಲ್ಲಿಯ ಯಾವುದೋ ಅನಾರೋಗ್ಯ ಕಾರಣವಾಗಿರಬಹುದು ಮತ್ತು ಇಂತಹುದು ಸಾಮಾನ್ಯವಾಗಿ ಕಡಿಮೆ.

ಬಿಕ್ಕಳಿಕೆ ವಯಸ್ಕರಿಗೆ ಮಾತ್ರ ಸೀಮಿತವಲ್ಲ,ಶಿಶುಗಳು ಮತ್ತು ಮಕ್ಕಳನ್ನೂ ಅದು ಕಾಡುತ್ತದೆ. ಬಿಕ್ಕಳಿಕೆಯ ಕುರಿತು ಹೆಚ್ಚಿನ ಮಾಹಿತಿಗಳಿಲ್ಲಿವೆ.....

ಬಿಕ್ಕಳಿಕೆಗೆ ಕಾರಣವೇನು?

ಬಿಕ್ಕಳಿಕೆಗೆ ನಿಖರವಾದ ಕಾರಣವಿನ್ನೂ ಗೊತ್ತಾಗಿಲ್ಲ,ಆದರೆ ಅದನ್ನುಂಟು ಮಾಡುವ ಕೆಲವು ಅಂಶಗಳಿವೆ. ಹೊಟ್ಟೆ ಬಿರಿಯುವಂತೆ ಭೋಜನ,ಗಡಿಬಿಡಿಯಿಂದ ಊಟ ಮಾಡುವುದು,ಅತಿಯಾದ ಮದ್ಯಪಾನ,ಆಹಾರ,ಚ್ಯೂಯಿಂಗ್ ಗಮ್ ಅಥವಾ ಕ್ಯಾಂಡಿಗಳನ್ನು ಅಗಿಯುವಾಗ ಅತಿಯಾದ ಗಾಳಿಯನ್ನು ನುಂಗುವುದು,ಧೂಮ್ರಪಾನ,ತಾಪಮಾನದಲ್ಲಿ ದಿಢೀರ್ ಬದಲಾವಣೆ (ಆಂತರಿಕ ಮತ್ತು ಬಾಹ್ಯ),ತುಂಬ ಬಿಸಿ/ತಂಪು ಪಾನೀಯ ಸೇವನೆ,ಭಾವನಾತ್ಮಕ ಒತ್ತಡ ಮತ್ತು ಉದ್ವೇಗ,ಇಂಗಾಲೀಕೃತ ಪಾನೀಯಗಳ ಸೇವನೆ ಇವು ಇಂತಹ ಕೆಲವು ಸಾಮಾನ್ಯ ಕಾರಣಗಳಾಗಿವೆ.

ಕೆಲವು ವೈದ್ಯಕೀಯ ಸ್ಥಿತಿಗಳೂ ಬಿಕ್ಕಳಿಕೆಯನ್ನುಂಟು ಮಾಡುತ್ತವೆ. ಜಿಇಆರ್‌ಡಿ(ಆಮ್ಲೀಯತೆ),ಪಿತ್ತಕೋಶ ಕಾಯಿಲೆ,ಯಕೃತ್ತು,ಮೇದೋಜ್ಜೀರಕ ಗ್ರಂಥಿ ಮತ್ತು ಹೃದಯದ ಉರಿಯೂತ,ಗರ್ಭಾವಸ್ಥೆ,ಮದ್ಯಸೇವನೆ ಚಟ,ನ್ಯುಮೋನಿಯಾ ಮತ್ತು ರಕ್ತದಲ್ಲಿ ಅತಿಯಾದ ಯೂರಿಯಾ ಮಟ್ಟ ಇಂತಹ ಕೆಲವು ಸಮಸ್ಯೆಗಳಾಗಿವೆ.

  ಬಿಕ್ಕಳಿಕೆ ಸಾಮಾನ್ಯವಾಗಿ ಸ್ವನಿಯಂತ್ರಣಗೊಳ್ಳುವ ಸಮಸ್ಯೆಯಾಗಿದೆ. ಆದರೂ ಅದು 48 ಗಂಟೆಗಳವರೆಗೆ,ಕೆಲವೊಮ್ಮೆ ಎರಡು ತಿಂಗಳು ಮತ್ತು ಅದಕ್ಕೂ ಹೆಚ್ಚಿನ ಸಮಯ ಕಾಡಬಹುದು.

ಬಿಕ್ಕಳಿಕೆಯನ್ನು ಶಮನಿಸಲು ಸಾಮಾನ್ಯವಾಗಿ ಮನೆಮದ್ದುಗಳು ಸಾಕು. ಆದರೆ ಮೇಲೆ ತಿಳಿಸಿರುವಂತೆ ಬಿಕ್ಕಳಿಕೆ ನಿಲ್ಲದೆ ಮುಂದುವರಿದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಬಹುದು.

ಸಾಮಾನ್ಯವಾಗಿ ಬಿಕ್ಕಳಿಕೆ ತನ್ನಿಂತಾನೇ ನಿಲ್ಲುತ್ತದೆ ಮತ್ತು ವೈದ್ಯಕೀಯ ಚಿಕಿತ್ಸೆಯು ಅಗತ್ಯವಿರುವುದಿಲ್ಲ. ಆದರೆ ಮೂರು ಗಂಟೆಗೂ ಹೆಚ್ಚಿನ ಸಮಯದಿಂದ ಉಳಿದುಕೊಂಡಿದ್ದರೆ,ಆಹಾರ ಸೇವನೆ ಮತ್ತು ನಿದ್ರೆಗೆ ತೊಂದರೆಯನ್ನುಂಟು ಮಾಡುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

10 ಸೆಕೆಂಡ್‌ಗಳವರೆಗೆ ಉಸಿರನ್ನು ಬಿಗಿಹಿಡಿಯುವುದು,ಒಂದು ಗ್ಲಾಸ್ ತಣ್ಣೀರನ್ನು ತ್ವರಿತವಾಗಿ ಸೇವಿಸುವುದು,ಮಂಜುಗಡ್ಡೆ ಬೆರೆತ ನೀರನ್ನು ಗುಟುಕರಿಸುವುದು,ನೀರಿನಿಂದ ಗಾರ್ಗಲ್ ಮಾಡುವುದು,ಸ್ವಲ್ಪ ಸಕ್ಕರೆ ಅಥವಾ ಜೇನು ಸೇವನೆ,ನಿಮ್ಮ ಮಂಡಿಗಳನ್ನು ಎದೆಯತ್ತ ಎಳೆದುಕೊಂಡು ಮುಂದಕ್ಕೆ ಬಗ್ಗುವುದು,ಕುತ್ತಿಗೆಯ ಹಿಂಭಾಗವನ್ನು ಉಜ್ಜುವುದು ಅಥವಾ ತಟ್ಟುವುದು ಇವು ಬಿಕ್ಕಳಿಕೆಯನ್ನು ತಡೆಯಲು ಕೆಲವು ಸರಳ ಉಪಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News