ಕಣ್ಣಿಗೆ ಪೆಟ್ಟಾದಾಗ ಪ್ರಥಮ ಚಿಕಿತ್ಸೆಯನ್ನು ಹೀಗೆ ಮಾಡಿ

Update: 2019-05-16 10:01 GMT

 ಸೋಂಕು,ಗುದ್ದು,ರಾಸಾಯನಿಕಗಳ ದುಷ್ಪರಿಣಾಮ ಅಥವಾ ಯಾವುದೇ ಬಾಹ್ಯವಸ್ತು ಕಣ್ಣಿಗೆ ಹಾನಿಯನ್ನುಂಟು ಮಾಡಬಹುದು. ಇದರಿಂದ ಕಣ್ಣು ಕೆಂಪಗಾಗುವುದು, ತುರಿಕೆ,ಗಂಭೀರ ಪ್ರಕರಣಗಳಲ್ಲಿ ಕಣ್ಣಿನಿಂದ ರಕ್ತಸ್ರಾವ,ಕಣ್ಣುಗಳ ಒಳಪದರಗಳಿಗೆ ಹಾನಿ,ಇಷ್ಟೇ ಏಕೆ....ಅಂಧತ್ವವೂ ಉಂಟಾಗಬಹುದು.

ಕಣ್ಣುಗಳಿಗೆ ಏಟು ಬಿದ್ದಾಗ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಇಂತಹ ಸಂದರ್ಭಗಳಲ್ಲಿ ಕೆಲವು ಪ್ರಥಮ ಚಿಕಿತ್ಸೆಗಳನ್ನು ಕೈಗೊಳ್ಳುವ ಮೂಲಕ ಹೆಚ್ಚಿನ ಹಾನಿಯ ಅಪಾಯವನ್ನು ತಗ್ಗಿಸಬಹುದು. ಕಣ್ಣಿಗೆ ಪೆಟ್ಟು ಬಿದ್ದಾಗ ಅನುಸರಿಸಬಹುದಾದ ಕೆಲವು ಅಗತ್ಯ ಪ್ರಥಮ ಚಿಕಿತ್ಸೆ ಕ್ರಮಗಳು ಇಲ್ಲಿವೆ....

ಕಣ್ಣಿಗೆ ಉಂಟಾಗುವ ಯಾವುದೇ ಹಾನಿಯನ್ನು ಕಡೆಗಣಿಸಕೂಡದು. ಸೂಕ್ತ ವೈದ್ಯಕೀಯ ಚಿಕಿತ್ಸೆಯು ಮಾತ್ರ ತೀವ್ರ ಕಣ್ಣಿನ ಸಮಸ್ಯೆಗಳ ಅಪಾಯವನ್ನು ತಗ್ಗಿಸುತ್ತದೆ ಮತ್ತು ದೃಷ್ಟಿಯನ್ನು ಉಳಿಸುತ್ತದೆ.

    ಕಣ್ಣಿನಲ್ಲಿ ಹೊರಗಿನ ವಸ್ತು ಸೇರಿಕೊಂಡಾಗ ಅದು ಆರ್ದ್ರ ಚರ್ಮ ಮತ್ತು ಕಾರ್ನಿಯಾ ಅಥವಾ ಕಣ್ಣಾಲಿಗಳ ಮುಂದಿರುವ ಪಾರದರ್ಶಕ ಪಟಲಕ್ಕೆ ಹಾನಿಯನ್ನುಂಟು ಮಾಡುವುದರಿಂದ ಅದನ್ನು ಗುರುತಿಸಿ ಹೊರಕ್ಕೆ ತೆಗೆಯುವುದು ಮುಖ್ಯವಾಗುತ್ತದೆ. ರೋಗಿಯ ಕಣ್ಣು ಕೆಂಬಣ್ಣಕ್ಕೆ ತಿರುಗಿ ತೀವ್ರವಾಗಿ ಉರಿಯುತ್ತಿದ್ದರೆ ಕಣ್ಣಿನಲ್ಲಿ ಸೇರಿಕೊಂಡಿರುವ ಕಸ ಇತ್ಯಾದಿ ಬಾಹ್ಯವಸ್ತುವನ್ನು ಹೊರಗೆ ತೆಗೆಯುವುದು ಮೊದಲ ಕೆಲಸವಾಗುತ್ತದೆ.

ಸಣ್ಣ,ಗೋಚರವಾಗುವ ಬಾಹ್ಯವಸ್ತುವಾಗಿದ್ದರೆ ಅದನ್ನು ಟಿಷ್ಯೂ ಪೇಪರ್‌ನ ಅಂಚಿನಿಂದ ಅಥವಾ ಕಾಟನ್ ವೂಲ್ ಬಡ್‌ನಿಂದ ಹೊರಕ್ಕೆ ತೆಗೆಯಬಹುದು. ಯಾವುದೇ ಬಾಹ್ಯವಸ್ತು ಕಾಣಿಸದಿದ್ದರೆ,ಆದರೆ ಕಣ್ಣಿನಲ್ಲೇನೋ ಇದೆ ಎಂದು ಭಾವಿಸಿದ್ದರೆ ಮೇಲಿನ ಕಣ್ಣುಗುಡ್ಡೆಯನ್ನು ಕೆಳ ಕಣ್ಣುಗುಡ್ಡೆಯ ಮೇಲೆ ಎಳೆಯಿರಿ ಮತ್ತು ಪದೇ ಪದೇ ಕಣ್ಣುಗುಡ್ಡೆಯನ್ನು ಹೊರಳಿಸುತ್ತಿರಿ. ಇದರಿಂದಲೂ ನೆಮ್ಮದಿ ಸಿಗದಿದ್ದರೆ ಕಣ್ಣನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ,ಹೀಗೆ ಮಾಡುವಾಗ ಕಣ್ಣು ತೆರೆದೇ ಇರಬೇಕು. ಇಷ್ಟಾದರೂ ಕಣ್ಣಿನಲ್ಲೇನೋ ಇದೆ ಎಂದು ಭಾಸವಾಗುತ್ತಿದ್ದರೆ ತಕ್ಷಣ ವೈದ್ಯರ ಬಳಿಗೆ ತೆರಳಬೇಕಾಗುತ್ತದೆ. ಅಲ್ಲದೆ ಕೆಲವೊಮ್ಮೆ ಕಣ್ಣಿನಲ್ಲಿ ಸಿಕ್ಕಿಕೊಂಡ ಬಾಹ್ಯವಸ್ತುವನ್ನು ತೆಗೆಯುವಾಗ ಅದು ಇನ್ನಷ್ಟು ಹಾನಿಯನ್ನುಂಟು ಮಾಡಬಹುದಾದ್ದರಿಂದ ವೈದ್ಯಕೀಯ ನೆರವು ಪಡೆಯುವುದು ಒಳ್ಳೆಯದು.

 ಕಣ್ಣಿನಲ್ಲಿ ಕಸ ಇತ್ಯಾದಿಗಳು ಸಿಕ್ಕಿಕೊಂಡಾಗ ಕಣ್ಣನ್ನು ಉಜ್ಜಿಕೊಳ್ಳಬೇಡಿ,ಇದರಿಂದ ಕಣ್ಣಿಗೆ ಇನ್ನಷ್ಟು ಹಾನಿಯುಂಟಾಗುತ್ತದೆ. ಕಣ್ಣಿನಲ್ಲಿಯ ವಸ್ತುವನ್ನು ಹೊರಗೆ ತೆಗೆಯಲು ಸೂಜಿ ಅಥವಾ ಹರಿತ ಮತ್ತು ಚೂಪಾದ ಸಾಧನವನ್ನು ಬಳಸಬೇಡಿ. ಕಣ್ಣುಗಳನ್ನು ಮುಟ್ಟುವ ಮುನ್ನ ನೀರು ಮತ್ತು ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ,ಇದರಿಂದ ಕೈಗಳಿಂದ ಧೂಳು ಮತ್ತು ಬ್ಯಾಕ್ಟೀರಿಯಾಗಳು ಕಣ್ಣಿಗೆ ವರ್ಗಾವಣೆಗೊಳ್ಳುವುದನ್ನು ತಡೆಯಬಹುದು.

  ಮನೆಗಳಲ್ಲಿರುವ ಕ್ಲೀನರ್‌ಗಳಲ್ಲಿ ಹಲವಾರು ರಾಸಾಯನಿಕಗಳು ಇರುತ್ತವೆ. ಕೆಲಸದ ಸ್ಥಳಗಳಲ್ಲೂ ವಿಷಯುಕ್ತ ಅನಿಲಗಳು ಇರುತ್ತವೆ. ಇಂತಹ ರಾಸಾಯನಿಕಗಳು ಆಕಸ್ಮಿಕವಾಗಿ ಕಣ್ಣುಗಳನ್ನು ಸ್ಪರ್ಶಿಸಿದಾಗ ಕಣ್ಣುಗಳು ಉರಿಯತೊಡಗುತ್ತವೆ ಮತ್ತು ಹಾನಿಗೊಳಗಾಗುತ್ತವೆ. ಇಂತಹ ಸಂದರ್ಭದಲ್ಲಿ ಗಾಬರಿಗೊಳ್ಳದೆ ಕಣ್ಣುಗಳನ್ನು ತೆರೆದಿಟ್ಟುಕೊಂಡು ರಾಸಾಯನಿಕಗಳನ್ನು ತೆಗೆಯಲು ನೀರನ್ನು ಎರಚಿಕೊಳ್ಳಿ. ರಾಸಾಯನಿಕಗಳ ಪರಿಣಾಮವನ್ನು ನಿವಾರಿಸಲು ಕನಿಷ್ಠ 10-15 ನಿಮಿಷಗಳ ಕಾಲ ಕಣ್ಣನ್ನು ನೀರಿನಿಂದ ಫ್ಲಷ್ ಮಾಡಿ. ಕಣ್ಣುಗಳನ್ನು ಉಜ್ಜಬೇಡಿ ಅಥವಾ ಬ್ಯಾಂಡೇಜ್ ಅಥವಾ ಕೈಯಿಂದ ಮುಚ್ಚಬೇಡಿ,ಇದು ಒಳ್ಳೆಯದಕ್ಕಿಂದ ಕೆಟ್ಟದ್ದನ್ನೇ ಮಾಡುತ್ತದೆ. ಇಂತಹ ಘಟನೆಗಳನ್ನು ತಡೆಯಲು ಮನೆಗಳಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಳಸುವ ಸಂದರ್ಭ ಕಣ್ಣುಗಳ ರಕ್ಷಣೆಗೆ ಸೂಕ್ತ ಕಾಳಜಿ ವಹಿಸಿ.

    ಫುಟ್‌ಬಾಲ್‌ನಂತಹ ವಸ್ತು ಕಣ್ಣಿಗೆ ಅಪ್ಪಳಿಸಿದಾಗ ಅಂತಹ ತೀವ್ರ ಏಟು ಉಂಟಾಗುವುದಿಲ್ಲ. ಅದರೆ ಟೆನಿಸ್‌ಬಾಲ್‌ನಂತಹ ಸಣ್ಣವಸ್ತು ಕಣ್ಣಿಗೆ ಅಪ್ಪಳಿಸಿದಾಗ ಕಣ್ಣುಗುಡ್ಡೆಗೆ ಹೆಚ್ಚಿನ ಪೆಟ್ಟು ಬೀಳುತ್ತದೆ ಮತ್ತು ಕಣ್ಣಿಗೆ ಹಾನಿಯ ಪ್ರಮಾಣ ಹೆಚ್ಚಿರುತ್ತದೆ. ಗಂಭೀರ ಪ್ರಕರಣಗಳಲ್ಲಿ ಕಣ್ಣುಗಳಿಂದ ರಕ್ತಸ್ರಾವವಾಗಬಹುದು. ಇಂತಹ ಪೆಟ್ಟುಗಳು ಅಥವಾ ಗುದ್ದು ತಗುಲಿದ್ದರೆ ಐಸ್ ಪ್ಯಾಕ್ ಬಳಸಿ ಕನಿಷ್ಠ 10 ನಿಮಿಷಗಳ ಕಾಲ ಕಣ್ಣಿಗೆ ಕೋಲ್ಡ್ ಕಾಂಪ್ರೆಸ್ ನೀಡಿ. ಪ್ರತಿ 10-15 ನಿಮಿಷಗಳಿಗೆ ಇದನ್ನು ಪುನರಾವರ್ತಿಸಿ. ಐಸ್ ಪ್ಯಾಕ್ ಬಳಸುವಾಗ ಕಣ್ಣಿನ ಮೇಲೆ ಒತ್ತಡ ಹಾಕಬೇಡಿ. ಮಂಜುಗಡ್ಡೆಯನ್ನೆಂದೂ ಕಣ್ಣಿನ ಮೇಲೆ ನೇರವಾಗಿ ಬಳಸಬೇಡಿ. ನಿಮ್ಮ ಬಳಿ ಐಸ್ ಪ್ಯಾಕ್ ಇಲ್ಲದಿದ್ದರೆ ಕೆಲವು ಮಂಜುಗಡ್ಡೆ ತುಣುಕುಗಳನ್ನು ಹತ್ತಿಯ ಬಟ್ಟೆ ಅಥವಾ ಕರವಸ್ತ್ರದಲ್ಲಿ ಕಟ್ಟಿ ಅದನ್ನು ಕೋಲ್ಡ್ ಕಂಪ್ರೆಸ್‌ಗೆ ಬಳಸಿ.

ಕಣ್ಣಿನಿಂದ ರಕ್ತಸ್ರಾವವಾಗುತ್ತಿದ್ದರೆ ನೀರಿನಿಂದ ತೊಳೆಯಬೇಡಿ,ಹತ್ತಿಯ ಬಟ್ಟೆಯನ್ನು ಕಣ್ಣಿ ನ ಮೇಲೆ ಇಟ್ಟುಕೊಂಡು ತಕ್ಷಣ ಆಸ್ಪತೆಗೆ ಧಾವಿಸಿ.

ಕಣ್ಣುಗಳಲ್ಲಿ ಗಾಯಗಳಿದ್ದರೆ,ರಕ್ತಸ್ರಾವವಾಗುತ್ತಿದ್ದರೆ,ದೃಷ್ಟಿಯಲ್ಲಿ ಬದಲಾವಣೆಯಾಗಿದ್ದರೆ ಅಥವಾ ಕಣ್ಣಿಲ್ಲಿ ಏನೋ ಸಿಕ್ಕಿಹಾಕಿಕೊಂಡಿದೆ ಎಂದು ಭಾಸವಾಗುತ್ತಿದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News