ಖಾಸಗಿ ವೈದ್ಯಕೀಯ ಕ್ಷೇತ್ರದಲ್ಲಿನ ಅನಗತ್ಯ ಪರೀಕ್ಷೆಗಳು

Update: 2019-05-22 18:30 GMT

ಆರೋಗ್ಯ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಏನೊಂದೂ ಜ್ಞಾನವಿಲ್ಲದ ಕಾರಣ ವೈದ್ಯರು ಏನು ಹೇಳುತ್ತಾರೋ ಅದನ್ನೇ ವೇದ ವಾಕ್ಯವೆಂದು ರೋಗಿಗಳು ಒಪ್ಪಿಕೊಳ್ಳುತ್ತಾರೆ. ಇನ್ನು ಔಷಧಿ ಬಗ್ಗೆ ಕೂಡಾ ಏನೂ ಮಾಹಿತಿ ಇಲ್ಲದೆ ನೋವಿನ ಮಾತ್ರೆ ತೆಗೆದುಕೊಂಡು ಅದರ ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡದೆ ತೆಗೆದುಕೊಂಡು ಬೇರೊಂದು ರೀತಿಯಲ್ಲಿ ಅವರ ಆರೋಗ್ಯ ಕುಸಿಯಲು ಕಾರಣವಾಗುತ್ತದೆ. ಇಲ್ಲಿ ವೈದ್ಯರು ಮಾನವೀಯತೆಯಿಂದ ರೋಗಿಯ ಆರೋಗ್ಯವೇ ಮುಖ್ಯವೆಂದು ಕಾಳಜಿ ತೋರಿಸುವುದು ಇಂದು ಅಪರೂಪವಾಗಿದೆ. ‘‘ವೈದ್ಯೋ ನಾರಾಯಣ ಹರಿ’’ ಎನ್ನುವ ನುಡಿ ವೈದ್ಯರು ದೇವರಿಗೆ ಸಮ ಎಂದು ಇದೆ. ರೋಗಿಯ ರೋಗದ ಬಗ್ಗೆ ಸರಿಯಾದ ರೋಗ ಅವರ ಅಸ್ವಸ್ಥತೆಯ ಪೂರ್ಣ ವಿವರ ಕೇಳಿ ಪೂರ್ಣ ಚಿಕಿತ್ಸೆ ಮಾಡಿ ವಿವರವಾಗಿ ರೋಗಿಗೆ ತಿಳಿಸುವುದು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ವಸ್ತು ಸ್ಥಿತಿ ಭಿನ್ನವಾಗಿದೆ. ಅದಕ್ಕೆ ತಕ್ಕಂತೆ ಔಷಧಿ ಕಂಪೆನಿಗಳು ಮಹಾನ್ ರೀತಿಯಲ್ಲಿ ಬೆಳೆದಿವೆ. ಇಲ್ಲಿ ಒಳಒಪ್ಪಂದದ ಸಮಾಲೋಚನೆಯಿಂದ ರೋಗಿಗಳ ಆರ್ಥಿಕ ಶೋಷಣೆಯೂ ಕಮಿಷನ್ ಉದ್ದೇಶದಿಂದ ಅನವಶ್ಯಕ ಪರೀಕ್ಷೆ ನಡೆಸಿ ಆಗುತ್ತಿರುತ್ತದೆ. ಉದಾಹರಣೆಗೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಕ್ಕೆ ಬಳಸಲಾಗುವ ಸ್ಟೆಂಟ್‌ಗಳಲ್ಲಿ ಶೇ.600ರಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಬೆಳಕಿಗೆ ಬಂದ ನಂತರ ಕೇಂದ್ರ ಸರಕಾರ ಸ್ಟೆಂಟ್‌ಗಳ ಗರಿಷ್ಠ ದರ ನಿಗದಿ ಮಾಡಿದೆ.
Diagnosis ಸುಮಾರು ಏಳೆಂಟು ವರ್ಷಗಳ ಹಿಂದೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಕೊಡುತ್ತಾರೆ ಎಂದು ಯಾರೋ ಹೇಳಿದ್ದನ್ನು ಕೇಳಿ ಹೊಟ್ಟೆ ನೋವು ಬರುತ್ತದೆ ಎಂದು ಅಲ್ಲಿ ತಪಾಸಣೆಗೆ ಹೋಗಿದ್ದೆ. ಅವರು ಏನೇನೋ ಪರೀಕ್ಷೆ ಮಾಡಿ ಕೇಸ್ ತುಂಬಾ ಸೀರಿಯಸ್, ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದರು. ನಂತರ ಪರಿಚಯದ ಡಾಕ್ಟರ್ ಒಬ್ಬರಿಗೆ ತೋರಿಸಿದಾಗ ಗಾಬರಿಪಡುವಂತಹದ್ದೇನೂ ಇಲ್ಲ. ಕೆಲವೊಮ್ಮೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೀಗೆ ನೋವು ಬರುತ್ತದೆ ಎಂದರು. ಆಗಲೇ ತಜ್ಞರೆನಿಸಿಕೊಂಡ ಡಾಕ್ಟರ್‌ಗಳು ಮಾಡುವಾಗ ಹೇಗೆ ತಪ್ಪುಗಳನ್ನು ಮಾಡಿ ರೋಗಿಗಳನ್ನು ಗಾಬರಿಗೊಳಿಸುತ್ತಾರೆ ಎಂದು ಮನವರಿಕೆಯಾಗಿತ್ತು. ಇಂತಹ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೆಪದಲ್ಲಿ ಒಂದಕ್ಕೆ ಹತ್ತು ಪಟ್ಟು ಖರ್ಚಾಗುವುದು ನಿಶ್ಚಿತ.
ಉದಾಹರಣೆ ಹೇಳಬೇಕೆಂದರೆ ನಾನು ಈ ಹಿಂದೆ ಓದಿದ ಪತ್ರಿಕಾ ವರದಿ ಪ್ರಕಾರ ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಇಲಾಖೆಯು ಇತ್ತೀಚೆಗೆ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ವ್ಯವಹಾರಗಳನ್ನು ಪತ್ತೆ ಹಚ್ಚಿತು. ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಥೆಟರ್‌ನಂತಹ ವೈದ್ಯಕೀಯ ಸಾಧನಗಳನ್ನು ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ರೋಗಿಗಳಿಗೆ ಮಾರುತ್ತಿದ್ದರಲ್ಲದೆ ಒಬ್ಬ ರೋಗಿಗೆ ಬಳಸಿದ ಕ್ಯಾಥೆಟರ್‌ಗಳನ್ನು ಮತ್ತೆ ಮೂರು ರೋಗಿಗಳಿಗೆ ಬಳಸುತ್ತಿದ್ದರು ಎನ್ನುವುದನ್ನು ಪತ್ತೆ ಹಚ್ಚಲಾಗಿತ್ತು. ಹಾಗೆಯೇ ಅನಗತ್ಯ ಪರೀಕ್ಷೆಗಳಿಗೆ, ಔಷಧಗಳಿಗೆ ಸಲಹೆ ಮಾಡುವುದು ಔಷಧ ತಯಾರಿಸುವ ಕಂಪೆನಿಗಳಿಗೆ ಲಾಭ ಮಾಡಿಕೊಡುವ ವಿಧಾನವೂ ಆಗಿತ್ತು. ಅಂದರೆ ವೈದ್ಯಕೀಯ ಸೇವೆಯು ನೀತಿ ತತ್ವಗಳ ಬದ್ಧತೆಯ ಬಗ್ಗೆ ಎಂತಹ ನಿರ್ಲಕ್ಷ ತೋರಿಸುತ್ತಿದೆ ಎನ್ನುವುದು ವಿಷಾದದ ಸಂಗತಿ. ಈ ದಿಸೆಯಲ್ಲಿ ಸರಕಾರವೂ ಆರೋಗ್ಯ ಸೇವೆಯ ಬಗ್ಗೆ ಬೇಕಾದಷ್ಟು ಮಾತನಾಡುತ್ತಿದೆ ವಿನಃ ಅದರ ನೀತಿಗಳು ಪಟ್ಟಭದ್ರ ಹಿತಾಸಕ್ತಿಗಳಿಂದ ಕೂಡಿದೆ ಎಂಬುದು ನಿರ್ವಿವಾದ. ಆರೋಗ್ಯ ಸೇವೆ ಎನ್ನುವುದು ವೈದ್ಯರ ಮುಖ್ಯ ಕಾಳಜಿ ಆಗಿರಬೇಕು ಹಾಗೂ ಜವಾಬ್ದಾರಿಯಾಗಬೇಕು. ಆರೋಗ್ಯ ವ್ಯವಸ್ಥೆಯು ಬರೀ ಚಿಕಿತ್ಸಾತ್ಮಕ ಸೇವೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ರೋಗ ತಡೆಗಟ್ಟುವಿಕೆ, ಆರೋಗ್ಯವರ್ಧನೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮುಂತಾದ ಎಲ್ಲಾ ಜವಾಬ್ದಾರಿಗಳನ್ನೂ ಒಳಗೊಂಡಿರುತ್ತದೆ.
ನನ್ನ ಅಕ್ಕನ ಮೊಮ್ಮಗಳು ಅಮೆರಿಕದಲ್ಲಿ ಆಧುನಿಕ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಅವಳು ಅಲ್ಲಿನ ವೈದ್ಯಕೀಯ ವ್ಯವಸ್ಥೆ ಬಗ್ಗೆ ಹೇಳುತ್ತಿದ್ದಳು. ಅಲ್ಲಿ ತಿಂಗಳಿಗೊಮ್ಮೆ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳೊಂದಿಗೆ ಚರ್ಚಾಗೋಷ್ಠಿ ಇದ್ದು ಆಸ್ಪತ್ರೆಯಲ್ಲಿ ತೀರಿಕೊಂಡ ಪೇಷಂಟ್‌ಗಳ ಬಗ್ಗೆ ಹಾಗೂ ಕೊಟ್ಟ ಶುಶ್ರೂಷೆ ತಪ್ಪಾಗಿ ಸ್ಥಿತಿ ಬಿಗಡಾಯಿಸಿದ ಪೇಷಂಟ್‌ಗಳ ವಿಷಯವನ್ನು ಎಲ್ಲರ ಮುಂದೆ ಚರ್ಚೆಗೆ ಇಡಬೇಕಾಗಿತ್ತು. ತಮ್ಮ ತಮ್ಮ ಚಿಕಿತ್ಸೆಯ ಬಗ್ಗೆ ಚರ್ಚಿಸಲಾಗುತ್ತಿತ್ತು. ಂತರ ಮೃತ ರೋಗಿಯ ಪೋಸ್ಟ್‌ಮಾರ್ಟಂ ಪರೀಕ್ಷೆಯ ಫಲಿತಾಂಶದ ಮೇಲೆ ಮರಣಕ್ಕೆ ಕಾರಣವೇನು ಎಂಬುದನ್ನು ಅಟಾಪ್ಸಿಯ ಆಧಾರದ ಮೇಲೆ ಸ್ಪಷ್ಟವಾಗಿ ಹೇಳಿ ತೋರಿಸುತ್ತಾರೆ. ಅಂತಹ ಗೋಷ್ಠಿಗಳು ಅವರ ವೈದ್ಯಕೀಯ ಕಾಳಜಿಯ ಬಗ್ಗೆ ತೋರಿಸುತ್ತದೆ. ನಮ್ಮಲ್ಲಿ ರೋಗಿಯ ಚಿಕಿತ್ಸೆ ಬಗ್ಗೆ ಕಾಳಜಿ ತೋರಿಸುವುದು ಅಷ್ಟರಲ್ಲೇ ಇದೆ ಎಂದು ಹೇಳುತ್ತಿದ್ದಳು. ನಮ್ಮಲ್ಲಿ ಸೇವಾ ದರಗಳು ನಿಗದಿಯಾಗಿದ್ದರೆ ಮಾತ್ರ ರೋಗಿಗಳ ಆರ್ಥಿಕ ಶೋಷಣೆ ನಿಯಂತ್ರಿಸಲು ಸಾಧ್ಯ.
ಇನ್ನು ‘ಕೆಪಿಎಂಇ’ ತಿದ್ದುಪಡಿ ಮಸೂದೆ 2017ರ ವಿರುದ್ಧ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಖಾಸಗಿ ವೈದ್ಯರು ಹೋರಾಟ ನಡೆಸಿದ್ದಾರೆ ಎಂಬ ಪತ್ರಿಕಾ ವರದಿ ಓದಿ ಅಚ್ಚರಿ ಎನಿಸಿತು. ಖಾಸಗಿ ಆಸ್ಪತ್ರೆಗಳು ನಿಜವಾದ ರೋಗಿ ಪರ ಕಾಳಜಿ ಇಟ್ಟುಕೊಂಡಿದ್ದರೆ ಇಂತಹ ಕಾನೂನು ಬೇಕೇ ಇರಲಿಲ್ಲ. ರೋಗಿಗಳ ಬದುಕಿಗೆ ಖುಷಿಯ ಕಾರಂಜಿ ಚಿಮ್ಮಿಸುವುದೇ ವೈದ್ಯರು ಮಾಡಬೇಕಾದ ಧರ್ಮ. ಇದು ಹೆಚ್ಚು ಚರ್ಚಿಸುವ ವಿಷಯವೂ ಆಗಬೇಕಿದೆ.

Writer - ಕೆ. ತಾರಾ ಭಟ್

contributor

Editor - ಕೆ. ತಾರಾ ಭಟ್

contributor

Similar News