ಕೆಮ್ಮು ಎದೆನೋವನ್ನು ಕಡೆಗಣಿಸಬೇಡಿ,ಅದು ಈ ಅಪಾಯದ ಲಕ್ಷಣವಾಗಿರಬಹುದು!

Update: 2019-05-27 17:38 GMT

ನ್ಯುಮೋನಿಯಾ ಒಂದು ವಿಧದ ಸೋಂಕು ಆಗಿದ್ದು,ಒಂದು ಅಥವಾ ಎರಡೂ ಶ್ವಾಸಕೋಶಗಳಲ್ಲಿನ ಗಾಳಿಚೀಲಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಗಾಳಿಚೀಲಗಳು ದ್ರವ ಅಥವಾ ಕೀವಿನಿಂದ ತುಂಬಿಕೊಳ್ಳುತ್ತವೆ ಮತ್ತು ಕಫ ಅಥವಾ ಕೀವಿನೊಂದಿಗೆ ಕೆಮ್ಮು,ಜ್ವರ,ಚಳಿ ಮತ್ತು ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತವೆ.

ಬ್ಯಾಕ್ಟೀರಿಯಾ,ವೈರಾಣುಗಳು ಮತ್ತು ಶಿಲೀಂಧ್ರಗಳಂತಹ ಸೂಕ್ಷ್ಮ್ಮಜೀವಿಗಳು ನ್ಯುಮೋನಿಯಾಕ್ಕೆ ಕಾರಣವಾಗುತ್ತವೆ. ನ್ಯುಮೋನಿಯಾ ವ್ಯಕ್ತಿಯನ್ನು ಗಂಭೀರ ಸ್ಥಿತಿಯಿಂದ ಹಿಡಿದು ಮಾರಣಾಂತಿಕ ಸ್ಥಿತಿಗೂ ತಳ್ಳಬಹುದು. ಈ ಕಾಯಿಲೆ ಶಿಶುಗಳಲ್ಲಿ, ಎಳೆಯ ಮಕ್ಕಳಲ್ಲಿ ಮತ್ತು 65 ವರ್ಷ ದಾಟಿದ ಹಿರಿಯರಲ್ಲಿ ಹೆಚ್ಚು ಗಂಭೀರ ಸ್ವರೂಪದ್ದಾಗಿರುತ್ತದೆ. ಅಲ್ಲದೆ ಈಗಾಗಲೇ ಆರೋಗ್ಯ ಸಮಸ್ಯೆಗಳಿರುವ ಅಥವಾ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ವ್ಯಕ್ತಿಗಳನ್ನೂ ನ್ಯುಮೋನಿಯಾ ಕಾಡುತ್ತದೆ. ನ್ಯುಮೋನಿಯಾದಿಂದ ಪೀಡಿತ ರೋಗಿಗಳಲ್ಲಿ ವಾಕರಿಕೆ,ವಾಂತಿ ಮತ್ತು ಅತಿಸಾರದಂತಹ ಲಕ್ಷಣಗಳೂ ಕಂಡು ಬರುತ್ತವೆ.

ಕೆಮ್ಮು ಮತ್ತು ಕಫ: ನ್ಯುಮೋನಿಯಾ ಪೀಡಿತ ವ್ಯಕ್ತಿಯಲ್ಲಿ ತೀವ್ರ ಕೆಮ್ಮು ಕಾಣಿಸಿಕೊಳ್ಳುತ್ತದೆ ಮತ್ತು ಆಗಾಗ್ಗೆ ಕಫವೂ ಹೊರಬೀಳುತ್ತಿರುತ್ತದೆ. ಕಫದ ಬಣ್ಣ ಕೆಂಪು-ಕಂದು,ಹಸಿರು ಅಥವಾ ಹಳದಿಯಾಗಿದ್ದರೆ ಅದು ಖಚಿತವಾಗಿ ಬ್ಯಾಕ್ಟೀರಿಯಾ ಸೋಂಕನ್ನು ಸೂಚಿಸುತ್ತದೆ. ಕಫವು ತೆಳ್ಳಗಾಗಿ ಬಿಳಿಯ ಬಣ್ಣದ್ದಾಗಿದ್ದರೆ ಅದು ಮೈಕೋಪ್ಲಾಸ್ಮಾ ಅಥವಾ ವೈರಾಣು ನ್ಯುಮೋನಿಯಾ ಆಗಿರಬಹುದು.

ತೀವ್ರ ಜ್ವರ: ಬ್ಯಾಕ್ಟೀರಿಯಲ್ ನ್ಯುಮೋನಿಯಾ ಇದ್ದರೆ ಶ್ವಾಸಕೋಶಗಳ ಭಾಗವು ನಿಧಾನವಾಗಿ ದ್ರವದಿಂದ ತುಂಬಿಕೊಂಡು ಗಟ್ಟಿಯಾಗುತ್ತದೆ ಮತ್ತು ಇದನ್ನು ಘನೀಕರಣ ಎಂದು ಕರೆಯಲಾಗುತ್ತದೆ. ಮುಂದಿನ ಕೆಲವು ಗಂಟೆಗಳಲ್ಲಿ ಕೆಲ ಬ್ಯಾಕ್ಟೀರಿಯಾ ಸೋಂಕುಗಳು ಅಭಿವೃದ್ಧಿಗೊಳ್ಳುತ್ತವೆ. ವ್ಯಕ್ತಿಯನ್ನು ತೀವ್ರ ಜ್ವರವು ಕಾಡುತ್ತದೆ ಮತ್ತು ಅದು 105 ಡಿಗ್ರಿ ಫ್ಯಾರೆನ್‌ಹೀಟ್ ಮಟ್ಟಕ್ಕೂ ತಲುಪಬಹುದು.

ತೀವ್ರ ಎದೆ ನೋವು: ನ್ಯುಮೋನಿಯಾ ತೀವ್ರ ಎದೆನೋವನ್ನೂ ಉಂಟು ಮಾಡುತ್ತದೆ ಮತ್ತು ಬ್ಯಾಕ್ಟೀರಿಯಲ್ ನ್ಯುಮೋನಿಯಾದ ಪ್ರಕರಣದಲಿ ಆಳವಾಗಿ ಉಸಿರಾಡಿದಾಗ ಅಥವಾ ಕೆಮ್ಮಿದಾಗ ನೋವು ಇನ್ನಷ್ಟು ತೀವ್ರಗೊಳ್ಳುತ್ತದೆ. ಇತರ ವಿಧದ ನ್ಯುಮೋನಿಯಾಗಳು ಎದೆನೋವನ್ನುಂಟು ಮಾಡುತ್ತವೆ ಮತ್ತು ಪ್ರತಿ ಪ್ರಕರಣದಲ್ಲಿಯೂ ನೋವಿನ ತೀವ್ರತೆ ಭಿನ್ನವಾಗಿರುತ್ತದೆ. ಇದರ ಜೊತೆಗೆ ತೀವ್ರ ಕೆಮ್ಮು ಕಾಡುತ್ತಿರುತ್ತದೆ ಮತ್ತು ಒಟ್ಟಾರೆಯಾಗಿ ವ್ಯಕ್ತಿಯು ತೀವ್ರ ಯಾತನೆಯನ್ನು ಅನುಭವಿಸುತ್ತಾನೆ. ಇಂತಹ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಶೀಘ್ರ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.

ನ್ಯುಮೋನಿಯಾವನ್ನು ಸಾಮಾನ್ಯವಾಗಿ ವೈರಾಣು ನ್ಯುಮೋನಿಯಾ,ಬ್ಯಾಕ್ಟೀರಿಯಲ್ ನ್ಯುಮೋನಿಯಾ ಮತ್ತು ಮೈಕೋಪ್ಲಾಸ್ಮಾ ನ್ಯುಮೋನಿಯಾ ಹೀಗೆ ಮೂರು ವರ್ಗಗಲ್ಲಿ ವಿಭಜಿಸಲಾಗಿದೆ. ಇವುಗಳ ಲಕ್ಷಣಗಳು ಹೀಗಿವೆ,

ವೈರಾಣು ನ್ಯುಮೋನಿಯಾ: ಸಾಮಾನ್ಯ ಜ್ವರ,ಚಳಿ,ಸ್ನಾಯುಗಳಲ್ಲಿ ನೋವು,ಎದೆನೋವು,ಗಂಟಲು ಕೆರೆತ,ಸ್ವಲ್ಪ ಪ್ರಮಾಣದ ಲೋಳೆಯೊಂದಿಗೆ ಕೆಮ್ಮು

ಬ್ಯಾಕ್ಟೀರಿಯಲ್ ನ್ಯುಮೋನಿಯಾ: ಅತಿಯಾದ ಜ್ವರ,ಕೆಮ್ಮಿನೊಂದಿಗೆ ಹಸಿರು ಛಾಯೆಯ ಅಥವಾ ತುಕ್ಕಿನ ಬಣ್ಣದ ಲೋಳೆ,ಉಸಿರಾಟದಲ್ಲಿ ಕಷ್ಟ,ಹೊಟ್ಟೆನೋವು,ತೀವ್ರ ಬಳಲಿಕೆ,ಎದೆನೋವು ಮತ್ತು ಆಳವಾಗಿ ಉಸಿರಾಡಿದಾಗ ಈ ನೋವು ತೀವ್ರಗೊಳ್ಳುವಿಕೆ

ಮಕ್ಕಳಲ್ಲಿ ಬ್ಯಾಕ್ಟೀರಿಯಲ್ ನ್ಯುಮೋನಿಯಾ: ತ್ವರಿತ ಉಸಿರಾಟ,ಏಕಾಏಕಿ ಜ್ವರ ಬರುವುದು,ಕೆಮ್ಮು ಹಾಗೂ ತ್ವಚೆ,ತುಟಿಗಳು ಅಥವಾ ಬೆರಳ ತುದಿಗಳು ನೀಲಿ ವರ್ಣಕ್ಕೆ ತಿರುಗುವುದು

ಮೈಕೋಪ್ಲಾಸ್ಮಾ ನ್ಯುಮೋನಿಯಾ: ದಿಢೀರ್ ಆಗಿ ಕೆಮ್ಮು ಕಾಣಿಸಿಕೊಳ್ಳುವುದು ಮತ್ತು ಕೆಮ್ಮಿನೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಲೋಳೆಯು ಹೊರಬೀಳುವುದು, ಚಳಿ ಮತ್ತು ಜ್ವರ,ವಾಕರಿಕೆ ಅಥವಾ ವಾಂತಿ,ತಿಂಗಳವರೆಗೂ ನಿಶ್ಶಕ್ತಿ

ಈ ಲಕ್ಷಣಗಳು ಕಂಡು ಬಂದಾಗ ವೈದ್ಯರನ್ನು ತಕ್ಷಣ ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News