ಮೆಥಿಮೊಗ್ಲೋಬಿನಿಮಿಯಾ ಎಂದರೇನು?

Update: 2019-05-29 18:49 GMT

ರಕ್ತದಲ್ಲಿ ಮೆಥಿಮೊಗ್ಲೋಬಿನ್ ಮಟ್ಟ ಹೆಚ್ಚಿದ್ದಾಗ ಅಂತಹ ಸ್ಥಿತಿಯನ್ನು ಮೆಥಿಮೊಗ್ಲೋಬಿನಿಮಿಯಾ ಎಂದು ಕರೆಯಲಾಗುತ್ತದೆ. ಈ ರಕ್ತದ ಕಾಯಿಲೆಯು ಜನ್ಮದತ್ತವಾಗಿ ಬರಬಹುದು ಅಥವಾ ಬಾಹ್ಯ ಕಾರಣಗಳಿಂದ ಉಂಟಾಗಬಹುದು.
ಹಿಮೊಗ್ಲೋಬಿನ್ ಕೆಂಪು ರಕ್ತಕಣಗಳಲ್ಲಿರುವ ಪ್ರೋಟಿನ್ ಆಗಿದ್ದು, ಇದು ಆಮ್ಲಜನಕವನ್ನು ಸಾಗಿಸುತ್ತದೆ ಮತ್ತು ಶರೀರದ ವಿವಿಧ ಭಾಗಗಳಿಗೆ ಅದನ್ನು ಪೂರೈಸುತ್ತದೆ. ಮೆಥಿಮೊಗ್ಲೋಬಿನ್ ಹಿಮೊಗ್ಲೋಬಿನ್‌ನ ಒಂದು ರೂಪವಾಗಿದೆ. ಮೆಥಿಮೊಗ್ಲೋಬಿನಿಮಿಯಾ ಕಾಯಿಲೆಯಿದ್ದಾಗ ಹಿಮೊಗ್ಲೋಬಿನ್ ಆಮ್ಲಜನಕವನ್ನು ಯಶಸ್ವಿಯಾಗಿ ಸಾಗಿಸುತ್ತದೆಯಾದರೂ ಅದನ್ನು ಶರೀರದ ಅಂಗಾಂಶಗಳಿಗೆ ಪರಿಣಾಮಕಾರಿಯಾಗಿ ಬಿಡುಗಡೆಗೊಳಿಸು ವುದಿಲ್ಲ. ಇದರಿಂದಾಗಿ ಶರೀರದ ಜೀವಕೋಶಗಳಿಗೆ ಅತ್ಯಂತ ಸ್ವಲ್ಪ ಪ್ರಮಾಣದಲ್ಲಿ ಆಮಮ್ಲಜನಕದ ಪೂರೈಕೆಯಾಗುತ್ತದೆ. ಸಾಮಾನ್ಯಸ್ಥಿತಿಯಲ್ಲಿ ರಕ್ತದ ಪ್ರವಾಹದ ಮೂಲಕ ಆಮ್ಲಜನಕವನ್ನು ಸಾಗಿಸುವ ಹಿಮೊಗ್ಲೋಬಿನ್ ಅದನ್ನು ಅಂಗಾಂಶಗಳಿಗೆ ಬಿಡುಗಡೆಗೊಳಿಸುತ್ತದೆ. ಆದರೆ ಮೆಥಿಮೊಗ್ಲೋಬಿನಿಮಿಯಾ ಇದ್ದಾಗ ಅದು ಜೀವಕೋಶಗಳಿಗೆ ರಕ್ತವನ್ನು ಪೂರೈಸಲು ವಿಫಲಗೊಳ್ಳುತ್ತದೆ.
ಶರೀರವು ಅತಿಯಾದ ಪ್ರಮಾಣದಲ್ಲಿ ಮೆಥಿಮೊಗ್ಲೋಬಿನ್ ಅನ್ನು ಉತ್ಪಾದಿಸಿದಾಗ ಅದು ಸಹಜ ಹಿಮೊಗ್ಲೋಬಿನ್ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ ಮತ್ತು ಇದರಿಂದಾಗಿ ಜೀವಕೋಶಗಳಿಗೆ ತಲುಪುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ.
ಮೆಥಿಮೊಗ್ಲೋಬಿನಿಮಿಯಾದ ಪ್ರಮುಖ ಲಕ್ಷಣಗಳು
ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸೈನೋಸಿಸ್ ಕಾಣಿಸಿ ಕೊಳ್ಳುತ್ತದೆ, ಅಂದರೆ ಚರ್ಮದ ಬಣ್ಣ, ವಿಶೇಷವಾಗಿ ತುಟಿಗಳು ಮತ್ತು ಬೆರಳುಗಳ ಚರ್ಮ ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ಕಾರಣದಿಂದಾಗಿ ಮೆಥಿಮೊಗ್ಲೋಬಿನಿಮಿಯಾ ಅನ್ನು 'ಬೇಬಿ ಬ್ಲೂ ಸಿಂಡ್ರೋಮ್' ಎಂದೂ ಕರೆಯುತ್ತಾರೆ. ಮೆಥಿಮೊಗ್ಲೋಬಿನ್ ಮಟ್ಟ ಹೆಚ್ಚಿದಾಗ ಲಕ್ಷಣಗಳೂ ತೀವ್ರಗೊಳ್ಳುತ್ತವೆ. ಉಸಿರಾಟದ ತೊಂದರೆ, ವಾಕರಿಕೆ, ತಲೆನೋವು, ತೀವ್ರ ಹೃದಯಬಡಿತ, ದಣಿವು ಮತ್ತು ಬಳಲಿಕೆ, ಮೂರ್ಚೆ ಹೋಗುವುದು ಮತ್ತು ಮಾನಸಿಕ ಗೊಂದಲ ಇವು ಇಂತಹ ಲಕ್ಷಣಗಳಲ್ಲಿ ಸೇರಿವೆ.
ಕಾರಣಗಳು: ಮೆಥಿಮೊಗ್ಲೋಬಿನಿಮಿಯಾ ಮುಖ್ಯವಾಗಿ ವಂಶವಾಹಿ ದೋಷದಿಂದ ಅಥವಾ ಬಾಹ್ಯಕಾರಣಗಳಿಂದ ಉಂಟಾಗು ತ್ತದೆ. ಸಾಮಾನ್ಯವಾಗಿ ಹೆತ್ತವರಿಗೆ ಮೆಥಿಮೊಗ್ಲೋಬಿನಿಮಿಯಾ ಇರುವುದಿಲ್ಲ, ಆದರೆ ಅವರು ದೋಷಪೂರ್ಣ ವಂಶವಾಹಿಯನ್ನು ಹೊಂದಿರುತ್ತಾರೆ, ಪರಿಣಾಮವಾಗಿ ಅವರ ಸಂತಾನ ಈ ರೋಗಕ್ಕೆ ಗುರಿಯಾಗುತ್ತದೆ. ಮೆಥಿಮೊಗ್ಲೋಬಿನಿಮಿಯಾ ಉಂಟಾಗಲು ಬಾಹ್ಯ ಕಾರಣಗಳಲ್ಲಿ ಕೆಲವು ಔಷಧಿಗಳು ಅಥವಾ ನೈಟ್ರೋಬೆಂಝೀನ್‌ನಂತಹ ರಾಸಾಯನಿಕಗಳಿಗೆ ತೆರೆದುಕೊಳ್ಳುವುದು, ಕ್ಲೋರೊಕ್ವಿನ್‌ನಂತಹ ಆ್ಯಂಟಿಬಯಾಟಿಕ್‌ಗಳು ಮತ್ತು ಕ್ಯಾರಟ್, ಬೀಟ್ರೋಟ್ ಮತ್ತು ಬಸಳೆಯಂಹ ಕೆಲವು ಆಹಾರಗಳು ಸೇರಿವೆ.
ಜನ್ಮದತ್ತ ಮೆಥಿಮೊಗ್ಲೋಬಿನಿಮಿಯಾವನ್ನು ಮೂರು ವಿಧಗಳಲ್ಲಿ ವರ್ಗೀಕರಿಸಲಾಗಿದೆ.
ಟೈಪ್ 1: ಕೆಂಪು ರಕ್ತಕಣಗಳಲ್ಲಿ ಸೈಟೊಕ್ರೋಮ್ ಬಿ5 ರಿಡಕ್ಟೇಸ್ ಕಿಣ್ವದ ಕೊರತೆಯು ಇದಕ್ಕೆ ಕಾರಣವಾಗಿದೆ.
ಟೈಪ್2: ಇಲ್ಲಿ ರೋಗಿಗಳ ಕೆಂಪು ರಕ್ತಕಣಗಳಲ್ಲಿಯ ಸೈಟೊಕ್ರೋಮ್ ಬಿ5 ರಿಡಕ್ಟೇಸ್ ಕಿಣ್ವ ಕೆಲಸ ಮಾಡುವುದಿಲ್ಲ.
 ಹಿಮೊಗ್ಲೋಬಿನ್ ಎಂ ಕಾಯಿಲೆ: ಹಿಮೊಗ್ಲೋಬಿನ್ ಪ್ರೋಟಿನ್ ದೋಷಪೂರ್ಣವಾಗಿದ್ದಾಗ ಈ ರೋಗವು ಉಂಟಾಗುತ್ತದೆ.
ರೋಗನಿರ್ಧಾರ: ಮೆಥಿಮೊಗ್ಲೋಬಿನಿಮಿಯಾವನ್ನು ಖಚಿತ ಪಡಿಸಿಕೊಳ್ಳಲು ರಕ್ತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ರಕ್ತದಲ್ಲಿ ಕಾರ್ಯನಿರತ ಹಿಮೊಗ್ಲೋಬಿನ್ ಮಟ್ಟವನ್ನು ತಿಳಿದುಕೊಳ್ಳಲು ಈ ಪರೀಕ್ಷೆಗಳು ಅಗತ್ಯವಾಗಿವೆ. ಪಲ್ಸ್ ಆಕ್ಸಿಮೆಟ್ರಿ ಎಂಬ ಇನ್ನೊಂದು ಪದ್ಧತಿಯನ್ನೂ ವೈದ್ಯರು ಬಳಸುತ್ತಾರೆ. ಈ ವಿಧಾನದಲ್ಲಿ ರಕ್ತದಲ್ಲಿ ಅನಿಲಗಳ ದಟ್ಟಣೆಯನ್ನು ತಿಳಿದುಕೊಳ್ಳಲು ರಕ್ತ ಪರೀಕ್ಷೆಯ ನಂತರ ರಕ್ತದಲ್ಲಿಯ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲಾಗುತ್ತದೆ.

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News