ಯಾರೂ ನಮ್ಮ ಸ್ವಾತಂತ್ರ ಹೋರಾಟಕ್ಕೆ ಬೆಂಬಲ ಕೊಡುತ್ತಿಲ್ಲ...

Update: 2019-05-30 18:17 GMT

1946ರ ಜುಲೈ 21ರಂದು ಮಧ್ಯಾಹ್ನ 2:20 ಗಂಟೆಗೆ ಪುಣೆಯ ಅಹಿತ್ಯಾಶ್ರಮದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಡಾ. ಬಾಬಾಸಾಹೇಬ್‌ಅಂಬೇಡ್ಕರರು ಸ್ತ್ರೀ ಪುರುಷರ ವಿಶಾಲ ಸಮುದಾಯವನ್ನು ಸಂಬೋಧಿಸಿ ಭಾಷಣ ಮಾಡಿದರು.

ಸೋದರಿಯರೇ ಹಾಗೂ ಸೋದರರೇ ನಾವೆಲ್ಲ ಇಲ್ಲಿ ನಮ್ಮ ಸತ್ಯಾಗ್ರಹ ಹೇಗೆ ನಡೆದಿದೆ ಎನ್ನುವುದರ ಅಭ್ಯಾಸ ಮಾಡಲು ಸೇರಿದ್ದೇವೆ. ನಮ್ಮ ಈ ಸತ್ಯಾಗ್ರಹದ ವೃತ್ತಾಂತ ವರ್ತಮಾನ ಪತ್ರಿಕೆಗಳಲ್ಲಿ ಸ್ವಲ್ಪ ಸ್ವಲ್ಪವಾದರೂ ಪ್ರಕಟವಾಗುತ್ತಿದೆ. ಆದರೆ ಈ ವೃತ್ತ ಪತ್ರಿಕೆಗಳು ಬರೆದ ಸತ್ಯಾಗ್ರಹದ ವರದಿಯನ್ನು ಓದಿದಾಗ ಅದರಲ್ಲಿ ಸತ್ಯಾಗ್ರಹಕ್ಕಾಗಿ ಸ್ವಲ್ಪಕೂಡ ಗೌರವ ಅಥವಾ ಪ್ರೀತಿ (ತಮ್ಮತನ)ಕಂಡುಬರುವುದಿಲ್ಲ. ಅವರು ಬರೆದಂತೆ ಅವರ ದೃಷ್ಟಿಯಲ್ಲಿ ಇದು ಕೇವಲ ದಲಿತ (ಹೊಲೆಯ)ರ ಸತ್ಯಾಗ್ರಹ ಏಕೆಂದರೆ ನಾನು ಕೇವಲ ದಲಿತರ ಮುಖಂಡ ನನಗೆ ಸಹಾಯಕರಾಗಿ ಯಾರೂ ಇಲ್ಲ ಹೀಗೆಲ್ಲ ಬರೆದಿದ್ದಾರೆ. ಈ ಪ್ರಚಾರ ನಿನ್ನೆ ಇಂದಿನದಲ್ಲ, ಸತತವಾಗಿ ನಡೆದಿದೆ. ಅದರ ಪರಿಣಾಮ ವಿದೇಶಗಳಲ್ಲಿ ಕೂಡ ಉಂಟಾಗಿದೆ. ನಿನ್ನೆ ಪಾರ್ಲಿಮೆಂಟಿನಲ್ಲಿ ಕಮಿಶನ್ ಪರವಾಗಿ ಬಂದು ಭಾಷಣ ಮಾಡಲಾಯಿತು. ಅದರಲ್ಲಿ ನಾನು ಹಿಂದೂಸ್ಥಾನದ ಮುಖಂಡನಲ್ಲವೆಂದು ಹೇಳಲಾಯಿತು. ನನ್ನ ಹಿಂದೆ ಮಧ್ಯಪ್ರಾಂತ ಹಾಗೂ ಮುಂಬೈಯ ಅನೇಕ ಜನರಿದ್ದಾರೆ. ಆದರೆ ಈ ವಿಚಾರ (ನಾನು ಮುಖಂಡನಲ್ಲ) ಅದೆಷ್ಟು ಅಪಾಯಕಾರಿಯಾಗಿದೆ ಎನ್ನುವುದು ಬಂಗಾಲದಲ್ಲಿ ನಡೆದ ಚುನಾವಣೆಗಳಿಂದ ಸಿದ್ಧವಾಗಿದೆ.

ನನ್ನ ಹಿಂದೆ ಹಿಂದೂಸ್ಥಾನದ ಇಡೀ ಅಸ್ಪಶ್ಯ ಸಮಾಜವಿದೆ. ಇದಕ್ಕೆ ಬಂಗಾಲದಲ್ಲಿ ನಡೆದ ಚುನಾವಣೆಗಳು ಸಾಕ್ಷಿಯಾಗಿವೆ. ಬಂಗಾಲದಲ್ಲಿ ಹೊಲೆಯರಿಲ್ಲ, ಅಲ್ಲಿ ನಾಮಶೂದ್ರ ಜನಾಂಗವಿದೆ. ಹಾಗಿದ್ದರೂ ಈ ನಾಮ ಶೂದ್ರ ಜನರು ನನ್ನನ್ನು ಆರಿಸಿದ್ದಾರೆ. ನಾನು ಹಿಂದೂಸ್ಥಾನದಲ್ಲಿನ ಎಲ್ಲ ಅಸ್ಪಶ್ಯರ ಮುಖಂಡನಲ್ಲದಿದ್ದರೆ ನಾನು ಬಂಗಾಲದಿಂದ ಹೇಗೆ ಆರಿಸಿ ಬಂದೆ ಎನ್ನುವುದೇ ಈ ಜನಾಂಗಕ್ಕೆಲ್ಲ ನನ್ನ ಪ್ರಶ್ನೆ!! ಅಸ್ಪಶ್ಯ ಸಮಾಜ ಹಿಂದೂಸ್ಥಾನದಲ್ಲಿನ ಒಂದು ಸ್ವತಂತ್ರ ಜನಾಂಗವಿದೆ ಎಂದು ಬ್ರಿಟಿಷರು ಅನೇಕ ಬಾರಿ ಘೋಷಣೆ ಮಾಡಿದ್ದಾರೆ. ಆದರೆ ತಾಬಿಸೇಸ್ ಮಿಶನ್ ತಮ್ಮ ಯೋಜನೆಯಲ್ಲಿ ಅಸ್ಪಶ್ಯ ಸಮಾಜದ ಹೆಸರನ್ನೂ ಎತ್ತಿಲ್ಲ. ಅಸ್ಪಶ್ಯ ಸಮಾಜವನ್ನು ಬಿಟ್ಟುಬಿಟ್ಟಿದ್ದಾರೆ. ಆಗ ಮಾತ್ರ ನಾನು ಘಟನಾ ಸಮಿತಿಯಲ್ಲಿ ಹೋಗುವ ನಿರ್ಧಾರ ಮಾಡಿದೆ. ಅಸ್ಪಶ್ಯ ಸಮಾಜದ ಕಲ್ಯಾಣಕ್ಕಾಗಿ ನಾನು ಘಟನಾ ಸಮಿತಿಯ ಸದಸ್ಯನಾಗುವುದು ಆವಶ್ಯಕವಾಗಿತ್ತು. ನಾನು ಘಟನಾ ಸಮಿತಿಗೆ ಆಯ್ಕೆಯಾಗದಂತೆ ಕಾಂಗ್ರೆಸಿಗರು ಸರ್ವವಿಧದಲ್ಲಿ ಪ್ರಯತ್ನ ಮಾಡಿದರು. ಮಹಾರಾಷ್ಟ್ರದಲ್ಲಿದ್ದ ಕೆಲ ಶ್ರೇಷ್ಠ ವ್ಯಕ್ತಿಗಳಲ್ಲಿ ನನ್ನ ಗಣನೆಯಾಗುವುದಿಲ್ಲ ಎಂದು ಹೇಳುವವ ಮೂರ್ಖನಾಗಿರಬೇಕು. ಘಟನಾ ಸಮಿತಿಯ ಚುನಾವಣೆಗೆ ನೀವು ನಿಲ್ಲಿ ಎಂದು ಕಾಂಗ್ರೆಸ್ ಮಿ.ಜಯಕರ ಅವರಿಗೆ ಕೇಳಿಕೊಂಡಿತು, ಮಿ.ಮುಣ್ಣಿಯವರನ್ನು ಕರೆಯಲಾಯಿತು, ಅನೇಕರಿಗೆ ಆಮಂತ್ರಣ ಪತ್ರಗಳನ್ನು ಕಳಿಸಲಾಯಿತು. ಇಷ್ಟೆಲ್ಲ ಜ್ಯೇಷ್ಠ ಶ್ರೇಷ್ಠರಲ್ಲಿ ನನ್ನನ್ನೂ ಕರೆಯಬೇಕಾಗಿತ್ತು. ಆದರೆ ನಾನು ಅವರ ಗಣನೆಯಲ್ಲೇ ಇರಲಿಲ್ಲ. ಆದ್ದರಿಂದ ನಾನು ಮುಂಬೈಯಿಂದ ಬಂಗಾಲಕ್ಕೆ ಬಂದು ನಿಂತೆ. ಈ ಸ್ಥಳದಲ್ಲಿ ಹೊಲೆಯರು (ದಲಿತರು)ಇರದಿದ್ದರೂ ಕೂಡ ಆರಿಸಿ ಬಂದೆ. ಇದನ್ನು ನನ್ನ ಶತ್ರುಗಳು ಗಮನಿಸಬೇಕು.

ಈ ಸತ್ಯಾಗ್ರಹದಲ್ಲಿ ಕೇವಲ ಹೊಲೆಯರೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅದು ಸುಳ್ಳು. ಪೊಲೀಸರು ಹಿಡಿದ ವ್ಯಕ್ತಿಗಳ ಪಟ್ಟಿಯನ್ನು ಇದೀಗ ನಮಗೆ ಓದಿ ತೋರಿಸಲಾಯಿತು. ಅದರಲ್ಲೂ ಹೊಲೆಯ, ದಲಿತ, ಚಮ್ಮಾರ ಹೀಗೆ ಎಲ್ಲ ಜಾತಿಗೆ ಸೇರಿದ ಜನರಿದ್ದಾರೆ, ಮುಂಬೈ ಪ್ರಾಂತದಲ್ಲಿ ಇತರ ಜಾತಿಗಳಿಗಿಂತ ಹೊಲೆಯರ ಸಂಖ್ಯೆ ಹೆಚ್ಚು. ಆದ್ದರಿಂದ ಅಸ್ಪಶ್ಯ ಸಮಾಜದ ಉದ್ಧಾರದ ಚಳವಳಿಯಲ್ಲಿ ಹೊಲೆಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಅದಕ್ಕಾಗಿ ವಿಷಾದ ಪಡುವ ಕಾರಣವಿಲ್ಲ.

ಒಂದಲ್ಲೊಂದು ಆಸೆ ಆಮಿಷಕ್ಕಾಗಿ ಬಹಳ ಜನ ಕಾಂಗ್ರೆಸ್‌ನಲ್ಲಿ ಶಾಮೀಲಾಗಿದ್ದಾರೆ. ಕೆಲವರಿಗೆ ಚರ್ಮದ ವ್ಯಾಪಾರ ಮಾಡುವುದಕ್ಕಾಗಿ ಚರ್ಮವನ್ನು ಪಡೆಯಬೇಕಾಗಿದೆ. ಇನ್ನು ಕೆಲವರಿಗೆ ಕಾಂಟ್ರಾಕ್ಟ್ ಬೇಕೆಂದು ಕಾಂಗ್ರೆಸನ್ನು ಸೇರಿದ್ದಾರೆ. ನೌಕರಿ ಬೇಕೆನ್ನುವವರು ಅದರಲ್ಲಿದ್ದಾರೆ. ನಮ್ಮ ಚಳವಳಿಯಲ್ಲಿ ಮಾತ್ರ ಸ್ವಾರ್ಥಕ್ಕಾಗಿ ಯಾರೂ ಬಂದಿಲ್ಲ. ಯಾರಿಗಾದರೂ ಕೊಡಲು ನಮ್ಮ ಬಳಿ ನೌಕರಿಗಳಿಲ್ಲ. ನಾವು ಯಾರಿಗೂ ಕಾಂಟ್ರಾಕ್ಟ್ ಕೊಡುವುದು ಸಾಧ್ಯವಿಲ್ಲ. ಅದಕ್ಕಾಗಿ ಬಿಳಿ ಕಾಗದಗಳೇ ಇಲ್ಲ(ನಗು ಮತ್ತು ಚಪ್ಪಾಳೆ) ತಾವೆಲ್ಲ ನಿಸ್ವಾರ್ಥ ಬುದ್ಧಿಯಿಂದ ನಮ್ಮ ಸ್ವಾತಂತ್ರ ಯುದ್ಧದಲ್ಲಿ ಭಾಗವಹಿಸುತ್ತಿದ್ದೀರಿ. ನಿಸ್ವಾರ್ಥ ಬುದ್ಧಿಯಿಂದ ಭಾಗವಹಿಸುವುದೇ ನಮ್ಮ ಚಳವಳಿಯ ಗೆಲುವು. ನಾವು ಸತ್ಯಾಗ್ರಹ ಮಾಡುತ್ತಿರುವುದೇಕೆ ಇದರಲ್ಲಿ ಅಂತಹ ದೊಡ್ಡ ಗಂಭೀರ ಅಥವಾ ಏನೂ ಅರ್ಥವಾಗದೇ ಇರುವಂತಹದ್ದೇನಿಲ್ಲ. ಆಳವಾದ ಅರ್ಥವೇನೂ ಅದರಲ್ಲಿಲ್ಲ. ಇದರ ಅರ್ಥ ಮೂರನೇ ವರ್ಗದ ವಿದ್ಯಾರ್ಥಿಗೂ ತಿಳಿಯುತ್ತದೆ. ಆದರೆ ಮುಂಬೈ ಪ್ರಾಂತದ ಮುಖ್ಯ ಪ್ರಧಾನರಾದ ಮಿ.ಖೇರ್ ಇವರಿಗೆ ಮಾತ್ರ ಇದರರ್ಥ ತಿಳಿದಿಲ್ಲವೆಂದು ಅವರೇ ಬಹಿರಂಗವಾಗಿ ಹೇಳಿದರು.

ಸಾವು ಹತ್ತಿರ ಬಂದಾಗ ತಂದೆ ತನ್ನ ಆಸ್ತಿ ಯಾರಿಗೆ ಹೋಗಬೇಕೆಂದು ಮೃತ್ಯುಪತ್ರ (ವಿಲ್)ಬರೆಯುತ್ತಿರುತ್ತಾನೆ. ಬ್ರಿಟಿಷರು ತಾವು ಈ ದೇಶವನ್ನು ಬಿಟ್ಟು ಹೋಗುವುದಾಗಿ ಘೋಷಣೆ ಮಾಡಿದ್ದಾರೆ. ಸಾಯುತ್ತಿರುವ ತಂದೆಯಂತೆಯೇ ಬ್ರಿಟಿಷರೂ ಕೂಡ ತಮ್ಮ ಮಾತಲ್ಲಿ ಪತ್ರ ಬರೆದಿದ್ದಾರೆ. ತಂದೆ ತನ್ನ ತರುವಾಯ ಆಸ್ತಿಯ ವಾರಸುದಾರ ಯಾರು ಆಗಬೇಕೆಂದು ನಿರ್ಧರಿಸುತ್ತಾನೋ ಅದೇ ರೀತಿ ಬ್ರಿಟಿಷರೂ ಕೂಡ ದೇಶದ ವಾರಸುದಾರರನ್ನು ನಿರ್ಧರಿಸಿದ್ದಾರೆ. ಅವರು ಈ ದೇಶದ ವಾರಸುದಾರರು ಇಬ್ಬರು, ಹಿಂದೂ ಮತ್ತು ಮುಸಲ್ಮಾನರು ಎಂದು ನಿರ್ಧರಿಸಿದ್ದಾರೆ. ಅಸ್ಪಶ್ಯರನ್ನು ಅವರು ಗಣನೆಗೆ ಕೂಡ ತೆಗೆದುಕೊಂಡಿಲ್ಲ. ಅಸ್ಪಶ್ಯರ ಉಲ್ಲೇಖವನ್ನೂ ಮಾಡಿಲ್ಲ.

ಈ ದೇಶದ ಅಧಿಕಾರದ ವಾರಸುದಾರರನ್ನು ನಿರ್ಧರಿಸುವಾಗ ನಮಗೂ ಕೂಡ ವಾರಸು ಹಕ್ಕು ದೊರೆಯಬಹುದು ಎಂದು ನಮಗನಿಸಿತ್ತು. ಹಿಂದೂ ಜನರಿಗೆ ರೂಪಾಯಿಯಲ್ಲಿ ಎಂಟು ಆಣೆ ದೊರೆತರೆ ನಮಗೆ ಅದರಲ್ಲಿ ಪಾವಲಿಯಾದರೂ (ನಾಲ್ಕಾಣೆಯಾದರೂ) ಸಿಗಬಹುದು ಎಂದು ತಿಳಿದುಕೊಂಡಿದ್ದೆವು. ಆದರೆ ಹುಟ್ಟು ಮೋಸಗಾರರಾದ ಬ್ರಿಟಿಷರು ಅಸ್ಪಶ್ಯರನ್ನು ವಂಚಿಸಿದರು. ಅಧಿಕಾರ ವಾರಸುಹಕ್ಕು ಹಿಂದೂ ಮತ್ತು ಮುಸಲ್ಮಾನರಿಗೆ ಸಿಕ್ಕಿದೆ. ರಾಜ್ಯಭಾರದ ಹಕ್ಕು ಹಿಂದೂಗಳಿಗೆ ದೊರೆತಿದೆ. ರಾಜ್ಯಭಾರದಲ್ಲಿ ನಮ್ಮ ಪಾಲು ಎಷ್ಟು? ಎಂದು ನಾವು ಹಿಂದೂಗಳನ್ನು ಕೇಳುತ್ತಿದ್ದೇವೆ. ಈ ಸರಳವಾದ ಪ್ರಶ್ನೆ ಮಿ.ಖೇರರಿಗೆ ಅರ್ಥವಾಗುತ್ತಿಲ್ಲವೆಂದರೆ ಅವರು ಬರೀ ನಟನೆ ಮಾಡುತ್ತಿದ್ದಾರೆ. ಆದರೆ ಅಷ್ಟೊಂದು ಪೆದ್ದತನ ತೋರಿಸುವ ಕಾರಣವೂ ಇಲ್ಲ. ಈ ದೇಶದಲ್ಲಿ ಸುಖ ಸಮಾಧಾನದಿಂದ ಇರಬೇಕೆಂದರೆ ಹಿಂದೂಗಳು ನಮ್ಮ ಪ್ರಶ್ನೆಗೆ ಉತ್ತರ ಕೊಡಲೇಬೇಕು. ಹಿಂದೂ ಜನರು ಇನ್ನೂ ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ ಆದ್ದರಿಂದಲೇ ಅವರೊಂದಿಗೆ ನಮ್ಮ ಜಗಳ. ಸತ್ತು ಹೋದ ತಂದೆಯೊಂದಿಗೆ ವಾರಸುಹಕ್ಕಿಗಾಗಿ ಜಗಳವಾಡುವುದರಲ್ಲಿ ಏನು ಅರ್ಥವಿದೆ. ಮುಸಲ್ಮಾನರೊಂದಿಗೆ ನಮ್ಮ ಜಗಳವಿಲ್ಲ. ಏಕೆಂದರೆ ಅವರು ನಮ್ಮನ್ನೆಂದೂ ವಿರೋಧಿಸಿಲ್ಲ. ಮುಸಲ್ಮಾನ ಬಹುಸಂಖ್ಯಾತ ಪ್ರಾಂತದಲ್ಲಿ ನಮ್ಮ ಬೇಡಿಕೆಗಳನ್ನು ಮಾನ್ಯ ಮಾಡಲು ಅವರು ಸಿದ್ಧರಿದ್ದಾರೆ. ಕಾಂಗ್ರೆಸ್ ಮಾತ್ರ ನಮ್ಮ ಹಕ್ಕುಗಳ ಬಗ್ಗೆ ಬಹಿರಂಗವಾಗಿ ಹೇಳಬೇಕು. ಕೇವಲ ಆಶ್ವಾಸನೆಗಳನ್ನು ಕೊಟ್ಟರೆ ನಡೆಯುವುದಿಲ್ಲ ನಮ್ಮ ಬೇಡಿಕೆಗಳ ಬಗ್ಗೆ ಕಾಂಗ್ರೆಸ್ ಬೇಗನೆ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಪುಣೆಯಲ್ಲಿ ಆರಂಭವಾದ ಸತ್ಯಾಗ್ರಹದ ಜ್ವಾಲೆಗಳು ಇಡೀ ಪ್ರಾಂತದಲ್ಲಿ ಹರಡಲು ಶುರುವಾಗುತ್ತದೆ.

ನಮ್ಮ ಹಿಂದಿನ ಹೋರಾಟ ಅಹಿಂಸಾತ್ಮಕವಾಗಿದೆ. ಅಹಿಂಸೆಯ ಪ್ರಭಾವಿ ಅಸ್ತ್ರವನ್ನು ನಾವು ಕೈಯಲ್ಲಿ ಹಿಡಿದಿದ್ದೇವೆ. ಗಾಂಧಿಯವರದೊಂದು ವಿಚಾರಧಾರೆ ಇದೆ, ಆದರೆ ನನ್ನ ಅಹಿಂಸೆಯ ವ್ಯಾಖ್ಯೆ ಗಾಂಧಿಯವರಿಗಿಂತ ಬೇರೆಯಾಗಿದೆ. ತುಕಾರಾಮರು ಹೇಳಿದ ವ್ಯಾಖ್ಯೆಯೇ ನನ್ನ ವ್ಯಾಖ್ಯೆ.
ನಮ್ಮ ಸತ್ಯಾಗ್ರಹದ ಬಿಸಿ ಅವರಿಗಿನ್ನೂ ಹತ್ತಿಲ್ಲವಾದರೂ, ಇನ್ನು ಕೆಲವೇ ದಿನಗಳಲ್ಲಿ ಅದರ ಕಾವು ಅವರನ್ನು ಸುಡುವುದರಲ್ಲಿ ಸಂಶಯವಿಲ್ಲ. ಸ್ವತಂತ್ರ ಮತದಾರ ಸಂಘದ ನಮ್ಮ ಬೇಡಿಕೆಯನ್ನು ಅವರು ಈಡೇರಿಸಲೇಬೇಕು.

ನಮ್ಮ ಸ್ವತಂತ್ರ ಮತದಾರ ಸಂಘದ ಬೇಡಿಕೆಯಿಂದಾಗಿ ಕಾಂಗ್ರೆಸಿಗರಿಗೆ ಭೀತಿ ಹುಟ್ಟಿದೆ. ನಮಗೆ ಸ್ವತಂತ್ರ ಮತದಾರ ಸಂಘವನ್ನು ಕೊಟ್ಟರೆ ದೇಶಕ್ಕೆ ಹಾನಿ ಎಂದು ಅವರಿಗನ್ನಿಸುತ್ತಿದೆ. ಆದರೆ ಅವರು ಆ ರೀತಿ ಹೆದರುವ ಕಾರಣವಿಲ್ಲ. ಸ್ವತಂತ್ರ ಮತದಾರ ಸಂಘದಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಸಿಖ್ ಜನಾಂಗಕ್ಕೆ ಸ್ವತಂತ್ರ ಮತದಾರ ಸಂಘವನ್ನು ಕೊಡಲಾಗಿದೆ. ಅದರಿಂದ ದೇಶವೇನು ಎರಡು ಹೋಳಾಗಿಲ್ಲ. 1934ರಲ್ಲಿ ಜಿನ್ನಾ ಕಾಂಗ್ರೆಸ್‌ನಲ್ಲಿದ್ದರು. ಅವರು ಕಾಂಗ್ರೆಸ್‌ನಲ್ಲಿ ಇರುವವರೆಗೆ ಕಾಂಗ್ರೆಸಿಗರು ದೇವರಂತೆ ಕಾಣುತ್ತಿದ್ದರು. ಅವರು ದೇಶಭಕ್ತಿಯ ಸ್ಮಾರಕವೆಂದು ಕಾಂಗ್ರೆಸಿಗರು ಮುಂಬೈಯಲ್ಲಿ ಜಿನ್ನಾ ಹಾಲ್ ಎಂಬ ಕಟ್ಟಡ ಕಟ್ಟಿಸಿದರು. ಆದರೆ ಅದೇ ಜಿನ್ನಾ ಸತತವಾಗಿ ಸ್ವತಂತ್ರ ಮತದಾರರ ಸಂಘದಿಂದಲೇ ಚುನಾವಣೆಯನ್ನು ಗೆಲ್ಲುತ್ತ ಬಂದಿದ್ದಾರೆ. ಅದನ್ನೂ ಯಾರೂ ಮರೆಯಬಾರದು. ಜಿನ್ನಾರ ಸ್ವತಂತ್ರ ಮತದಾರ ಸಂಘದಿಂದ ದೇಶಕ್ಕೆ ಯಾವುದೇ ರೀತಿಯ ಅಪಾಯವಾಗದೇ ಇದ್ದರೆ ಅಸ್ಪಶ್ಯರಿಗೆ ಅದನ್ನು ಕೊಟ್ಟರೆ ದೇಶಕ್ಕೆ ಅಪಾಯವೆಂದು ಹೇಳುವುದರಲ್ಲಿ ಏನೂ ಅರ್ಥವಿಲ್ಲ. ನಾನು ಕಳೆದ 20 ವರ್ಷಗಳಿಂದ ಈ ದೇಶದ ರಾಜಕಾರಣದಲ್ಲಿದ್ದೇನೆ. ಈ 20 ವರ್ಷಗಳಲ್ಲಿ ದೇಶಕ್ಕೆ ಅಪಾಯವಾದಂತಹ ಒಂದು ಕೆಲಸವನ್ನೂ ಮಾಡಿಲ್ಲ. ನನ್ನ ಸ್ನೇಹಿತ ಗೋಖಲೆಯವರಿಗೆ ಈ ಸಂಗತಿ ಗೊತ್ತಿದೆ. ಮಿ.ಗೋಖಲೆ ನನ್ನನ್ನು ತಮ್ಮ ಮಿತ್ರರೆಂದು ತಿಳಿಯುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಅವರನ್ನು ನನ್ನ ಮಿತ್ರರೆಂದೇ ತಿಳಿಯುತ್ತೇನೆ(ಸಭಿಕರಲ್ಲಿ ನಗು)ವೈಸ್‌ರಾಯ್ ಕೌನ್ಸಿಲ್‌ನಲ್ಲಿ ಬ್ರಿಟಿಷರಿಗೆ ಪ್ರಶ್ನೆ ಕೇಳುವವ ನಾನೊಬ್ಬನೇ ಇದ್ದೆ. ಈ ಜನರು ನಿಜವಾದ ಇಂಗ್ಲಿಷ್ ಮನುಷ್ಯನನ್ನು ನೋಡಿರಲಿಕ್ಕಿಲ್ಲ, ಅವರು ನೋಡಿದ್ದರೆ ಅವರ ಫಜೀತಿಯಾಗಿರುತ್ತಿತ್ತು.

 ನಮ್ಮ ಜಗಳ ಸದಾ ತತ್ವಗಳಿಗಾಗಿಯೇ ಇರುತ್ತದೆ. 6 ಕೋಟಿ ಅಸ್ಪಶ್ಯ ಸಮಾಜದ ವತಿಯಿಂದ ನಮ್ಮ ಜಗಳವಿದೆ. ನಮಗೆ ರಾಜಕೀಯ ಸಂರಕ್ಷಣೆ ಬೇಕು. ಆ ರಕ್ಷಣೆ ಯಾವ ರೀತಿ ಇರಬೇಕೆಂದರೆ ಯಾವುದೇ ಮೂರ್ಖ ಅಥವಾ ಮೋಸಗಾರನಿಂದ ನಮಗೆ ಯಾವುದೇ ರೀತಿಯ ತೊಂದರೆಯಾಗಬಾರದು. ನಮ್ಮ ಚಳವಳಿಯಲ್ಲಿ ಮೂರ್ಖರಿಗೆ ಮೋಸಗಾರರಿಗೆ ಯಾವುದೇ ಸ್ಥಾನವಿಲ್ಲ. ಲಫಂಗರು ಖದೀಮರಿಗೆ ಅವಕಾಶ ಸಿಗದಂತೆಯೇ ನಾವು ಚಳವಳಿಯನ್ನು ಮಾಡುತ್ತಿದ್ದೇವೆ. ನಾವು ಸ್ವಕೀಯ ಅಥವಾ ಪರಕೀಯ ಯಾವುದೇ ರೀತಿಯ ಗುಲಾಮಗಿರಿಯನ್ನೂ ಸ್ವೀಕರಿಸುವುದಿಲ್ಲ. ನಮಗೆ ಸ್ವಾತಂತ್ರ ಬೇಕು ಅದರೊಂದಿಗೆ ನಮಗೆ ಪ್ರಜಾತಂತ್ರವೂ ಬೇಕು. ರಾಜಕೀಯ ಅಧಿಕಾರ ಕೆಲವೇ ಕೆಲವು ಜನರ ಕೈಯಲ್ಲಿ ಹೋದರೆ ನಮಗೆ ಒಳ್ಳೆಯ ದಿನಗಳು ಬರುತ್ತವೆ ಎನ್ನುವ ಭರವಸೆ ನಮಗಿಲ್ಲ. ಈ ಭೀತಿಯನ್ನು ಇಲ್ಲವಾಗಿಸಬೇಕೆಂದರೆ ರಾಜಕೀಯ ಅಧಿಕಾರ ಸಾಮಾನ್ಯ ಮನುಷ್ಯರ ಬಳಿ ಇರಬೇಕು. ನಿಜವಾದ ಅರ್ಥದಲ್ಲಿ ರೈತರು ಮತ್ತು ಕಾರ್ಮಿಕರ ಕೈಗೆ ಅಧಿಕಾರ ಕೊಡಬೇಕು ಎಂದು ನಾವು ದೃಢವಾಗಿ ನಂಬಿದ್ದೇವೆ.

 ಇತರರು ಏನಾದರೂ ಹೇಳಲಿ ನಮಗೆ ನಿಜವಾದ ಸ್ವಾತಂತ್ರ ಬೇಕು. ಈ ದೇಶದಲ್ಲಿನ ಯಾವುದೇ ಜಾತಿ ಜನಾಂಗ ಅಥವಾ ವರ್ಗ ನಮ್ಮ ಮೇಲೆ ತಮ್ಮ ಪ್ರಭುತ್ವ ತೋರಿಸಕೂಡದು. ನಮ್ಮೆಲ್ಲರಿಗೂ ಈ ದೇಶದಲ್ಲಿ ತಲೆ ಎತ್ತಿ ತಿರುಗಾಡುವ ಅವಕಾಶ ದೊರೆಯಬೇಕು.ಹಾಗೆ ನಮಗೆ ರಾಜಕೀಯ ಹಕ್ಕುಗಳು ಬೇಕು ಗುಲಾಮಗಿರಿಯನ್ನು ನಾವು ಧಿಕ್ಕ್ಕರಿಸಬೇಕು. ಈ ದೇಶದಲ್ಲಿನ 6 ಕೋಟಿ ಅಸ್ಪಶ್ಯರ ಹೋರಾಟ ಇದು. ಸ್ವಾತಂತ್ರಕ್ಕಾಗಿ ಯುದ್ಧ. ಹೀಗಿರುವಾಗ ನಮ್ಮ ಈ ಹೋರಾಟಕ್ಕೆ ದೇಶದಲ್ಲಿ ಯಾರೂ ಸಹಾಯ ಸಹಕಾರ ಕೊಡುತ್ತಿಲ್ಲ, ಅಷ್ಟೇ ಅಲ್ಲ ಕೇವಲ ಸಹಾನುಭೂತಿ ಕೂಡ ತೋರಿಸುತ್ತಿಲ್ಲ. ಅಂಚೆಯವರು ಚಳವಳಿ ಮಾಡಿದರೆ ಅದಕ್ಕೆ ನೀವು ಬೆಂಬಲ ತೋರಿಸುತ್ತೀರಿ, ಹಾಗೆಯೇ ರೈಲ್ವೆ ಕಾರ್ಮಿಕರ ಸಂಪು ಆರಂಭವಾದರೆ ಅದಕ್ಕೆ ಸಾವಿರಾರು ಜನರ ಬೆಂಬಲ ದೊರೆಯುತ್ತದೆ. ಅರ್ಥಾತ್ ಅವರಿಗೆ ನೀವು ಬೆಂಬಲ ಕೊಡಬೇಡಿ ಎಂದು ನಾನು ಹೇಳುವುದಿಲ್ಲ. ಈ ದೇಶದಲ್ಲಿ ಕಮ್ಯುನಿಸ್ಟರಿದ್ದಾರೆ, ಜಾತಿವಾದಿಗಳಿದ್ದಾರೆ. ಕೆಲವರು ಎಡ ಹಲವರು ಬಲಕ್ಕೆ ಬೆಂಬಲ ಕೊಡುವವರಿದ್ದಾರೆ. ಆದರೆ ಇವರ್ಯಾರೂ ನಮ್ಮ ಸ್ವಾತಂತ್ರ ಹೋರಾಟಕ್ಕೆ ಬೆಂಬಲ ಕೊಡುವುದಿಲ್ಲ. ಆದರೆ ನಾವೆಲ್ಲ ಈಗ ಹಿಂದೆಗೆಯಬಾರದು. ಯಾರ ಬೆಂಬಲ ಇರಲಿ ಇಲ್ಲದಿರಲಿ ನಮ್ಮ ಈ ಹೋರಾಟದಲ್ಲಿ ನಮಗೆ ಜಯ ಸಿಗಲೇಬೇಕು. ಈ ಹೋರಾಟವನ್ನು ನಮ್ಮ ಜನರ ಬಲದ ಮೇಲೆಯೇ ಗೆಲ್ಲಬೇಕು. ನಮ್ಮ ಶಕ್ತಿ ಬಲದ ಮೇಲೆ ವಿಶ್ವಾಸವಿಡಬೇಕು. ನಮ್ಮ ಗಟ್ಟಿದೃಢ ಸಂಘಟನೆಯ ಮೇಲೆ ಬಂದ ಎಲ್ಲ ಅಡಚಣೆಗಳನ್ನೂ ದಾಟಲು ಸಾಧ್ಯವಾಗುತ್ತದೆ. ಈ ಸತ್ಯಾಗ್ರಹದ ಜವಾಬ್ದಾರಿ ಕೇವಲ ನಮ್ಮ ಮೇಲೆ ಇದೆ. ಈಗ ಯುದ್ಧವನ್ನು ಆರಂಭಿಸಿದ್ದೇವೆ. ತಲೆ ಬೀಳಲಿ ಅಥವಾ ರುಮಾಲು ಬೀಳಲಿ ಕೊನೆಯವರೆಗೂ ಹೋರಾಟದ ನಿರ್ಧಾರವನ್ನು ನಾವು ಮಾಡಬೇಕು.

ಮಹಿಳೆಯರಿಗಾಗಿ ಒಂದೆರಡು ಮಾತುಗಳನ್ನು ಹೇಳಬಯಸುತ್ತೇನೆ.ಸ್ತ್ರೀಯರೂ ಈ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ಇದೊಂದು ಅಭಿಮಾನದ ಸಂಗತಿ. ಕಾಂಗ್ರೆಸ್‌ನ ಚಳವಳಿಯಲ್ಲಿ ಸ್ತ್ರೀಯರು ಭಾಗವಹಿಸುತ್ತಿದ್ದರೆಂದು ಅವರಿಗೆ ಬಹಳ ಅಭಿಮಾನವಿತ್ತು. ಆದರೆ ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಅಸ್ಪಶ್ಯ ಸಮಾಜದ ಹೆಣ್ಣು ಮಕ್ಕಳು ಕೂಡ ಯಾವುದೇ ವಿಷಯದಲ್ಲಿ ಹಿಂದುಳಿದಿಲ್ಲ. ನಮ್ಮ ಚಳವಳಿಯ ಜವಾಬ್ದಾರಿ ಸ್ತ್ರೀವರ್ಗವನ್ನೂ ತಲುಪಿದೆ. ನಮಗೆ ಪರಿಸ್ಥಿತಿ ಅನುಕೂಲವಾಗಿದ್ದರೆ ಅವರಿಗಿಂತ ಹೆಚ್ಚು ನಮ್ಮ ಮಹಿಳೆಯರು ಜೈಲಿಗೆ ಹೋಗುತ್ತಿದ್ದರು. ರೇಶನಿಂಗ್ ಆರಂಭವಾಗಿದ್ದರಿಂದ ನಮಗೆ ಅನೇಕ ಅಡಚಣೆಗಳು ಬಂದಿವೆ. ಆದ್ದರಿಂದಲೇ ಚಳವಳಿ ಗಾಗಿ ಹೆಚ್ಚು ಜನರನ್ನು ಸೇರಿಸುವುದು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರಕಾರ ರೇಶನಿಂಗನ್ನು ತೆಗೆದುಹಾಕಬೇಕು. ಹಾಗಾದಲ್ಲಿ ಕಡಿಮೆ ಎಂದರೆ 5 ಲಕ್ಷ ಜನರನ್ನು ನಾನು ಚಳವಳಿಯಲ್ಲಿ ಭಾಗವಹಿಸಿ ಜೈಲಿಗೆ ಕಳುಹಿಸುತ್ತಿದ್ದೆ. ಇದು ಕಾಂಗ್ರೆಸಿಗರಿಗೆ ನನ್ನ ಆಹ್ವಾನ.

ನಾನು ದೇಶಕ್ಕೆ ಅಪಾಯವಾಗುವಂತಹದನ್ನು ಏನು ಮಾಡಿದ್ದೇನೆ ಎನ್ನುವುದು ನನಗೆ ತಿಳಿಯುತ್ತಿಲ್ಲ, ರೌಂಡ್ ಟೇಬಲ್ ಕಾನ್ಫರೆನ್ಸ್ ನಿಂದ ಹಿಡಿದು ನನ್ನ ಇತ್ತೀಚಿನ ಸರಕಾರಿ ನೌಕರಿಯವರೆಗೂ ನಾವು ಮಾಡಿದ ಕೆಲಸಗಳನ್ನು ಕಾಂಗ್ರೆಸಿಗರು ನೆನಪು ಮಾಡಿಕೊಳ್ಳಲಿ. ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಸಚಿವರಲ್ಲಿ ನಾನು ಪ್ರಮುಖನಾಗಿದ್ದೆ. ಆದರೆ ಈಗ ಬ್ರಿಟಿಷರನ್ನು ನೋಡಿ ಭಯಪಡುವವರು ಕೂಡ ಕಾಯ್ದೆ ಮಂಡಳದ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ನ ಟಿಕೆಟ್‌ನ ಮೇಲೆ ಆರಿಸಿ ಬಂದ 15 ಜನ ಅಸ್ಪಶ್ಯ ಸದಸ್ಯರಿಗೆ ನನ್ನದೊಂದು ಪ್ರಶ್ನೆ, ತಮ್ಮ ಇಡೀ ಜೀವನದಲ್ಲಿ ಈ (ತಮ್ಮ) ಸಮಾಜಕ್ಕಾಗಿ ಅಥವಾ ದೇಶಕ್ಕಾಗಿ ಅದೆಷ್ಟು ಗಂಟೆ ಕೆಲಸ ಮಾಡಿದ್ದಾರೆ? ಅಸ್ಪಶ್ಯರ ಉನ್ನತಿಗಾಗಿ ಕಾರ್ಯ ಮಾಡಿದವರಿಗಾಗಿ ತಮ್ಮನ್ನು ಸಮರ್ಪಿಸಿದವರಿಗಾಗಿ ಸ್ಥಳ ನೀಡದೇ ಕೆಲಸಕ್ಕೆ ಬಾರದವರನ್ನು ನಿಯಮಿಸಲಾಗಿದೆ. ಬಡವರ ಅಧಿಕಾರ ನಡೆಯಬೇಕು ಜನರಿಂದ ಆಡಳಿತ ನಡೆಯಬೇಕು ಎಂದು ಕಾಂಗ್ರೆಸ್‌ನ ಇಚ್ಛೆ ಇದ್ದರೆ 2000 ವರ್ಷದವರೆಗೆ ತುಳಿದವರನ್ನು ಇಂದು 6 ಕೋಟಿ ಸಂಖ್ಯೆ ಮುಟ್ಟಿದ ಅಸ್ಪಶ್ಯರಿಗೆ ಅವರ ಯೋಗ್ಯ ಹಕ್ಕನ್ನು ಕೊಡಬೇಕು.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75