ಈ ‘ಆರೋಗ್ಯಕರ’ ಅಭ್ಯಾಸಗಳು ವಾಸ್ತವದಲ್ಲಿ ಶರೀರಕ್ಕೆ ಹಾನಿಕಾರಕವಾಗಿವೆ ಎನ್ನುವುದು ನಿಮಗೆ ತಿಳಿದಿರಲಿ
ಆರೋಗ್ಯಕರ ಜೀವನ ಶೈಲಿಯನ್ನು ಹೊಂದಬೇಕು ಎನ್ನುವುದು ಸಾಮಾನ್ಯವಾಗಿ ಹೆಚ್ಚಿನವರ ಬಯಕೆ. ಇದಕ್ಕಾಗಿ ಅವರು ಕೆಲವು ‘ಆರೋಗ್ಯಕರ’ ಅಭ್ಯಾಸಗಳನ್ನು ಹೊಂದಿರುತ್ತಾರೆ,ಆದರೆ ವಾಸ್ತವದಲ್ಲಿ ಇವು ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನೇ ಮಾಡಬಹುದು. ಅಂತಹ ಕೆಲವು ಅಭ್ಯಾಸಗಳಿಲ್ಲಿವೆ.....
► ಅತಿಯಾದ ವ್ಯಾಯಾಮ
ನಮ್ಮ ಶರೀರದ ಸರ್ವಾಂಗೀಣ ಆರೋಗ್ಯಕ್ಕೆ ವ್ಯಾಯಾಮವು ಮುಖ್ಯವಾಗಿದೆ. ಆದರೆ ಅತಿಯಾದ ವ್ಯಾಯಾಮವು ದಣಿವು,ಉಳುಕುಗಳು ಮತ್ತು ಇತರ ಗಾಯಗಳಿಗೆ ಕಾರಣವಾಗಬಹುದು.ವ್ಯಾಯಾಮ ಯಾವಾಗಲೂ ಹಿತಮಿತವಾಗಿರಲಿ. ಉತ್ತಮ ಆರೋಗ್ಯದ ಹೆಸರಿನಲ್ಲಿ ಶರೀರಕ್ಕೆ ಪೆಟ್ಟಾಗುವ ಮಟ್ಟದಲ್ಲಿ ವ್ಯಾಯಾಮವನ್ನೆಂದಿಗೂ ಮಾಡಬೇಡಿ.
► ಅತಿಯಾದ ಆ್ಯಂಟಿಬಯೊಟಿಕ್‌ಗಳ ಸೇವನೆ
ಅನಾರೋಗ್ಯವುಂಟಾದಾಗ ನಾವು ವೈದ್ಯರ ಬಳಿಗೆ ಧಾವಿಸುತ್ತೇವೆ. ದುರದೃಷ್ಟವಶಾತ್ ಇಂದು ರೋಗಿಗೆ ಅಗತ್ಯವಿರಲಿ,ಇಲ್ಲದಿರಲಿ...ಆ್ಯಂಟಿಬಯೊಟಿಕ್‌ಗಳನ್ನು ಶಿಫಾರಸು ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಅಲ್ಲದೆ ಆ್ಯಂಟಿಬಯೊಟಿಕ್‌ಗಳನ್ನು ವೈದ್ಯರ ಚೀಟಿಯಿಲ್ಲದೆಯೂ ಔಷಧಿ ಅಂಗಡಿಗಳಿಂದ ಖರೀದಿಸಿ ಸೇವಿಸುವ ಸ್ವಯಂ ವೈದ್ಯರೂ ಬೇಕಾದಷ್ಟಿದ್ದಾರೆ. ಇದು ಶರೀರದಲ್ಲಿ ಆ್ಯಂಟಿಬಯೊಟಿಕ್ ಪ್ರತಿರೋಧವನ್ನುಂಟು ಮಾಡುತ್ತದೆ. ಅಂದರೆ ಔಷಧಿಗಳು ನಿರೀಕ್ಷಿತ ಪರಿಣಾಮಗಳನ್ನು ನೀಡುವುದಿಲ್ಲ.
► ಹ್ಯಾಂಡ್ ಸ್ಯಾನಿಟೈಜರ್‌ನ ಅತಿಬಳಕೆ
ಕೈಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನೀರು ಮತ್ತು ಸಾಬೂನು ಲಭ್ಯವಿಲ್ಲದಿದ್ದರೆ ಹ್ಯಾಂಡ್ ಸ್ಯಾನಿಟೈಜರ್ ಒಳ್ಳೆಯ ಆಯ್ಕೆಯಾಗಿದೆ. ಆದರೆ ಅವು ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವುದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಈ ಸ್ಯಾನಿಟೈಜರ್‌ಗಳನ್ನು ಅತಿಯಾಗಿ ಬಳಸುವುದರಿಂದ ನಾವು ತೊಲಗಿಸಲು ಬಯಸಿರುವ ಸೂಕ್ಷ್ಮಜೀವಿಗಳು ಅದಕ್ಕೆ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತವೆ. ಹೀಗಾಗಿ ಸ್ಯಾನಿಟೈಜರ್ ಬದಲು ಸಾಧ್ಯವಿದ್ದಷ್ಟು ಸಾಬೂನು ಮತ್ತು ನೀರನ್ನು ಬಳಸುವುದು ಒಳ್ಳೆಯದು.
► ಅತಿಯಾದ ನೀರಿನ ಸೇವನೆ
ನೀರು ಜೀವಜಲ ನಿಜ,ಆದರೆ ಅತಿಯಾಗಿ ಸೇವಿಸಿದರೆ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಲ್ಲದು. ರಕ್ತದಲ್ಲಿ ಸೋಡಿಯಂ ಪ್ರಮಾಣ ತೀರ ಕುಸಿದು ಉಂಟಾಗುವ ಹೈಪೊನೇಟ್ರಿಮಿಯಾಕ್ಕೆ ಅತಿಯಾದ ನೀರಿನ ಸೇವನೆಯೂ ಒಂದು ಕಾರಣವಾಗಿದೆ.ಹೈಪೊನೇಟ್ರಿಮಿಯಾ ಸೆಳವುಗಳು,ಕೋಮಾಸ್ಥಿತಿ ಮಾತ್ರವಲ್ಲ,ಸಾವಿಗೂ ಕಾರಣವಾಗಬಹುದು.
► ಊಟ ತಪ್ಪಿಸುವುದು
ಬೆಳಗಿನ ತಿಂಡಿ ಅಥವಾ ಊಟವನ್ನು ತಪ್ಪಿಸುವುದು ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಉತ್ತಮ ತಂತ್ರವಾಗಿರಬಹುದು. ಆದರೆ ಅದು ಹೆಚ್ಚಾಗಿ ಟೈಪ್ 2 ಮಧುಮೇಹದೊಂದಿಗೆ ಗುರುತಿಸಿಕೊಂಡಿರುವ ದುರ್ಬಲ ಗ್ಲುಕೋಸ್ ಸಹಿಷ್ಣುತೆಗೆ ಕಾರಣವಾಗುತ್ತದೆ ಮತ್ತು ವಾಸ್ತವದಲ್ಲಿ ಶರೀರದ ತೂಕವನ್ನು ಹೆಚ್ಚಿಸಬಹುದು.
► ಅತಿಯಾದ ನಿದ್ರೆ
ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಅತಿಯಾದ ನಿದ್ರೆಯು ಬಾಡಿ ಮಾಸ್ ಇಂಡೆಕ್ಸ್‌ನ್ನು ಹೆಚ್ಚಿಸುತ್ತದೆ ಮತ್ತು ಇತರ ಆರೋಗ್ಯ(ನಿರ್ದಿಷ್ಟವಾಗಿ ಮನೋವೈಜ್ಞಾನಿಕ) ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.
► ವಿಟಾಮಿನ್‌ಗಳ ಸೇವನೆ
ಆಹಾರಗಳ ಮೂಲಕ ವಿಟಾಮಿನ್‌ಗಳ ಪೂರೈಕೆಯಲ್ಲಿ ಕೊರತೆಯಾದಾಗ ಅದನ್ನು ನೀಗಿಸಲು ಅವುಗಳ ಪೂರಕಗಳ ಸೇವನೆಯು ನೆರವಾಗುತ್ತದೆ. ಆದರೆ ಅವು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತವೆಯೇ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಹಲವಾರು ವಿಟಾಮಿನ್‌ಗಳ ಮಾತ್ರೆಗಳನ್ನು ಸೇವಿಸುವವರೂ ಇದ್ದಾರೆ. ಇವುಗಳ ಬದಲಿಗೆ ಮಲ್ಟಿ ವಿಟಾಮಿನ್ ಮಾತ್ರೆಯ ಸೇವನೆಯ ಅಗ್ಗವೂ ಆಗುತ್ತದೆ.
► ಪ್ರತಿ ಊಟದ ನಂತರ ಹಲ್ಲುಜ್ಜುವುದು
ಆಹಾರ ಸೇವನೆಯ ಬಳಿಕ ಹಲ್ಲುಗಳನ್ನು ಬ್ರಷ್ ಮಾಡಬೇಕೆಂದು ತಜ್ಞರು ಹೇಳುತ್ತಾರೆ. ಆದರೆ ಆಮ್ಲೀಯ ಅಂಶಗಳಿರುವ ಆಹಾರ ಅಥವಾ ಪಾನೀಯಗಳ ಸೇವನೆಯ ಬಳಿಕ ತಕ್ಷಣವೇ ಬ್ರಷ್ ಮಾಡಿದರೆ ಎನಾಮಲ್ ಅಥವಾ ದಂತಕವಚಕ್ಕೆ ಹಾನಿಯಾಗುತ್ತದೆ. ನೀವು ಆಮ್ಲೀಯ ಅಂಶಗಳಿರುವ ಆಹಾರ ಅಥವಾ ಪಾನೀಯವನ್ನು ಸೇವಿಸಲಿದ್ದೀರಿ ಎನ್ನವುದು ನಿಮಗೆ ಮುಂಚಿತವಾಗಿಯೇ ಗೊತ್ತಿದ್ದರೆ ಮೊದಲೇ ಹಲ್ಲುಗಳನ್ನು ಬ್ರಷ್ ಮಾಡಿಕೊಳ್ಳಿ.
► ಅತಿಯಾದ ಸೋಯಾ ಸೇವನೆ
ಮಾಂಸಾಹಾರಿಗಳಿಗೆ ಆಹಾರದ ಮೂಲಕ ಸಾಕಷ್ಟು ಪ್ರೋಟಿನ್ ದೊರೆಯುತ್ತದೆ. ಸಸ್ಯಾಹಾರಿಗಳಿಗೆ ಪ್ರೋಟಿನ್ ಕೊರತೆಯನ್ನು ನೀಗಿಸಲು ಸೋಯಾ ಉತ್ತಮ ಆಯ್ಕೆ ಎಂದು ಭಾವಿಸಲಾಗಿದೆ. ಆದರೆ ಅತಿಯಾಗಿ ಸೋಯಾ ಸೇವಿಸಿದರೆ ಅದು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಇಲಿಗಳ ಮೇಲೆ ನಡೆಸಲಾದ ಅಧ್ಯಯನಗಳು ಸೂಚಿಸಿವೆ.
► ಗ್ಲುಟೆನ್ ಸೇವನೆಯನ್ನು ನಿವಾರಿಸುವುದು
ಗ್ಲುಟೆನ್ ಇಡಿಯ ಗೋದಿ,ಬಾರ್ಲಿ ಇತ್ಯಾದಿಗಳಲ್ಲಿರುತ್ತದೆ. ವೈದ್ಯಕೀಯ ಕಾರಣ(ಸೆಲಿಯಾಕ್ ಕಾಯಿಲೆಯಂತಹ) ಗಳಿಂದಾಗಿ ಕೆಲವರಿಗೆ ಗ್ಲುಟೆನ್ ಸೇವನೆಯನ್ನು ವರ್ಜಿಸುವುದು ಅಗತ್ಯವಾಗಿರುತ್ತದೆ. ಆದರೆ ಇತ್ತೀಚಿಗೆ ಹೆಚ್ಚೆಚ್ಚು ಜನರು ಗ್ಲುಕೋನ್ ಸೇವನೆಯನ್ನು ನಿವಾರಿಸುತ್ತಿದ್ದಾರೆ. ಹೀಗೆ ಮಾಡುವುದರಿಂದ ತಾವು ಆರೋಗ್ಯಯುತರಾಗಿರುತ್ತೇವೆ ಎಂದು ಅವರು ಭಾವಿಸಿರುತ್ತಾರೆ. ಆದರೆ ಗ್ಲುಟೆನ್ ಮುಕ್ತ ಕುಕೀಗಳು ಮತ್ತು ಖಾದ್ಯಗಳಂತಹ ಪ್ರಿ ಪ್ಯಾಕ್ ಆಗಿರುವ ಮತ್ತು ಹೆಚ್ಚಿನ ಕ್ಯಾಲರಿಗಳನ್ನು ಒಳಗೊಂಡಿರುವ ಪರ್ಯಾಯಗಳ ಬಳಕೆಯು ಆರೋಗ್ಯದ ಮೇಲೆ ವಿರುದ್ಧ ಪರಿಣಾಮಗಳನ್ನು ಬೀರುತ್ತದೆ.
► ಸಕ್ಕರೆಯ ಬದಲು ರಾಸಾಯನಿಕಗಳ ಬಳಕೆ
ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದು ಆರೋಗ್ಯಕರ ಆರಂಭವೇನೋ ಹೌದು, ಆದರೆ ಇತರ ಆಹಾರಗಳಲ್ಲಿ ಸಕ್ಕರೆಯ ಬದಲು ಡಯಟ್ ಸೋಡಾ ಅಥವಾ ಕೃತಕ ಸಿಹಿಕಾರಕಗಳ ಬಳಕೆಯು ಸೂಕ್ತವಲ್ಲ. ಸಕ್ಕರೆಗೆ ಪರ್ಯಾಯ ರಾಸಾಯನಿಕಗಳು ಶರೀರದ ತೂಕ ಹೆಚ್ಚಲು ಕಾರಣವಾಗುತ್ತವೆ ಎನ್ನುವುದನನ್ನು ಅಧ್ಯಯನಗಳು ತೋರಿಸಿವೆ.
► ಕಠಿಣ ಪಥ್ಯ
ನಾವು ಸೇವಿಸುವ ಆಹಾರ ಪದ್ಧತಿಗಳಲ್ಲಿ ಆರೋಗ್ಯಕರ ಬದಲಾವಣೆ ಒಳ್ಳೆಯದು. ಆದರೆ ಕಠಿಣ ಪಥ್ಯವನ್ನು ಕೈಗೊಳ್ಳುವುದು ಒಳ್ಳೆಯದಲ್ಲ. ಇದು ಶರೀರವನ್ನು ಅಗತ್ಯ ಪೋಷಕಾಂಶಗಳಿಂದ ವಂಚಿಸುತ್ತದೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
► ಬಾಟ್ಲಿ ನೀರಿನ ಬಳಕೆ
ನಮ್ಮ ಮನೆಗಳಿಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯು ಸಾಕಷ್ಟು ನಿಗಾ ಮತ್ತು ನಿಯಂತ್ರಣದಿಂದ ಕೂಡಿರುತ್ತದೆಯಾದರೂ ಅದು ಶುದ್ಧವೆಂದು ಹೇಳುವಂತಿಲ್ಲ,ಅದೂ ಕಲುಷಿತಗೊಂಡಿರುತ್ತದೆ. ಹಲವಾರು ಜನರು ಕುಡಿಯಲು ಬಾಟ್ಲಿ ನೀರನ್ನು ಬಳಸುತ್ತಾರೆ. ಆದರೆ ಬಾಟ್ಲಿಗಳಲ್ಲಿಯ ನೀರು ನಲ್ಲಿನೀರಿಗಿಂತ ಕಡಿಮೆ ನಿಯಂತ್ರಣ ಹೊಂದಿರುತ್ತದೆ ಮತ್ತು ಅದು ನಲ್ಲಿನೀರಿಗಿಂತ ಹೆಚ್ಚು ಸುರಕ್ಷಿತ ಅಥವಾ ಶುದ್ಧವೆನ್ನಲು ಯಾವುದೇ ಗ್ಯಾರಂಟಿಗಳಿಲ್ಲ. ಹೀಗಾಗಿ ಮನೆಯ ನಲ್ಲಿಗೆ ಪ್ಯುರಿಫೈಯರ್ ಜೋಡಿಸುವುದು ಉತ್ತಮವಾಗುತ್ತದೆ.