ಎಚ್ಚರ… ಈ 5 ಲಕ್ಷಣಗಳು ಗಂಭೀರ ಕಾಯಿಲೆಗಳನ್ನು ಸೂಚಿಸಬಹುದು

Update: 2019-06-21 15:08 GMT

ಹೆಚ್ಚಿನ ಸಂದರ್ಭಗಳಲ್ಲಿ ನಾವು ನಮ್ಮ ಶರೀರವು ಸೂಚಿಸುವ ಸಂಕೇತಗಳನ್ನು ಕಡೆಗಣಿಸುತ್ತಿರುತ್ತೇವೆ. ಕೆಲವು ಅಸಹಜ ಲಕ್ಷಣಗಳಿಗೆ ಯಾತನಾದಾಯಕ ದೈಹಿಕ ಸ್ಥಿತಿಗಳು ಕಾರಣವಾಗಿರುತ್ತವೆ ಎನ್ನುವುದು ಗೊತ್ತಾದರೆ ನೀವು ಮುಂದಿನ ಬಾರಿ ನೋವಿನ ಮಾತ್ರೆಯನ್ನು ನುಂಗುವ ಮುನ್ನ ಎರಡೆರಡು ಸಲ ಯೋಚಿಸುತ್ತೀರಿ. ನಿಮ್ಮ ತೋಳುಗಳಲ್ಲಿಯ ಜೀವ ಹಿಂಡುವ ನೋವು ಅಥವಾ ಚಳಿಗಾಲದ ಬೆಳಗಿನಲ್ಲಿ ನಿಮ್ಮ ಉಗುರುಗಳ ಮೇಲಿರಬಹುದಾದ ನೀಲಿ ಛಾಯೆಯ ತೆಳುವಾದ ಪಟ್ಟಿ ಅಥವಾ ಗೆರೆ ಏನಿರಬಹುದೆಂದು ಯೋಚಿಸಿದ್ದೀರಾ?

ಹೆಚ್ಚಿನ ಸಲ ಇಂತಹ ಲಕ್ಷಣಗಳನ್ನು ನಾವು ಕಡೆಗಣಿಸುತ್ತೇವೆ. ಬನ್ನಿ,ಈ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ...

* ಒಣಗಿದ ಬಾಯಿ

ಬಾಯಾರಿಕೆ ಬಾಯಿ ಒಣಗಿರುವುದರ ಮೊದಲ ಸಂಕೇತಗಳಲ್ಲೊಂದಾಗಿದೆ. ಆದರೆ ಅದು ತೀವ್ರವಾಗಿದ್ದರೆ ಮತ್ತು ಜೊತೆಗೆ ಕಣ್ಣುಗಳೂ ಶುಷ್ಕವಾಗಿದ್ದರೆ ಸೋಗ್ರೆನ್ಸ್ ಸಿಂಡ್ರೋಮ್‌ನ ಮೊದಲ ಹಂತವನ್ನು ಸೂಚಿಸಬಹುದು. ಸೋಗ್ರೆನ್ಸ್ ಸಿಂಡ್ರೋಮ್ ಒಂದು ಸ್ವರಕ್ಷಿತ ರೋಗವಾಗಿದ್ದು,40ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರನ್ನು ಬಾಧಿಸುತ್ತದೆ. ಈ ಸ್ಥಿತಿಯಲ್ಲಿ ಶರೀರದ ರೋಗ ನಿರೋಧಕ ವ್ಯವಸ್ಥೆಯು ಕಣ್ಣುಗಳು,ಬಾಯಿ ಮತ್ತು ಕೆಲವೊಮ್ಮೆ ಚರ್ಮ ಹಾಗೂ ಕೀಲುಗಳಂತಹ ಆರ್ದ್ರತೆ ಅಗತ್ಯವಾಗಿರುವ ಅಂಗಗಳ ಮೇಲೆ ದಾಳಿ ಮಾಡುತ್ತದೆ.

* ವಸಡುಗಳಲ್ಲಿ ರಕ್ತಸ್ರಾವ

ಹಲ್ಲುಜ್ಜುವಾಗ ಅಥವಾ ಆಹಾರವನ್ನು ಜಗಿಯುವಾಗ ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದು ಜಿಂಜಿವೈಟಿಸ್ ಅಥವಾ ವಸಡುಗಳಲ್ಲಿ ಉರಿಯೂತವನ್ನು ಸೂಚಿಸುತ್ತದೆ. ಆದರೆ ಮಕ್ಕಳ ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದಕ್ಕೆ ಜಿಂಜಿವೈಟಿಸ್ ಕಾರಣವಾಗಿರುವ ಸಾಧ್ಯತೆ ಕಡಿಮೆ.ತೀರ ಒರಟಾಗಿ ಹಲ್ಲುಜ್ಜುವುದು ಅಥವಾ ರಕ್ತಕ್ಯಾನ್ಸರ್ ಇವು ಮಕ್ಕಳಲ್ಲಿ ವಸಡುಗಳಲ್ಲಿ ರಕ್ತಸ್ರಾವಕ್ಕೆ ಕೆಲವು ಕಾರಣಗಳಲ್ಲಿ ಸೇರಿವೆ. ವಸಡುಗಳಲ್ಲಿ ರಕ್ತಸ್ರಾವ ಸಾಮಾನ್ಯವಾಗಿ ರಕ್ತಕ್ಯಾನ್ಸರ್‌ನ ಮೊದಲ ಲಕ್ಷಣಗಳಲ್ಲೊಂದಾಗಿದೆ.

* ತಲೆಗೂದಲ ಬಣ್ಣದಲ್ಲಿ ಬದಲಾವಣೆ

 ತಲೆಗೂದಲಿನ ಪಟ್ಟಿಯೊಂದು ತನ್ನ ಬಣ್ಣವನ್ನು ಕಳೆದುಕೊಂಡಿದ್ದರೆ ಅದಕ್ಕೆ ಒತ್ತಡ ಅಥವಾ ಆಘಾತ ಅಥವಾ ಕುಪೋಷಣೆ,ವಿಶೇಷವಾಗಿ ಕಬ್ಬಿಣ ಅಥವಾ ಪ್ರೋಟಿನ್ ಕೊರತೆ ಕಾರಣವಾಗಿರಬಹುದು. ಆದರೆ ಬಣ್ಣವನ್ನು ಕಳೆದುಕೊಂಡಿರುವ ತಲೆಗೂದಲು ಅಲ್ಸರೇಟಿವ್ ಕೊಲೈಟಿಸ್‌ನಂತಹ ಹೆಚ್ಚು ಗಂಭೀರ ಕಾಯಿಲೆಯನ್ನೂ ಸೂಚಿಸಬಹುದು. ಈ ಉರಿಯೂತ ಕಾಯಿಲೆಯು ಅತ್ಯಂತ ಯಾತನಾದಾಯಕವಾಗಿದ್ದು,ದೊಡ್ಡಕರುಳು ಮತ್ತು ಗುದನಾಳದ ಒಳಪದರಗಳಲ್ಲಿ ಹುಣ್ಣುಗಳನ್ನುಂಟು ಮಾಡುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ದೊಡ್ಡಕರುಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಬಹುದು.

* ಹಿಮ್ಮಡಿಯಲ್ಲಿ ನೋವು

ಕೆಲವೊಮ್ಮೆ ಜಾಗಿಂಗ್ ಮಾಡುವಾಗ ಅಥವಾ ನಡೆಯುತ್ತಿರುವಾಗ ಏನಾದರೊಂದು ಯಡವಟ್ಟು ಉಂಟಾಗಿ ದಿನವಿಡೀ ಹಿಮ್ಮಡಿಯಲ್ಲಿ ನೋವನ್ನುಂಟು ಮಾಡಬಹುದು. ಆದರೆ ಹಿಮ್ಮಡಿಯಲ್ಲಿ ಇರಿಯುತ್ತಿರುವಂತೆ ನೋವಾಗುತ್ತಿದ್ದರೆ ಅದು ಸಯಾಟಿಕಾ ಅಥವಾ ಹರ್ನಿಯೇಟೆಡ್ ಡಿಸ್ಕ್‌ನ ಲಕ್ಷಣವಾಗಿರಬಹುದು. ಸಯಾಟಿಕಾ ನರವು ಬೆನ್ನಿನ ಕೆಳಭಾಗದಿಂದ ಆರಂಭಗೊಂಡು ಕಾಲುಗಳ ಮೂಲಕ ಹಿಮ್ಮಡಿಗಳವರೆಗೂ ಸಾಗುತ್ತದೆ. ಬೆನ್ನುಮೂಳೆಯಲ್ಲಿನ ಕಶೇರುಗಳನ್ನು ಬೇರ್ಪಡಿಸುವ ಅಂಗಾಂಶಗಳಿಗೆ ಹಾನಿಯಾಗಿದ್ದರೆ ಆ ಸ್ಥಿತಿಯನ್ನು ಹರ್ನಿಯೇಟೆಡ್ ಡಿಸ್ಕ್ ಎನ್ನಲಾಗುತ್ತದೆ. ಇದರಲ್ಲಿ ಕಶೇರುಗಳಲ್ಲಿ ಚುಚ್ಚಿದಂತಹ ನೋವಿನ ಅನುಭವವಾಗುತ್ತದೆ.

* ರೋಗನಿರ್ಧಾರವಾಗದ ವೈರಾಣು ಲಕ್ಷಣಗಳು

ತಲೆನೋವು,ಬಳಲಿಕೆ,ಸ್ನಾಯು ಅಥವಾ ಕೀಲುನೋವು ಮತ್ತು ಊದಿಕೊಂಡ ದುಗ್ಧಗ್ರಂಥಿಗಳು ಸಾಮಾನ್ಯವಾಗಿ ಫ್ಲೂ ಅನ್ನು ಸೂಚಿಸುತ್ತವೆ. ಆದರೆ ರಕ್ತ ಪರೀಕ್ಷೆ ಮಾಡಿದಾಗ ಇನ್‌ಫ್ಲುಯೆಂಝಾ ವೈರಸ್ ಪತ್ತೆಯಾಗದಿದ್ದರೆ ರಕ್ತಪರೀಕ್ಷೆಯೇ ಸರಿಯಿರಲಿಲ್ಲ ಎನ್ನುವುದು ಸಾಮಾನ್ಯ ಅಭಿಪ್ರಾಯವಾಗುತ್ತದೆ. ಆದರೆ ಅದು ಲೈಮ್ ಡಿಸೀಸ್‌ನ್ನೂ ಸೂಚಿಸಬಹುದು. ಲೈಮ್ ಡಿಸೀಸ್ ಸಾಮಾನ್ಯವಾಗಿ ದದ್ದುಗಳೊಂದಿಗೆ ಫ್ಲೂದ ಲಕ್ಷಣಗಳನ್ನೇ ತೋರಿಸುತ್ತದೆ. ವ್ಯಕ್ತಿಯು ದದ್ದುಗಳನ್ನು ಗಮನಿಸಿದರೆ ಮತ್ತು ಲೈಮ್ ಡಿಸೀಸ್‌ಗೆ ತುತ್ತಾಗಿರುವುದನ್ನು ಖಚಿತಪಡಿಸಿಕೊಂಡರೆ ಅದು ತೀವ್ರಗೊಳ್ಳುವ ಮೊದಲೇ ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News