ತಾರತಮ್ಯದ ಸಮಸ್ಯೆ

Update: 2019-07-04 18:36 GMT

ಅಸ್ಪಶ್ಯರಿಗೆ ತಾವೂ ಮನುಷ್ಯರೆನ್ನಿಸಿಕೊಳ್ಳಬೇಕು ಎನ್ನುವುದರ ಆನಂತರ ಒದಗುವ ಅತಿ ಮುಖ್ಯ ಸಮಸ್ಯೆ, ಈ ಭೇದ ಪಕ್ಷಪಾತಗಳ ಸಮಸ್ಯೆ. ಅಸ್ಪಶ್ಯರ ವಿರುದ್ಧ ಹಿಂದೂಗಳು ತೋರಿಸುವ ಭೇದ ಪಕ್ಷಪಾತಗಳು ಯಾವ ಪ್ರಮಾಣದ ವ್ಯಾಪ್ತಿ ಹೊಂದಿದೆ ಎಂದರೆ, ಅದನ್ನು ಹೊರಗಿನವರು ಯಾರೇ ಆಗಲಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗದು. ಅಸ್ಪಶ್ಯರು ಮತ್ತು ಹಿಂದೂಗಳು ಪರಸ್ಪರ ಎದುರಾಗುವ ಬದುಕಿನ ಯಾವುದೇ ಕ್ಷೇತ್ರದಲ್ಲೂ ಅಸ್ಪಶ್ಯರು ತಾರತಮ್ಯಕ್ಕೆ ಬಲಿಯಾಗದೆ ಉಳಿಯಲಾರರು. ಈ ಪಕ್ಷಪಾತ ವಿಷದ ಹಾಗೆ ಕಟುವಾದದ್ದು ಕೂಡ.

ಸಾಮಾಜಿಕ ಸಂಬಂಧಗಳ ವಿಷಯ ಹೇಳುವುದಾದರೆ-ಕುಣಿತ, ಸ್ನಾನ, ಉಟೋಪಚಾರ, ಕುಸ್ತಿ, ಪೂಜೆ ಮುಂತಾದ ಸಾಮೂಹಿಕ ಕೂಟಗಳಲ್ಲೆಲ್ಲ ಈ ಪಕ್ಷಪಾತ ಅಸ್ಪಶ್ಯರನ್ನು ಬಹಿಷ್ಕರಿಸುತ್ತದೆ. ಅಂದರೆ, ಸಾಮೂಹಿಕ ಸಮಾವೇಶಗಳ ಸಾಮಾನ್ಯ ವೃತ್ತಗಳಲ್ಲೆಲ್ಲ ಈ ಬಹಿಷ್ಕಾರ ಚಲಾವಣೆಯಲ್ಲಿರುತ್ತದೆ. ಸಾರ್ವಜನಿಕ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿಯೂ ಈ ಪಕ್ಷಪಾತವಿದ್ದು, ಶಾಲೆ, ಬಾವಿ, ದೇವಸ್ಥಾನ ಹಾಗೂ ಸಾರಿಗೆ ವಾಹನಗಳಲ್ಲಿ ಅಸ್ಪಶ್ಯರನ್ನು ಹೊರಗಿಡಲಾಗುತ್ತದೆ. ಸಾರ್ವಜನಿಕ ಆಡಳಿತವಂತೂ ಅಸ್ಪಶ್ಯರ ವಿರುದ್ಧವಾದ ಪಕ್ಷಪಾತ ಮನೋಭಾವದಲ್ಲಿ ಆಳವಾಗಿ ಅದ್ದಿಕೊಂಡಿದೆ. ನ್ಯಾಯಾಲಯಗಳು, ಸರಕಾರಿ ಇಲಾಖೆಗಳು, ಸಹಕಾರಿ ಬ್ಯಾಂಕುಗಳು, ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸು ವ್ಯವಸ್ಥೆ -ಇವೆಲ್ಲ ಪಕ್ಷಪಾತಕ್ಕೆ ಎರವಾಗಿವೆ. ಭೂಮಿಯನ್ನೋ, ಸಾಲವನ್ನೋ, ಕೆಲಸವನ್ನೋ ಪಡೆದುಕೊಳ್ಳಬೇಕೆಂದರೆ ಅಂಥಲ್ಲಿ ಅಸ್ಪಶ್ಯರ ವಿರುದ್ಧವಾದ ಪಕ್ಷಪಾತ ಹೆಡೆಯೆತ್ತಿ ನಿಲ್ಲುತ್ತದೆ. ಸಾರ್ವಜನಿಕ ಸೇವೆಗಳಲ್ಲಂತೂ ಈ ಪಕ್ಷಪಾತ ತುಂಬ ಬಲವತ್ತರವಾಗಿದೆ. ಸಾರ್ವಜನಿಕ ಸೇವೆಗಳಲ್ಲಿ ಅಸ್ಪಶ್ಯರು ಪ್ರವೇಶಿಸಲು ಅಥವಾ ಭಡ್ತಿ ಪಡೆದುಕೊಳ್ಳಲು ತಡೆ ಹಾಕುವ ಕಾನೂನುಗಳಿಲ್ಲದಿದ್ದರೂ, ರೂಢಿಯಿಂದ ಸ್ಥಾಪಿತವಾಗಿ ನಿಂತಿರುವ ಸ್ಪಷ್ಟ ಕಟ್ಟಳೆಗಳಿವೆ. ಬಹಳಷ್ಟು ಸಲ ಸಾರ್ವಜನಿಕ ಸೇವೆಯಲ್ಲಿ ಅಸ್ಪಶ್ಯರಿಗೆ ಪ್ರವೇಶವೇ ಸಿಗುವುದಿಲ್ಲ. ಇಡೀ ಇಲಾಖೆಗಳೇ ಅವರಿಗೆ ಬಾಗಿಲು ಮುಚ್ಚಿಕೊಂಡಿವೆ. ಬಟ್ಟೆ ಕಾರ್ಖಾನೆಗಳ ನೇಯ್ಗೆ ವಿಭಾಗ ಪೂರ್ಣ ಅಥವಾ ಸೈನ್ಯದ ಸಮಸ್ತ ವಿಭಾಗಗಳು ಅಸ್ಪಶ್ಯರಿಗೆ ಮನ್ನಾ ಆಗಿಬಿಟ್ಟಿವೆ. ಒಂದು ಪಕ್ಷ, ಅಸ್ಪಶ್ಯನೊಬ್ಬನಿಗೆ ಪ್ರವೇಶ ಸಿಕ್ಕುವಂಥಲ್ಲೂ ಆತ ನಿಶ್ಚಿತವಾದ ಒಂದು ಮಿತಿಯನ್ನು ದಾಟಿ ಮುಂದಕ್ಕೆ ಹೋಗುವಂತಿಲ್ಲ. ದಕ್ಷತೆ, ದೀರ್ಘ ಸೇವಾವಧಿ ಮುಂತಾದ ಅರ್ಹತೆಗಳಿದ್ದಾಗ್ಯೂ, ಹಿಂದೂಗಳ ಮೇಲೆ ಆಡಳಿತ ನಡೆಸಬಹುದಾದ ಯಾವುದೇ ಹುದ್ದೆಗೂ ಅಸ್ಪಶ್ಯರು ಏರತಕ್ಕದ್ದಲ್ಲ ಎಂಬ ಸಾಮಾನ್ಯ ಕಟ್ಟಳೆಯನ್ನು ಸದಾ ಪಾಲಿಸಲಾಗುತ್ತದೆ. ಇದರ ಪರಿಣಾಮವೆಂದರೆ, ಸಂಪೂರ್ಣ ಅಸ್ಪಶ್ಯರಿಂದಲೇ ತುಂಬಿಕೊಂಡಿರುವ ಇಲಾಖೆಯೊಂದನ್ನು ಬಿಟ್ಟು ಬೇರೆ ಇಲಾಖೆಗಳಲ್ಲಿ ಯಾವುದೇ ಮುಖ್ಯ ಹುದ್ದೆಗೂ ಅಸ್ಪಶ್ಯನಿಗೆ ಪ್ರವೇಶವಿರುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಅಸ್ಪಶ್ಯರ ವಿರುದ್ಧ ಪಕ್ಷಪಾತವಿಲ್ಲದೆ ಉಳಿದಿರುವ ಒಂದೇ ಒಂದು ಕ್ಷೇತ್ರ-ಝಾಡಮಾಲಿ ಕ್ಷೇತ್ರ. ಈ ಕ್ಷೇತ್ರದಲ್ಲಿ ಪಕ್ಷಪಾತದ ಅಗತ್ಯವೇ ಇರುವುದಿಲ್ಲ. ಇಲ್ಲಿ ಕೂಡ, ಮೇಲುಮೇಲಿನ ಹುದ್ದೆಗಳಿಗೆ ಬಂದರೆ ಪಕ್ಷಪಾತ ಕಾಲಿರಿಸುತ್ತದೆ. ಹೇಸಿಗೆಯ ಕೆಲಸಗಳನ್ನೆಲ್ಲ ಅಸ್ಪಶ್ಯರು ಮಾಡುತ್ತಾರೆ. ಹೆಚ್ಚಿನ ಸಂಬಳ ಸಿಗುವ ಹಾಗೂ ಹೇಸಿಗೆಯನ್ನು ನೇರ ಮುಟ್ಟಬೇಕಿಲ್ಲದ ಉಸ್ತುವಾರಿ ಹುದ್ದೆಗಳಿಗೆ ಹಿಂದೂಗಳ ನೇಮಕವಾಗುತ್ತದೆ. ಇಂಥ ಸನ್ನಿವೇಶದಲ್ಲಿ-ನಾಗರಿಕ ಹಕ್ಕು ಎಂದರೆ ಅಸ್ಪಶ್ಯರ ಹಕ್ಕು ಎಂದಾಗುವುದಿಲ್ಲ; ಜನರಿಗೋಸ್ಕರವಾಗಿರುವ ಜನರದ್ದೇ ಸರಕಾರ ಎಂಬುದಕ್ಕೆ ಅಸ್ಪಶ್ಯರಿಗೋಸ್ಕರವಾಗಿ ಇರುವ ಸರಕಾರ ಎಂಬ ಅರ್ಥ ಬರುವುದಿಲ್ಲ.; ಸರ್ವರಿಗೂ ಸಮಾನಾವಕಾಶ ಎಂದರೆ ಅಸ್ಪಶ್ಯರಿಗೆ ಸಮಾನಾವಕಾಶ ಎಂದಾಗುವುದಿಲ್ಲ; ಸರ್ವರಿಗೂ ಸಮಾನ ಹಕ್ಕು ಎಂದರೆ ಅಸ್ಪಶ್ಯರಿಗೆ ಸಮಾನ ಹಕ್ಕು ಎಂದಲ್ಲ. ಇಡೀ ದೇಶದ ಮೂಲೆಮೂಲೆ ಬಿಡದೆ ಎಲ್ಲೆಲ್ಲೂ ಅಸ್ಪಶ್ಯನೆಂಬುವನು ಆತಂಕವನ್ನೆದುರಿಸುತ್ತಾನೆ, ಪಕ್ಷಪಾತಕ್ಕೆ ಸಿಕ್ಕು ನರಳುತ್ತಾನೆ. ಇಂಡಿಯಾದ ಈ ಅವಕಾಶಹೀನ ನಿರ್ಭಾಗ್ಯನಿಗೆ ಎಲ್ಲ ಕಡೆಯೂ ಅನ್ಯಾಯವೇ ಎದುರಾಗುತ್ತದೆ. ಸುತ್ತುಕೋಟಲೆಗಳ ನೆರೆಯಲ್ಲಿ ಮೈಮುರಿದು ಗೇಯುವ ಅಸ್ಪಶ್ಯರಿಗೆ ಮಾತ್ರವೇ ಈ ಕಟುಸತ್ಯ ಅರಿವಾಗಲು ಸಾಧ್ಯ. ಪಕ್ಷಪಾತವೆನ್ನುವುದು ಅಸ್ಪಶ್ಯರ ಎದುರು ಕಟ್ಟಿ ನಿಲ್ಲಿಸಿರುವ ಕಲ್ಲಿನ ಕೋಟೆಯಾಗಿದೆ. ಅದನ್ನು ದಾಟಿ ಹೊರಕ್ಕೆ ಬರುವುದು ಅವರಿಗೆ ಅಸಾಧ್ಯವಾಗುತ್ತದೆ. ಇದರಿಂದ ಅಸ್ಪಶ್ಯರ ಬದುಕು ಭಯದ ಹುತ್ತವಾಗಿದೆ - ನಿರುದ್ಯೋಗದ ಭಯ, ಆಕ್ರಮಣದ ಭಯ, ದಂಡ ಶಿಕ್ಷೆಗಳ ಭಯ, ಸದಾ ಒಂದಲ್ಲ ಒಂದು ಭಯ, ಭರವಸೆಯೇ ಕಾಣದ ಅಭದ್ರತೆಯ ಬದುಕು ಅವರದು.
ಇನ್ನೊಂದು ಬಗೆಯ ಪಕ್ಷಪಾತವಿದೆ, ಸೂಕ್ಷ್ಮವಾದದ್ದು, ಆದರೆ ಅಷ್ಟೇ ನಿಜವಾದದ್ದು. ಅದೆಂದರೆ-ಸಮರ್ಥನಾದ ಅಸ್ಪಶ್ಯನಿದ್ದರೆ ಆತನ ಗೌರವ ಪ್ರತಿಷ್ಠೆಗಳನ್ನು ಕ್ರಮಬದ್ಧ ರೀತಿಯಲ್ಲಿ ಹಗುರಗೊಳಿಸಿ ಬಿಡುವಂಥದ್ದು. ಹಿಂದೂ ನಾಯಕನೊಬ್ಬನನ್ನು ಬಣ್ಣಿಸುವಾಗ, ಇಂಡಿಯಾದ ಮಹಾನಾಯಕ ಎಂದು ಬಣ್ಣಿಸುತ್ತಾರೆ, ಅವನು ಕಾಶ್ಮೀರಿ ಬ್ರಾಹ್ಮಣನಿದ್ದರೂ ಕಾಶ್ಮೀರಿ ಬ್ರಾಹ್ಮಣರ ನಾಯಕ ಎನ್ನುವುದಿಲ್ಲ. ಅದೇ ಅಸ್ಪಶ್ಯನೊಬ್ಬ ನಾಯಕನಾಗಿದ್ದರೆ ಆತನನ್ನು ಅಸ್ಪಶ್ಯರ ನಾಯಕ ಎಂದು ಹೆಸರಿಸುತ್ತಾರೆ. ಒಬ್ಬ ಹಿಂದೂ ಡಾಕ್ಟರನ್ನು ಇಂಡಿಯಾದ ಶ್ರೇಷ್ಠ ಡಾಕ್ಟರ್ ಎಂದೇ ವರ್ಣಿಸುತ್ತಾರೆ. ಅವನು ಅಯ್ಯಂಗಾರ್ ಜಾತಿಯವನಾಗಿದ್ದರೂ ಅಯ್ಯಂಗಾರ್ ಜಾತಿಯ ಡಾಕ್ಟರ್ ಎನ್ನುವುದಿಲ್ಲ. ಅವನೇನಾದರೂ ಅಸ್ಪಶ್ಯನಾಗಿದ್ದರೆ ಮಾತ್ರ ಆತನನ್ನು ಅಸ್ಪಶ್ಯ ವರ್ಗದ ಡಾಕ್ಟರ್ ಎಂದು ಹೆಸರಿಸುತ್ತಾರೆ. ಹಿಂದೂ ಸಂಗೀತಗಾರನಿದ್ದರೆ ಆತನನ್ನು ಇಂಡಿಯಾದ ಶ್ರೇಷ್ಠ ಸಂಗೀತ ಕಲಾವಿದ ಎನ್ನುತ್ತಾರೆ. ಅವನೇ ಅಸ್ಪಶ್ಯನಾಗಿದ್ದರೆ ಅಸ್ಪಶ್ಯ ಸಂಗೀತಗಾರ ಎನ್ನುತ್ತಾರೆ. ಹಿಂದೂ ಪೈಲ್ವಾನನಿದ್ದರೆ ಅವನನ್ನು ಇಂಡಿಯಾದ ಉತ್ತಮ ಪೈಲ್ವಾನ್ ಎನ್ನುತ್ತಾರೆ. ಅದೇ ಅಸ್ಪಶ್ಯನಿದ್ದರೆ ಆತನನ್ನು ಅಸ್ಪಶ್ಯರ ಪೈಲ್ವಾನ್ ಎಂದೇ ಹೆಸರಿಸುತ್ತಾರೆ.
ಈ ಬಗೆಯ ಪಕ್ಷಪಾತದ ಮೂಲ ಹಿಂದೂಗಳ ದೃಷ್ಟಿಯಲ್ಲೇ ಇರುವಂಥದು. ಅಸ್ಪಶ್ಯರು ಮೂಲತಃ ಕೆಳವರ್ಗದ ಜನರು; ಅವರಲ್ಲಿ ಶ್ರೇಷ್ಠರೆಂದರೆ ಅಸ್ಪಶ್ಯ ವರ್ಗದಲ್ಲಿ ಶ್ರೇಷ್ಠರಾದವರು ಎಂದು ಮಾತ್ರವೇ ಭಾವಿಸತಕ್ಕದ್ದು - ಎನ್ನುವುದು ಅವರ ನಂಬಿಕೆ. ಅದರಂತೆ, ಅಸ್ಪಶ್ಯರು ಎಷ್ಟೇ ಉತ್ತಮರಾದರೂ ಹಿಂದೂಗಳಿಗಿಂತ ಉತ್ತಮರಾಗಲಾರರು, ಮಾತ್ರವಲ್ಲ, ಯಾವತ್ತೂ ಅವರಿಗೆ ಸಮಾನರೂ ಆಗಲಾರರು. ಈ ಬಗೆಯ ಪಕ್ಷಪಾತ ಸಾಮಾಜಿಕ ಸ್ವರೂಪದ್ದಾಗಿದ್ದರೂ ಇದು ಕ್ರೌರ್ಯ ಕಟುತ್ವಗಳಲ್ಲಿ ಆರ್ಥಿಕ ಭೇದ ಪಕ್ಷಪಾತಗಳಿಗಿಂತ ಕಿಂಚಿತ್ತೂ ಕಡಿಮೆಯಾದದ್ದಲ್ಲ.
ತಾರತಮ್ಯವೆನ್ನುವುದು ಸ್ವಾತಂತ್ರವಿಹೀನತೆಗೆ ಇನ್ನೊಂದು ಹೆಸರು, ಅಷ್ಟೇ. ಮಿ.ಟಾನೆ ಹೀಗೆ ಹೇಳುತ್ತಾನೆ:
  
‘‘ಯಾವುದೇ ಒಂದು ಕಾಲ ಮತ್ತು ದೇಶದ ವಾಸ್ತವಕ್ಕೆ ಸಂಬಂಧಿಸದಿರುವ ಕೇವಲವಾದ ಸ್ವಾತಂತ್ರ ಮಾರುಕಟ್ಟೆಯಲ್ಲಿ ಸಿಗದು. ಸ್ವಾತಂತ್ರವೆನ್ನುವುದು ಮತ್ತೇನನ್ನೇ ಸೂಚಿಸಲಿ ಬಿಡಲಿ, ಹಲವರಲ್ಲಿ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನಂತೂ ನಿಶ್ಚಿತವಾಗಿ ಸೂಚಿಸುತ್ತದೆ. ಆಯ್ಕೆಯೆಂದರೆ ನಿಜವಾದ ಆಯ್ಕೆ, ನಾಮಮಾತ್ರವಾದದ್ದಲ್ಲ. ಅಂದರೆ, ವಾಸ್ತವವಾಗಿಯೂ ಹಲವಾರು ವಸ್ತುಗಳು ಎದುರಿನಲ್ಲಿದ್ದು ಅವುಗಳಲ್ಲಿ ತನಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಬಹುದಾದ ನಿಜವಾದ ಅಧಿಕಾರ. ಕಾಗದದಲ್ಲಷ್ಟೇ ನಮೂದಾಗಿರುವ ಅಮೂರ್ತ ಅಧಿಕಾರವಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಸ್ವಾತಂತ್ರದ ಅರ್ಥ ನಿಶ್ಚಿತ ಸಂದರ್ಭದಲ್ಲಿ ನಿಶ್ಚಿತ ಕ್ಷಣದಲ್ಲಿ ನಿಶ್ಚಿತವಾದ ಯಾವುದೋ ಒಂದನ್ನು ಮಾಡಲು ಅಥವಾ ಮಾಡದೇ ಇರಲು ನಮಗೆ ಅಧಿಕಾರವಿರುವುದು. ಹಾಗಿಲ್ಲದಿದ್ದಲ್ಲಿ ಸ್ವಾತಂತ್ರ ಎಂಬುದಕ್ಕೆ ಅರ್ಥವೇ ಇಲ್ಲ. ಚಿಂತನೆ, ಸಂಕಲ್ಪ,ಕ್ರಿಯೆ ಇವುಗಳಿಂದಲೇ ಮನುಷ್ಯ ಪೂರ್ಣ ಮನುಷ್ಯನಾಗುತ್ತಾನೆ ಎನ್ನುತ್ತಾರೆ. ಹಾಗೆಂದುಕೊಂಡು ಕವಿಗಳು ಲೇಖಿಸುವ ಚಿತ್ರ ರೇಖೆಗಳು ಮೋಹಕವೆನ್ನಿಸುತ್ತವೆ. ಅದೇನೇ ಇರಲಿ ಕಾವ್ಯ ಬಿಟ್ಟು ದಿನನಿತ್ಯದ ಬದುಕಿನ ಗದ್ಯದಲ್ಲಿ, ಸ್ವಾತಂತ್ರವೆನ್ನುವುದು ಬದುಕಿನ ಒಂದು ಅಂಗ, ವಾಸ್ತವವಾದದ್ದು ಮತ್ತು ಕ್ರಿಯಾ ರೂಪವುಳ್ಳದ್ದು. ಪ್ರತಿಯೊಬ್ಬ ವ್ಯಕ್ತಿಗೂ ಕೆಲವು ನಿಶ್ಚಿತ ಅಗತ್ಯಗಳಿವೆ. ಬದುಕಲು ಬೇಕಾದ ಭೌತಿಕ ವಸ್ತು ಸರಕುಗಳಿಂದ ಮೊದಲುಗೊಂಡು ಮಾತು, ಬರವಣಿಗೆಗಳ ಮೂಲಕ ತನ್ನನ್ನು ಅಭಿವ್ಯಕ್ತಗೊಳಿಸುವ ಅಗತ್ಯದ ತನಕ, ಸಾರ್ವತ್ರಿಕ ಆಸಕ್ತಿಯ ವ್ಯವಹಾರಗಳಲ್ಲಿ ತಾನು ಪಾಲ್ಗೊಳ್ಳಬೇಕೆಂಬ ಅಗತ್ಯದ ತನಕ, ತನ್ನದೇ ರೀತಿಯಲ್ಲಿ ತನ್ನ ದೇವರನ್ನು ಪೂಜಿಸುವ ಅಥವಾ ಪೂಜಿಸುವುದಿಲ್ಲ ಎಂದು ನಿಷೇಧಿಸುವ ಅಗತ್ಯದ ತನಕ, ವ್ಯಕ್ತಿಯ ಸ್ವಾಸ್ಥ್ಯ ಉಳಿಸಿಕೊಳ್ಳಲಿಕ್ಕೆ ಈ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಸಂಕ್ಷೇಪದಲ್ಲಿ ಸಾರಾಂಶ ಹೇಳುವುದಾದರೆ-ಒಬ್ಬ ವ್ಯಕ್ತಿಯ ಸ್ವಾತಂತ್ರ ಎಂಬುದು ನಿಸರ್ಗದ ಮಿತಿಯಲ್ಲಿ ಮತ್ತು ತನ್ನ ಹಾಗೆ ಬದುಕುವ ಇತರ ಸಹವಾಸಿಗಳಿಗೂ ಇಂತಹ ಫಲಾನುಭವ ಸಿಗಬೇಕಾಗುವ ರೀತಿಯಲ್ಲಿ ತನ್ನ ಭೌತಿಕ ಹಾಗೂ ಭೌತಿಕೇತರ ಅಗತ್ಯಗಳನ್ನು ಪೂರೈಸಿಕೊಳ್ಳಲಿಕ್ಕೆ ಸಿಗುವ ಅಧಿಕಾರ.’’ ಈಗಾಗಲೇ ಇರುವ ಪಟ್ಟಿಗೆ ಇನ್ನೂ ಕೆಲವು ಸಂಗತಿಗಳನ್ನು ಸೇರಿಸಿಕೊಳ್ಳಬೇಕೆನ್ನುವುದು ನನ್ನ ಇರಾದೆಯಲ್ಲ. ಆದರೆ ಎಲ್ಲಕ್ಕೂ ಅನ್ವಯವಾಗುವ ಎರಡು ಅಂಶಗಳನ್ನು ಪ್ರಸ್ತಾಪಿಸುತ್ತೇನೆ. ಮೊದಲನೆಯದಾಗಿ ಹಕ್ಕು ಎನ್ನುವುದು ನಿಜವಾಗಿಯೂ ಸ್ವಾತಂತ್ರವೆನಿಸಿ ಕೊಳ್ಳಬೇಕಾದರೆ ಅದು ಬರೀ ನಮೂದಿನಲ್ಲಿದ್ದರೆ ಸಾಲದು. ರಿಟ್ಸ್ ಹೋಟೆಲ್‌ನ ಔತಣ ಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಹಕ್ಕಿದೆ ಎಂದರೆ ಏನು ಬಂತು? ಇರುವ ಹಕ್ಕನ್ನು ಚಲಾಯಿಸುವ ಅಗತ್ಯ ಬಂದಾಗ ಚಲಾಯಿಸಲು ಸಾಧ್ಯವೂ ಆಗುವಂತಿರಬೇಕು. ಅದು ಸ್ವಾತಂತ್ರ. ನಿಮಗೆ ಮತ ನೀಡುವ, ಮತ ಸಂಘಟಿಸುವ ಅಧಿಕಾರವಿದೆ. ಅದನ್ನು ಚಲಾಯಿಸುವುದರಿಂದ ಊರಿನ ಹೊರಗೆ ಗಡೀಪಾರಾಗುವುದೋ ಅಥವಾ ನಿರ್ನಾಮವಾಗಿ ಹೋಗುವುದೋ ಫಲವಾಗುವಂತಿದ್ದರೆ ಅಂತಹ ಅಧಿಕಾರ ನಿಷ್ಫಲ ಎನ್ನದಿದ್ದರೂ ದುರ್ಬಲ ಎಂದು ಹೇಳಬೇಕು. ಯಾವುದೊಂದು ವೃತ್ತಿಯನ್ನು ಪ್ರವೇಶಿಸಲು ತಗಲುವ ವೆಚ್ಚವೇ ಭರಿಸಲು ಅಸಾಧ್ಯವಾಗಿರುವಾಗ, ವೃತ್ತಿಯ ಆಯ್ಕೆಯಲ್ಲಿ ಸ್ವಾತಂತ್ರವಿದೆ ಎಂದರೆ ಏನು ಪ್ರಯೋಜನ? ನ್ಯಾಯ ಪಡೆಯಲು ತೆರಬೇಕಾದ ಶುಲ್ಕ ಬಡವನ ಕೈಗೆಟುಕಲಾರದಷ್ಟಿರುವಾಗ, ಎಲ್ಲರಿಗೂ ನ್ಯಾಯ ಪಡೆದುಕೊಳ್ಳುವ ಅಧಿಕಾರವಿದೆ ಎಂದರೆ ಏನು ಬಂತು? ಹುಟ್ಟಿದ ಶಿಶುಗಳಲ್ಲಿ ಬಹುಪಾಲು ಹನ್ನೆರಡು ತಿಂಗಳೊಳಗೇ ನಿಶ್ಚಿತ ಸಾಯುತ್ತವೆ ಎನ್ನುವಂತಹ ಸ್ಥಿತಿಯಲ್ಲಿ, ಸುಖ ಸಾಧನೆಯ ಸ್ವಾತಂತ್ರವಿದ್ದು ಪ್ರಯೋಜನವೇನು? ಎರಡನೆಯದಾಗಿ, ಸ್ವಾತಂತ್ರಕ್ಕೆ ಅಗತ್ಯವಾದ ಅಧಿಕಾರ ಎಲ್ಲರಿಗೂ ಎಟುಕುವಂತಿರಬೇಕು. ಅಲ್ಪಸಂಖ್ಯಾತವಾದ ಒಂದು ವರ್ಗಕ್ಕೆ ಮಾತ್ರ ಸಿಗುವಂತಿದ್ದರೆ ಸಾಲದು. ಒಬ್ಬ ಸಾಧು ಹೇಳಿರುವುದು ನೆನಪಾಗುತ್ತದೆ: ‘‘ಶೇ.ಐದು ಮಂದಿ ವಿವಾಹಿತರಾಗಿ ಉಳಿದವರು ಗಂಡ ಹೆಂಡತಿ ಎಂಬ ಸಂಬಂಧವನ್ನೇ ಕಾಣದೆ ಹೇಗೂ ಜೀವಿತ ನಡೆಸುತ್ತಿರುವ ಒಂದು ಪ್ರದೇಶದಲ್ಲಿ ವಿವಾಹವೆನ್ನುವುದು ಇಲ್ಲಿನ ಲೋಕ ಪದ್ಧತಿ ಎನ್ನಲು ಬಂದೀತೇ?’’ ಎಂದು ಆ ಸಾಧು ಪ್ರಶ್ನಿಸಿದ್ದಾನೆ. ಈ ಮಾತು ಸ್ವಾತಂತ್ರಕ್ಕೂ ಅನ್ವಯಿಸುತ್ತದೆ. ಒಂದು ಸಮಾಜದಲ್ಲಿ ಕೆಲವೇ ಗುಂಪುಗಳು ತಮಗೆ ಬೇಕೆನ್ನಿ ಸುವುದರಲ್ಲಿ ಬಹಳಷ್ಟನ್ನು ಪಡೆದುಕೊಳ್ಳಬಲ್ಲರು ಮತ್ತು ಇನ್ನುಳಿದವರು ತೀರಾ ಬೇಕಾದದ್ದನ್ನ್ನೂ ಗಳಿಸಿಕೊಳ್ಳಲಾರರು ಎನ್ನುವಂತಿದ್ದರೆ, ಅಂತಹ ಸಮಾಜದಲ್ಲಿ ತನ್ನದೇ ಆದ ವಿಶಿಷ್ಟ ಗುಣಗಳಿರಬಹುದು, ಸ್ವಾತಂತ್ರ ಎನ್ನುವುದು ಮಾತ್ರ ಖಂಡಿತ ಇಲ್ಲ ಎಂದು ಒಪ್ಪಿಕೊಳ್ಳಬೇಕು. ಯಾವ ಸಮಾಜದಲ್ಲಿ ಅದರ ಎಲ್ಲ ಘಟಕಗಳು ಕೇವಲ ತಾತ್ವಿಕವಾಗಿ ಮಾತ್ರವಲ್ಲದೆ, ವಾಸ್ತವಿಕವಾಗಿಯೂ ತಮ್ಮ ತಮ್ಮ ಶಕ್ತಿಯ ಸಂಪೂರ್ಣ ವಿನಿಯೋಗಕ್ಕೆ ಅವಕಾಶ ಪಡೆದುಕೊಂಡಿರುತ್ತವೋ, ತಮ್ಮ ಸಾಧ್ಯತೆಯ ಎತ್ತರಕ್ಕೆ ಬೆಳೆಯಲು ಮುಕ್ತ ಅವಕಾಶ ಪಡೆದಿರುತ್ತವೋ, ತಮ್ಮ ಕರ್ತವ್ಯ ಎನಿಸುವುದನ್ನು ನೆರವೇರಿಸಲು ಮತ್ತು ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಶಕ್ತಿ ಹೊಂದಿರುತ್ತವೋ ಅಂತಹ ಸ್ಥಿತಿಯನ್ನು ಸ್ವಾತಂತ್ರ ಎನ್ನಬಹುದು. ಸ್ವಾತಂತ್ರ ಎಂಬುದು ಅಷ್ಟೆಲ್ಲ ಕಠಿಣವಾಗಿರಬೇಕಿಲ್ಲ. ಮನುಷ್ಯ ಯೋಗ್ಯವಾದ ಬದುಕನ್ನು ಬಾಳುವ ಅವಕಾಶ ಒಂದು ಅಲ್ಪಸಂಖ್ಯಾತ ವರ್ಗಕ್ಕೆ ಮಾತ್ರವೇ ಸೀಮಿತವಾಗಿರುವ ಪರಿಸ್ಥಿತಿಯಲ್ಲಿ ಯಾವುದನ್ನು ನಾವು ಸ್ವಾತಂತ್ರವೆಂದು ಹೊಗಳುತ್ತೇವೋ ಅದು ‘ಅವಕಾಶ ಗೌರವ’ವಾಗಿರುತ್ತದೆ ‘ಸ್ವಾತಂತ್ರ’ವಾಗಿರುವುದಿಲ್ಲ.
               
ಅಸ್ಪೃಶ್ಯರ ವಿರುದ್ಧ ವ್ಯಕ್ತವಾಗುವ ಭೇದ, ಪಕ್ಷಪಾತಗಳು ಅತ್ಯಂತ ಆಳವೂ ಪ್ರಬಲವೂ ಆದ ಹಿಂದೂ ಮನೋಧರ್ಮದ ಪ್ರತಿಬಿಂಬ ಎನ್ನಬಹುದು. ಈ ಮನೋಧರ್ಮದ ನ್ಯಾಯ, ಆಡಳಿತ ಮುಂತಾದ ಕ್ಷೇತ್ರಗಳನ್ನು ಆಕ್ರಮಿಸಿಕೊಂಡು ಹಿಂದೂಗಳಿಗೆ ಅನುಕೂಲವನ್ನೂ ಅಸ್ಪೃಶ್ಯರಿಗೆ ಕಂಟಕವನ್ನೂ ಸೃಷ್ಟಿಸಿಕೊಡುತ್ತಿದೆ ಮತ್ತು ಹಿಂದೂಗಳಿಗಿರುವ ಒಂದು ದೊಡ್ಡ ಭಯವೇ ಈ ಪಕ್ಷಪಾತಕ್ಕೆ ಮೂಲವಾಗಿದೆ. ನಿಷ್ಪಕ್ಷಪಾತ ವಾತಾವರಣದಲ್ಲಿ ಅಸ್ಪೃಶ್ಯರು ತಮಗೆ ನಿಗದಿಪಡಿಸಿದ ಮಿತಿಯನ್ನು ಮೀರಿ ಬೆಳೆದು ಹಿಂದೂ ಸಮಾಜ ವ್ಯವಸ್ಥೆಗೆ ಆತಂಕ ತಂದು ಬಿಡಬಹುದು ಎನ್ನುವ ಭಯ. ಅಸ್ಪೃಶ್ಯರ ಎದುರು ಹಿಂದೂಗಳು ಯಾವತ್ತೂ ಶ್ರೇಷ್ಠರಾಗಿಯೇ ಉಳಿಯಬೇಕು, ಅವರನ್ನು ತಮ್ಮ ಪ್ರಭುತ್ವದ ಅಡಿಯಲ್ಲಿಯೇ ಇಟ್ಟುಕೊಳ್ಳಬೇಕು ಎನ್ನುವುದು ಹಿಂದೂ ಸಮಾಜ ವ್ಯವಸ್ಥೆಯ ಉದ್ದೇಶ. ಆದ್ದರಿಂದ ಯಾವತ್ತಿನ ತನಕ ಹಿಂದೂ ಸಮಾಜವ್ಯವಸ್ಥೆ ಬಾಳಿಕೊಂಡಿರುತ್ತೋ ಅಲ್ಲಿಯ ತನಕ ಅಸ್ಪೃಶ್ಯರ ಬಗ್ಗೆ ಭೇದ, ಪಕ್ಷಪಾತಗಳು ಬಾಳಿಕೊಂಡೇ ಇರುತ್ತವೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75