ಅಪರೂಪದ ಕಾಯಿಲೆಯಿಂದ ಮತ್ತೊಬ್ಬ ‘ಗ್ರೇಟ್ ಖಲಿ’ ಯಾದ ಬಾಲಕ

Update: 2019-07-08 13:34 GMT

ಈ ಹುಡುಗನನ್ನು ಎಲ್ಲರೂ 'ಜೆಂಟಲ್ ಜೈಂಟ್' ಎಂದೇ ಕರೆಯುತ್ತಾರೆ. 16ರ ಹರೆಯದ ಮೋಹನ ಸಿಂಗ್ ತನ್ನ ಹುಟ್ಟೂರಾದ ಉತ್ತರಾಖಂಡದ ಪಿತೋಡಗಢದಲ್ಲಿ ಸಾಕಷ್ಟು ಮಟ್ಟಿಗೆ ಸೆಲೆಬ್ರಿಟಿಯೇ ಆಗಿದ್ದಾನೆ. ಏಳು ಅಡಿ ನಾಲ್ಕು ಇಂಚು ಎತ್ತರ ಮತ್ತು 113 ಕೆ.ಜಿ.ತೂಕವನ್ನು ಹೊಂದಿರುವ ಮೋಹನ ಈ ಊರಿನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾನೆ. ಮೋಹನ ಇತ್ತೀಚಿಗೆ ಮೀರತ್‌ನ ಫ್ಯಾಕ್ಟರಿಯಿಂದ ತನಗಾಗಿ ವಿಶೇಷ ಶೂಗಳನ್ನು ಖರೀದಿಸಲೆಂದು ಅಲ್ಲಿಗೆ ತೆರಳಿದ್ದಾಗ ಡಬ್ಲ್ಯುಡಬ್ಲ್ಯುಇ ಸ್ಟಾರ್ ‘ದಿ ಗ್ರೇಟ್ ಖಲಿ ’ಯನ್ನು ನೆನಪಿಸುವ ಈತನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಜನರು ಮುಗಿಬಿದ್ದಿದ್ದರು.

ಈಗ ಮೋಹನ ಎತ್ತರವೇ ಆತನಿಗೆ ದೇವರ ವಿಶೇಷ ಕೊಡುಗೆ ಎಂದು ಜನರು ಹೇಳುತ್ತಿದ್ದಾರೆ. ಆದರೆ ವಸ್ತುಸ್ತಿತಿ ಅದಲ್ಲ. ಅಪರೂಪದ ಕಾಯಿಲೆ ಮೋಹನನ ಈ ಅಸಾಮಾನ್ಯ ಬೆಳವಣಿಗೆಗೆ ಕಾರಣವಾಗಿದ್ದು,ಈ ಬಗ್ಗೆ ವಿವರಗಳು ಇಲ್ಲಿವೆ.

ಮೋಹನ ತನ್ನ ಮಿದುಳಿನಲ್ಲಿ ಅಪರೂಪದ ಟ್ಯೂಮರ್‌ನಿಂದ ನರಳುತ್ತಿದ್ದ. ಮಿದುಳಿನಲ್ಲಿಯ ಪಿಟ್ಯುಟರಿ ಗ್ರಂಥಿ ಅಥವಾ ಬೆಳವಣಿಗೆಯ ಮೇಲೆ ಮುಖ್ಯ ಪ್ರಭಾವ ಬೀರುವ ನಿರ್ನಾಳ ಗ್ರಂಥಿಯು ಸಾಮಾನ್ಯವಾಗಿ ಬಟಾಣಿ ಗಾತ್ರದಲ್ಲಿರುತ್ತದೆ. ಆದರೆ ಮೋಹನನ ಪ್ರಕರಣದಲ್ಲಿ ಟ್ಯೂಮರ್‌ನಿಂದಾಗಿ ಅದು ದೊಡ್ಡ ಗಾತ್ರಕ್ಕೆ ಬೆಳೆದಿತ್ತು. ಇದರ ಪರಿಣಾಮವಾಗಿ ಪಿಟ್ಯುಟರಿ ಗ್ರಂಥಿಯು ಬೆಳವಣಿಗೆ ಹಾರ್ಮೋನ್‌ನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿತ್ತು. ಇದು ಜೈಗಾಂಟಿಸಮ್(ದೈತ್ಯಾಕಾರದ್ದು ಎಂಬ ಅರ್ಥದಲ್ಲಿ) ಎಂಬ ಸ್ಥಿತಿಗೆ ಕಾರಣವಾಗಿತ್ತು. ಮೋಹನ ಬೆಳೆಯುತ್ತ ಹೋದಂತೆ ಆತನ ಉಡುಪುಗಳು,ಶೂಗಳು,ಅಷ್ಟೇ ಏಕೆ....ಮಲಗುವ ಹಾಸಿಗೆ ಕೂಡ ದೊಡ್ಡದಾಗುತ್ತಲೇ ಇದ್ದವು. ಈ ಎಲ್ಲ ಸಮಸ್ಯೆಗಳನ್ನು ಮೋಹನ ಮತ್ತು ಆತನ ಕುಟುಂಬದವರು ಹೇಗೋ ನಿಭಾಯಿಸಿಕೊಳ್ಳುತ್ತಿದ್ದರು,ಆದರೆ ಐದು ತಿಂಗಳ ಹಿಂದೆ ನಿರಂತರವಾದ,ತೀಕ್ಷ್ಣ ತಲೆನೋವು ಆತನನ್ನು ಕಾಡತೊಡಗಿತ್ತು.

ಆಸ್ಪತ್ರೆಯಲ್ಲಿ ವೈದ್ಯರು ಎಂಆರ್‌ಐ ಸ್ಕಾನ್ ನಡೆಸಿದಾಗ ಆತನ ಮಿದುಳಿನಲ್ಲಿ ಟ್ಯೂಮರ್ ಪತ್ತೆಯಾಗಿತ್ತು ಮತ್ತು ಶಸ್ತ್ರಚಿಕಿತ್ಸೆಗಾಗಿ ಏಮ್ಸ್‌ಗೆ ಕರೆದೊಯ್ಯಲಾಗಿತ್ತು.

   ಟ್ಯೂಮರ್ ದೊಡ್ಡದಾಗಿದೆ ಮತ್ತು ಅತಿಯಾಗಿ ಬೆಳವಣಿಗೆ ಹಾರ್ಮೋನ್‌ನ್ನು ಉತ್ಪಾದಿಸುತ್ತಿದೆ ಎನ್ನುವುದು ವೈದ್ಯಕೀಯ ತಪಾಸಣೆಗಳಿಂದ ತಿಳಿದು ಬಂದಿತ್ತು. ಬಳಿಕ ವೈದ್ಯರ ತಂಡವು ಎರಡು ಗಂಟೆಗಳ ಕಾಲ ಶ್ರಮಿಸಿ ಎಂಡೊಸ್ಕೋಪಿ ಮೂಲಕ ಟ್ಯೂಮರ್‌ನ್ನು ಸಂಪೂರ್ಣವಾಗಿ ತೆಗೆದುಹಾಕಿತ್ತು. ಮಿದುಳು ಟ್ಯೂಮರ್‌ನ್ನು ಮೂಗಿನ ಮೂಲಕ ಹೊರತೆಗೆಯಲು ವಿಶೇಷವಾಗಿ ವಿನ್ಯಾಸಗೊಳಿಸಿದ್ದ ರಿಟ್ರಾಕ್ಟರ್ ಅನ್ನು ಬಳಸಲಾಗಿತ್ತು.

 ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಯಶಸ್ವಿಯಾಗಿದ್ದು,ಬೆಳವಣಿಗೆ ಹಾಮೋನ್ ಮಟ್ಟ ಈಗ ಸಹಜ ಸ್ಥಿತಿಯಲ್ಲಿದೆ. ಮೋಹನ ಅನುಭವಿಸುತ್ತಿದ್ದ ತಲೆನೋವು ನಿವಾರಣೆಯಾಗಲಿದೆ,ಆತನ ತೂಕ ಕಡಿಮೆಯಾಗಲಿದೆ,ಆದರೆ ಎತ್ತರ ಮಾತ್ರ ಅಷ್ಟೇ ಇರಲಿದೆ ಎಂದು ವೈದ್ಯರು ಹೇಳಿದ್ದಾರೆ.

 ಬೆಳವಣಿಗೆ ಹಾರ್ಮೋನ್ ಸ್ರವಿಸುವ ಟ್ಯೂಮರ್ ಆನುವಂಶಿಕವಲ್ಲ ಮತ್ತು ಅಪರೂಪದ್ದಾಗಿದೆ. ಹದಿಹರೆಯದವರಲ್ಲಿ ಈ ಟ್ಯೂಮರ್ ಬೆಳವಣಿಗೆಯು ಎತ್ತರವನ್ನು ಹೆಚ್ಚಿಸುತ್ತದೆ. ವೈದ್ಯರ ಅಭಿಪ್ರಾಯದಂತೆ ಇಂತಹ ರೋಗಿಗಳು ತುಂಬ ನಿಶ್ಶಕ್ತರಾಗಿರುತ್ತಾರೆ ಮತ್ತು ಹೃದ್ರೋಗ,ಅಂತಃಸ್ರಾವಕ ಮತ್ತು ಮೂಳೆ ತೊಂದರೆಗಳಿಂದ ಬಳಲುತ್ತಿರುತ್ತಾರೆ. ಆದರೆ ವಯಸ್ಕರಲ್ಲಿ ಈ ಟ್ಯೂಮರ್ ಎತ್ತರವನ್ನು ಹೆಚ್ಚಿಸುವ ಬದಲು ಮೂಳೆಗಳ ಅಸಹಜ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಅಕ್ರೊಮೆಗಲಿ ಎಂದು ಕರೆಯಲಾಗುತ್ತದೆ. ಕೈಗಳು,ಪಾದಗಳು ಮತ್ತು ಮುಖದಲ್ಲಿಯ ಮೂಳೆಗಳ ಗಾತ್ರದಲ್ಲಿ ಬೆಳವಣಿಗೆ,ದೊಡ್ಡದಾದ ಮೂಗು ಇತ್ಯಾದಿಗಳು ಅಕ್ರೊಮೆಗಲಿಯನ್ನು ಸೂಚಿಸಬಹುದು.

ಮೋಹನ ಇನ್ನು ಮುಂದೆ ತನ್ನ ಏಳು ಅಡಿ ನಾಲ್ಕು ಇಂಚು ಎತ್ತರದೊಂದಿಗೆ ಬದುಕಬೇಕಿದೆ. ಆದರೆ ಈ ಸ್ಥಿತಿ ಈತನೊಬ್ಬನದೇ ಅಲ್ಲ. ಏಳು ಅಡಿಗೂ ಹೆಚ್ಚು ಎತ್ತರವಿರುವ ದಲೀಪ್ ಸಿಂಗ್ ರಾಣಾಗೂ ಪಿಟ್ಯುಟರಿ ಗ್ರಂಥಿಯ ಟ್ಯೂಮರ್ ಕಾಡಿತ್ತು ಮತ್ತು ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಗಿತ್ತು ಎನ್ನಲಾಗಿದೆ. ಈಗ ರಾಣಾ ಡಬ್ಲ್ಯುಡಬ್ಲ್ಯುಇ ಸ್ಟಾರ್ ಆಗಿದ್ದು,‘ದಿ ಗ್ರೇಟ್ ಖಲಿ ’ಎಂಬ ಹೆಸರಿನಲ್ಲಿ ವಿಶ್ವವಿಖ್ಯಾತನಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News