ನಿಮಗೆ ಗೊತ್ತಿರಲಿ,ಕಣ್ಣುಗಳನ್ನು ಪದೇ ಪದೇ ಉಜ್ಜುವುದು ಗಂಭೀರ ಹಾನಿಗೆ ಕಾರಣವಾಗುತ್ತದೆ
ಕಣ್ಣುಗಳನ್ನು ಉಜ್ಜಿಕೊಳ್ಳುವುದು ಹಿತಕರ ಅನುಭವವನ್ನು ನೀಡಬಹುದು,
ಆದರೆ ಅತಿಯಾಗಿ ಉಜ್ಜಿಕೊಳ್ಳುವುದು ಒಳ್ಳೆಯದಲ್ಲ. ಅದರಿಂದಾಗಿ ದೀರ್ಘಾವಧಿಯಲ್ಲಿ ಕಣ್ಣಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ.
ಧೂಳು, ಅಲರ್ಜಿಗಳು ಮತ್ತು ನಿರಂತರವಾಗಿ ಕಂಪ್ಯೂಟರ್ ಪರದೆಯನ್ನು ನೋಡುತ್ತಿರುವುದು ಕಣ್ಣುಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಅವುಗಳಿಗೆ ಆಯಾಸವನ್ನುಂಟು ಮಾಡುತ್ತವೆ. ಇದಕ್ಕೆ ನಮಗೆ ತೋಚುವ ತಕ್ಷಣದ ಪರಿಹಾರ ಮಾರ್ಗವೆಂದರೆ ಕಣ್ಣುಗಳನ್ನು ಸತತವಾಗಿ ಉಜ್ಜಿಕೊಳ್ಳುವುದು. ಇದರಿಂದ ಆ ಕ್ಷಣದಲ್ಲಿ ಹಾಯೆನಿಸಬಹುದು, ಆದರೆ ಅದು ಕಣ್ಣುಗಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಕಣ್ಣುಗಳನ್ನು ನಿರಂತರವಾಗಿ ಉಜ್ಜುವುದು ವೇಗಸ್ ನರವನ್ನು ಪ್ರಚೋದಿಸುವುದರಿಂದ ಇದು ಚಿಕಿತ್ಸಕ ಕ್ರಮ ಎಂದೂ ಹೇಳಲಾಗುತ್ತದೆ.
ವೇಗಸ್ ನರವು ವ್ಯಕ್ತಿಯ ಹೃದಯ ಬಡಿತವನ್ನು ನಿಧಾನಗೊಳಿಸಲು ನೆರವಾಗುತ್ತದೆ ಮತ್ತು ಒತ್ತಡವನ್ನು ಶಮನಗೊಳಿಸುತ್ತದೆ. ಆದರೆ ಯಾವುದೇ ಆದರೂ ಅತಿಯಾದರೆ ಕೆಟ್ಟದ್ದೇ ಮತ್ತು ಈ ಮಾತು ನಿರಂತರವಾಗಿ ಕಣ್ಣುಗಳನ್ನು ಉಜ್ಜಿಕೊಳ್ಳುವುದಕ್ಕೂ ಅನ್ವಯಿಸುತ್ತದೆ. ಈ ಅಭ್ಯಾಸದಿಂದ ಉಂಟಾಗುವ ಕೆಲವು ಗಂಭೀರ ಹಾನಿಗಳ ಕುರಿತು ಮಾಹಿತಿಗಳಿಲ್ಲಿವೆ......
ನಿರಂತರವಾಗಿ ಕಣ್ಣುಗಳನ್ನು ಉಜ್ಜಿಕೊಳ್ಳುವುದರಿಂದ ಅವುಗಳಲ್ಲಿರುವ ಪುಟ್ಟ ರಕ್ತನಾಳಗಳು ಒಡೆಯಬಹುದು ಹಾಗೂ ಇದು ಕಣ್ಣುಗಳು ರಕ್ತವರ್ಣಕ್ಕೆ ತಿರುಗಲು ಮತ್ತು ಕುರೂಪಿ ಕಪ್ಪು ವರ್ತುಲಗಳು ಉಂಟಾಗಲೂ ಕಾರಣವಾಗುತ್ತದೆ.
ಕಣ್ಣುಗಳನ್ನು ಉಜ್ಜಿಕೊಳ್ಳುವ ಮೂಲಕ ನಾವು ಅವುಗಳನ್ನು ನಮ್ಮ ಕೈಗಳಲ್ಲಿರುವ ಬ್ಯಾಕ್ಟೀರಿಯಾಗಳ ನೇರ ಸಂಪರ್ಕಕ್ಕೆ ಒಡ್ಡುತ್ತೇವೆ. ಬ್ಯಾಕ್ಟೀರಿಯಾಗಳಿಂದ ಕಣ್ಣುಗಳಿಗೆ ಉಂಟಾಗುವ ಸೋಂಕುಗಳು ಗಂಭೀರವಾಗಿರುತ್ತವೆ ಮತ್ತು ಕೆಂಗಣ್ಣು ಬೇನೆಯಂತಹ ಸಮಸ್ಯೆಗಳಿಗೆ ಕಾರಣವಾಗಬಲ್ಲವು. ಅಲ್ಲದೆ ಕಣ್ಣುಗಳನ್ನು ಉಜ್ಜಿಕೊಳ್ಳುವುದರಿಂದ ಈಗಾಗಲೇ ಇರುವ ಕಣ್ಣುಗಳ ಸಮಸ್ಯೆಗಳು ಇನ್ನಷ್ಟು ತೀವ್ರಗೊಳ್ಳುತ್ತವೆ. ಕಣ್ಣುಗಳಲ್ಲಿ ಕಸ,ಧೂಳಿನಂತಹ ಬಾಹ್ಯವಸ್ತುಗಳು ಸಿಕ್ಕಿಹಾಕಿಕೊಂಡಾಗ ಉಜ್ಜುವುದು ನಮ್ಮ ತಕ್ಷಣದ ಪ್ರತಿಕ್ರಿಯೆ ಯಾಗಿರುತ್ತದೆ. ಹೀಗೆ ಉಜ್ಜಿಕೊಳ್ಳುವುದರಿಂದ ಕಣ್ಣಿನಲ್ಲಿರುವ ಬಾಹ್ಯವಸ್ತು ನಿವಾರಣೆಯಾಗಬಹುದು ಎಂಬ ತಪ್ಪು ಗ್ರಹಿಕೆಯಿದೆ. ಆದರ ಹೀಗೆ ಮಾಡುವುದರಿಂದ ಬಾಹ್ಯವಸ್ತುವು ಕಾರ್ನಿಯಾಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಕಣ್ಣುಗಳನ್ನು ಸತತವಾಗಿ ತಿಕ್ಕುವುದು ಅವು ಒಣಗಲೂ ಕಾರಣವಾಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿರುವ ಕಣ್ಣುಗಳಲ್ಲಿ ಅವುಗಳನ್ನು ತೇವವಾಗಿಸುವ ಜಲೀಯ ದ್ರಾವಣದ ಉತ್ಪಾದನೆಯ ದರವು ಅದರ ಹರಿವಿನ ದರಕ್ಕೆ ಅನುಗುಣವಾಗಿರುತ್ತದೆ,ತನ್ಮೂಲಕ ಕಣ್ಣುಗಳ ಒಳಗೆ ಸೂಕ್ತ ಒತ್ತಡವನ್ನು ಕಾಯ್ದುಕೊಳ್ಳುತ್ತದೆ. ಗಾಯ ಅಥವಾ ಸತತವಾಗಿ ಕಣ್ಣುಗಳ ಉಜ್ಜುವಿಕೆಯಂತಹ ಕಾರಣಗಳಿಂದಾಗಿ ಈ ಜಲೀಯ ದ್ರಾವಣವನ್ನು ಸಾಗಿಸುವ ನಾಳಗಳಿಗೆ ತಡೆಯುಂಟಾಗಬಹುದು ಮತ್ತು ಕಣ್ಣುಗಳ ಒಳಗಿನ ಒತ್ತಡವು ಹೆಚ್ಚುತ್ತದೆ. ಹೀಗೆ ಹೆಚ್ಚಿದ ಒತ್ತಡವು ಆಪ್ಟಿಕ್ ನರಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಗ್ಲುಕೋಮಾ ರೋಗಿಗಳಂತೂ ಕಣ್ಣುಗಳನ್ನು ಉಜ್ಜಿಕೊಳ್ಳುವ ಗೋಜಿಗೆ ಹೋಗಲೇಬಾರದು. ಉಜ್ಜುವಿಕೆಯಿಂದ ಕಣ್ಣಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಗಂಭೀರ ಪ್ರಕರಣಗಳಲ್ಲಿ ಇದು ಅಂಧತ್ವಕ್ಕೂ ಕಾರಣವಾಗಬಹುದು.