ಅಧಿಕ ರಕ್ತದೊತ್ತಡ ತಡೆ ಮತ್ತು ನಿಯಂತ್ರಣಕ್ಕೆ ಐದು ಆರೋಗ್ಯಕರ ಪಾನೀಯಗಳು

Update: 2019-07-25 17:33 GMT

 ಭಾರತದಲ್ಲಿ ಪ್ರತಿ ಮೂವರ ಪೈಕಿ ಓರ್ವ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುತ್ತಾನೆ ಎನ್ನುವುದು ನಿಮಗೆ ಗೊತ್ತೇ? ಉಪ್ಪು ಮತ್ತು ಅಧಿಕ ಸೋಡಿಯಂ ಇರುವ ಆಹಾರ ಸೇವನೆಯನ್ನು ಕಡಿಮೆ ಮಾಡುವಂತೆ ಅಧಿಕ ರಕ್ತದೊತ್ತಡ ರೋಗಿಗಳಿಗೆ ವೈದ್ಯರು ಆಗಾಗ್ಗೆ ಸಲಹೆ ನೀಡುತ್ತಿರುತ್ತಾರೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಔಷಧಿಗಳು ಹೆಚ್ಚು ನೆರವಾಗುತ್ತವೆಯಾದರೂ ಆರೋಗ್ಯಕರ ಆಹಾರ ಕ್ರಮವೂ ಅಚ್ಚರಿದಾಯಕ ಲಾಭಗಳನ್ನು ನೀಡುತ್ತದೆ. ಇದರ ಜೊತೆಗೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಇತರ ಹಲವಾರು ಕಾಯಿಲೆಗಳ ಅಪಾಯಗಳನ್ನು ತಗ್ಗಿಸಬಲ್ಲ ಹಲವಾರು ಆರೋಗ್ಯಕರ ಪಾನೀಯಗಳಿವೆ. ಇಂತಹ ಐದು ಪಾನೀಯಗಳ ಕುರಿತು ಮಾಹಿತಿಯಿಲ್ಲಿದೆ.....

►ಕಡಿಮೆ ಕೊಬ್ಬು ಇರುವ ಹಾಲು

 ಪೊಟ್ಯಾಷಿಯಂ,ಕ್ಯಾಲ್ಸಿಯಂ,ವಿಟಾಮಿನ್ ಡಿ,ರಂಜಕ ಮತ್ತು ಇತರ ಹಲವಾರು ಪೋಷಕಾಂಶಗಳನ್ನು ಯಥೇಚ್ಛವಾಗಿ ಒಳಗೊಂಡಿರುವ ಹಾಲು ಆರೋಗ್ಯಕರ ಪಾನೀಯಗಳಲ್ಲೊಂದಾಗಿದೆ. ಪೂರ್ಣ ಪ್ರಮಾಣದಲ್ಲಿ ಕೊಬ್ಬು ಒಳಗೊಂಡಿರುವ ಹಾಲಿನ ಬದಲು ಕಡಿಮೆ ಕೊಬ್ಬು ಇರುವ ಹಾಲನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಸಂಪೂರ್ಣ ಕೊಬ್ಬಿನಿಂದ ಕೂಡಿರುವ ಡೇರಿ ಉತ್ಪನ್ನಗಳು ರಕ್ತನಾಳಗಳಲ್ಲಿ ತಡೆಯನ್ನುಂಟು ಮಾಡುವ ಪಾಮಿಟಿಕ್ ಆಮ್ಲವನ್ನು ಒಳಗೊಂಡಿರುತ್ತವೆ.

►ಕಾಮಕಸ್ತೂರಿ ನೀರು

 ಕಾಮಕಸ್ತೂರಿ ಬೀಜಗಳಲ್ಲಿ ಸಮೃದ್ಧವಾಗಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ರಕ್ತನಾಳಗಳನ್ನು ಹಿಗ್ಗಿಸಲು ನೆರವಾಗುತ್ತವೆ ಮತ್ತು ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತವೆ. ಕಾಮಕಸ್ತೂರಿ ಬೀಜಗಳನ್ನು ಅರ್ಧಗಂಟೆ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಬೀಜಗಳನ್ನು ಸೋಸಿ ತೆಗೆದು ನೀರನ್ನು ಸೇವಿಸಿ. ಒಂದು ತಿಂಗಳು ನಿಯಮಿತವಾಗಿ ಇದನ್ನನುಸರಿಸಿದರೆ ಪರಿಣಾಮಕಾರಿ ಫಲಿತಾಂಶ ದೊರೆಯುತ್ತದೆ ಮತ್ತು ರಕ್ತದೊತ್ತಡ ಮಟ್ಟದಲ್ಲಿ ಬದಲಾವಣೆಯಾಗುತ್ತದೆ.

►ದಾಳಿಂಬೆ ರಸ ದಾಳಿಂಬೆ ಹಣ್ಣು

ದಾಳಿಂಬೆ ರಸ ದಾಳಿಂಬೆ ಹಣ್ಣು ಪೊಟ್ಯಾಷಿಯಮ್‌ನ ಆಗರವಾಗಿದೆ ಮತ್ತು ಪೊಟ್ಯಾಷಿಯಮ್‌ನಿಂದ ಸಮೃದ್ಧ ಆಹಾರಗಳು ಅಧಿಕ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತವೆ. ಗ್ರೀನ್ ಟೀ ಮತ್ತು ರೆಡ್ ವೈನ್‌ನಲ್ಲಿರುವುದರ ಮೂರು ಪಟ್ಟು ಉತ್ಕರ್ಷಣ ನಿರೋಧಕಗಳು ದಾಳಿಂಬೆ ಹಣ್ಣಿನ ರಸದಲ್ಲಿರುತ್ತವೆ. ದಾಳಿಂಬೆ ರಸವನ್ನು ಪ್ರತಿ ದಿನ ಸೇವಿಸಿದರೆ ರಕ್ತದೊತ್ತಡವನ್ನು ಇಳಿಸಲು ತುಂಬ ನೆರವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ.

►ಆ್ಯಪಲ್ ಸಿಡರ್ ವಿನೆಗರ್ ಪೇಯ

 ಆ್ಯಪಲ್ ಸಿಡರ್ ವಿನೆಗರ್ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಅದು ಪೊಟ್ಯಾಷಿಯಂ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಆ್ಯಪಲ್ ಸಿಡರ್ ವಿನೆಗರ್ ಪೇಯವು ಶರೀರದಲ್ಲಿಯ ಅನಗತ್ಯ ಸೋಡಿಯಂ ಮತ್ತು ವಿಷವಸ್ತುಗಳನ್ನು ನಿವಾರಿಸುತ್ತದೆ ಮತ್ತು ಅದರಲ್ಲಿರುವ ಕಿಣ್ವಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಬಿಸಿ ನೀರಿನ ಗ್ಲಾಸ್‌ನಲ್ಲಿ ಆ್ಯಪಲ್ ಸಿಡರ್ ವಿನೆಗರ್ ಮತ್ತು ಕೆಲವು ಹನಿ ಜೇನನ್ನು ಬೆರೆಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸುವ ಮೂಲಕ ಹಲವಾರು ಆರೋಗ್ಯಲಾಭಗಳನ್ನು ಪಡೆಯಬಹುದು.

►ಮೆಂತ್ಯದ ನೀರು

ಮೆಂತ್ಯದ ನೀರು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುವ ನಾರನ್ನೊಳಗೊಂಡಿರುತ್ತದೆ. ಮೆಂತ್ಯದ ಕಾಳುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಮತ್ತು ಇತರ ಹಲವಾರು ಕಾಯಿಲೆಗಳಿಂದಲೂ ದೂರವಿರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News