ಈ ರಾಸಾಯನಿಕಗಳಿದ್ದರೆ ಸೌಂದರ್ಯ ಉತ್ಪನ್ನಗಳನ್ನು ಖರೀದಿಸಲೇಬೇಡಿ! : ಇವು ಅಪಾಯಕಾರಿ

Update: 2019-07-30 19:01 GMT

ಸುಂದರವಾಗಿ ಕಾಣಲು ಇಷ್ಟಪಡದವರು ಯಾರಾದರೂ ಇದ್ದಾರಾ? ಆದರೆ ರಾಸಾಯನಿಕಗಳಿಂದ ತುಂಬಿರುವ ಉತ್ಪನ್ನಗಳಲ್ಲಿ ನಿಮ್ಮ ಸೌಂದರ್ಯವನ್ನು ಹುಡುಕುವುದು ನಿಮಗೆ ತುಂಬ ದುಬಾರಿಯಾಗಬಲ್ಲದು.

ಮಾರುಕಟ್ಟೆಯಲ್ಲಿ ಸೌಂದರ್ಯ ಉತ್ಪನ್ನಗಳು ತುಂಬಿ ತುಳುಕುತ್ತಿವೆ. ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳ ಮೂಲಕ ಹೊಳೆಯುವ ಮತ್ತು ಯೌವ್ವನಭರಿತ ಚರ್ಮದ ಭರವಸೆ ನೀಡುತ್ತಿವೆ. ಇಷ್ಟೇ ಅಲ್ಲ, ತಮ್ಮ ಉತ್ಪನ್ನಗಳಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದೂ ಅವು ನಿಮ್ಮನ್ನು ನಂಬಿಸುತ್ತಿವೆ.

ಈ ಪೈಕಿ ಹೆಚ್ಚಿನ ಉತ್ಪನ್ನಗಳ ತಯಾರಿಕೆಯಲ್ಲಿ ತೀಕ್ಷ್ಣ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು,ಇವು ನಿಮ್ಮ ಚರ್ಮ ಮತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಸೌಂದರ್ಯ ಉತ್ಪನ್ನಗಳಲ್ಲಿಯ ಯಾವ ರಾಸಾಯನಿಕ ಹಾನಿಕಾರಕ ಎಂದು ನಿಮಗೆ ಗೊತ್ತಾಗುವುದು ಹೇಗೆ?

ಯಾವುದೇ ಸೌಂದರ್ಯ ಉತ್ಪನ್ನವನ್ನು ಖರೀದಿಸುವ ಮುನ್ನ ಅದರ ಮೇಲೆ ಮುದ್ರಿಸಲಾಗಿರುವ ಘಟಕಗಳ ಪಟ್ಟಿಯನ್ನು ಪರಿಶೀಲಿಸಿ. ಇಲ್ಲಿ ಸೂಚಿಸಲಾಗಿರುವ ರಾಸಾಯನಿಕಗಳು ಅದರಲ್ಲಿದ್ದರೆ ಅದನ್ನು ಖರೀದಿಸಲೇಬೇಡಿ.

►ಟ್ರೈಕ್ಲೋಸಾನ್: ಇದು ಸೂಕ್ಷ್ಮಜೀವಿ ಪ್ರತಿರೋಧಕ ರಾಸಾಯನಿಕವಾಗಿದ್ದು, ಥೈರಾಯ್ಡೋ,ಸಂತಾನೋತ್ಪತ್ತಿ ಹಾರ್ಮೋನ್‌ಗಳನ್ನು ಗುರಿಯಾಗಿಸಿಕೊಂಡು ಅಂತಃಸ್ರಾವಕಗಳಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಚರ್ಮದಲ್ಲಿ ತುರಿಕೆಯನ್ನುಂಟು ಮಾಡುತ್ತದೆ. ಟ್ರೈಕ್ಲೋಸಾನ್ ಬ್ಯಾಕ್ಟೀರಿಯಾಗಳನ್ನು ಆ್ಯಂಟಿಬಯಾಟಿಕ್ ಪ್ರತಿರೋಧಿಯನ್ನಾಗಿಸುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ವಿವಿಧ ಟೂಥ್‌ಪೇಸ್ಟ್‌ಗಳು,ಬ್ಯಾಕ್ಟೀರಿಯಾ ಪ್ರತಿರೋಧಕ ಸಾಬೂನುಗಳು ಮತ್ತು ದುರ್ಗಂಧ ನಿವಾರಕಗಳಲ್ಲಿ ಟ್ರೈಕ್ಲೋಸಾನ್ ಅನ್ನು ಬಳಸಲಾಗುತ್ತದೆ.

►ಪ್ಯಾರಾಬೆನ್: ಇದು ಸೌಂದರ್ಯ ಉತ್ಪನ್ನಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವ ರಾಸಾಯನಿಕವಾಗಿದೆ. ಸಂರಕ್ಷಕವಾಗಿ ಬಳಕೆಯಾಗುವ ಇದು ಸ್ತನ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವ ಈಸ್ಟೋಜೆನ್ ಅನುಕರಣ ಗುಣಗಳನ್ನು ಹೊಂದಿದೆ. ಚರ್ಮವು ಈ ರಾಸಾಯನಿಕವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಸ್ತನಗಳಲ್ಲಿ ಬೆಳೆಯುವ ಗೆಡ್ಡೆಗಳ ಬಯಾಪ್ಸಿ ಸ್ಯಾಂಪಲ್‌ಗಳಲ್ಲಿ ಕಂಡು ಬರುತ್ತದೆ. ಮೇಕಪ್ ಸಾಮಗ್ರಿಗಳು,ಬಾಡಿ ವಾಷ್‌ಗಳು,ದುರ್ಗಂಧ ನಿವಾರಕಗಳು, ಶಾಂಪೂಗಳು ಮತ್ತು ಮುಖವನ್ನು ಸ್ವಚ್ಛಗೊಳಿಸುವ ದ್ರಾವಣಗಳು ಪ್ಯಾರಾಬೆನ್ ಅನ್ನು ಒಳಗೊಂಡಿರುತ್ತವೆ. ನೀವು ಖರೀದಿಸಲು ಬಯಸಿರುವ ಸೌಂದರ್ಯ ಸಾಧನದಲ್ಲಿ ಪ್ಯಾರಾಬೆನ್ ಇದ್ದರೆ ಅದಕ್ಕೆ ದೂರದಿಂದಲೇ ಸಲಾಂ ಹೊಡೆಯಿರಿ.

►ಸೋಡಿಯಂ ಲಾರಿ ಸಲ್ಫೇಟ್(ಎಸ್‌ಎಲ್‌ಎಸ್)/ಸೋಡಿಯಂ ಲಾರೆತ್ ಸಲ್ಫೇಟ್(ಎಸ್‌ಎಲ್‌ಇಎಸ್): ಹೆಚ್ಚಾಗಿ ಶಾಂಪೂ,ಬಾಡಿ ವಾಷ್/ಕ್ಲೀನ್ಸರ್,ಕಾಡಿಗೆ ಮತ್ತು ಮೊಡವೆ ಚಿಕಿತ್ಸಕ ಉತ್ಪನ್ನಗಳಲ್ಲಿ ಕಂಡುಬರುವ ಈ ರಾಸಾಯನಿಕವು ಶ್ವಾಸಕೋಶಗಳು,ಚರ್ಮ ಮತ್ತು ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಎಸ್‌ಎಲ್‌ಎಸ್ ಇತರ ರಾಸಾಯನಿಕಗಳೊಂದಿಗೆ ಪ್ರತಿವರ್ತಿಸಿ ಕ್ಯಾನ್ಸರ್‌ ಕಾರಕಗಳಾದ ನೈಟ್ರೋಸಮೈನ್‌ಗಳನ್ನು ಉತ್ಪಾದಿಸುತ್ತದೆ, ತನ್ಮೂಲಕ ಮೂತ್ರಪಿಂಡ ಹಾಗೂ ಉಸಿರಾಟ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ.

►ಫಾರ್ಮಾಲ್ಡಿಹೈಡ್: ಸೌಂದರ್ಯ ಸಾಧನಗಳಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ನೆರವಾಗುವ ಈ ರಾಸಾಯನಿಕವು ಚರ್ಮವನ್ನು ಕೆರಳಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಅದು ಕ್ಯಾನ್ಸರ್‌ಗೂ ಕಾರಣವಾಗುತ್ತದೆ. ನೇಲ್ ಪಾಲಿಷ್, ಬಾಡಿ ವಾಷ್, ಕಂಡಿಷನರ್‌ಗಳು, ಶಾಂಪೂ, ಕ್ಲೀನ್ಸರ್ ಇತ್ಯಾದಿಗಳಲ್ಲಿ ಈ ರಾಸಾಯನಿಕವು ಸಾಮಾನ್ಯವಾಗಿದೆ.

►ಕೃತಕ ಬಣ್ಣಗಳು: ಸೌಂದರ್ಯ ಉತ್ಪನ್ನಗಳಲ್ಲಿರುವ ಕೃತಕ ಬಣ್ಣಗಳನ್ನು ಪೆಟ್ರೋಲಿಯಂ ಅಥವಾ ಕೋಲ್ ಟಾರ್‌ನಿಂದ ಉತ್ಪಾದಿಸಲಾಗುತ್ತದೆ. ಇವು ಕ್ಯಾನ್ಸರ್‌ಕಾರಕಗಳಾಗಿದ್ದು,ಚರ್ಮದ ತೊಂದರೆಗೂ ಕಾರಣವಾಗುತ್ತವೆ.

►ತೀಕ್ಷ್ಣ ಸುವಾಸನೆ: ಸುಗಂಧ ದ್ರವ್ಯಗಳು,ಕಂಡಿಷನರ್,ಬಾಡಿ ವಾಷ್,ಶಾಂಪೂ,ಮಾಯಿಶ್ಚರೈಸರ್ ಇತ್ಯಾದಿಗಳ ತೀಕ್ಷ್ಣ ಪರಿಮಳವು ಅಪಾರ ಹಾನಿಯನ್ನುಂಟು ಮಾಡುತ್ತದೆ. ಅಲರ್ಜಿಗಳು,ಚರ್ಮರೋಗಗಳು,ಉಸಿರಾಟದ ತೊಂದರೆ ಇತ್ಯಾದಿಗಳಿಗೆ ಕಾರಣವಾಗುವ ಜೊತೆಗೆ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೂ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

►ಪ್ರೊಪಿಲೀನ್ ಗ್ಲೈಕಾಲ್: ಚರ್ಮದಲ್ಲಿ ಉರಿ ಮತ್ತು ತುರಿಕೆ ದದ್ದುಗಳಿಗೆ ಕಾರಣವಾಗುವ ಈ ರಾಸಾಯನಿಕವು ಮಾಯಿಶ್ಚರೈಸರ್,ಸನ್‌ಸ್ಕ್ರೀನ್,ಮೇಕಪ್ ಸಾಧನಗಳು,ಕಂಡಿಷನರ್,ಶಾಂಪೂ ಮತ್ತು ಹೇರ್ ಸ್ಪ್ರೇಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

►ಸನ್‌ಸ್ಕ್ರೀನ್ ರಾಸಾಯನಿಕ: ಸೂರ್ಯನ ಬಿಸಿಲಿನಿಂದ ಚರ್ಮಕ್ಕೆ ರಕ್ಷಣೆ ನೀಡುತ್ತದೆ ಎಂದು ಪರಿಗಣಿಸಲಾಗಿರುವ ಈ ರಾಸಾಯನಿಕವು ಜೀವಕೋಶಗಳಿಗೆ ಅಪಾರ ಹಾನಿಯನ್ನುಂಟು ಮಾಡುತ್ತದೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಬೆಂರೊಫಿನೋನ್,ಪಿಎಬಿಎ,ಅವೊಬೆಂರೆನ್,ಹೊಮೊಸಾಲೇಟ್ ಮತ್ತು ಮೆಥೊಕ್ಸಿಸಿನಾಮೇಟ್ ಇವು ಸೌಂದರ್ಯ ಉತ್ಪನ್ನಗಳ ಘಟಕಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ರಾಸಾಯನಿಕದ ಹೆಸರುಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News