ಬರಿಗಾಲಿನಲ್ಲಿ ನಡೆಯುವುದರಿಂದ ನಮ್ಮ ದೇಹದಲ್ಲಿ ಏನೇನಾಗುತ್ತದೆ ತಿಳಿದಿದೆಯೇ?
ಬರಿಗಾಲಿನಲ್ಲಿ ನಡೆಯುವುದು ಶರೀರದ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳಲು ನೀವು ಮಾಡಬಹುದಾದ ಅತ್ಯುತ್ತಮ ವ್ಯಾಯಾಮವಾಗಿದೆ. ಅದು ಪಾದಗಳ ಆರೋಗ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ,ಒತ್ತಡ ಮತ್ತು ಆತಂಕಗಳಿಂದಲೂ ಮುಕ್ತಿ ನೀಡುತ್ತದೆ.
ನೀವೆಂದಾದರೂ ಹಸಿರು ಹುಲ್ಲಿನಲ್ಲಿ ಅಥವಾ ಸಮುದ್ರತೀರದಲ್ಲಿಯ ಮರಳಿನಲ್ಲಿ ಬರಿಗಾಲಿನಿಂದ ನಡೆದಿದ್ದೀರಾ?, ಹಾಗೆ ನಡೆದಿದ್ದರೆ ಅದು ಖಂಡಿತ ಒಂದು ಅದ್ಭುತ ಮತ್ತು ಶಮನಕಾರಿ ಅನುಭವ ನೀಡಿರುತ್ತದೆ. ನಮಗೀಗ ಎಲ್ಲಿಗೆ ಹೋಗುವುದಿದ್ದರೂ ಪಾದರಕ್ಷೆಗಳು ಬೇಕೇ ಬೇಕು,ಆದರೆ ನಮ್ಮ ಪೂರ್ವಜರು ಯಾವುದೇ ವಾತಾವರಣವಿದ್ದರೂ ಬರಿಗಾಲಿನಲ್ಲಿಯೇ ನಡೆಯುತ್ತಿದ್ದರು. ಪಾದರಕ್ಷೆಗಳ ಖರೀದಿಗೆ ಅವರ ಬಳಿ ದುಡ್ಡಿರಲಿಲ್ಲ ಎಂದಲ್ಲ,ಅದು ಅವರನ್ನು ನಿಸರ್ಗಕ್ಕೆ ನಿಕಟವಾಗಿರಿಸುತ್ತಿತ್ತು ಎನ್ನುವುದು ಕಾರಣವಾಗಿತ್ತು. ಬರಿಗಾಲಿನಲ್ಲಿ ನಡಿಗೆಯು ಅತ್ಯುತ್ತಮ ಚಿಕಿತ್ಸಾ ಗುಣವನ್ನು ಹೊಂದಿದೆ ಮತ್ತು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ.
ಹುಲ್ಲು,ಮರಳು ಮತ್ತು ಮಣ್ಣಿನಂತಹ ಮೃದುವಾದ ಮೇಲ್ಮೈಗಳ ಮೇಲೆ ನಡಿಗೆಯನ್ನು ‘ಅರ್ತಿಂಗ್’ ಎಂದೂ ಕರೆಯುತ್ತಾರೆ,ಏಕೆಂದರೆ ಹೀಗೆ ನಡೆಯುವುದು ನಿಮ್ಮನ್ನು ನೇರವಾಗಿ ನಿಸರ್ಗದೊಂದಿಗೆ ಸಂಪರ್ಕದಲ್ಲಿರಿಸುತ್ತದೆ. ಅದು ಅರಿವಿನ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ,ಇಡೀ ಶರೀರದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ,ಒತ್ತಡವನ್ನು ನಿವಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇನ್ನೂ ಅನೇಕ ಆರೋಗ್ಯಲಾಭಗಳನ್ನು ಬರಿಗಾಲಿನಿಂದ ನಡೆಯುವುದರ ಮೂಲಕ ಪಡೆಯಬಹುದು.
► ಅದು ಪಾದಗಳಿಗೆ ವ್ಯಾಯಾಮವನ್ನು ನೀಡುತ್ತದೆ
ನಿಮ್ಮ ಶರೀರದ ಇತರ ಅಂಗಗಳಂತೆ ನಿಮ್ಮ ಪಾದಗಳ ಕ್ಷಮತೆಯನ್ನೂ ಕಾಯ್ದುಕೊಳ್ಳಲು ವ್ಯಾಯಾಮದ ಅಗತ್ಯವಿದೆ. ಬರಿಗಾಲಿನ ನಡಿಗೆಯು ಪಾದದ ಸ್ನಾಯುಗಳು,ಅಸ್ಥಿರಜ್ಜು ಮತ್ತು ಸ್ನಾಯುರಜ್ಜುಗಳನ್ನು ಹಿಗ್ಗಿಸುತ್ತದೆ ಮತ್ತು ಅವುಗಳನ್ನು ಬಲಗೊಳಿಸುತ್ತದೆ. ಇದು ಮಂಡಿ ಬಿಗಿತ,ಬೆನ್ನುನೋವು ಮತ್ತು ಇತರ ಮೂಗೇಟುಗಳನ್ನು ತಡೆಯಲು ನೆರವಾಗುತ್ತದೆ. ಶರೀರದ ಭಂಗಿ ಮತ್ತು ಸಮತೋಲನವನ್ನು ಉತ್ತಮಗೊಳಿಸಲೂ ನೆರವಾಗುತ್ತದೆ.
► ಮಾನಸಿಕ ಶಾಂತಿ ಮತ್ತು ಸ್ಪಷ್ಟತೆ
ಬರಿಗಾಲಿನಲ್ಲಿ ನೀವಿಡುವ ಪ್ರತಿ ಹೆಜ್ಜೆಯೂ ನಿಮ್ಮ ಮನಸ್ಸನ್ನು ಹೆಚ್ಚು ಗಮನಶೀಲವಾಗಿಸುತ್ತದೆ. ಆದರೆ ಯಾವಾಗಲೂ ಕಲ್ಲು ಅಥವಾ ಮುಳ್ಳು ಅಥವಾ ಇಂತಹ ಯಾವುದೇ ವಸ್ತುಗಳಿರದ ಮೃದುವಾದ,ನೈಸರ್ಗಿಕ ಮೇಲ್ಮೈ ಮೇಲೆ ನಡೆಯುವುದು ಅಗತ್ಯ ಎನ್ನುವುದು ನೆನಪಿರಲಿ. ಬರಿಗಾಲಿನ ನಡಿಗೆಯಲ್ಲಿರುವಾಗ ನಿಮ್ಮ ಅಂತಃಸಾಕ್ಷಿಯೊಂದಿಗೆ ಸಂವಾದ ನಡೆಸಿ. ಇದು ಖಂಡಿತವಾಗಿಯೂ ನಿಮಗೆ ಹಿತಕರ ಅನುಭವವನ್ನು ನೀಡುತ್ತದೆ,ನಿಮ್ಮಲ್ಲೊಂದು ಸ್ಪಷ್ಟತೆಯನ್ನು ಮೂಡಿಸುತ್ತದೆ.
► ಆತಂಕ,ಖಿನ್ನತೆಗಳನ್ನು ದೂರ ಮಾಡುತ್ತದೆ
ನೀವು ಆತಂಕ ಅಥವಾ ಒತ್ತಡ ಅಥವಾ ಖಿನ್ನತೆಗೆ ಒಳಗಾಗಿದ್ದರೆ ಬರಿಗಾಲಿನಲ್ಲಿ ನಡೆಯಲು ಆರಂಭಿಸಿ. ಇದರಿಂದ ನಿಮ್ಮ ಒತ್ತಡ ಮತ್ತು ಆತಂಕಗಳ ಮಟ್ಟ ಶೇ.60ರಷ್ಟು ಕಡಿಮೆಯಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಬರಿಗಾಲಿನಲ್ಲಿ ನಡಿಗೆಯು ಶರೀರದಲ್ಲಿಯ ಸಂತೋಷದ ಹಾರ್ಮೋನ್‌ಗಳಾದ ಎಂಡಾರ್ಫಿನ್‌ಗಳ ಸ್ರಾವವನ್ನು ಉತ್ತೇಜಿಸುವುದು ಇದಕ್ಕೆ ಕಾರಣವಾಗಿದೆ.
► ಒಳ್ಳೆಯ ನಿದ್ರೆಗೆ ಸಹಕಾರಿ
ನಮ್ಮ ಹಿರಿಯರು ಇಡೀ ದಿನ ಬರಿಗಾಲಿನಲ್ಲಿಯೇ ಸುತ್ತಾಡುತ್ತಿದ್ದರು ಮತ್ತು ರಾತ್ರಿ ಶಾಂತಿಯುತ ನಿದ್ರೆಯನ್ನು ಮಾಡುತ್ತಿದ್ದರು. ಬರಿಗಾಲಿನಲ್ಲಿ ನಡೆಯುವುದು ನಿದ್ರಾಹೀನತೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.
► ಭೂಮಿಯ ಸ್ಪರ್ಶದಲ್ಲಿರಿಸುತ್ತದೆ
ನಮ್ಮ ಶರೀರದ ಶೇ.60ರಷ್ಟು ಭಾಗವು ನೀರು ಆಗಿದೆ ಮತ್ತು ನೀರು ಅತ್ಯುತ್ತಮ ವಿದ್ಯುತ್ ವಾಹಕವಾಗಿದೆ. ಭೂಮಿಯು ಅಯಾನಿಕ್ ಚಾರ್ಜ್ ಅನ್ನು ಹೊಂದಿದೆ. ನಾವು ಬರಿಗಾಲಿನಲ್ಲಿ ನಡೆಯುತ್ತಿರುವಾಗ ಅದು ನಮ್ಮ ಶರೀರಕ್ಕೆ ಋಣ ಅಯಾನುಗಳನ್ನು ವರ್ಗಾಯಿಸುತ್ತದೆ ಮತ್ತು ಅವು ನಮ್ಮ ಶರೀರದ ಲಯ,ಹಾರ್ಮೋನ್ ಚಕ್ರ ಮತ್ತು ನಮ್ಮೆಳಗಿರುವ ಜೈವಿಕ ಗಡಿಯಾರದೊಂದಿಗೆ ಮೇಳೈಸುತ್ತವೆ. ಇದೇ ಕಾರಣದಿಂದ ಮರಳಿನಲ್ಲಿ ನಡೆಯುವಾಗ ಅತ್ಯಂತ ನೆಮ್ಮದಿಯ ಭಾವವುಂಟಾಗುತ್ತದೆ.
► ಆಕ್ಯುಪಂಕ್ಚರ್‌ನಂತೆ ಪರಿಣಾಮ ಬೀರುತ್ತದೆ
ನಮ್ಮ ಶರೀರದಾದ್ಯಂತ ಪ್ರತಿಫಲಿತ ಬಿಂದುಗಳಿರುತ್ತವೆ. ನಾವು ಬರಿಗಾಲಿನಲ್ಲಿ ನಡೆಯುವಾಗ ಈ ಬಿಂದುಗಳು ಉತ್ತೇಜಿಸಲ್ಪಡುತ್ತವೆ ಮತ್ತು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತವೆ. ಶರೀರದ ಸಂವೇದನಾಶೀಲತೆಯನ್ನು ಕಡಿಮೆ ಮಾಡುವ ಮೂಲಕ ಗಾಯಗಳ ಅಪಾಯವನ್ನು ತಗ್ಗಿಸುತ್ತವೆ.