ಕೊಳಗೇರಿಯ ಚೆಲುವು; ಅದಮ್ಯ ಚೇತನದ ಗೆಲುವು

Update: 2019-08-03 18:37 GMT

ಕ್ರೀಡಾಪಟುಗಳ ಗೆಲುವಿನ ಕಥನವನ್ನು ಆಧರಿಸಿ ತಯಾರಾದ ಸಿನೆಮಾಗಳ ಸರಣಿಯ ಮೂರನೇ ಕಂತಾಗಿ ಉಗಾಂಡಾದ ಕೊಳಗೇರಿಯೊಂದರಲ್ಲಿ ಅರಳಿದ ಅದಮ್ಯ ಚೇತನವೊಂದರ ಬದುಕಿನ ಕತೆಯಾದ ‘ಕ್ವೀನ್ ಆಫ್ ಕಾಟ್ವೆ’ ಚಿತ್ರದ ಚೇತೋಹಾರಿ ವಿವರಗಳು ಇಲ್ಲಿವೆ.

ಜೀವ ಸಂಗ್ರಾಮದ ಗೆಲುವಿನ ಪ್ರಕರಣಗಳು, ಬದುಕಿನ ತಿಪ್ಪೆಯಿಂದ ಖ್ಯಾತಿಯ ಉಪ್ಪರಿಗೆಗೆ ಜಿಗಿಯುವ ಪವಾಡದಂಥ ಕಥನಗಳು ಪ್ರಾಯಶಃ ಆಟದ ರಂಗದಲ್ಲಿ ದೊರೆಯುವಷ್ಟು ಹೇರಳವಾಗಿ ಮತ್ತೊಂದು ಕ್ಷೇತ್ರದಲ್ಲಿ ದೊರೆಯುವುದು ಸಾಧ್ಯವಿಲ್ಲವೆಂದು ಕಾಣುತ್ತದೆ! ಪ್ರತಿವರ್ಷ ಜಗತ್ತಿನ ಬೇರೆ ಬೇರೆ ಮೂಲೆಗಳಲ್ಲಿ ನಡೆಯುವ ಕ್ರೀಡಾ ಮೇಳಗಳಲ್ಲಿ ಹೊಸ ಹೊಸ ಏಕಲವ್ಯರು, ಹರ್ಕ್ಯುಲಿಸ್, ಹೆಕ್ಟರ್‌ಗಳು ಉದಯಿಸುತ್ತಾರೆ. ಹೊಸ ದಾಖಲೆಗಳನ್ನು ಬರೆಯುತ್ತಾರೆ. ದಾರಿದ್ರ್ಯ, ದುಃಖ, ಬದುಕನ್ನು ಕಿತ್ತು ತಿನ್ನುವ ನೂರೆಂಟು ಸಮಸ್ಯೆ, ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಈ ಅದಮ್ಯ ಚೇತನಗಳು ಆಟದ ರಂಗದಲ್ಲಿ ಪುಟಿದೇಳುತ್ತವೆ. ಅನಿರೀಕ್ಷಿತ ತಿರುವುಗಳನ್ನು, ರೋಚಕ ಫಲಿತಾಂಶಗಳನ್ನು ಒದಗಿಸಿ ರೋಮಾಂಚನಕ್ಕೆ ನೆರೆಬರಿಸುತ್ತವೆ. ನೋಡುಗನ ಭಾವಸರೋವರದಲ್ಲಿ ಸುಖದ ಅಲೆಗಳನ್ನು ಎಬ್ಬಿಸುತ್ತವೆ. ದಾರಿದ್ರ್ಯ ಸ್ಥಿತಿಯಿಂದ ಬಂದು, ಭವಿಷ್ಯದ ಬದುಕಿನ ಬಗ್ಗೆ ಭರವಸೆಯೇ ಇಲ್ಲದಿದ್ದ, ಅವಿದ್ಯಾವಂತ ಬಾಲಕಿಯೊಬ್ಬಳು ಚದುರಂಗದಂಥ ಬೌದ್ಧಿಕ ಆಟದಲ್ಲಿ ತನ್ನ ಛಾಪನ್ನು ಒತ್ತಿದ ಕಥನ ‘ಕ್ವೀನ್ ಆಫ್ ಕಾಟ್ವೆ’. ಮೀರಾ ನಾಯರ್ ನಿರ್ದೇಶಿಸಿದ ಈ ಚಿತ್ರ ಸೂಕ್ತ ಅವಕಾಶ, ಬೆಂಬಲ, ಮಾರ್ಗದರ್ಶನ ದೊರೆತಾಗ ನಶಿಸಬಹುದಾದ ಚೇತನ ವಿಕಾಸಗೊಳ್ಳುವ ಮನುಷ್ಯನ ಆತ್ಮವಿಶ್ವಾಸ ಕುಸಿಯದಂತೆ ತಡೆಹಿಡಿದು ಭರವಸೆಯ ಬೀಜಗಳನ್ನು ಬಿತ್ತುವ ವಿಶಿಷ್ಟ ಕಥನವನ್ನು ಹೃದಯಕ್ಕೆ ತಾಕುವಂತೆ ಹೇಳುತ್ತದೆ.
ಇದು ಜಗತ್ತಿನ ಅತ್ಯಂತ ದರಿದ್ರ ತಾಣಗಳೆನಿಸಿದ ಉಗಾಂಡಾದ ರಾಜಧಾನಿ ಕಂಪಾಲದಲ್ಲಿರುವ ಕಾಟ್ವೆ ಎಂಬ ಕೊಳಗೇರಿಯಲ್ಲಿ ಹುಟ್ಟಿದ ಫಿಯೋನಾ ಮುಟೇಸಿ ಎಂಬ ಬಾಲಕಿಯ ಬದುಕು-ಸಾಧನೆಯನ್ನು ಆಧರಿಸಿದ ಚಿತ್ರ. ಅದು ಅತ್ಯಂತ ದಾರುಣವಾದ ಪರಿಸರ, ರಿಕ್ತ ಸ್ಥಿತಿಯಲ್ಲಿ ಬದುಕುವ ಕುಟುಂಬಗಳು, ಇಂದಿನ ಹೊಟ್ಟೆಪಾಡು ಹೊರತುಪಡಿಸಿದರೆ, ನಾಳಿನ ಬದುಕಿನ ಬಗ್ಗೆ ಯಾವ ಕಾಳಜಿ, ಕನಸುಗಳು ಇಲ್ಲದ ಮನುಷ್ಯರ ನಾಡು. ನಾಗರಿಕ ಬದುಕಿನ ಯಾವ ಲಕ್ಷಣವೂ ಇಲ್ಲದ ಈ ಕೊಳಗೇರಿಯಲ್ಲಿ ನಕ್ಕು ಹ್ಯಾರಿಯೆಟ್ ಎಂಬ ನಾಲ್ಕು ಮಕ್ಕಳ ವಿಧವೆಯ ಸಂಸಾರ. ಏಡ್ಸ್ ರೋಗಕ್ಕೆ ಬಲಿಯಾದ ಗಂಡ; ನಾಗರಿಕ ಜಗತ್ತಿನ ಆಸೆಗಳನ್ನು ಬೆಂಬತ್ತಿದ ಹಿರಿಯ ಮಗಳು ನೈಟ್. ಹತ್ತು ವರ್ಷವೂ ದಾಟದ ಎರಡನೇ ಮಗಳು ಫಿಯೋನಾ ಮುಟೇಸಿ(ಜನನ 1996) ತಾಯಿಯ ದುಡಿಮೆಗೆ ಹೆಗಲು ಕೊಡುವ ಜೊತೆಗೆ ಎಳೆಗೂಸು, ಕೊನೆಯ ತಮ್ಮ ರಿಚರ್ಡ್ ನ ಪಾಲನೆಯ ಹೊಣೆ ಹೊತ್ತಿದ್ದಾಳೆ. ಇನ್ನೊಬ್ಬ ತಮ್ಮ ಬ್ರಯಾನ್ ಜೊತೆ ಮನೆಗೆಲಸದ ನಂತರ ಮೆಕ್ಕೆಜೋಳ ಮಾರುವ ಕಾಯಕ. ಎಂದೂ ಶಾಲೆಯ ಮೆಟ್ಟಿಲನ್ನೇ ಹತ್ತದ ಬಾಲಕಿ ಫಿಯೋನಾ ಆ ಮಹಾನ್ ಕೊಳಗೇರಿಯ ನಿರ್ಭಾವುಕ ಜಗತ್ತಿನಲ್ಲಿ, ಚಲಿಸುವ ಮತ್ತೊಂದು ವಸ್ತು ಮಾತ್ರ! ಇಂಥ ಹಿನ್ನೆಲೆಯ ಫಿಯೋನಾ ಮುಟೇಸಿ ಪವಾಡವೆನ್ನುವ ರೀತಿಯಲ್ಲಿ ಉಗಾಂಡಾ ರಾಷ್ಟ್ರದ ಚೆಸ್ ಚಾಂಪಿಯನ್ ಆಗಿ ಬೆಳೆಯುತ್ತಾಳೆ. ರಶ್ಯದಲ್ಲಿ ನಡೆಯುವ ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಫಿಯೋನಾ ಮತ್ತೆ ಮೂರು ಒಲಿಂಪಿಯಾಡ್‌ನಲ್ಲಿ ಭಾಗವಹಿಸುತ್ತಾಳೆ. 2012ರಲ್ಲಿ ಹದಿನೈದು ವರ್ಷದ ಬಾಲಕಿಯ ಸಾಧನೆ ಇಸ್ತಾಂಬುಲ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಮಹಿಳಾ ಗ್ರಾಂಡ್ ಮಾಸ್ಟರ್ ಬಿರುದು ಪಡೆಯಲು ಅಗತ್ಯವಾದ ಶೇ. 50 ಅಂಕಗಳನ್ನು ಒಂಬತ್ತು ಆಟಗಳಲ್ಲಿ ದೊರಕಿಸಿಕೊಂಡು ಉಗಾಂಡಾದ ಚೆಸ್ ಇತಿಹಾಸದಲ್ಲಿ ಅಂಥ ಬಿರುದು ಪಡೆದ ಮೊದಲ ಮಹಿಳೆ ಎನಿಸಿಕೊಳ್ಳುತ್ತಾಳೆ. ಇದಕ್ಕೂ ಹಿಂದೆ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಮುಟೇಸಿಯ ಚುರುಕುತನದ ಆಟದಿಂದ ಆಕರ್ಷಿತನಾದ ಪತ್ರಕರ್ತ ಟಿಂ ಕ್ರೋಥರ್ಸ್ ಕ್ರೀಡಾ ಪತ್ರಿಕೆಯಲ್ಲಿ ಆಕೆಯ ಬದುಕು-ಸಾಧನೆಯನ್ನು ಕುರಿತು ವಿವರವಾಗಿ ಬರೆಯುತ್ತಾನೆ. ಅದನ್ನು ಆಧರಿಸಿದ ಡಿಸ್ನಿ ಫಿಲಂಸ್ 2017ರಲ್ಲಿ ‘ಕ್ವೀನ್ ಆಫ್ ಕಾಟ್ವೆ’ ಚಿತ್ರವನ್ನು ನಿರ್ಮಿಸಿ ಆಕೆಯನ್ನು ಜಗತ್ತಿಗೆ ಪರಿಚಯಿಸುತ್ತದೆ. ಆ ಚಿತ್ರದ ಪ್ರೀಮಿಯರ್ ಶೋನಲ್ಲಿ ಹಾಜರಾಗಿದ್ದ ನಾರ್ತ್ ವೆಸ್ಟ್ ಯೂನಿವರ್ಸಿಟಿಯ ಕ್ರಿಶ್ಚಿಯನ್ ಕಾಲೇಜ್‌ನ ಅಧ್ಯಕ್ಷ ಮುಟೇಸಿಗೆ ಶಿಷ್ಯವೇತನ ನೀಡಿ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ದೊರಕಿಸಿಕೊಡುತ್ತಾನೆ. ಈಗ ಆಕೆ ಶಿಕ್ಷಣ-ಚೆಸ್ ಎರಡನ್ನೂ ಬೆನ್ನತ್ತಿದ್ದಾಳೆ.


ಮೀರಾ ನಾಯರ್ ಅವರ ‘ಕ್ವೀನ್ ಆಫ್ ಕಾಟ್ವೆ’ ಚಿತ್ರವು ಫಿಯೋನಾ ಮುಟೇಸಿಯ ಬಾಲ್ಯ ಮತ್ತು 2012ರಲ್ಲಿ ನಡೆಯುವ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಗೆಲ್ಲುವ, ತನ್ನ ಆದಾಯದಿಂದ ತಾಯಿಗೊಂದು ಮನೆಯನ್ನು ಖರೀದಿ ಮಾಡಿ ಸಂಸಾರಕ್ಕೆ ಆಸರೆಯಾಗುವವರೆಗಿನ ಅವಧಿಯನ್ನು ಒಳಗೊಂಡಿದೆ. ಈ ಅವಧಿಯನ್ನು ಮನುಷ್ಯ ಚೈತನ್ಯವು ಪ್ರತಿಕೂಲ ಪರಿಸ್ಥಿತಿಗಳನ್ನು ದಾಟುವಾಗ ಎದುರಾಗುವ ಅಡ್ಡಿಗಳು, ಒದಗಿಬರುವ ಅನಿರೀಕ್ಷಿತ ನೆರವು, ವೈಯಕ್ತಿಕ ಆಸೆ, ಹತಾಶೆ, ಗೆಲುವು, ಸಂಭ್ರಮ ಹೀಗೆ ಎಲ್ಲ ಬಗೆಯ ಭಾವನೆಗಳನ್ನು ಮನಸ್ಸಿಗೆ ತಾಗುವಂತೆ ಚಿತ್ರಿಸುತ್ತದೆ.
ವರ್ಣಮಯ ಉಡುಪು ತೊಟ್ಟ, ಮುಖದಲ್ಲಿ ಭಯ, ನಿರೀಕ್ಷೆ, ಆತಂಕಗಳನ್ನು ತುಂಬಿಕೊಂಡ, ಹದಿನೈದು ವರ್ಷದ ಕಪ್ಪುವರ್ಣದ, ಗುಂಗುರು ಕೂದಲಿನ ಬಾಲಕಿಯೊಬ್ಬಳು ನಿಧಾನವಾಗಿ ನಡೆಯುತ್ತಾ ತನಗೆ ನಿಗದಿಯಾದ ಚೆಸ್ ಟೇಬಲ್‌ನಲ್ಲಿ ಕುಳಿತುಕೊಳ್ಳುವ ಘಟನೆಯಿಂದ ಚಿತ್ರ ಪ್ರಾರಂಭವಾಗುತ್ತದೆ. ಆಕೆಯ ಸಂಕೀರ್ಣ ಮುಖಭಾವದಿಂದ ಆಚೆಗೆ ಸರಿಯುವ ಕ್ಯಾಮರಾ, ವಿಶ್ವದ ಅತ್ಯಂತ ದರಿದ್ರಸ್ಥಿತಿಯ ತಾಣಗಳಲ್ಲೊಂದೆನಿಸಿದ ಉಗಾಂಡಾದ ರಾಜಧಾನಿ ಕಂಪಾಲದಲ್ಲಿರುವ ಕುಪ್ರಸಿದ್ಧ ‘ಕಾಟ್ವೆ’ ಕೊಳಗೇರಿಗೆ ಪ್ರೇಕ್ಷಕನನ್ನು ಕರೆದೊಯ್ಯುತ್ತದೆ. ತನ್ನ ಕುಪ್ರಸಿದ್ಧಿಗೆ ತಕ್ಕಂತೆಯೇ ಕೊಳಗೇರಿ ಸ್ವರೂಪ ಬಿಚ್ಚಿಕೊಳ್ಳುತ್ತದೆ. ಉಬ್ಬು ತಗ್ಗಿನ, ಗುಂಡಿ ಬಿದ್ದ, ಡಾಮರು ಕಾಣದ ರಸ್ತೆಗಳು; ಜೋಪಡಿಗಳು; ಕೊಳಕು ತುಂಬಿ ನಾರುವ ಬಯಲು, ಗಿಜಿಗುಡುವ ಜನ, ಕುಪ್ಪಳಿಸುವ ಸೈಕಲ್‌ಗಳು; ಭಯಂಕರ ಸದ್ದಿನ ಬೈಕುಗಳು, ಲಡಕಾಸಿ ವಾಹನಗಳ ಗಜಿಬಿಜಿ; ಅಂಥ ಗಬ್ಬೆದ್ದ ಪರಿಸರಕ್ಕೂ ಬಣ್ಣ ಬಣ್ಣದ ಬಟ್ಟೆ ತೊಟ್ಟು ರಂಗುಬಳಿಯುವ ಮಕ್ಕಳು; ಹೊಟ್ಟೆಪಾಡಿಗಾಗಿ ಮಕ್ಕಳು ಮರಿಯೆನ್ನದೆ ಅಲ್ಪಆದಾಯಕ್ಕೆ ದುಡಿಯುವ ಜನ; ಇಂಥ ಗತಿಗೆಟ್ಟ ಪರಿಸರದಲ್ಲಿ ನಕ್ಕು ಹ್ಯಾರಿಯಟ್‌ಳದೂ ಒಂದು ಸಂಸಾರ. ನಾಲ್ಕು ಮಕ್ಕಳ ವಿಧವೆ. ಹರೆಯಕ್ಕೆ ಬಂದ ಮೊದಲನೇ ಮಗಳು ನೈಟ್‌ಗೆ ಬದುಕಿನ ಸುಖವನ್ನು ಬೊಗಸೆಯೆತ್ತಿ ಕುಡಿಯುವ ತವಕವಿದ್ದರೆ, ಕಠೋರ ಕಟ್ಟುನಿಟ್ಟಿನ ತಾಯಿಯ ಕಣ್ಗಾವಲು ಆಕೆಯ ಹಂಬಲಕ್ಕೆ ಅಡಿಯೊಡ್ಡುತ್ತದೆ. ಹತ್ತು ವರ್ಷದ ಎರಡನೇ ಮಗಳು ಫಿಯೋನಾ ಮುಟೇಸಿ ಕೈಗೂಸು ಕಿರಿಯ ತಮ್ಮನನ್ನು ಸಾಕುವ ಮತ್ತು ಹಿರಿಯ ತಮ್ಮನೊಡನೆ ರಸ್ತೆಯಲ್ಲಿ ಮುಸುಕಿನ ಜೋಳ ಮಾರಿ ತಾಯಿಗೆ ಹೆಗಲುಕೊಡುವ ಬಾಲೆ. ಇನ್ನೂ ಯವ್ವನವಿರುವ ತಾಯಿ ಹ್ಯಾರಿಯೆಟ್‌ಗೆ ತನ್ನನ್ನೂ ಸೇರಿದಂತೆ ಹುಚ್ಚೆದ್ದು ಕುಣಿಯುವ ಮೊದಲ ಮಗಳನ್ನು ಹದ್ದುಬಸ್ತಿನಲ್ಲಿಡಬೇಕಾದ ಸಂಕಷ್ಟ. ತೂತುಬಿದ್ದ ಚಾವಣಿ, ಬಾಯಿ ತೆರೆದ ಬಾಗಿಲಿನ ಬಿಲದಂತಿರುವ ಬಾಡಿಗೆಮನೆಯಲ್ಲಿ ದಿಕ್ಕಿಲ್ಲದೆ ಬದುಕುವ ಮಂದಿಗೆ ಬದುಕಿನಲ್ಲಿ ಯಾವ ಭರವಸೆಗಳೂ ಇಲ್ಲ.


ಭರವಸೆ ಇಲ್ಲದ, ಕನಸುಗಳೇ ಬೀಳದ ಫಿಯೋನಾಳ ಜಗತ್ತು ಒಂದು ದಿನ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯೊಂದು ಕೊಳಗೇರಿಯ ಮಕ್ಕಳಲ್ಲಿ ಆಟ ಕಲಿಸಲು ಆರಂಭಿಸಿದ ಸ್ಪೋರ್ಟ್ಸ್ ಮಿನಿಸ್ಟ್ರಿ ಔಟ್‌ರೀಚ್‌ನ ಪ್ರತಿನಿಧಿಯಾಗಿ ಬರುವ ಯುವ ಕೋಚ್ ರಾಬರ್ಟ್ ಕಟಿಂಡೆ ಅಲ್ಲಿನ ಮಕ್ಕಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತಾನೆ. ಚೆಸ್ ಮತ್ತು ಫುಟ್ಬಾಲ್ ಆಟವನ್ನು ಬಲ್ಲ ಕಟಿಂಡೆ ಇಂಜಿನಿಯರಿಂಗ್ ಕಲಿತವನು. ತನ್ನ ವಿದ್ಯೆಗೆ ತಕ್ಕ ಉದ್ಯೋಗದ ಹುಡುಕಾಟದಲ್ಲಿರುವ ಆತನಿಗೊಂದು ಅಲ್ಪವೇತನದ ಕೋಚ್ ಕೆಲಸ ಒಂದು ತಾತ್ಕಾಲಿಕ ಉದ್ಯೋಗ. ಫುಟ್ಬಾಲ್ ಆಡಿದರೆ ಅಂಗಾಂಗ ಊನವಾಗುವ ಭಯದ ಮಕ್ಕಳಿಗೆ ಚೆಸ್ ಕಲಿಯಲು ಪ್ರೇರೇಪಿಸುತ್ತಾನೆ. ದನದ ಕೊಟ್ಟಿಗೆಯಂಥ ಶೆಡ್‌ನಲ್ಲಿ ಕೊಳಗೇರಿಯ ಮಕ್ಕಳು ಅಲ್ಲಿಗೆ ಚೆಸ್ ಕಲಿಯಲು ಬರುತ್ತಾರೆ. ಆಟಕ್ಕಿಂತಲೂ ಅಲ್ಲಿ ಕಟಿಂಡೆ ನೀಡುವ ಒಂದು ಲೋಟ ಅಂಬಲಿಯೇ ಹೆಚ್ಚಿನ ಆಕರ್ಷಣೆ. ತನ್ನ ಕಣ್ಣನ್ನು ತಪ್ಪಿಸಿ ಮರೆಯಾಗುವ ತಮ್ಮನನ್ನು ಹುಡುಕಿ ಬರುವ ಫಿಯೋನಾ ಆಕಸ್ಮಿಕವಾಗಿ ಆ ಚೆಸ್ ಶಾಲೆಗೆ ಬರುತ್ತಾಳೆ. ಕೊಳಚೆ ವಾಸಿಗಳಿಗೂ ದುರ್ಗಂಧ ಬಡಿಯುವಷ್ಟು ಕೊಳಕಾಗಿರುವ ಫಿಯೋನಾ ತನ್ನನ್ನು ಅಣಕಿಸಿದವರ ವಿರುದ್ಧ ತಿರುಗಿ ಬೀಳುತ್ತಾಳೆ. ಅವಳ ವರ್ತನೆಯಲ್ಲಿ ಫೈಟರ್ ಒಬ್ಬಳನ್ನು ಕಾಣುವ ಕೋಚ್, ‘‘ಬಾ...... ಇದು ಹೋರಾಟಗಾರರಿಗೆ ಹೇಳಿ ಮಾಡಿಸಿದ ಆಟ. ಕಲಿ ಬಾ’’ ಎಂದು ಆಕೆಗೆ ಗಂಜಿ ನೀಡಿ ಚೆಸ್ ದೀಕ್ಷೆ ನೀಡುತ್ತಾನೆ.
ಓದು ಬರಹ ಬಾರದ ಬಾಲೆ; ತಾಯಿಯ ಆಕ್ಷೇಪಣೆಯ ನಡುವೆಯೂ ಚೆಸ್‌ಗೆ ಒಲಿಯುತ್ತಾಳೆ. ಸರಿಯಾದ ಕಾಲದಲ್ಲಿ, ಸರಿಯಾದ ವ್ಯಕ್ತಿ ಫಿಯೋನಾಳಲ್ಲಿ ಅಡಗಿದ್ದ ಪ್ರತಿಭೆಯನ್ನು ಉದ್ದೀಪಿಸುತ್ತಾನೆ. ಚೆಸ್ ಫಲಕದ ಮೇಲೆ ಎದುರಾಳಿಯ ಒಂದು ನಡೆಯನ್ನು ನೋಡಿದ ಕೂಡಲೇ ಮುಂದಿನ ಎಂಟು ನಡೆಗಳನ್ನು ಊಹಿಸಬಲ್ಲ ಆಕೆಯ ಸಾಮರ್ಥ್ಯಕ್ಕೆ ದಂಗುಬಡಿದು ಹೋಗುತ್ತಾನೆ. ಉಗಾಂಡಾದ ಬೋಡೋನ ಕಿಂಗ್ಸ್ ಕಾಲೇಜಿನಲ್ಲಿ ನಡೆಯುವ ವಿದ್ಯಾರ್ಥಿಗಳ ಚೆಸ್ ಟೂರ್ನಮೆಂಟ್‌ನಲ್ಲಿ ತನ್ನ ಪ್ರತಿಭಾವಂತ ಆಟಗಾರರಿಗೆ ಪ್ರವೇಶ ಗಿಟ್ಟಿಸುವಲ್ಲಿ ಕೋಚ್ ಯಶಸ್ವಿಯಾಗುತ್ತಾನೆ. ನಾಗರಿಕತೆಯಲ್ಲಿ ಎರಡು ವಿರುದ್ಧ ಧ್ರುವಗಳಂತಿರುವ ಮಕ್ಕಳ ನಡುವಿನ ಸ್ಪರ್ಧೆ. ಅಲ್ಲಿ ಕಲಿತ ಮಕ್ಕಳನ್ನು ಕೊಳಗೇರಿ ಮಕ್ಕಳು ಮಣಿಸಿಬಿಡುವ ಸೋಜಿಗ ಸಂಭವಿಸುತ್ತದೆ. ಫಿಯೋನಾ ಟೂರ್ನಿಯ ಅತ್ಯುತ್ತಮ ಆಟಗಾರ್ತಿಯಾಗಿ ಹೊರಹೊಮ್ಮುತ್ತಾಳೆ. ಅಲ್ಲಿಂದಾಚೆಗೆ ಫಿಯೋನಾ ತನ್ನ ಚೆಸ್ ಪ್ರಯಾಣದಲ್ಲಿ ಕಂಡ ಏಳು-ಬೀಳುಗಳು; ಆಟದಲ್ಲಿ ಗೆದ್ದರೂ ಬದಲಾಗದ ಬದುಕು; ಸಂಸಾರದ ಕೋಟಲೆಗಳು; ಕಿತ್ತು ತಿನ್ನುವ ಬಡತನ; ತಮ್ಮನ ಅಪಘಾತ; ಸುಖವರಸಿ ಹೋದ ಅಕ್ಕ ಗರ್ಭಿಣಿಯಾಗಿ ಹಿಂದಿರುಗುವುದು; ತಾಯಿ ಹ್ಯಾರಿಯೆಟ್‌ನ ಛಲ; ಕೊನೆಗೂ ಬದುಕಿನಲ್ಲಿ ಗೆಲ್ಲುವ, ತಾಯಿಗೊಂದು ಸೂರು, ನೆಮ್ಮದಿಯ ಬದುಕನ್ನು ತಂದುಕೊಡುವ ಹದಿನಾರರ ಯುವತಿಯ ಸಾಹಸಗಾಥೆಯನ್ನು ಮೀರಾ ನಾಯರ್ ಭಾವುಕತೆಯಿಂದ ಕಟ್ಟಿದ್ದಾರೆ.


‘ಸಲಾಂ ಬಾಂಬೆ’ ಚಿತ್ರದಲ್ಲಿ ಮುಂಬೈನ ಕೊಳಗೇರಿಗೆ ವಲಸೆ ಬಂದ ಹುಡುಗನೊಬ್ಬನ ಮೂಲಕ ನಗರಗಳ ಅವಿಭಾಜ್ಯ ಅಂಗವೆನಿಸಿದ ಕೊಳಚೆ ಪ್ರದೇಶಗಳ ಕ್ರೌರ್ಯವನ್ನು ದರ್ಶನ ಮಾಡಿಸಿ, ಅದೊಂದು ಬಿಡುಗಡೆಯೇ ಇಲ್ಲದ ಚಕ್ರವ್ಯೆಹದಂತೆ ಚಿತ್ರಿಸಿದ ಮೀರಾ ನಾಯರ್ ‘ಕ್ವೀನ್ ಆಫ್ ಕಾಟ್ವೆ’ ಚಿತ್ರದಲ್ಲಿ ಭರವಸೆಯೇ ಇಲ್ಲದ ಮಕ್ಕಳು ನರಕದಿಂದ ಬಿಡುಗಡೆಯಾಗುವ ಯಶೋಗಾಥೆಯೊಂದನ್ನು ರೂಪಿಸಿದ್ದಾರೆ. ಈ ರೀತಿಯ ‘ಫೀಲ್ ಗುಡ್’ ಕತೆಯಾದ ಕಾರಣದಿಂದಲೇ ಡಿಸ್ನಿ ಫಿಲಂಸ್ ಈ ಚಿತ್ರದ ಹಕ್ಕನ್ನು ಪಡೆಯಿತು. ಸಂಸ್ಥೆಯ ಧ್ಯೇಯೋದ್ದೇಶಕ್ಕೆ ತಕ್ಕಂತೆ ನರಕದಲ್ಲೂ ಮಿಡಿಯುವ ಮಾನವೀಯ ಕ್ಷಣಗಳನ್ನು ಮೀರಾ ನಾಯರ್ ಚಿತ್ರದಲ್ಲಿ ಹಿಡಿದಿಟ್ಟಿದ್ದಾರೆ. ಇದು ಕಾಲ್ಪನಿಕ ಕತೆಯಲ್ಲ. ಇಂಜಿನಿಯರ್ ಹುದ್ದೆ ದೊರೆತರೂ, ತಾನು ತರಬೇತುಗೊಳಿಸುವ ಆಟಗಾರರನ್ನು ನಡುನೀರಿನಲ್ಲಿ ಬಿಡಬಾರದಲ್ಲ ಎಂದು ಹುದ್ದೆಯನ್ನೇ ತ್ಯಜಿಸುವ ಕೋಚ್ ತನ್ನ ಶಿಷ್ಯರನ್ನು ‘ಪಯನೀರ್ಸ್‌’ ಎಂದೇ ಕರೆಯುತ್ತಾನೆ. ಮಕ್ಕಳ ಬದುಕಿನಲ್ಲಿ ಒಂದಾಗಿ ಅವರ ಯಶಸ್ಸಿನಲ್ಲಿ ಆನಂದ ಕಾಣುವ ಕೋಚ್ ರಾಬರ್ಟ್‌ ಕಟಿಂಡೆಯ ಕತೆ ಚಿತ್ರಕ್ಕೆ ಬೇರೊಂದು ಆಯಾಮ ನೀಡುತ್ತದೆ. ಬೇರೊಬ್ಬನನ್ನು ಮದುವೆಯಾಗಿ ಹೋದ ತಾಯಿ; ದಾರುಣ ಬದುಕಿನ ಬಾಲ್ಯವನ್ನು ಕಳೆದು ಇಂಜಿನಿಯರ್ ಆದ ಕಟಿಂಡೆ ತನ್ನದೇ ಉದಾಹರಣೆ ನೀಡುತ್ತಾ ಪ್ರಮುಖ ಆಟವೊಂದರಲ್ಲಿ ಸೋತು ಹತಾಶಳಾದ ಫಿಯೋನಾಳನ್ನು ಕುರಿತು ‘‘ಬದುಕು ಎಂದೂ ಬದಲಾಗದೆಂದು ನಾನೂ ನಂಬಿದ್ದೆ. ಆದರೆ ಬದುಕು ಬದಲಾಯಿತು. ನಮ್ಮೆಲ್ಲರಿಗೂ ಸೋಲು ಸಂಭವಿಸಿಯೇ ತೀರುತ್ತದೆ, ಆದರೆ ಕಾಯಿಗಳನ್ನು ಮತ್ತೆ ಜೋಡಿಸಿ ಆಟ ಮುಂದುವರಿಸುವುದೇ ನಮಗಿರುವ ದಾರಿ’’ ಎಂದು ಆಕೆಯನ್ನು ಹುರಿದುಂಬಿಸುತ್ತಾನೆ.
ಮಗಳ ಆಟ ತಮ್ಮ ಬದುಕಿನಲ್ಲಿ ಬದಲಾವಣೆಯನ್ನು ತರುವುದಿಲ್ಲವೆಂದು ನಂಬಿರುವ ತಾಯಿ ಕೊನೆಗೆ ಮಗಳಿಗೆ ನೆರವಾಗಲು ಮದುವೆಯ ಉಡುಪನ್ನು ಮಾರಿಕೊಳ್ಳುವ ಹಂತಕ್ಕೆ ತಲುಪುವ ನಕ್ಕು ಹ್ಯಾರಿಯೆಟ್‌ಳ ಮತ್ತೊಂದು ಕತೆಯಿದೆ. ತನಗೆ ಅಪರಿಚಿತವಾದ ಚೆಸ್ ಎಂಬ ಆಟದಲ್ಲಿ ತನಗಿರುವ ಕೌಶಲ್ಯ ಅರಿವಾದ ನಂತರ ಅದನ್ನು ಫಲಿಸಿಕೊಳ್ಳುವ ಮುಟೇಸಿಯ ಪರಿಶ್ರಮದ ಕತೆ ಇವೆಲ್ಲವುಗಳ ಜೊತೆ ಹೆಣೆದುಕೊಳ್ಳುತ್ತದೆ. ಈ ಮೂವರಿಗೆ ಸಂಬಂಧಿಸಿದ ಹಲವಾರು ಭಾವತೀವ್ರತೆಯ ಸನ್ನಿವೇಶಗಳಂತೂ ಪ್ರೇಕ್ಷಕನನ್ನು ಅಲುಗಾಡಿಸಿಬಿಡುತ್ತವೆ. ತನ್ನ ಬದುಕಿನ ಕತೆಯ ಪ್ರಕಟನೆಯಿಂದ ಬಂದ ಗೌರವಧನದಿಂದ ಮನೆಯನ್ನು ಖರೀದಿಸಿ ತಾಯಿಗೆ ನೀಡಿ ದಂಗುಪಡಿಸುವ ದೃಶ್ಯವಂತೂ ಮಾತನ್ನು ಮೀರಿದ ಭಾವಪರವಶತೆಯಲ್ಲಿ ತೋಯಿಸಿಬಿಡುತ್ತದೆ. ಆ ಮಾತೇ ಇಲ್ಲದ ಕೊನೆಯ ದೃಶ್ಯದಲ್ಲಿ ತಾಯಿ, ಮಗಳು ಮತ್ತು ಕೋಚ್ ಒಬ್ಬರನ್ನೊಬ್ಬರು ನೋಡುತ್ತಾ ಕಣ್ಣಾಲಿಗಳಲ್ಲಿ ನೀರು ತುಳುಕಿಸಿ ಸಾವಿರ ಭಾವನೆಗಳನ್ನು ಹಂಚಿಕೊಳ್ಳುವ; ಅದರ ಹಿಮ್ಮೇಳಕ್ಕೆ ಸರಿಯಾಗಿ ಆಫ್ರಿಕನ್ ಸಂಗೀತದ ಲಯ ಆವರಿಸಿಕೊಳ್ಳುವ ದೃಶ್ಯ ಎದೆ ಭಾರವಾಗಿಸುತ್ತದೆ.
ಫಿಯೋನಾ ಮುಟೇಸಿಯ ಪಾತ್ರದಲ್ಲಿ ನಟಿಸಿರುವವಳು ಮಡೀನಾ ನಲ್ವಂಗ ತನ್ನ ಪಾತ್ರವನ್ನೇ ಅನುಭವಿಸಿದ ಬಾಲೆ. ಕಾಟ್ವೆಯ ನೆರೆಯ ಕೊಳಗೇರಿಯಲ್ಲಿ ಫಿಯೋನಾಳಂತೆಯೇ ಮೆಕ್ಕೆಜೋಳ ಮಾರುತ್ತಿದ್ದ ಹುಡುಗಿ. ವೇಶ್ಯಾವಾಟಿಕೆಗೆ ಹೆಸರಾದ ಕೊಳಗೇರಿಯೊಂದರಲ್ಲಿ ಓಡಾಡುತ್ತಿದ್ದ ಬಾಲಕಿಯನ್ನು ಈ ಪಾತ್ರಕ್ಕೆ ಆರಿಸಿದರು. ಆವರೆಗೆ ಒಂದು ಚಿತ್ರವನ್ನೂ ನೋಡದಿದ್ದ ಆಕೆ ನಿರ್ದೇಶಕಿಯ ಆಣತಿಯನ್ನು ಚಾಚೂತಪ್ಪದೆ ಪಾಲಿಸಿ ಮುಟೇಸಿಯ ಪಾತ್ರಕ್ಕೆ ಜೀವ ತುಂಬಿದ್ದಾಳೆ.
ಫಿಯೋನಾಳ ತಾಯಿ ಪಾತ್ರ ನಿರ್ವಹಿಸಿರುವ ಲುಪಿಟ ಯಾಂಗೊ ಅನುಭವಸ್ತೆ ಹಾಲಿವುಡ್ ನಟಿ. ‘12 ಇಯರ್ಸ್ ಎ ಸ್ಲೇವ್’, ‘ಸ್ಟಾರ್ ವಾರ್ಸ್’, ‘ಬ್ಲಾಕ್ ಪ್ಯಾಂಥರ್’ ಮುಂತಾದ ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಆಕೆ ನಕ್ಕು ಹ್ಯಾರಿಯಟ್‌ನ ಛಲ, ಸೆಡವು, ಮಕ್ಕಳಿಗಾಗಿ ಮಿಡಿಯುವ ಭಾವಗಳ ಸಂಕೀರ್ಣ ವ್ಯಕ್ತಿತ್ವ ವನ್ನು ತೆರೆಯಲ್ಲಿ ಜೀವಿಸಿದ್ದಾಳೆ.
‘ಸೆಲ್ಮ’ ಚಿತ್ರದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ನ ಪಾತ್ರ ವಹಿಸಿದ್ದ ಡೇವಿಡ್ ಒಯೆಲೋವೋ ಇಲ್ಲಿ ಕೋಚ್ ರಾಬರ್ಟ್ ಕಟಿಂಡೆಯಾಗಿ ಮತ್ತೊಮ್ಮೆ ಅದ್ಭುತ ಅಭಿನಯ ನೀಡಿದ್ದಾನೆ. ಕಂಪಾಲದ ಕಾಟ್ವೆ ಮತ್ತಿತರ ನಿಜ ಪರಿಸರದಲ್ಲಿಯೇ ಚಿತ್ರವನ್ನು ರೂಪಿಸಿರುವ ಬಹುತೇಕ ಅಲ್ಲಿನ ಮಕ್ಕಳು, ಜನರನ್ನೆ ಕಲಾವಿದರನ್ನಾಗಿ ಆರಿಸಿ ಮೀರಾ ನಾಯರ್ ಆಟದ ಅಂಗಳದಲ್ಲಿ ಅರಳುವ ಚೆಲುವನ್ನು, ತಳ ಸಮುದಾಯಗಳ ಪ್ರತಿಭೆಗಳ ವಿಕಸನಕ್ಕೆ ಆಟವು ನೆರವಾಗುವ ಪವಾಡವನ್ನು ಚಿತ್ತಾಕರ್ಷಕವಾಗಿ ನಿರೂಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75