ಡೆಂಗ್: ಯಾವ ಆಹಾರ ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು?
ಎಲ್ಲೆಲ್ಲಿಯೂ ಡೆಂಗ್ ಹಾವಳಿ ಎಬ್ಬಿಸಿದೆ. ಈಗಾಗಲೇ ಕೆಲವು ಜೀವಗಳು ಬಲಿಯಾಗಿದ್ದು, ಹಲವಾರು ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಡೆಂಗ್ ವೈರಸ್ ಹೊತ್ತ ಸೊಳ್ಳೆ ವ್ಯಕ್ತಿಗೆ ಕಚ್ಚಿದರೆ ಆತನಿಗೆ ಡೆಂಗ್ ಬಾಧಿಸುತ್ತದೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಈ ರೋಗವು ಮಾರಣಾಂತಿಕವಾಗಬಹುದು. ಸಾಮಾನ್ಯವಾಗಿ ಸೊಳ್ಳೆಯು ವ್ಯಕ್ತಿಗೆ ಕಚ್ಚಿದ ಎರಡು ಮೂರು ವಾರಗಳ ಬಳಕ ಡೆಂಗ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ರೋಗನಿರ್ಧಾರ ಮತ್ತು ಚಿಕಿತ್ಸೆ ಅತ್ಯಂತ ಮುಖ್ಯವಾಗಿವೆ. ಮಳೆಗಾಲದಲ್ಲಿ ಡೆಂಗ್ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಈ ಸಮಯದಲ್ಲಿ ನಾವು ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಡೆಂಗ್ ಪೀಡಿತರಾಗಿ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವವರು ಸೇವಿಸಬೇಕಾದ ಮತ್ತು ಸೇವಿಸಬಾರದ ಆಹಾರಗಳ ಕುರಿತು ಮಾಹಿತಿಯಿಲ್ಲಿದೆ.....
ಸೇವಿಸಬೇಕಾದ ಆಹಾರಗಳು
ದಾಳಿಂಬೆ: ವ್ಯಕ್ತಿಯು ಡೆಂಗ್ ಬಾಧಿತನಾಗಿರುವುದು ಖಚಿತವಾದಾಗ ದಾಳಿಂಬೆ ಅತ್ಯಂತ ಸೂಕ್ತ ಆಹಾರವಾಗಿದೆ. ಡೆಂಗ್ ಬಾಧಿಸುತ್ತಿದ್ದಾಗ ರಕ್ತದಲ್ಲಿಯ ಪ್ಲೇಟ್ ಲೆಟ್ ಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತವೆ ಮತ್ತು ದಾಳಿಂಬೆಯು ಅವುಗಳ ಸಂಖ್ಯೆಯನ್ನು ವೃದ್ಧಿಸಲು ನೆರವಾಗುತ್ತದೆ.
ಪಪ್ಪಾಯ ಎಲೆ: ಪಪ್ಪಾಯ ಎಲೆಯ ರಸದಲ್ಲಿರುವ ಪಪೈನ್ ಮತ್ತು ಕೈಮೊಪಪೈನ್ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಇತರ ಜೀರ್ಣಾಂಗ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತವೆ. ಪ್ರತಿದಿನ ಪಪ್ಪಾಯ ಎಲೆಯ ರಸದ ಸೇವನೆಯು ರಕ್ತದಲ್ಲಿಯ ಪ್ಲೇಟ್‌ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ಎಳನೀರು: ವ್ಯಕ್ತಿಯು ಡೆಂಗ್ ನಿಂದ ನರಳುತ್ತಿದ್ದಾಗ ಶರೀರದಲ್ಲಿ ನಿರ್ಜಲೀಕರಣದ ಅನುಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ ನೀರು ಸಾಕಾಗುವುದಿಲ್ಲ. ಜಲೀಕರಣವನ್ನು ಗರಿಷ್ಠಗೊಳಿಸಲು ಮತ್ತು ಡೆಂಗ್ ಪ್ರಭಾವವನ್ನು ಕನಿಷ್ಠಗೊಳಿಸಲು ಎಳನೀರಿನ ಸೇವನೆ ಅಗತ್ಯವಾಗುತ್ತದೆ.
ಅರಿಷಿಣ: ಅರಿಷಿಣವು ಅದ್ಭುತ ಬ್ಯಾಕ್ಟೀರಿಯಾ ಪ್ರತಿರೋಧಕ. ನಂಜು ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಅರಿಷಿಣ ಬೆರೆತ ಹಾಲನ್ನು ಸೇವಿಸುವುದರಿಂದ ಡೆಂಗ್ ನಿಂದ ತ್ವರಿತವಾಗಿ ಚೇತರಿಸಿಕೊಳ್ಳಬಹುದು.
ಕಿತ್ತಳೆ: ಕಿತ್ತಳೆ ಹಣ್ಣಿನಲ್ಲಿ ವಿಟಾಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇವು ನಿಧಾನವಾಗಿ ಡೆಂಗ್ ವೈರಸನ್ನು ಶರೀರದಿಂದ ಬಿಡುಗಡೆಗೊಳಿಸುವ ಮೂಲಕ ಆರೋಗ್ಯ ಸುಧಾರಣೆಗೆ ನೆರವಾಗುತ್ತವೆ.
ಮೆಂತ್ಯ: ಸೌಮ್ಯ ಶಮನಕಾರಿ ಗುಣವನ್ನು ಹೊಂದಿರುವ ಮೆಂತ್ಯವು ಡೆಂಗ್ ರೋಗಿಗಳು ಚೇತರಿಕೆಯ ಅವಧಿಯಲ್ಲಿ ಸಾಮಾನ್ಯವಾಗಿ ಅನುಭವಿಸುವ ಶರೀರದ ನೋವನ್ನು ಕಡಿಮೆ ಮಾಡುತ್ತದೆ. ಅದು ಶರೀರದ ಉಷ್ಣತೆಯನ್ನು ಸ್ಥಿರವಾಗಿರಿಸಲು ನೆರವಾಗುತ್ತದೆ ಮತ್ತು ಶಾಂತಿಪೂರ್ಣ ನಿದ್ರೆಗೆ ಪೂರಕವಾಗಿದೆ.
ಕಿವಿ ಹಣ್ಣು: ಕಿವಿ ವಿಟಾಮಿನ್ ಎ,ಇ ಮತ್ತು ಪೊಟ್ಯಾಷಿಯಂ ಅನ್ನು ಸಮೃದ್ಧವಾಗಿ ಒಳಗೊಂಡಿದ್ದು,ಇವು ಶರೀರದಲ್ಲಿ ರಕ್ತದೊತ್ತಡ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ,ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಂಪು ರಕ್ತಕಣಗಳ ಉತ್ಪಾದನೆಯಲ್ಲಿ ನೆರವಾಗುತ್ತವೆ.
ಏನನ್ನು ಸೇವಿಸಬಾರದು?
ಕರಿದ ಆಹಾರಗಳು: ಡೆಂಗ್ ಪೀಡಿತರು ತಮ್ಮ ಆರೋಗ್ಯವು ಸುಧಾರಿಸುವವರೆಗೂ ಕರಿದ ಆಹಾರಗಳಿಂದ ದೂರವುಳಿಯುವುದು ಒಳ್ಳೆಯದು. ಶರೀರದಲ್ಲಿಯ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಮಟ್ಟವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನಷ್ಟೇ ಸೇವಿಸಬೇಕು. ಕರಿದ ಮತ್ತು ಎಣ್ಣೆ ಹೆಚ್ಚಾಗಿರುವ ಆಹಾರಗಳು ತೊಂದರೆಗಳನ್ನು ಹೆಚ್ಚಿಸುತ್ತವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತವೆ.
ಕೆಫೀನ್ ಯುಕ್ತ ಪಾನೀಯಗಳು: ಡೆಂಗ್ ನಿಂದ ಚೇತರಿಕೆಯ ಅವಧಿಯಲ್ಲಿ ಶರೀರವು ಹೆಚ್ಚಿನ ನೀರನ್ನು ಬೇಡುತ್ತದೆ,ಆದರೆ ಯಾವುದೇ ಕಾರಣಕ್ಕೂ ಕೆಫೀನ್ ಯುಕ್ತ ಅಥವಾ ಕಾರ್ಬನೀಕೃತ ಪಾನೀಯಗಳನ್ನು ಸೇವಿಸಕೂಡದು. ಈ ಪಾನೀಯಗಳಲ್ಲಿರುವ ಸಂರಕ್ಷಕಗಳು ಚೇತರಿಕೆ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಈ ಪಾನೀಯಗಳ ಸೇವನೆಯು ಸ್ನಾಯು ಸ್ಥಗಿತ, ಆಯಾಸ, ಅನಿಯಮಿತ ಹೃದಯ ಬಡಿತ ದರ ಮತ್ತು ಇಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಾಂಸಾಹಾರ: ಡೆಂಗ್ ನಿಂದ ಚೇತರಿಸಿಕೊಳ್ಳಬೇಕಿದ್ದರೆ ಮಾಂಸಾಹಾರ ಸೇವನೆಯಿಂದ ದೂರವಿರುವುದು ಅನಿವಾರ್ಯವಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಮಾಂಸಾಹಾರ ಸೇವನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ.