ರಕ್ತ ಹೆಪ್ಪುಗಟ್ಟುವಿಕೆ ಮಾರಣಾಂತಿಕವೂ ಆಗಬಹುದು,ಅದರ ಲಕ್ಷಣಗಳು ನಿಮಗೆ ಗೊತ್ತಿರಲಿ

Update: 2019-08-08 14:37 GMT

ಶೇವಿಂಗ್ ಮಾಡಿಕೊಳ್ಳುತ್ತಿರುವಾಗಲೋ ಇತರ ಸಂದರ್ಭಗಳಲ್ಲೋ ಸಣ್ಣಪುಟ್ಟ ಗಾಯಗಳು ಆಗುತ್ತಲೇ ಇರುತ್ತವೆ. ಹೀಗಾದಾಗ ರಕ್ತಸ್ರಾವವಾಗುತ್ತದೆ ಮತ್ತು ಕೆಲವೇ ಸಮಯದಲ್ಲಿ ಹೆಪ್ಪುಗಟ್ಟುವ ಮೂಲಕ ರಕ್ತ ಸುರಿಯುವುದು ನಿಲ್ಲುತ್ತದೆ. ತನ್ನ ಕೆಲಸ ಮುಗಿದ ಮೇಲೆ ಈ ಹೆಪ್ಪು ಉದುರಿ ಬೀಳುತ್ತದೆ. ಆದರೆ ಕೆಲವೊಮ್ಮೆ ಅನಾಹುತವನ್ನು ಸೃಷ್ಟಿಸಬಹುದು. ಹೆಪ್ಪುಗಟ್ಟಿದ ರಕ್ತ ಉದುರಿ ಬೀಳದಿದ್ದರೆ ಅದು ಅಪಾಯಕಾರಿಯಾಗುತ್ತದೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದು ರಕ್ತನಾಳದಲ್ಲಿ ಸೇರಿಕೊಂಡು ಶರೀರದ ಯಾವುದೇ ಭಾಗವನ್ನು ಸೇರಬಹುದು,ವಿಶೇಷವಾಗಿ ನೀವು ಹೆಚ್ಚು ಸಮಯ ಕುಳಿತುಕೊಂಡಿದ್ದರೆ ಈ ಹೆಪ್ಪು ಕಾಲನ್ನು ಬಾಧಿಸುತ್ತದೆ.

ಹೃದಯದಿಂದ ರಕ್ತದೊಂದಿಗೆ ಆಮ್ಲಜನಕವನ್ನು ಶರೀರದ ಎಲ್ಲ ಜೀವಕೋಶಗಳಿಗೆ ಪೂರೈಸುವ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಬಹುದು ಮತ್ತು ಇದರ ಪರಿಣಾಮ ನಿಜಕ್ಕೂ ಗಂಭೀರವಾಗುತ್ತದೆ. ಅದು ನಿಮ್ಮ ಹೃದಯ,ಶ್ವಾಸಕೋಶಗಳು ಅಥವಾ ಮಿದುಳಿಗೆ ಆಮ್ಲಜನಕದ ಹರಿವನ್ನು ತಡೆಗಟ್ಟಬಹುದು ಮತ್ತು ಹೃದಯಾಘಾತ ಅಥವಾ ಪಾರ್ಶ್ವವಾಯು ವಿನಂತಹ ಜೀವ ಬೆದರಿಕೆಯ ತುರ್ತು ಸ್ಥಿತಿಗೆ ಕಾರಣವಾಗಬಲ್ಲದು. ಮಲಿನ ರಕ್ತವನ್ನು ಹೃದಯಕ್ಕೆ ಮರಳಿಸುವ ಅಭಿಧಮನಿಗಳಲ್ಲಿಯೂ ರಕ್ತ ಹೆಪ್ಪುಗಟ್ಟಬಹುದು ಮತ್ತು ಅದೂ ತೊಂದರೆಗಳಿಗೆ ಕಾರಣವಾಗಬಲ್ಲದು. ರಕ್ತ ಹೆಪ್ಪುಗಟ್ಟಿರುವುದನ್ನು ಸೂಚಿಸುವ ಎಚ್ಚರಿಕೆಯ ಸಂಕೇತಗಳು ನಿಮಗೆ ತಿಳಿದಿದ್ದರೆ ಸಕಾಲದಲ್ಲಿ ವೈದ್ಯಕೀಯ ನೆರವನ್ನು ಪಡೆದು ಅಪಾಯದಿಂದ ಪಾರಾಗಬಹುದು.

 ► ತೋಳುಗಳು ಮತ್ತು ಕಾಲುಗಳು

 ನಿಮ್ಮ ತೋಳು ಅಥವಾ ಕಾಲುಗಳಲ್ಲಿ ಚರ್ಮದಿಂದ ತೀರ ಒಳಗಿನ ಅಭಿಧಮನಿಗಳಲ್ಲಿ ರಕ್ತವು ಹೆಪ್ಪುಗಟ್ಟಿದಾಗ ಅಂತಹ ಸ್ಥಿತಿಯನ್ನು ಡೀಪ್ ವೆಯ್ನ್ ಥ್ರೊಂಬಾಸಿಸ್(ಡಿವಿಟಿ) ಅಥವಾ ಆಳ ಅಭಿಧಮನಿ ಘನೀಭವನ ಎಂದು ಕರೆಯಲಾಗುತ್ತದೆ. ಈ ರಕ್ತದ ಕರಣೆಯು ಹೃದಯ ಅಥವಾ ಶ್ವಾಸಕೋಶಗಳಿಗೆ ಸಾಗಬಹುದಾದ್ದರಿಂದ ಇದು ಅಪಾಯಕರ ಸ್ಥಿತಿಯಾಗಿದೆ.

ಶಸ್ತ್ರಚಿಕಿತ್ಸೆಯ ನಂತರ ಅಥವಾ ದೀರ್ಘಾವಧಿಯ ವಿಮಾನ ಪ್ರಯಾಣದಂತಹ ಸಂದರ್ಭಗಳಲ್ಲಿ ತುಂಬ ಸಮಯ ಚಲನವಲನವಿಲ್ಲದಿದ್ದಾಗ ಡಿವಿಟಿ ಉಂಟಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಈ ಕೆಳಗಿನ ಯಾವುದೇ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ನೆರವನ್ನು ಪಡೆಯಬೇಕು.

 ಊತ: ನಿಖರವಾಗಿ ರಕ್ತವು ಹೆಪ್ಪುಗಟ್ಟಿದ ಜಾಗದಲ್ಲಿ ಅಥವಾ ಇಡೀ ಕಾಲು ಅಥವಾ ತೋಳು ಬಾತುಕೊಳ್ಳಬಹುದು

ಬಣ್ಣದಲ್ಲಿ ಬದಲಾವಣೆ: ನಿಮ್ಮ ತೋಳು ಅಥವಾ ಕಾಲುಗಳ ಚರ್ಮದ ಬಣ್ಣದಲ್ಲಿ ಬದಲಾವಣೆಯಾಗಿ ಕೆಂಪು ಅಥವಾ ನೀಲಿ ಛಾಯೆಯನ್ನು ಪಡೆದುಕೊಳ್ಳಬಹುದು ಅಥವಾ ಬಿಸಿಯಾಗಬಹುದು ಅಥವಾ ತುಂಬ ತುರಿಕೆ ಉಂಟಾಗಬಹುದು.

ನೋವು: ಹೆಪ್ಪುಗಟ್ಟುವಿಕೆಯು ತೀವ್ರಗೊಂಡರೆ ಸಾಮಾನ್ಯದಿಂದ ಹಿಡಿದು ಅತಿಯಾದ ನೋವು ಕಾಣಿಸಿಕೊಳ್ಳಬಹುದು.

ಉಸಿರಾಟದಲ್ಲಿ ತೊಂದರೆ: ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ರಕ್ತದ ಹೆಪ್ಪು ನಿಮ್ಮ ತೋಳು ಅಥವಾ ಕಾಲಿನಿಂದ ಶ್ವಾಸಕೋಶವನ್ನು ತಲುಪಿದೆ ಎನ್ನುವುದನ್ನು ಸೂಚಿಸುತ್ತದೆ. ತೀವ್ರ ಕೆಮ್ಮು ಆರಂಭವಾಗಬಹುದು ಮತ್ತು ಕೆಮ್ಮಿನೊಂದಿಗೆ ರಕ್ತವೂ ಕಾಣಿಸಿಕೊಳ್ಳಬಹುದು. ಎದೆಯಲ್ಲಿ ನೋವು ಕಾಣಿಸಿಕೊಂಡು ತಲೆ ಸುತ್ತಿದ ಅನುಭವ ವಾಗಬಹುದು. ಇಂತಹ ಸಂದರ್ಭದಲ್ಲಿ ತುರ್ತು ವೈದ್ಯಕೀಯ ನೆರವು ಅಗತ್ಯವಾಗುತ್ತದೆ.

 ಕೆಳಕಾಲಿನಲ್ಲಿ ಸೆಳೆತ: ಮೊಣಕಾಲು ಅಥವಾ ಕೆಳಕಾಲಿನಲ್ಲಿ ರಕ್ತವು ಹೆಪ್ಪುಗಟ್ಟಿದ್ದರೆ ಸೆಳೆತವುಂಟಾಗುತ್ತಿರುತ್ತದೆ.

► ಹೃದಯ

ಹೃದಯದಲ್ಲಿ ಅಥವಾ ಅದರ ಸುತ್ತುಮುತ್ತಲು ರಕ್ತ ಹೆಪ್ಪುಗಟ್ಟಿದ್ದರೆ ಅದು ಹೃದಯಾಘಾತಕ್ಕೆ ಕಾರಣವಾಗಬಹುದು.

ಎದೆ ಮತ್ತು ತೋಳಿನಲ್ಲಿ ತೀವ್ರ ನೋವು,ಅತಿಯಾಗಿ ಬೆವರುವಿಕೆ,ಉಸಿರಾಟದಲ್ಲಿ ತೊಂದರೆ ಇವು ಈ ಸ್ಥಿತಿಯನ್ನು ಸೂಚಿಸುತ್ತವೆ.

► ಶ್ವಾಸಕೋಶಗಳು

 ನಿಮ್ಮ ಶ್ವಾಸಕೋಶಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಸಾಮಾನ್ಯವಾಗಿ ತೋಳು ಅಥವಾ ಕಾಲಿನಲ್ಲಿಯ ಆಳ ಅಭಿಧಮನಿಯಲ್ಲಿ ಆರಂಭಗೊಳ್ಳುತ್ತದೆ,ನಂತರ ಅದು ವಿಭಜನೆಗೊಂಡು ಶ್ವಾಸಕೋಶದತ್ತ ಸಾಗುತ್ತದೆ. ಈ ಸ್ಥಿತಿಯನ್ನು ಪಲ್ಮನರಿ ಎಂಬಾಲಿಸಂ ಎಂದು ಕರೆಯಲಾಗುತ್ತದೆ ಮತ್ತು ಇದು ಅತ್ಯಂತ ಅಪಾಯಕಾರಿಯಾಗಿರುತ್ತದೆ.

ಉಸಿರಾಟದಲ್ಲಿ ಸಮಸ್ಯೆ,ಎದೆನೋವು,ಕೆಮ್ಮು,ಅತಿಯಾಗಿ ಬೆವರುವಿಕೆ,ತಲೆ ಸುತ್ತುತ್ತಿರುವ ಅನುಭವ ಉಂಟಾದರೆ ಕೂಡಲೇ ವ್ಯೆದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

► ಮಿದುಳು

ಮಿದುಳಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳ ಭಿತ್ತಿಗಳಲ್ಲಿ ಕೊಬ್ಬು ಸಂಗ್ರಹದಿಂದ ರಕ್ತ ಹೆಪ್ಪುಗಟ್ಟುವಿಕೆೆ ಉಂಟಾಗಬಹುದು. ಕೆಲವೊಮ್ಮೆ ತಲೆಗೆ ತೀವ್ರ ಏಟು ಬಿದ್ದಾಗ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಆಘಾತಕ್ಕೆ ಕಾರಣವಾಗಬಹುದು.

ಇತರ ಪ್ರಕರಣಗಳಲ್ಲಿ ಎದೆ ಅಥವಾ ಕುತ್ತಿಗೆಯಂತಹ ಶರೀರದ ವಿವಿಧ ಭಾಗಗಳಲ್ಲಿ ಆರಂಭಗೊಳ್ಳುವ ರಕ್ತ ಹೆಪ್ಪುಗಟ್ಟಬಹುದು ಮತ್ತು ಈ ಕರಣೆಯು ರಕ್ತದಲ್ಲಿ ಸೇರಿಕೊಂಡು ಮಿದುಳಿಗೆ ಸಾಗಬಹುದು ಮತ್ತು ಆಘಾತಕ್ಕೆ ಕಾರಣವಾಗಬಲ್ಲದು.

ದೃಷ್ಟಿಯಲ್ಲಿ ಅಥವಾ ಮಾತನಾಡಲು ಸಮಸ್ಯೆ,ಸೆಳೆತ,ನಿಶ್ಶಕ್ತಿಯ ಅನುಭವ ಇವು ಇದರ ಲಕ್ಷಣಗಳಾಗಿವೆ.

► ಉದರ

  ಕರುಳುಗಳಿಂದ ರಕ್ತವನ್ನು ಸಾಗಿಸುವ ಅಭಿಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಬಹುದು. ಉರಿಯೂತ ಅಥವಾ ಯಕೃತ್ತಿನ ಕಾಯಿಲೆ ಇಂತಹ ಸ್ಥಿತಿಗೆ ಕಾರಣವಾಗುತ್ತವೆ ಅಥವಾ ಜನನ ನಿಯಂತ್ರಣ ಮಾತ್ರೆಗಳ ಸೇವನೆಯೂ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ.

ವಾಕರಿಕೆ ಅಥವಾ ವಾಂತಿ,ಊಟದ ಬಳಿಕ ಇನ್ನಷ್ಟು ತೀವ್ರಗೊಳ್ಳುವ ಹೊಟ್ಟೆನೋವು,ಅತಿಸಾರ,ಮಲದಲ್ಲಿ ರಕ್ತ, ಹೊಟ್ಟೆಯುಬ್ಬರದ ಅನುಭವ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ.

► ಮೂತ್ರಪಿಂಡಗಳು

ಮೂತ್ರಪಿಂಡಗಳಲ್ಲಿ ರಕ್ತ ಹೆಪ್ಪುಗಟ್ಟಿದರೆ ಶರೀರದಿಂದ ತ್ಯಾಜ್ಯಗಳನ್ನು ಹೊರಹಾಕುವ ಅವುಗಳ ಕೆಲಸಕ್ಕೆ ವ್ಯತ್ಯಯ ವುಂಟಾಗುತ್ತದೆ. ಇದರಿಂದ ರಕ್ತದೊತ್ತಡವು ಹೆಚ್ಚಾಗಬಹುದು ಅಥವಾ ಮೂತ್ರಪಿಂಡ ವೈಫಲ್ಯವೂ ಉಂಟಾಗಬಹುದು. ಇದು ಅಪಾಯಕಾರಿ ಸ್ಥಿತಿಯಾಗಿದ್ದು ಹೊಟ್ಟೆಯ ಪಾರ್ಶ್ವದಲ್ಲಿ,ಕಾಲುಗಳು ಅಥವಾ ತೊಡೆಗಳಲ್ಲಿ ನೋವು,ಮೂತ್ರದಲ್ಲಿ ರಕ್ತ,ಜ್ವರ,ವಾಕರಿಕೆ ಅಥವಾ ವಾಂತಿ,ಅಧಿಕ ರಕ್ತದೊತ್ತಡ,ಏಕಾಏಕಿಯಾಗಿ ಕಾಲು ಬಾತುಕೊಳ್ಳುವುದು ಮತ್ತು ಉಸಿರಾಟದಲ್ಲಿ ತೊಂದರೆ ಇವು ಈ ಸ್ಥಿತಿಯನ್ನು ಸೂಚಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News