ಲಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ,ಅದನ್ನು ಹೀಗೆ ಬಳಸಿ

Update: 2019-08-11 14:41 GMT

ಲಿಂಬೆಹಣ್ಣಿನ ಸಿಪ್ಪೆ ನಿರುಪಯೋಗಿ ಎನ್ನುವುದು ಸಾಮಾನ್ಯವಾಗಿ ಹೆಚ್ಚಿನವರ ತಪ್ಪುಗ್ರಹಿಕೆ ಮತ್ತು ಇದೇ ಕಾರಣದಿಂದ ಅದನ್ನು ಕಸದ ಬುಟ್ಟಿಗೆ ಎಸೆದುಬಿಡುತ್ತಾರೆ. ಆದರೆ ಲಿಂಬೆಹಣ್ಣು ಮತ್ತು ಅದರ ರಸದಷ್ಟೇ ಸಿಪ್ಪೆಯೂ ಅನೇಕ ಲಾಭಗಳನ್ನು ನೀಡುತ್ತದೆ. ಅದು ವಿಟಾಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಷಿಯಂ ಮತ್ತು ನಾರು ಇವುಗಳನ್ನು ಒಳಗೊಂಡಿರುತ್ತದೆ.

ಲೆಮನ್ ವಿನೆಗರ್ ಕ್ಲೀನರ್ ತಯಾರಿಸಿ

 ದುಬಾರಿ ಕ್ಲೀನರ್‌ಗಳ ಬದಲಿಗೆ ಮನೆಯಲ್ಲಿಯೇ ಲಿಂಬೆ ಸಿಪ್ಪೆಗಳನ್ನು ಬಳಸಿ ಪರಿಣಾಮಕಾರಿ ಕ್ಲೀನರ್ ತಯಾರಿಸಬಹುದು. ಕೊಳಕಾದ ಅಡಿಗೆಮನೆ ಕಿರಿಕಿರಿಯನ್ನು ಉಂಟುಮಾಡುತ್ತದೆ,ವಿಶೇಷವಾಗಿ ಸ್ಟವ್ ಇಡುವ ಜಾಗವಂತೂ ಸ್ವಚ್ಛಗೊಳಿಸಲು ಅಸಾಧ್ಯವಾದಷ್ಟು ಕೊಳಕಾಗಿರುತ್ತದೆ. ಇದನ್ನು ಲೆಮನ್ ವಿನೆಗರ್ ಕ್ಲೀನರ್ ಬಳಸಿ ಸುಲಭವಾಗಿ ಸ್ವಚ್ಛಗೊಳಿಸಬಹುದು.

ಗಾಳಿಯಾಡದ ಪ್ಲಾಸ್ಲಿಕ್ ಕಂಟೇನರ್‌ನಲ್ಲಿ ಲಿಂಬೆ ಸಿಪ್ಪೆಗಳನ್ನು ಹಾಕಿ ಅವು ಮುಚ್ಚುವಷ್ಟು ವಿನೆಗರ್ ಸೇರಿಸಿ. 2-3 ವಾರಗಳ ಕಾಲ ಈ ಕಂಟೇನರ್‌ನ್ನು ಹಾಗೆಯೇ ಇಡಿ. ಬಳಿಕ ಈ ಮಿಶ್ರಣವನ್ನು ಸೋಸಿ ದೊರೆಯುವ ದ್ರಾವಣಕ್ಕೆ ಸಮಪ್ರಮಾಣದಲ್ಲಿ ನೀರನ್ನು ಬೆರೆಸಿದರೆ ನಿಮ್ಮ ಲೆಮನ್ ವಿನೆಗರ್ ಕ್ಲೀನರ್ ಬಳಕೆಗೆ ಸಿದ್ಧ.

ಆಹಾರದ ರುಚಿಯನ್ನು ಹೆಚ್ಚಿಸುತ್ತದೆ

 ಲಿಂಬೆ ಸಿಪ್ಪೆಗಳನ್ನು ಸಣ್ಣದಾಗಿ ಹೆಚ್ಚಿ ಅದನ್ನು ತಾಜಾ ಆಗಿ ಅಥವಾ ಒಣಗಿಸಿ ಆಹಾರಗಳಲ್ಲಿ ಬಳಸಿದರೆ ಹೆಚ್ಚಿನ ಸ್ವಾದವನ್ನು ನೀಡುತ್ತದೆ. ಅದನ್ನು ಫ್ರಿಝ್‌ನಲ್ಲಿರಿಸಿ ಹೆಚ್ಚು ದಿನಗಳ ಕಾಲ ಬಳಸಬಹುದು.

ಕ್ಯಾಂಡಿಯನ್ನು ತಯಾರಿಸಿ

ಏನಾದರೂ ಸಿಹಿ ತಿನ್ನಬೇಕೆಂದು ಅನಿಸಿದಾಗ ಚಪ್ಪರಿಸಲು ಲಿಂಬೆ ಸಿಪ್ಪೆಗಳ ಕ್ಯಾಂಡಿಗಳನ್ನು ತಯಾರಿಸಿಡಬಹುದು. ಅವುಗಳನ್ನು ಹಾಗೆಯೇ ತಿನ್ನಬಹುದು ಅಥವಾ ಕೇಕ್ ಮೇಲೆ ಇಡಬಹುದು ಅಥವಾ ಇತರ ಖಾದ್ಯಗಳಲ್ಲಿ ಬಳಸಬಹುದು. ಕರಗಿಸಿದ ಚಾಕಲೇಟ್‌ನಲ್ಲಿಯೂ ಅದನ್ನು ಮುಳುಗಿಸಿ ತೆಗೆದು ಮಕ್ಕಳಿಗೆ ತಿಂಡಿಯಾಗಿ ನೀಡಬಹುದು.

ಕಸದ ಬುಟ್ಟಿಯ ವಾಸನೆಯನ್ನು ನಿವಾರಿಸಿ

ಅಡಿಗೆಕೋಣೆಯಲ್ಲಿರುವ ತ್ಯಾಜ್ಯಗಳ ಬುಟ್ಟಿ ದುರ್ಗಂಧವನ್ನು ಬೀರುತ್ತಿರುತ್ತದೆ. ತ್ಯಾಜ್ಯಗಳನ್ನು ವಿಲೇವಾರಿ ಮಾಡಿದರೂ ಬುಟ್ಟಿಯ ದುರ್ಗಂಧ ನಿವಾರಣೆಯಾಗುವುದಿಲ್ಲ. ಲಿಂಬೆ ಸಿಪ್ಪೆಯನ್ನು ಈ ಬುಟ್ಟಿಯಲ್ಲಿ ಹಾಕಿ ಮೇಲೆ ಕೆಳಗೆ ಆಡಿಸಿ. ಇದರಿಂದ ಬುಟ್ಟಿಯ ದುರ್ಗಂಧ ಮಾಯವಾಗುತ್ತದೆ.

ಚರ್ಮಕ್ಕೆ ಆರೋಗ್ಯಕರ

 ಲಿಂಬೆಯಲ್ಲಿ ಚರ್ಮಕ್ಕೆ ಹೊಳಪು ನೀಡುವ ನೈಸರ್ಗಿಕ ರಾಸಾಯನಿಕವಿದೆ. ಅದರ ಸಿಪ್ಪೆಯಿಂದ ಮೊಣಗಂಟು,ಹಿಮ್ಮಡಿ ಮತ್ತು ಕೈಗಳನ್ನು ತಿಕ್ಕಿಕೊಂಡರೆ ಆ ಭಾಗಗಳು ಮೃದುವಾಗುತ್ತವೆ ಮತ್ತು ಬಿಳಿ ಛಾಯೆಗೆ ತಿರುಗುತ್ತವೆ.

ಮೃತ ಚರ್ಮಕೋಶಗಳನ್ನು ನಿವಾರಿಸಿ

  ಚರ್ಮದ ಮೃತ ಜೀವಕೋಶಗಳನ್ನು ತೆಗೆಯಲು ಲಿಂಬೆ ಸಿಪ್ಪೆಯನ್ನು ಬಳಸಬಹುದು. ಅರ್ಧ ಕಪ್ ಸಕ್ಕರೆ,ಆಲಿವ್ ಎಣ್ಣೆ ಮತ್ತು ತುರಿದ ಲಿಂಬೆ ಸಿಪ್ಪೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಪೇಸ್ಟ್ ತಯಾರಿಸಿ. ಈ ಪೇಸ್ಟ್‌ನಿಂದ ಚರ್ಮವನ್ನು ಉಜ್ಜಿಕೊಂಡರೆ ಮೃತ ಜೀವಕೋಶಗಳು ಉದುರುತ್ತವೆ. ಅಲ್ಲದೆ ಚರ್ಮವು ಮೃದುವಾಗಿ ಹೊಳೆಯುತ್ತದೆ.

ಇರುವೆಗಳನ್ನು ದೂರವಿಡುತ್ತದೆ

ಲಿಂಬೆ ಸಿಪ್ಪೆಯ ತುಣುಕುಗಳನ್ನು ಬಾಗಿಲುಗಳು,ಕಿಟಕಿಗಳು,ಹೊಸ್ತಿಲು ಅಥವಾ ಇರುವೆಗಳು ಬರಬಹುದಾದ ಯಾವುದೇ ಜಾಗ ಸೇರಿದಂತೆ ಅಡಿಗೆಕೋಣೆಯ ಎಲ್ಲ ಕಡೆಗಳಲ್ಲಿಡಿ. ಇರುವೆಗಳು ಲಿಂಬೆಯನ್ನು ಇಷ್ಟ ಪಡುವುದಿಲ್ಲ,ಹೀಗಾಗಿ ಲಿಂಬೆ ಸಿಪ್ಪೆಯ ಸಮೀಪಕ್ಕೂ ಅವು ಬರುವುದಿಲ್ಲ.

ಮೈಕ್ರೋವೇವ್ ಸ್ವಚ್ಛತೆಗೆ ಬಳಸಿ

ಮೈಕ್ರೋವೇವ್‌ನಲ್ಲಿ ಇಡಬಹುದಾದ ಪಾತ್ರೆಯೊಂದರಲ್ಲಿ ನೀರು ಹಾಕಿ ಅದಕ್ಕೆ ಲಿಂಬೆ ಸಿಪ್ಪೆಗಳನ್ನು ಸೇರಿಸಿ. ಹೆಚ್ಚಿನ ಉಷ್ಣತೆಯಲ್ಲಿ ಐದು ನಿಮಿಷ ಕಾಲ ಬೇಯಿಸಿ. ಓವನ್‌ನಲ್ಲಿ ಹರಡಿಕೊಂಡ ಆವಿಯು ಉಪಕರಣವನ್ನು ಸ್ವಚ್ಛಗೊಳಿಸುತ್ತದೆ. ಪಾತ್ರೆಯನ್ನು ಹೊರಗೆ ತೆಗೆದು ಮೈಕ್ರೋವೇವ್ ಅನ್ನು ಬಟ್ಟೆಯಿಂದ ಒರೆಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News