ಮೊಡವೆಗಳ ಕುರಿತು ಬೇರೂರಿರುವ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು

Update: 2019-08-11 14:50 GMT

ಮೊಡವೆ ಹದಿಹರೆಯದವರು ಮತ್ತು ಯುವಜನರನ್ನು ಕಾಡುವ ಅತ್ಯಂತ ಸಾಮಾನ್ಯ ಚರ್ಮದ ಸಮಸ್ಯೆಯಾಗಿದ್ದು, ಅದು ಕೆಲವೊಮ್ಮೆ,ವಿಶೇಷವಾಗಿ ಮಹಿಳೆಯರನ್ನು ಭಾವನಾತ್ಮಕವಾಗಿ ಹತಾಶರನ್ನಾಗಿಸುತ್ತದೆ. ಹಲವಾರು ರೋಗಗಳಂತೆ ಮೊಡವೆಗಳಿಗೆ ಕಾರಣಗಳು ಮತ್ತು ಅವುಗಳಿಗೆ ಚಿಕಿತ್ಸೆಯ ಕುರಿತು ಹಲವಾರು ಮಿಥ್ಯೆಗಳು ಜನರಲ್ಲಿ ಬೇರೂರಿವೆ. ಇಲ್ಲಿವೆ ಅಂತಹ ಕೆಲವು ಮಿಥ್ಯೆಗಳು.....

► ಮೊಡವೆಗಳ ಸಮಸ್ಯೆ ಕೇವಲ ಹದಿಹರೆಯದವರನ್ನು ಕಾಡುತ್ತದೆ

ಹದಿಹರೆಯದಲ್ಲಿ ಹೆಚ್ಚಾಗಿ ಮೊಡವೆಗಳು ಕಾಣಿಸಿಕೊಳ್ಳುತ್ತವಾದರೂ ಅದು ವಯಸ್ಕರನ್ನೂ ಬಿಡುವುದಿಲ್ಲ. ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್(ಪಿಸಿಒಡಿ),ಋತುಬಂಧ,ಗರ್ಭಾವಸ್ಥೆ,ಒತ್ತಡ,ಕೆಲವು ಔಷಧಿಗಳು ಮತ್ತು ಹಾರ್ಮೋನ್ ಸಮಸ್ಯೆಗಳು ವಯಸ್ಕರಲ್ಲಿ ಮೊಡವೆಗಳಿಗೆ ಕಾರಣವಾಗುತ್ತವೆ. ಟೆಸ್ಟೋಸ್ಟೆರೋನ್‌ನಂತಹ ಕೆಲವು ಹಾರ್ಮೋನ್‌ಗಳ ಮಟ್ಟಗಳಲ್ಲಿ ಏರಿಕೆಯು ತೈಲಗ್ರಂಥಿಗಳು ಹೆಚ್ಚು ತೈಲ ಸ್ರವಿಸುವಂತೆ ಮಾಡುತ್ತದೆ ಅಥವಾ ಚರ್ಮಕೋಶಗಳ ಚಟುವಟಿಕೆಯನ್ನು ಬದಲಿಸುತ್ತದೆ,ಇದು ವಯಸ್ಕರಲ್ಲಿ ಮೊಡವೆಗಳುಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ.

► ಕೊಳೆಯನ್ನು ಚೆನ್ನಾಗಿ ತೊಳೆದುಕೊಳ್ಳದಿದ್ದರೆ ಮೊಡವೆಗಳುಂಟಾಗುತ್ತವೆ

ಮೊಡವೆಯು ಚರ್ಮದ ಒಳಗಿನಿಂದ ಹುಟ್ಟುತ್ತದೆ ಮತ್ತು ವೃದ್ಧಿಗೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತದೆ. ಚರ್ಮದೊಳಗಿನ ಗ್ರಂಥಿಗಳು ಅತಿಯಾಗಿ ತೈಲವನ್ನು ಸ್ರವಿಸಿದಾಗ ಅಥವಾ ಚರ್ಮದಲ್ಲಿಯ ರಂಧ್ರಗಳು ಮೃತ ಚರ್ಮಕೋಶಗಳು ಮತ್ತು ಮೊಡವೆಯನ್ನುಂಟು ಮಾಡುವ ಬ್ಯಾಕ್ಟೀರಿಯಾಗಳ ಸಹಿತ ಮುಚ್ಚಿಕೊಂಡಾಗ ಬ್ಲಾಕ್‌ಹೆಡ್ ಅಥವಾ ವೈಟ್ ಹೆಡ್‌ಗಳು ಕಾಣಿಸಿಕೊಳ್ಳುತ್ತವೆ. ಮೃತ ಚರ್ಮಕೋಶಗಳಲ್ಲಿಯ ಕೆರಾಟಿನ್ ಪ್ರೋಟಿನ್ ಮೇಲ್ಮೈಗೆ ಒಡ್ಡಿಕೊಂಡು ಕಪ್ಪುಛಾಯೆಗೆ ತಿರುಗಿದಾಗ ಬ್ಲಾಕ್ ಹೆಡ್ ಉಂಟಾಗುತ್ತದೆ ಮತ್ತು ರಂಧ್ರದೊಳಗಿನ ಸಂಗ್ರಹವು ಚರ್ಮದ ಮೇಲ್ಮೈಗೆ ಒಡ್ಡಿಕೊಳ್ಳದೆ ಒಳಗೇ ಉಳಿದುಕೊಂಡರೆ ಅದು ವೈಟ್‌ಹೆಡ್‌ನ್ನು ಉಂಟು ಮಾಡುತ್ತದೆ.

► ಮುಖವನ್ನು ದಿನಕ್ಕೆ ಹಲವಾರು ಬಾರಿ ತೊಳೆದುಕೊಳ್ಳುತ್ತಿದ್ದರೆ ಮೊಡವೆ ಆಗುವುದಿಲ್ಲ

 ಹಲವಾರು ಬಾರಿ ಮುಖ ತೊಳೆದುಕೊಳ್ಳುವುದರಿಂದ ಚರ್ಮದಲ್ಲಿಯ ನೈಸರ್ಗಿಕ ತೈಲಗಳು ನಷ್ಟವಾಗುತ್ತವೆ ಮತ್ತು ಇದು ಹೆಚ್ಚೆಚ್ಚು ಎಣ್ಣೆ ಸ್ರವಿಸಲು ಕಾರಣವಾಗಬಹುದು ಮತ್ತು ಹೆಚ್ಚು ಮೊಡವೆಗಳುಂಟಾಗಬಹುದು.

► ಮೊಡವೆಗಳನ್ನು ಚಿವುಟಿಕೊಂಡರೆ ಅವು ಬೇಗ ನಿವಾರಣೆಯಾಗುತ್ತವೆ

 ಇದು ಅತ್ಯಂತ ತಪ್ಪುಗ್ರಹಿಕೆಯಾಗಿದೆ. ಮೊಡವೆಯನ್ನು ಚಿವುಟುವುದರಿಂದ ಚರ್ಮದೊಳಗೆ ಬ್ಯಾಕ್ಟೀರಿಯಾಗಳು ಇನ್ನಷ್ಟು ಮುಂದಕ್ಕೆ ತಳ್ಳಲ್ಪಡುವ ಅಪಾಯವಿದೆ. ವಿಶೇಷವಾಗಿ ಬಾಯಿಯ ಮೂಲೆಗಳಿಂದ ಮೂಗಿನ ಸೇತುವೆ ಮತ್ತು ಮೇಲ್ದವಡೆಯ ಮೂಳೆಯವರೆಗಿನ ಮುಖದ ತ್ರಿಕೋನ ಜಾಗದಲ್ಲಿಯ ಮೊಡವೆಯನ್ನು ಹಿಂಡುವುದರಿಂದ ಸೋಂಕು ಮಿದುಳಿಗ ಹರಡಬಹುದು,ಇದರ ಪರಿಣಾಮವಾಗಿ ಕಾವರ್ನಸ್ ಸೈನಸ್‌ನ ಸೋಂಕು ಸೇರಿದಂತೆ ಕೇಂದ್ರ ನರಮಂಡಳದ ಮೇಲೆ ದುಷ್ಪರಿಣಾಮವುಂಟಾಗುತ್ತದೆ. ಕಾವರ್ನಸ್ ಸೈನಸ್ ಸೋಂಕಿಗೊಳಗಾದರೆ ಅದು ಸೈನಸ್‌ನಲ್ಲಿಯ ರಕ್ತವು ಹೆಪ್ಪುಗಟ್ಟಲು ಕಾರಣವಾಗುತ್ತದೆ.

ಮೊಡವೆಗಳನ್ನು ಚಿವುಟುವುದು ಸೋಂಕನ್ನುಂಟು ಮಾಡುವ ಜೊತೆಗೆ ಚರ್ಮಕ್ಕೆ ಕಾಯಂ ಹಾನಿಯನ್ನುಂಟು ಮಾಡಿ ಕಲೆಗಳಿಗೆ ಕಾರಣವಾಗಬಹುದು. ಒಂದೆರಡು ವಾರದಲ್ಲಿ ನೈಸರ್ಗಿಕವಾಗಿ ಗುಣವಾಗುವ ಮೊಡವೆಯನ್ನು ಅದರ ಪಾಡಿಗೆ ಬಿಡುವುದು ಅತ್ಯುತ್ತಮವಾಗಿದೆ. ಕಪ್ಪು ಚರ್ಮವಿರುವವರು ಮೊಡವೆಯನ್ನು ಚಿವುಟಿಕೊಂಡಾಗ ಅದು ಇನ್ನಷ್ಟು ಬಣ್ಣಗೆಡಿಸುವ ಜೊತೆಗೆ ಸಹಜತೆ ಮರಳಲು ಹಲವಾರು ತಿಂಗಳುಗಳ ಕಾಲ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

► ಮೊಡವೆ ಸಾಂಕ್ರಾಮಿಕ

ಮೊಡವೆ ಸಾಂಕ್ರಾಮಿಕವಲ್ಲ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಮೊಡವೆಯುಂಟಾಗುವಲ್ಲಿ ಬ್ಯಾಕ್ಟೀರಿಯಾಗಳ ಪಾತ್ರವಿರುತ್ತದೆಯಾದರೂ ಅದು ಇತರ ಬ್ಯಾಕ್ಟೀರಿಯಾ ಸೋಂಕುಗಳಂತೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.

► ಮೊಡವೆಯಾಗಿದ್ದಾಗ ಮೇಕಪ್ ಮಾಡಿಕೊಳ್ಳಬಾರದು

ಮೊಡವೆಯೆದ್ದಾಗ ಮೇಕಪ್ ಮಾಡಿಕೊಳ್ಳುವುದನ್ನು ಕೈಬಿಡುವ ಅಗತ್ಯವಿಲ್ಲ. ಮೊಡವೆಯನ್ನು ಮುಚ್ಚಿಕೊಳ್ಳುವುದು ನಿಮಗ ಆತ್ಮವಿಶ್ವಾಸವನ್ನು ಒದಗಿಸುತ್ತದೆ ಎಂದಾದರೆ ನೀವು ಮೇಕಪ್ ಮಾಡಿಕೊಳ್ಳಬಹುದು. ಆದರೆ ಮೇಕಪ್ ಉತ್ಪನ್ನಗಳಲ್ಲಿ ಚರ್ಮದಲ್ಲಿಯ ರಂಧ್ರಗಳನ್ನು ಮುಚ್ಚಿಸಿ ಇನ್ನಷ್ಟು ಮೊಡವೆಗಳಿಗೆ ಕಾರಣವಾಗುವ ಸಂಯುಕ್ತಗಳಿಲ್ಲ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News