ಎಚ್ಚರ… ಕಿವಿಗಳನ್ನು ಹತ್ತಿಯ ಇಯರ್ ಬಡ್‌ಗಳಿಂದ ಸ್ವಚ್ಛಗೊಳಿಸಬೇಡಿ !
ನಮ್ಮಲ್ಲಿ ಹೆಚ್ಚಿನವರು ಈ ಕೆಲಸವನ್ನು ಮಾಡುತ್ತಿರುತ್ತೇವೆ,ಆದರೆ ಅದು ಸುರಕ್ಷಿತವಲ್ಲ. ಹೌದು, ಹತ್ತಿಯ ಇಯರ್ ಬಡ್‌ಗಳನ್ನು ಬಳಸಿ ಕಿವಿಗಳನ್ನು ಸ್ವಚ್ಛಗೊಳಿಸುವುದು ಮಾರಣಾಂತಿಕ ಕಿವಿ ಸೋಂಕಿಗೆ ಕಾರಣವಾಗಬಹುದು. ಈ ಅಭ್ಯಾಸವು ಶ್ರವಣ ಶಕ್ತಿಯನ್ನು ಕುಂದಿಸಬಹುದು ಮತ್ತು ಜೀವ ಬೆದರಿಕೆಯನ್ನುಂಟು ಮಾಡುವ ತಲೆಬುರುಡೆ ಸೋಂಕನ್ನೂ ಉಡುಗೊರೆಯಾಗಿ ನೀಡಬಹುದು.
ನಿಜಜೀವನದಲ್ಲಿ ಇತ್ತೀಚಿಗೆ ನಡೆದ ಘಟನೆಯೊಂದು ಇಲ್ಲಿದೆ.
37ರ ಹರೆಯದ ಆಸ್ಟ್ರೇಲಿಯನ್ ಮಹಿಳೆಯೋರ್ವಳು ಕಳೆದ ನಾಲ್ಕೈದು ವರ್ಷಗಳಿಂದಲೂ ಪ್ರತಿ ದಿನ ರಾತ್ರಿ ಹತ್ತಿಯ ಇಯರ್ ಬಡ್‌ಗಳಿಂದ ಕಿವಿಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದಳು. ಕ್ರಮೇಣ ಎಡಗಿವಿಯಲ್ಲಿ ಸಹಿಲಸಾಧ್ಯ ನೋವು ಕಾಣಿಸಿಕೊಂಡಾಗ ಆಕೆ ವೈದ್ಯರನ್ನು ಭೇಟಿ ಮಾಡಿದಾಗ ಕಿವಿ ಸೋಂಕಿನ ಬಗ್ಗೆ ಗೊತ್ತಾಗಿತ್ತು. ಇಯರ್ ಬಡ್‌ನ ಹತ್ತಿಯ ಎಳೆಗಳು ವರ್ಷಗಳಿಂದಲೂ ಆಕೆಯ ಕಿವಿಯಲ್ಲಿ ಸಂಗ್ರಹಗೊಂಡು ಸೋಂಕಿಗೊಳಗಾಗಿತ್ತು. ಅಷ್ಟೇ ಅಲ್ಲ, ಸೋಂಕು ತಲೆಬುರುಡೆಯನ್ನು ತಲುಪಿ ಅಲ್ಲಿಯೂ ಪರಿಣಾಮವನ್ನು ಬೀರಿತ್ತು. ಸೋಂಕನ್ನು ನಿವಾರಿಸಲು ಐದು ಗಂಟೆ ಕಾಲ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತಾದರೂ ಆಕೆ ಶಾಶ್ವತವಾಗಿ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಳು.
ಇಂತಹದೇ ಇನ್ನೊಂದು ಘಟನೆಯಲ್ಲಿ 31ರ ಹರೆಯದ ಬ್ರಿಟಿಷ್ ವ್ಯಕ್ತಿಯೋರ್ವನ ಕಿವಿಯಲ್ಲಿ ಇಯರ್ ಬಡ್‌ನ ತುದಿ ಸಿಕ್ಕಿಹಾಕಿಕೊಂಡಿದ್ದರಿಂದ ಕಿವಿ ಸೋಂಕಿಗೆ ತುತ್ತಾಗಿದ್ದ. ಆದರೆ ಈತನ ಅದೃಷ್ಟ ಚೆನ್ನಾಗಿತ್ತು. ವೈದ್ಯರು ಶ್ರವಣ ಶಕ್ತಿಗೆ ಯಾವುದೇ ಹಾನಿಯಾಗದಂತೆ ಸೋಂಕಿಗೊಳಗಾಗಿದ್ದ ಅಂಗಾಂಶವನ್ನು ತೆಗೆಯುವುದರಲ್ಲಿ ಯಶಸ್ವಿಯಾಗಿದ್ದರು.
ಇವು ಕೇವಲ ಎರಡು ನಿದರ್ಶನಗಳು ಮಾತ್ರ. ಇಯರ್ ಬಡ್‌ಗಳನ್ನು ಕಿವಿಗಳಲ್ಲಿ ಹಾಕಿಕೊಂಡು ಶ್ರವಣ ಶಕ್ತಿಯನ್ನು ಕಳೆದುಕೊಂಡಿರುವ ಹಲವಾರು ಘಟನೆಗಳಿವೆ. ಇಂತಹ ಬಡ್‌ಗಳಿಂದ ಉಂಟಾಗುವ ಕೆಲವು ಸಣ್ಣಪುಟ್ಟ ಗಾಯಗಳು ತಮ್ಮಷ್ಟಕ್ಕೆ ಗುಣವಾಗಬಲ್ಲವು,ಆದರೆ ತೀವ್ರ ಗಾಯಗಳು ಶ್ರವಣ ಶಕ್ತಿಯ ಕಾಯಂ ನಷ್ಟಕ್ಕೆ ಕಾರಣವಾಗಬಹುದು.
ಹತ್ತಿಯ ಇಯರ್ ಬಡ್‌ಗಳು ಕಿವಿಗಳನ್ನು ಸ್ವಚ್ಛಗೊಳಿಸಲು ಸುರಕ್ಷಿತ ಎಂದು ಜನರು ಭಾವಿಸುತ್ತಾರೆ. ಆದರೆ ವಾಸ್ತವ ಹಾಗಿಲ್ಲ. ಕಿವಿಗಳನ್ನು ಸ್ವಚ್ಛಗೊಳಿಸಲು ಹತ್ತಿಯ ಇಯರ್ ಬಡ್‌ಗಳ ಬಳಕೆಯನ್ನು ಯಾವುದೇ ವೈದ್ಯರು ಬೆಂಬಲಿಸುವುದಿಲ್ಲ.
ಹತ್ತಿಯ ಇಯರ್ ಬಡ್‌ಗಳು ಸೇರಿದಂತೆ ಯಾವುದೇ ವಸ್ತುವನ್ನು ಕಿವಿಗಳಲ್ಲಿ ಹಾಕಿಕೊಳ್ಳಬಾರದು. ಕಿವಿಯನ್ನು ಸ್ವಚ್ಛಗೊಳಸಲು ಹತ್ತಿಯ ಇಯರ್ ಬಡ್ ಬಳಕೆಯು ಅನುಕೂಲಕ್ಕಿಂತ ಹೆಚ್ಚು ಅಪಾಯವನ್ನೇ ಮಾಡುತ್ತದೆ ಮತ್ತು ಕಿವಿಯಲ್ಲಿನ ಗುಗ್ಗೆಯನ್ನು ಒಳಕ್ಕೆ ತಳ್ಳುತ್ತದೆ. ಅಲ್ಲದೆ ಈ ಇಯರ್ ಬಡ್‌ಗಳು ಅಥವಾ ಇತರ ಸಾಧನಗಳು ಕಿವಿಯ ತಮಟೆಗೆ ಹಾನಿಯನ್ನುಂಟು ಮಾಡಬಲ್ಲವು, ಸೋಂಕಿಗೆ ಕಾರಣವಾಗಬಲ್ಲವು ಎನ್ನುತ್ತಾರೆ ತಜ್ಞರು.
ಕಿವಿಗಳು ಶರೀರದ ಅತ್ಯಂತ ನಾಜೂಕು ಅಂಗಗಳಾಗಿರುವುದರಿಂದ ಸುಲಭವಾಗಿ ಹಾನಿಗೊಳಗಾಗುತ್ತವೆ,ಹೀ ಗಾಗಿ ಹತ್ತಿಯ ಇಯರ್ ಬಡ್‌ಗಳನ್ನು ಕಿವಿಯಲ್ಲಿ ಹಾಕಬಾರದು. ಕಿವಿಯಲ್ಲಿನ ಗುಗ್ಗೆ ಕೆಟ್ಟದ್ದು ಎನ್ನುವುದು ಜನರ ಸಾಮಾನ್ಯ ಭಾವನೆ. ಹೀಗಾಗಿ ಅದನ್ನು ತೆಗೆಯಲು ಹತ್ತಿಯ ಇಯರ್ ಬಡ್ ಇತ್ಯಾದಿಗಳನ್ನು ಬಳಸುತ್ತಾರೆ. ಆದರೆ ಇದು ಕಿವಿಗೆ ಒಳ್ಳೆಯದಲ್ಲ.
ಗುಗ್ಗೆಯು ಕಿವಿಯ ನಾಲೆಯ ಚರ್ಮವನ್ನು ನಯಗೊಳಿಸಲು ನೆರವಾಗುತ್ತದೆ ಮತ್ತು ಕಿವಿಯಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದನ್ನು ತಡೆಯುತ್ತದೆ. ಆದರೆ ಅತಿಯಾದ ಗುಗ್ಗೆಯು ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಿದ್ದರೂ ಅದನ್ನು ನೀವೇ ತೆಗೆಯಲು ಪ್ರಯತ್ನಿಸಬಾರದು, ಅದು ಅಪಾಯಕಾರಿಯಾಗುತ್ತದೆ. ಇಎನ್‌ಟಿ ತಜ್ಞರನ್ನು ಭೇಟಿಯಾಗುವುದು ಎಲ್ಲ ರೀತಿಯಿಂದಲೂ ಒಳ್ಳೆಯದು.