ಯಾವುದೇ ಕಾರಣಕ್ಕೂ ನಿಮ್ಮ ಶರೀರದ ಈ ಭಾಗಗಳನ್ನು ಸ್ಪರ್ಶಿಸಬೇಡಿ

Update: 2019-08-21 14:06 GMT

ನಾವು ಎಷ್ಟೇ ಬಾರಿ ಕೈಗಳನ್ನು ತೊಳೆದುಕೊಳ್ಳಲಿ,ಅವುಗಳನ್ನು ಸಂಪೂರ್ಣವಾಗಿ ಕೀಟಾಣುಗಳಿಂದ ಮುಕ್ತವಾಗಿಸುವುದು ಸಾಧ್ಯವಿಲ್ಲ. ನಾವು ನಮ್ಮ ಶರೀರದ ಭಾಗಗಳನ್ನು ಹೆಚ್ಚೆಚ್ಚು ಸ್ಪರ್ಶಿಸಿದಷ್ಟೂ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಬರುವುದು ಹೆಚ್ಚಾಗುತ್ತದೆ.

ನಮ್ಮ ಕೈಗಳು ದೈನಂದಿನ ಚಟುವಟಿಕೆಗಳ ವೇಳೆ ಹಲವಾರು ವಸ್ತುಗಳನ್ನು ಸ್ಪರ್ಶಿಸುತ್ತಿರುತ್ತವೆ. ಇದೇ ಕಾರಣದಿಂದ ಹಲವಾರು ಬಾರಿ ಕೈಗಳನ್ನು ತೊಳೆದುಕೊಂಡರೂ,ಸ್ಯಾನಿಟೈಸರ್‌ಗಳನ್ನು ಬಳಸಿದರೂ ಅವು ಕೀಟಾಣುಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುವುದಿಲ್ಲ. ಕೀಟಾಣುಗಳಿಂದ ಸುಲಭವಾಗಿ ಸೋಂಕಿಗೊಳಗಾಗಬಲ್ಲ ಹಲವಾರು ಸೂಕ್ಷ್ಮ ಭಾಗಗಳು ನಮ್ಮ ಶರೀರದಲ್ಲಿವೆ. ಸುಮ್ಮನೆ ಅವುಗಳನ್ನು ಪದೇ ಪದೇ ಸ್ಪರ್ಶಿಸುವುದು ಸೋಂಕು ಉಂಟಾಗಲು ಪ್ರಮುಖ ಕಾರಣವಾಗಬಲ್ಲದು. ಅಂತಹ ಕೆಲವು ಭಾಗಗಳ ಕುರಿತು ಮಾಹಿತಿಯಿಲ್ಲಿದೆ.....

ಮುಖ

ನಮ್ಮ ಚರ್ಮವು ಬಾಹ್ಯ ಕಾರಣಗಳಿಂದ ಸುಲಭವಾಗಿ ಸೋಂಕಿಗೆ ಗುರಿಯಾಗುತ್ತದೆ. ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಕೈಗಳಲ್ಲಿ ತುಂಬಿಕೊಂಡಿರುವುದರಿಂದ ಯಾವುದೇ ಕಾರಣವಿಲ್ಲದೆ ಸುಮ್ಮನೆ ಮುಖವನ್ನು ಮುಟ್ಟಿಕೊಂಡರೂ ಮೊಡವೆ,ಗುಳ್ಳೆಗಳು,ಕಪ್ಪುಕಲೆಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಕುಳಿತುಕೊಂಡಾಗ ಕೈಗಳ ಮೇಲೆ ಮುಖವನ್ನಿರಿಸುವುದು ಹೆಚ್ಚಿನವರ ಸಾಮಾನ್ಯ ಅಭ್ಯಾಸ. ಹಾಗೆ ಮಾಡುವುದು ಆರಾಮವಾಗಿರುತ್ತದೆ ಎಂದು ನೀವೆಂದುಕೊಂಡಿದ್ದರೆ ತಪ್ಪು,ಅದು ಹೆಚ್ಚಿನ ಚರ್ಮದ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಬಹುದು. ನಮ್ಮ ಕೈಗಳಲ್ಲಿ ನೈಸರ್ಗಿಕ ತೈಲವಿರುತ್ತದೆ ಮತ್ತು ಅದು ಮುಖದ ಚರ್ಮದಲ್ಲಿಯ ರಂಧ್ರಗಳನ್ನು ಮುಚ್ಚುತ್ತದೆ. ಇದೇ ಕಾರಣದಿಂದ ಮುಖದಲ್ಲಿ ಮೊಡವೆಯುಂಟಾಗಿದ್ದರೆ ಅದನ್ನು ಅದರಷ್ಟಕ್ಕೇ ಬಿಡಬೇಕೇ ಹೊರತು ಒಡೆಯುವ ಗೋಜಿಗೆ ಹೋಗಬಾರದು,ಹಾಗೆ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಕಣ್ಣು

 ಕಣ್ಣು ನಮ್ಮ ಶರೀರದ ಅತ್ಯಂತ ಸೂಕ್ಷ್ಮ ಭಾಗಗಳಲ್ಲೊಂದಾಗಿದೆ. ಸುಮ್ಮನೆ ಕಣ್ಣಿನಲ್ಲಿ ಗಾಳಿ ಊದಿದರೂ ಅದು ತೊಂದರೆಯನ್ನುಂಟು ಮಾಡಬಲ್ಲದು. ನಾವು ಪದೇ ಪದೇ ಕೈಬೆರಳುಗಳನ್ನು ಕಣ್ಣಿನೊಳಗೆ ತೂರಿಸುತ್ತಿದ್ದರೆ ಅದು ಕೀಟಾಣುಗಳು ಮತ್ತು ಧೂಳು ನೇರವಾಗಿ ಒಳಸೇರಲು ಅವಕಾಶ ನೀಡುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ಧರಿಸಲು ಅಥವಾ ದಿನದ ಕೆಲಸದ ಬಳಿಕ ಕಣ್ಣುಗಳನ್ನು ಸ್ವಚ್ಛಗೊಳಿಸಲು ಇತ್ಯಾದಿಗಾಗಿ ಕಣ್ಣುಗಳನ್ನು ಸ್ಪರ್ಶಿಸುವುದಿದ್ದರೆ ಕೈಗಳನ್ನು ಶುಭ್ರವಾಗಿ ತೊಳೆದುಕೊಂಡೇ ಆ ಕೆಲಸವನ್ನು ಮಾಡಬೇಕು. ಕಣ್ಣುಗಳನ್ನೆಂದೂ ತಿಕ್ಕಬಾರದು,ಹಾಗೆ ಮಾಡುವುದರಿಂದ ಅದು ಸುಕ್ಕುಗಳು ಮತ್ತು ಮುಖದಲ್ಲಿ ಡ್ರೈ ಪ್ಯಾಚ್‌ಗಳಿಗೆ ಕಾರಣವಾಗುತ್ತದೆ. ನಿಮ್ಮ ಕೈಗಳು ಕಣ್ಣುಗಳಿಂದ ದೂರವಿದ್ದಷ್ಟೂ ಅವು ಹೆಚ್ಚು ಸುರಕ್ಷಿತವಾಗಿರುತ್ತವೆ.

ಕಿವಿ

ನಾವು ಆಗಾಗ್ಗೆ ಕಿವಿಗಳಲ್ಲಿ ಬೆರಳು ಹಾಕಿಕೊಂಡು ತಿಕ್ಕಿಕೊಳ್ಳುತ್ತೇವೆ ಮತ್ತು ಅದು ತಕ್ಷಣಕ್ಕೆ ಹಾಯಾದ ಅನುಭವವನ್ನುಂಟು ಮಾಡುತ್ತದೆ. ಆದರೆ ಕಿವಿಗಳಲ್ಲಿ ಬೆರಳು ಹಾಕಿಕೊಳ್ಳುವುದು ಸೋಂಕಿಗೆ ಪ್ರಮುಖ ಕಾರಣವಾಗಬಲ್ಲದು. ಕಿವಿಯ ಒಳಭಾಗವು ಅತ್ಯಂತ ನಾಜೂಕಾಗಿರುತ್ತದೆ ಮತ್ತು ಕೇವಲ ತಿಕ್ಕಿಕೊಳ್ಳುವುದರಿಂದಲೇ ಅದಕ್ಕೆ ಹಾನಿಯಾಗಬಹುದು. ಬೆರಳನ್ನು ಕಿವಿಯೊಳಗೆ ಆಳವಾಗಿ ತುರುಕಿಸುತ್ತೇವೆ ಎಂದರೆ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ನೇರವಾಗಿ ಕಿವಿಯೊಳಗೇ ಸೇರಿಸುತ್ತಿದ್ದೇವೆ ಎಂದೇ ಅರ್ಥ. ಕಿವಿ ಸಂಬಂಧಿತ ಸಮಸ್ಯೆಗಳು ಶಮನಗೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ ಕಿವಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಕಿವಿಯ ಯಾವುದೇ ಸಮಸ್ಯೆಯಿದ್ದರೆ ಅದಕ್ಕೇ ನೀವೇ ಚಿಕಿತ್ಸೆ ಮಾಡುವ ಸಾಹಸ ಬೇಡ,ನೇರವಾಗಿ ವೈದ್ಯರ ಬಳಿಗೆ ತೆರಳಿ.

ಬಾಯಿ

ಸರಾಸರಿ 34ರಿಂದ 72ರಷ್ಟು ವಿವಿಧ ತಳಿಗಳ ಬ್ಯಾಕ್ಟೀರಿಯಾಗಳಿವೆ. ಇವುಗಳಲ್ಲಿ ಕೆಲವು ನಮ್ಮ ಬಾಯಿಯ ಆರೋಗ್ಯಕ್ಕೆ ಲಾಭಕರವಾಗಿದ್ದರೆ,ಹೆಚ್ಚಿನವು ಹಲವಾರು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ. ಬಾಯಿಯಲ್ಲಿ ಕೈ ಹಾಕುವುದು ವಿಷಾಹಾರವನ್ನುಂಟು ಮಾಡುವುದರಿಂದ ಹಿಡಿದು ಹೊಟ್ಟೆಯ ತೊಂದರೆಯವರೆಗೆ ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದೇ ಕಾರಣದಿಂದ ಮಕ್ಕಳು ಬಾಯಿಯಲ್ಲಿ ಕೈ ಹಾಕಿಕೊಳ್ಳುವುದನ್ನು ನಿಲ್ಲಿಸಲು ನಾವು ಪ್ರಯತ್ನಿಸುತ್ತೇವೆ. ಬಾಯಿಯಲ್ಲಿ ಕೈ ಅಥವಾ ಬೆರಳುಗಳನ್ನು ಹಾಕಿಕೊಳ್ಳುವುದರಿಂದ ಅವುಗಳಲ್ಲಿರುವ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಹೊಟ್ಟೆಗೆ ವರ್ಗಾವಣೆಗೊಳ್ಳುತ್ತವೆ.

ಹೊಕ್ಕಳು

 ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ಇರುವುದು ನಮ್ಮ ಹೊಕ್ಕಳಿನಲ್ಲಿ ಮತ್ತು ಅವುಗಳ ನಿರ್ಮೂಲನವೂ ಸುಲಭವಲ್ಲ. ಹೀಗಾಗಿ ಹೊಕ್ಕಳು ನಮ್ಮ ಶರೀರದಲ್ಲಿಯ ಅತ್ಯಂತ ಕೊಳಕು ಭಾಗ ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ. ನೀವು ಗಂಟೆಗಟ್ಟಲೆ ಸಮಯ ಸ್ನಾನ ಮಾಡಿದರೂ ಹೊಕ್ಕಳಿನಲ್ಲಿ ಬ್ಯಾಕ್ಟೀರಿಯಾ ಮತ್ತು ಕೊಳೆಗಳ ರಾಶಿಯೇ ಉಳಿದುಕೊಂಡಿರಬಹುದು. ಹೊಕ್ಕಳಿನ ವಿಲಕ್ಷಣ ಆಕಾರ ಮತ್ತು ಗಾತ್ರದಿಂದಾಗಿ ಅದನ್ನು ಸ್ವಚ್ಛಗೊಳಿಸುವುದು ಅತ್ಯಂತ ಕಷ್ಟದ ಕೆಲಸವಾಗಿರುವದರಿಂದಲೇ ಅದು ಅತ್ಯಂತ ಕೊಳಕು ಭಾಗವೆಂದು ಪರಿಗಣಿಸಲ್ಪಟ್ಟಿದೆ. ಕೊಳೆ ಮತ್ತು ಬ್ಯಾಕ್ಟೀರಿಯಾಗಳಿಂದಾಗಿ ಅದು ಕಟುವಾಸನೆಯನ್ನು ಬೀರುತ್ತದೆ. ಅದನ್ನು ಬೆರಳುಗಳಿಂದ ಸ್ಪರ್ಶಿಸುವುದು ಶರೀರದದಲ್ಲಿ ಹಲವಾರು ಸೋಂಕುಗಳಿಗೆ ಕಾರಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News