ಸೈಲೆಂಟ್ ಹಾರ್ಟ್‌ಅಟ್ಯಾಕ್‌ನ ಈ ಎಚ್ಚರಿಕೆಯ ಸಂಕೇತಗಳು ನಿಮಗೆ ಗೊತ್ತಿರಲಿ

Update: 2019-08-22 13:29 GMT

ಹೃದಯಾಘಾತವು ರೋಗಿಗೆ ಚೇತರಿಸಿಕೊಳ್ಳುವ ಅವಕಾಶವನ್ನು ನೀಡುವುದಿಲ್ಲವಾದ್ದರಿಂದ ಅತ್ಯಂತ ಅಪಾಯಕಾರಿ ಕಾಯಿಲೆ ಎಂದು ಪರಿಗಣಿಸಲ್ಪಟ್ಟಿದೆ. ಹೆಚ್ಚಿನ ಪ್ರಕರಣಗಳಲ್ಲಿ ವ್ಯಕ್ತಿಯು ಕೆಲವೇ ಲಕ್ಷಣಗಳನ್ನು ತೋರಿಸಿ ಮುಂದಿನ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪುತ್ತಾನೆ. ಆದರೆ ಇನ್ನೊಂದು ವಿಧದ ಹೃದಯಾಘಾತವೂ ಇದೆ ಎನ್ನುವುದು ನಿಮಗೆ ಗೊತ್ತೇ? ಹೌದು,ಅದು ಹೃದಯಾಘಾತಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುವ ಸೈಲೆಂಟ್ ಹಾರ್ಟ್ ಅಟ್ಯಾಕ್ ಅಥವಾ ಥಟ್ಟನೆ ಉಂಟಾಗುವ ಹೃದಯಘಾತ. ತೀವ್ರ ಎದೆನೋವು ಹೃದಯಾಘಾತದ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಆದರೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಪ್ರಕರಣದಲ್ಲಿ ವ್ಯಕ್ತಿಯಲ್ಲಿ ಇಂತಹ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯ ಸಮಸ್ಯೆ ಎಂದುಕೊಳ್ಳಬಹುದಾದ ಲಕ್ಷಣಗಳಿರುತ್ತವೆ ಮತ್ತು ರೋಗಿಯು ಅದನ್ನು ಕಡೆಗಣಿಸುತ್ತಾನೆ ಮತ್ತು ದಿಢೀರನೆ ಸಾವನ್ನಪ್ಪುತ್ತಾನೆ.

ಹೃದಯದ ಯಾವುದೇ ಭಾಗದಲ್ಲಿ ರಕ್ತದ ಹರಿವು ಅಸಮರ್ಪಕವಾಗಿದ್ದಾಗ ಹೃದಯದ ಸ್ನಾಯುಗಳು ಸಾಯಲಾರಂಭಿ ಸುತ್ತವೆ ಮತ್ತು ಹೃದಯಾಘಾತವು ಸಂಭವಿಸುತ್ತದೆ. ಹೃದಯಾಘಾತಕ್ಕೆ ಹಲವಾರು ಕಾರಣಗಳಿವೆ ಮತ್ತು ಜೀವನದುದ್ದಕ್ಕೂ ಶರೀರದಲ್ಲಿ ಅಪಾಯವನ್ನು ಹೆಚ್ಚಿಸುತ್ತಲೇ ಇರುತ್ತವೆ ಮತ್ತು ನಮಗೆ ಈ ಬಗ್ಗೆ ಗೊತ್ತೂ ಇರುವುದಿಲ್ಲ.

ಸಾಮಾನ್ಯವಾಗಿ 40-45 ವರ್ಷ ಪ್ರಾಯದಲ್ಲಿ ವ್ಯಕ್ತಿಗೆ ಯಾವುದೇ ರೋಗವಿಲ್ಲದಿದ್ದರೆ ತಾನು ಆರೋಗ್ಯವಂತ ವ್ಯಕ್ತಿ ಎಂದು ಆತ/ಆಕೆ ಭಾವಿಸಿರುತ್ತಾರೆ. ಆದರೆ ಎಚ್ಚರಿಕೆಯಿರಲಿ,45-50 ವರ್ಷದ ಪ್ರಾಯದಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.

ಸೈಲೆಂಟ್ ಹಾರ್ಟ್ ಅಟ್ಯಾಕ್‌ನ್ನು ಅತ್ಯಂತ ಅಪಾಯಕಾರಿ ಸ್ಥಿತಿ ಎಂದು ವೈದ್ಯಕೀಯ ವಿಜ್ಞಾನವು ಪರಿಗಣಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಹೃದಯಾಘಾತಗಳ ಮೊದಲ ಲಕ್ಷಣಗಳು ಎಷ್ಟೊಂದು ಸಾಮಾನ್ಯವಾಗಿರುತ್ತವೆ ಎಂದರೆ ರೋಗಿಯು ಇದೊಂದು ಪ್ರತಿದಿನದ ಸಣ್ಣ ಸಮಸ್ಯೆ ಎಂದು ಭಾವಿಸುತ್ತಾನೆ.

ಸೈಲಂಟ್ ಹಾರ್ಟ್ ಅಟ್ಯಾಕ್‌ನ್ನು ಸಾಮಾನ್ಯವಾಗಿ ನಾಲ್ಕು ಲಕ್ಷಣಗಳು ಸೂಚಿಸುತ್ತವೆ.

ಎದೆಯನ್ನು ಯಾರೋ ಬಲವಾಗಿ ಒತ್ತುತ್ತಿದ್ದಾರೆ ಎಂದು ಅನ್ನಿಸುವಂತೆ ಎದೆಯ ಮಧ್ಯಭಾಗದಲ್ಲಿ ತೀವ್ರ ಚಡಪಡಿಕೆಯು ಭಾಸವಾಗುತ್ತದೆ. ಈ ಲಕ್ಷಣವು ಕೆಲವು ಸಮಯದವರೆಗೆ ಇರಬಹುದು ಅಥವಾ ಕೆಲವೇ ಸೆಕೆಂಡ್‌ಗಳು ಮತ್ತು ನಿಮಿಷಗಳ ಕಾಲ ಅನುಭವವಾಗಬಹುದು.

 

ಭುಜ, ತೋಳು, ಬೆನ್ನು, ಕುತ್ತಿಗೆ, ಹೊಟ್ಟೆ ಮತ್ತು ದವಡೆಗಳಂತಹ ಎದೆಯ ಮೇಲ್ಭಾಗಗಳಲ್ಲಿ ವಿಲಕ್ಷಣ ನೋವಿನಂತಹ ಅಹಿತಕರ ಅನುಭವ. ರೋಗಿಯಲ್ಲಿ ಪ್ರಕ್ಷುಬ್ಧತೆಯ ಭಾವನೆಯೂ ಉಂಟಾಗಬಹುದು.

 

 ಎದೆಯಲ್ಲಿ ಒತ್ತಡದ ಜೊತೆಗೆ ರೋಗಿಗೆ ಉಸಿರಾಟದ ತೊಂದರೆಯು ಉಂಟಾಗುತ್ತದೆ. ತಲೆ ಭಾರವಾಗುವಿಕೆ,ತಲೆ ಸುತ್ತುವಿಕೆ ಮತ್ತು ದಿಢೀರ್ ಆಗಿ ತಣ್ಣಗೆ ಬೆವರುವಿಕೆ ಇವೂ ಕಾಣಿಸಿಕೊಳ್ಳುತ್ತವೆ.

► ಹೃದಯಘಾತ ಉಂಟಾದಾಗ ಏನು ಮಾಡಬೇಕು?

  ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಿಯು ಸೈಲೆಂಟ್ ಹಾರ್ಟ್‌ ಅಟ್ಯಾಕ್‌ನ ಈ ಲಕ್ಷಣಗಳು ಕಂಡು ಬಂದ ಬಳಿಕ ಸಹಜ ಸ್ಥಿತಿಗೆ ಮರಳುತ್ತಾನೆ. ಆದರೆ ಇದು ಎರಡನೇ ಮತ್ತು ಮೂರನೇ ಹೃದಯಾಘಾತ ಶೀಘ್ರವೇ ಉಂಟಾಗಲಿದೆ ಎನ್ನವುದಕ್ಕೆ ಸೂಚನೆಯಾಗಿದೆ ಮತ್ತು ಇವು ಚೇತರಿಕೆಗೆ ಯಾವುದೇ ಅವಕಾಶ ನೀಡುವುದಿಲ್ಲ. ಹೀಗಾಗಿ ಇಂತಹ ಯಾವುದೇ ಲಕ್ಷಣ ಕಂಡುಬಂದರೆ ಸಾಧ್ಯವಾದಷ್ಟು ಶೀಘ್ರ ವೈದ್ಯರನ್ನು ಕಂಡು ಅಗತ್ಯ ಸಲಹೆಗಳನ್ನು ಪಡೆದುಕೊಳ್ಳಿ.

ಹೆಚ್ಚಿನ ಸಂದರ್ಭದಲ್ಲಿ ಈ ದಿಢೀರ್ ಹೃದಯಾಘಾತಗಳಲ್ಲಿ ಎದೆ ನೋವು ಅದೆಷ್ಟು ಸೌಮ್ಯವಾಗಿರುತ್ತದೆ ಎಂದರೆ ವಾಯು ತೊಂದರೆ ಅಥವಾ ಹೊಟ್ಟೆಯ ಸಮಸ್ಯೆ ಎಂದು ರೋಗಿಯು ಭಾವಿಸುತ್ತಾನೆ. ಹೀಗಾಗಿ ಎದೆನೋವಿನೊಂದಿಗೆ ಇತರ ಲಕ್ಷಣಗಳೂ ಕಂಡು ಬಂದಾಗ ತುಂಬ ಎಚ್ಚರಿಕೆ ವಹಿಸಬೇಕು.

ನಿಮ್ಮ ಸಮೀಪದಲ್ಲಿರುವ ವ್ಯಕ್ತಿಯಲ್ಲಿ ದಿಢೀರ್‌ ಎದೆನೋವು ಕಂಡು ಬಂದರೆ ಗಾಬರಿಯಾಗಬೇಕಿಲ್ಲ, ಜೊತೆಗೆ ಇತರ ಲಕ್ಷಣಗಳೂ ಕಂಡು ಬಂದರೆ ಅದು ಹೃದಯಾಘಾತ ಎಂದು ಪರಿಗಣಿಸಬಹುದು.

ಸಹಜ ಹೃದಯಾಘಾತ ಮತ್ತು ಥಟ್ಟನೆ ಉಂಟಾಗುವ ಹೃದಯಾಘಾತಗಳಲ್ಲಿ ಹೆಚ್ಚುತ್ತಿರುವ ಅಪಾಯ ಒಂದೇ ರೀತಿಯದಾಗಿರುತ್ತದೆ. ಬೊಜ್ಜು,ಅಧಿಕ ರಕ್ತದೊತ್ತಡ,ಅಧಿಕ ಕೊಲೆಸ್ಟ್ರಾಲ್ ಮಟ್ಟ ಹಾಗೂ ಮಧುಮೇಹ ಇವುಗಳಿಂದಲೂ ವ್ಯಕ್ತಿಯು ಹೃದಯಾಘಾತದ ಅಪಾಯವನ್ನು ಎದುರಿಸುತ್ತಾನೆ.

ಒಂದೇ ವ್ಯತ್ಯಾಸವೆಂದರೆ ಸೈಲಂಟ್ ಹಾರ್ಟ್ ಅಟ್ಯಾಕ್ ಉಂಟಾದಾಗ ತಾನೇನು ಮಾಡಬೇಕು ಎನ್ನುವುದು ವ್ಯಕ್ತಿಗೆ ಗೊತ್ತಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News