ಮಧುಮೇಹಿಗಳಿಗೆ ಅಗತ್ಸವಾದ ಉಪಯುಕ್ತ ಮಾಹಿತಿ ಇಲ್ಲಿದೆ
ನೀವು ಮಧುಮೇಹಿಯಾಗಿದ್ದರೆ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಹೇಗೆ ಎನ್ನುವುದು ನಿಮಗೆ ತಿಳಿದಿರಬೇಕು. ಕೆಲವು ದಿನಗಳಿಗೊಮ್ಮೆ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಿಳಿದುಕೊಳ್ಳುತ್ತಿರಬೇಕು.
ಮಧುಮೇಹಿಗಳಲ್ಲಿ ಆಗಾಗ್ಗೆ ಬೆಳಿಗ್ಗೆ ಎದ್ದಾಗ (ತಿಂಡಿ ಸೇವಿಸುವ ಮುನ್ನ) ರಕ್ತದಲ್ಲಿಯ ಸಕ್ಕರೆ ಮಟ್ಟ ಹೆಚ್ಚಾಗಿರುತ್ತದೆ. ಇದನ್ನು ಫಾಸ್ಟಿಂಗ್ ಬ್ಲಡ್ ಶುಗರ್ (ಎಫ್‌ಬಿಎಸ್) ಎಂದು ಕರೆಯಲಾಗುತ್ತದೆ. ಆದರೆ ಮಧುಮೇಹ ಇಲ್ಲದವರಲ್ಲಿಯೂ ಬೆಳಗಿನ ಸಮಯ ಎಫ್‌ಬಿಎಸ್ ಹೆಚ್ಚಾಗಿರುತ್ತದೆ. ವ್ಯತ್ಯಾಸವೆಂದರೆ ಮಧುಮೇಹವು ರೋಗಿಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ ಮತ್ತು ಮಧುಮೇಹಿಗಳಲ್ಲದವರಿಗೆ ಯಾವುದೇ ಸಮಸ್ಯೆಯಿಲ್ಲ. ಮಧುಮೇಹಿಗಳ ಶರೀರಕ್ಕೆ ಉತ್ಪಾದನೆಯಾಗುವ ಇನ್ಸುಲಿನ್ ಅನ್ನು ಸೂಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ,ಇದು ಬೆಳಗಿನ ಸಮಯದಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಲು ಕಾರಣವಾಗುತ್ತದೆ ಮತ್ತು ಇದು ಅಪಾಯಕಾರಿಯೂ ಆಗಬಹುದು.
► ಎಫ್‌ಬಿಎಸ್ ಏಕೆ ಹೆಚ್ಚುತ್ತದೆ?
ಸಾಮಾನ್ಯವಾಗಿ ಸಂಜೆಯ ವೇಳೆ ನಮ್ಮ ಶರೀರವು ಸಣ್ಣ ಪ್ರಮಾಣಗಳಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಬೆಳಗಿನ ನಾಲ್ಕು ಗಂಟೆಯಿಂದ ರಾತ್ರಿ ಎಂಟು ಗಂಟೆಯ ನಡುವಿನ ಅವಧಿಯಲ್ಲಿ ಶರೀರದಲ್ಲಿ ಕೆಲವು ಹಾರ್ಮೋನ್‌ಗಳ ಚಟುವಟಿಕೆಗಳು ನಡೆಯುತ್ತಿರುತ್ತವೆ ಮತ್ತು ಇದು ನಾವು ಕೆಲಸ ಮಾಡಲು ಶಕ್ತಿಯನ್ನು ಪಡೆಯಲು ಸಾಧ್ಯವಾಗುವಂತೆ ಶರೀರದಲ್ಲಿ ಗ್ಲುಕೋಸ್‌ನ ಹರಿವನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಕಾರ್ಟಿಸಲ್,ಅಡ್ರೆನಾಲಿನ್,ಗ್ಲುಕಾಗನ್, ಬೆಳವಣಿಗೆಯ ಹಾರ್ಮೋನ್‌ನಂತಹ ಹಲವಾರು ವಿಶೇಷ ಹಾರ್ಮೋನ್‌ಗಳ ಮಟ್ಟ ಹೆಚ್ಚಾಗುತ್ತದೆ ಮತ್ತು ಇದರಿಂದ ಶರೀರವು ಯಕೃತ್ತು ಮತ್ತು ಸ್ನಾಯುಗಳಿಗೆ ಹೆಚ್ಚು ಗ್ಲುಕೋಸ್‌ನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಆದರೆ ಮಧುಮೇಹಿಗಳಲ್ಲಿ ಇನ್ಸುಲಿನ್ ಕೊರತೆಯಿರುತ್ತದೆ,ಇದರಿಂದಾಗಿ ಗ್ಲುಕೋಸ್ ಸ್ನಾಯುಗಳಿಂದ ಹೀರಿಕೊಳ್ಳಲ್ಪಡುವ ಬದಲು ರಕ್ತದಲ್ಲಿ ಕರಗತೊಡಗುತ್ತದೆ. ಇದು ಬೆಳಗಿನ ಸಮಯ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಲು ಕಾರಣವಾಗಿದೆ.
ವಿಶೇಷ ಹಾರ್ಮೋನ್‌ಗಳ ಚಟುವಟಿಕೆಗಳು ಪ್ರತಿ ದಿನ ಈ ಅವಧಿಯಲ್ಲಿಯೇ ಏಕೆ ನಡೆಯುತ್ತವೆ ಎಂದು ನಿಮಗೆ ಅಚ್ಚರಿಯಾಗಿರಬಹುದು. ನಾವೆಲ್ಲರೂ ಸಿರ್ಕಾಡಿಯನ್ ರಿದಂ ಅಥವಾ ಮರುಕಳಿಸುವ ಲಯ ಎಂದು ಕರೆಯಲಾಗುವ ನೈಸರ್ಗಿಕ ಗಡಿಯಾರಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿರುತ್ತೇವೆ. ಶರೀರವು ಹಗಲು ಮತ್ತು ರಾತ್ರಿ ಗಡಿಯಾರಕ್ಕೆ ಅನುಗುಣವಾಗಿ ಹಾರ್ಮೋನ್‌ಗಳ ಹರಿವು ಮತ್ತು ಇತರ ಚಟುವಟಿಕೆಗಳನ್ನು ನಿಗದಿಗೊಳಿಸುತ್ತದೆ.
ಮಧುಮೇಹಿಯಲ್ಲಿ ಬೆಳಗಿನ ಸಮಯ ಹೆಚ್ಚಿನ ಎಫ್‌ಬಿಎಸ್ ಅಥವಾ ಯಾವುದೇ ಸಮಸ್ಯ ಕಂಡುಬಂದರೆ ಅದಕ್ಕೆ ಹಲವಾರು ಕಾರಣಗಳಿರುತ್ತವೆ.
ರಾತ್ರಿ ನಿದ್ರಿಸುವ ಮುನ್ನ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ತೆಗೆದುಕೊಳ್ಳದಿರುವುದು,ವೈದ್ಯರು ರಾತ್ರಿ ತೆಗೆದುಕೊಳ್ಳಲು ಸೂಚಿಸಿರುವ ಔಷಧಿಗಳನ್ನು ಮರೆತುಬಿಡುವುದು,ರಾತ್ರಿ ಅತಿಯಾದ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್‌ಗಳಿರುವ ಆಹಾರ ಸೇವನೆ,ತಡರಾತ್ರಿಗಳಲ್ಲಿ ಹಸಿವಾಯಿತೆಂದು ಏನಾದರೂ ಅನಾರೋಗ್ಯಕರ ತಿಂಡಿ ಸೇವನೆ ಇತ್ಯಾದಿಗಳು ಇಂತಹ ಕಾರಣಗಳಲ್ಲಿ ಸೇರಿವೆ.
► ಎಫ್‌ಬಿಎಸ್ ನಿಯಂತ್ರಣಕ್ಕೆ ಟಿಪ್ಸ್
ರಾತ್ರಿ ಊಟದ ಬಳಿಕ ಒಂದು ಚುರುಕು ನಡಿಗೆಯಲ್ಲಿ ತೊಡಗಿಕೊಂಡರೆ ಬೆಳಿಗ್ಗೆ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ. ರಾತ್ರಿ ವೇಳೆಗಳಲ್ಲಿ ಕಡಿಮೆ ಕಾರ್ಬೊಹೈಡ್ರೇಟ್‌ಗಳಿರುವ ಆಹಾರ ಸೇವನೆ,ಸರಿಯಾದ ಸಮಯದಲ್ಲಿ ವೈದ್ಯರು ಸೂಚಿಸಿರುವ ಔಷಧಿಗಳ ಸೇವನೆಯೂ ಉಪಯುಕ್ತ ಸಲಹೆಗಳಾಗಿವೆ. ರಾತ್ರಿ ಬಹುಬೇಗನೆ ಔಷಧಿಗಳನ್ನು ಸೇವಿಸಬೇಡಿ,ಏಕೆಂದರೆ ಹಾಗೆ ಮಾಡುವುದರಿಂದ ಔಷಧಿಗಳ ಪರಿಣಾಮ ಬೆಳಿಗ್ಗೆ ಕಡಿಮೆಯಾಗಿರುತ್ತದೆ ಮತ್ತು ಎಫ್‌ಬಿಎಸ್ ಹೆಚ್ಚಾಗುತ್ತದೆ.
ತಡರಾತ್ರಿಗಳಲ್ಲಿ ಕುರುಕುಲು ತಿಂಡಿಗಳ ಸೇವನೆಯು ಎಫ್‌ಬಿಎಸ್‌ನ್ನು ಹೆಚ್ಚಿಸುತ್ತದೆ. ಹೀಗಾಗಿ ರಾತ್ರಿ ಹಸಿವೆಯಾದರೆ ಬದಾಮಿನಂತಹ ಬೀಜಗಳು ಅಥವಾ ಚೀಸ್‌ನಂತಹ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸದ ಆಹಾರಗಳನ್ನು ತಿನ್ನಿ.
ಆರು ಗಂಟೆಗೂ ಕಡಿಮೆ ಅವಧಿಯ ನಿದ್ರೆಯು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಲ್ಲದು,ಹೀಗಾಗಿ ರಾತ್ರಿ ಕನಿಷ್ಠ 6ರಿಂದ 8 ಗಂಟೆಗಳ ಕಾಲ ನಿದ್ರೆಯನ್ನು ಮಾಡುವುದು ಅಗತ್ಯವಾಗುತ್ತದೆ.
ಬೆಳಿಗ್ಗೆ ಎಫ್‌ಬಿಎಸ್ ಹೆಚ್ಚಾಗಿದೆ ಎಂದು ಬ್ರೇಕ್‌ಫಾಸ್ಟ್‌ನ್ನು ಬಿಡಬೇಕಿಲ್ಲ,ಏಕೆಂದರೆ ಏನಾದರೂ ಆಹಾರ ಸೇವಿಸಿದರೆ ಹಾರ್ಮೋನ್‌ಗಳ ಪ್ರಕ್ರಿಯೆ ನಿಲ್ಲುತ್ತದೆ.
ರಕ್ತದಲ್ಲಿ ಸಕ್ಕರೆಯ ಮಟ್ಟದ ಏರಿಳಿತಗಳ ಮೇಲೆ ನಿಗಾಯಿರಿಸಲು ಮಧುಮೇಹಿಗಳು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದೂ ಮುಖ್ಯವಾಗಿದೆ.