ಈ ಮೊಬೈಲ್ ಆ್ಯಪ್ ಅಸ್ತಮಾ ಸಮಸ್ಯೆಯನ್ನು ನಿಯಂತ್ರಿಸಲು ನೆರವಾಗುತ್ತದೆ

Update: 2019-09-05 17:33 GMT

ಯುರೋಪಿಯನ್ ರೆಸ್ಪಿರೇಟರಿ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಇತ್ತೀಚಿನ ಅಧ್ಯಯನ ವರದಿಯಂತೆ ಅಸ್ತಮಾ ಸಮಸ್ಯೆಯನ್ನು ನಿಯಂತ್ರಿಸಬಲ್ಲ ಮೊಬೈಲ್ ಆ್ಯಪ್‌ವೊಂದನ್ನು ರೂಪಿಸಲಾಗಿದೆ. ಈ ಆ್ಯಪ್ ಮೊದಲು ವ್ಯಕ್ತಿಯ ಶ್ವಾಸಕೋಶಗಳ ಕಾರ್ಯ ನಿರ್ವಹಣೆಯನ್ನು ಲೆಕ್ಕ ಹಾಕುತ್ತದೆ, ಬಳಿಕ ವೈದ್ಯರಿಂದ ಸೂಚಿತ ಚಿಕಿತ್ಸೆಯ ಬಗ್ಗೆ ಯಂತ್ರಸೃಷ್ಟಿತ ಶಿಫಾರಸಿನ ಮೂಲಕ ಮರುಮಾಹಿತಿಯನ್ನು ನೀಡುತ್ತದೆ.

ಆಗಾಗ್ಗೆ ಅನಿಯಂತ್ರಿತ ಅಸ್ತಮಾಕ್ಕೊಳಗಾಗುವ ವ್ಯಕ್ತಿಗಳು ಅಸ್ತಮಾ ದಾಳಿಗಳು ಅಥವಾ ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ಸೂಕ್ತವಲ್ಲದ ಔಷಧಿಗಳ ಸೇವನೆ ಅಥವಾ ರೋಗದ ಬಗ್ಗೆ ಸಾಕಷ್ಟು ಕಾಳಜಿ ವಹಿಸದಿರುವುದು ಇಂತಹ ಸ್ಥಿತಿಗೆ ಕಾರಣವಾಗುತ್ತದೆ. ಲಕ್ಷಣಗಳು ಮತ್ತು ಶ್ವಾಸಕೋಶಗಳ ಕಾರ್ಯ ನಿರ್ವಹಣೆಯ ಆಧಾರದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಕೆಲಸ ಮಾಡುವ ಚಿಕಿತ್ಸೆ ಹೊಂದಾಣಿಕೆ ಕ್ರಮಾವಳಿ ವ್ಯವಸ್ಥೆಯು ಅನಿಯಂತ್ರಿತ ಅಸ್ತಮಾದ ಸಮಸ್ಯೆಯನ್ನು ನಿರ್ವಹಿಸಲು ನೆರವಾಗುತ್ತದೆ ಎನ್ನುವುದನ್ನು ಸ್ವೀಡನ್‌ನ ಕರೊಲಿಂಸ್ಕಾ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ನಡೆಸಿದ ಅಧ್ಯಯನವು ತೋರಿಸಿದೆ.

ಈ ಆ್ಯಪ್ ಬಳಕೆ ತುಂಬ ಸುಲಭವಾಗಿದೆ.

ಶ್ವಾಸಕೋಶಗಳ ಕಾರ್ಯ ನಿರ್ವಹಣೆಯನ್ನು ಅಳೆಯಲು ಸ್ಮಾರ್ಟ್‌ಫೋನ್‌ನ್ನು ಉಸಿರಾಡಿಸಿದ ಮತ್ತು ಹೊರಕ್ಕೆ ಬಿಟ್ಟ ವಾಯುವಿನ ಪ್ರಮಾಣವನ್ನು ಲೆಕ್ಕ ಹಾಕಲು ಬಳಸುವ ನಿಸ್ತಂತು ಸ್ಪೈರೊಮೀಟರ್‌ಗೆ ಸಂಪರ್ಕಿಸಲಾಗುತ್ತದೆ. ಆ್ಯಪ್ ವ್ಯಕ್ತಿಯ ಉಸಿರಾಟ ಲಕ್ಷಣಗಳನ್ನು ದಾಖಲಿಸಿಕೊಂಡು ,ಬಳಿಕ ಸಾಧ್ಯವಿರುವ ಚಿಕಿತ್ಸೆಯನ್ನು ಸೂಚಿಸಿ ಸ್ವಯಂಚಾಲಿತ ಮರುಮಾಹಿತಿಯನ್ನು ಒದಗಿಸುತ್ತದೆ.

ಈ ಆ್ಯಪ್‌ನ್ನು ‘ ಅಸ್ತಮಾ ಟ್ಯೂನರ್ ’ಎಂದು ಹೆಸರಿಸಲಾಗಿದ್ದು, ಇದು ಅಸ್ತಮಾ-ಕಾಳಜಿ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಶ್ವಾಸಕೋಶ ಕಾರ್ಯ ನಿರ್ವಹಣೆ ಮತ್ತು ಅಸ್ತಮಾ ಲಕ್ಷಣಗಳನ್ನು ವಿಶ್ಲೇಷಿಸುತ್ತದೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಬ್ಯೋರ್ನ್ ನಾರ್ಡ್ಲಂಡ್ ವರದಿಯಲ್ಲಿ ತಿಳಿಸಿದ್ದಾರೆ.

 ಈ ಆ್ಯಪ್‌ನ ಬಳಕೆದಾರರು ಈ ಪ್ರಕ್ರಿಯೆಗೆ ಬಳಸಲಾಗುವ ಇನ್‌ಹೇಲರ್‌ನ ಚಿತ್ರವನ್ನೂ ಪಡೆಯುತ್ತಾರೆ. ರೋಗಿಗೆ ಅಗತ್ಯವಿರುವ ಔಷಧಿಯ ಪ್ರಮಾಣವನ್ನು ಹೆಚ್ಚಿಸಬೇಕೇ ಅಥವಾ ತಗ್ಗಿಸಬೇಕೇ ಅಥವಾ ಯಥಾಸ್ಥಿತಿಯನ್ನು ಮುಂದುವರಿಸಬೇಕೇ ಎನ್ನುವುದು ಸೇರಿದಂತೆ ಇದರೊಂದಿಗೆ ನೀಡಲಾಗಿರುವ ನಿರ್ದೇಶಗಳನ್ನು ಆದ್ಯಂತ ಪಾಲಿಸಬೇಕಾಗುತ್ತದೆ.

ಆ್ಯಪ್‌ನೊಂದಿಗೆ ಸಂಪರ್ಕಿಸಲಾಗಿರುವ ನಿಸ್ತಂತು ಸ್ಪೈರೊಮೀಟರ್‌ನ ಮೂಲಕ ಶ್ವಾಸಕೋಶದ ಕಾರ್ಯ ನಿರ್ವಹಣೆಯನ್ನು ಅಳೆಯಲು ಅಸ್ತಮಾ ಟ್ಯೂನರ್ ಅವಕಾಶ ಕಲ್ಪಿಸುತ್ತದೆ. ಅನಿಯಂತ್ರಿತ ಅಸ್ತಮಾದಿಂದ ನರಳುತ್ತಿದ್ದ ಆರು ವರ್ಷ ಪ್ರಾಯಕ್ಕಿಂತ ಹೆಚ್ಚಿನ 77 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಹದಿಹರೆಯದವರಾಗಿದ್ದರು. ರೋಗದ ಸಾಂಪ್ರದಾಯಿಕ ನಿರ್ವಹಣೆಗೆ ಹೋಲಿಸಿದರೆ ಡಿಜಿಟಲ್ ಸಾಧನವನ್ನು ಬಳಸಿದವರಲ್ಲಿ ಅಸ್ತಮಾ ಲಕ್ಷಣಗಳ ಇಳಿಕೆಯ ಪ್ರಮಾಣ ಹೆಚ್ಚಾಗಿತ್ತು. ಕನಿಷ್ಠ ವಾರಕ್ಕೊಮ್ಮೆ ಡಿಜಿಟಲ್ ಸಾಧನವನ್ನು ಬಳಸಿದ್ದ ವಯಸ್ಕರೂ ತಮ್ಮ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದರು ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News