ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೆ ಮಲ್ಲಿಗೆ ಹೂ

Update: 2019-09-08 18:35 GMT

ನಮ್ಮ ಕನ್ನಡಿಗರ ದೃಷ್ಟಿಯಲ್ಲಿ ಒಂದು ಭೂ ಪ್ರದೇಶ ಮಾತ್ರವಲ್ಲ ಇಡೀ ಕರ್ನಾಟಕವೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಾದಾರ ಚೆನ್ನಯ್ಯನ ಕರ್ನಾಟಕ, ಟಿಪ್ಪು ಸುಲ್ತಾನರ ಕರ್ನಾಟಕ, ಕುವೆಂಪು ಕರ್ನಾಟಕ, ಬೇಂದ್ರೆ ಕರ್ನಾಟಕ, ಈ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಜಾತಿ, ಧರ್ಮದ ಬಣ್ಣ ಬಳಿಯಬೇಡಿ.


ಇತ್ತೀಚಿನ ಪ್ರವಾಹ ಮತ್ತು ಕೆಲವೆಡೆ ಸುರಿದ ವರ್ಷಧಾರೆಯಿಂದ ಉತ್ತರ ಕರ್ನಾಟಕದ ಜನರ ಬದುಕು ಮೂರಾಬಟ್ಟೆಯಾಗಿದೆ . ಅನೇಕ ವರ್ಷಗಳಿಂದ ಮೈ ಬಗ್ಗಿಸಿ, ರಕ್ತ ನೀರು ಮಾಡಿಕೊಂಡು ಕಟ್ಟಿಕೊಂಡ ಬದುಕು ಛಿದ್ರ, ಛಿದ್ರವಾಗಿದೆ. ಕೇಂದ್ರ ಸರಕಾರ ಒಂದು ಪೈಸೆ ಹಣವನ್ನೂ ಬಿಡುಗಡೆ ಮಾಡಿಲ್ಲ. ರಾಜ್ಯ ಸರಕಾರ ಬಿಡುಗಡೆ ಮಾಡಿದ್ದಾಗಿ ಹೇಳುವ ನೆರವು ಜನರಿಗೆ ತಲುಪಿಲ್ಲ. ಜನ ಹೀಗೆ ಬೀದಿಗೆ ಬಿದ್ದಾಗ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ದಿಢೀರನೇ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದೆ. ಈ ಬಗ್ಗೆ ಚಂಪಾ ಒಬ್ಬರನ್ನು ಬಿಟ್ಟರೆ ಯಾವ ಪ್ರಗತಿಪರರೂ ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ಈ ಬಗ್ಗೆ ನಾಡಿನ ಹಿರಿಯ ಲೇಖಕ ಚಂದ್ರಶೇಖರ ಪಾಟೀಲರು ಪ್ರತಿಕ್ರಿಯೆ ವ್ಯಕ್ತಪಡಿಸಿ ರಾಜ್ಯದ ನಾನಾ ಪ್ರದೇಶಗಳಿಗೆ ಧರ್ಮದ ವಾಸನೆಯ ಹೆಸರು ಇರಬಾರದು ಎನ್ನುವುದು ನಾನು ಮೊದಲಿನಿಂದ ತಾಳಿರುವ ನಿಲುವು, ಅದರ ಬದಲಾಗಿ ಉತ್ತರ ಕರ್ನಾಟಕ, ಈಶಾನ್ಯ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಗುರುತಿಸುವುದು ಸೂಕ್ತ, ಈಗಿನದು ಅಸಹಜ ಬೆಳವಣಿಗೆ ಎಂದು ಹೇಳಿದ್ದಾರೆ.

ಕರ್ನಾಟಕ ಏಕೀಕರಣಕ್ಕೆ ಮುಂಚೆ ಮುಂಬೈ ಪ್ರಾಂತದಲ್ಲಿದ್ದ ಪ್ರದೇಶಗಳನ್ನು ಮುಂಬೈ ಕರ್ನಾಟಕ ಎಂದು ಕರೆಯುವುದು ಹಾಗೂ ಹೈದರಾಬಾದ್ ಕರ್ನಾಟಕದಲ್ಲಿದ್ದ ಜಿಲ್ಲೆಗಳನ್ನು ಹೈದರಾಬಾದ್ ಕರ್ನಾಟಕ ಎಂದು ಕರೆಯುವುದು ಅನಧಿಕೃತವಾಗಿ ನಡೆದುಕೊಂಡು ಬಂದಿದೆ.ಅವಿಭಜಿತ ಧಾರವಾಡ, ಬಿಜಾಪುರ, ಬೆಳಗಾವಿ, ಕಾರವಾರ ಜಿಲ್ಲೆಗಳನ್ನು ಮುಂಬೈ ಕರ್ನಾಟಕ ಎಂದೂ ಅವಿಭಜಿತ ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಜಿಲ್ಲೆಗಳನ್ನು ಹೈದರಾಬಾದ್ ಕರ್ನಾಟಕ ಪ್ರದೇಶವೆಂದೂ ಕರೆಯಲಾಗುತ್ತದೆ. ಉತ್ತರ ಕರ್ನಾಟಕದ ಜನರೇನೂ ತಮ್ಮ ಪ್ರದೇಶದ ಹೆಸರನ್ನು ಬದಲಿಸಲು ಕೇಳಿರಲಿಲ್ಲ. ಅವರು ಕೇಳುತ್ತಿರುವುದು ಅಭಿವೃದ್ಧಿ ಯೋಜನೆಗಳಲ್ಲಿನ ಅಸಮತೋಲನವನ್ನು ಸರಿಪಡಿಸಬೇಕೆಂದು ಮಾತ್ರ. ಹೆಸರು ಬದಲಿಸಿದ ಮಾತ್ರಕ್ಕೆ ಆ ಹಿಂದುಳಿದ ಪ್ರದೇಶ ಒಮ್ಮಿಂದೊಮ್ಮೆಲೆ ಭೂಲೋಕದ ಸ್ವರ್ಗವಾಗುವುದಿಲ್ಲ. ಅವರ ಬವಣೆ ನಿವಾರಣೆಯಾಗುವುದಿಲ್ಲ. ಈ ಕಲ್ಯಾಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಎಂಬ ಹೆಸರಿನ ಪ್ರಸ್ತಾವನೆ ಮೊದಲು ಒಡಮೂಡಿದ್ದು ಸಾಹಿತಿ, ಸಂಶೋಧಕ ಚಿದಾನಂದಮೂರ್ತಿ ಅವರ ತಲೆಯಲ್ಲಿ. ಅವರು ಸರಕಾರದ ಮುಂದೆ ಈ ಬೇಡಿಕೆ ಮಂಡಿಸುತ್ತಲೇ ಬಂದಿದ್ದರು. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸರಿಯಾದ ಪುನರ್ವಸತಿ ಕಲ್ಪಿಸಲಾಗದ ಬಿಜೆಪಿ ಸರಕಾರಕ್ಕೆ ಇದೇ ಬೇಕಾಗಿತ್ತು. ದಿಢೀರ್ ಎಂದು ಹೆಸರು ಬದಲಾವಣೆ ಮಾಡಿತು.

ಉತ್ತರ ಕರ್ನಾಟಕದ ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದಂತೆ ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಹೆಸರಿಡುವ ಪ್ರಸ್ತಾವನೆಯೂ ಬಿಜೆಪಿ ಸರಕಾರದ ಮುಂದಿದೆ. ಆ ಭಾಗವೂ ಮರು ನಾಮಕರಣ ಮಾಡಲ್ಪಡಬಹುದು.ಹಾಗಾದರೆ ಹಳೆ ಮೈಸೂರಿನ ಪ್ರದೇಶಗಳಿಗೆ ಯಾವ ಹೆಸರಿಡುತ್ತೀರಿ ಯಡಿಯೂರಪ್ಪನವರೇ. ಆ ಭಾಗಕ್ಕೆ ಮೈಸೂರು ಹುಲಿ ಟಿಪ್ಪುಸುಲ್ತಾನನ ಹೆಸರನ್ನು ಇಡುತ್ತೀರಾ, ಕರ್ನಾಟಕಕ್ಕೆ ರೇಷ್ಮೆಯನ್ನು ತಂದ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಸಿಂಹಸ್ವಪ್ನನಾಗಿದ್ದ ಟಿಪ್ಪು ಸುಲ್ತಾನನ ನೆನಪಿಗೆ ಟಿಪ್ಪು ಕರ್ನಾಟಕ ಎಂದು ಏಕೆ ಹೆಸರಿಡಬಾರದು. ಕಲ್ಯಾಣ ಕರ್ನಾಟಕದ ನಾಮಕರಣದಲ್ಲಿ ಧರ್ಮದ ಜಾತಿಯ ವಾಸನೆ ಇಲ್ಲವೆಂದಾದರೆ ಹಳೆಯ ಮೈಸೂರು ಭಾಗಕ್ಕೆ ಟಿಪ್ಪು ಕರ್ನಾಟಕ ಎಂದು ನಾಮಕರಣ ಮಾಡಿ ಆಗ ನಿಮ್ಮ ಪ್ರಾಮಾಣಿಕತೆಯ ಬಗ್ಗೆ ನಂಬಿಕೆ ಬರುತ್ತದೆ.

ಹನ್ನೆರಡನೇ ಶತಮಾನದಲ್ಲಿ ವರ್ಣಾಶ್ರಮ ಧರ್ಮಕ್ಕೆ ಬಲವಾದ ಏಟು ಕೊಟ್ಟ ಬಸವಣ್ಣನವರ ಬಗ್ಗೆ, ವಚನ ಚಳವಳಿಯ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ. ಈ ಸಾಮಾಜಿಕ ವಿಪ್ಲವ ಕಲ್ಯಾಣದಲ್ಲಿ ನಡೆಯಿತು. ಅದನ್ನು ಈಗ ಬಸವ ಕಲ್ಯಾಣ ಎಂದು ಕರೆಯಲಾಗುತ್ತದೆ. ಇದೆಲ್ಲ ಸರಿ, ಆದರೆ ಇಡೀ ಪ್ರದೇಶಕ್ಕೆ ಆ ಹೆಸರು ಇಡುವುದು ಎಷ್ಟು ಸೂಕ್ತ? ಬಸವಣ್ಣನವರ ಕ್ರಾಂತಿ ಜಾತಿಯ ಅಡ್ಡಗೋಡೆಗಳನ್ನು ಕೆಡವಿದ್ದು ಅದಕ್ಕಾಗಿ ಶರಣರು ಭಾರೀ ಬೆಲೆ ತೆತ್ತಿದ್ದು ನಿಜ. ಆದರೆ ಈಗ ಕಲ್ಯಾಣ ಕ್ರಾಂತಿಯ ಸಂಕೇತವಾಗದೇ ಅದಕ್ಕೆ ಧರ್ಮದ ಲೇಪನವನ್ನು ಹಚ್ಚಲಾಗಿದೆ. ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ’ ಎಂದು ಹೇಳಿದ ಬಸವಣ್ಣನವರನ್ನೇ ಜಾತಿಯ ನಾಲ್ಕು ಗೋಡೆಗಳ ನಡುವೆ ಬಂಧಿಸಿಡಲಾಗಿದೆ. ಬರೀ ಜಾತಿಯ ಹೆಸರಿನಲ್ಲಿ ಸರಕಾರದ ಸವಲತ್ತುಗಳನ್ನು ಹಾಗೂ ವೋಟುಗಳನ್ನು ಪಡೆಯಲು ಮಾತ್ರ ಬಸವಣ್ಣನವರ ಹೆಸರು ಬಳಕೆಯಾಗುತ್ತಿದೆ. ಈ ಕಲ್ಯಾಣ ಕರ್ನಾಟಕ ನಾಮಕರಣ ಉದ್ದೇಶದಲ್ಲಿ ಕೂಡ ರಾಜಕೀಯ ವಾಸನೆ ಮೂಗಿಗೆ ರಾಚುತ್ತದೆ.

ಉತ್ತರ ಕರ್ನಾಟಕವೆಂದರೆ ಬಹಳ ವೈವಿಧ್ಯಮಯ ಭೂ ಪ್ರದೇಶ, ಅಲ್ಲಿ ಎಲ್ಲ ಜಾತಿ, ಜನಾಂಗ, ಧರ್ಮಗಳಿಗೆ ಸೇರಿದ ಜನರಿದ್ದಾರೆ. ಕಲ್ಯಾಣ, ಕಿತ್ತೂರು ಮಾತ್ರವಲ್ಲ ಬಾದಾಮಿಯ ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ, ರಾಷ್ಟ್ರಕೂಟರು ತಮ್ಮ ನೆಲೆಯಾಗಿಸಿಕೊಂಡಿದ್ದ ಕಲಬುರಗಿ ಜಿಲ್ಲೆಯ ಮಳಖೇಡ, ಹಂಪಿಯ ವಿಜಯ ನಗರ ಸಾಮ್ರಾಜ್ಯ, ಆದಿಲ್‌ಶಾಹಿಗಳು ಆಳಿದ ಬಿಜಾಪುರ, ಬಹಮನಿ ರಾಜರ ರಾಜರು ಆಳಿದ ಬೀದರ್, ಕವಿ ಸರ್ವಜ್ಞ, ಕವಿಗಳಾದ ಪಂಪ, ರನ್ನ, ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿರಾಯಣ್ಣ, ಸೂಫಿ ಸಂತ ಶಿಶುನಾಳ ಶರೀಫರು, ಹುಬ್ಬಳ್ಳಿಯ ಸಿದ್ದಾರೂಢರು, ಕಡಕೋಳ ಮಡಿವಾಳಪ್ಪ, ಕೊಡೆಕಲ್ ಬಸವಣ್ಣ, ತಿಂತಣಿ ಮೌನೇಶ್ವರ ಹೀಗೆ ಈ ಭಾಗದ ಅಸ್ಮಿತೆಗಳನ್ನು ಹುಡುಕುತ್ತ ಹೊರಟರೆ ದೊಡ್ಡ ಇತಿಹಾಸವೇ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

 ಇಷ್ಟೊಂದು ವೈವಿಧ್ಯಮಯ ಪ್ರದೇಶವನ್ನು ಯಾವುದೇ ಧರ್ಮದ ಐಡೆಂಟಿಟಿಗೆ ಕಟ್ಟಿ ಹಾಕುವುದು ತಕ್ಷಣದ ರಾಜಕೀಯ ಲಾಭದ ದೃಷ್ಟಿಯಿಂದ ಅನುಕೂಲವಾಗಬಹುದು, ಆದರೆ ಆಡಳಿತಗಾರರಿಗೆ ದೂರದೃಷ್ಟಿ ಇರಬೇಕು. ಈಗ ವೋಟ್ ಬ್ಯಾಂಕ್‌ಗಾಗಿ ನೀವು ಹೆಸರು ಬದಲಾವಣೆ ಮಾಡಿದರೆ ನಾಳೆ ಉಳಿದವರು ತಮ್ಮ ಅಸ್ಮಿತೆಯನ್ನು ಬಿಂಬಿಸುವ ಬೇಡಿಕೆಯನ್ನು ಮುಂದಿಡುತ್ತಾರೆ. ಕಲ್ಯಾಣ ಕರ್ನಾಟಕ ಎಂದಾದರೆ ಕಾಗಿನೆಲೆ ಏಕೆ ಬೇಡ ಅದು ಕನಕದಾಸರ ನೆಲೆಯಲ್ಲವೇ? ಹೀಗೆ ಒಂದೊಂದಾಗಿ ಧ್ವನಿಗಳು ಪ್ರತಿಧ್ವನಿಸುತ್ತವೆ.

ಈ ಬಾರಿ ಮಳೆ ಮತ್ತು ಪ್ರವಾಹ ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ, ಬಾಗಲಕೋಟೆ, ಯಾದಗಿರಿ ಮುಂತಾದ ಜಿಲ್ಲೆಗಳ ಪಾಲಿಗೆ ಜಲಪ್ರಳಯದ ರೂಪದಲ್ಲಿ ವಕ್ಕರಿಸಿ ಬದುಕನ್ನೇ ಚಿಂದಿ ಮಾಡಿದೆ.ಸಾವಯವ ಜನ ತಾತ್ಕಾಲಿಕ ಟೆಂಟು ಮತ್ತು ಸಮುದಾಯ ಭವನಗಳಲ್ಲಿ ಇದ್ದಾರೆ. ಅಲ್ಲಿ ಶೌಚಾಲಯ ವ್ಯವಸ್ಥೆಯಾಗಲಿ, ಸ್ನಾನದ ವ್ಯವಸ್ಥೆಯಾಗಲಿ ಇಲ್ಲ. ಸಂತ್ರಸ್ತರ ಹೆಣ್ಣು ಮಕ್ಕಳ ಸಂಕಟ, ಯಾತನೆ ಅಸಹನೀಯ ವಾಗಿದೆ. ನಿಮ್ಮ ಪರಿಹಾರ ಅವರು ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಸಾಕಾಗುವುದಿಲ್ಲ, ಗಳಿಸಿದ್ದೆಲ್ಲ ಹೊಳೆಯ ಪಾಲಾಗಿದೆ. ಮಕ್ಕಳ ಮದುವೆಗೆ ಸಿದ್ಧತೆ ಮಾಡಿಕೊಂಡವರು, ಶಾಲೆಗೆ ಹೋಗುವ ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರು, ವಯೋವೃದ್ಧರು ಎಲ್ಲ ಬೀದಿಗೆ ಎಸೆಯಲ್ಪಟ್ಟಿದ್ದಾರೆ. ಮೊದಲು ಆ ಜನರ ಬದುಕನ್ನು ಕಲ್ಯಾಣ ಮಾಡಿ ನಂತರ ಕಲ್ಯಾಣ ಕರ್ನಾಟಕ ಎಂದು ಹೆಸರಿಡಿ.

 ಬಸವಣ್ಣ, ಅಲ್ಲಮಪ್ರಭು, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ನಿಮಗೆ ಓಟಿನ ರಾಜಕಾರಣಕ್ಕೆ ಬೇಕಾಗಿರಬಹುದು ಆದರೆ ನಮಗೆ ಜಾತಿರಹಿತ ಮತ್ತು, ವರ್ಗರಹಿತ ಸಮಾಜ ಕಟ್ಟಲು ಹೊರಟವರಿಗೆ ಆ ಮಹಾ ಚೇತನಗಳು ಬೆಳಕು ನೀಡುವ ಸೂರ್ಯನಿಗೂ ಮಿಗಿಲಾದ ನಂದಾ ದೀಪಗಳು. ನಿಮ್ಮ ಆಪರೇಶನ್ ಕಮಲದ ಹೊಲಸು ರಾಜಕಾರಣಕ್ಕೆ ಇವರನ್ನು ಬಳಸಿಕೊಳ್ಳಬೇಡಿ.

ನಮ್ಮ ಕನ್ನಡಿಗರ ದೃಷ್ಟಿಯಲ್ಲಿ ಒಂದು ಭೂ ಪ್ರದೇಶ ಮಾತ್ರವಲ್ಲ ಇಡೀ ಕರ್ನಾಟಕವೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಾದಾರ ಚೆನ್ನಯ್ಯನ ಕರ್ನಾಟಕ, ಟಿಪ್ಪು ಸುಲ್ತಾನರ ಕರ್ನಾಟಕ, ಕುವೆಂಪು ಕರ್ನಾಟಕ, ಬೇಂದ್ರೆ ಕರ್ನಾಟಕ, ಈ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಜಾತಿ, ಧರ್ಮದ ಬಣ್ಣ ಬಳಿಯಬೇಡಿ.

ನಿಮ್ಮ ಮನು, ನಿಮ್ಮ ಸಾವರ್ಕರ್, ನಿಮ್ಮ ಗೋಡ್ಸೆಯನ್ನು ನೀವಿಟ್ಟು ಕೊಳ್ಳಿ, ನಮ್ಮ ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಕಿತ್ತೂರು ಚೆನ್ನಮ್ಮ, ಶಿಶುನಾಳ ಶರೀಫ ಮತ್ತು ಗೋವಿಂದ ಭಟ್ಟರ ತಂಟೆಗೆ ಬರಬೇಡಿ

ಚಂಪಾ ಅವರ ಸಲಹೆಯಂತೆ ಕರ್ನಾಟಕದ ಆಡಳಿತ ಅನುಕೂಲಕ್ಕಾಗಿ ಉತ್ತರ ಕರ್ನಾಟಕ, ಈಶಾನ್ಯ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಕರೆದರೆ ಸಾಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News