ನಕ್ಸಲ್ ಮುಖ್ಯವಾಹಿನಿ ಪರಿಹಾರ: ಬಿಜೆಪಿ ಶಾಸಕರ ಗೊಂದಲಗಳು

Update: 2025-01-09 09:53 GMT

ಆರು ಮಂದಿ ನಕ್ಸಲರು ಬುಧವಾರ ಮುಖ್ಯಮಂತ್ರಿಯ ಗೃಹ ಕಚೇರಿಯಲ್ಲಿ ರಾಜ್ಯ ಸರಕಾರದ ಮುಂದೆ ಶರಣಾದರು.

 ಕಾರ್ಕಳ ಶಾಸಕ ಸುನೀಲ್ ಕುಮಾರ್ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ನಕ್ಸಲ್ ಪ್ಯಾಕೇಜ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾತನಾಡುತ್ತಿದ್ದಾರೋ, ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ದದ ಆಕ್ರೋಶ ಹೊರ ಹಾಕುತ್ತಿದ್ದಾರೋ ಎಂಬ ಗೊಂದಲ ಶುರುವಾಗಿದೆ.

ನಕ್ಸಲ್ ಹೋರಾಟಗಾರರ ಜೊತೆ ಶಾಂತಿ ಮಾತುಕತೆ ಮಾಡಬೇಕು ಎನ್ನುವುದು ಕೇಂದ್ರ ಗೃಹ ಸಚಿವಾಲಯದ ಯೋಜನೆ. ದೇಶವನ್ನು ನಕ್ಸಲ್ ಮುಕ್ತಗೊಳಿಸಬೇಕು ಎನ್ನುವ ದೃಷ್ಟಿಯಲ್ಲಿ ಅಮಿತ್ ಶಾ ನೇತೃತ್ವದ ಭಾರತ ಸರಕಾರದ ಗೃಹ ಸಚಿವಾಲಯವೂ 'ಶಾಂತಿ ಮಾತುಕತೆ'ಯನ್ನೂ, ನಕ್ಸಲ್ ಪ್ಯಾಕೇಜುಗಳನ್ನು ಆಗಾಗ ರಾಜ್ಯಗಳಿಗೆ ನೆನಪು ಮಾಡುತ್ತದೆ.

ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು Left Wing Extremist (LWE) ಸಕ್ರಿಯವಾಗಿರುವ ರಾಜ್ಯಗಳನ್ನು ಪಟ್ಟಿ ಮಾಡಿದೆ. ಈ ರೀತಿಯ ಪಟ್ಟಿಯಲ್ಲಿ ಕರ್ನಾಟಕ ಸರಕಾರವೂ ಇದೆ. ಕರ್ನಾಟಕ ಸರಕಾರಕ್ಕೆ ಕೇಂದ್ರ ಗೃಹ ಸಚಿವಾಲಯವು ಆಗಾಗ ಸುತ್ತೋಲೆ ಕಳುಹಿಸಿ ನಕ್ಸಲ್ ನಿಗ್ರಹಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸ್ಪಷ್ಟನೆ ಕೇಳುತ್ತಿರುತ್ತಾರೆ.

ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ನಕ್ಸಲ್ ನಿಗ್ರಹಕ್ಕೆ ಹಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಪೊಲೀಸ್ ಇಲಾಖೆಯ ಬಲವರ್ಧನೆ, ತಾಂತ್ರಿಕ ಬಳಕೆಗಳೂ ಸೇರಿದಂತೆ ಹಲವಾರು ಸೂಚನೆಗಳನ್ನು ರಾಜ್ಯಗಳಿಗೆ ಕೇಂದ್ರ ನೀಡಿದೆ. ಆ ಪೈಕಿ ಪ್ರಮುಖವಾಗಿರುವುದು ನಕ್ಸಲರ ಜೊತೆ ರಾಜ್ಯ ಸರಕಾರಗಳ ಮಾತುಕತೆ !

ಕೇಂದ್ರ ಗೃಹ ಸಚಿವಾಲಯದ SRE Scheme ನಲ್ಲಿ ಪ್ರಮುಖ ಸೂಚನೆ ಏನೆಂದರೆ 'rehabilitation of surrendered left wing extremist' ಎನ್ನುವುದಾಗಿದೆ. ಇದರ ಅರ್ಥ, ಶರಣಾಗುವ ನಕ್ಸಲರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಎನ್ನುವುದಾಗಿದೆ. ಪುನವರ್ಸತಿ ಎಂದರೆ ಪರಿಹಾರಧನ, ವಸತಿ, ಉದ್ಯೋಗ ಎಂದರ್ಥ.

ಮುಖ್ಯವಾಹಿನಿಗೆ ಬಂದಿರುವ ನಕ್ಸಲರಿಗೆ ಸಿದ್ದರಾಮಯ್ಯ ಸರಕಾರ ಪರಿಹಾರದ ಹಣ ಕೊಡುವುದಕ್ಕೆ ಶಾಸಕ ಸುನೀಲ್ ಕುಮಾರ್ ಕಾರ್ಕಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಇಲಾಖೆಯು ನಕ್ಸಲ್ ಪ್ಯಾಕೇಜ್ ಬಗ್ಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಕೇಂದ್ರದ ಮಾರ್ಗದರ್ಶಿ ಸೂತ್ರ 5(3) ಏನು ಹೇಳುತ್ತದೆ ಎಂದರೆ 'ಶರಣಾಗತಿ ಆದ ನಕ್ಸಲರಿಗೆ ಸರಕಾರಿ ಉದ್ಯೋಗ ನೀಡುವುದಾದರೆ ಪರಿಹಾರವನ್ನು ಹಣದ ರೂಪದಲ್ಲಿ ಪಾವತಿಸಬೇಕಿಲ್ಲ' ಎನ್ನುತ್ತದೆ. ಹಾಗಾಗಿ ಸುನೀಲ್ ಕುಮಾರ್ ಅವರು ಶರಣಾಗತಿಯಾದ ನಕ್ಸಲರಿಗೆ ರಾಜ್ಯ ಸರಕಾರವು ಸರಕಾರಿ ಉದ್ಯೋಗ ನೀಡಿ ಎಂದು ಒತ್ತಾಯಿಸುತ್ತಿದ್ದಾರೆಯೇ ? ಇದು ಹೌದಾದರೆ, ಸುನೀಲ್ ಕುಮಾರ್ ಅವರ ಬೇಡಿಕೆ ಸ್ವಾಗತಾರ್ಹವಾಗಿದೆ.

ಶಾಸಕ ಸುನೀಲ್ ಕುಮಾರ್ ಅವರ ಇನ್ನೊಂದು ಗಂಭೀರ ಆಕ್ಷೇಪ ಇರುವುದು 'ನಕ್ಸಲರ ಕೇಸ್ ಹಿಂಪಡೆಯುವ ರಾಜ್ಯ ಸರಕಾರದ ಕ್ರಮ ಮತ್ತು ನಕ್ಸಲರಿಗೆ ವಕೀಲರನ್ನು ಸರಕಾರವೇ ನೇಮಿಸುವ ಕ್ರಮ'ದ ಬಗ್ಗೆ ! ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯ ನೀಡಿರುವ ನಕ್ಸಲ್ ಶರಣಾಗತಿ ಮಾರ್ಗದರ್ಶಿ ಸೂಚನೆಯು ಈ ಬಗ್ಗೆ ಸ್ಪಷ್ಟನೆ ನೀಡುತ್ತದೆ. ಕೇಂದ್ರ ಮಾರ್ಗದರ್ಶಿ ಸೂತ್ರ 7ರ ಪ್ರಕಾರ "ನಕ್ಸಲ್ ಶರಣಾಗತಿ ನೀತಿಯ ಪ್ರಕಾರ ನಕ್ಸಲರ ಸಣ್ಣಪುಟ್ಟ ಅಪರಾಧಗಳನ್ನು ರದ್ದು ಮಾಡಲು ಸರಕಾರ ಮನವಿ ಮಾಡಬಹುದು. ಶರಣಾಗತಿ ನೀತಿಗಳ ಪ್ರಕಾರ ಶರಣಾದ ನಕ್ಸಲರಿಗೆ ರಾಜ್ಯ ಸರಕಾರವು ಉಚಿತ ಕಾನೂನು ಸೇವೆ/ ವಕೀಲರ ಒದಗಿಸುವಿಕೆಗಳನ್ನು ಮಾಡಬೇಕು. ರಾಜ್ಯ ಸರಕಾರವು ಶರಣಾದ ನಕ್ಸಲರ ಪ್ರಕರಣಗಳ ತ್ವರಿತ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಬೇಕು" ಎಂದು ಕೇಂದ್ರ ಗೃಹ ಇಲಾಖೆ ಹೇಳುತ್ತದೆ.

ಹಾಗಾಗಿ, ಬಿಜೆಪಿಯ ಶಾಸಕರು ರಾಜ್ಯಾಂಗ ಸಂಪ್ರದಾಯದ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು. ನಕ್ಸಲ್ ಚಳವಳಿ, ಎಡಪಂಥೀಯ ಚಳವಳಿ ಬಗ್ಗೆ ಬಿಜೆಪಿ ಮತ್ತು ಹಿಂದುತ್ವವಾದಿಗಳಿಗೆ ತಕರಾರು ಇರಬಹುದು. ಅದು ಅವರ ಸ್ವಾತಂತ್ರ್ಯ. ಹಾಗಂತ ಅವರ ದ್ವೇಷವನ್ನು ಹಕ್ಕುಗಳ ಮೇಲೆ ಹೇರಲಾಗುವುದಿಲ್ಲ. ಎಡ ತೀವ್ರವಾದಿ ಗುಂಪು ಎನ್ನುವುದು ಭಾರತದಲ್ಲಿ ನಿಷೇಧವಾಗಿದ್ದರೂ ಅದು ರಾಜಕೀಯ ಹೋರಾಟ ಎಂಬುದು ವಾಸ್ತವ. ಈ ಬಗ್ಗೆ ಒಕ್ಕೂಟ ಸರಕಾರ ತನ್ನ ನಿಲುವು ಪ್ರಕಟಿಸಿದೆ. ರಾಜ್ಯ ಸರಕಾರಗಳೂ ಅದನ್ನು ಅನುಸರಿಸಬೇಕು. ಸಿದ್ದರಾಮಯ್ಯ ಸರಕಾರ ಮತ್ತು ಕರ್ನಾಟಕದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆಗಳು ಈ ಆಶಯವನ್ನು ಶೀಘ್ರ ಜಾರಿ ಮಾಡಿದವು. ಇದು ಅಭಿನಂದನಾರ್ಹ ವಿಷಯವೇ ಹೊರತು ಅಪಸ್ವರ ಎತ್ತುವಂತಹ ವಿಚಾರವಲ್ಲ ಎಂಬುದು ಬಿಜೆಪಿಗೆ ಅರ್ಥವಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ನವೀನ್ ಸೂರಿಂಜೆ

contributor

Similar News