ಬರಹದಲ್ಲಿ ಕನ್ನಡಿಗರ ಆಶಯಗಳನ್ನು ಬಿಂಬಿಸಿದ ನಾ.ಡಿಸೋಜ

ನಾ. ಡಿಸೋಜ ಅವರು ಹೆಚ್ಚು ಪ್ರಚಾರ ಬಯಸದೆ, ಸಾಹಿತಿಗಳ ಸಾಂಸ್ಕೃತಿಕ ಲಾಬಿಗಳಲ್ಲಿ ಕಳೆದು ಹೋಗದೆ. ಅಪ್ಪಟ ಬರಹವನ್ನೇ ಬದುಕನ್ನಾಗಿಸಿಕೊಂಡಿದ್ದರು. ಹಾಗಿದ್ದೂ ತನ್ನ ಸುತ್ತಮುತ್ತಣ ಜನ ಸಮುದಾಯಗಳ ಬಿಕ್ಕಟ್ಟನ್ನು ಅಷ್ಟೇ ಸೂಕ್ಷ್ಮವಾಗಿ ಕಟ್ಟಿಕೊಟ್ಟವರು. ಅಬ್ಬರದ ಪ್ರಚಾರದಲ್ಲಿ ಕಳೆದುಹೋಗುತ್ತಿರುವ ಬರೆಯುವ ಕನ್ನಡದ ಬಹುಪಾಲು ಹೊಸ ತಲೆಮಾರು ಡಿಸೋಜ ಅವರನ್ನು ಧ್ಯಾನಿಸಿ ಓದಬೇಕಿದೆ.

Update: 2025-01-07 06:00 GMT

ನಾ.ಡಿಸೋಜ ಅವರು 87ನೇ ವಯಸ್ಸಿನಲ್ಲಿ ಅಗಲಿದ್ದಾರೆ. 75 ಕಾದಂಬರಿ, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿಯೇ 25 ಕಾದಂಬರಿ, ಒಂಭತ್ತು ಕಥಾ ಸಂಕಲನ, ಸುಮಾರು 500ರಷ್ಟು ಕಥೆ ಬರೆದು ಕನ್ನಡ ಸಾಹಿತ್ಯದಲ್ಲಿ ಅವರದ್ದೇ ಆದ ಒಂದು ಗುರುತನ್ನು ಛಾಪಿಸಿದ್ದಾರೆ. ಹಾಗಿದ್ದೂ ನಾ.ಡಿಸೋಜ ಅವರ ಮನೆಮಾತು ಕೊಂಕಣಿಯಾಗಿತ್ತು. ಹೀಗೆ ಕೊಂಕಣಿ ಮನೆಮಾತಿನ ಡಿಸೋಜ ಕನ್ನಡ ಸಾಹಿತ್ಯಕ್ಕೆ ಅವರದ್ದೇ ಆದ ಮೆಲುದನಿಯ ಸಾಹಿತ್ಯವನ್ನು ನೀಡಿದ್ದಾರೆ. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಂದರ್ಭದಲ್ಲಿ (2014) ಅವರ ಜತೆ ಮಾತನಾಡುವ ಸಂದರ್ಭ ಒದಗಿತ್ತು. ಅವರು ‘‘ಇಡೀ ಮಾತಿನಲ್ಲಿ ಸತ್ಯವನ್ನು ಧೈರ್ಯವಾಗಿ ಹೇಳಬೇಕು. ಅದಷ್ಟೇ ಸಾಹಿತಿ ಪಾಲಿಸಬೇಕಾದ ಕನಿಷ್ಠ ಅರ್ಹತೆ’’ ಎಂದಿದ್ದರು. ಅವರು ನಮ್ಮನ್ನು ಅಗಲಿದ ಈ ಸಂದರ್ಭದಲ್ಲಿ ಅವರ ಮಾತು, ನಿಲುವುಗಳನ್ನು ಮತ್ತೊಮ್ಮೆ ಆಲಿಸೋಣ.

ಮನೆ ಪರಿಸರ ಸಾಹಿತ್ಯದ ಪ್ರೇರಣೆ ಕುರಿತಂತೆ ಡಿಸೋಜ ಅವರು ‘‘ನನ್ನ ತಂದೆ ಪ್ರೈಮರಿ ಶಾಲೆಯ ಉಪಾಧ್ಯಾಯರಾಗಿದ್ರು. ಅವರಿಗೆ ಕನ್ನಡದ ಬಗ್ಗೆ ತುಂಬಾ ಶ್ರದ್ಧೆ ಇತ್ತು. ಶಾಲೆಯಲ್ಲಿ ಮಕ್ಕಳಿಗೆ ಹೇಳೋಕೆ ಪದ್ಯಗಳನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟಿದ್ರು. ಜಿ.ಪಿ. ರಾಜರತ್ನಂ ಮುಂತಾದವರ ದೋಣಿ ಸಾಗಲಿ..ತರದ ಪದ್ಯಗಳಿದ್ವು. ನಾನು ಆರನೇ ವಯಸ್ಸಿನಲ್ಲಿ ಓದಿದ ಮೊದಲ ಪುಸ್ತಕ ಅದು. ನನ್ನಲ್ಲಿ ಕನ್ನಡದ ಬಗ್ಗೆ ಪ್ರೀತಿ ಒಲವು ಹುಟ್ಟೋದಕ್ಕೆ ಆ ಪುಸ್ತಕ ಕಾರಣ. ನಮ್ಮ ಮನೆ ಭಾಷೆ ಕೊಂಕಣಿಯಾದ್ರೂ ನಮ್ಮ ಮನೇಲಿ ಯಾವತ್ತೂ ಕನ್ನಡ ಪುಸ್ತಕಗಳಿರ್ತಿದ್ವು. ನನ್ನ ತಂದೆ, ಅಣ್ಣ, ಅಕ್ಕ ಪುಸ್ತಕ ಪ್ರೇಮಿಗಳು. ನಾನು ಆಗ ಪುಸ್ತಕ ಓದದಿದ್ರೂ, ನೋಡ್ತಿದ್ದೆ. ಇದೆಲ್ಲಾ ಸಾಹಿತ್ಯ ಅಭಿರುಚಿ ಬೆಳೆಯಲು ಕಾರಣವಾಯ್ತು. ಹೈಸ್ಕೂಲಿನಲ್ಲಿ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ತಮ್ಮ ನರಸಿಂಹಾಚಾರ್ಯ ಅಂತ ಇದ್ರು. ಅವರು ವರ್ಷದ ತರಗತಿ ಆರಂಭಕ್ಕೆ ಒಂದು ಕಾದಂಬರಿಯನ್ನು ಹೇಳೋರು. ಇದು ವರ್ಷದ ಕೊನೆಯ ಪಿರಿಯಡ್ಡಿನವರೆಗೆ ಮುಂದುವರಿಯ್ತಿತ್ತು. ಅವರು ಘಟನೆಗಳನ್ನು, ಸನ್ನಿವೇಶಗಳನ್ನು ಚೆನ್ನಾಗಿ ನರೇಟ್ ಮಾಡೋರು. ಅದು ಎಲ್ಲೋ ನನ್ನಲ್ಲಿ ಒಂದು ಕಡೆ ಉಳಿದುಬಿಡ್ತು’’ ಎನ್ನುತ್ತಾರೆ.

ಮನುಷ್ಯನಿಗೆ ಸಿಕ್ಕ ಒಂದು ಶ್ರೇಷ್ಠ ಕೊಡುಗೆ ಅಂದ್ರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ನಂಬಿಕೆ ಇಟ್ಟಿದ್ದ ಡಿಸೋಜ ಅವರು ‘‘ಬರಹಗಾರರು ತನಗೆ ಅನಿಸಿದ್ದನ್ನು ಹೇಳಬೇಕು. ಹಾಗೆ ಹೇಳುವಾಗ ಇನ್ಯಾರದೋ ಮನಸ್ಸಿಗೆ ದುಃಖವಾಗುತ್ತಾ, ನೋವಾಗುತ್ತಾ ಅನ್ನೋದನ್ನೂ ಯೋಚಿಸಬೇಕು. ನಮ್ಮ ಹಿರೀರು ಮಾಸ್ತಿಯಂಥವರು ಆ ಕೆಲಸ ಮಾಡಿದ್ದಾರೆ. ನಿಷ್ಠುರವಾಗಿ ಬರೆಯುವ ಅಗತ್ಯವಿದ್ದಾಗ ಬರಿಬೇಕಾಗುತ್ತೆ. ಆದರೆ ನಿಷ್ಠುರತೆ ಸತ್ಯದ ಪ್ರತಿಪಾದನೆಯಾಗಿರಬೇಕು. ನಾನು ಕ್ರಿಶ್ಚಿಯಾನಿಟಿನ ಟೀಕಿಸಿ ಬರೆದಾಗ ವಿರೋಧ ಬಂತು. ಅದು ಸಾರ್ವಜನಿಕ ಆಗಲಿಲ್ಲ. ಅವರ ಆರೋಪ ಏನಂದ್ರೆ ಕ್ರಿಶ್ಚಿಯನ್ ಒಂದು ಸಣ್ಣ ಸಮುದಾಯ, ಈ ಸಣ್ಣ ಸಮುದಾಯದ ಹುಳುಕನ್ನು ಹೊರ ಹಾಕೋದರ ಮೂಲಕ ನಮ್ಮನ್ನು ಬೇರೆ ಸಮುದಾಯಗಳ ಎದುರು ನಗೆಗೀಡು ಮಾಡ್ತಾನೆ ಅನ್ನೋ ತರದ್ದು. ಆದರೆ ನಾನು ಹೇಳೋದು ಒಂದು ಧರ್ಮ ಎಲ್ಲವನ್ನೂ ಜೀರ್ಣಿಸಿಕೊಳ್ಳಬೇಕು ಅಂತ. ಹಿಂದೂ ಸಮಾಜ ಎಲ್ಲವನ್ನೂ ಜೀರ್ಣಿಸಿಕೊಂಡಿದೆ ನೋಡಿ. ಚಾರ್ವಾಕನಂತಹವನನ್ನೂ ಕೂಡ. ಆದರೆ ನಾನು ಒಬ್ಬ ಲೇಖಕನಾಗಿ ಸತ್ಯವನ್ನು ಮುಚ್ಚಿಡಲಾರೆ, ಅದು ನನ್ನ ಧ್ಯೇಯ. ಸತ್ಯವನ್ನು ಮುಚ್ಚಿಟ್ಟರೆ ನಾನು ಏನನ್ನೂ ಬರೀಲಾರೆ’’ ಎನ್ನುತ್ತಾರೆ. ಒಬ್ಬ ಕ್ರಿಶ್ಚಿಯನ್ ಆಗಿಯೂ ಕ್ರಿಶ್ಚಿಯನ್ ಧರ್ಮದ ಒಳಗಿನ ಹುಳುಕನ್ನೂ ಹೇಳುವ ನೇರವಂತಿಕೆ ಡಿಸೋಜ ಅವರಿಗಿತ್ತು.

ಹೊಸ ತಲೆಮಾರಿನ ಬರಹಗಾರರನ್ನು ಗಮನಿಸುತ್ತಿದ್ದ ಡಿಸೋಜ ಅವರು ‘‘ಹೊಸ ತಲೆಮಾರು ಗುಣಮಟ್ಟದಲ್ಲಿ ಸಾಹಿತ್ಯವನ್ನು ಕೆಳಮಟ್ಟಕ್ಕೆ ಇಳಿಸದೆ, ಮೇಲ್ಮಟ್ಟದಲ್ಲೇ ಬರೀತಿದಾರೆ. ನನಗೆ ಒಂದು ಭಯವಿದೆ, ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಯುವ ಬರಹಗಾರರು ಮತ್ತೆ ಕಾಣಿಸಿಕೊಳ್ಳೋದೆ ಇಲ್ಲ. ಯಾಕೆ ಹೀಗಾಗುತ್ತೆ ಅಂತ. ನಮ್ಮ ಬಹುಪಾಲು ವಿದ್ಯಾವಂತ ಯುವ ಲೇಖಕರು ಪಟ್ಟಣಗಳಲ್ಲಿ ಸಿಕ್ಕಿಹಾಕೊಂಡಿದ್ದಾರೆ. ಅದರಲ್ಲಿ ಕೆಲವರು ಐಟಿಬಿಟಿ ಸೇರಿಕೊಂಡಿದ್ದಾರೆ. ಹಾಗಾಗಿ ತಾವು ಹುಟ್ಟಿಬೆಳೆದ ಪರಿಸರಕ್ಕೆ ಸ್ಪಂದನವಾಗಿ ಅವರು ಸಾಹಿತ್ಯ ರಚನೆ ಮಾಡೋದಿಲ್ಲ. ಈ ಕೊರತೆ ಇದೆ. ಈಗ ದಲಿತ ಹಿನ್ನೆಲೆಯ ಲೇಖಕರು ದೊಡ್ಡಮಟ್ಟದಲ್ಲಿ ಬರೀತಿದ್ದಾರೆ. ಅದು ಒಳ್ಳೆ ಬೆಳವಣಿಗೆ’’ ಎನ್ನುವಾಗ ಒಬ್ಬ ಲೇಖಕ, ಲೇಖಕಿ ತಾನು ಹುಟ್ಟಿಬೆಳೆದ ಪರಿಸರಕ್ಕೆ ಸ್ಪಂದನವಾಗಿ ಸಾಹಿತ್ಯ ಹುಟ್ಟಬೇಕು ಎನ್ನುವ ನಿಲುವಿದೆ. ಕಾರಣ ಡಿಸೋಜ ಅವರ ಅಷ್ಟೂ ಸಾಹಿತ್ಯ ತಾನು ಒಡನಾಡಿದ ಪರಿಸರದ ಒಡಲಿನಿಂದಲೇ ಹುಟ್ಟಿದ್ದು.

ಕನ್ನಡ ಉಳಿಸುವ ಬಗೆಗೆ ಡಿಸೋಜ ಅವರಿಗೆ ಅವರದ್ದೇ ಆದ ಚಿಂತನೆಗಳಿದ್ದವು. ‘‘ಕನ್ನಡ ಉಳಿಸಿ ಅನ್ನೋದು ಕರ್ನಾಟಕದಲ್ಲಿ ಮಾತ್ರ ದೊಡ್ಡ ಧ್ವನಿಯಲ್ಲಿ ಕೇಳ್ತಿದೆ. ಕೇರಳ, ಬಂಗಾಳ, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ತಮ್ಮ ಭಾಷೆ ಉಳಿಸಿ ಅನ್ನೋದು ಅಷ್ಟಾಗಿ ಇಲ್ಲ. ಅವರು ಸಹಜವಾಗಿ ಭಾಷೆಯನ್ನು ಉಳಿಸಿಕೊಂಡು ಬಂದಿದಾರೆ. ಮುಂಬೈನಲ್ಲಿ ನನ್ನ ಅಣ್ಣನ ಮಗ ಬೆಳಗ್ಗೆ ಐದಕ್ಕೆ ಮರಾಠಿ ಕ್ಲಾಸ್‌ಗೆ ಹೋಗ್ತಾನೆ. ನಾನು ನಮ್ಮಣ್ಣಂಗೆ ‘ಮಗನಿಗೆ ಯಾಕೆ ಕಷ್ಟಕೊಡ್ತೀಯ’ ಅಂದೆ. ಆಗ ನಮ್ಮಣ್ಣ ‘ನನ್ನ ಮಗ ಮಹಾರಾಷ್ಟ್ರದಲ್ಲಿ ಬದುಕಬೇಕು, ಅವನು ಮರಾಠಿ ಕಲೀಬೇಕು, ಅದಕ್ಕೆ ನಾನು ಮರಾಠಿ ಕ್ಲಾಸ್‌ಗೆ ಕಳಿಸ್ತಾ ಇದೀನಿ’ ಅಂತ ಹೇಳಿದ್ರು. ಈ ತರಹದ ವಾತಾವರಣವನ್ನು ನಾವು ಇಲ್ಲಿ ಸೃಷ್ಟಿ ಮಾಡ್ಬೇಕು. ಹೊರಗಡೆಯಿಂದ ಯಾರೇ ಬರ್ಲಿ ಅವರನ್ನು ಆಹ್ವಾನಿಸೋಣ. ಆದ್ರೆ ಅವರು ಕನ್ನಡಿಗರಾಗಿ ಬದುಕ್ಬೇಕು. ಇಂತಹ ವಾತಾವರಣವನ್ನು ನಮ್ಮ ಕನ್ನಡದ ಜನ ಸೃಷ್ಟಿಮಾಡಬೇಕು. ಕನ್ನಡಿಗರು ತಮಿಳು ಕಲಿತು ತಮಿಳರ ಜತೆ ಮಾತಾಡೋದಕ್ಕಿಂತ ಅವರಿಗೆ ನಾವು ಕನ್ನಡ ಕಲಿಸ್ತೀವಿ ಅನ್ನೋ ಮನೋಭಾವ ಬೇಕು. ನಮ್ಮ ಸರಕಾರ ಕನ್ನಡ ಸರಕಾರ ಆಗಬೇಕು. ಇದರಲ್ಲಿ ನಮ್ಮ ಮಂತ್ರಿಗಳದೇನು ತಾಪತ್ರಯ ಇಲ್ಲ. ಆದರೆ ವಿಧಾನಸೌಧದಲ್ಲಿ ಕೂತಿದಾರಲ್ಲ ಅಧಿಕಾರಿಗಳು ಅವರಿಗೆ ಕನ್ನಡದ ಮನೋಭಾವ ಬಂದಿಲ್ಲ. ಅವರು ಇವತ್ತಿಗೂ ಬ್ರಿಟಿಷರ ಹಾಗೆ, ಇಂಗ್ಲಿಷರ ಹಾಗೆ ಇದ್ದಾರೆ. ಈ ತರಹದ ವಿಚಿತ್ರ ಪರಿಸ್ಥಿತಿ ಬದಲಾಗಬೇಕು’’ ಎನ್ನುವುದು ಡಿಸೋಜರ ಅಭಿಪ್ರಾಯವಾಗಿತ್ತು.

ಬರಹಗಾರರು ಪ್ರಭುತ್ವದ ಜತೆ ಇಟ್ಟುಕೊಳ್ಳಬಹುದಾದ ಸಂಬಂಧದ ಬಗ್ಗೆಯೂ ಡಿಸೋಜ ಅವರಿಗೆ ಒಂದು ಸ್ಪಷ್ಟತೆ ಇತ್ತು. ‘‘ಬರಹಗಾರರಿಗೆ ಓಲೈಕೆ ಮನೋಭಾವ ಬರಬಾರದು. ಹೀಗೆ ಮಾಡಿದ್ರೆ ಜನ ಕೂಡ ಅಡ್ಡದಾರಿ ಹಿಡೀತಾರೆ. ರಾಜಕಾರಣಿಗಳು ಅಥವಾ ಸರಕಾರ ಮಾಡೋದು ತಪ್ಪು ಅನ್ನಿಸಿದ್ರೆ ನೇರವಾಗಿ ಹೇಳಬೇಕು. ಆದ್ರೆ ನಮ್ಮ ಬಹುಪಾಲು ಸಾಹಿತಿಗಳು ಹೇಳೋದಿಲ್ಲ. ಎಲ್ಲಿ ಅಧ್ಯಕ್ಷಗಿರಿ ತಪ್ಪುತ್ತೋ, ಪ್ರಶಸ್ತಿ ತಪ್ಪುತ್ತೋ ಅನ್ನೋ ಭಯ ಇರುತ್ತೆ’’ ಎಂದು ನೇರವಾಗಿಯೇ ಹೇಳುತ್ತಿದ್ದರು. ಡಿಸೋಜ ಅವರು ಆಧುನಿಕತೆಯ ಬಗ್ಗೆ ಸಕಾರಾತ್ಮಕವಾಗಿದ್ದರು. ‘‘ನಾವು ಆಧುನಿಕ ಕಾಲದಲ್ಲಿ ಇದೀವಿ. ಹಾಗಾಗಿ ಆಧುನಿಕ ಸೌಲಭ್ಯಗಳನ್ನು ಬಳಸೋವಾಗ ನಾನು ಮನುಷ್ಯನಾಗಿರಬೇಕು. ನನ್ನತನ ಮತ್ತು ನನ್ನಲ್ಲಿರುವ ಮಾನವೀಯ ಗುಣ ಕಡಿಮೆ ಆಗದ ಹಾಗೆ ಈ ಯಂತ್ರಗಳನ್ನು ನಾವು ಬಳಸಬೇಕು. ಯಂತ್ರ ನಮ್ಮ ಕೈಯಲ್ಲಿರಬೇಕೇ ಹೊರತು ಯಂತ್ರದ ಕೈಯಲ್ಲಿ ನಾವು ಇರಬಾರದು. ಒಂದು ಭಾಷೆ ಬೆಳೀಬೇಕು ಅಂದ್ರೆ ಜನ ಬೆಳೀಬೇಕು, ಜನ ಬೆಳೀಬೇಕು ಅಂದ್ರೆ ಇಡೀ ಪ್ರಪಂಚವನ್ನು ತನ್ನದನ್ನಾಗಿ ಮಾಡಿಕೊಳ್ಳಬೇಕು. ಈ ಗುಣ ಯಾವುದೇ ಭಾಷೆಗೆ ಇರುತ್ತೆ. ಆದರೆ ಭಾಷೆ ಬಳಸೋ ಜನಕ್ಕೆ ಇರಲ್ಲ’’ ಎನ್ನುವುದು ಅವರ ನಿಲುವಾಗಿತ್ತು.

ನಾ.ಡಿಸೋಜ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ 2014ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಅವರು ಅಗಲಿದ ಈ ಸಮಯದಲ್ಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ. ಆಗ ನಾನು ಡಿಸೋಜ ಅವರನ್ನು ‘‘ನೀವು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡ ಉಳಿಸುವ ಬಗ್ಗೆ ಯಾವ ಸಲಹೆ ನೀಡುತ್ತೀರಿ?’’ ಎಂದು ಕೇಳಿದ್ದೆ, ಅವರು ಆಗ ನಗುತ್ತಾ, ‘‘ಸಿದ್ದರಾಮಯ್ಯನವರು ಮೊದಲು ಮಾಡಬೇಕಾದ ಕೆಲಸ ವಿಧಾನಸೌಧವನ್ನು ಸಂಪೂರ್ಣವಾಗಿ ಕನ್ನಡೀಕರಿಸುವುದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಕನ್ನಡವನ್ನು ತರೋದು. ನಾನೊಮ್ಮೆ ಪುಣೆಗೆ ಹೋಗಿದ್ದೆ. ಅಲ್ಲಿ ಕೆನರಾ ಬ್ಯಾಂಕ್ ಎನ್ನುವ ಬೋರ್ಡ್ ನೋಡಿ ಒಳಗಡೆ ಹೋದೆ. ‘ಟ್ರಾನ್ಸ್‌ಲೇಟರ್’ ಅನ್ನೋ ಬೋರ್ಡ್ ಹಾಕ್ಕೊಂಡು ಒಬ್ಬ ಕೂತಿದ್ದ. ಆತನನ್ನು ಕೇಳಿದೆ ‘ಏನು ನಿನ್ನ ಕೆಲಸ?’ ಅಂತ. ‘ಇಲ್ಲಿ ಎಲ್ಲವೂ ಇಂಗ್ಲಿಷ್ ಫಾರಂಗಳಿವೆ, ಅದನ್ನ ನಾನು ಮರಾಠಿಗೆ ಅನುವಾದ ಮಾಡಿಕೊಡ್ತೀನಿ. ಜನ ನನ್ನ ಹತ್ರ ಬರ್ತಾರೆ ’ಅಂದ. ಹಾಗಾದರೆ ‘ಚೆಕ್ ಅನ್ನೋದರ ಮರಾಠಿ ರೂಪ ಏನಪ್ಪಾ?’ ಅಂದೆ. ‘ಕನೊಂಟೇಶನ್’ ಅಂದ. ಆಗ ನನಗೆ ಬಹಳ ಸಂತೋಷವಾಯ್ತು. ನಮ್ ನಾಡಲ್ಲಿ ಇಂಗ್ಲಿಷ್ ಫಾರಮ್ಮನ್ನೇ ಕೊಡ್ತಾರೆ, ಅದನ್ನೇ ನಾವು ತುಂಬ್ತೀವಿ ಬ್ಯಾಂಕ್‌ನವರಿಗೆ ಕನ್ನಡದಲ್ಲಿ ಫಾರಂ ಕೊಡಿ ಅಂತ ನಾವು ಕೇಳೋದಿಲ್ಲ. ಹೀಗೆ ನಾವು ಎಲ್ಲಿ ಹೆಜ್ಜೆ ಇಡ್ತೀವಿ ಅಲ್ಲಿ ಕನ್ನಡ ಇರಬೇಕು. ಅಂತಹ ಕೆಲಸವನ್ನು ನಮ್ಮ ಸಿದ್ದರಾಮಯ್ಯನವರ ಸಚಿವ ಸಂಪುಟ ಮಾಡಬೇಕು’’ ಎಂದಿದ್ದರು.

ಹೀಗೆ ನಾ.ಡಿಸೋಜ ಅವರು ಹೆಚ್ಚು ಪ್ರಚಾರ ಬಯಸದೆ, ಸಾಹಿತಿಗಳ ಸಾಂಸ್ಕೃತಿಕ ಲಾಬಿಗಳಲ್ಲಿ ಕಳೆದು ಹೋಗದೆ. ಅಪ್ಪಟ ಬರಹವನ್ನೇ ಬದುಕನ್ನಾಗಿಸಿಕೊಂಡಿದ್ದರು. ಹಾಗಿದ್ದೂ ತನ್ನ ಸುತ್ತಮುತ್ತಣ ಜನ ಸಮುದಾಯಗಳ ಬಿಕ್ಕಟ್ಟನ್ನು ಅಷ್ಟೇ ಸೂಕ್ಷ್ಮವಾಗಿ ಕಟ್ಟಿಕೊಟ್ಟವರು. ಅಬ್ಬರದ ಪ್ರಚಾರದಲ್ಲಿ ಕಳೆದುಹೋಗುತ್ತಿರುವ ಬರೆಯುವ ಕನ್ನಡದ ಬಹುಪಾಲು ಹೊಸ ತಲೆಮಾರು ಡಿಸೋಜ ಅವರನ್ನು ಧ್ಯಾನಿಸಿ ಓದಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News