ಭಾರತದಲ್ಲಿ ಪತ್ರಕರ್ತರ ಜೀವಕ್ಕೆ ಬೆಲೆಯೇ ಇಲ್ಲವೆ?

ದಿಲ್ಲಿಯ ಬಹಳಷ್ಟು ಪತ್ರಕರ್ತರು ಮುಕೇಶ್ ನೀಡುವ ವರದಿಗಳ ಮೇಲೆ ಅವಲಂಬಿತರಾಗಿರುತ್ತಿದ್ದರು ಮತ್ತು ಅವರ ವರದಿಗಳ ಬಗ್ಗೆ ವಿಶ್ವಾಸ ಹೊಂದಿದ್ದರು. ಆದರೆ ಅಂಥ ಮುಕೇಶ್ ಹತ್ಯೆಯಾದ ಸುದ್ದಿ ಮಾತ್ರ ಪತ್ರಿಕೆಗಳಲ್ಲಿ ಕಂಡೂ ಕಾಣದ ರೀತಿಯಲ್ಲಿ ಅಡಗಿಹೋಗಿತ್ತು. ಛತ್ತೀಸ್‌ಗಡದ ಬಿಜಾಪುರದಲ್ಲೇನೋ ಪತ್ರಕರ್ತರು ಹತ್ಯೆ ಖಂಡಿಸಿ ಪ್ರತಿಭಟನೆ ಮಾಡಿದರು. ಆದರೆ ನ್ಯಾಯ ಎನ್ನುವುದು ಆ ಪ್ರಾಮಾಣಿಕ ಪತ್ರಕರ್ತನ ಪಾಲಿಗೆ ಎಲ್ಲಿದೆ? ರಕ್ಷಣೆ ಮತ್ತು ನ್ಯಾಯದ ಭರವಸೆ ಇಲ್ಲದ ಸ್ಥಿತಿಯಲ್ಲಿ ಪತ್ರಕರ್ತರು ಕೆಲಸ ಮಾಡುವ ಸ್ಥಿತಿ ನಮ್ಮ ದೇಶದಲ್ಲಿದೆ. ಇದರ ಬಗ್ಗೆ ಸ್ವತಃ ಪತ್ರಕರ್ತರೂ ಧ್ವನಿ ಎತ್ತುವುದಿಲ್ಲ ಎಂಬುದು ಅತ್ಯಂತ ವಿಷಾದದ ಸಂಗತಿ

Update: 2025-01-07 05:30 GMT
Editor : Thouheed | Byline : ವಿನಯ್ ಕೆ.

ಪತ್ರಕರ್ತ ಮುಕೇಶ್ ಚಂದ್ರಾಕರ್ ಹತ್ಯೆ ಪ್ರಕರಣ ಚರ್ಚೆಯಲ್ಲಿದೆ. ಛತ್ತೀಸ್‌ಗಡದ ಬಸ್ಸಾರ್‌ನಲ್ಲಿ ನಡೆದಿರುವ ಈ ಹತ್ಯೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

28ರ ಹರೆಯದ ಮುಕೇಶ್ ಚಂದ್ರಾಕರ್ ಜನವರಿ 1ರಿಂದ ಕಾಣೆಯಾಗಿದ್ದರು. ಕಡೆಗೆ ಅವರ ಶವ ಜನವರಿ 3ರಂದು ಗುತ್ತಿಗೆದಾರರೊಬ್ಬರ ಸೈಟ್‌ನಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿತ್ತು. ಮೃತದೇಹದ ಮೇಲೆ ಶಸ್ತ್ರಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಗುರುತುಗಳಿದ್ದವು. ಅನುಮಾನ ಬರಬಾರದೆಂದು ಟ್ಯಾಂಕ್‌ನ ಮೇಲೆ 4 ಇಂಚು ಸಿಮೆಂಟ್ ಸ್ಲ್ಯಾಬ್ ಇಟ್ಟು ಬಂದ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ದೇಶದಲ್ಲಿ ಹೇಗೆ ಪತ್ರಕರ್ತರನ್ನು ಒಂದು ಜಿರಲೆ ಸಾಯಿಸಿದಷ್ಟೇ ಸಲೀಸಾಗಿ ಕೊಲ್ಲಬಹುದಾಗಿದೆಯಲ್ಲವೇ ಎಂಬುದು ಆತಂಕ ಹುಟ್ಟಿಸುವ ಸಂಗತಿ. ಆರೋಪಿಗೆ ಎರಡು ದಿನದಲ್ಲಿ ಬೇಲ್ ಸಿಗುವ ಇಂದಿನ ವ್ಯವಸ್ಥೆಯಲ್ಲಿ ಒಬ್ಬ ಪತ್ರಕರ್ತನ ಜೀವಕ್ಕೂ ಬೆಲೆ ಸಿಗಲಾರದು.

ಪ್ರಮುಖ ಸುದ್ದಿ ಚಾನೆಲ್‌ಗೆ ಸುದ್ದಿಗಾರನಾಗಿದ್ದ ಮುಕೇಶ್ ಚಂದ್ರಾಕರ್, ಸ್ಥಳೀಯವಾಗಿ ‘ಬಸ್ಸಾರ್‌ಜಂಕ್ಷನ್’ ಎಂಬ ಯೂಟ್ಯೂಬ್ ಚಾನೆಲ್ ಅನ್ನೂ ಹೊಂದಿದ್ದರು. ಅದು ಒಂದೂವರೆ ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿತ್ತು. ಅವರ ಯೂಟ್ಯೂಬ್ ಚಾನೆಲ್ ಬಸ್ಸಾರ್ ಜಂಕ್ಷನ್‌ನಲ್ಲಿ 486 ವೀಡಿಯೊಗಳಿದ್ದು, 1.61 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ.

ಅದರಲ್ಲಿರುವ ಹೆಚ್ಚಿನ ವೀಡಿಯೊಗಳು ಸರಕಾರ ಮತ್ತು ಮಾವೊವಾದಿ ಸಂಘರ್ಷಕ್ಕೆ ಸಂಬಂಧಿಸಿವೆ.

ಮುಕೇಶ್ ಚಂದ್ರಾಕರ್ ಹತ್ಯೆಯಾಗಿರುವುದು ಚತ್ತೀಸ್‌ಗಡದ ಬಿಜಾಪುರದಲ್ಲಿನ ರಸ್ತೆ ಕಾಮಗಾರಿ ಕುರಿತ ವರದಿ ಮಾಡಿದ್ದ ಕಾರಣಕ್ಕಾಗಿ.

ಮುಕೇಶ್ ಚಂದ್ರಾಕರ್ ಕೆಲ ದಿನಗಳ ಹಿಂದೆ ಗಂಗಾಳೂರಿನಿಂದ ನೆಲಸನಾರ್ ಗ್ರಾಮದ ರಸ್ತೆ ನಿರ್ಮಾಣದಲ್ಲಿ ಗೋಲ್‌ಮಾಲ್ ಆಗಿರುವುದಾಗಿ ವರದಿ ಮಾಡಿದ್ದರು. ಅದು ನೇರವಾಗಿ ಸುರೇಶ್ ಚಂದ್ರಾಕರ್ ಎಂಬ ಗುತ್ತಿಗೆದಾರನ ವಿರುದ್ಧವಿತ್ತು. ಆ ವರದಿ ಬಳಿಕ ಅವರಿಗೆ ಕೆಲವರಿಂದ ಬೆದರಿಕೆ ಕರೆಗಳು ಹೋಗಿದ್ದವು. ಬೆದರಿಕೆ ಕರೆ ಮಾಡಿದವರ ಪೈಕಿ ಸುರೇಶ್ ಚಂದ್ರಾಕರ್ ಕೂಡ ಇದ್ದ ಎಂದು ಹೇಳಲಾಗಿದೆ.

ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿದ್ದಾಗ ರಿತೇಶ್ ಮತ್ತು ಮಹೇಂದ್ರ ಎನ್ನುವವರು ಮುಕೇಶ್ ಅವರನ್ನು ಕರೆಯುತ್ತಾರೆ. ಅಲ್ಲಿ ಮುಕೇಶ್ ಮಾಡಿದ್ದ ವರದಿ ವಿಚಾರವಾಗಿ ಚರ್ಚೆಯಾಗುತ್ತದೆ. ಅದು ತೀವ್ರ ಬಿರುಸಿನ ಮಾತಿಗೆ ಮಾತಾಗಿ ಬೆಳೆಯುತ್ತದೆ. ಅದು ತಾರಕಕ್ಕೇರಿ ಮುಕೇಶ್ ತಲೆಗೆ ಹೊಡೆದು ಅವರು ಅಲ್ಲೇ ಸಾವನ್ನಪ್ಪುತ್ತಾರೆ. ಕಡೆಗೆ ಅದನ್ನು ಮುಚ್ಚಿಹಾಕಲು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಕೇಶ್ ಶವವನ್ನು ಹಾಕಿ ಅದರ ಮೇಲೆ ಕಾಂಕ್ರಿಟ್ ಸ್ಲ್ಯಾಬ್ ಹಾಕಲಾಗುತ್ತದೆ.

ಮುಕೇಶ್ ಅವರ ಮೊಬೈಲ್ ಸಿಗ್ನಲ್ ಕಡೆಯದಾಗಿ ಪತ್ತೆಯಾದ ಲೊಕೇಶನ್ ಮೂಲಕ ಇದೆಲ್ಲವೂ ಬಯಲಾಗಿದೆ. ಬಹಳ ಕೆಟ್ಟ ಸ್ಥಿತಿಯಲ್ಲಿ ಅವರ ಶವ ಸಿಕ್ಕಿದೆ.

ಇದು ಬರೀ ಒಂದು ಹತ್ಯೆಯ ವಿಚಾರವಲ್ಲ.

ನಮ್ಮ ದೇಶದ ಪತ್ರಿಕಾ ಸ್ವಾತಂತ್ರ್ಯ ಜಾಗತಿಕ ಸೂಚ್ಯಂಕದಲ್ಲಿ ಯಾವ ಮಟ್ಟದಲ್ಲಿದೆ ಎಂಬುದು ಈಗಾಗಲೇ ಗೊತ್ತಿರುವ ವಿಚಾರ. ಮದರ್ ಆಫ್ ಡೆಮಾಕ್ರಸಿ ನಮ್ಮದು. ಇಲ್ಲಿ ಪತ್ರಕರ್ತರ ಹತ್ಯೆ ಬಹಳ ಸುಲಭವಾಗಿಬಿಟ್ಟಿದೆ.

ಹೇಗೆಲ್ಲ ಪತ್ರಿಕೋದ್ಯಮದ ಹತ್ಯೆಯಾಗುತ್ತಿದೆ ಎಂಬುದು ಯೋಚಿಸಬೇಕಾದ ಸಂಗತಿ. ದೊಡ್ಡ ದೊಡ್ಡ ಪತ್ರಕರ್ತರು, ಚಾನೆಲ್‌ಗಳನ್ನೆಲ್ಲ ಖರೀದಿಸಲಾಗಿದ್ದು, ಇಡೀ ಪತ್ರಿಕೋದ್ಯಮವನ್ನು ತಮಗೆ ಬೇಕಾದಂತೆ ನಿಯಂತ್ರಿಸುವವರು ಇದ್ದಾರೆ. ಇದು ಪತ್ರಿಕೋದ್ಯಮದ ಹತ್ಯೆ ಆಗುತ್ತಿರುವ ಒಂದು ರೀತಿ.

ಮುಕೇಶ್ ಅವರ ‘ಬಸ್ಸಾರ್ ಜಂಕ್ಷನ್’ ತುಂಬ ಒಳ್ಳೆಯ ಹೆಸರು ಮಾಡಿತ್ತು. ಬಸ್ತರ್ ರಸ್ತೆ ಕಾಮಗಾರಿ ವಿಚಾರವಾಗಿ ಅವರು ಮಾಡಿದ್ದ ವರದಿಯೇ ಈಗ ಅವರ ಜೀವಕ್ಕೆ ಕುತ್ತು ತಂದಿರುವುದು.

ರೂ. 50 ಕೋಟಿಯ ಆ ರಸ್ತೆಗೆ ಯಾವುದೇ ಹೇಳಿಕೊಳ್ಳುವಂಥ ಕೆಲಸ ಮಾಡದೆಯೂ 120 ಕೋಟಿ ರೂ. ಬಿಲ್ ಮಾಡಲಾಗಿತ್ತು.

ರಸ್ತೆ ಇದ್ದ ಹಾಗೆಯೇ ಇತ್ತು. ಆದರೆ ಬಿಲ್ ಮಾತ್ರ 50 ಕೋಟಿಯಿಂದ 120 ಕೋಟಿ ರೂ. ಗೆ ಏರಿತ್ತು. ಅಂದರೆ ಯಾವ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎಂಬುದನ್ನು ಯಾರಾದರೂ ಊಹಿಸಬಹುದು.

ನಕ್ಸಲರನ್ನು ನಿಭಾಯಿಸುವುದು ನಮ್ಮ ವ್ಯವಸ್ಥೆಗೆ ದೊಡ್ಡದಲ್ಲ. ಆದರೆ ನಮ್ಮ ವ್ಯವಸ್ಥೆಯಲ್ಲೇ ಹುಳುಕುಗಳಿವೆ. ನಮ್ಮಲ್ಲಿನ ಭ್ರಷ್ಟತೆಯೇ ಮತ್ತೆ ಅವರು ಮರಳಿ ಬರುವಂತೆ ಮಾಡುತ್ತದೆ. ನಕ್ಸಲರನ್ನು ಸೋಲಿಸಬೇಕಿರುವುದು ಬಂದೂಕಿನಿಂದ ಅಲ್ಲ, ಬದಲಾಗಿ ಬದಲಾವಣೆಯಿಂದ, ಪ್ರಗತಿಯಿಂದ.

ಆದರೆ ಈ ನಕ್ಸಲ್ ಪ್ರದೇಶದಲ್ಲಿನ ಅಭಿವೃದ್ಧಿ ನೋಡಿಕೊಂಡರೆ, ಅಲ್ಲಿ ದೊಡ್ಡ ದೊಡ್ಡ ಗುತ್ತಿಗೆದಾರರು ಆಡುತ್ತಿರುವ ಆಟವೇ ಎಲ್ಲದಕ್ಕೂ ಕಾರಣ.

ಕಾಮಗಾರಿಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರ ವಿಷಯ ಇಟ್ಟುಕೊಂಡೇ ನಕ್ಸಲರು ಮತ್ತೆ ಬರುತ್ತಾರೆ.

ಈಗ ಮುಕೇಶ್ ಕೊಲೆ ಕೇಸಿನಲ್ಲಿ ಆರೋಪಿ ಎನ್ನಲಾಗಿರುವ ಸುರೇಶ್ ಚಂದ್ರಾಕರ್ ತನ್ನ ಮದುವೆಗೇ 10-12 ಕೋಟಿ ರೂ. ಖರ್ಚು ಮಾಡಿರುವವನು.

ರಶ್ಯನ್ ಡ್ಯಾನ್ಸರ್ ಗಳನ್ನು ಕರೆಸಿ ನೃತ್ಯ ಮಾಡಿಸಿರುವವನು.

ಈತನ ಹೆಸರು ಕಾಂಗ್ರೆಸ್ ಜೊತೆಯೂ ಸೇರಿಕೊಂಡಿದೆ. ನಿರ್ಮಾಣ ಮತ್ತು ಮೈನಿಂಗ್ ಗುತ್ತಿಗೆ ಈತನಿಗೆ ಕಾಂಗ್ರೆಸ್ ಸರಕಾರದಿಂದಲೂ ಸಿಗುತ್ತಿತ್ತು ಎನ್ನಲಾಗುತ್ತದೆ.

ಈಗ ಎರಡೂ ಪಕ್ಷಗಳ ನಡುವೆ ತಿಕ್ಕಾಟವೂ ನಡೆದಿದೆ. ಬಿಜೆಪಿ ಸರಕಾರವಿರುವ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಕಾಂಗ್ರೆಸ್ ಹೇಳಿದರೆ, ಕೊಲೆ ಆರೋಪಿ ಕಾಂಗ್ರೆಸ್ ಸರಕಾರದಿಂದಲೂ ಗುತ್ತಿಗೆ ಪಡೆಯುತ್ತಿದ್ದ ಎಂದು ಬಿಜೆಪಿ ಆರೋಪಿಸುವುದು ನಡೆದಿದೆ.

ಆದರೆ ಕೊನೆಗೆ ಏನಾಗುತ್ತದೆ? ಎಲ್ಲ ದೊಡ್ಡ ಪ್ರಕರಣಗಳಲ್ಲಿ ಆಗುತ್ತಿರುವಂತೆ ಇಲ್ಲಿಯೂ ಆರೋಪಿಗಳಿಗೆ ಎರಡು ದಿನಗಳಲ್ಲಿ ಬೇಲ್ ಸಿಗುತ್ತದೆ. ಆದರೆ ನ್ಯಾಯ?

ಇದು ಬರೀ ಒಬ್ಬ ಪತ್ರಕರ್ತನ ಹತ್ಯೆಯಲ್ಲ. ಈ ದೇಶದಲ್ಲಿನ ಸತ್ಯದ ಹತ್ಯೆ.

2023ರಲ್ಲಿ ದೇಶದಲ್ಲಿ 5 ಪತ್ರಕರ್ತರ ಹತ್ಯೆಯಾಯಿತು. 226 ಪತ್ರಕರ್ತರು ಹಿಂಸೆಗೆ ಗುರಿಯಾಗಿದ್ದರು. ಪತ್ರಕರ್ತರಿಗೆ ಬೆದರಿಕೆಯೊಡ್ಡಿದ್ದವರಲ್ಲಿ ಸರಕಾರಗಳಿವೆ, ಸರಕಾರಕ್ಕೆ ಹೊರತಾದವರಿದ್ದಾರೆ, ಪಕ್ಷಗಳಿವೆ, ಖಾಸಗಿ ವ್ಯಕ್ತಿಗಳು ಕೂಡ ಇದ್ದಾರೆ.

54 ಪತ್ರಕರ್ತರು ದಿಲ್ಲಿಯಲ್ಲಿ ಬೆದರಿಕೆಗೆ ಗುರಿಯಾಗಿದ್ದರು. 2ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದ್ದು, ಅಲ್ಲಿ 25 ಪತ್ರಕರ್ತರು ಬೆದರಿಕೆ ಎದುರಿಸಿದ್ದರು. ಮಣಿಪುರದಲ್ಲಿ 22 ಪತ್ರಕರ್ತರು ಬೆದರಿಕೆಗೆ ತುತ್ತಾಗಿದ್ದರು. ಯುಪಿಯಲ್ಲಿ 20 ಪತ್ರಕರ್ತರಿಗೆ ಜೀವ ಬೆದರಿಕೆಯಿತ್ತು. ಕೇರಳದಲ್ಲಿ 16, ಜಾರ್ಖಂಡ್‌ನಲ್ಲಿ 12 ಪತ್ರಕರ್ತರು ಪ್ರಾಣಬೆದರಿಕೆ ಎದುರಿಸಿದ್ದರು. ಆನಂತರ ಮಹಾರಾಷ್ಟ್ರ, ತೆಲಂಗಾಣ, ಅಸ್ಸಾಂ, ಬಿಹಾರ ಬರುತ್ತವೆ.

ಎಲ್ಲಾ ಪಕ್ಷಗಳೂ ಇದರಲ್ಲಿ ಸೇರಿವೆ.

ಪತ್ರಿಕಾ ಸ್ವಾತಂತ್ರ್ಯ ಕುರಿತ ವರದಿಗಳ ವಿಚಾರವಾಗಿ ಜಾರ್ಜ್ ಸೊರೊಸ್ ಮೇಲೆ ಆರೋಪ ಮಾಡಿಕೊಂಡು ಮತ್ತೊಂದು ಪಕ್ಷವನ್ನು ದೂಷಿಸುವವರು ಏನು ಹೇಳುತ್ತಾರೆ?

ಪತ್ರಕರ್ತರಿಗೆ ಜೀವಬೆದರಿಕೆ ಒಡ್ಡುವುದು, ಕಡೆಗೆ ಹತ್ಯೆಯೂ ನಡೆದುಹೋಗುವುದು ಸಣ್ಣ ವಿಚಾರವಲ್ಲ.

ಉತ್ತರಾಖಂಡದಲ್ಲಿ ಡ್ರಗ್ ಮಾಫಿಯಾ ಕೇಸ್ ವಿಚಾರವಾಗಿ ವರದಿ ಮಾಡಿದ ಯೋಗೇಶ್ ದಿಮಾಲಿ ವಿಷಯದಲ್ಲಿಯೂ ಹೀಗೆಯೇ ಆಯಿತು.

ಗುಜರಾತ್‌ನಲ್ಲಿ ಮರಳು ಮಾಫಿಯಾ ವಿರುದ್ಧ ದನಿಯೆತ್ತಿದ್ದ ಪತ್ರಕರ್ತರ ಕಥೆಯೂ ಇದೇ ಆಗಿತ್ತು.

ಮಧ್ಯಪ್ರದೇಶದಲ್ಲಿ ಒಬ್ಬ ಪತ್ರಕರ್ತನೂ ಸೇರಿ 8 ಮಂದಿಯನ್ನು ಪೊಲೀಸ್ ಸ್ಟೇಷನ್‌ನಲ್ಲಿ ಬೆತ್ತಲೆಗೊಳಿಸಲಾಗಿತ್ತು. ಸತ್ಯ ಹೇಳುವವರ ಪಾಡು ಇದು.

ಹೇಗೆ ಸತ್ಯ ಜನರಿಗೆ ಮುಟ್ಟಲಾಗದ ಹಾಗೆ ಮಾಡಲಾಗುತ್ತಿದೆ ಮತ್ತು ಅದಕ್ಕಾಗಿ ಪತ್ರಿಕೋದ್ಯಮವನ್ನೇ ಖರೀದಿಸುವುದು, ಬೆದರಿಸುವುದು, ಕಡೆಗೆ ಹತ್ಯೆಯನ್ನು ಮಾಡುವುದು ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯಬೇಕಿದೆ.

ಎಲ್ಲಿ ತಪ್ಪುಗಳಾಗುತ್ತಿವೆ ಎಂದು ಪರಿಶೀಲಿಸುವ ಪತ್ರಕರ್ತನ ಹೊಣೆಗಾರಿಕೆ ಇವತ್ತು ಅಪಾಯದಲ್ಲಿದೆ.

ಆದರೆ ಇದನ್ನು ನಮ್ಮದೇ ಮೀಡಿಯಾಗಳು ಹೇಗೆ ನೋಡುತ್ತಿವೆ?

ನಮ್ಮದೇ ನಡುವಿನ ಒಬ್ಬ ಪತ್ರಕರ್ತನ ಹತ್ಯೆಯನ್ನು ಈ ಮೀಡಿಯಾಗಳು ವರದಿ ಮಾಡಿರುವ ರೀತಿ ಎಂಥದು?

ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪತ್ರಿಕೋದ್ಯಮ ಮಾಡುತ್ತಿರುವ ಪತ್ರಕರ್ತರ ಪರವಾಗಿ ಧ್ವನಿ ಎತ್ತುವವರು ಯಾರು?

ಪತ್ರಕರ್ತನ ಹತ್ಯೆ ನಡೆದಿದ್ದು, ಘಟನೆಯ ಬಗ್ಗೆ ಸೂಕ್ತ ವರದಿ ನೀಡದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ?

ಮುಕೇಶ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. ಅವರಲ್ಲಿ ಒಬ್ಬನಾದ ರಿತೇಶ್ ಚಂದ್ರಾಕರ್ ಮುಕೇಶ್ ಸಂಬಂಧಿಯೇ ಆಗಿದ್ದಾನೆ.

ಒಬ್ಬ ಪತ್ರಕರ್ತನ ಹತ್ಯೆ ಬಹಳಷ್ಟು ಪತ್ರಿಕೆಗಳಿಗೆ ಮೊದಲ ಪುಟದ ವರದಿಯಾಗದೇ ಒಳಪುಟದ ಸುದ್ದಿಯಾಯಿತು ಎನ್ನುವುದು ವಿಷಾದದ ಸಂಗತಿ.

ದಿಲ್ಲಿಯ ಬಹಳಷ್ಟು ಪತ್ರಕರ್ತರು ಮುಕೇಶ್ ನೀಡುವ ವರದಿಗಳ ಮೇಲೆ ಅವಲಂಬಿತರಾಗಿರುತ್ತಿದ್ದರು ಮತ್ತು ಅವರ ವರದಿಗಳ ಬಗ್ಗೆ ವಿಶ್ವಾಸ ಹೊಂದಿದ್ದರು. ಆದರೆ ಅಂಥ ಮುಕೇಶ್ ಹತ್ಯೆಯಾದ ಸುದ್ದಿ ಮಾತ್ರ ಪತ್ರಿಕೆಗಳಲ್ಲಿ ಕಂಡೂ ಕಾಣದ ರೀತಿಯಲ್ಲಿ ಅಡಗಿಹೋಗಿತ್ತು.

ಛತ್ತೀಸ್‌ಗಡದ ಬಿಜಾಪುರದಲ್ಲೇನೋ ಪತ್ರಕರ್ತರು ಹತ್ಯೆ ಖಂಡಿಸಿ ಪ್ರತಿಭಟನೆ ಮಾಡಿದರು. ಆದರೆ ನ್ಯಾಯ ಎನ್ನುವುದು ಆ ಪ್ರಾಮಾಣಿಕ ಪತ್ರಕರ್ತನ ಪಾಲಿಗೆ ಎಲ್ಲಿದೆ?

ರಕ್ಷಣೆ ಮತ್ತು ನ್ಯಾಯದ ಭರವಸೆ ಇಲ್ಲದ ಸ್ಥಿತಿಯಲ್ಲಿ ಪತ್ರಕರ್ತರು ಕೆಲಸ ಮಾಡುವ ಸ್ಥಿತಿ ನಮ್ಮ ದೇಶದಲ್ಲಿದೆ. ಇದರ ಬಗ್ಗೆ ಸ್ವತಃ ಪತ್ರಕರ್ತರೂ ಧ್ವನಿ ಎತ್ತುವುದಿಲ್ಲ ಎಂಬುದು ಅತ್ಯಂತ ವಿಷಾದದ ಸಂಗತಿ

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News