‘ಒಂದು ದೇಶ, ಒಂದು ಚಂದಾದಾರಿಕೆ’ ಮುನ್ನೋಟವಿಲ್ಲದ ಮತ್ತದೇ ಕೇಂದ್ರೀಕೃತ ಯೋಜನೆ
ಕೆಲ ಪ್ರಬಲ ನಿಯತಕಾಲಿಕೆಗಳ ಪ್ರಕಾಶಕರ ಸಂಪೂರ್ಣ ಏಕಸ್ವಾಮ್ಯತೆಯಿಂದ ಕೂಡಿರುವ ಜೊತೆಗೆ ಉತ್ಪಾದನಾ ವೆಚ್ಚಗಳು ಮತ್ತು ಬೆಲೆ ನಿಗದಿ ಬಗ್ಗೆ ಯಾವುದೇ ಪಾರದರ್ಶಕತೆ ಪಾಲಿಸದ ಕಮರ್ಷಿಯಲ್ ಜರ್ನಲ್ ಪಬ್ಲಿಷರ್‌ಗಳ ಜೊತೆ ‘ಒಂದು ರಾಷ್ಟ್ರ-ಒಂದು ಚಂದಾದಾರಿಕೆ’ಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಹೊರಟಿದೆ. ಇದರಿಂದಾಗಿ ಪ್ರತಿಷ್ಠಿತ ಎನಿಸಿಕೊಂಡಿರುವ ಕೆಲ ವಿದೇಶಿ ಪ್ರಕಾಶಕರಿಗೆ ಅನುಕೂಲವಾಗಲಿದೆ. ಆತ್ಮನಿರ್ಭರ ಎನ್ನುವ ಕೇಂದ್ರ ಸರಕಾರ ಭಾರತದ ಸಂಶೋಧನಾ ನಿಯತಕಾಲಿಕೆಗಳಿಗೆ ಮತ್ತು ಹೊಸ ಪ್ರಕಟಣಾ ಮಾಧ್ಯಮಗಳಿಗೆ ಪ್ರೋತ್ಸಾಹಿಸುವ ಬದಲು ಹಳೆಯ ಮಾದರಿಗೆ ಜೋತುಬಿದ್ದಿದೆ.
‘ಒಂದು ದೇಶ-ಒಂದು ಚುನಾವಣೆ’ ಮಸೂದೆ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರಕಾರ ‘ಒಂದು ದೇಶ-ಒಂದು ಚಂದಾದಾರಿಕೆ’ (ಒನ್ ನೇಷನ್-ಒನ್ ಸಬ್‌ಸ್ಕ್ರಿಪ್ಶನ್) ಎನ್ನುವ ರಾಷ್ಟ್ರೀಕೃತ ಸಂಶೋಧನಾ ನಿಯತಕಾಲಿಕೆಗಳ ಚಂದಾದಾರಿಕೆಯೆನ್ನುವ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ತಿಂಗಳು ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಈ ಯೋಜನೆಯ ಮೂಲಕ 30 ಅಂತರ್‌ರಾಷ್ಟ್ರೀಯ ಪ್ರಕಾಶಕರ ಸರಿಸುಮಾರು 13,400 ಜರ್ನಲ್‌ಗಳಲ್ಲಿ ಪ್ರಕಟಗೊಂಡಿರುವ ಸಂಶೋಧನಾ ಲೇಖನಗಳನ್ನು ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಸೇರಿದಂತೆ 6,300 ಉನ್ನತ ಶಿಕ್ಷಣ ಸಂಸ್ಥೆಗಳ ಸರಿಸುಮಾರು 1.8 ಕೋಟಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರು ಓದುವ ಮತ್ತು ಪ್ರಕಟಿತ ಲೇಖನಗಳನ್ನು ಪಡೆದುಕೊಳ್ಳುವ ಅವಕಾಶ ಪಡೆಯಲ್ಲಿದ್ದಾರೆ ಎನ್ನಲಾಗಿದೆ. ಈ ಯೋಜನೆಯ ಮೂಲಕ ಹಿಂದೆ ಇದ್ದ ಎಲ್ಲಾ ನಿಯತಕಾಲಿಕೆ ಕನ್ಸೊರ್ಟಿಯಂ (journal consortiums)ಗಳು ಈ ರಾಷ್ಟ್ರೀಕೃತ ಯೋಜನೆಯಲ್ಲಿ ವಿಲೀನಗೊಂಡು ಸಂಶೋಧನಾ ನಿಯತಕಾಲಿಕೆಗಳ ಏಕೀಕೃತ ವ್ಯವಸ್ಥೆ ಜಾರಿಗೆ ಬರಲಿದೆ.
ಈ ಯೋಜನೆಗೆ ಮೂರು ವರ್ಷಗಳ ಅವಧಿಗೆ (2025-27) 6,000 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗುವುದು ಎನ್ನಲಾಗಿದೆ. ಮೂರು ಹಂತಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಮೊದಲ ಹಂತದಲ್ಲಿ ಈಗ ಇರುವ ಎಲ್ಲಾ ನಿಯತಕಾಲಿಕೆಗಳ ಕನ್ಸೊರ್ಟಿಯಂಗಳನ್ನು ವಿಲೀನಗೊಳಿಸುವುದು, ಎರಡನೇ ಹಂತದಲ್ಲಿ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಳಗೊಳ್ಳುವುದು ಮತ್ತು ಮೂರನೇ ಹಂತದಲ್ಲಿ ಸಂಶೋಧನಾ ನಿಯತಕಾಲಿಕೆಗಳು ಮತ್ತು ಅಲ್ಲಿನ ಲೇಖನಗಳು ಜನಸಮಾನ್ಯರಿಗೆ ಸಿಗುವಂತೆ ಮಾಡಲು ಕೆಲ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಈ ಸೇವೆಯನ್ನು ಜಾರಿಗೆ ತರುವುದಾಗಿ ಹೇಳಲಾಗಿದೆ.
ಈ ಯೋಜನೆ ಮೇಲುನೋಟಕ್ಕೆ ಉತ್ತಮ ಎನಿಸಿದರೂ ಬದಲಾಗುತ್ತಿರುವ ಸಂಶೋಧನಾ ಲೇಖನಗಳ ಪ್ರಕಟಣಾ ವಿಧಾನವನ್ನು ಅರಿಯುವಲ್ಲಿ ವಿಫಲವಾಗಿದೆ. ಸಂಶೋಧನಾ ನಿಯತಕಾಲಿಕೆಗಳ ವೆಬ್ ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ಪ್ರಕಟಣೆಯಲ್ಲಿ ಹೊಸ ಬದಲಾವಣೆಗಳಾಗುತ್ತಿದ್ದು ಇವತ್ತು ಸಂಶೋಧನಾ ಲೇಖನಗಳನ್ನು ಮುಕ್ತವಾಗಿ ಜರ್ನಲ್‌ಗಳಲ್ಲಿ ಪ್ರಕಟಿಸುವ ಮೊದಲು ಪ್ರಿಪ್ರಿಂಟ್ (Preprint Repository) ತಾಣಗಳಲ್ಲಿ ಪ್ರಕಟಿಸಲಾಗುತ್ತಿದೆ. ಮುಕ್ತವಾಗಿ ಸಂಶೋಧನಾ ಲೇಖನಗಳನ್ನು ನಿಯತಕಾಲಿಕೆಗಳಲ್ಲಿ ಪ್ರಕಟಿಸುವ ಮೊದಲು ಪ್ರಕಟಿಸುವ ವೇದಿಕೆಗಳನ್ನು ಪ್ರಿಪ್ರಿಂಟ್ ಎನ್ನಲಾಗುತ್ತದೆ. ಉದಾಹರಣೆಗೆArxiv, BioaRxiv ಮತ್ತು MedrXiv ಇತ್ಯಾದಿ.
ಈ ಪ್ರಿಪ್ರಿಂಟ್ ತಾಣಗಳಲ್ಲಿ ಪ್ರಕಟಗೊಳ್ಳುವುದರಿಂದ ಇತರ ಸಂಶೋಧಕರ ಸಲಹೆ ಸೂಚನೆಗಳು ಚರ್ಚೆ ಸಂವಾದಗಳಿಂದ ಸಂಶೋಧನಾ ಲೇಖನಗಳ ಗುಣಮಟ್ಟವನ್ನು ವೃದ್ಧಿಸುವ ಅವಕಾಶಗಳು ತೆರೆದುಕೊಳ್ಳುತ್ತಿವೆ. ಕೋವಿಡ್ ಸಮಯದಲ್ಲಿ ಬಹುತೇಕ ಸಂಶೋಧಕರು ಸಾಂಪ್ರದಾಯಿಕ ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳ ಪ್ರಕಟನೆ ತೀವ್ರ ನಿಧಾನಗತಿಯಿಂದ ಕೂಡಿದೆ ಎಂದು ಪ್ರಿಪ್ರಿಂಟ್‌ಗಳ ಮೂಲಕ ತಮ್ಮ ಲೇಖನಗಳನ್ನು ಪ್ರಕಟಿಸಿದರು. ಇದರ ಪರಿಣಾಮ ಕೋವಿಡ್ ಸೋಂಕಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯವಿರುವ ಸಂಶೋಧನಾ ಪ್ರಬಂಧಗಳು ಸುಲಭವಾಗಿ ದೊರೆಯುವಂತಾಯಿತು. ಹೀಗಾಗಿ ಶೀಘ್ರವಾಗಿ ಕೋವಿಡ್ ಸೋಂಕಿಗೆ ಲಸಿಕೆಗಳನ್ನು ಕುರಿತು ಸಂಶೋಧಿಸಲು ಮತ್ತು ಅಗತ್ಯವಿರುವ ಚಿಕಿತ್ಸಾ ಮಾದರಿಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ನಿರ್ಧರಿಸಲು ಸಾಧ್ಯವಾಯಿತು.
ಸಾಂಪ್ರದಾಯಿಕ ನಿಯತಕಾಲಿಕೆಗಳು ತೀರ ನಿಧಾನಗತಿಯ ಪ್ರಕಟಣಾ ವಿಧಾನಗಳನ್ನು ಹೊಂದಿರುವುದು, ತಜ್ಞರು ಪರೀಕ್ಷಿಸಿದ (Peer Review) ಲೇಖನಗಳು ಪಕ್ಷಪಾತದಿಂದ ಕೂಡಿರುವುದು, ರಿವ್ಯೆರ್‌ಗಳಿಗೆ ಸೂಕ್ತ ಪ್ರತಿಫಲ ಮತ್ತು ಮನ್ನಣೆ ದೊರೆಯದಿರುವುದು ಬಹು ಮುಖ್ಯವಾಗಿ ಸಂಶೋಧನಾ ನಿಯತಕಾಲಿಕೆಗಳ ಚಂದಾದಾರಿಕೆ ದುಬಾರಿಯಾಗಿರುವುದರಿಂದ ಪ್ರಿಪ್ರಿಂಟ್ ಮತ್ತು ಇತರ ಮುಕ್ತ ಸಂಶೋಧನಾ ಜರ್ನಲ್/ವೇದಿಕೆ (Open Access Journals/platforms)ಗಳಲ್ಲಿ ಸಂಶೋಧಕರು ತಮ್ಮ ಲೇಖನಗಳನ್ನು ಪ್ರಕಟಿಸಲು ಮುಂದೆ ಬರುತ್ತಿದ್ದಾರೆ.
ಸಂಶೋಧನಾ ಪ್ರಬಂಧಗಳಲ್ಲದೆ ಅವುಗಳ ಜೊತೆಯಾಗಿರುವ ಇತರ ಸಂಶೋಧನಾ ದಾಖಲೆ ಅಥವಾ ದತ್ತಾಂಶಗಳು ಇತ್ತೀಚೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಸಂಶೋಧನಾ ಪ್ರಬಂಧಗಳ ಜೊತೆ ಉತ್ಪತ್ತಿಯಾಗುವ ದತ್ತಾಂಶಗಳು, ತಂತ್ರಾಂಶಗಳು, ಅಂಕಿಅಂಶಗಳು, ಸಂಶೋಧನಾ ಮಾದರಿಗಳು ಮತ್ತು ಸಂಶೋಧನೆಯ ಭಾಗವಾದ ಇತರ ದಾಖಲೆಗಳನ್ನು (ಖಾಸಗಿ ಮಾಹಿತಿ ಹೊರತುಪಡಿಸಿ) ಸಂಶೋಧನೆಯ ವಿಶ್ವಾಸಾರ್ಹತೆಗಾಗಿ ಮತ್ತು ಮರುಬಳಕೆಯ ದೃಷ್ಟಿಯಿಂದ ಪ್ರಕಟಿಸುವ ಪರಿಪಾಠ ಹೆಚ್ಚುತ್ತಿದೆ. ಅನೇಕ ಮುಕ್ತ ಸಂಶೋಧನಾ ನಿಯತಕಾಲಿಕೆಗಳು ಈಗ ಸಂಶೋಧನಾ ಪ್ರಬಂಧದೊಂದಿಗೆ ದತ್ತಾಂಶಗಳನ್ನು ಪ್ರಕಟಿಸುವ ಮಾದರಿಗಳನ್ನು ಅಳವಡಿಸಿಕೊಂಡಿವೆ. ಸಂಶೋಧನಾ ಪ್ರಬಂಧಗಳ ಜೊತೆಗೆ ಸಂಶೋಧನೆ ಕುರಿತ ತಜ್ಞರ ಅಭಿಪ್ರಾಯಗಳನ್ನು ಪ್ರಕಟಿಸುವ ಕ್ರಮ ಕೂಡ ಇತ್ತೀಚೆಗೆ ಹೆಚ್ಚುತ್ತಿದೆ. ಇವೆಲ್ಲ ಹೊಸ ಮಾದರಿಯ ಮುಕ್ತ ನಿಯತಕಾಲಿಕೆಗಳ ಪ್ರಕಟಣೆಗೆ ಒತ್ತು ನೀಡುತ್ತಿವೆ.
ಇಂತಹ ಹೊಸ ಸಂಶೋಧನಾ ಪ್ರಕಟಣಾ ಮಾದರಿಗಳನ್ನು ಶೋಧಿಸಲು ಸರಕಾರ ಪ್ರೋತ್ಸಾಹಿಸಲು ಆಸಕ್ತಿ ತೋರದೆ ಹಳೆ ಮಾದರಿಯ ನಿಯತಕಾಲಿಕೆಗಳ ಚಂದಾದಾರಿಕೆಗೆ ಪ್ರತೀ ವರ್ಷ ಎರಡು ಸಾವಿರ ಕೋಟಿಯಷ್ಟು ಸಾರ್ವಜನಿಕ ಹಣ ವೆಚ್ಚ ಮಾಡುತ್ತಿರುವುದು ಏಕೆಂದು ತಿಳಿಯದಾಗಿದೆ.
ಲ್ಯಾಟಿನ್ ಅಮೆರಿಕದಂತಹ ದೇಶಗಳು ತಮ್ಮ ಭಾಷೆಗಳಲ್ಲಿ ಪ್ರಕಟವಾಗುವ ನಿಯತಕಾಲಿಕೆಗಳ ಸೂಚಿಗಳನ್ನು ತಯಾರಿಸಿ ಅವುಗಳಿಗೆ ಜಾಗತಿಕ ಮನ್ನಣೆ ತಂದಿವೆ. ಲ್ಯಾಟಿನ್ ಅಮೆರಿಕದ ವಿವಿಧ ದೇಶಗಳಲ್ಲಿ ಅಲ್ಲಿನ ಭಾಷೆಗಳಲ್ಲಿ ಪ್ರಕಟವಾಗುವ ಜರ್ನಲ್‌ಗಳು ಸುಲಭವಾಗಿ ಸಿಗುತ್ತವೆ ಮತ್ತು ಅಲ್ಲಿನ ಸಂಶೋಧನಾ ನಿಯತಕಾಲಿಕೆಗಳ ಪ್ರಕಟಣೆ ಬಹುತೇಕ ಸರಕಾರದ ಸಹಾಯಧನದ ಮೂಲಕ ನಿರ್ವಹಿಸಲ್ಪಡುತ್ತದೆ. ಉದಾಹರಣೆಗೆ SCIELO ಮತ್ತು REDALYCನಂತಹ ಪ್ರಯೋಗಗಳನ್ನು ಗಮನಿಸಬಹುದು. ಇವತ್ತಿಗೂ ಭಾರತದಲ್ಲಿ ಎಷ್ಟು ಸಂಶೋಧನಾ ನಿಯತಕಾಲಿಕೆಗಳು ಪ್ರಕಟಗೊಳ್ಳುತ್ತವೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ಯಾವುದೇ ನಿಯತಕಾಲಿಕೆಗಳ ಸೂಚಿಗಳು ಸೂಕ್ತವಾಗಿಲ್ಲ. ವೆಬ್ ಆಫ್ ಸೈನ್ಸ್ ಮತ್ತು ಸ್ಕೋಪಸ್ ಡೇಟಾಬೇಸ್‌ಗಳು ಒಳಗೊಂಡಿರುವ ಆಂಗ್ಲಭಾಷೆಯಲ್ಲಿ ಪ್ರಕಟಗೊಳ್ಳುವ ಕೆಲ ಬೆರಳೆಣಿಕೆಯಷ್ಟು ನಿಯತಕಾಲಿಕೆಗಳ ಬಗ್ಗೆ ಮಾತ್ರ ಮಾಹಿತಿ ಇದೆ.
ಭಾರತದಲ್ಲಿ ವಿವಿಧ ಭಾಷೆಗಳಲ್ಲಿ ಪ್ರಕಟವಾಗುವ ಸಂಶೋಧನಾ ನಿಯತಕಾಲಿಕೆಗಳ ಸೂಚಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯುಜಿಸಿ ಮತ್ತು ಇತರ ಉನ್ನತ ಶಿಕ್ಷಣ ಕೇಂದ್ರಗಳು ಯೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರಗಳು ಕೂಡ ಯೋಜನೆಗಳನ್ನು ರೂಪಿಸಬೇಕಾಗಿದೆ. ಆದರೆ ಕೆಲ ಪ್ರಬಲ (ಉದಾಹರಣೆಗೆ: Elsevier, Wiley, Tylor & Francis, & Springer) ನಿಯತಕಾಲಿಕೆಗಳ ಪ್ರಕಾಶಕರ ಸಂಪೂರ್ಣ ಏಕಸ್ವಾಮ್ಯತೆಯಿಂದ ಕೂಡಿರುವ ಜೊತೆಗೆ ಉತ್ಪಾದನಾ ವೆಚ್ಚಗಳು ಮತ್ತು ಬೆಲೆ ನಿಗದಿ ಬಗ್ಗೆ ಯಾವುದೇ ಪಾರದರ್ಶಕತೆ ಪಾಲಿಸದ ಕಮರ್ಷಿಯಲ್ ಜರ್ನಲ್ ಪಬ್ಲಿಷರ್‌ಗಳ ಜೊತೆ ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಹೊರಟಿದೆ. ಇದರಿಂದಾಗಿ ಪ್ರತಿಷ್ಠಿತ ಎನಿಸಿಕೊಂಡಿರುವ ಕೆಲ ವಿದೇಶಿ ಪ್ರಕಾಶಕರಿಗೆ ಅನುಕೂಲವಾಗಲಿದೆ. ಆತ್ಮನಿರ್ಭರ ಎನ್ನುವ ಕೇಂದ್ರ ಸರಕಾರ ಭಾರತದ ಸಂಶೋಧನಾ ನಿಯತಕಾಲಿಕೆಗಳಿಗೆ ಮತ್ತು ಹೊಸ ಪ್ರಕಟಣಾ ಮಾಧ್ಯಮಗಳಿಗೆ ಪ್ರೋತ್ಸಾಹಿಸುವ ಬದಲು ಹಳೆಯ ಮಾದರಿಗೆ ಜೋತುಬಿದ್ದಿದೆ.
ವಿಶ್ವವಿದ್ಯಾನಿಲಯಗಳಿಗೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇತ್ತೀಚೆಗೆ ಕೇಂದ್ರ ಸರಕಾರದ ಅನುದಾನದಲ್ಲಿ ಸಾಕಷ್ಟು ಕುಂಠಿತಗೊಂಡಿದ್ದು, ನ್ಯಾಕ್ ಮಾನ್ಯತೆ ಪಡೆದ ವಿವಿಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಕೂಡ ಅನುದಾನದ ಕೊರತೆ ಎದುರಿಸುತ್ತಿದ್ದು ಈಗ ಈ ಯೋಜನೆಯ ಜಾರಿಯಿಂದ ಗ್ರಂಥಾಲಯಗಳಿಗೆ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಬೇಕಾದ ನಿಯತಕಾಲಿಕೆಗಳು ಮತ್ತು ಪುಸ್ತಕಗಳು ಇನ್ನಿತರ ಪರಿಕರಗಳನ್ನು ಖರೀದಿಸಲು ಕಷ್ಟಸಾಧ್ಯವಾಗಲಿದೆ. ಈ ಕೇಂದ್ರೀಕೃತ ವ್ಯವಸ್ಥೆಯಿಂದ ಸಿಗುವ ನಿಯತಕಾಲಿಕೆಗಳನ್ನು ಮಾತ್ರ ಓದುಗರಿಗೆ ಒದಗಿಸಲು ಸಾಧ್ಯ. ಉದಾಹರಣೆಗೆ ಇಪಿಡಬ್ಲ್ಯುನಂತಹ ಭಾರತದ ಜನಪ್ರಿಯ ನಿಯತಕಾಲಿಕೆ ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ಯಡಿಯಲ್ಲಿ ಒಳಗೊಳ್ಳದಿದ್ದರೆ ಅದನ್ನು ಪ್ರತ್ಯೇಕ ಚಂದಾ ಮಾಡಿಸಬೇಕು. ಆಗ ಅನುದಾನದ ಕೊರತೆ ಎದುರಾಗುತ್ತದೆ. ಇನ್ನೂ ಈ ಯೋಜನೆಯಡಿಯಲ್ಲಿ ಕೇವಲ ಜರ್ನಲ್‌ಗಳನ್ನು ಮಾತ್ರ ಈಗ ಒಳಗೊಳಿಸಲಾಗಿದೆ. ಇತರ ಅಂದರೆ ಸಂಶೋಧನೆಗೆ ಅಗತ್ಯವಿರುವ ವಿಷಯಾಧಾರಿತ ಡೇಟಾಬೇಸ್‌ಗಳು, ಸ್ಟ್ಯಾಂಡರ್ಡ್ಸ್‌ಗಳು ಲಭ್ಯವಿಲ್ಲ.
ಕಾಲೇಜುಗಳು INFLIBNET ಎನ್-ಲಿಸ್ಟ್ (N-LIST) ನಡಿಯಲ್ಲಿ 6,000ಕ್ಕೂ ಹೆಚ್ಚು ನಿಯತಕಾಲಿಕೆಗಳು ಮತ್ತು 30,000ಕ್ಕೂ ಹೆಚ್ಚು ಪುಸ್ತಕಗಳನ್ನು 35,000 ರೂಪಾಯಿಯನ್ನು INFLIBNET ಪಾವತಿಸಿ ಒಂದು ವರ್ಷದ ಚಂದಾದಾರಿಕೆಯ ಮೂಲಕ ಓದುವ ಅವಕಾಶ ಇತ್ತು. ಮುಂದೆ ಇದು ಬದಲಾಗಲಿದೆ ಮತ್ತು ಕಾಲೇಜುಗಳಿಗೆ ಹೇಗೆ ಈ ಸೇವೆಯನ್ನು ಒದಗಿಸಲಾಗುವುದು ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಯಾವುದೇ ಸಾಂವಿಧಾನಿಕ ಚರ್ಚೆ ಸಂವಾದಗಳಿಲ್ಲದೆ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿ ಮಾಡಿದೆ. ಬಹು ಸಂಸ್ಕೃತಿಯ ಬಹು ಭಾಷೆಯ ನಮ್ಮ ದೇಶದಲ್ಲಿ ಸಹವರ್ತಿ ಪಟ್ಟಿಯಲ್ಲಿರುವ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರಕಾರ ಇತ್ತೀಚೆಗೆ ಸಾಕಷ್ಟು ಕೇಂದ್ರೀಕೃತ ವ್ಯವಸ್ಥೆಗಳನ್ನು ಜಾರಿಗೆ ತರುವುದರ ಮೂಲಕ ರಾಜ್ಯಗಳ ಹಕ್ಕುಗಳನ್ನು ಕಸಿಯುತ್ತಿದೆ ಎನ್ನಲಾಗಿದೆ. ಈ ಯೋಜನೆಯನ್ನು ಪ್ರಕಟಿಸುವ ಮುನ್ನ ಕರೆದಿದ್ದ ಪ್ರತ್ರಿಕಾಗೋಷ್ಠಿಯಲ್ಲಿ ವೇದಿಕೆ ಮೇಲೆ ಕುಳಿತಿದ್ದ ಎಲ್ಲಾ ಅಧಿಕಾರಿಗಳ ಹೆಸರುಗಳು ಹಿಂದಿಯಲ್ಲಿ ರಾರಾಜಿಸುತ್ತಿದ್ದವು. ಒಂದು ದೇಶ-ಒಂದು ಚಂದಾದಾರಿಕೆ, ಒಂದು ದೇಶ-ಒಂದು ಪರೀಕ್ಷೆ, ಒಂದು ದೇಶ-ಒಂದು ಚುನಾವಣೆ... ಒಂದು ಒಂದು ಎನ್ನುವುದರ ಮೂಲಕ ಭಾರತದ ವೈವಿಧ್ಯ ಸಂಸ್ಕೃತಿಯನ್ನು ಇಲ್ಲವಾಗಿಸುವ ಪ್ರಯತ್ನಗಳು ಸದ್ದಿಲ್ಲದೇ ನಡೆಯುತ್ತಿವೆ ಎನ್ನುವ ಅಭಿಪ್ರಾಯವಿದೆ. ಮುಂದೆ ಒಂದು ದೇಶ-ಒಂದು ಭಾಷೆ ಎನ್ನುವ ದಿನಗಳು ದೂರವಿಲ್ಲ. ಆಗ ಇಂತಹ ಕೇಂದ್ರೀಕೃತ ಯೋಜನೆಗಳನ್ನು ವಿರೋಧಿಸುವ ಧ್ವನಿಗಳು ಮತ್ತಷ್ಟು ಹೆಚ್ಚಬಹುದು.