ಅವ್ವ, ಕರೀಮ್ ಖಾನ್ ಸಾಹೇಬರು, ಅಮೃತ-ಕಾವ್ಯವಾದವರು.

ಆದಿನ ನನಗೆ ಇನ್ನೂ ನೆನಪಿದೆ, ಸಂಜೆ ಸ್ಕೂಲಿನಿಂದ ಬಂದ ತಕ್ಷಣ ಪುಸ್ತಕಗಳ ಬ್ಯಾಗನ್ನು ಮೂಲೆಗೆ ಎಸೆದು, ಕಸಗುಡಿಸಿ. ಸೆಗಣಿ ನೀರು ಹಾಕಿ, ಗದ್ದೆಯ ಬಾವಿಯಿಂದ ಮಣ್ಣಿನ ಮಡಿಕೆ ಗುಂಬದಲ್ಲಿ ನೀರು ತುಂಬಿಸುತ್ತಿದ್ದೆ. ಅವ್ವ ಬರುವುದರೊಳಗೆ ಒಲೆಗೆ ಬೆಂಕಿ ಹೊತ್ತಿಸಿ, ಅನ್ನಕ್ಕೆ ಹೆಸರಿಟ್ಟು, ಆಟ ಆಡಿಕೊಳ್ಳಬಹುದು, ಇಲ್ಲ, ಸಾಧ್ಯವಾದರೆ ಹೋವರ್ಕ್ ಮುಗಿಸುವುದು, ಮೇಷ್ಟ್ರು ಹೇಳಿದ ಹೋಮ್ ವರ್ಕ್‌ಮಾಡಬಹುದು ಅಷ್ಟೇ. ಮೇಷ್ಟ್ರ ಹೊಡೆತಕ್ಕೆ ಕೈ ಒಡ್ಡುವುದು, ಮೈ ಒಡ್ಡುವುದು ಮಾಮೂಲಿಯಾಗಿತ್ತು.
ನಾನೇನೂ ಅಷ್ಟೊಂದು ಜಾಣ ವಿದ್ಯಾರ್ಥಿಯಾಗಿರಲಿಲ್ಲ ಬಿಡಿ. ಅವ್ವ ಕೂಲಿಯಿಂದ ಬರುವುದನ್ನು ಕಾಯುವುದೆಂದರೆ ಜಗತ್ತಿನಲ್ಲಿ ಅದಕ್ಕಿಂತ ದೊಡ್ಡ ಸಂಭ್ರಮ ಇನ್ನೊಂದಿರಲಿಲ್ಲ. ಅವ್ವ ದೂರದಿಂದ ಬರುವುದನ್ನು ನೋಡಿ ಕುಣಿದಾಡುತ್ತಿದ್ದೆ. ಆ ಸಂಭ್ರಮ ಈಗ ಏನು ಕೊಟ್ಟರೂ ಸಿಗುವುದಿಲ.್ಲ ಅವ್ವ ಎಂದರೆ ಅದಕ್ಕೆ ಮಿಗಿಲಿಲ್ಲ. ಅವ್ವ ಅವತ್ತು ಯಾಕೋ ಬರುವುದು ತಡವಾಯಿತು. ಕಾದೂ ಕಾದೂ ಸುಸ್ತಾಗಿ, ಸೀಮೆಣ್ಣೆ ಬುಡ್ಡೀದೀಪಕ್ಕೆ ಬತ್ತಿ ಮತ್ತು ಸೀಮೆ ಎಣ್ಣೆ ಹಾಕಿ ಇಟ್ಟಿರಬೇಕು. ಸರಿಯಾದ ಸಮಯಕ್ಕೆ ಅವ್ವ ‘ಸುಬ್ಬಣ್ಣಿ ಸುಬ್ಬಣ್ಣೀ’ ಎನ್ನುವ ಕರೆಗೆ ಬೆಚ್ಚಿ ಬಿದ್ದಂತೆ ಕರೆಗೆ ಓಡಿ ಬಂದೆ, ಬರುತ್ತಲೇ ತಲೆಯ ಮೇಲಿದ್ದ ಭತ್ತದ ಹೊರೆಯನ್ನು ಇಳಿಸು ಎಂದಿತು. ಭತ್ತದ ಹೊರೆ ಆ ಹೊತ್ತಿನ ಕೂಲಿ. ಗೌಡರ ಮನೆಯಲ್ಲಿ ಕೊಟ್ಟದ್ದು. ಅದನ್ನು ಇಳಿಸುತ್ತಲೇ ‘‘ಮಗನೇ ನನಗೊಂದು ಟೀ ತಂದುಕೊಡು, ನಾನು ಟೀ ಕುಡಿದು ಭತ್ತ ಬಡಿದು, ಕುಟ್ಟಿ ಜರಡಿ ಜಾಡಿಸಿ, ಕೇರಿ, ನೆಲ್ಲು ಆಯ್ದು ಅನ್ನ ಮಾಡ್ತಿನಿ. ನೀನು ಬರ್ಕಳದು ಓದ್ಕಳದು ಮಾಡ್ಕೊ’’ ಅಂತು ಅವ್ವ. ನಾನು ಓಡಿ ಹೋಗಿ ಟೀ ತಂದು ಕೊಟೆ.್ಟ ಅವ್ವ, ತಾನು ಹೇಳಿದ ಕೆಲಸ ಮಾಡಿಕೊಳ್ಳುತ್ತಿತ್ತು. ನಾನು ದೀಪ ಹಚ್ಚಿ ಓದುತ್ತಾ ಓದುತ್ತಾ ತೂಕಡಿಕೆ ಬಂದು ಹಾಗೆ ಉರುಳಿಕೊಂಡಿದ್ದೆ, ಯಾವಾಗ ನಿದ್ದೆ ಬಂತೋ ತಿಳಿಯದು. ಅವ್ವ ಅನ್ನ ಮಾಡಿ ನೀರು ಸಾರು ಮಾಡಿ ನನ್ನ ಏಳಿಸಿ ಊಟ ಮಾಡುವ ಹೊತ್ತಿಗೆ ರಾತ್ರಿ ಎಷ್ಟೊತ್ತಾಗಿತ್ತೋ ತಿಳಿಯೆನು. ನಿದ್ದೆಗಣ್ಣಲ್ಲಿ ಊಟ ಮಾಡಿದೆನೋ ಮಾಡಲಿಲ್ಲವೋ ಬೆಳಗ್ಗೆ ಎದ್ದು ಕೇಳಿದಾಗ, ಸ್ವತಃ ಅವ್ವನೇ ಊಟ ಮಾಡಿಸಿದ್ದು ತಿಳಿಯಿತು.
ಇಂತಹ ಎಷ್ಟೋ ಸಂಜೆಗಳು, ರಾತ್ರಿಗಳು, ಹಗಲುಗಳು, ಅವ್ವ ತನ್ನ ಜೀವ ಸವೆಸಿದ್ದು ನೆನೆಸಿಕೊಂಡರೆ ಹೇಳಲು ಶಬ್ದಗಳಿಲ್ಲದೆ ಮೂಕನಾಗುತ್ತೇನೆ. ಆ ತಾಯಿಗೆ ಬೆಲೆ ಕಟ್ಟಲು ಸಾಧ್ಯವಿಲ.್ಲ ಬಹುತೇಕ ಎಲ್ಲಾ ತಾಯಂದಿರ ತ್ಯಾಗ ಇದೇ ಆಗಿರುತ್ತದೆ. ಬಹುತೇಕ ತಾಯಂದಿರ ಜೀವನ, ಗಂಡ, ಮನೆ, ಮಕ್ಕಳು ಹೀಗೆ ಕಳೆದು ಹೋಗುತ್ತದೆ. ಕನಿಷ್ಠ ಅವರ ಜೀವಿತಾವಧಿಯಲ್ಲಿ ಅವರನ್ನು ಪ್ರೀತಿಯಿಂದ ನೋಡಿಕೊಂಡರೆ ಒಂದು ಸಾಸಿವೆಕಾಳಿನಷ್ಟಾದರೂ ಋಣ ತೀರಿಸಿದಂತಾಗುತ್ತದೆ. ಆದರೂ ತಾಯಿಯ ಋಣ ತೀರಿಸಲಾಗದ್ದು. ಅವ್ವನನ್ನು ದಿನಕ್ಕೆ ಹತ್ತಲ್ಲ, ನೂರುಬಾರಿ ನೆನಪು ಮಾಡಿಕೊಂಡರೂ ಸಾಲದು. ಅವರನ್ನು ಸದಾ ಕಾಲ ನೆನಪಿಟ್ಟುಕೊಳ್ಳುವಂತೆ ಏನಾದರೂ ಒಂದು ಕಾರ್ಯಕ್ರಮವನ್ನು ರೂಪಿಸಬೇಕೆಂಬುದು ನನ್ನ ಪತ್ನಿ ಕವಿತಾ ಅವರ ಬಹಳ ದಿನಗಳ ಕನಸು. ಕಳೆದ ಮಾರ್ಚ್ 8 ಆ ಕನಸು ನನಸಾಯಿತು.
ಈ ನಾಡುಕಂಡ ಅದಮ್ಯ ಚೇತನದಂತಿದ್ದ ನಾಡೋಜ ಡಾ. ಎಸ್.ಕೆ.ಕರೀಂಖಾನ್ ಮೂಲತ: ಹೊರದೇಶದಿಂದ ಬಂದು ಇಲ್ಲಿ ನೆಲೆಸಿ ಇಲ್ಲೇ ಉಸಿರಾದವರು. ನಮ್ಮ ಹೆಮ್ಮೆಯ ಕರೀಂಖಾನ್ ಸಾಹೇಬರ ಕುರಿತು ವಿಶ್ರಾಂತ ಕುಲಪತಿಗಳಾದ ಹಿ.ಚಿ. ಬೋರಲಿಂಗಯ್ಯ ಅವರ ಮಾತುಗಳು ಹೀಗಿವೆ ‘‘ನಾಡೋಜ ಎಸ್.ಕೆ.ಕರೀಂ ಖಾನ್ ಇಂದು ಸುಮಧುರ ನೆನಪು ಅಷ್ಟೆ. ಕಷ್ಟಕಾರ್ಪಣ್ಯಗಳ ನಡುವೆಯೇ ಸದಾ ಹಸನ್ಮುಖಿಯಾಗಿ ಬಾಳಿದ ಕರೀಂಖಾನರು ಇಪ್ಪತ್ತನೇ ಶತಮಾನವನ್ನು ಪೂರ್ಣ ಕಂಡವರು. ಸ್ವ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದೇಶವೊಂದು ತನ್ನ ಕಣ್ಣಮುಂದೆಯೇ ಅದನ್ನು ಪಡೆದು ಸ್ವಾತಂತ್ರ್ಯದ ಸುವರ್ಣಮಹೋತ್ಸವ ಆಚರಿಸಿದ್ದನ್ನು ಕಂಡವರಾದರೂ, ಗಾಂಧೀಜಿ ಕಂಡ ರಾಮರಾಜ್ಯ ಆಗಲಿಲ್ಲ ಎಂಬ ಕೊರಗನ್ನು ಕಡೆಯವರೆಗೂ ಇಟ್ಟುಕೊಂಡಿದ್ದರು. ಒಂದು ಶತಮಾನದ ಇತಿಹಾಸದ ಪ್ರತೀಕದಂತಿದ್ದ ಕರೀಂ ಖಾನರು, ಸ್ವಾತಂತ್ರ್ಯಾ ನಂತರದ ಸ್ವಾರ್ಥ, ದ್ವೇಷ, ಕೋಮು ಹಿಂಸೆ ಮುಂತಾದ ವಿಷಯಗಳ ಕಂಡು ನೊಂದು ಹೋಗಿದ್ದರು. ಕರೀಂ ಖಾನ್ ಅವರೂ ಕೂಡ ವ್ಯವಸ್ಥೆಯಿಂದ ನಿರ್ಲಕ್ಷಿಸಲ್ಪಟ್ಟವರು. ರಾಜಕಾರಣ ಅವರನ್ನು ಮರೆಯಿತು. ಚಿತ್ರರಂಗ ಅವರನ್ನು ಶೋಷಿಸಿತು. ಆದರೆ ಕೊನೆಗೂ ಜಾನಪದ ರಂಗ ತುಂಬಾ ತಡವಾಗಿ ಕೈ ಹಿಡಿಯಿತು. ಹೀಗೆ ಬಾಳಿ ಬದುಕಿದ ಈ ಜಾನಪದ ಜಂಗಮ ನಮ್ಮದೇ ನೆಲದ ಬಹಳ ದೊಡ್ಡ ಜೀವ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಕಳೆದ ಕೆಲವು ತಿಂಗಳುಗಳ ಹಿಂದೆ ಈ ನಾಡಿನ ಚಲನಚಿತ್ರ ರಂಗದ ಅಸ್ಮಿತೆಯಾಗಿರುವ ಹಂಸಲೇಖ ಅವರು, ಅವರ ಸ್ಟುಡಿಯೋದಲ್ಲಿ ಕರೀಂಖಾನ್ ಸಾಹೇಬರ ಪ್ರತಿಮೆಯನ್ನು ಮಾಡಿ ಕರೀಂಖಾನ್ ಸಾಹೇಬರ ಒಡನಾಡಿಗಳನ್ನು ಕರೆಸಿ ‘ಐದನಿ’ ಸಂಸ್ಥೆ ಮುಖಾಂತರ ಇವರ ಬದುಕಿನ ಕುರಿತು ಅಪರೂಪದ ಘಟನೆಗಳನ್ನು ಮೆಲುಕು ಹಾಕಿದ್ದು ವಿಶೇಷವಾಗಿತ್ತು. ಆದರೆ, ಯಾಕೋ ಇಡೀ ಕನ್ನಡ ಸಾಂಸ್ಕೃತಿಕ ಲೋಕ ಇಂತಹ ಚೇತನವನ್ನು ಮರೆತಂತಿದೆ. ನನಗೆ ಸಿಕ್ಕಾಗಲೆಲ್ಲಾ ನಮ್ಮ ನಾಡಿನ ಹಿರಿಯ ಕವಿಗಳಾದ ಕಾಳೇಗೌಡ ನಾಗವಾರ ರವರು ‘‘ಸುಬ್ಬು, ಸಕಲೇಶಪುರದಲ್ಲಿ ಕರೀಂ ಖಾನ್ ಸಾಹೇಬರ ಯಾವುದಾದರೊಂದು ಕಾರ್ಯಕ್ರಮ ಮಾಡೊಣ’’ ಎಂದು ಹೇಳುತ್ತಿದ್ದರು. ನಾನೂ ಕೂಡ ರಕ್ಷಿದಿ ಪ್ರಸಾದ್ ಅವರಿಗೆ ಮತ್ತೆ ಮತ್ತೆ ಒತ್ತಾಯಿಸುತ್ತಿದ್ದೆ. ಇವನ್ನೆಲ್ಲಾ ಒಳಗೊಂಡಂತೆ ಕಾರ್ಯಕ್ರಮ ರೂಪಿಸಲು ಸರಿಯಾದ ಸಮಯವೆಂದು ಯೋಚಿಸುತ್ತಿದ್ದಾಗ ನಮ್ಮ ನಡುವೆ ಬಾಳಿ ಹೋದ ಮಹಾ ಚೇತನದ ಹೆಸರಿನ ಸೌಹಾದರ್ ಪ್ರಶಸ್ತಿ ಆಗುಮಾಡುವುದು ನಮ್ಮೆಲ್ಲರ ಉದ್ದೇಶವಾಗಿತ್ತು.
ಇದನ್ನು ಅವ್ವನ ನೆನಪಿನಲ್ಲಿ ತಿಪ್ಪಮ್ಮ ಕೋಮಾರಯ್ಯ ಹೆಸರಿನಲ್ಲಿ ಕೊಡುವುದೆಂದು ತೀರ್ಮಾನಿಸಿ ನಮ್ಮೂರಿನ ರಕ್ಷಿದಿ ಪ್ರಸಾದ್ ಅವರಿಗೆ ಫೋನ್ ಮಾಡಿದೆ. ಇಂತಹದ್ದೊಂದು ಕನಸನ್ನು ಅವರಿಗೆ ವಿವರಿಸಿದೆ. ಜೊತೆಗೆ ಅವರ ಮುದ್ದು ಮಗು ಚಿರಂಜೀವಿ ‘ಅಮೃತಾ’ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸುವುದಕ್ಕೆ ಹೇಳಿದೆ. ಪ್ರಸಾದ್ ಸಂತೋಷದಿಂದ ಒಪ್ಪಿಕೊಂಡರು. ಇದರೊಟ್ಟಿಗೆ ನಮ್ಮ ಭೀಮವಿಜಯದ ಸಂಪಾದಕ ನಾಗರಾಜ್ ಹೆತ್ತೂರ್ ಅವರಿಗೆ ಹಾಗೂ ಉಪ ಸಂಪಾದಕ ಮೆಹಬೂಬ್ ಅವರಿಗೂ ವಿಷಯ ತಿಳಿಸಿದೆ, ಇದರೊಂದಿಗೆ ಕರೀಂಖಾನ್ ಕುಟುಂಬ ತೌಫೀಕ್ ಮತ್ತು ತನ್ವೀರ್ ಕೂಡಾ ಕೈಜೋಡಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಜೀವಕಳೆ ಬಂತು. ಬೆಳ್ಳಕೆರೆಯ ರಕ್ಷಿದಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ರಕ್ಷಿದಿ ಪ್ರಸಾದ್ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ನಾನು ನೀನಾಸಂ ಪದವಿ ಮುಗಿಸಿ, ಮೊದಲನೇ ವರ್ಷದ ತಿರುಗಾಟವನ್ನು ಮುಗಿಸಿ, ಬೆಳ್ಳೆಕೆರೆ ರಕ್ಷಿದಿಯಲ್ಲಿ ನಮ್ಮೆಲ್ಲರ ಪ್ರೀತಿಯ ದೃವರಾಜ್ ದೇಶಪಾಂಡೆ ಅವರೊಂದಿಗೆ ಒಂದು ರಂಗ ಶಿಬಿರ ಮತ್ತು ಒಂದು ನಾಟಕ ‘ಕಣಿವೆಯೊಳಗಿನ ಕ್ರಾಂತಿ’ ಅಲ್ಲೇ ಸಿದ್ಧ್ದಪಡಿಸಿ ಒಂದು ಯಶಸ್ವಿ ಪ್ರಯೋಗವನ್ನು ಮಾಡಿದೆವು. ಇದೆಲ್ಲಾ ನಲುವತ್ತು ವರ್ಷಗಳ ಹಿಂದಿನ ನೆನಪು. ರಕ್ಷಿದಿ ಪ್ರಸಾದ್ ಪದವಿ ಮುಗಿಸಿ ಕಾಫಿ ತೋಟದ ರೈಟರ್ ಆಗಿ ಬಂದು ಸೇರಿಕೊಂಡವರು ನಾಡಿನ ಪ್ರಮುಖ ರಂಗ ಚಟುವಟಿಕೆಗಳಲ್ಲಿ ಇವತ್ತಿಗೂ ಅತ್ಯಂತ ಕ್ರಿಯಾಶೀಲರಾಗಿ ಕಲೆ, ಸಾಹಿತ್ಯ, ನಾಟಕ ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ನಾಡಿನ ಹೆಸರಾಂತ ಸಾಹಿತಿಗಳು ಚಿಂತಕರನ್ನು ಕರೆಸಿ ಆ ಪುಟ್ಟ ಹಳ್ಳಿಗೆ ಸಾಂಸ್ಕೃತಿಕ ಜೀವ ತುಂಬಿದ್ದಾರೆ. ಇದೊಂದು ಅಪರೂಪದ ಸಾಧನೆಯೆಂದೇ ಹೇಳಬೇಕು. ಹೆಗ್ಗೋಡಿನ ಸುಬ್ಬಣ್ಣನವರನ್ನು ಮಾದರಿಯಾಗಿಟ್ಟುಕೊಂಡೇ ಕಾಫಿ ತೋಟದಲ್ಲಿ ಕೂಲಿ ಕೆಲಸಮಾಡುವ ಕಾರ್ಮಿಕರನ್ನು ನಾಟಕದಲ್ಲಿ ತೊಡಗಿಸಿಕೊಳ್ಳುವ ಮತ್ತು ಅವರನ್ನು ಲೋಕಜ್ಞಾನಕ್ಕೆ ತೆರೆದುಕೊಳ್ಳಲು ಸಹಾಯ ಮಾಡುವಲ್ಲಿ ಪ್ರಸಾದ್ ರಕ್ಷಿದಿ ಯಶಸ್ವಿಯಾಗಿದ್ದಾರೆ. ಸ್ವತಃ ಲೇಖಕರೂ, ನಾಟಕಕಾರರೂ ಮತ್ತು ನಿರ್ದೇಶಕರಾಗಿರುವ ರಕ್ಷಿದಿ ಪ್ರಸಾದ್ ನಾಡಿನ ಸಾಂಸ್ಕೃತಿಕ ಸಂಘಟಕರಲ್ಲಿ ಒಬ್ಬರು. ಅವರ ಪತ್ನಿ ರಾಧಾ ಮೇಡಂ, ವಿದ್ಯಾರ್ಥಿಯಾಗಿದ್ದಾಗ ‘ಚೋಮನದುಡಿ’ ನಾಟಕದಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇವರ ಮುದ್ದು ಮಗಳು ಅಮೃತಾ ತನ್ನ ತಂದೆಯ ಹಾದಿಯನ್ನು ಹಿಡಿದು ಶಿಕ್ಷಣದ ಜೊತೆಗೆ ಕವಿತೆ, ಕತೆ, ಚಿತ್ರ ಕಲೆ, ನಾಟಕ ಹೀಗೆ ಬಹುಮುಖ ಪ್ರತಿಭೆಯ ಕವಿ ಕೂಡಾ ಆಗಿದ್ದರು. ‘ಬಾಲ್ಯದಿಂದಲೂ ಒಂದು ಕಾಯಿಲೆಯಿಂದ ನರಳುತ್ತಿದ್ದ ಈ ಮಗು’ 23 ನೇ ವಯಸ್ಸಿನಲ್ಲಿ ನಮ್ಮನ್ನು ದೈಹಿಕವಾಗಿ ಅಗಲಿದ್ದು ಕುಟುಂಬಕ್ಕೆ ಅಷ್ಟೇ ಅಲ್ಲ ಕನ್ನಡ ಸಾಹಿತ್ಯ ಲೋಕಕ್ಕೂ ಒಂದು ಮರೆಯಲಾರದ ನೆನಪು. ಈ ಹೆಣ್ಣುಮಗುವಿನ ನೆನಪಿನಲ್ಲಿ ಈ ವರ್ಷದಿಂದ ಇದೇ ಕಾರ್ಯಕ್ರಮದಲ್ಲಿ ‘ಅಮೃತ ಕಾವ್ಯ ಪ್ರಶಸಿ’್ತ ಕೊಡಮಾಡುವುದು ಕೂಡಾ ತೀರ್ಮಾನವಾಯಿತು. ಇದು ರಕ್ಷಿದಿ ಹಾಗೂ ರಾಧಾಮೇಡಂ ಅವರ ಮಗ ಅಕ್ಷರನಿಗೆ ಸಿಹಿ ನೆನಪು ಹೌದು, ವಿಷಾದದ ಘಳಿಗೆಯೂ ಹೌದು. ಆದರೆ ಕಾಲ ಅದನ್ನೆಲ್ಲಾ ಮರೆಸಿಬಿಡುತ್ತದೆ. ನಾವು ಮುಂದೆ ಚಲಿಸಲೇ ಬೇಕು. ನಮ್ಮ ನಂತರ ಇನ್ನೊಂದು ತಲೆಮಾರು ಬರುತ್ತದೆ. ಹೀಗೆ ಕಾಲಚಕ್ರ ಉರುಳುತ್ತಲೇ ಇರುತ್ತದೆ. ಹೀಗೆ ‘‘ಅವ್ವ, ಕರೀಂ ಖಾನ್ ಸಾಹೇಬರು ಅಮೃತ ಕಾವ್ಯವಾದಗಳಿಗೆ ಮಾರ್ಚ್ 8’’.
ಅಂದು ವಿಶ್ವ ಮಹಿಳೆಯರ ದಿನಾಚರಣೆ ಮತ್ತು ಅದೇ ದಿನ ಕುವೆಂಪು ನಂತರ ಕನ್ನಡವನ್ನು ವೈಚಾರಿಕವಾಗಿ ಚಿಂತಿಸುವಂತೆ ಮಾಡಿದ ಲಂಕೇಶರ ಹುಟ್ಟು ಹಬ್ಬ. ಕಾರ್ಯಕ್ರಮವನ್ನು ಮಾರ್ಚ್ 8ರಂದು ಆಯೋಜಿಸಲು ಇಷ್ಟು ಕಾರಣಗಳು ಸಾಕು. ಈ ಪ್ರಶಸ್ತಿಗಳ ಆಯ್ಕೆ ಬಹಳ ಮುಖ್ಯವಾದದ್ದು. ನಾವೇ ಆಯ್ಕೆ ಮಾಡುವುದು ಸ್ವಾರ್ಥವಾಗುತ್ತದೆ. ಆದ್ದರಿಂದ ಕರೀಂ ಖಾನ್ ಸೌಹಾದರ್ ಪ್ರಶಸ್ತಿ ಆಯ್ಕೆಮಾಡಿಕೊಡುವುದಕ್ಕೆ ನಾಡಿನ ಹೆಸರಾಂತ ಜಾನಪದ ತಜ್ಞರೂ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳೂ ಮತ್ತು ಕರೀಂ ಖಾನ್ ಸಾಹೇಬರನ್ನು ಹತ್ತಿರದಿಂದ ಬಲ್ಲವರಾಗಿದ್ದ ಹಿ.ಚಿ. ಬೋರಲಿಂಗಯ್ಯ ಸರ್ ಅವರನ್ನು ವಿನಂತಿಸಿದೆವು. ಅದಕ್ಕೆ ಅವರು ಸಂತೋಷದಿಂದ ಒಪ್ಪಿಕೊಂಡರು. ಇವರ ಜೊತೆ ನಿವೃತ್ತ ಪ್ರಾಂಶುಪಾಲರು ನಾಡಿನ ಪ್ರಗತಿಪರ ಚಳವಳಿಗಳ ಒಡನಾಡಿಯೂ, ಕರ್ನಾಟಕ ವಿಜ್ಞಾನ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಎಚ್.ಆರ್. ಸ್ವಾಮಿ ಸರ್ ಅವರನ್ನು ಮನವಿ ಮಾಡಿದೆವು. ಇನ್ನು ಅಮೃತ ಕಾವ್ಯ ಪ್ರಶಸ್ತಿಗೆ ನಾಡಿನ ಹೆಸರಾಂತ ಲೇಖಕರು, ಪ್ರಜಾವಾಣಿಯ ಉಪ ಸಂಪಾದಕರಾಗಿದ್ದು ಈಗ ಸುಧಾ ಮತ್ತು ಮಯೂರ ಪತ್ರಿಕೆಯ ಸಂಪಾದಕರೂ, ಕಾವ್ಯದ ಸೂಕ್ಷ್ಮಗಳನ್ನು ಅರಿತಿರುವ ಚ.ಹ.ರಘುನಾಥ್ ಸರ್ ಅವರನ್ನು ಕೇಳಿಕೊಂಡಾಗ ಅತ್ಯಂತ ಪ್ರೀತಿಯಿಂದ ಒಪ್ಪಿಕೊಂಡು 30 ವರ್ಷಗಳ ಒಳಗಿನ ಇಬ್ಬರು ಕವಿಗಳನ್ನು ಆಯ್ಕೆಮಾಡಿಕೊಟ್ಟರು. ಹೊಸದಾಗಿ ಬರೆಯುತ್ತಿರುವ ತರುಣ ಕವಿ ವಿಶಾಲ್ ಮ್ಯಾಸರ್ ಮತ್ತು ನಮ್ಮೆಲ್ಲರ ಹೆಮ್ಮೆಯ ಕವಿ ಎನ್.ಕೆ. ಹನುಮಂತಯ್ಯ ಅವರ ಮಗಳು ಸಂಘಮಿತ್ರೆ ಹೆಬ್ಬಾರ್ ಮತ್ತು ಕರೀಂ ಖಾನ್ ಸೌಹಾದರ್ ಪ್ರಶಸ್ತಿಗೆ ಹರಪ್ಪನಹಳ್ಳಿಯ ಪರಮೇಶ್ವರ ಅವರನ್ನು ಆಯ್ಕೆ ಮಾಡಿದ್ದು ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿತ್ತು. ಪ್ರಶಸ್ತಿ ಪ್ರದಾನ ಮತ್ತು ಲಂಕೇಶರ ಬಗ್ಗೆ ಮಾತನಾಡುವುದಕ್ಕೆ ಚ.ಹ.ರಘುನಾಥ್ ಸರ್ ಬಂದಿದ್ದರು. ಲಂಕೇಶರ ಕುರಿತು ಪ್ರಸ್ತುತ ವಿದ್ಯಮಾನಗಳ ಕುರಿತು ಜಾತಿ ಧರ್ಮ ಬಣ್ಣಗಳಿಂದ ಇಡೀ ಸಮಾಜವನ್ನು ಒಡೆದು ಆಳಲಾಗುತ್ತಿದೆ. ಆದರೆ ಪ್ರಕೃತಿ ಆದಿ ಅನಾದಿ ಕಾಲದಿಂದಲೂ ಸೌಹಾದರ್ವಾಗಿ ಇಡೀ ಜೀವ ಜಗತ್ತನ್ನು ಸಮಾನವಾಗಿಡಲು ನೋಡುತ್ತಿದೆ ಎಂದು ಮಾತನಾಡುತ್ತಾ ಲಂಕೇಶರ ಅವ್ವ ಕವಿತೆ ಓದಿದರು. ಕಾರ್ಯಕ್ರಮವನ್ನು ಮಹಿಳೆಯರೇ ಉದ್ಘಾಟಿಸಿದ್ದು, ರಂಗಭೂಮಿಯ ಮತ್ತು ಸಮಾಜದ ಚೈತನ್ಯವನ್ನು ಹೆಚ್ಚಿ
ಸಿದಂತಾಗಿದೆ. ಸಭೆಯ ಅಧ್ಯಕ್ಷತೆಯನ್ನು ಆ ಗ್ರಾಮದ ಪಂಚಾಯತ್ ಅಧ್ಯಕ್ಷರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಒಂದು ಕಾಲದ ರೈತ ಚಳವಳಿಯನ್ನು ಮುನ್ನಡೆಸಿದ ಆನಂತರದ ದಿನಗಳಲ್ಲಿ ಮೂರು ರಾಜಕೀಯ ಪಕ್ಷಗಳನ್ನು ದಾಟಿ ಈಗ ತಾಲೂಕಿನ ಒಕ್ಕಲಿಗ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಅವರು ಮಾತನಾಡಿ ಇನ್ನು ಮುಂದಿನ ದಿನಗಳಲ್ಲಿ ನಾನು ನಿಮ್ಮ್ಮೊಟ್ಟಿಗೆ ಸಾಂಸ್ಕೃತಿಕವಾಗಿ ಕೆಲಸಮಾಡಬೇಕೆಂಬ ಆಸೆಯಾಗಿದೆ. ಈ ಪೂರ್ಣ ಚಂದ್ರ ತೇಜಸ್ವಿ ರಂಗಮಂದಿರವನ್ನು ಉತ್ತಮ ಪಡಿಸುವಲ್ಲಿ ನಾನು ನಿಮ್ಮ್ಮೊಟ್ಟಿಗೆ ಕೈಜೋಡಿಸುತ್ತೇನೆ ಮತ್ತು ಈ ಭಾಗದಲ್ಲಿ ‘ಕುವೆಂಪು’ ಅವರ ಪ್ರತಿಮೆಯನ್ನು ಸ್ಥಾಪಿಸಲು ಉತ್ಸುಕನಾಗಿದ್ದೇನೆ ಮತ್ತು ನಾವೆಲ್ಲಾ ಅವರ ಚಿಂತನೆಯಲ್ಲೇ ಮುನ್ನಡೆಯಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ್ದು, ನಮ್ಮೆಲ್ಲರಿಗೂ ಸಂತೋಷದ ಸಂತಿಯಾಗಿತ್ತು. ಇಡೀ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಕಾರಣರಾದವರು ಬೆಳ್ಳಕೆರೆಯ ಜೈಕರ್ನಾಟಕ ಸಂಘದ ಸತೀಶ್ ಮತ್ತು ಗೆಳೆಯರು.
ಸಾಮಾನ್ಯವಾಗಿ ನಾವೆಲ್ಲಾ ಒಂದು ಮಾತು ಹೇಳುತ್ತಿರುತ್ತೇವೆ, ರಂಗಭೂಮಿಯಲ್ಲಿ ನಾವೆಲ್ಲಾ ಮಣ್ಣುಹೊತ್ತು ಬಂದಿದ್ದೇವೆ ಎಂದು. ಅಕ್ಷರಶಃ ಜೈ ಕರ್ನಾಟಕ ಸಂಘಟನೆಯ ಸದಸ್ಯರು ಆ ನುಡಿಯನ್ನು ಕಾರ್ಯಗತಮಾಡಿ ತೋರಿಸಿದರು. ನಮ್ಮ ಊರಿನ ಕಲಾವಿದರಾದ ಕಲಾಪ್ರಿಯ ಮಂಜು, ರಂಗಭೂಮಿಯ ಗೆಳೆಯ ರಾಜಶೇಖರ್, ಜಯಂತ ಇವರೆಲ್ಲರ ಶ್ರಮದಿಂದ ವೇದಿಕೆ ಶ್ರೀಮಂತವಾಗಿ ಕಾಣುತ್ತಿತು.್ತ ಈ ಎಲ್ಲಾ ಚಟುವಟಿಕೆಗಳಲ್ಲಿ ರಾಧಾ ರಕ್ಷಿದಿ ಕೂಡ ಕೈಜೋಡಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೆ ಕಲಶವಿಟ್ಟಂತೆ, ರತ್ನಾ ಸಕಲೇಶಪುರ ಅವರು ಹಾಡಿದ್ದು ಕಾರ್ಯಕ್ರಮವನ್ನು ಇನ್ನಷ್ಟು ಚೆಂದ ಗೊಳಿಸಿತ್ತು. ವೇದಿಕೆಯ ಹಿಂಬದಿಯ ಬ್ಯಾನರ್‌ನಲ್ಲಿ ಅವ್ವನ ಭಾವಚಿತ್ರ ಕರೀಂಖಾನ್ ಸಾಹೇಬರು ಮತ್ತು ಅಮೃತ ನಮ್ಮೆಲ್ಲರ ನಡುವೆ ಒಂದು ಕಾವ್ಯವಾಗಿ ಕಾಣುತ್ತಿತ್ತು. ನಮ್ಮೆಲ್ಲರ ಬಹುದಿನಗಳ ಕನಸು ನನಸಾದ ಒಂದು ಸಣ್ಣ ಸಾರ್ಥಕ ಭಾವದಲ್ಲಿ ನಾವು ಇದ್ದೆವು. ಇಂತಹದ್ದೊಂದು ಕಾರ್ಯಕ್ರಮಕ್ಕೆ ಹಾಕಿದ್ದ ಶ್ರಮ ವ್ಯರ್ಥವಾಗಲಿಲ.್ಲ ಆ ದಿನ ನಮ್ಮ್ಮೊಟ್ಟಿಗೆ ಅನೇಕ ಹಿರಿಯರೆಲ್ಲಾ ಬಂದಿದ್ದರು. ಜಿ.ಎಸ್. ಉಬ್ಬರಡ್ಕ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಕರೀಂಖಾನ್ ಕುಟುಂಬ ವರ್ಗದವರು ಸಹ ಇದ್ದರು. ನಮ್ಮೂರಿನಿಂದ ಹಿರಿಯರಾದ ಕುಮಾರಣ್ಣ ಮತ್ತು ರುದ್ರೇಶ್, ಬಾಲು, ಮಲ್ಲೇಶ ಹೀಗೆ ಅನೇಕರು ಬಂದಿದ್ದರು. ಮಲೆನಾಡಿನ ನಿಸರ್ಗದ ಮಡಿಲಲ್ಲಿ ಗಿಡ ಮರ ಬಳ್ಳಿಗಳಿಗೆ ಕಾಣಿಸುವಂತೆ ಈ ಕಾರ್ಯಕ್ರಮ ನಮ್ಮೆಲ್ಲರ ಎದೆಗಳಲ್ಲಿ ಹಸುರಾಗಿರುವುದನ್ನು ಮರೆಯಲಾರೆ. ಕೊನೆಯಲ್ಲಿ ಲಂಕೇಶರ ಈ ಕವಿತೆ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.