ಹೊಳೆದಾಟಿಸಿದ ಮೇಲೆ ನನ್ನ ಅಜ್ಜ ಅಸ್ಪೃಶ್ಯನಾದ

‘‘ಇನ್ನೊಂದು ಸಲ ಕೈಮಾಡಿದರೆ, ಗೌಡ ಅನ್ನೋದು ಸಹ ನೋಡದೆ ನಿನ್ನ ಇಲ್ಲೇ ಹೂತುಹಾಕಿ ಬಿಡುತ್ತೇನೆ’’ ಎಂದು ‘‘ಇವತ್ತಿಗೆ ಕೊನೆ ನಿನ್ನ ಮನೆ ಕುಲುವಾಡಿಕೇನೂ ಬೇಡ, ನೀನು ಕೊಡುವ ಮೂರು ಕಾಸೂ ಬೇಡ’’ ಎಂದು ಉಗಿದು ‘‘ನಿನ್ನ ಜಾತಿಗೆ ಒಂದಿಷ್ಟು ಬೆಂಕಿ ಹಾಕ, ನಾನು ಹೊಳೆಯನ್ನು ದಾಟಿಸುವಾಗ ನಾನು ಹೊಲೆಯನಾಗಿರಲಿಲ್ಲ. ದಾಟಿಸಿದ ಮೇಲೆ ನಾನು ಹೊಲೆಯನಾಗಿಬಿಟ್ಟೆನಾ?’’ ಎಂದು ಗೌಡನಿಗೆ ಮತ್ತೊಮ್ಮೆ ಉಗಿದು ನನ್ನ ಅಜ್ಜ ಭಾರವಾದ ಮನಸ್ಸಿನಿಂದ ಮನೆಕಡೆ ಹೆಜ್ಜೆ ಹಾಕಿದ.

Update: 2024-07-15 06:25 GMT

ಮೊನ್ನೆ ಶುಕ್ರವಾರ ‘ವಾರ್ತಾಭಾರತಿ’ಯ ಮುಖಪುಟ ದಲ್ಲಿ ‘ಜೈಲುಗಳಲ್ಲೂ ತಾರತಮ್ಯ: ಸುಪ್ರೀಂ ಕೋರ್ಟ್ ಕಳವಳ’ ಎಂಬ ಸುದ್ದಿಯನ್ನು ಓದಿದೆ. ದೇಶದ ಅತ್ಯುನ್ನತ ನ್ಯಾಯ ಹೇಳುವ ಸುಪ್ರೀಂ ಕೋರ್ಟ್ ರಾಜ್ಯಗಳ ಕಾರಾಗೃಹಗಳ ಕೈಪಿಡಿಗಳಲ್ಲಿನ ನಿಯಮಾವಳಿಗಳು ಜಾತಿ ತಾರತಮ್ಯವನ್ನು ಉತ್ತೇಜಿಸುತ್ತಿದೆ ಎಂದು ಗುರುವಾರದಂದು ಕಳವಳ ವ್ಯಕ್ತಪಡಿಸಿದೆ. ಜಾತಿ ಧರ್ಮಗಳ ಹೆಸರಿ ನಲ್ಲಿ ಮನುಷ್ಯತ್ವದ ವಿರುದ್ಧ ಇದ್ದವರನ್ನು ಕಠಿಣ ಶಬ್ದಗಳಲ್ಲಿ ಅದು ಮತ್ತೆ ಖಂಡಿಸಿದೆ. ಇದು ನಮ್ಮಂತಹ ಕೋಟ್ಯಂತರ ಜನರಿಗೆ ಒಂದಿಷ್ಟು ಸಮಾಧಾನದ ಸಂಗತಿಯಾಗಿದೆ. ಜಾತೀಯತೆ, ಕೋಮುವಾದ, ಅಸ್ಪಶ್ಯತೆ ಆಚರಣೆ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ. ಈ ದೇಶದ ರಾಜಧಾನಿಗಳು, ಪಟ್ಟಣ ಪ್ರದೇಶಗಳು, ಹಳ್ಳಿಗಳು ಮನುಷ್ಯರು ಇರುವ ಕಡೆಯಲ್ಲೆಲ್ಲಾ ಈ ವಿಷವರ್ತುಲ ವ್ಯಾಪಿಸಿದೆ. ಅಂಬೇಡ್ಕರ್ ಹೇಳಿದಂತೆ ‘‘ಅಸ್ಪಶ್ಯತೆ ಈಗ ಪ್ರಪಂಚದ ಎಲ್ಲಾ ಕಡೆ ವಲಸೆ ಹೋಗಿದೆ. ಅಸ್ಪಶ್ಯತೆ ವಲಸೆ ಹೋಗುತ್ತದೆ’’ ಎಂದು ಮೊದಲ ಬಾರಿಗೆ ನಾನು ಓದಿದಾಗ ಆಶ್ಚರ್ಯವಾಗಿತ್ತು. ವಲಸೆ ಹೋದ ಉಳಿದ ಸಮುದಾಯದವರು ಆಯಾಯ ಜಾತಿಗಳ ಗುಂಪು ಕಟ್ಟಿಕೊಂಡು ಒಂದೆಡೆ ಸೇರುತ್ತಾರೆ. ಆಯಾಯ ಜಾತಿಗಳ ಸುದ್ದಿ ಮಾತನಾಡುತ್ತಾರೆ. ಆಗ ಅಲ್ಲಿ ಕೂಡಾ ಎಸ್ಸಿ, ಎಸ್ಟಿಗಳು ಸೃಷ್ಟಿಯಾಗುತ್ತಾರೆ ಎನ್ನುವುದು ನನಗೆ ತಡವಾಗಿ ಅರ್ಥವಾಯಿತು.

ಮೊನ್ನೆ ಬೆಳಗ್ಗೆ ಒಂದು ಸುದ್ದಿ ಓದಿದೆ. ಅದು ನಮ್ಮ ಜಿಲ್ಲೆಯ ನಮ್ಮ ತಾಲೂಕಿನ ಮಠಸಾಗರ ಎಂಬ ಹಳ್ಳಿಯಲ್ಲಿ ನಡೆದದ್ದು. ಆಶಾ ಕಾರ್ಯಕತೆರ್ಯರು ಸಾಮಾನ್ಯವಾಗಿ ಆರೋಗ್ಯದ ಜಾಗೃತಿ ಮೂಡಿಸುತ್ತಾರೆ. ವಿಶೇಷವಾಗಿ ಶುಚಿತ್ವದ ಬಗ್ಗೆ ಒತ್ತಿ ಹೇಳುತ್ತಾರೆ, ಹಾಗೆಯೇ ಮಠಸಾಗರ ಎಂಬ ಗ್ರಾಮಕ್ಕೆ ಹೋಗಿ ಎಲ್ಲಾ ಮನೆಗಳಿಗೆ ಡೆಂಗಿ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಒಂದು ಮನೆ ಹತ್ತಿರ ಹೋದಾಗ ಆಶಾ ಕಾರ್ಯಕರ್ತೆಯರನ್ನು ಒಳಗೆ ಕರೆದು ಕಾಫಿ ಕೊಟ್ಟು ಉಪಚರಿಸಿದ್ದಾರೆ. ಹೊರಗೆ ಬಂದ ಮೇಲೆ ಆ ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎನ್ನುವುದು ತಿಳಿಯುತ್ತದೆ. ಆಗ ಆ ಮನೆಯವರು ‘‘ನಾವು ಲಿಂಗ ಪೂಜೆ ಮಾಡುವವರು. ನೀನು ಗೊತ್ತಿದ್ದೂ, ಗೊತ್ತಿದ್ದೂ ಒಳಗೆ ಬರಬಹುದಾ, ನೀನು ಹೀಗೆ ಬಂದಿದ್ದರಿಂದ ಇಡೀ ಮನೆಯನ್ನು ಗೋ ಮೂತ್ರ ಹಾಕಿ ಶುಚಿಮಾಡಬೇಕಿದೆ.’’ ಎಂದು ಹೇಳಿದ್ದಾರೆ. ಇದರಿಂದ ನೊಂದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಆಶಾ ಕಾರ್ಯಕರ್ತೆ ‘‘ಈಗ ಜನ ಶಿಕ್ಷಣ ಪಡೆದಿದ್ದಾರೆ, ಅವರಿಗೆಲ್ಲಾ ಅರಿವು ಬಂದಿದೆ, ಜಾತಿ ಮತ್ತು ಮತಭೇದ ಇರುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನೀವು ಹೀಗೆ ನನ್ನ ಅವಮಾನಿಸಿದ್ದೀರ’’ ಎಂದು ನೊಂದು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ‘‘ನಮ್ಮ ಮನೆಯ ಪಕ್ಕ ಒಕ್ಕಲಿಗರಿದ್ದಾರೆ. ನೀನು ಅವರ ಮನೆಯ ಒಳಗೆ ಹೋಗಿ ಬಂದಿದ್ದೀಯ? ಇದು ನಿನಗೆ ಒಳ್ಳೆಯದಲ್ಲ ’’ ಎಂದು ಬೆದರಿಸಿರುವುದನ್ನೂ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಡೆಂಗಿ ಕುರಿತಂತೆ ಜಾಗೃತಿ ಮೂಡಿಸಲು ಹೋದ ಕಾರ್ಯಕರ್ತೆಯಲ್ಲಿ ಜಾತಿ ಗುರುತಿಸಿದ ಸಮಾಜದ ಮನಸ್ಥಿತಿ ಎಷ್ಟು ಹೀನಾಯವಾದುದು.ಡೆಂಗಿಗಿಂತ ಅಪಾಯಕಾರಿ ಕಾಯಿಲೆಯಾಗಿರುವ ಜಾತಿಯ ಮೇಲರಿಮೆಯಿಂದ ಇವರು ನರಳುತ್ತಿದ್ದಾರೆ. ಇವರು ಪರಿಶಿಷ್ಟ ಸಮುದಾಯದ ಹೆಣ್ಣುಮಗಳನ್ನು ಮಾತ್ರ ಅವಮಾನಿಸಿಲ್ಲ. ಎಲ್ಲರೂ ಸಮಾನವಾಗಿ ಬದುಕಿ ಎಂದು ಹೇಳಿದ ಶ್ರೇಷ್ಠ ಸಂವಿಧಾನವನ್ನು, ಮನುಷ್ಯತ್ವವೇ ಶ್ರೇಷ್ಠವೆಂದು ಬಾಳಿದ ಬಸವಣ್ಣನನ್ನು ಅವಮಾನಿಸಿದ್ದಾರೆ.

ಅಸ್ಪಶ್ಯತೆ ಎಲ್ಲಿಲ್ಲ-ಎಲ್ಲಿದೆ ಎಂದು ನೀವು ನನ್ನನ್ನು ಕೇಳಿದರೆ ಇದಕ್ಕೆ ಪೂರಕವೆಂಬಂತೆ ನಮ್ಮ ಅಪ್ಪ ಹೇಳಿದ ಕಥೆ ನೆನಪಾಗುತ್ತದೆ. ಅವರಪ್ಪ (ನನ್ನ ಅಜ್ಜ) ತನ್ನ ಜೀವನದಲ್ಲಿ ನಡೆದ ಘಟನೆಯನ್ನು ನನ್ನಪ್ಪನಿಗೆ ಹೇಳಿದ್ದರು. ನಮ್ಮ ಅಜ್ಜ ಒಬ್ಬ ಗೌಡನಲ್ಲಿ ಕುಲುವಾಡಿಕೆ ಮಾಡುತ್ತಿದ್ದ. ಆ ಗೌಡ ತನ್ನ ಸಂಬಂಧಿಕರ ಮನೆ ಒಕ್ಕಲು ಸಮಾರಂಭದಲ್ಲಿ (ಗೃಹ ಪ್ರವೇಶ) ಪಾಲ್ಗೊಳ್ಳಲು ಹೋಗುವಾಗ ಹೊಸಮನೆಗೆ ಬೇಕಾದ ಕೆಲವು ವಸ್ತುಗಳನ್ನು ಕೊಡುಗೆಯಾಗಿ ಕೊಡುವುದಕ್ಕೆ ಕುಲುವಾಡಿಗಳನ್ನು ಜೊತೆ ಕರೆದೊಯ್ಯುವ ಸಂಪ್ರದಾಯವಿದೆ. ಹಾಗೆ ಒಂದು ಗೃಹ ಪ್ರವೇಶಕ್ಕೆ ನನ್ನ ಅಜ್ಜ ಈರಯ್ಯನನ್ನು ಕರೆದುಕೊಂಡು ಹೋಗುತ್ತಾರೆ. ಕಾರ್ಯಕ್ರಮ ಮುಗಿದು ಸಂಜೆ ವಾಪಸ್ ಬರುವಾಗ ಜೋರು ಮಳೆ ಶುರುವಾಗುತ್ತದೆ. ಮಲೆನಾಡಿನಲ್ಲಿ ನೂರುವರ್ಷಕ್ಕೂ ಹಿಂದೆ ಮಳೆಯ ಪ್ರಮಾಣ ಅತೀ ಹೆಚ್ಚು ಇತ್ತು. ಮನೆಯಿಂದ ಹೊರಟಾಗಿದೆ, ಊರು ತಲುಪಲೇ ಬೇಕು, ಊರು ತಲುಪುವುದಕ್ಕೆ ಮುಂಚೆ ಒಂದು ಹೊಳೆ ದಾಟಲೇ ಬೇಕು. ಮಳೆಯಿಂದಾಗಿ ಆ ಹೊಳೆ ಉಕ್ಕಿ ಹರಿಯುತ್ತಿದೆ. ಹೊಳೆ ದಾಟುವುದೆಂದರೆ ಜೀವ ಬಾಯಿಗೆ ಬಂದಂತೆ. ಹೊಳೆಯ ಹತ್ತಿರ ಇಬ್ಬರು ಮಕ್ಕಳು ಮತ್ತು ದಂಪತಿ. ಜೊತೆಯಲ್ಲಿ ನನ್ನಜ್ಜ. ೆ ಹೊಳೆಯನ್ನು ದಾಟಲೇ ಬೇಕು ಎನ್ನುವ ಅನಿವಾರ್ಯತೆ. ಆದರೆ ಹೊಳೆದಾಟುವುದು ಅಷ್ಟು ಸುಲಭವಲ್ಲ. ಎಲ್ಲರೂ ಒಬ್ಬರನ್ನೊಬ್ಬರು ಮುಖ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳ ಮುಖ ಇಳಿ ಬಿದ್ದಿದೆ. ಗೌಡ ‘‘ಏನು ಮಾಡೋದು ಈರ?’’ ಎಂದು ಕೇಳಿದ್ದಾನೆ. ನನ್ನ ಅಜ್ಜ ಕೂಡ ಅದೇ ಮಾತನ್ನು ತಿರುಗಿಸಿ ‘‘ನನಗೂ ಹಾಗೆ ಅನ್ನಿಸಿದೆ ಗೌಡ್ರೆ’’ ಅಂದಿದ್ದಾನೆ. ಗೌಡ ‘‘ಮನೆಯಲ್ಲಿ ದನಗಳನ್ನು ಹಾಗೆ ಬಿಟ್ಟು ಬಂದಿದ್ದೇವೆ, ಅವಕ್ಕೆ ಹುಲ್ಲು ಹಾಕಬೇಕು, ಕೋಳಿಗಳ ಮುಚ್ಚಬೇಕು’’ ಎಂದು ಚಿಂತೆ ಮಾಡುತ್ತಿದ್ದರೆ, ನನ್ನಜ್ಜ ಒಂದು ಉಪಾಯ ಹೇಳಿದ: ‘‘ನೀವು ಹೂಂ ಅನ್ನೋದಾದ್ರೆ ನಾನು ಮಕ್ಕಳನ್ನು ಹೆಗಲಮೇಲೆ ಕೂರಿಸಿಕೊಂಡು ದಡ ಮುಟ್ಟಿಸುತ್ತೇನೆ, ಆಮೇಲೆ ನಾವು ಮೂವರೂ ಒಬ್ಬೊಬ್ಬರ ಕೈಹಿಡಿದು ಹೊಳೆ ದಾಟೋಣ’’ ಅಂದಿದ್ದಾನೆ. ಈರನ ಧೈರ್ಯಕ್ಕೆ ಮೆಚ್ಚಿದ ಗೌಡ ಆಗ್ಲಿ ಕಣೋ ಈರ ಹಾಗೆ ಮಾಡೋಣ’’ ಎಂದಿದ್ದಾನೆ. ಪ್ರಾರಂಭಕ್ಕೆ ಒಂದು ಮಗುವನ್ನು ಹೆಗಲಮೇಲೆ ಕೂರಿಸಿಕೊಂಡು ನಿಧಾನವಾಗಿ ಅತ್ಯಂತ ಎಚ್ಚರಿಕೆಯಿಂದ ಪಾದವನ್ನು ನೀರಿನ ಕೆಳಗೆ ನೆಲವನ್ನು ಸವರುತ್ತಾ ಕಲ್ಲುಗಳನ್ನು ಜರುಗಿಸಿ, ವದೆಯುತ್ತಿದ್ದ ನೀರನ್ನೂ ಲೆಕ್ಕಿಸದೆ, ಎದೆಯವರೆಗೆ ಹರಿಯುತ್ತಿದ್ದ ನದಿಯ ವೇಗವನ್ನೂ ಲೆಕ್ಕಿಸದೆ ನನ್ನ ಅಜ್ಜ ಮಗುವನ್ನು ದಡ ಮುಟ್ಟಿಸಿದ್ದಾನೆ. ಸದ್ಯ ಒಂದು ಮಗುವನ್ನು ಹೊಳೆ ದಾಟಿಸಿದೆನಲ್ಲಾ ಎನ್ನುವ ಖುಷಿಯಲ್ಲಿ ಹಿಂದಿರುಗುವಾಗ ಒಂದು ಕಲ್ಲಿನ ಮೇಲೆ ಕಾಲಿಟ್ಟು ಜಾರಿ ಅಕಾಸ್ಮಾತ್ ಆಗಿ ಕೊಚ್ಚಿ ಹೋಗುವುದನ್ನು ತಪ್ಪಿಸಿಕೊಂಡು ಮರಳಿ ಈ ಕಡೆ ಬಂದಿದ್ದಾನೆ. ಸ್ವಲ್ಪಹೊತ್ತು ಸುಧಾರಿಸಿಕೊಂಡು ‘‘ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೆ ನಾನು ಇವತ್ತು ಇಲ್ಲ’’ ಎಂದು ಹೇಳುತ್ತಲೇ ಇನ್ನೊಂದು ಮಗುವನ್ನು ಹೆಗಲಲ್ಲಿ ಕೂರಿಸಿಕೊಂಡು ‘‘ಗಟ್ಟಿಯಾಗಿ ಹಿಡಿದು ಕೂರು’’ ಎಂದು ಹೇಳಿ ನಿಧಾನವಾಗಿ ಆ ಮಗುವನ್ನೂ ದಡ ಮುಟ್ಟಿಸಿದ್ದಾನೆ. ಈಗ ನನ್ನ ಅಜ್ಜ ತಲೆಯಿಂದ ಬೆರಳ ತುದಿವರೆಗೆ ನೆನೆದು ತೊಪ್ಪೆಯಾಗಿದ್ದಾನೆೆ. ಆದರೂ ತನ್ನ ಗೌಡನ ಮಕ್ಕಳನ್ನು ದಡ ಮುಟ್ಟಿಸಿದೆ ಎನ್ನುವ ಹೆಮ್ಮೆ ಮಾತ್ರ ಅವನಿಗೆ ಕಡಿಮೆಯಾಗಿರಲಿಲ್ಲ. ಈಗ ದಂಪತಿಯೂ ಸೇರಿದಂತೆ ಮೂರುಜನ ಒಬ್ಬರನ್ನೊಬ್ಬರು ಕೈ ಹಿಡಿದು ಹೊಳೆ ದಾಟಬೇಕು. ಮೊದಲು ನನ್ನ ಅಜ್ಜ ಹೊಳೆಗೆ ಇಳಿದಿದ್ದಾನೆ. ನಂತರ ಗೌಡ, ಆನಂತರ ಗೌಡ್ತಿ. ಗೌಡ್ತಿಗೆ ಧೈರ್ಯ ಸಾಲದು ಒಂದು ಹೆಜ್ಜೆ ಇಳಿಯುವ ಹೊತ್ತಿಗೆ ಹೆದರಿಕೊಂಡ ಗೌಡ್ತಿ ‘‘ನನಗೆ ಹೆದರಿಕೆ ಆಗುತ್ತೆ. ನಾನು ಈ ಹೊಳೆಗೆ ಇಳಿಯುವುದಿಲ್ಲ ಬೇಕಾದರೆ ವಾಪಸ್ ಹೋಗುತ್ತೇನೆ’’ ಎಂದು ಅಳುವ ಧ್ವನಿಯಲ್ಲಿ ಹೇಳಿದ್ದಾರೆ. ನನ್ನ ಅಜ್ಜ ಮತ್ತು ಗೌಡ, ಗೌಡ್ತಿಯನ್ನು ಎಷ್ಟೇ ಒತ್ತಾಯ ಮಾಡಿದರೂ ಗೌಡ್ತಿ ಹೊಳೆದಾಟಲು ಒಪ್ಪಲಿಲ್ಲ. ಆ ಕಡೆಯಿಂದ ಈ ದೃಶ್ಯವನ್ನು ಗಮನಿಸುತ್ತಿದ್ದ ಮಕ್ಕಳು, ಕೂಗಿ ಒಂದು ಸಲಹೆ ಕೊಡುತ್ತಾರೆ. ‘‘ಅಪ್ಪನ ಹೆಗಲ ಮೇಲೆ ಅವ್ವ ಕುಳಿತುಕೊಂಡು ಹೊಳೆದಾಟಲಿ’’ ಎಂದು.

ಆದರೆ ಗೌಡ ‘‘ನಿಮ್ಮ ಅವ್ವನನ್ನು ಹೊತ್ತುಕೊಂಡು ಬರಲು ನನಗೆ ಸಾಧ್ಯವಿಲ್ಲ’’ ಎಂದು ಸಿಟ್ಟಿಗೇಳುತ್ತಾನೆ. ಮಕ್ಕಳು ಇನ್ನೊಂದು ಸಲಹೆಯನ್ನು ಕೂಗಿ ಹೇಳುತ್ತಾರೆ. ‘‘ಈರ ನಮ್ಮನ್ನು ಹೊತ್ಕಂಡು ಬಂದಂತೆ ಅಮ್ಮನನ್ನು ಹೊತ್ಕಂಡು ಬರಲಿ’’

ಈ ಸಲಹೆ, ಈರ ಮತ್ತು ಗೌಡನಿಗೆ ಒಪ್ಪಿಗೆಯಾಗುವುದಿಲ್ಲ. ಆದರೆ ಗೌಡ್ತಿಗೆ ಸಮ್ಮತಿಯಿರುತ್ತದೆ. ಒಲ್ಲದ ಮನಸ್ಸಿನಿಂದ ಗೌಡ ಈರನಿಗೆ ‘‘ಆಯ್ತು ಮಕ್ಕಳು ಹೇಳಿದಂಗೆ ಇವಳನ್ನು ಹೆಗಲ ಮೇಲೆ ಹೊತ್ಕಂಡು ಹೋಗು, ಆಮೇಲೆ ನಾನು ಬರ್ತಿನಿ’’ ಎಂದು ಹೇಳಿದ. ಗೌಡನ ಆಜ್ಞೆಯನ್ನು ನನ್ನ ಅಜ್ಜ ಶಿರಸಾವಹಿಸಿ ಪಾಲಿಸುತ್ತಾನೆ. ನನ್ನ ಅಜ್ಜನಿಗೆ ನೀರಿನಲ್ಲಿ ಜೋರಾಗಿ ಬೀಸುವ ಗಾಳಿಯ ರಭಸಕ್ಕೆ ಆರು ಸಾರಿ ಹಿಂದಕ್ಕೆ ಮುಂದಕ್ಕೆ ಓಡಾಡಿ ಸುಸ್ತಾಗಿರುತ್ತದೆ. ಮಳೆಯ ಹೊಡೆತದಿಂದ ಇನ್ನಷ್ಟು ಜರ್ಜರಿತನಾಗಿರುತ್ತಾನೆ. ಅವನನ್ನು ಗಮನಿಸಿದ ಗೌಡ್ತಿ ‘‘ನಮ್ಮಿಂದ ನಿನಗೆ ತುಂಬಾ ಕಷ್ಟ ಆಯ್ತು, ಈರ ನೀನು ಇಲ್ಲದೆ ಹೋಗಿದ್ದರೆ ನನ್ನ ಮಕ್ಕಳು ಮತ್ತು ಗಂಡನ ಪಾಡೇನು, ಈ ಮಳೇಲಿ ಅತ್ಲಾಗ್ ಹೋಗದಾ ಇತ್ಲಾಗ್ ಹೋಗದಾ ನಂಗಂತೂ ತಲೆ ಚಿಟ್ಟು ಹಿಡಿದು ಹೋಗಿತ್ತು. ದೇವರಂಗೆ ಬಂದು ನಮ್ಮನ್ನು ಕಾಪಾಡಿದೆ ಈರ’’ ಎನ್ನುವ ಕೃತಜ್ಞತೆಯ ಮಾತುಗಳನ್ನಾಡಿದರು. ಈ ಕಡೆಯಿಂದ ಮಕ್ಕಳು ಅಪ್ಪನನ್ನು ಕೂಗಿ ಕರೆಯುತ್ತವೆ. ‘‘ಹೊಳೆದಾಟಿ ಬಾರಪ್ಪ’’ ಎಂದು. ನಿಧಾನವಾಗಿ ಹೊಳೆಗೆ ಇಳಿದ ಗೌಡನಿಗೆ ರಭಸವಾಗಿ ಹರಿಯುವ ನೀರನ್ನು ನೋಡಿ ಎದೆ ಝಲ್ ಅನ್ನಿಸುತ್ತದೆ. ನಿಂತಲ್ಲಿಂದಲೇ ಈರನನ್ನು ಕೂಗಿ ಕರೆಯುತ್ತಾನೆ. ‘‘ನನ್ನ ಕೈಲಿ ಆಗಲ್ಲಪ್ಪ ಈ ಹೊಳೆ ದಾಟೋದಕ್ಕೆ. ನನ್ ಕೈಹಿಡಕಂಡು ಕರಕೊಂಡು ಹೋಗು ಈರ’’ ಎಂದು ಕೂಗುತ್ತಾನೆ. ಅದಕ್ಕೆ ಈರನಿಗೆ‘‘ನನ್ ಕೈಲಿ ಆಗಲ್ಲ ಗೌಡ್ರೆ ಸುಸ್ತಾಗಿದಿನಿ’’ ಅಂತ ಹೇಳಲೂ ಶಕ್ತಿ ಇರುವುದಿಲ್ಲ. ‘‘ತಿರುಗಿ ನೀನು ಬರಲಿಲ್ಲ ಅಂದ್ರೆ, ನಾನು ಇಲ್ಲೇ ಸಾಯ್ತಿನಿ’’ ಎಂದು ಗೌಡ ಬೆದರಿಕೆ ಹಾಕುತ್ತಾನೆ. ಗೌಡನ ಹೆಂಡತಿ-ಮಕ್ಕಳು ಅಳಲು ಆರಂಭಿಸುತ್ತಾರೆ. ವಿಧಿ ಇಲ್ಲದೆ ‘‘ಅಯ್ಯೋ ನನ್ನ ಗೌಡ ಅಲ್ಲವೇ, ಇನ್ನೇನು ಮಾಡುವುದು ನನ್ನ ಜೀವನಾದ್ರು ಪಣಕ್ಕಿಟ್ಟು ಅವರನ್ನು ಬದುಕಿಸಬೇಕು’’ ಎಂದು ಮನಸ್ಸಲ್ಲೇ ಸುಗ್ಗಿಯಮ್ಮ ತಾಯಿಯನ್ನು ನೆನೆಸಿಕೊಂಡು ನಿಧಾನಕ್ಕೆ ಹೋಗಿ ಗೌಡನನ್ನು ದಡ ಮುಟ್ಟಿಸುತ್ತಾನೆ.

ಈಗ ಎಲ್ಲರಿಗೂ ಸಮಾಧಾನ: ಎಂಟು ಬಾರಿ ಹೊಳೆದಾಟಿಸುವಾಗ ಹಿಂದಕ್ಕೆ ಮುಂದಕ್ಕೆ ನಡೆದು ನನ್ನ ಅಜ್ಜನಿಗೆ ಹೊಟ್ಟೆಯ ಕರುಳೆಲ್ಲಾ ಹಿಡಿದು ನಡುಗಿಸುವಂತಹ ಚಳಿಯಿಂದ ನಡುಗುತ್ತಿದ್ದಾರೆ. ಮಳೆ ಕಡಿಮೆಯಾಗುತ್ತದೆ. ಗೌಡನ ಸಂಸಾರ ಗೌಡನ ಮನೆ ಸೇರುತ್ತದೆ. ನನ್ನ ಅಜ್ಜ ಮನೆಗೆ ಬಂದು ಬಟ್ಟೆ ಬದಲಿಸಿ ನಡುಗುವ ಚಳಿಗೆ ದಿವ್ಯ ಔಷಧಿಯನ್ನು ಕುಡಿದ ಹಾಗೆ ಎರಡು ಕ್ವಾಟರ್ ಭಟ್ಟಿ ಇಳಿಸಿ, ಊಟಮಾಡಿ ನಡೆದ ಘಟನೆಯನ್ನು ಮಕ್ಕಳಿಗೆ ಹೆಂಡತಿಗೆ ವಿವರವಾಗಿ ಹೇಳುತ್ತಾನೆ. ಬೆಚ್ಚಿಬಿದ್ದ ಅಜ್ಜಿ ಮತ್ತು ನನ್ನ ಅಪ್ಪ ಭಯಭೀತರಾಗಿ, ‘‘ನಿಮಗೆ ಏನಾದ್ರು ಆಗಿದ್ರೆ ನಾವೆಲ್ಲಾ ಮಣ್ಣು ತಿನ್ನ ಬೇಕಿತ್ತು’’ ಎಂದು ಗೋಳಾಡುತ್ತಾರೆ. ಆದರೆ ನನ್ನಜ್ಜ ‘‘ಕಷ್ಟದಲ್ಲಿ ಮನುಷ್ಯ ಮನುಷ್ಯನಿಗೆ ಆಗದೇ ಮರ ಆಗುತ್ತಾ, ನಾನು ಯಾರಿಗಾದರೂ ಒಳ್ಳೆಯದನ್ನು ಮಾಡಿದರೆ ಮುಂದೆ ನನ್ನ ಮಕ್ಕಳಿಗೆ ಒಳ್ಳೆಯದು ಅಗುತ್ತದೆ’’ ಅನ್ನುತ್ತಾನೆ. ಬೆಳಗ್ಗೆ ಒಳ್ಳೆಯ ನಿದ್ರೆಯಿಂದ ಎದ್ದಿದ್ದ ನನ್ನ ಅಜ್ಜ ಬೆಂಕಿ ಕಾಯಿಸುತ್ತ ಕಾಫಿ ಕುಡಿಯುತ್ತಿದ್ದ. ಹೊರಗಡೆಯಿಂದ ‘‘ಈರ ಈರ’’ ಎನ್ನುವ ಕರೆ ಕೇಳಿಸಿತು.ಹೊರಕ್ಕೆ ಬಂದು ನೋಡಿದರೆ ನಿನ್ನೆ ಹೆಗಲ ಮೇಲೆ ಹೊತ್ತು ದಡ ಸೇರಿದ ಮಕ್ಕಳು ಕರೆಯುತ್ತಿದ್ದವು. ಅವುಗಳನ್ನು ನೋಡಿದ ನನ್ನ ಅಜ್ಜನಿಗೆ ತುಂಬ ಸಂತೋಷ ಆಯ್ತು. ‘‘ಏನ್ರವ್ವ ಬೆಳಂ ಬೆಳಗ್ಗೆನೆ ಬಂದಿದ್ದೀರಿ’’ ಎಂದು ಕೇಳಿದ್ದಕ್ಕೆ ‘‘ಅಪ್ಪ ನಿನ್ನನ್ನು ಕರೆಯುತ್ತಿದ್ದಾರೆ’’ ಎಂದು ಹೇಳಿದರು. ನನ್ನ ಅಜ್ಜ ಗಡಿಬಿಡಿಯಲ್ಲೇ ಗೌಡರ ಮನೆಗೆ ಓಡಿ ಹೋಗಿ ಹಟ್ಟಿಯಲ್ಲಿ ನಿಂತುಕೊಂಡ. ಗಡಿಬಿಡಿಯಲ್ಲಿ ಬರುವಾಗ ನಿನ್ನೆ ಇವರನ್ನು ಹೊಳೆದಾಟಿಸಿದ್ದಕ್ಕೆ ಏನಾದರು ಕೊಡಲು ಕರೆದಿರಬಹುದಾ ಎಂದು ಯೋಚಿಸುತ್ತಿರುವಾಗಲೇ ಮನೆ ಒಳಗಿಂದ ಬರಬರನೆ ಬಂದ ಗೌಡ ‘‘ಎಷ್ಟಲಾ ಸೊಕ್ಕು ಹೊಲೆಯ ನನ್ನ ಮಗನೆ. ನನ್ನ ಹೆಂಡತಿ ಮುಟ್ಟುತ್ತೀಯ, ನೀನು ಅಂದರೆ ಏನು, ನಾನು ಅಂದ್ರೆ ಏನು, ನೀನು ಎಲ್ಲಿ ಇರಬೇಕೋ ಅಲ್ಲೇ ಇರಬೇಕು. ನೀನು ನನ್ನ ಚಪ್ಪಲಿ ಬಿಡೋ ಜಾಗದಲ್ಲಿ ಇರಬೇಕಾದವನು, ನಿನ್ನ ಜಾತಿ ಏನು ನನ್ನ ಜಾತಿ ಏನು, ನಿನ್ನ ಮನಸ್ಸಲ್ಲಿ ನೀನು ಏನು ಅನ್ಕೊಂಡಿದ್ಯ’’ ಎಂದು ಬಾಯಿಗೆ ಬಂದಂತೆ ಬಯ್ಯುತ್ತ ನನ್ನ ಅಜ್ಜನ ಕೆನ್ನೆಗೆ ಪಟಾರ್ ಪಟಾರ್ ಅಂತ ಬಾರಿಸಿದ. ಒಂದು ಕ್ಷಣ ಗರಬಡಿದವನಂತವನಾಗಿ ಏಕೆ ಹೊಡೆದ ಎಂದು ಯೋಚಿಸುವುದರೊಳಗೆ ಮತ್ತೆರಡು ಹೊಡೆದ. ಇನ್ನೊಂದು ಏಟು ಹೊಡೆಯುವ ಮುಂಚೆ ಅವನ ಕೈಯನ್ನು ಬಲವಾಗಿ ಹಿಡಿದು ತಿರುಚಲು ಪ್ರಯತ್ನ ಮಾಡಿದ ನನ್ನ ಅಜ್ಜ. ಗೌಡ ಅಯ್ಯಯ್ಯಪ್ಪ ಎಂದು ಕೂಗಿ ಕೊಳ್ಳುವಾಗ ‘‘ಇನ್ನೊಂದು ಸಲ ಕೈಮಾಡಿದರೆ, ಗೌಡ ಅನ್ನೋದು ಸಹ ನೋಡದೆ ನಿನ್ನ ಇಲ್ಲೇ ಹೂತುಹಾಕಿ ಬಿಡುತ್ತೇನೆ’’ ಎಂದ.

‘‘ಇವತ್ತಿಗೆ ಕೊನೆ ನಿನ್ನ ಮನೆ ಕುಲುವಾಡಿಕೇನೂ ಬೇಡ, ನೀನು ಕೊಡುವ ಮೂರು ಕಾಸೂ ಬೇಡ’’ ಎಂದು ಉಗಿದು ‘‘ನಿನ್ನ ಜಾತಿಗೆ ಒಂದಿಷ್ಟು ಬೆಂಕಿ ಹಾಕ, ನಾನು ಹೊಳೆಯನ್ನು ದಾಟಿಸುವಾಗ ನಾನು ಹೊಲೆಯನಾಗಿರಲಿಲ್ಲ. ದಾಟಿಸಿದ ಮೇಲೆ ನಾನು ಹೊಲೆಯನಾಗಿಬಿಟ್ಟೆನಾ?’’ ಎಂದು ಗೌಡನಿಗೆ ಮತ್ತೊಮ್ಮೆ ಉಗಿದು ನನ್ನ ಅಜ್ಜ ಭಾರವಾದ ಮನಸ್ಸಿನಿಂದ ಮನೆಕಡೆ ಹೆಜ್ಜೆ ಹಾಕಿದ. ಈ ಘಟನೆಯನ್ನು ನನ್ನ ಅಪ್ಪ ‘‘ನನ್ನ ಕುಲುವಾಡಿಕೆ, ನನ್ನ ಜೀತ ನಿನಗೆ ಬೇಡ ಮಗನೆ, ನೀನು ಚೆನ್ನಾಗಿ ಓದಬೇಕು’’ ಎಂದು ಹೇಳಿದ್ದು ನನಗೆ ಮತ್ತೆ ಮತ್ತೆ ನೆನಪಾಗುತ್ತದೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಸುಬ್ಬು ಹೊಲೆಯಾರ್

contributor

Similar News